ಆತ್ಮಕಥನಕ್ಕೆ ಹೊಸ ಭಾಷ್ಯ ಬರೆದ ಕೃತಿ ʼಕೀಟಲೆಯ ದಿನಗಳುʼ

Date:

Advertisements
ಆತ್ಮಚರಿತ್ರೆ ಎಂದರೆ, ಆತ್ಮವಂಚನೆಯ ದಾಖಲೆ ಎಂಬಂತಾಗಿರುವ ಇಂದಿನ ದಿನಮಾನಗಳಲ್ಲಿ ಎಸ್.ಎನ್ ಲಕ್ಷ್ಮಿನಾರಾಯಣರ ʻಕೀಟಲೆಯ ದಿನಗಳುʼ ಎಂಬ ಆತ್ಮಕಥಾನಕವು ತೇಜಸ್ವಿಯವರ ಮಾದರಿಯಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದೆ. ಕೀಟಲೆಯ ವ್ಯಕ್ತಿತ್ವವನ್ನು ಸ್ವಯಂವಿಮರ್ಶೆಗೆ ಒಡ್ಡಿಕೊಂಡು ಎಲ್ಲವನ್ನು ವಿಡಂಬನೆಯ ದಾಟಿಯಲ್ಲಿಓದುಗರಿಗೆ ಮುಟ್ಟಿಸಿದೆ, ಮನ ಗೆಲ್ಲುತ್ತದೆ... 

ಹೀಗೊಂದು ಆಕಸ್ಮಿಕ ಆತ್ಮಕಥನ ಎಂದು ಹೇಳಿಕೊಂಡಿರುವ ಮಿತ್ರರಾದ ಎಸ್.ಎನ್. ಲಕ್ಷ್ಮಿನಾರಾಯಣ ಅವರು ತಮ್ಮ ಈ ಕೃತಿಯಲ್ಲಿ ಬಾಲ್ಯದ ದಿನಗಳನ್ನು ʼಹಾಸನಾಂಬೆಯ ನಾಡಿನ ನೆನಪಿನ ಓಣಿಯಲ್ಲಿʼ ಎಂಬ ಭಾಗದಲ್ಲಿ ಹಾಗೂ ಬೆಂಗಳೂರಿನ ಹೆಬ್ಬಾಳದಲ್ಲಿ 1975 ರಲ್ಲಿ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪದವಿ ಓದುತ್ತಿದ್ದ ದಿನಗಳನ್ನು ʼಕೃಷಿ ವಿಶ್ವವಿದ್ಯಾನಿಲಯದ ಕೀಟಲೆಗಳುʼ ಹೆಸರಿನಲ್ಲಿ ಮತ್ತು ಬೆಂಗಳೂರಿನ ಕೆಂಚಾಂಬ ಲಾಡ್ಜಿನಲ್ಲಿ ಗೆಳೆಯರೊಂದಿಗೆ ಕಳೆಯುತ್ತಿದ್ದ ದಿನಗಳನ್ನು ʼಕೆಂಚಾಂಬ ಕಲರವʼ ಹೆಸರಿನಲ್ಲಿ ದಾಖಲಿಸಿರುವ ಜೊತೆಗೆ ವೈಶ್ಯ ಬ್ಯಾಂಕಿನ ಕೃಷಿ ಅಧಿಕಾರಿಯಾಗಿ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಕಳೆದ ಅನುಭವವನ್ನು ʼಬ್ಯಾಂಕಿನ ಬವಣೆʼ ಹೆಸರಿನಲ್ಲಿ ಹೀಗೆ ನಾಲ್ಕು ವಿಭಾಗಗಳಲ್ಲಿ ಅರ್ಥಪೂರ್ಣವಾಗಿ ಮತ್ತು ಸ್ವಾರಸ್ಯಕರವಾಗಿ ದಾಖಲಿಸಿದ್ದಾರೆ.

ನಾಲ್ಕನೂರ ಇಪ್ಪತ್ತೈದು ಪುಟಗಳ ಸವಿಸ್ತಾರವಾದ ಈ ಕೃತಿಯನ್ನು ಹಿಡಿದುಕೊಂಡರೆ, ಯಾವುದೇ ಬೇಸರವಿಲ್ಲದೆ ಓದಿಸಿಕೊಂಡುಹೋಗುವ ಈ ಕೃತಿ ಈಗಾಗಲೇ ಕನ್ನಡದ ಜನಪ್ರಿಯ ಆತ್ಮಕಥನವಾಗಿ ಪ್ರಸಿದ್ಧವಾಗಿದೆ. ಆತ್ಮಚರಿತ್ರೆ ಎಂದರೆ, ಆತ್ಮವಂಚನೆಯ ದಾಖಲೆ ಎಂಬಂತಾಗಿರುವ ಇಂದಿನ ದಿನಮಾನಗಳಲ್ಲಿ ನಾವು ನೋಡಿದ ಸಾಹಿತಿಗಳು, ಕಲಾವಿದರು ಮತ್ತು ಸಮಾಜಸೇವಕರು ಹಾಗೂ ರಾಜಕೀಯ ನಾಯಕರು ಎಂಬ ಸಾರ್ವಜನಿಕ ಆರೋಪ ಹೊತ್ತಿರುವ ಮಂದಿಯ ಆತ್ಮಚರಿತ್ರೆಯನ್ನು ಗಮನಿಸಿದಾಗ ಅವರು ಹೇಳದೆಬಿಟ್ಟಿರುವ ಅನೇಕ ಮಾಹಿತಿಗಳು ಓದುಗರಿಗೆ ಗೊತ್ತಿರುತ್ತವೆ.

