ವೀರಪ್ಪನ್ ಕಥಾನಕದಲ್ಲಿ ಕಾಡು ಪ್ರಧಾನ ಪಾತ್ರ ವಹಿಸಿದೆ. ಆ ಕಾಡಿನಲ್ಲಿದ್ದ ವೀರಪ್ಪನ್ ಕ್ರೂರ ಪ್ರಾಣಿಯಂತೆಯೇ ಬದುಕಿದ್ದಾನೆ. ವೀರಪ್ಪನ್, ಕಾಡು ಮತ್ತು ಕ್ರೌರ್ಯವನ್ನು ಬಿಡಿಸಿಡಲು ಸೆಲ್ವರಾಜ್ ಬಳಸಿರುವ ಕ್ರೊನಾಲಜಿ ಕುತೂಹಲಕರವಾಗಿದೆ. ಆದರೆ ಅಲ್ಲಿ ವೀರಪ್ಪನ್ ಎಂಬ ವ್ಯಕ್ತಿ ನರಹಂತಕನಾಗಿಯೂ ಕಾಣುತ್ತಾನೆ, ಮಾಡರ್ನ್ ರಾಬಿನ್ ಹುಡ್ ಆಗಿಯೂ ಗೋಚರಿಸುತ್ತಾನೆ. ಇದೇ ಈ ಚಿತ್ರದ ಶಕ್ತಿ ಮತ್ತು ದೌರ್ಬಲ್ಯ.
‘ಲೈಫ್ ಆಫ್ ಪೈ’ ಎಂಬ ಹಾಲಿವುಡ್ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸೆಲ್ವಮಣಿ ಸೆಲ್ವರಾಜ್, ತಮ್ಮ ಬಹುದಿನಗಳ ಬಯಕೆಯಾದ ವೀರಪ್ಪನ್ ಕುರಿತ ಸಾಕ್ಷ್ಯಸರಣಿಯ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಬಾಲ್ಯಕಾಲದಿಂದಲೂ ಬಹುವಾಗಿ ಕಾಡಿದ, ಗುಂಗಿಹುಳದಂತೆ ಕೊರೆಯುತ್ತಿದ್ದ ವೀರಪ್ಪನ್ ಕುರಿತು ಚಿತ್ರ ಮಾಡಬೇಕೆಂಬ ಮಹದಾಸೆಯನ್ನು ಸಾಕ್ಷ್ಯಚಿತ್ರದ ಮೂಲಕ ಸಾಕಾರಗೊಳಿಸಿಕೊಂಡಿದ್ದಾರೆ. ಪ್ರತಿಷ್ಠಿತ ನೆಟ್‌ಫ್ಲಿಕ್ಸ್ ಓಟಿಟಿ ಪ್ಲಾಟ್ ಫಾರಂ ಮೂಲಕ ಬಿಡುಗಡೆಯಾಗಿರುವ ‘ದಿ ಹಂಟ್ ಫಾರ್ ವೀರಪ್ಪನ್’ ಆರು ಭಾಷೆಗಳಲ್ಲಿ, ನಾಲ್ಕು ಕಂತುಗಳಲ್ಲಿ ನಿರ್ಮಾಣವಾಗಿದ್ದು, ಈಗ ಪ್ರೇಕ್ಷಕರ ಬೆರಳತುದಿಯಲ್ಲಿ ಬೆರಗು ಹುಟ್ಟಿಸುತ್ತಿದೆ.
