- ಮೋದಿಯವರನ್ನು ಕೇಳಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರಾ? ಎಂದ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್
- ಸಮಾರಂಭ ವೇದಿಕೆಯಲ್ಲಿ ಕೆಲಕಾಲ ಗದ್ದಲ, ಮಾತಿನ ಚಕಮಕಿ: ಸಮಾಧಾನಿಸಿದ ಸಚಿವ ಮಲ್ಲಿಕಾರ್ಜುನ್
‘ಗೃಹಜ್ಯೋತಿ’ ಯೋಜನೆಯ ಉದ್ಘಾಟನೆಯ ವೇಳೆ ‘ಅನ್ನಭಾಗ್ಯ’ದ ವಿಚಾರವನ್ನು ಬಿಜೆಪಿ ಶಾಸಕ ಪ್ರಸ್ತಾಪಿಸಿದ ಬಳಿಕ ಸಭೆಯಲ್ಲಿ ಮಾತಿನ ಚಕಮಕಿಗೆ ಕಾರಣವಾಗಿ, ಸಭಿಕರು ರೊಚ್ಚಿಗೆದ್ದ ಘಟನೆ ದಾವಣಗೆರೆಯಲ್ಲಿ ಇಂದು ನಡೆದಿದೆ.
ನಿನ್ನೆ ರಾಜ್ಯಮಟ್ಟದಲ್ಲಿ ಉದ್ಘಾಟನೆಯಾಗಿದ್ದ ‘ಗೃಹಜ್ಯೋತಿ’ ಯೋಜನೆ, ಇಂದು ದಾವಣಗೆರೆಯಲ್ಲಿ ಜಿಲ್ಲಾಮಟ್ಟದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಜಿಲ್ಲಾ ಉಸ್ತುವಾರಿ ಎಸ್.ಎಸ್.ಮಲ್ಲಿಕಾರ್ಜುನ ಸಹಿತ ಜಿಲ್ಲೆಯ ಎಲ್ಲ ಶಾಸಕರನ್ನೂ ಆಹ್ವಾನಿಸಲಾಗಿತ್ತು. ಸರ್ಕಾರಿ ಕಾರ್ಯಕ್ರಮವಾದ್ದರಿಂದ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಹರಿಹರದ ಬಿ.ಪಿ.ಹರೀಶ್ ಅವರಿಗೂ ಆಹ್ವಾನ ನೀಡಲಾಗಿತ್ತು. ಹಾಗಾಗಿ, ಅವರೂ ಕೂಡ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿ.ಪಿ.ಹರೀಶ್ ಮಾತನಾಡುವುದಕ್ಕಿಂತ ಮುಂಚಿತವಾಗಿ ಮಾತನಾಡಿದ್ದ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವಂತಪ್ಪ, ‘ನಮ್ಮ ಸರ್ಕಾರದ ಅನ್ನಭಾಗ್ಯ ಗ್ಯಾರಂಟಿಗೆ ಪ್ರಧಾನಿ ಮೋದಿಯವರು ಅಕ್ಕಿಯನ್ನು ನೀಡಲು ಒಪ್ಪಿಲ್ಲ. ಹಾಗಾಗಿ, ಸಿದ್ದರಾಮಯ್ಯ ಸರ್ಕಾರ ಹಣ ನೀಡುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದೆ’ ಎಂದು ಹೇಳಿದ್ದರು.
ಆ ಬಳಿಕ ಮಾತನಾಡಿದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಇದನ್ನು ಉಲ್ಲೇಖಿಸಿ, ‘ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರಾ? ದೇಶದಲ್ಲಿ ಎಲ್ಲ ರಾಜ್ಯಗಳು 10 ಕೆ ಜಿ, 20 ಕೆ ಜಿ ಕೊಡ್ತೀವಿ ಅಂತ ಘೋಷಣೆ ಮಾಡಿದ್ರೆ ನಿರೀಕ್ಷೆಗೆ ತಕ್ಕಂತೆ ಕೊಡಲಿಕ್ಕೆ ಆಗಲ್ಲ’ ಎಂದು ಹೇಳಿಕೆ ನೀಡಿದರು.