ಜೊತೆಗೆ ತಮ್ಮ ವಿರೋಧಿಗಳ ಮೇಲಿನ ಸಿಟ್ಟು ಹಾಗೂ ಸೇಡನ್ನು ಆತ್ಮಚರಿತ್ರೆಯಲ್ಲಿ ತೀರಿಸಿಕೊಂಡಿರುವ ಅನೇಕರ ಕೃತಿಗಳನ್ನು ನಾವು ಕನ್ನಡದಲ್ಲಿ ನೋಡಬಹುದಾಗಿದೆ. ಅದೇ ರೀತಿಯಲ್ಲಿ ಅಪ್ಪಟ ಹಸಿಸುಳ್ಳುಗಳು ಸಹ ದಾಖಲೆಯಾಗಿರುತ್ತವೆ.

Advertisements

ʻಕೀಟಲೆಯ ದಿನಗಳುʼ ಕೃತಿಯ ಲೇಖಕರಾದ ಲಕ್ಷ್ಮಿನಾರಾಯಣ ಅವರು ಈ ಮೇಲಿನ ಎಲ್ಲಾ ಆರೋಪದಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ. ಏಕೆಂದರೆ ಅವರು ಈವರೆಗೆ ಸಾಹಿತಿ ಅಥವಾ ಕಲಾವಿದ ಎಂಬ ಬಿರುದನ್ನು ಹೊತ್ತವರಲ್ಲ. ಕರ್ನಾಟಕದಲ್ಲಿ ರೈತಸಂಘವನ್ನು ಹುಟ್ಟುಹಾಕಿದ ಸಂಸ್ಥಾಪಕರಲ್ಲಿ ಒಬ್ಬರಾದ ಹಾಗೂ ನಾವೆಲ್ಲಾ ಪ್ರೀತಿಯಿಂದ ದತ್ತಣ್ಣ ಎಂದು ಕರೆಯುವ ಹಾಸನದ ಮಂಜುನಾಥ ದತ್ತ ಅವರ ಕಿರಿಯ ಸಹೋದರರಾಗಿರುವ ಎಸ್.ಎನ್ ಲಕ್ಷ್ಮಿನಾರಾಯಣ ಅವರು ಹಾಸನ ಜಿಲ್ಲೆಯ ಶಾಂತಿಗ್ರಾಮದ‌ ರೈತಕುಟುಂಬದಲ್ಲಿ ಜನಿಸಿ ಬಾಲ್ಯದಿಂದಲೂ ರೈತರ ಬವಣೆಯನ್ನು ನೋಡಿಕೊಂಡು ಬೆಳೆದವರು. ಜೊತೆಗೆ ರೈತಸಂಘದ ಬೆಳವಣಿಗೆಯನ್ನು ಹತ್ತಿರದಿಂದ ನೋಡುತ್ತಾ, ಭಾಗಿಯಾಗಿತ್ತಾ, ಎಂದಿಗೂ ತಮ್ಮ ಬದುಕಿನಲ್ಲಿ ರಾಜಿಯಾಗದೆ ಬದುಕಿದವರು. ಹಾಗಾಗಿ ಅವರ ಈ ಕೃತಿಯಲ್ಲಿನ ಪ್ರತಿ ಅಕ್ಷರದಲ್ಲಿಯೂ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಎದ್ದುಕಾಣುತ್ತದೆ.

ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಲೇಖನ ಪ್ರಾಕಾರವು ಒಂದು ರೀತಿಯಲ್ಲಿ ನಿಂತ ನೀರಾಗಿತ್ತು. ಸುಧಾ ಮತ್ತು ಮಯೂರ ಪತ್ರಿಕೆಗಳಿಗೆ ದಾಶರಥಿ ದೀಕ್ಷಿತ್, ಕೇಫ, ಅರಾಸೆ, ಎಂ.ಪಿ ಮನೋಹರ ಚಂದ್ರನ್, ವೈ.ಎನ್ ಗುಂಡೂರಾವ್-‌ ಹೀಗೆ ಹಲವರು ಬರೆಯುತ್ತಿದ್ದ ಲೇಖನಗಳು ಬಹುತೇಕ ನಗರಕೇಂದ್ರಿತ ವಿಷಯಗಳನ್ನು ಹೊಂದಿದ್ದವು. ಈ ಸಂದರ್ಭದಲ್ಲಿ ಮಂಡ್ಯದ ಪ್ರೊ. ಎಚ್.ಎಲ್. ಕೇಶವಮೂರ್ತಿಯವರು ಕ್ಯಾತ ಎಂಬ ನಾಯಕನನ್ನು ಸೃಷ್ಟಿಸಿಕೊಂಡು ಗ್ರಾಮಾಂತರ ವಿಷಯಾಧಾರಿತ ಲೇಖನಗಳಿಗೆ ಮಹತ್ವ ನೀಡಿದುದರ ಫಲವಾಗಿ ಕನ್ನಡದ ಹಾಸ್ಯ ಸಾಹಿತ್ಯಲೋಕಕ್ಕೆ ಹೊಸ ಮಜಲು ದೊರಕಿತು.

