"ನನ್ಗೂ ಹಿಂಗೆಲ್ಲ ನೌಕ್ರಿಗೆ ಹೋಗ್ಬೇಕಂತ ಆಸೆ. ಏನ್ಮಾಡದ್ರಿ… ನಮ್ಮ ಹುಸೇನಜ್ಜ ಎಳಕೊಂಡೋಗಿ ವೇಷ ಹಾಕ್ದ. ಅದ್ನೆ ಮಾಡ್ಕಂತ, ಹಾಡ್ಕಂತ ಕಾಲ ಹಾಕ್ತಿದೀನಿ," ಅಂದರು. "ಹುಸೇನಜ್ಜ… ಅಂದ್ರೆ ಮುಸ್ಲಿಂ ಹೆಸರಲ್ಲವಾ?" ಅಂದೆ. "ಹಂಗೇನಿಲ್ರಿ... ನಮ್ ಕಡೆ ಎಲ್ರೂ ಇಟ್ಕತಾರ," ಎಂದರು
ವ್ಯಕ್ತಿಯೊಬ್ಬರು ಪುರಾಣ ಕಾಲದ ಹನುಮಂತನ ವೇಷ ಧರಿಸಿ, ಆಧುನಿಕ ಕಾಲದ ಕಾಂಕ್ರೀಟ್ ರಸ್ತೆಯಲ್ಲಿ ರಾಗವಾಗಿ ಹಾಡುತ್ತ ಹೋಗುತ್ತಿದ್ದರು. ಅವರ ವೇಷ ಸಾಕ್ಷಾತ್ ಹನುಮಂತನೇ ಕಣ್ಮುಂದೆ ಬಂದಂತೆ ಭಾಸವಾಗುತ್ತಿತ್ತು. ತಲೆ ಮೇಲೊಂದು ರಟ್ಟಿನ ಕಿರೀಟ, ಆ ಕಿರೀಟದ ಅಂಚಿಗೆ ಬಿಳಿ ಮಣಿಸರದಿಂದ, ಮಿನುಗುವ ಚಿನ್ನಾರಿಯಿಂದ ಶೃಂಗಾರ ಮಾಡಿದ್ದರು. ಮುಖಕ್ಕೆ ಬಣ್ಣದ ಮೇಕಪ್, ವಯಸ್ಸಾದ ಹನುಮಂತನಂತೆ ಕಾಣಲು ಕಣ್ಣಿನ ಉಬ್ಬಿಗೆ ಬಿಳಿ ಬಣ್ಣ, ಗಡ್ಡಕ್ಕೆ ಉಣ್ಣೆಯಂತಹ ಬಟ್ಟೆ, ಮೂತಿಗೆ- ಹನುಮಂತನ ಮೂತಿ ಊದಿಕೊಂಡಂತೆ ಕಾಣುವ ಕೆಂಪನೆ ಉಬ್ಬುಬಟ್ಟೆ ಧರಿಸಿದ್ದರು. ಹಣೆ ಮೇಲೆ ಮೂರು ಮಾದರಿ ನಾಮಗಳು, ಕಿವಿಗೆ ಲೋಲಾಕಿನಂತಹ ರುದ್ರಾಕ್ಷಿ ಮಣಿ, ಮೈ ತುಂಬ ಶಾಲು ಮತ್ತು ಸೀರೆಗಳಂತಹ ವಸ್ತ್ರ ಹೊದ್ದುಕೊಂಡಿದ್ದರು. ಕಡುನೀಲಿ ಬಣ್ಣದ ಸೀರೆಯನ್ನು ಕಚ್ಚೆಪಂಚೆಯನ್ನಾಗಿ ಉಟ್ಟಿದ್ದರು. ಕತ್ತಿಗೆ ಹಲ ಬಗೆಯ ಮಣಿಸರಗಳು, ಜೊತೆಗೊಂದು ಬಣ್ಣ ಕಳೆದುಕೊಂಡ ಆರ್ಟಿಫಿಷಿಯಲ್ ಹಾರವನ್ನು ಧರಿಸಿದ್ದರು. ಅಂಗೈ ಮಣಿಕಟ್ಟಿಗೆ ಬಿಗಿದು ಕಟ್ಟಿದ ಮಣಿಸರ, ಬಗಲಲ್ಲೊಂದು ಬ್ಯಾಗು, ಕೈಯಲ್ಲೊಂದು ಡೈರಿ…