ಈ ಹಿಂದೆ, ವೀರಪ್ಪನ್ ದಂತಚೋರನಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ದಿನಗಳಲ್ಲಿಯೇ, 1991ರಲ್ಲಿಯೇ ಕನ್ನಡ ಚಿತ್ರರಂಗ ‘ವೀರಪ್ಪನ್’ ಎಂಬ ಸಿನೆಮಾ ಮಾಡಿತ್ತು. ವೀರಪ್ಪನ್ ಪಾತ್ರದಲ್ಲಿ ದೇವರಾಜ್ ಅಭಿನಯಿಸಿದ್ದರು. ಆ ನಂತರ, 2013ರಲ್ಲಿ ಎಎಂಆರ್ ರಮೇಶ್ ನಿರ್ದೇಶನದಲ್ಲಿ ‘ಅಟ್ಟಹಾಸ’ ಎಂಬ ಚಿತ್ರ ನಿರ್ಮಾಣವಾಗಿತ್ತು. ಆ ಚಿತ್ರದಲ್ಲಿ ಕಿಶೋರ್ ವೀರಪ್ಪನ್ ಪಾತ್ರ ನಿರ್ವಹಿಸಿದ್ದರು. 2016ರಲ್ಲಿ ಬಾಲಿವುಡ್‌ನ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ‘ಕಿಲ್ಲಿಂಗ್ ವೀರಪ್ಪನ್’ ಎಂಬ ಸಿನೆಮಾ ಮಾಡಿದ್ದು, ಸಂದೀಪ್ ಭಾರದ್ವಾಜ್ ವೀರಪ್ಪನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ, 2023 ರಲ್ಲಿ ಸೆಲ್ವರಾಜ್ ನಿರ್ದೇಶನದಲ್ಲಿ ‘ದಿ ಹಂಟ್ ಫಾರ್ ವೀರಪ್ಪನ್’ ಎಂಬ ಸಾಕ್ಷ್ಯಸರಣಿ ರೂಪದಲ್ಲಿ ಬಿಡುಗಡೆಯಾಗಿ ಸುದ್ದಿ ಮಾಡುತ್ತಿದೆ.
ವೀರಪ್ಪನ್ ಇಲ್ಲವಾದರೂ, ಆ ರೋಚಕ ವ್ಯಕ್ತಿತ್ವ ಸಿನೆಮಾ ಜಗತ್ತನ್ನು ಬೆರಗುಗೊಳಿಸುತ್ತಲೇ ಇದೆ. ಒಂದಲ್ಲ ಒಂದು ರೀತಿಯಲ್ಲಿ ಅವನನ್ನು ಜೀವಂತವಾಗಿಟ್ಟಿದೆ.
ಕಾಡುಗಳ್ಳ, ದಂತಚೋರ, ನರಹಂತಕ, ಡಕಾಯಿತ ಎಂದೆಲ್ಲ ವಿಶೇಷಣಗಳನ್ನು ಹೊಂದಿದ್ದ ವೀರಪ್ಪನ್- ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ತಲೆನೋವಾಗಿದ್ದ. ಅಭೇದ್ಯ ಅರಣ್ಯವನ್ನು ಅಡಗುತಾಣವನ್ನಾಗಿಸಿಕೊಂಡಿದ್ದ ಈತನನ್ನು ಸೆರೆ ಹಿಡಿಯುವುದು, ಕೊಲ್ಲುವುದು ಕಡುಕಷ್ಟದ ಸಂಗತಿಯಾಗಿತ್ತು. ಕಷ್ಟನಷ್ಟಗಳ ನಡುವೆಯೇ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳು ಮೇಲಿಂದ ಮೇಲೆ ಆತನಿಗಾಗಿ ಅಪಾರ ಹಣ ಮತ್ತು ಪೊಲೀಸ್ ತಂಡದ ಶ್ರಮವನ್ನು ವಿನಿಯೋಗಿಸುತ್ತಲೇ ಬಂದವು. ಹಾಗಾಗಿ ವೀರಪ್ಪನ್ ಸೆರೆ ಕಾರ್ಯಾಚರಣೆ ಭಾರತದ ಅತ್ಯಂತ ದೀರ್ಘಾವಧಿಯ ಮತ್ತು ದುಬಾರಿ ಮಾನವ ಬೇಟೆಗಳಲ್ಲಿ ಒಂದಾಗಿ ದಾಖಲೆಯನ್ನೇ ನಿರ್ಮಿಸಿದೆ.