ಇದನ್ನು ಓದಿದ್ದೀರಾ?: ಬಿಜೆಪಿಗೆ ಇ.ಡಿ. ಮುಖ್ಯಸ್ಥರಾಗಿ ಸಂಜಯ್ ಮಿಶ್ರಾ ಅವರೇ ಯಾಕೆ ಬೇಕು?

ಇದೇ ರೀತಿ ಕನ್ನಡದ ಕಥೆ ಮತ್ತು ಕಾದಂಬರಿಗಳಲ್ಲಿ ಹಾಸ್ಯದ ದಾಟಿ ಅಥವಾ ಭಾಷೆ ಬಳಸುವುದು ಸೂಕ್ತವಲ್ಲ ಎಂಬ ಅಪನಂಬಿಕೆಯನ್ನು ಪೂರ್ಣಚಂದ್ರ ತೇಜಸ್ವಿ ತೊಡೆದು ಹಾಕಿದರು. ಅವರ ಯಾವುದೇ ಕಥೆ ಅಥವಾ ಲೇಖನಗಳಲ್ಲಿ ಆಡುಭಾಷೆಯ ಸಹಜ ನುಡಿಗಳು ಅಕ್ಷರರೂಪವನ್ನು ತಾಳಿದವು. ಅವರ ʻಕರ್ವಾಲೋʼ ಕಾದಂಬರಿಯ ಪಾತ್ರಗಳು ಮತ್ತು ಅಲ್ಲಿ ಬಳಕೆಯಾಗಿರುವ ಭಾಷೆ ಕನ್ನಡ ಕಾದಂಬರಿ ಕ್ಷೇತ್ರದ ನಿರೂಪಣೆಗೆ ಹೊಸ ಮಾರ್ಗವನ್ನು ತೋರಿಸಿದ್ದು ಈಗ ಇತಿಹಾಸ. ನಲವತ್ತು ವರ್ಷದ ಹಿಂದೆ ನಾನು ಓದಿದ ಈ ಕಾದಂಬರಿಯ ಪ್ರತಿಯೊಂದು ಸನ್ನಿವೇಶವೂ ಈಗಲೂ ನನ್ನ ನೆನಪಿನಲ್ಲಿದೆ. ಕಾದಂಬರಿಯ ಮುಖ್ಯ ಪಾತ್ರಗಳಲ್ಲಿ ಒಬ್ಬನಾದ ಮಂದಣ್ಣನ ವಿವಾಹದ ಸಂದರ್ಭದಲ್ಲಿ ಮದುವೆ ಮನೆಯಲ್ಲಿ ಒಂದು ಸಣ್ಣ ಜಗಳದ ಘಟನೆ ನಡೆಯುತ್ತದೆ. ʼಮಂದಣ್ಣ ಈ ಹೆಣ್ಣಿನಲ್ಲಿ ಏನನ್ನು ನೋಡಿ ಮದುವೆಯಾದನು?ʼ ಎಂಬ ಕಾದಂಬರಿಯ ನಾಯಕನ ಪ್ರಶ್ನೆಗೆ ಮಂದಣ್ಣನ ಮಿತ್ರ ಹಾಗೂ ಫೋಟೋಗ್ರಾಪರ್ ಲಕ್ಷ್ಮಣ ಎಂಬುವನು ʻಗಡಿಗೆ ಗಾತ್ರದ ಮೊಲೆಗಳನ್ನು ನೋಡಿ ಮದುವೆಯಾದ ಸರ್ʼ ಎಂಬ ಮಾತು ಹಾಗೂ ಬಿರಿಯಾನಿ ಕರಿಯಪ್ಪನ ಲೈಂಗಿಕ ಸ್ವೇಚ್ಛಾಚಾರದ ಬಗ್ಗೆ ಕೇಳಿದಾಗ ʻಅದೇನು ಮುರಿಬೇಕೋ, ಹರಿಬೇಕೋ ಬಿಡಿ ಸಾಮಿʼ ಎಂಬ ಉತ್ತರ ಇವೆಲ್ಲವೂ ತೇಜಸ್ವಿಯವರ ಭಾಷೆಯ ಬಳಕೆ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದ್ದವು. ಕನ್ನಡ ಭಾಷೆಗೆ ಸುತ್ತಿಕೊಂಡಿದ್ದ ಮಡಿವಂತಿಕೆಯನ್ನು ತೇಜಸ್ವಿ ತೊಡೆದು ಹಾಕಿದರು.