ಅವರ ವೇಷಭೂಷಣ ನೋಡಿದ ದೈವಭಕ್ತರು ಕೈಮುಗಿದು ಕಾಸು ಕೊಟ್ಟರೆ, ನೋಡಿ ನಕ್ಕು ಮುಂದೆ ಹೋಗುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಈ ನಮ್ಮ ಹನುಮಂತ, ಆಸ್ತಿಕರು-ನಾಸ್ತಿಕರು ಇಬ್ಬರನ್ನೂ ಸಮಚಿತ್ತದಿಂದ ಸ್ವೀಕರಿಸಿ ತಮ್ಮ ಪಾಡಿಗೆ ತಾವು ಮುಂದೆ ಹೋಗುತ್ತಿದ್ದರು. ಅವರ ಕಾಯಕದಲ್ಲಿ ಕಲೆ, ಸಂಸ್ಕೃತಿ, ಸೇವೆಯನ್ನು ಗುರುತಿಸುವ ಕೆಲವರು, ಹಣ, ಬಟ್ಟೆ ನೀಡಿ ವಿಶೇಷವಾಗಿ ಆಧರಿಸುತ್ತಿದ್ದರು. ಅಂತಹ ಸೇವಾಸಕ್ತರಿಗೆ ಅತ್ಯಂತ ವಿನಯಪೂರ್ವಕವಾಗಿ ವಂದಿಸಿ, ಅವರ ಹೆಸರನ್ನು ಡೈರಿಯಲ್ಲಿ ಬರೆದುಕೊಳ್ಳುತ್ತಿದ್ದರು. ಗೂಗಲ್, ಫೋನ್ ಪೇ ಮೂಲಕವೂ ಕಾಣಿಕೆ ಪಡೆಯುತ್ತಿದ್ದರು. “ಹನುಮಂತ ಕೂಡ ಫೋನ್ ಪೇ ಸ್ವೀಕರಿಸುತ್ತಾನೆಯೇ?” ಎಂದು ಕೆಲವರು ಗೇಲಿ ಮಾಡುತ್ತಿದ್ದುದೂ ಉಂಟು.

ಹನುಮಂತನ ವೇಷದಾರಿಯ ಹೆಸರು ಶಿವು. ವಯಸ್ಸು 23. ದೂರದ ರಾಯಚೂರು ಜಿಲ್ಲೆಯ ಮಸ್ಕಿಯವರು. ಕೆಲಸ ಅರಸಿ ಅಲ್ಲಿಂದ 421 ಕಿಲೋಮೀಟರ್ ದೂರದ ಬೆಂಗಳೂರಿಗೆ ಬಂದಿದ್ದರು. ಪರಂಪರಾಗತ ವೃತ್ತಿಯಾದ ವೇಷ ಹಾಕುವ ಕಲೆಯನ್ನು, ರಾಗವಾಗಿ ಹಾಡುವ ಸಂಗೀತವನ್ನು ಪ್ರದರ್ಶಿಸುತ್ತ ರಸ್ತೆಯಲ್ಲಿ ಹೋಗುತ್ತಿದ್ದರು.
ಅದೇ ಸಮಯಕ್ಕೆ ಸರಿಯಾಗಿ ಅಪಾರ್ಟ್‌ಮೆಂಟ್ ಗೇಟಿನ ಒಳಗಿನಿಂದ ಬುಲೆಟ್ ಬೈಕೊಂದು ಸದ್ದು ಮಾಡುತ್ತ ಹೊರಬಂತು. ಹನುಮ ವೇಷದಾರಿ ಶಿವು ಚಿತ್ತ ಅದರತ್ತ ಬಿತ್ತು. ಬೈಕ್ ಮೇಲೆ ಕೂತ ಯುವಕನ ವೇಷಭೂಷಣ, ಬೆನ್ನಲ್ಲಿದ್ದ ಬ್ಯಾಕ್‌ಪ್ಯಾಕ್‌ನತ್ತ ಗಮನ ಹೊರಳಿತು. ಬೈಕ್ ಸದ್ದು ಮಾಡುತ್ತ ದೂರವಾಗುತ್ತಿದ್ದುದನ್ನು ನೋಡುತ್ತ ನಿಂತ ಹನುಮ ಪಾತ್ರದಾರಿ ಶಿವು, ನಿಧಾನವಾಗಿ ಉಗುಳು ನುಂಗಿದರು… ಮಂಕಾದರು…
ಇದನ್ನು ಗಮನಿಸಿ, “ಏನ್ ನೋಡ್ತಿದ್ದೀರ?” ಎಂದೆ.
