ಇಟಲಿಯ ಯಾನಿಕ್ ಸಿನ್ನರ್ ಹಾಗೂ ಸ್ಟೇನ್ನ ಕಾರ್ಲೋಸ್ ಅಲ್ಕರಾಝ್ ನಡುವೆ ಕಂಡು ಬಂದ ಫ್ರೆಂಚ್ ಓಪನ್ ಟೆನಿಸ್ ಫೈನಲ್ ಪಂದ್ಯ ಹೊಸ ಇತಿಹಾಸ ಸೃಷ್ಟಿಸಿದೆ. ಈ ಇತಿಹಾಸದೊಂದಿಗೆ ಅಲ್ಕರಾಝ್ ಫ್ರೆಂಚ್ ಓಪನ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.
ಪ್ಯಾರಿಸ್ನ ರೋಲ್ಯಾಂಡ್ ಗ್ಯಾರೋಸ್ ಮೈದಾನದಲ್ಲಿ ನಡೆದ ಫ್ರೆಂಚ್ ಓಪನ್ ಫೈನಲ್ನಲ್ಲಿ ಕಾರ್ಲೋಸ್ ಅಲ್ಕರಾಝ್ ಅವರು ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಇದು ಕ್ಲೇ ಕೋರ್ಟ್ನಲ್ಲಿ 22 ವರ್ಷದ ಅಲ್ಕರಾಝ್ ಅವರ 2ನೇ ಪ್ರಶಸ್ತಿಯಾಗಿದೆ.
ಈ ಬಾರಿಯ ಫ್ರೆಂಚ್ ಓಪನ್ ಫೈನಲ್ ಪಂದ್ಯ ನಡೆದದ್ದು ಬರೋಬ್ಬರಿ 5 ಗಂಟೆ 29 ನಿಮಿಷ. ಅಂದರೆ ರೋಲ್ಯಾಂಡ್ ಗ್ಯಾರೋಸ್ನಲ್ಲಿ ನಡೆದ ಈ ಯುಗದ ಅತ್ಯಂತ ದೀರ್ಘಾವಧಿಯ ಫೈನಲ್ ಪಂದ್ಯ ಇದಾಗಿದೆ.
ಇದಕ್ಕೂ ಮುನ್ನ ಓಪನ್ ಯುಗದಲ್ಲಿ ಅತಿ ದೀರ್ಘಾವಧಿಯ ಫ್ರೆಂಚ್ ಓಪನ್ ಫೈನಲ್ ನಡೆದದ್ದು 1982 ರಲ್ಲಿ. ಅಂದು ಮ್ಯಾಟ್ಸ್ ವಿಲಾಂಡರ್ ಹಾಗೂ ಗಿಲ್ಲೆರ್ಮೊ ವಿಲಾಸ್ 4 ಗಂಟೆ 47 ನಿಮಿಷಗಳ ಫೈನಲ್ ಮ್ಯಾಚ್ ಆಡಿ ಇತಿಹಾಸ ನಿರ್ಮಿಸಿದ್ದರು.

ಜಿದ್ದಾಜಿದ್ದಿನ ಪೈಪೋಟಿ
ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದ್ದ ಫೈನಲ್ ಪಂದ್ಯದ ಮೊದಲ ಸೆಟ್ ಅನ್ನು ಯಾನಿಕ್ ಸಿನ್ನರ್ ಅವರು 4-6 ಅಂತರದಿಂದ ಜಯ ಸಾಧಿಸಿದ್ದರು. ದ್ವಿತೀಯ ಸೆಟ್ನಲ್ಲಿ ಅಲ್ಕರಾಝ್ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರೂ ಅಂತಿಮವಾಗಿ 6-7 ಅಂತರದಿಂದ ಸೋಲೊಪ್ಪಿಕೊಂಡರು.
ಆದರೆ, ಮೂರನೇ ಸೆಟ್ನಲ್ಲಿ ಅತ್ಯುತ್ತಮ ಸರ್ವ್ಗಳ ಮೂಲಕ ಗಮನ ಸೆಳೆದ ಕಾರ್ಲೋಸ್ ಅಲ್ಕರಾಝ್, 6-4 ಅಂತರದಿಂದ ಯಾನಿಕ್ ಸಿನ್ನರ್ಗೆ ಸೋಲುಣಿಸಿದರು. ಬಳಿಕ ನಡೆದ ಎರಡು ಸೆಟ್ಗಳು ರಣರೋಚಕ ಕಾಳಗಕ್ಕೆ ಸಾಕ್ಷಿಯಾಯಿತು. ದಾಳಿಗೆ ಪ್ರತಿದಾಳಿ ಎಂಬಂತೆ ಕಂಡು ಬಂದ 4ನೇ ಸೆಟ್ ಅನ್ನು ಅಲ್ಕರಾಝ್ 7-6 ಗೆದ್ದುಕೊಂಡರು.
ಕೊನೆಯ ಸೆಟ್ನಲ್ಲಿ ತನ್ನ ಅನುಭವವನ್ನು ಧಾರೆಯೆರೆದ ಯಾನಿಕ್ ಸಿನ್ನರ್ ಕಾರ್ಲೊಸ್ ಮೇಲೆ ಪ್ರಬಲ ಒತ್ತಡ ಹಾಕಿದರು. ಆದರೆ ಅಂತಿಮ ಸುತ್ತಿನಲ್ಲಿ ಛಲದಂಕ ಮಲ್ಲನಂತೆ ಆಟವಾಡಿದ ಕಾರ್ಲೋಸ್ ಅಲ್ಕರಾಝ್ 7-6 ಅಂತರದಿಂದ ಗೆದ್ದುಕೊಂಡರು. ಆ ಮೂಲಕ ಯಾನಿಕ್ ಸಿನ್ನರ್ಗೆ ಸೋಲುಣಿಸಿ ಕಾರ್ಲೋಸ್ ಅಲ್ಕರಾಝ್ ಎರಡನೇ ಬಾರಿ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು.
CARLOS ALCARAZ DID THE IMPOSSIBLE 🤯🏆#RolandGarros pic.twitter.com/qUggO9zUi2
— Roland-Garros (@rolandgarros) June 8, 2025