ಎಸ್.ಎನ್ ಲಕ್ಷ್ಮಿನಾರಾಯಣರ ʻಕೀಟಲೆಯ ದಿನಗಳುʼ ಎಂಬ ಆತ್ಮಕಥಾನಕವು ತೇಜಸ್ವಿಯವರ ಮಾದರಿಯಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದೆ ಎಂದರೆ ಅತಿಶಯದ ಮಾತಾಗಲಾರದು. ಏಕೆಂದರೆ ಗೆಳೆಯರ ವ್ಯಕ್ತಿತ್ವ ಹಾಗೂ ಅವರ ಜೊತೆಗೆ ತಮ್ಮ ಕೀಟಲೆಯ ವ್ಯಕ್ತಿತ್ವವನ್ನು ಸ್ವಯಂವಿಮರ್ಶೆಗೆ ಒಡ್ಡಿಕೊಂಡು ಎಲ್ಲವನ್ನು ವಿಡಂಬನೆಯ ದಾಟಿಯಲ್ಲಿಓದುಗರಿಗೆ ಮುಟ್ಟಿಸಿದ್ದಾರೆ. ಜೊತೆಗೆ ಅವರು ಗೆಳೆಯರನ್ನು ಹಾಗೂ ತಾವು ಕಂಡ ವ್ಯಕ್ತಿಗಳನ್ನು ಬಣ್ಣಿಸುವಾಗ ಅವರು ಬಳಸಿರುವ ಆಡುಭಾಷೆಯ ಶೈಲಿ ಅತ್ಯಂತ ಲವಲವಿಕೆಯಿಂದ ಕೂಡಿದೆ. ದಕ್ಷಿಣ ಕರ್ನಾಟಕದಲ್ಲಿ ವಿಶೇಷವಾಗಿ ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ಒಕ್ಕಲಿಗರ ಸಮುದಾಯಕ್ಕೆ ಮಾಂಸವೆಂದರೆ ಪಂಚಪ್ರಾಣ. ತೇಜಸ್ವಿಯವರ ಮಿತ್ರ ಬಿ.ಎನ್ ಶ್ರೀರಾಂ ಅವರು ಒಂದು ಕಡೆ ತೇಜಸ್ವಿಯವರ ಶಿಕಾರಿಯ ಹವ್ಯಾಸ ಕುರಿತು ಹೇಳುವ ʻನಾವು ಎರಡು ಕಾಲಿನ ಪ್ರಾಣಿಗಳಲ್ಲಿ ಮನುಷ್ಯರು ಹಾಗೂ ನಾಲ್ಕು ಕಾಲುಗಳಲ್ಲಿ ಕುರ್ಚಿ ಮತ್ತು ಮೇಜು ಇವುಗಳನ್ನು ಹೊರತುಪಡಿಸಿ ಈ ಜಗತ್ತಿನ ಎಲ್ಲಾ ಪ್ರಾಣಿಗಳನ್ನು ತಿನ್ನುತ್ತೇವೆʼ ಎಂಬ ಮಾತು ಹಾಸನ ಮತ್ತು ಮಂಡ್ಯದ ಜನರಿಗೆ ಹೊಂದುವಂತಹ ಮಾತುಗಳೇ ಆಗಿವೆ.

ಬಾಡೇ ನಮ್ಮ ಗಾಡು ಅಥವಾ ಬಾಡೆಂದರೆ ಬಾನಿಗೂ ಜಿಗಿಯುವೆವು ಎಂಬ ಸಿದ್ಧಾಂತವನ್ನು ಬದುಕಿನ ಮೂಲಮಂತ್ರ ಮಾಡಿಕೊಂಡಿರುವ ಒಕ್ಕಲಿಗ ಸಮುದಾಯದ ಗುಂಡು ಮತ್ತು ತುಂಡಿನ ಮೇಲಿನ ಮೋಹದ ಅನೇಕ ಪ್ರಕರಣಗಳು ಈ ಕೃತಿಯಲ್ಲಿ ದಾಖಲಾಗಿ ಓದುಗರಿಗೆ ಮುದ ನೀಡುತ್ತವೆ. ಹಂದಿ ಮಾಂಸ, ಬಂಡೂರು ಕುರಿಮಾಂಸ, ಥರಾವರಿ ಮೀನುಗಳು, ಮೂರು ಎಕ್ಸ್ ಅಂದರೆ ರಂಭೆ, ಊರ್ವಶಿ, ಮೇನಕೆಯರು ಇರುವ ರಮ್ಹಿಗೆಲ್ಲಾ ಬಣ್ಣಿಸಿರುವ ಪಾನಗೋಷ್ಠಿಯ ವಿವರಗಳನ್ನುಓದುತ್ತಿದ್ದರೆ, ಇದು ಲೇಖಕರ ಕಥನ ಮಾತ್ರವಲ್ಲದೆ ನಮ್ಮ ಯೌವನದ ದಿನಗಳ ಕಥನವೂ ಹೌದು ಎಂದು ಅನಿಸುತ್ತದೆ. ಲೇಖಕರು ಬಳಸಿರುವ ಮತ್ತಾಂತರ ಎಂಬ ಪದ ಬಳಕೆ ಸಾಹಿತ್ಯಲೋಕಕ್ಕೆ ಹೊಸ ಸೇರ್ಪಡೆ.

