ಬೀದರ್ | ರಾಜ್ಯದ ಅತಿ ಎತ್ತರದ ವ್ಯಕ್ತಿಗೆ ಬೇಕಿದೆ ಸಹಾಯಹಸ್ತ

Date:

ರಾಜ್ಯದ ಅತಿ ಎತ್ತರದ ವ್ಯಕ್ತಿ ಎಂದೇ ಗುರುತಿಸಿಕೊಂಡ ಬೀದರ್ ಜಿಲ್ಲೆಯ ಮಾರುತಿ ಕೋಳಿ ಅವರಿಗೆ ಎತ್ತರವೇ ಭಾರವಾಗಿ ಪರಿಣಮಿಸಿದೆ. ಅನಾರೋಗ್ಯದಿಂದ ಬಳಲುತ್ತಾ ಸಂಕಷ್ಟದ ದಿನಗಳು ದೂಡುತ್ತಿದ್ದಾರೆ.

ಬೀದರ್ ಜಿಲ್ಲೆ ಔರಾದ ತಾಲೂಕಿನ ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಚಿಂತಾಕಿ ಗ್ರಾಮದ ಮಾರುತಿ ಹಣಮಂತ ಕೋಳಿ ಅವರು ರಾಜ್ಯದ ಎತ್ತರದ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಅವರ ವಯಸ್ಸು 40 ವರ್ಷ. ಅವರು ಬರೋಬ್ಬರಿ 7.5 ಅಡಿ ಎತ್ತರದ ದೇಹ ಹೊಂದಿದ್ದಾರೆ. ಎರಡ್ಮೂರು ವರ್ಷಗಳಿಂದ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ನಿಶ್ಯಕ್ತಿಯಿಂದಾಗಿ ಕೆಲಸ ಮಾಡುವುದಿರಲಿ, ಓಡಾಡಲು ಆಗದ ಪರಿಸ್ಥಿತಿಯಲ್ಲಿರುವ ಮಾರುತಿ ಅವರಿಗೆ ‘ತನ್ನ ದೇಹವೇ ತನಗೆ ಭಾರವಾಗಿ’ ಮುಂದಿನ ಬದುಕು ಹೇಗಪ್ಪಾ ಎಂಬ ಚಿಂತೆ ಕಾಡಲಾರಂಭಿಸಿದೆ.

ಮೂವರು ಸಹೋದರರಲ್ಲಿ ಮಾರುತಿ ಹಿರಿಯರು. ಚಿಕ್ಕವರಿರುವಾಗಲೇ ತಂದೆಯನ್ನು ಕಳೆದುಕೊಂಡ ಸಹೋದರರು ತಾಯಿಯ ಪೋಷಣೆಯಲ್ಲಿ ಬೆಳೆದರು. ಮೊದಲೇ ಬಡತನ, ಕೂಲಿ ಮಾಡಿ ಬದುಕು ಸಾಗಿಸುವ ತಾಯಿ, ಕಡು ಬಡತನದಿಂದಾಗಿ ಯಾರಿಗೂ ಶಿಕ್ಷಣ ಕೊಡಿಸಲಿಲ್ಲ. ಇಬ್ಬರು ಸಹೋದರರು ಸಹಜವಾಗಿ ಬೆಳೆದು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಆದರೆ, ಮಾರುತಿ 15 ವರ್ಷ ವಯಸ್ಸಿನವರಿದ್ದಾಗ ಅವರ ದೇಹ ಇದ್ದಕ್ಕಿಂದ್ದಂತೆ ಎತ್ತರಕ್ಕೆ ಬೆಳೆಯಲಾರಂಭಿಸಿತು. ಮೂವತ್ತು ವರ್ಷ ತುಂಬುವ ವೇಳೆಗೆ ಅವರು ತುಂಬಾ ಎತ್ತರಕ್ಕೆ ಬೆಳೆದರು. ಮಾತ್ರವಲ್ಲದೆ, ಮಿತಿ ಮೀರಿ ಬೆಳೆದ ಎತ್ತರ ಬದುಕಿಗೆ ಭಾರವಾಗಿ ಪರಿಣಮಿಸಿತು.