ಈ ಹೇಳಿಕೆ ನೀಡಿದ ಕೂಡಲೇ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಭೆಯಲ್ಲಿದ್ದ ಕೆಲ ಸಭಿಕರು, ಯಾವ ಸಭೆಯಲ್ಲಿ ಏನು ಮಾತನಾಡಬೇಕು ಅಂತ ಗೊತ್ತಿಲ್ವಾ ನಿಮಗೆ? ಸಾಕು ಮಾತು ನಿಲ್ಲಿಸಿ ಅಂತ ಬೊಬ್ಬೆ ಹೊಡೆದರು.
ಇದೇ ವೇಳೆ ಸಭೆಯ ವೇದಿಕೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತನೋರ್ವ ಬಿಜೆಪಿ ಶಾಸಕರಿಂದ ಮೈಕ್ ಕಿತ್ತುಕೊಂಡು, ‘ನಮ್ಮ ಸರ್ಕಾರ ಬಂದಿದೆ ಅಂತ ನೀವು ಈ ರೀತಿ ಮಾತನಾಡ್ತಾ ಇದ್ದೀರಾ. ನಿಮಗೆ ಮಾತನಾಡಲು ಯಾವುದಕ್ಕೆ ಅವಕಾಶ ಕೊಟ್ಟಿದ್ದಾರೋ ಅದನ್ನಷ್ಟೇ ಮಾತನಾಡಿ’ ಎಂದು ಜೋರು ಧ್ವನಿಯಲ್ಲೇ ಮಾತನಾಡಿದರು.
ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ದೂರ ಕಳುಹಿಸಿದರು. ವೇದಿಕೆ ಮುಂಭಾಗ ಜಮಾಯಿಸಿದ್ದ ಕೆಲವರು ಶಾಸಕರೊಂದಿಗೆ ವಾಗ್ವಾದ ಕೂಡ ನಡೆಸಿದರೆ, ಕೆಲವರು ‘ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜೈ’ ಎಂದು ಘೋಷಣೆ ಕೂಗಿದರು.
ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಧ್ಯಸ್ಥಿಕೆ ವಹಿಸಿ ಸಭಿಕರೆಲ್ಲರನ್ನೂ ಸಮಾಧಾನಪಡಿಸಿದರು. ಆ ಬಳಿಕ ಬಿಜೆಪಿ ಶಾಸಕರಿಗೆ ಮಾತು ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ನಂತರ ಪರಿಸ್ಥಿತಿ ತಿಳಿಯಾಯಿತು.
ಬಳಿಕ ಮಾತನಾಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ‘ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡಲಿಲ್ಲ. ಮೊದಲು ಹೆಚ್ಚುವರಿ ಪೂರೈಸಲು ಬಿಜೆಪಿಯವರು ಕೇಂದ್ರಕ್ಕೆ ಹೇಳಿ’ ಎಂದು ‘ಗೃಹಜ್ಯೋತಿ’ ಉದ್ಘಾಟನಾ ಸಮಾರಂಭದಲ್ಲಿ ಮಲ್ಲಿಕಾರ್ಜುನ್ ಹೇಳಿದರು.
‘ಕೋವಿಡ್ ಸಮಯದಲ್ಲೂ ಪ್ರಧಾನಿ ಯಾವುದೇ ಸಹಾಯ ಮಾಡಲಿಲ್ಲ. ನಾವು ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ. ಅದನ್ನು ಬಿಜೆಪಿಯವರು ಗಮನಿಸಲಿ’ ಎಂದು ಅದೇ ವೇದಿಕೆಯಲ್ಲಿ ಟಾಂಗ್ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ದೇವೇಂದ್ರಪ್ಪ,ಲತಾ ಮಲ್ಲಿಕಾರ್ಜುನ್, ಮಹಾಪೌರರಾದ ಬಿ.ಹೆಚ್ ವಿನಾಯಕ್, ಮಾಜಿ ಶಾಸಕ ರಾಮಪ್ಪ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಹಾಗೂ ಫಲಾನುಭವಿಗಳು ಪಾಲ್ಗೊಂಡಿದ್ದರು.