ಕೊಂಚ ಗಲಿಬಿಲಿಯಾದ ಶಿವು, “ಏನಿಲ್ರಿ… ನಾನೂ ಓದಿದ್ರೆ, ಹಿಂಗಾ ಹೋಗಬಹುದಿತ್ತಂತ ಆಸ್ಯಾತ್ರಿ,” ಎಂದರು.
“ಎಲ್ಲಿಯವರೆಗೆ ಓದಿದ್ದೀರಿ?” ಎಂದೆ.
“ಎಂಟನೇ ಕ್ಲಾಸ್‌ರಿ. ಓದೋಕ್ ಆಸಿತ್ರಿ. ಇಂಗ್ಲಿಷೆಲ್ಲ ಬರತ್ರಿ. ನನ್ಗೂ ಹಿಂಗೆಲ್ಲ ನೌಕ್ರಿಗೆ ಹೋಗ್ಬೇಕಂತ ಆಸೆ… ಏನ್ಮಾಡದ್ರಿ… ನಮ್ಮ ಹುಸೇನಜ್ಜ ಎಳಕೊಂಡೋಗಿ ವೇಷ ಹಾಕ್ದ. ಅದ್ನೆ ಮಾಡ್ಕಂತ, ಹಾಡ್ಕಂತ ಕಾಲ ಹಾಕ್ತಿದೀನಿ,” ಅಂದರು.
“ಹುಸೇನಜ್ಜ… ಅಂದ್ರೆ ಮುಸ್ಲಿಂ ಹೆಸರಲ್ಲವಾ?” ಅಂದೆ.
“ಹಂಗೇನಿಲ್ರಿ… ನಮ್ ಕಡೆ ಎಲ್ರೂ ಇಟ್ಕತಾರ. ರಂಝಾನ್ ಹಬ್ಬಾನ ಎಲ್ರೂ ಮಾಡ್ತರ,” ಎಂದರು.
“ಓದ್ತೀನಿ ಅಂತ ಹೇಳಬಹುದಿತ್ತಲ್ಲ ಅಜ್ಜನಿಗೆ?” ಅಂದೆ.
“ಉಣ್ಣಾಕ್-ಉಡಾಕ್ಕೇ ಇಲ್ಲ ಅಂದ್ಮೇಲೆ ಸಾಲಿಗೋಗದೆಲ್ಲಿ? ನಮ್ದೆಲ್ಲ ಹೆಂಗಂದ್ರೆ… ಮನೇಲಿ ಎಷ್ಟು ಜನಿದೀವೋ ಅಷ್ಟು ಜನಾನೂ – ಮಕ್ಕಳಿಂದ ಹಿಡ್ದು ಮುದುಕರವರೆಗೆ – ಎಲ್ರೂ ದುಡಿಬೇಕ್ರಿ. ಏನಾದ್ರೂ ಒಂದ್ ಕೆಲ್ಸ ಮಾಡಬೇಕ್ರಿ. ಹೆಂಗಸ್ರು ರಂಗೋಲಿ, ಬಟ್ಟೆ, ಪಾತ್ರೆ ಮಾರಕೋಗ್ತರ. ಮಕ್ಕಳು ಲವ-ಕುಶ, ಕಪಿ ಸೈನ್ಯದ ವೇಷ ಹಾಕ್ತವೆ. ನಮ್ಮಂಥೋರು ರಾಮ, ಸೀತೆ, ಲಕ್ಷ್ಮಣ, ಹನುಮಂತ- ರಾಮಾಯಣದ ಪಾತ್ರನೆಲ್ಲ ಹಾಕ್ತೀವಿ, ಹಾಡ್ತೀವಿ. ಇದು ನಮ್ಮ ಕುಲಕಸುಬು,” ಎಂದರು.