ಬೆಳಕಿಗೆ ಬಾರದ ಗಡಿನಾಡಿನ ವಿಶಿಷ್ಟ ವ್ಯಕ್ತಿತ್ವ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತನ್ನ ‘ಎತ್ತರವೇ’ ವರವಾಗಿ ಮಾಡಿಕೊಂಡಿದ್ದರೆ ಮಾರುತಿ ಅವರು ಜಗತ್ತಿನಲ್ಲಿ ಜನಪ್ರಿಯ ವ್ಯಕ್ತಿಯಾಗಿ ಬೆಳೆಯಬಹುದಿತ್ತೇನೊ. ಆದರೆ, ಬೆನ್ನತ್ತಿದ್ದ ಬಡತನ, ಕಣ್ಣ ಮುಂದಿನ ಅನಾರೋಗ್ಯದ ತೊಳಲಾಟದಲ್ಲಿ ಮಾರುತಿ ಬದುಕು ಮಂಕಾಯಿತು. ಅತ್ತ ತೆಲಂಗಾಣ, ಇತ್ತ ಮಹಾರಾಷ್ಟ್ರದ ನಟ್ಟ ನಡುವಿನ ಕನ್ನಡ-ತೆಲುಗು ಭಾಷಿಕರ ಊರಿನಿಂದ ಹೊರ ಬಾರಲಾಗದೆ ಗಡಿನಾಡಿನ ವಿಶಿಷ್ಟ ವ್ಯಕ್ತಿತ್ವ ಅವಕಾಶ ವಂಚಿತರಾದರು.

ನಿಶ್ಯಕ್ತಿಯಿಂದ ಹಾಸಿಗೆ ಹಿಡಿದ ಮಾರುತಿ

ಮಾರುತಿ ಅವರ ದೇಹ ಬೆಳೆದಂತೆ ಸಂಸಾರದ ಸಮಸ್ಯೆಗಳು ಬೆಳೆದವು. ತಂದೆಯಿಲ್ಲದ ಅವರಿಗೆ ತಾಯಿಯೇ ಆಸರೆ. ಆದರೆ, ಕೆಲಸದ ಸಮಯದಲ್ಲಿ ತಾಯಿಯ ಒಂದು ಕೈ ಮುರಿದ ಪರಿಣಾಮ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಇಂಥ ಸಂಕಷ್ಟದ ದಿನಗಳಲ್ಲಿ ಆಡು-ಕುರಿ-ದನ ಮೇಯಿಸುವುದು, ಒಕ್ಕಲುತನ, ಕೂಲಿ ಕೆಲಸ ಸೇರಿದಂತೆ ಎಲ್ಲ ರೀತಿಯ ಕೆಲಸ ಮಾಡಿದ್ದಾರೆ. ನಂತರದ ದಿನಗಳಲ್ಲಿ ದೇಹದ ಎತ್ತರ ಇನ್ನಷ್ಟು ಹೆಚ್ಚಾದಂತೆ ಅನಾರೋಗ್ಯ ಸಮಸ್ಯೆ ಎದುರಾಗಿ ನಿಶ್ಯಕ್ತಿ ಉಂಟಾಗಿ ಯಾವುದೇ ಕೆಲಸ ಮಾಡಲು ಸಾಧ್ಯವಾಗದಾಗಿದೆ. “ಕೆಲವು ವರ್ಷಗಳ ಕಾಲ ಕಿರಾಣಿ ಅಂಗಡಿ ನಡೆಸಿದ್ದೇನೆ. ಇದೀಗ ಕಳೆದ ಎರಡ್ಮೂರು ವರ್ಷಗಳಿಂದ ಯಾವ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ವಿಪರೀತ ಕಾಲು ಬೇನೆಯಿಂದ ನಡೆಯಲು ಆಗುತ್ತಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ ಮಾರುತಿ.

“ಒಬ್ಬ ಸಹೋದರ ನಮ್ಮೊಂದಿಗೆ ಇರ್ತಾನೆ. ಆದರೆ, ಅವನು ಪಾರ್ಶ್ವವಾಯು ಪೀಡಿತನಾಗಿ ಮನೆಯಲ್ಲಿ ಇದ್ದಾನೆ. ಇಡೀ ಸಂಸಾರದ ಜವಾಬ್ದಾರಿ ತಾಯಿ ಒಬ್ಬಳೇ ನಿಭಾಯಿಸುತ್ತಾಳೆ. 30-35 ವರ್ಷದ ತನಕ ಚೆನ್ನಾಗಿಯೇ ಇದ್ದೆ. ಮದುವೆ ಆಗಲು ನನ್ನಂಥ ಎತ್ತರದ ವ್ಯಕ್ತಿಗೆ ಯಾರು ಹುಡುಗಿ ಕೊಡ್ತಾರೆ. ಇಂಥ ಕಡು ಬಡತನದಲ್ಲಿ ಜೀವನ ದೂಡುವ ನಮಗೆ ಮದುವೆಯಾಗಿ ಅವಳಿಗೆ ಹೇಗೆ ಸಾಕುವುದು ಎಂದು ಮದುವೆ ಯೋಚನೆಯೇ ಮಾಡಲಿಲ್ಲ” ಎಂದು ಹೇಳುತ್ತಾರೆ.