ಇದನ್ನು ಓದಿದ್ದೀರಾ?: ಲಂಕೇಶರನ್ನು ಗ್ರಹಿಸುವ, ಅವರ ಸಾಹಿತ್ಯಕ್ಕೆ ಮುಖಾಮುಖಿಯಾಗಲು ಹಾದಿ ತೋರುವ ʼಮಣ್ಣಿನ ಕಸುವುʼ
ಇಂತಹ ಕೊಲೆಪಾತಕಿ ವೀರಪ್ಪನ್ ಕುರಿತ ಮಾಹಿತಿ ಸಂಗ್ರಹಿಸಲು ಸೆಲ್ವಮಣಿ ನಾಲ್ಕು ವರ್ಷಗಳನ್ನು ಮುಡಿಪಾಗಿಟ್ಟಿದ್ದರಂತೆ. ವೀರಪ್ಪನ್ ಅಡಗಿದ್ದ ಅಡವಿಯ ಇಂಚಿಂಚು ಜಾಲಾಡಿ; ಆತನನ್ನು ಬಲ್ಲ ಸತ್ಯಮಂಗಲದ ಸಾಮಾನ್ಯರೊಂದಿಗೆ ಮಾತಾಡಿ; ಆತನ ತಂಡದಲ್ಲಿದ್ದವರು, ಖುದ್ದು ಕಂಡವರು, ಸಹಾಯ ಪಡೆದವರಿಂದ ಮಾಹಿತಿ ಸಂಗ್ರಹಿಸಿದ್ದರಂತೆ. ಆನಂತರ ವೀರಪ್ಪನ್ ಗೆ ಮುಖಾಮುಖಿಯಾದ ಅರಣ್ಯಾಧಿಕಾರಿಗಳು, ಪೊಲೀಸರು, ಪತ್ರಕರ್ತರು, ಫೋಟೋಗ್ರಾಫರ್ ಮತ್ತು ಆತನ ಮಡದಿ ಮುತ್ತುಲಕ್ಷ್ಮಿಯನ್ನು ಖುದ್ದು ಕಂಡು, ಮಾತನಾಡಿಸಿದ್ದಾರೆ. ಅದೆಲ್ಲವನ್ನು ಒಂದು ಸೂತ್ರಕ್ಕೆ ತಂದು, ವ್ಯಕ್ತಿಗಳು, ಘಟನೆಗಳು ಮತ್ತು ಅಡವಿಯನ್ನು ಹದವಾಗಿ ಬೆರೆಸಿ, ಅದಕ್ಕೆ ಸೂಕ್ತ ಸಂಗೀತ ಸೇರಿಸಿ, ಅದ್ಭುತವೆನ್ನಿಸುವ ಅರಣ್ಯದ ಏರಿಯಲ್ ಶಾಟ್ಸ್ ಸಂಯೋಜಿಸಿ, ಅಚುಕಟ್ಟಾಗಿ ಸಂಕಲಿಸಿ ಸಾರ ರೂಪದಲ್ಲಿ ನಮ್ಮ ಮುಂದಿಟ್ಟಿದ್ದಾರೆ.
ಅಲ್ಲಿ ವೀರಪ್ಪನ್ ಎಂಬ ವ್ಯಕ್ತಿ ನರಹಂತಕನಾಗಿಯೂ ಕಾಣುತ್ತಾನೆ, ಮಾಡರ್ನ್ ರಾಬಿನ್ ಹುಡ್ ಆಗಿಯೂ ಗೋಚರಿಸುತ್ತಾನೆ. ಇದೇ ಈ ಚಿತ್ರದ ಶಕ್ತಿ ಮತ್ತು ದೌರ್ಬಲ್ಯ.

ಲೆಕ್ಕವಿಲ್ಲದಷ್ಟು ಆನೆಗಳನ್ನು ಕೊಂದು, ಶ್ರೀಗಂಧಕ್ಕಾಗಿ ಕಾಡನ್ನೇ ಬರಿದು ಮಾಡಿ, ತಡೆಯಲು ಹೋದ ಅರಣ್ಯಾಧಿಕಾರಿಗಳನ್ನು, ಪೊಲೀಸರನ್ನು ಕೊಂದು ಅಟ್ಟಹಾಸಗೈದಿದ್ದ ವೀರಪ್ಪನ್, ಯಾವ ಕೋನದಿಂದ ನೋಡಿದರೂ ಮನುಷ್ಯನಲ್ಲ. ಆದರೆ ಆತನ ಮಡದಿ ಮುತ್ತುಲಕ್ಷ್ಮಿಯ ಕಣ್ಣಲ್ಲಿ ಅನ್ಯಾಯದ ವಿರುದ್ಧ ಹೋರಾಡಿದ ಮಹಾನ್ ನಾಯಕ, ಧೈರ್ಯಶಾಲಿ, ಹೋರಾಟಗಾರ.