ಶಿವು ಜೊತೆಗೆ ಮತ್ತೊಬ್ಬರು, ಶಿವುಗಿಂತ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರು, 45ರ ಆಸುಪಾಸಿನ ರಮೇಶ್ ಕೂಡ ಜೊತೆಯಾದರು. ಅವರೂ ಹನುಮಂತನ ವೇಷ ಹಾಕಿದ್ದರು.
“…ಏನು… ವಾಲಿ-ಸುಗ್ರೀವರಾ?” ಎಂದೆ.
“ಹಂಗೇನಿಲ್ರಿ… ಇಬ್ಬರೂ ಹನುಮಂತನೇ…” ಎಂದರು.
“ಕಾಲಿಗೆ ಚಪ್ಪಲಿ ಹಾಕಿಲ್ಲ, ಬರಿಗಾಲಲ್ಲಿ ಎಷ್ಟೂಂತ ನಡೀತೀರ!” ಎಂದೆ
“ಹಾಕಲ್ರಿ… ನಮ್ಮುನ್ ಜನ ದೇವರಂತ ನೋಡ್ತಾರ, ಕೈ ಮುಗಿತಾರ. ಅವರ ನಂಬಿಕೆಗೆ ದ್ರೋಹ ಬಗೀಬಾರದು. ಬಿಸಿಲು-ಮಳೆ ಬಂದ್ರೂ, ನಮ್ಗೆ ಕಷ್ಟ ಆದ್ರೂ ಸೈತ ಚಪ್ಪಲಿ ಹಾಕಲ್ಲ, ನೇಮ ಪಾಲಿಸ್ತೀವ್ರಿ,” ಎಂದರು.
“ದೂರದ ಮಸ್ಕಿಯಿಂದ ಬೆಂಗಳೂರಿಗೆ ಬರೋದು ಕಷ್ಟ ಅಲ್ಲವೇ?” ಎಂದೆ.
“ಏನ್ಮಾಡೋದ್ರಿ… ನಮ್ ಹಳ್ಳಿ ಜನ ನಮ್ಮನ್ ಎಷ್ಟೂಂತ ನೋಡ್ತಾರ? ಹಾಕಿದ್ದೇ ವೇಷ ಎಷ್ಟೂಂತ ಹಾಕೋದ್ರಿ? ನಮ್ ಬುಡ್ಗ ಜಂಗಮ ಸಮುದಾಯದ ಜನ ಗತಕಾಲದಿಂದಲೂ ಅಲೆಮಾರಿಗಳಾಗಿಯೇ ಜೀವನ ನಡೆಸೋದು. ಇವತ್ತಿಲ್ಲಿ, ನಾಳೆ ಇನ್ನೆಲ್ಲೋ. ಹಗಲು ಹೊತ್ತು ವೇಷ ಹಾಕೋದು, ರಾತ್ರಿ ಹೊತ್ತು ನಾಟಕ ಮಾಡೋದು. ರಾಮಾಯಣ-ಮಹಾಭಾರತ ಕತೆ ಹೇಳ್ತೀವಿ. ಬೀದಿ ನಾಟಕ, ದೊಡ್ಡಾಟ, ಪೋತರಾಜ ಕುಣಿತ, ಗಂಗಿ-ಗೌರಿ ಗಾಯನ… ಹಿಂಗೆ ಹತ್ತಾರ ಥರ ಮಾಡ್ತೀವಿ. ಅದೆಲ್ಲ ಆದಮ್ಯಾಲ ಹಿಂಗಾ ಬೆಂಗಳೂರಿಗ್ ಬತ್ತಿವಿ. ಈಗ ಒಂದು ಮೂವತ್ತು ಕುಟುಂಬ ಚಂದಾಪುರದಲ್ಲಿದ್ದೀವಿ. ಅಲ್ಲಿ ಸ್ವಲ್ಪ ಬಾಡಿಗೆ ಕಡಿಮೇರಿ, ಅದ್ಕೇ ಅಲ್ಲಿದೀವಿ. ಹೆಂಗಸರು ಬಟ್ಟೆ, ರಂಗೋಲಿ ಮಾರತರೆ. ನಾವು ಹಿಂಗೇ ವೇಷ ಹಾಕೊಂಡು ಏರಿಯಾ ಮೇಲೆ ಬರ್‍ತಿವಿ. ಇದು ಕೂಡ ವಾರದಲ್ಲಿ ಮೂರು ದಿನಾರಿ. ಇನ್ನು ಮೂರು ದಿನ ಕೂಲಿ ಕೆಲಸದ ಮೇಲೆ ಹೋಗ್ತೀವಿ,” ಎಂದರು.