ಇಂದಿನ ಕನ್ನಡ ಸಾಹಿತ್ಯಲೋಕದಲ್ಲಿ ಶೇಕಡ ತೊಂಬತ್ತು ಮಂದಿ ಸಾಹಿತಿಗಳು, ಲೇಖಕರು, ಕಲಾವಿದರಿಗೆ ಕುಡಿಯುವ ಹವ್ಯಾಸ ಇದೆ. ದುರಂತವೆಂದರೆ, ತಮ್ಮ ಹವ್ಯಾಸವನ್ನು ಅದರಲ್ಲೂ ಇಂದಿನ ವರ್ತಮಾನದಲ್ಲಿ ಆಹಾರದ ಒಂದು ಭಾಗವೆಂಬಂತೆ ಆಗಿರುವ ಮದ್ಯಪಾನದ ಬಗ್ಗೆ ಯಾರೊಬ್ಬರೂ ಚಕಾರವೆತ್ತುವುದಿಲ್ಲ ಅಥವಾ ದಾಖಲಿಸುವುದಿಲ್ಲ. ಆದರೆ, ಲಕ್ಷ್ಮಿನಾರಾಯಣ ಅವರು ಯಾವುದೇ ಸಂಕೋಚವಿಲ್ಲದೆ ಗೆಳೆಯರ ಜೊತೆಗಿನ ಕ್ಷಣಗಳು ಮತ್ತು ಕೆಂಚಾಂಬ ಲಾಡ್ಜಿನಲ್ಲಿ ನಡೆಯುತ್ತಿದ್ದ ಪಾನಗೋಷ್ಠಿ ಮತ್ತು ಕೃಷಿ ಕಾಲೇಜಿನ ಹಾಸ್ಟಲ್‌ನಲ್ಲಿ ನಡೆಯುತ್ತಿದ್ದ ಮದ್ಯಪಾನದ ವಿವರಗಳ ಜೊತೆಗೆ ಕೀಟಲೆಯ ಕ್ಷಣಗಳನ್ನು ದಾಖಲಿಸಿ ಓರ್ವ ಲೇಖಕನಿಗೆ ಇರಬೇಕಾದ ಪಾರದರ್ಶಕತೆಯ ವ್ಯಕ್ತಿತ್ವವನ್ನು ಎತ್ತಿ ಹಿಡಿದಿದ್ದಾರೆ.

ಲಕ್ಷ್ಮಿನಾರಾಯಣ ಅವರ ಬಾಲ್ಯದ ತುಂಟಾಟಗಳು ಮತ್ತು ಬಾಲ್ಯದ ಗೆಳೆಯರ ಕುರಿತಾಗಿ ಅವರ ಹೈಸ್ಕೂಲ್ ಮತ್ತು ಕಾಲೇಜು ದಿನಗಳ ಬಗ್ಗೆ ಹಾಗೂ ಅಂದಿನ ಹಾಸನದ ಲೈಬ್ರರಿಗಳಲ್ಲಿ ದೊರೆಯುತ್ತಿದ್ದ ಪತ್ತೇದಾರಿ ಕಾದಂಬರಿಗಳ ಓದಿನ ಕುರಿತಾಗಿ ರೋಚಕವಾಗಿ ದಾಖಲಿಸಿದ್ದಾರೆ. ಹಾಸನ ನಗರದ ಬೆಂಗಳೂರು-ಮಂಗಳೂರು ಮುಖ್ಯರಸ್ತೆಯನ್ನು ಸ್ಥಳೀಯರು ಬಿ.ಎಂ. ರೋಡ್‌ ಎಂದು ಕರೆಯುತ್ತಿದ್ದರು. ಆದರೆ, ಇವರ ಪಾಲಿಗೆ ಅದು ಬಾರ್‌ ಮತ್ತು ಮಟನ್‌ ರೋಡ್‌ ಆಗಿತ್ತು. 1981 ರಿಂದ ಹಾಸನದ ಜೊತೆಗೆ ಈ ಲೇಖಕರ ಬಹುತೇಕ ಬಾಲ್ಯದ ಗೆಳೆಯರು ನನಗೆ ಪರಿಚಿತರೇ ಆಗಿದ್ದರು. ವಸಂತ ಮತ್ತು ಧರ್ಮ ಎಂಬ ಮಿತ್ರರು ಈಗ ನಮ್ಮೊಂದಿಗಿಲ್ಲ. ಈ ರಸ್ತೆಯಲ್ಲಿನ ಹೋಟೆಲ್‌ಗಳಲ್ಲಿ ದೊರೆಯುತ್ತಿದ್ದ ಅಕ್ಕಿರೊಟ್ಟಿ, ಹಂದಿ ಮಾಂಸದ ಫ್ರೈ, ಮತ್ತು ರಮ್ ಇವುಗಳಿಗೆ ಮನಸೋತವರಲ್ಲಿ ನಾನೂ ಒಬ್ಬನಾಗಿದ್ದೆ. ಇಂದಿಗೂ ಸಹ ಹಾಸನದ ನಾನ್ವೆಜ್ ‌ ಹೋಟೆಲ್‌ಗಳಲ್ಲಿ ಹಂದಿ ಮಾಂಸ ಫ್ರೈ ಅನ್ನು ಪ್ಲೇಟ್‌ ಮಾದರಿಯಲ್ಲಿ ನೀಡುವುದರ ಬದಲು ಕಾಲು ಕೆಜಿ, ಅರ್ಧ ಕೆಜಿ ಅಳತೆಯಲ್ಲಿ ನೀಡುವುದು ವಿಶೇಷ. ಜೊತೆಗೆ ಹಾಸನದ ಹಳೆ ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಹುರಿದು ಸಿದ್ಧಪಡಿಸಿದ ಮಾಂಸವನ್ನು ಗ್ರಾಹಕರು ಕೆಜಿಗಟ್ಟಲೆ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಆ ಅಂಗಡಿಯಲ್ಲಿ ದಿನವೊಂದಕ್ಕೆ ಒಂದೂವರೆ ಕ್ವಿಂಟಾಲ್‌ನಿಂದ ಎರಡು ಕ್ವಿಂಟಾಲ್ ಹುರಿದು ಮಸಾಲೆ ಹಾಕಿ ಸಿದ್ಧಪಡಿಸಿದ ಹಂದಿಮಾಂಸ ಮಾರಾಟವಾಗುತ್ತದೆ. ಹಾಗಾಗಿ ಇದು ಕೇವಲ ಎಸ್.ಎನ್ ಲಕ್ಷ್ಮಿನಾರಾಯಣರ ಆಕಸ್ಮಿಕ ಆತ್ಮಕಥೆಯಾಗಿರದೆ ನಮ್ಮೆಲ್ಲರ ಆತ್ಮಕಥನವೂ ಆಗಿದೆ.