ಈ ಸುದ್ದಿ ಓದಿದ್ದೀರಾ?: ಸಾಮಾಜಿಕ ಕಾರ್ಯಕರ್ತ ಅರುಣ್ ಫೆರೈರಾ ಅವರ ಜೈಲಿನ ಅನುಭವ ಕಥನ: ಪಂಜರದ ಬಣ್ಣಗಳು

“ಅತಿ ಎತ್ತರದ ದೇಹದಿಂದ ಗುರುತಿಸಿಕೊಂಡ ಮಾರುತಿ, ಜಿಲ್ಲೆ ಅಲ್ಲದೆ ರಾಜ್ಯದ ನಾನಾ ಭಾಗಗಳಲ್ಲಿ ಜರುಗಿದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹೊರಗಡೆ ಹೋದರೆ ಸಾಕು ಜನ ಪೋಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಈಗಲೂ ಬಹುತೇಕ ಕಡೆ ಕಾರ್ಯಕ್ರಮಗಳಿಗೆ ಬರಲು ಕರೆಯುತ್ತಾರೆ. ಆದರೆ, ನನಗೊಬ್ಬನಿಗೆ ಎಲ್ಲಿಯೂ ಹೋಗಲು ಆಗುತ್ತಿಲ್ಲ. ದ್ವಿಚಕ್ರ ವಾಹನ ಮೇಲೆ ಕುಳಿತುಕೊಳ್ಳಲು ಆಗಲ್ಲ, ಬಸ್ – ಕಾರಿನಲ್ಲಿ ಕುಳಿತುಕೊಳ್ಳುವುದು ತೀರಾ ಕಷ್ಟಕರ. ಹೀಗಾಗಿ ಯಾರೇ ಕರೆದರೂ ಹೋಗುತ್ತಿಲ್ಲ. ತಾಲೂಕು ಆಸ್ಪತ್ರೆಗೆ ಹೋಗುವುದೇ ದೊಡ್ಡ ಸಾಹಸವಾಗಿದೆ” ಎಂದು ಮಾರುತಿ ಹೇಳುತ್ತಾರೆ.

ಆಸ್ಪತ್ರೆ ವೆಚ್ಚಕ್ಕೆ ಸಹಾಯಹಸ್ತ

ಮಾರುತಿ ಅವರಿಗೆ ಮಾಸಿಕ 1,400 ರೂ. ವಿಶೇಷಚೇತನ ಮಾಸಾಶನ ಬರುತ್ತೆ. ಕಾಲು ಬೇನೆ ಸೇರಿದಂತೆ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಮಾರುತಿಗೆ ತಿಂಗಳಿಗೆ ಕನಿಷ್ಠ 2 ಸಾವಿರ ರೂಪಾಯಿ ವೈದ್ಯಕೀಯ ಚಿಕಿತ್ಸೆಗೆ ಖರ್ಚಾಗುತ್ತಿದೆ. ಕೆಲಸ ಮಾಡಲು ಸಾಧ್ಯವಾಗದೇ ಮನೆಯಲ್ಲಿರುವ ಮಾರುತಿಗೆ ಮಾಸಾಶನ ಹಣದಿಂದ ಖರ್ಚು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. “ಸರ್ಕಾರ ಅಥವಾ ಯಾರಾದರೂ ದಾನಿಗಳು ಸಹಾಯಹಸ್ತ ಚಾಚಿದರೆ ಹೆಚ್ಚಿನ ಚಿಕಿತ್ಸೆ ಪಡೆದು ಗುಣಮುಖನಾಗುತ್ತೇನೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಓಡಾಡಲು ತ್ರಿಚಕ್ರ ವಾಹನ ಮತ್ತು ಸಾಲ ಸೌಲಭ್ಯ ಒದಗಿಸಿದರೆ ಸ್ವಉದ್ಯೋಗದಿಂದ ಸ್ವಾವಲಂಬನೆ ಜೀವನ ನಡೆಸಲು ಸಾಧ್ಯವಾಗುತ್ತದೆ” ಎಂದು ಮಾರುತಿ ಈದಿನ.ಕಾಮ್ ಜೊತೆ ಹೇಳಿಕೊಂಡಿದ್ದಾರೆ.