ನಿರ್ದೇಶಕ ಸೆಲ್ವರಾಜ್ ಕಟ್ಟಿಕೊಟ್ಟಿರುವ ವೀರಪ್ಪನ್ ಕಥಾನಕದಲ್ಲಿ ಕಾಡು ಪ್ರಧಾನ ಪಾತ್ರ ವಹಿಸಿದೆ. ಆ ಕಾಡಿನಲ್ಲಿದ್ದ ವೀರಪ್ಪನ್ ಕ್ರೂರ ಪ್ರಾಣಿಯಂತೆಯೇ ಬದುಕಿದ್ದಾನೆ. ವೀರಪ್ಪನ್, ಕಾಡು ಮತ್ತು ಕ್ರೌರ್ಯವನ್ನು ಬಿಡಿಸಿಡಲು ಸೆಲ್ವರಾಜ್ ಬಳಸಿರುವ ಕ್ರೊನಾಲಜಿ ಕುತೂಹಲಕರವಾಗಿದೆ. ಮುತ್ತುಲಕ್ಷ್ಮಿಯೇ ಖುದ್ದಾಗಿ ಕೂತು ಕತೆ ಬಿಡಿಸಿಟ್ಟಿರುವ ಬಗೆ ಭಿನ್ನವಾಗಿದ್ದರೂ, ಇದು ಸತ್ಯವೇ ಎಂಬ ಅನುಮಾನವನ್ನೂ ಹುಟ್ಟುಹಾಕುತ್ತದೆ. ಆದರೆ ಆ ದಿನಗಳಲ್ಲಿದ್ದ ಸತ್ಯಮಂಗಲದ ಸಾಮಾನ್ಯರ ಮಾತು, ಅದಕ್ಕೆ ತಕ್ಕಂತೆ ಅರಣ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು ಮತ್ತು ರಾಜಕಾರಣಿಗಳು ಬಿಡಿಸಿಡುವ ಘಟನೆಗಳು; ಅದಕ್ಕೆ ಪೂರಕವಾದ ಆ ಕಾಲದ ಪೇಪರ್ ಕಟಿಂಗ್ಸ್, ಫೋಟೋಗಳು, ವಿಡಿಯೋಗಳ ಹೆಣಿಗೆ- ಡಾಕ್ಯುಮೆಂಟರಿ ಎಂದರೆ ಹೀಗಿರಬೇಕೆಂಬ ಉದ್ಗಾರಕ್ಕೂ ಕಾರಣವಾಗುತ್ತದೆ.
ಒಬ್ಬ ಸಾಮಾನ್ಯ ಕಾಡುಗಳ್ಳ ನರಹಂತಕನಾಗಿ ಬೆಳೆದದ್ದು, ಅರಣ್ಯಾಧಿಕಾರಿ ಶ್ರೀನಿವಾಸ್, ಪೊಲೀಸ್ ಅಧಿಕಾರಿಗಳಾದ ಹರಿಕೃಷ್ಣ, ಶಕೀಲ್ ಅಹಮದ್ ಸೇರಿ 184 ಜನರನ್ನು ಕೊಂದಿದ್ದು ಹಾಗೂ ಕನ್ನಡ ಸಾಂಸ್ಕೃತಿಕ ಅಸ್ಮಿತೆಯಂತಿದ್ದ ಡಾ. ರಾಜಕುಮಾರ್ ಅವರನ್ನು ಅಪಹರಿಸಿದ್ದು, ಅದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಸರ್ಕಾರವೇ ಮುಂದೆ ನಿಂತು ಕೊಟ್ಟಿದ್ದು- ವೀರಪ್ಪನ್ ಎಂದಾಕ್ಷಣ ನೆನಪಾಗುವ, ಮರೆಯಲಿಕ್ಕೆ ಸಾಧ್ಯವಾಗದ ಘಟನಾವಳಿಗಳು. ಹಾಗೆಯೇ ಇದೆಲ್ಲವೂ ಕರ್ನಾಟಕಕ್ಕೆ ಸಂಬಂಧಿಸಿದ ಬಹುದೊಡ್ಡ ನಷ್ಟದ, ನೋವಿನ ಬಾಬತ್ತು.