ಲಕ್ಷ್ಮಿನಾರಾಯಣ ಮಾತ್ರವಲ್ಲದೆ, ಅವರ ಸಹೋದರರ ಮಾತುಗಳಲ್ಲಿಯೂ ಸಹ ಇದೇ ರೀತಿಯ ಲವಲವಿಕೆ ಮತ್ತು ತುಂಟತನದ ಮೊನಚುಗಳಿರುವುದನ್ನು ನಾನು ಬಲ್ಲೆ. ಅವರ ಹಿರಿಯ ಸಹೋದರ ಮಂಜುನಾಥ ದತ್ತ ಅವರಿಗೆ ನಾನು ಫೋನ್‌ ಮಾಡಿದಾಗ ಸಾಮಾನ್ಯವಾಗಿ ಅವರು ಶಾಂತಿಗ್ರಾಮದ ತೋಟದಲ್ಲಿ ಇರುತ್ತಾರೆ. ʻದತ್ತಣ್ಣ ಏನ್ಮಾಡ್ತಾ ಇದ್ದೀರಿʼ ಎಂದು ನಾನು ಕೇಳಿದ್ದರೆ ʻಮರಗಳಿಗೆ ಬೈಯ್ತಾ ಕುಳಿತಿದ್ದೀನಿ ಕಣೋ, ಬಡ್ಡೆತ್ತವಾ ನಿಮಗೇನು ರೋಗ ಯಾಕೆ ಸೊರಗ್ತಾ ಇದ್ದೀರಿ ಅಂತಾ ಕೇಳ್ತಾ ಕುಂತಿವ್ನಿʼ ಎಂದು ಅವರು ಉತ್ತರಿಸುತ್ತಾರೆ. ಅಂತಹ ವಿಡಂಬನಾ ಶೈಲಿಯ ಮಾತುಗಳು ಇಲ್ಲಿ ಲಕ್ಷ್ಮಿನಾರಾಯಣರ ಲೇಖನಿಯಲ್ಲಿ ಅಕ್ಷರರೂಪ ತಾಳಿವೆ. ಇಲ್ಲಿ ಅವರ ಬಾಲ್ಯದ ಹುಡುಗಾಟ, ಅಮ್ಮನಿಗೆ ನಾಟಿಕೋಳಿಯನ್ನು ಹಿಡಿದುಕೊಡುವ ಪರಿ, ಕದ್ದು ಸೀಬೆಹಣ್ಣು ಕೀಳುವುದು, ಶಾಲಾ ಮೇಷ್ಟರುಗಳ ವ್ಯಕ್ತಿತ್ವ ಎಲ್ಲವೂ ಗಮನ ಸೆಳೆಯುತ್ತವೆ.

