ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕವು ನಡೆಸಿದ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳದಲ್ಲಿ ಸಮಾಜ ಸೇವಾ ಕ್ಷೇತ್ರಕ್ಕೆ ಕೊಡಮಾಡುವ ರಾಜ್ಯ ಗೌರವ ಪ್ರಶಸ್ತಿಗೆ ಸಿ ನರೇಂದ್ರ ನಾಗವಾಲರವರ ಹೆಸರನ್ನು ರಾಜ್ಯ ಸಮಿತಿಗೆ ಶಿಫಾರಸು ಮಾಡಿ, ರಾಜ್ಯ ಗೌರವ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿ ಗೌರವಿಸಿರುವುದು ರಾಜ್ಯ ಹಾಗೂ ಜಿಲ್ಲೆಯ ಹೆಮ್ಮೆ ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಸಂಯೋಜಕ ಡಾ. ಚಂದ್ರಗುಪ್ತ ಅಭಿಪ್ರಾಯಪಟ್ಟರು.
ದಲಿತ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾ ಘಟಕದ ಕಾರ್ಯಕರ್ತರು ಹಮ್ಮಿಕೊಂಡಿದ್ದ ರಾಜ್ಯ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ವಿಜಯಪುರದ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ ಗೌರವ ಪ್ರಶಸ್ತಿ ಪುರಸ್ಕೃತರಾಗಿ ಸಿ.ನರೇಂದ್ರ ನಾಗವಾಲ ಅವರನ್ನು ಆಯ್ಕೆ ಮಾಡಲಾಗಿತ್ತು” ಎಂದು ತಿಳಿಸಿದರು.
“ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟವನ್ನು ಮೈಗೂಡಿಸಿಕೊಂಡಿರುವ ಎಐಸಿಸಿ ಅಧ್ಯಕ್ಷ ಡಾ. ಎಂ ಮಲ್ಲಿಕಾರ್ಜುನ ಖರ್ಗೆಯವರ ಮಾನಸಪುತ್ರರೆಂದೇ ಹೆಸರುವಾಸಿಯಾಗಿರುವ ಇವರು ಪ್ರಸ್ತುತದಲ್ಲಿ ಡಾ. ಎಂ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಬಳಗದ ರಾಜ್ಯಾಧ್ಯಕ್ಷರಾಗಿ, ಕೆಪಿಸಿಸಿ ಕಾರ್ಯದರ್ಶಿಗಳಾಗಿ ಮತ್ತು ನಾಗವಾಲ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿದ್ದಾರೆ” ಎಂದರು.
“ದಲಿತ ಯುವ ಮುಖಂಡರಾದ ಇವರು ದಲಿತ ಚಳವಳಿ, ದಲಿತ ವಿದ್ಯಾರ್ಥಿಗಳ ಚಳವಳಿಗಳಲ್ಲಿ ಭಾಗವಹಿಸಿ, ದಲಿತರ ನೋವು ನಲಿವುಗಳಿಗೆ ಸ್ಪಂದಿಸುವ ಯುವ ನೇತಾರರಾಗಿದ್ದಾರೆ. ಸಾಮಾಜಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ, ಅಸಮಾನತೆಯ ವಿರುದ್ಧ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯುವ ದಲಿತ ಸಮೂಹಕ್ಕೆ ಧ್ವನಿಯಾಗಿದ್ದಾರೆ” ಎಂದು ಹೇಳಿದರು.
“ಸಮಾಜ ಸೇವೆ ಮತ್ತು ಅಭಿವೃದ್ಧಿ ಪರವಾದ ಕಾರ್ಯಚಟುವಟಿಕೆಗಳು, ಹೋರಾಟಗಳು, ಸಮಾಜ ಕಟ್ಟುವ ಯುವ ಚಿಂತನೆಗಳನ್ನು ದಲಿತ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾ ಘಟಕ ಮತ್ತು ರಾಜ್ಯ ಘಟಕವು ಇವರನ್ನು ಗುರುತಿಸಿದೆ. ಇದೇ ರೀತಿ ಸಮಾಜ ಸೇವಾ ಕಾರ್ಯಗಳಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಉನ್ನತ ಪ್ರಶಸ್ತಿಗಳು ಸಿಗಲಿ, ಉನ್ನತ ಸ್ಥಾನಮಾನಗಳನ್ನು ಅಲಂಕರಿ ಉತ್ತಮ ನಾಯಕರಾಗಲಿ” ಎಂದು ಆಶಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮೊಗೇರ ಸಮುದಾಯವನ್ನು ಪ್ರವರ್ಗ-1ರ ಪಟ್ಟಿಯಿಂದ ಕೈಬಿಡದಂತೆ ದಸಂಸ ಆಗ್ರಹ
ಪ್ರಶಸ್ತಿ ಪುರಸ್ಕೃತ ಸಿ ನರೇಂದ್ರ ನಾಗಾವಾಲ ಅವರು ಮಾತನಾಡಿ, ಪ್ರಶಸ್ತಿ ಪ್ರದಾನ ಮಾಡಿದ ಸಂಘಟನೆಯ ಕಾರ್ಯಕರ್ತರಿಗೆ ವಂದಿಸಿದರು.
ಈ ವೇಳೆ ದಲಿತ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾ ಘಟಕ ಅಧ್ಯಕ್ಷ ಡಾ. ರಂಗಸ್ವಾಮಿ ಕಾಳಹುಂಡಿ, ಉಪಾಧ್ಯಕ್ಷೆ ಡಾ. ಜಯಶೀಲ ಎಸ್, ಕಾರ್ಯದರ್ಶಿ ಡಾ. ಟಿ. ಮಂಜು ಸತ್ತಿಗೆಹುಂಡಿ, ಖಜಾಂಚಿ ಡಾ. ಶಿವಶಂಕರ ಬಿ ಇದ್ದರು.