ಆದರೆ ಇದೇ ಮಾತುಗಳನ್ನು ತಮಿಳುನಾಡಿಗೆ ಸಂಬಂಧಿಸಿದಂತೆ ಹೇಳಲಾಗುವುದಿಲ್ಲ. ವೀರಪ್ಪನ್ ಸತ್ಯಮಂಗಲದ ಸುತ್ತಮುತ್ತಲ ತಮಿಳು ಭಾಷಿಕ ಜನರ ಪಾಲಿಗೆ ತಲೈವರ್ ಆಗಿದ್ದ. ಕಷ್ಟದಲ್ಲಿರುವವರಿಗೆ ಹಣಕಾಸಿನ ಸಹಾಯ ನೀಡಿ ಸಹೋದರನಂತಿದ್ದ. ಭಾಷೆಯ ಕಾರಣಕ್ಕೆ ತಮಿಳುನಾಡಿನ ಜನ ಅವನ ಬಗ್ಗೆ ಕೊಂಚ ಸಹಾನುಭೂತಿ ಹೊಂದಿದ್ದರು. ಆದರೂ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ತಮಿಳುನಾಡಿನ ಪೊಲೀಸರು ಹತರಾಗಿದ್ದಾರೆ. ಹಣವೂ ಖರ್ಚಾಗಿದೆ. ಸರ್ಕಾರಕ್ಕೂ ಸಮಸ್ಯೆ ತಂದೊಡ್ಡಿದೆ.
ಇವೆಲ್ಲವುಗಳ ನಡುವೆಯೇ ವೀರಪ್ಬನ್ ಮೊದಲಿಗೆ ಭೇಟಿ ಮಾಡಿದ್ದು ‘ನಕ್ಕೀರನ್’ ಪತ್ರಿಕೆಯ ಫೋಟೋಗ್ರಾಫರ್ ಶಿವಸುಬ್ರಹ್ಮಣ್ಯಂ ಅವರನ್ನು. ಆನಂತರ ಸಂಧಾನಕ್ಕಾಗಿ ನಕ್ಕೀರನ್ ಗೋಪಾಲ್ ಕಾಡಿಗೆ ಹೋಗಿದ್ದರು. ಅವರ ಹಿಂದೆ ಕೊಳತ್ತೂರು ಮಣಿ, ನೆಡುಮಾರನ್ ಹೋದರು. ಇವರೆಲ್ಲರ ನಡುವೆಯೇ ಶ್ರೀಲಂಕಾದ ತಮಿಳು ಉಗ್ರರ ತಂಡವೂ ವೀರಪ್ಪನ್ ಪರ ವಕಾಲತ್ತು ವಹಿಸಿ, ಆತ ಕಾವೇರಿ, ತಮಿಳು ಭಾಷೆ ಮತ್ತು ಜನಗಳ ಬಗ್ಗೆ ಮಾತನಾಡುವಂತಾಯಿತು. ಆದರೆ ಕೊನೆಯಲ್ಲಿ ಬಂದ ವಿಜಯಕುಮಾರ್ ಮತ್ತು ಸೆಂತಮರೈ ಕಣ್ಣನ್ ಗಳ ಕ್ರಮಬದ್ಧ ಕಾರ್ಯಾಚರಣೆಯಲ್ಲಿ, 2004ರಲ್ಲಿ ವೀರಪ್ಪನ್ ಹೆಣವಾದ.
ಇದೆಲ್ಲವೂ ಸೆಲ್ವರಾಜ್ ಸೆಲ್ವಮಣಿಯವರ ‘ವೀರಪ್ಪನ್’ ಸಾಕ್ಷ್ಯಸರಣಿಯಲ್ಲಿ ದಾಖಲಾಗಿದೆ. ಆದರೆ ಅದು, ನಿರ್ದೇಶಕರಾದಿಯಾಗಿ ಎಲ್ಲವೂ ತಮಿಳು ಒಲವು, ಸಹಾನುಭೂತಿಯನ್ನು ಸೂಚಿಸುತ್ತವೆ. ಅದಕ್ಕೆ ಪೂರಕವಾಗಿ ಮುತ್ತುಲಕ್ಷ್ಮಿಯ ಮಾತುಗಳು, ವೀರಪ್ಪನ್ ವೈಭವೀಕರಿಸುತ್ತವೆ. ಇದಕ್ಕೆ ಕೊಂಚ ಭಿನ್ನವಾಗಿ ಕನ್ನಡಿಗರಾದ ಅಶೋಕ್ ಕುಮಾರ್ ಮತ್ತು ಅರಕೇಶ್ ಅವರ ಮಾತುಗಳು- ಅಗತ್ಯಕ್ಕೆ ತಕ್ಕಷ್ಟು- ಸಮತೂಕದ ಮಾತುಗಳಾಗಿ, ಸಾಕ್ಷ್ಯಚಿತ್ರಕ್ಕೊಂದು ತೂಕ ತಂದಿವೆ.