ಕೃಷಿ ಕಾಲೇಜಿನ ಅವರ ಹಾಸ್ಟೆಲ್‌ ಕೊಠಡಿಯ ಸಹಪಾಠಿ ಬ್ಯಾಟ್ರಿ ಎಂದು ಅಡ್ಡಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಕೃಷ್ಣರೆಡ್ಡಿ, ಬಾಲ್ಯದ ಗೆಳೆಯ ಹಾಗೂ ಕೆಂಚಾಂಬ ಲಾಡ್ಜ್‌ನಲ್ಲಿ ಶಾಶ್ವತವಾಗಿ ತಂಗಿದ್ದ ದೀಪಿ(ಪ್ರದೀಪ್) ಮತ್ತು ಹಾಸ್ಟೆಲ್‌ನ ಕ್ಷೌರಿಕನು ಕಟಿಂಗ್ ಮಾಡುವ ಸಮಯದಲ್ಲಿ ಸ್ವಾರಸ್ಯಕರ ಕಥೆಗಳನ್ನು ಹೇಳುವ ವೈಖರಿ ಇವೆಲ್ಲವನ್ನೂ ಲೇಖಕರು ಕಟ್ಟಿಕೊಟ್ಟಿರುವ ಶೈಲಿ ಹಾಗೂ ಪ್ರತಿಯೊಂದು ಘಟನೆಗೂ ಅವರು ಶೀರ್ಷಿಕೆ ನೀಡಿರುವ ಪರಿ ನಗೆ ಉಕ್ಕಿಸುತ್ತವೆ. ಉದಾಹರಣೆಗೆ ʻಕೆಂಪಾದವೋ ತೊಡೆಯೆಲ್ಲಾ ಕೆಂಪಾದವೋʼ, ʻಯಾಪಿ ನ್ಯೂ ಇಯರ್‌ ಕಲಾʼ, ʻಲಾಂಗ್‌ ಲೀವ್‌ ಬಂಡೂರ್‌ ಕುರಿʼ ಇವೆಲ್ಲವೂ ಅವರ ಬರವಣಿಗೆಯಷ್ಟೇ ಖುಷಿ ನೀಡುತ್ತವೆ. ಹಿರಿಯ ಮಿತ್ರರಾದ ಅಗ್ರಹಾರ ಕೃಷ್ಣಮೂರ್ತಿಯವರು ಈ ಕೃತಿಗೆ ಬರೆದಿರುವ ಬೆನ್ನುಡಿಯಲ್ಲಿ ಇದು ಒಂದು ರೀತಿಯಲ್ಲಿ ವಿಡಂಬನಾ ಶೈಲಿಯ ಆತ್ಮಕಥನ ಎಂದು ಬಣ್ಣಿಸಿದ್ದಾರೆ. ಅದು ನಿಜವೂ ಹೌದು. ಇಲ್ಲಿ ಲೇಖಕರು ತಮ್ಮ ಬದುಕಿನ ಅನುಭವವನ್ನು ವಿಡಂಬನಾ ಶೈಲಿಯಲ್ಲಿ ಬಣ್ಣಿಸಿದ್ದರೂ ಸಹ ಅವರು ಈ ಜಗತ್ತನ್ನು ಗ್ರಹಿಸಿರುವ ಪರಿಯಲ್ಲಿ ಮಾನವೀಯ ದೃಷ್ಟಿಕೋನವೂ ಸಹ ಅಡಕವಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬುದ್ದಿ ಕಲಿಯದ ಕಾಂಗ್ರೆಸ್‌ ಮತ್ತು ಗಲಭೆ ಹುಡುಕುವ ಬಿಜೆಪಿ

ಬ್ಯಾಂಕಿನ ಬವಣೆ ವಿಭಾಗದಲ್ಲಿನ ಅವರ ಅನುಭವಗಳು ಮತ್ತು ಬೆಂಗಳೂರು ನಾಗರಬಾವಿ ಬಡಾವಣೆಯಲ್ಲಿ ಮನೆ ನಿರ್ಮಾಣ ನಂತರ ಅನುಭವಿಸಿದ ಸಂಕಷ್ಟಗಳು ವಿಭಿನ್ನ ಅನುಭವ ನಿಡುತ್ತವೆ. ಜೊತೆಗೆ ಮನೆ ಬಾಗಿಲು ತಟ್ಟಿದ ಹಸಿದ ಬಾಲಕಿಯ ನೋವಿನ ಕಥನ ಹಾಗೂ ಕೋಲೆಬಸವಣ್ಣನ ನಾದಸ್ವರ ನುಡಿಸುವ ಘಟನೆಗಳನ್ನು ಹೃದಯಕ್ಕೆ ತಟ್ಟುವ ಹಾಗೆ ದಾಖಲಿಸಿದ್ದಾರೆ. ಅವುಗಳನ್ನು ಓದುವಾಗ ಕಣ್ಣುಗಳು ನಮಗೆ ಅರಿವಿಲ್ಲದಂತೆ ಒದ್ದೆಯಾಗುತ್ತವೆ. ಕನ್ನಡ ಸಾಹಿತ್ಯ ಲೋಕದ ಇತಿಹಾಸದಲ್ಲಿ ಅರವತ್ತರ ನಂತರ ಬರವಣಿಗೆ ಪ್ರಾರಂಭಿಸಿದ ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀನಿವಾಸ ವೈದ್ಯ ಅವರು ಹೊಸ ಸಂಚಲನ ಮೂಡಿಸಿದರು. ʻಹಳ್ಳ ಬಂತು ಹಳ್ಳʼ ಕಾದಂಬರಿಯ ಜೊತೆಗೆ ʻಮನಸುಖರಾಯನ ಮನಸುʼ ಹಾಸ್ಯ ಪ್ರಬಂಧಗಳಲ್ಲಿ ತಮ್ಮ ಧಾರವಾಡದ ಬಾಲ್ಯದ ಗೆಳೆಯರ ಒಡನಾಟವನ್ನು ದಾಖಲಿಸಿ ಮೂಲಕ ಓದುಗರ ಮನ ಗೆದ್ದಿದ್ದರು. ಇದೀಗ ಲಕ್ಷ್ಮಿನಾರಾಯಣ ಅವರ ಈ ಕೃತಿಯನ್ನು ಓದಿದಾಗ ತಮ್ಮ ಅರವತ್ತೆರಡನೇ ವಯಸ್ಸಿನಲ್ಲಿ ಬರವಣಿಗೆ ಆರಂಭಿಸಿದ ಇವರೂ ಸಹ ನಿವೃತ್ತ ಬ್ಯಾಂಕ್ ಅಧಿಕಾರಿ ಜೊತೆಗೆ. ವೈದ್ಯರಂತೆ ಸಂಚಲನ ಮೂಡಿಸಬಲ್ಲರು ಎಂಬ ಆತ್ಮವಿಶ್ವಾಸ ನನಗಿದೆ.