ಈ ಆಡಿಯೊ ಕೇಳಿದ್ದೀರಾ?: ಸಿ ಎಸ್ ದ್ವಾರಕಾನಾಥ್ ಆಡಿಯೊ ಸಂದರ್ಶನ | ‘ಹೈಕೋರ್ಟ್ ನ್ಯಾಯಮೂರ್ತಿಯ ಇನ್ನೊಂದು ಮೂತಿ’ ಅಂತ ಹೆಡ್ಡಿಂಗ್ ಕೊಟ್ಟಿದ್ದರು ಲಂಕೇಶ್!
“ಈ ಬೆಂಗಳೂರಿನ ಜನ ಹೆಂಗ್ರಿ, ದಾನ-ಧರ್ಮ ಮಾಡ್ತಾರ?” ಎಂದೆ.
“ಪರವಾಗಿಲ್ರಿ… ಕೆಲವ್ರು ಕಾಸು ಕೊಟ್ಟು ಕೈ ಮುಗೀತರ, ಕೆಲವ್ರು ನಕ್ಕಂತ ಹೋಗ್ತರ. ರಾಮ-ಸೀತೆ-ಲಕ್ಷ್ಮಣ-ಹನುಮಂತ- ಎಲ್ಲಾ ಕಾಲಕ್ಕೂ ನಡೀತದೆ. ಇತ್ತೀಚೆಗೆ ಜನರಲ್ಲಿ ಸ್ವಲ್ಪ ಭಕ್ತಿ ಜಾಸ್ತಿ ಆಗೈತ್ರಿ. ಆದ್ರೆ ದುಡ್ಡು ಕೊಡದಿಲ್ರಿ. ಸೀತಾ ಕತೆ ಟೀವೀಲಿ ಬಂದ್ರೆ ಅಳ್ತರೆ, ನಾವು ನಿಜವಾಗ್ಲೂ ಅಳ್ತಿದ್ರೆ ಅವರು ನಗ್ತರೆ. ನಮ್ ಕತೆ ಹೇಳಕೆ ನಾವು ಟೀವ್ಯಾಗ್ ಬರಬೇಕೇನೋ? ಒಬ್ಬೊಬ್ಬರು ಒಂದೊಂದು ಥರ. ಕೆಲವ್ರು, ‘ದೇಹ ಹಿಂಗ್ ಗಟ್ಟಿಮುಟ್ಟಾಗಿದ್ದೂ ಬೇಡ್ತಿರಲ್ಲ, ದುಡ್ದು ತಿನ್ನಕೆ ಏನಾಗೈತೆ ನಿಮಗೆ?’ ಅಂತ ಬಯ್ತರೆ,” ಎಂದು ಕೊಂಚ ಬೇಸರ ವ್ಯಕ್ತಪಡಿಸಿದರು.
