ಆಪರೇಷನ್ ಸಿಂಧೂರ ಆರಂಭವಾದ ಬಳಿಕ ಜಮ್ಮು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಗಡಿ ಜಿಲ್ಲೆಗಳ ಮೇಲೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಗಳಿಂದಾಗಿ ಕನಿಷ್ಠ 31 ಶಾಲೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
ಆಪರೇಷನ್ ಸಿಂಧೂರದ ಬಳಿಕ ಪಾಕಿಸ್ತಾನ ಮತ್ತು ಭಾರತ ನಡುವೆ ನಡೆದ ದಾಳಿ-ಪ್ರತಿ ದಾಳಿ ವೇಳೆ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳು ಅಧಿಕ ಹಾನಿಗೊಳಗಾಗಿವೆ. ಪೂಂಚ್‌ನಲ್ಲಿ 13 ಮತ್ತು ರಾಜೌರಿಯಲ್ಲಿ 3 ಜನರು ಸೇರಿದಂತೆ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ. ಮನೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ನೂರಾರು ಕಟ್ಟಡಗಳು ಹಾನಿಗೊಂಡಿವೆ.
ಇದನ್ನು ಓದಿದ್ದೀರಾ? ಜಮ್ಮು ಮತ್ತು ಕಾಶ್ಮೀರ | ಪಾಕಿಸ್ತಾನ ಗಡಿಯಲ್ಲಿ ಒಳ ನುಸುಳುಕೋರನ ಹತ್ಯೆ
ಈ ಬಗ್ಗೆ ಮಾಧ್ಯಮಕ್ಕೆ ಪೂಂಚ್‌ನ ಮುಖ್ಯ ಶಿಕ್ಷಣ ಅಧಿಕಾರಿ(ಸಿಇಒ) ಇಫ್ತಿಕರ್ ಹುಸೇನ್ ಶಾ ಮಾಹಿತಿ ನೀಡಿದ್ದು, “ಜಿಲ್ಲೆಯ 23 ಶಾಲೆಗಳು ಶೆಲ್ ದಾಳಿಯಿಂದ ಹಾನಿಯಾಗಿವೆ. ಒಂದು ಪ್ರೌಢಶಾಲೆ ಮತ್ತು ಒಂದು ಕಿರಿಯ ಪ್ರಾಥಮಿಕ ಶಾಲೆ ಸಂಪೂರ್ಣವಾಗಿ ಹಾನಿಗೊಳಗಾಗಿವೆ” ಎಂದು ತಿಳಿಸಿದ್ದಾರೆ.
ಮತ್ತೆ ಶಾಲೆಗೆ ಬರದ ಮಕ್ಕಳು
ಸದ್ಯ ಉಭಯ ದೇಶಗಳ ನಡುವೆ ಕದನ ವಿರಾಮ ಒಪ್ಪಂದ ನಡೆದು ದಾಳಿ-ಪ್ರತಿದಾಳಿ ನಡೆಯುತ್ತಿಲ್ಲ. ಆದರೆ ಮತ್ತೆ ಶೆಲ್ ದಾಳಿ ನಡೆದರೆ ಎಂಬ ಭಯದಿಂದಲೇ ಅನೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುತ್ತಿಲ್ಲ. “ಸುಮಾರು ಶೇಕಡ 30ರಷ್ಟು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ. ಗಡಿ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಇನ್ನೂ ಕಡಿಮೆಯಾಗಿದೆ” ಎಂದು ಪೂಂಚ್‌ನ ಮುಖ್ಯ ಶಿಕ್ಷಣ ಅಧಿಕಾರಿ ಹೇಳಿದ್ದಾರೆ.
“ನಾವು ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದೇವೆ, ಮತ್ತೆ ಶಾಲೆಗೆ ಬರುವಂತೆ ಒತ್ತಾಯಿಸುತ್ತಿದ್ದೇವೆ. ಆದರೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಧೈರ್ಯವನ್ನು ಪೋಷಕರು ಮಾಡುತ್ತಿಲ್ಲ. ಸಹಜ ಸ್ಥಿತಿ ಮರಳುತ್ತಿದ್ದಂತೆ ಹಾಜರಾತಿ ಹೆಚ್ಚಾಗಬಹುದು” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಯುದ್ಧ ಸ್ಥಿತಿ | ಭಾರತದ ಮೇಲೆ ಎಂಟು ಕ್ಷಿಪಣಿ ಹಾರಿಸಿದ ಪಾಕಿಸ್ತಾನ; ತಡೆದು ನಿಲ್ಲಿಸಿದ ಭಾರತ
ಶೆಲ್ ದಾಳಿಯಿಂದಾಗಿ ಒಟ್ಟು ಏಳು ಶಾಲೆಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗೆ ಹಾನಿಯಾಗಿದೆ ಎಂದು ರಾಜೌರಿ ಸಿಇಒ ಚೌಧರಿ ಇಕ್ಬಾಲ್ ಹುಸೇನ್ ಹೇಳಿದ್ದಾರೆ. “ವಿದ್ಯಾರ್ಥಿಗಳು ಸದ್ಯ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ದಿನ ಕಳೆದಂತೆ ಹಾಜರಾತಿ ಹೆಚ್ಚಾಗುತ್ತಿದೆ. ಹಾನಿಗೊಳಗಾದ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿಲ್ಲ” ಎಂದು ಹೇಳಿದ್ದಾರೆ.
ಸುಮಾರು 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತಿ ಕಾಶ್ಮೀರದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಅಧಿಕವಾಗಿದೆ. ಸದ್ಯ ಕದನ ವಿರಾಮ ಘೋಷಿಸಲಾಗಿದೆ.