ಈ ಕೃತಿಯ ಅಧ್ಯಾಯಗಳಿಗೆ ಆಕರ್ಷಕ ಚಿತ್ರಗಳನ್ನು ರಚಿಸಿರುವ ಹಾಗೂ ನಾವೆಲ್ಲಾ ಗುಜ್ಜಾರಣ್ಣ ಎಂದು ಕರೆಯುವ ಬಿ ಗುಜ್ಜಾರಪ್ಪನವರು ಲಕ್ಷ್ಮಿನಾರಾಯಣರ ಬರವಣಿಗೆಗೆ ಚಿತ್ರಗಳ ಮೂಲಕ ಜೀವ ತುಂಬಿದ್ದಾರೆ. ಮಿತ್ರ ಕೆ ಪುಟ್ಟಸ್ವಾಮಿಯವರು ಲಕ್ಷ್ಮಿನಾರಾಯಣರ ಕೃಷಿ ಕಾಲೇಜಿನ ಸಹಪಾಠಿ. ಅವರ ಆಸಕ್ತಿಯ ಫಲವಾಗಿ ಈ ಕೃತಿಯು ಹೊರಬರಲು ಸಾಧ್ಯವಾಗಿದೆ. ಜೊತೆಗೆ ಈ ಕೃತಿಗೆ ಅರ್ಥಪೂರ್ಣ ಮುನ್ನುಡಿ ಬರೆದಿದ್ದಾರೆ. ಬೆಂಗಳೂರು ನ್ಯಾಷನಲ್ ಕಾಲೇಜಿನ ಪುಟ್ಟ ಸಭಾಂಗಣದಲ್ಲಿ ಈ ಕೃತಿಯು ಬಿಡುಗಡೆಯಾದ ತಕ್ಷಣ ಮುನ್ನೂರು ಪ್ರತಿಗಳು ಮಾರಾಟವಾಗಿರುವುದು ʻಕೀಟಲೆಯ ದಿನಗಳುʼ ಎಂಬ ಆಕಸ್ಮಿಕ ಆತ್ಮಕಥನ ಎಷ್ಟು ಪ್ರಭಾವಶಾಲಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಕೃತಿಯ ಮೂಲಕ ಕನ್ನಡಕ್ಕೆ ಒಬ್ಬ ಸೃಜನಶೀಲ ಲೇಖಕರು ದೊರೆತದ್ದು ನಿಜಕ್ಕೂ ಹೆಮ್ಮೆಯ ಸಂಗತಿ.

ಪುಸ್ತಕಕ್ಕಾಗಿ: ಅಮೂಲ್ಯ ಪ್ರಸ್ತಕ, 94486 76770
Capture 2
ಡಾ. ಎನ್ ಜಗದೀಶ್ ಕೊಪ್ಪ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ವಜಾ ಮಾಡುವ ಮಸೂದೆ: ಪ್ರಜಾಪ್ರಭುತ್ವದ ಮೇಲಿನ ದಾಳಿಯೇ?

ಪದಚ್ಯುತಿ ಮಸೂದೆಯು ಭ್ರಷ್ಟಾಚಾರ ನಿಗ್ರಹದ ನೆಪದಲ್ಲಿ ರಾಜಕೀಯ ಪಿತೂರಿಯನ್ನು ಹುಟ್ಟುಹಾಕುತ್ತದೆ. ಬಿಜೆಪಿ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

Download Eedina App Android / iOS

X