ಅವರೇ ಮಾತು ಮುಂದುವರಿಸಿ, “ನೀವೇ ಹೇಳ್ರಿ… ನಾವು ಬೇಡ್ತಿವಿ, ಬೇಡೋದೆ ಬದುಕು, ಅದ್ ತಪ್ಪೇನ್ರಿ? ಮುಂಜಾನೆ ನಾಲ್ಕು ಗಂಟೆಗೆಲ್ಲ ಎದ್ದು ನಾವೇ ಮೇಕಪ್ ಮಾಡ್ಕತೀವಿ. ಬಸ್ ಹತ್ತಿ ಹಿಂಗ್ ಯಾವುದಾದರೂ ಒಂದು ಏರಿಯಾಕ್ಕೆ ಬತ್ತೀವಿ. ನಮ್ ವೇಷ ಬರೀ ವೇಷ ಅಲ್ರಿ, ಕಲೆ. ಜನಪದ ಕಲೆ. ನಮ್ಮ ವೇಷ, ಕತೆ, ಹಾಡುಗಾರಿಕೆ ನೋಡಿ ಖುಸಿಯಾದ್ರೆ ಕಾಸು ಕೊಡ್ತರೆ. ನಾಟಕ, ಸಿನಿಮಾನೂ ಹಿಂಗೇ ಅಲ್ವೇನ್ರಿ? ಅವರೂ ಹಿಂಗೇ ಬಣ್ಣ ಹಚ್ಕೊಂಡು ವೇಷ ಹಾಕ್ಕೊಂಡು ಕತೆ ಹೇಳ್ತರಲ್ವಾ? ಹಂಗಾದ್ರೆ ಅವರು ಬೇಡೋರ? ದುಡ್ದು ತಿನ್ನೋರಲ್ವಾ?” ಎಂದು ಪ್ರಶ್ನೆ ಹಾಕಿದರು.
ಹನುಮಂತನ ವೇಷದಾರಿ ರಮೇಶ್ ವಿದ್ಯಾವಂತರಲ್ಲ. ಆದರೆ, ಹೊಟ್ಟೆಪಾಡಿನ ಸುತ್ತಾಟ ಅವರಿಗೆ ವಿವೇಕ ಕಲಿಸಿದೆ. ಪ್ರಶ್ನಿಸುವ ಧೈರ್ಯ ತಂದುಕೊಟ್ಟಿದೆ. ಜೊತೆಗೆ ವಿನಯವೂ ಇದೆ. ಅವರ ಮಾತಿಗೆ ಮರುಳಾಗುತ್ತಲೇ, “ನಿಮ್ಮ ಸಮುದಾಯಕ್ಕೆ ಸರ್ಕಾರದಿಂದ ಏನಾದರೂ ಸಹಾಯ ಆಗಿದೆಯೇ?” ಎಂದೆ.
“ಆಗಿದೇರಿ… ನಮ್ಮೋರಿಗೆ ಮನೆ, ಜಮೀನು ಕೊಟ್ಟಾರ. ಉಳುಮೆ ಮಾಡಿ ಜ್ವಾಳ ಬೆಳಿತೀವಿ. ನಮ್ಮೂರಿಗೆ ಹಿಂದುಳಿದ ಆಯೋಗದ ದ್ವಾರಕಾನಾಥ್ ಸಾಹೇಬ್ರು ಬಂದಿದ್ರಿ. ಭಾಳ ಹೆಲ್ಪ್ ಆತ್ರಿ. ನಾವು ಬೇಡೋರು; ನಮ್ಮನ್ನು ಬೇಡ ಜಂಗಮರು, ಬುಡ್ಗ ಜಂಗಮರು ಅಂತೆಲ್ಲ ಕರೀತಾರೆ. ಇಲ್ಲೊಂದು ಸಮಸ್ಯೆಯಾಗೈತ್ರಿ. ಲಿಂಗಾಯತರಲ್ಲೂ ಕೆಲವರು ಬೇಡುವವರು ಇದಾರ. ಅವರಿಗೂ ಬೇಡ ಜಂಗಮರು ಅಂತಾರ. ಅಂಥಾ ಕೆಲವರು ನಮ್ಮ ಜಾತಿಯ ಸರ್ಟಿಫಿಕೆಟ್ ಪಡೆದು, ನಮಗೆ ಅನ್ಯಾಯ ಆಗೇತ್ರಿ. ಇದರ ಬಗ್ಗೆ ನಮ್ ಸಮುದಾಯದ ನಾಯಕರು ಒಟ್ಟಾಗಿ ಮಂತ್ರಿಗಳನ್ನು ಕಂಡು ಕಷ್ಟ ಹೇಳಿಕಂಡಿದಾರ. ಅವರೂ ಮಾಡ್ತೀವಿ ಅಂತಾರ. ನಮಗೆ ಅನ್ಯಾಯ ಆಗ್ತಾನೇ ಐತ್ರಿ…” ಎಂದರು.

