ನಮ್ಮಲ್ಲಿ ಬಹಳಷ್ಟು ಜನರಿಗೆ ಒಂದು ಮೂಢನಂಬಿಕೆ ಉಂಟು; ಅದೇನೆಂದರೆ, ಕಾಡನ್ನು ಸುತ್ತೋದು ಮತ್ತು ಕಾಡಿನ ಚಿತ್ರಗಳನ್ನು ಸೆರೆಹಿಡಿಯೋದು ಕೂಡ ಕಾಡನ್ನು ಕಾಪಾಡುವ ಕೆಲಸ ಅಂತ! ಇದು ಎಷ್ಟು ದೊಡ್ಡ ಮೌಢ್ಯ ಅಂತ ಗೊತ್ತಾಗಬೇಕು ಅಂದ್ರೆ, ನೀವು ಶೇಷಾದ್ರಿ ರಾಮಸ್ವಾಮಿ ಅವರ ಮಾತುಗಳನ್ನು ಕೇಳಬೇಕು. ಬೆಂಗಳೂರಿನವರಾದ ಶೇಷಾದ್ರಿ ಅವರು ಓದಿದ್ದು ಎಂಜಿನಿಯರಿಂಗ್. ಆದ್ರೆ, ಅದನ್ನು ಅನಾಮತ್ತಾಗಿ ಎತ್ತಿ ಒಗೆದು, ಅರಣ್ಯ ಸಂರಕ್ಷಣೆಯ ಚಟುವಟಿಕೆಗಳಿಗೆ ತಮ್ಮ ಬದುಕನ್ನು ಮೀಸಲಿಡ್ತಾರೆ. ಎಲ್ಲರೂ ಸಹಜವಾಗಿ ಬಯಸುವ ಆರಾಮದಾಯಕ ಮತ್ತು ಸವಲತ್ತಿನ ಬದುಕು ಕಟ್ಟಿಕೊಳ್ಳುವ ಅವಕಾಶಗಳಿದ್ರೂ, ಆ ದಾರಿ ಬಿಟ್ಟು ನಾಡಿನಿಂದ ಕಾಡಿನ ಕಡೆ ಮುಖ ಮಾಡ್ತಾರೆ. ಕಾಡುಮರಗಳ ಬಗ್ಗೆ ಇವರಿಗಿರುವ ತಿಳಿವಳಿಕೆ, ಜ್ಞಾನ ಬೆರಗು ಮೂಡಿಸುವಂಥದ್ದು. ಮರವನ್ನು ನೋಡುತ್ತಲೇ ಅದರ ಸಂಪೂರ್ಣ ಜಾತಕ ಬಿಚ್ಚಿಡುವಲ್ಲಿ ಪರಿಣಿತರು. ಕರ್ನಾಟಕ ಕಂಡ ಅಪೂರ್ವ ಐಎಫ್‌ಎಸ್ ಅಧಿಕಾರಿ ಎಸ್ ಜಿ ನೇಗಿನಾಳ ಅವರ ಶಿಷ್ಯ ತಾವು ಅನ್ನೋದನ್ನು ಶೇಷಾದ್ರಿ ಅವರು ಬಹಳ ಅಕ್ಕರೆಯಿಂದ ಹೇಳಿಕೊಳ್ತಾರೆ. ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಪಾಸಾದ ಜೀವವೈವಿಧ್ಯ ಮತ್ತು ಅರಣ್ಯ ಕಾಯ್ದೆಗಳ ತಿದ್ದುಪಡಿ ಮಸೂದೆ, ತಾವು ಕಟ್ಟಲುಹೊರಟ ಪರ್ಯಾಯ ಅರಣ್ಯ ಇಲಾಖೆ, ಎಸ್ ಜಿ ನೇಗಿನಾಳರ ಜೊತೆಗಿನ ಒಡನಾಟ, ತುಮಕೂರು ಜಿಲ್ಲೆಯ ಕೊನೇಹಳ್ಳಿ ಕಾವಲಿನ ಅವನತಿಯ ಕತೆ, ಆಗುಂಬೆಯಲ್ಲಿ ರೂಪಿಸಿದ ಕಾಡುಮರಗಳ ನರ್ಸರಿ, ಬೆಂಗಳೂರಿನಂತಹ ಮಹಾನಗರದ ಯುವಜನರಲ್ಲಿ ಮರಗಳ ಬಗ್ಗೆ ಆಸಕ್ತಿ ಮೂಡಿಸುವ ಜರೂರು... ಹೀಗೆ ಅತ್ಯಂತ ವೈವಿಧ್ಯಮಯ ವಿಷಯಗಳ ಕುರಿತು ಈ ಆಡಿಯೊ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
ಈ ಸಂದರ್ಶನ ಕೇಳಿದ್ದೀರಾ?: ನಾಟಕಕಾರ ಕೆ ವೈ ನಾರಾಯಣಸ್ವಾಮಿ ಸಂದರ್ಶನ | ‘ವಿದ್ಯಾರ್ಥಿಯೊಬ್ಬ ನಾಡಬಾಂಬ್ ತಂದು ಟೇಬಲ್ ಮೇಲೆ ಇಟ್ಟುಬಿಟ್ಟಿದ್ದ!’
ಈ ಸಂದರ್ಶನ ಕೇಳಿದ್ದೀರಾ?: ಸಿ ಎಸ್ ದ್ವಾರಕಾನಾಥ್ ಆಡಿಯೊ ಸಂದರ್ಶನ | ‘ಹೈಕೋರ್ಟ್ ನ್ಯಾಯಮೂರ್ತಿಯ ಇನ್ನೊಂದು ಮೂತಿ’ ಅಂತ ಹೆಡ್ಡಿಂಗ್ ಕೊಟ್ಟಿದ್ದರು ಲಂಕೇಶ್!
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