ಇಷ್ಟರ ನಡುವೆ, ವೀರಪ್ಪನ್ ಅಟ್ಟಹಾಸವನ್ನು ಮತ್ತು ಬೃಹತ್ ತಂಡದ ಸಂಖ್ಯೆಯನ್ನು ಹತ್ತಕ್ಕಿಳಿಸಿ, ನಡುಕ ಹುಟ್ಟಿಸಿದ ಕರ್ನಾಟಕದ ಖಡಕ್ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಈ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ತಮ್ಮ ಅನುಭವವನ್ನು ಹಂಚಿಕೊಂಡಿಲ್ಲ. ಕಷ್ಟ-ನಷ್ಟಗಳ ಕತೆ ಬಿಚ್ಚಿಟ್ಟಿಲ್ಲ. ಹಾಗೆಯೇ ಮತ್ತೊಬ್ಬ ತಮಿಳುನಾಡು ಪೊಲೀಸ್ ಅಧಿಕಾರಿಯಾದ ವೀರಪ್ಪನ್ ಆಪರೇಷನ್ ಕುಕೂನ್‌ನ ರೂವಾರಿ ವಿಜಯಕುಮಾರ್ ಕೂಡ ಕಾಣಿಸಿಕೊಂಡಿಲ್ಲ. ವೀರಪ್ಪನ್ ಕಾರ್ಯಾಚರಣೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದ ಈ ಇಬ್ಬರು ಪೊಲೀಸ್ ಅಧಿಕಾರಿಗಳ ಅನಿಸಿಕೆ, ಅನುಭವ ಇಲ್ಲದಿರುವುದು ಈ ಸಾಕ್ಷ್ಯಚಿತ್ರದ ಬಹುದೊಡ್ಡ ಕೊರತೆಯಂತೆ ಕಾಣುತ್ತದೆ. ಹಾಗೆಯೇ ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕ ಜೋಡಿ ಕೃಪಾಕರ-ಸೇನಾನಿ, ಒಂದು ವಾರ ಕಾಲ ವೀರಪ್ಪನ್ ಸೆರೆಯಲ್ಲಿದ್ದವರು. ಇವರೂ ಕೂಡ ಈ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ?: ಟಾಲಿವುಡ್ ಮೇಲೆ ಬಿಜೆಪಿ ಕಣ್ಣು; ‘ಕೆಂಪು ಸಿನಿಮಾ’ಗಳ ತೆಲುಗು ಚಿತ್ರರಂಗದಲ್ಲಿ ಈಗ ‘ಕೇಸರಿ ರಾಜಕಾರಣ’
ಇಷ್ಟೆಲ್ಲ ಕೊರತೆಗಳ ನಡುವೆಯೂ, ಒಂದು ಡಾಕ್ಯುಮೆಂಟರಿಯಾಗಿ ‘ದಿ ಹಂಟ್ ಫಾರ್ ವೀರಪ್ಪನ್’ ನೋಡಬಹುದಾದ ಸಾಕ್ಷ್ಯಸರಣಿ. ಕ್ರೈಮ್ ಕಥಾನಕ ಎಲ್ಲ ಕಾಲಕ್ಕೂ ವೀಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಸರಕು. ಅದರಲ್ಲೂ ವಿಕ್ಷಿಪ್ತ ವೀರಪ್ಪನ್ ಕತೆಯಲ್ಲಿ ರೋಚಕತೆಯೇ ಪ್ರಧಾನವಾಗಿರುವಾಗ ಸೋಲುವುದುಂಟೆ?

ಲೇಖಕ, ಪತ್ರಕರ್ತ