ಬುಡ್ಗ ಜಂಗಮರದು ಅತ್ಯಂತ ಬಡ ಮತ್ತು ಹಿಂದುಳಿದ ಸಮುದಾಯ. ಸಮಾಜದ ಭಾಗವಾಗಿರುವ ಈ ಸಮುದಾಯ ಅನಾದಿ ಕಾಲದಿಂದಲೂ ವೇಷ ಧರಿಸಿ ಕಲೆ ಪ್ರದರ್ಶಿಸುವ ಮೂಲಕ ಜನಪದ ಕಲೆಯನ್ನು, ಕತೆಗಳನ್ನು, ಹಾಡುಗಳನ್ನು, ಪುರಾಣಗಳನ್ನು ಕಾಪಿಟ್ಟುಕೊಂಡು ಬಂದಿದೆ. ಬೆರಳ ತುದಿಯಲ್ಲಿ ಜಗತ್ತನ್ನೇ ತೋರುವ ತಂತ್ರಜ್ಞಾನದ ಈ ಯುಗದಲ್ಲೂ ಜನಪದ ಸಂಸ್ಕೃತಿಯನ್ನು ಪ್ರಚುರಪಡಿಸುತ್ತಿದೆ. ಆ ಮೂಲಕ, ಕಲೆ ಮತ್ತು ಸಂಸ್ಕೃತಿಯನ್ನು ಕಾಪಾಡಿದೆ. ಸರ್ಕಾರದ ಸಂಸ್ಕೃತಿ ಇಲಾಖೆ ಮಾಡುವ ಕೆಲಸವನ್ನು ಸಮುದಾಯವೊಂದು ತಣ್ಣಗೆ ಮಾಡಿಕೊಂಡು ಬರುತ್ತಿದೆ. ಸಮುದಾಯದ ಜನಪದ ಕಲಾವಿದರು ಅತ್ಯಂತ ಶ್ರದ್ಧೆಯಿಂದ ಇಂದಿನ ಪೀಳಿಗೆಗೆ ಪುರಾಣ ಪಾತ್ರಗಳ ಪರಿಚಯವನ್ನು ಮಾಡಿಕೊಡುತ್ತಿದ್ದಾರೆ. ಇದರಲ್ಲಿ ಅವರ ಹೊಟ್ಟೆಪಾಡಿದ್ದರೂ, ಜನಪದವನ್ನು ಜನರೆದೆಗೆ ದಾಟಿಸುವ ಮಹತ್ವದ ಕೆಲಸವನ್ನು ಮಾಡುತ್ತಿದ್ದಾರೆ.
ಬುಡ್ಗ ಜಂಗಮ ಅಥವಾ ಬೇಡ ಜಂಗಮ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನಿಜವಾದ ಸಮುದಾಯ ಸರ್ಕಾರದ ಸೌಲಭ್ಯದಿಂದ ವಂಚಿತವಾಗುತ್ತಿರುವ ಬಗ್ಗೆ ಹಿಂದುಳಿದ ಆಯೋಗ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಅವಕಾಶವಂಚಿತ ಸಮುದಾಯದ ಏಳಿಗೆಗೆ ಶ್ರಮಿಸಬೇಕಾಗಿದೆ. ಹಾಗೆಯೇ, ಸರಕಾರ ಕೂಡ ಇಂತಹ ಸಮುದಾಯಗಳ ಮೂಲಭೂತ ಸೌಲಭ್ಯಗಳತ್ತ ಗಮನ ಹರಿಸಿದರೆ, ಹಿಂದುಳಿದ ಸಮುದಾಯವು ಇನ್ನಷ್ಟು ಬಲಿಷ್ಠವಾಗುವುದರಲ್ಲಿ, ನಾಗರಿಕ ಸಮಾಜದೊಂದಿಗೆ ಬೆರೆತು ಬೆಳೆಯುವುದರಲ್ಲಿ ಸಂಶಯವಿಲ್ಲ. ಇವರೂ ಕೂಡ ನಮ್ ಜನರೇ ಅಲ್ಲವೇ?
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