ಗ್ರಾಮ ಪಂಚಾಯತಿಯಿಂದ ಮಾಸಿಕ ಸಾವಿರ ರೂಪಾಯಿ ನೀಡುವ ಭರವಸೆ

ಮಾರುತಿ ಕೋಳಿ ಅವರಿಗೆ ಹಿಂದಿನ ಗ್ರಾಮ ಪಂಚಾಯತಿ ಪಿಡಿಒ ಶಿವಾನಂದ ಔರಾದೆ ಅವರ ಇಚ್ಛಾಶಕ್ತಿಯಿಂದ ಮಾಸಿಕ 1,000 ರೂ. ಸಹಾಯಧನವಾಗಿ ನೀಡುತ್ತಿದ್ದರು. ಒಂದು ವರ್ಷದ ನಂತರ ಅದನ್ನು ನಿಲ್ಲಿಸಿದರು. ಹೀಗಾಗಿ, ಬೇರೇನೂ ನೆರವು ಸಿಗುತ್ತಿಲ್ಲ. ಪಂಚಾಯತಿ ಆಡಳಿತದಿಂದ ಏನಾದರೂ ಸಹಕಾರ ನೀಡಿದರೆ ವೈದ್ಯಕೀಯ ಖರ್ಚಿಗೆ ಅನುಕೂಲ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಮಾರುತಿ.

ಈ ಬಗ್ಗೆ ಚಿಂತಾಕಿ ಗ್ರಾಮ ಪಂಚಾಯತ್ ಪಿಡಿಒ ಶರಣಪ್ಪ ನಾಗಲಗಿದ್ದಿ ಈದಿನ.ಕಾಮ್ ಜೊತೆ ಮಾತನಾಡಿ, “ಮಾರುತಿ ಕೋಳಿ ಅವರ ಅನಾರೋಗ್ಯ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ನಾಳೆ ಗ್ರಾಮ ಪಂಚಾಯತ್ ಸದಸ್ಯರ ‌ಸಭೆಯಿದೆ. ಎಲ್ಲರೊಂದಿಗೆ ಚರ್ಚಿಸಿ ಸಹಾಯಧನ ನೀಡಲು ಪ್ರಯತ್ನಿಸುತ್ತೇನೆ” ಎಂದು ಹೇಳಿದರು.

ಪಂಚಾಯತ್ ಅಧ್ಯಕ್ಷ ರಾಮರೆಡ್ಡಿ ಈದಿನ.ಕಾಮ್ ದೊಂದಿಗೆ ಮಾತನಾಡಿ, “ರಾಜ್ಯದ ಅತಿ ಎತ್ತರದ ವ್ಯಕ್ತಿ ಮಾರುತಿ ಅವರು ನಮ್ಮೂರಿನ ಹೆಮ್ಮೆಯೂ ಹೌದು, ನಾಳೆ ಪಂಚಾಯತ್ ಸದಸ್ಯರ ಸಭೆಯಿದೆ. ಸಭೆಯಲ್ಲಿ ಚರ್ಚಿಸಿ ಸಹಾಯಧನ ನೀಡಲು ಪ್ರಯತ್ನ ಮಾಡಲಾಗುವುದು” ಎಂದು ಹೇಳಿದರು.‌

ನೀವು ಮಾರುತಿ ಅವರಿಗೆ ಸಹಾಯ ಮಾಡಬೇಕೆಂದು ಬಯಸಿದ್ದರೆ, ಮಾರುತಿ ಅವರ ವಿವರ ಹೀಗಿದೆ: 
Name : Maruti Hanumanthu
Account number: 62086366282
SBI Chintaki
IFSC CODE: SBIN0020645

Phone Pay : Prakash (Maruti Brother) : 9611441867

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಶಾಸಕ ಗಣೇಶ್ ಪ್ರಸಾದ್ ಅಧ್ಯಕ್ಷ್ಯತೆಯಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆ

ಶಾಸಕ ಎಚ್ ಎಂ ಗಣೇಶ್ ಪ್ರಸಾದ್ ಅವರ ಅಧ್ಯಕ್ಷ್ಯತೆಯಲ್ಲಿ ಗುಂಡ್ಲುಪೇಟೆ ಪಟ್ಟಣದ...

ಬಂಟ್ವಾಳ | ಸುಜೀರು ಶಾಲೆಯ ಮುಖ್ಯೋಪಾಧ್ಯಾಯಿನಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಬಂಟ್ವಾಳ ತಾಲೂಕಿನ ಸುಜೀರು ಶಾಲೆಯಲ್ಲಿ ಕಳೆದ 16 ವರ್ಷಗಳಿಂದ ಮುಖ್ಯೋಪಾಧ್ಯಾಯಿನಿಯಾಗಿ ಕರ್ತವ್ಯ...

ಗದಗ | ಜಿಲ್ಲೆಯ 100 ಗ್ರಾಮಗಳನ್ನು ವ್ಯಾಜ್ಯ ಮುಕ್ತವಾಗಿಸಲು ಪಣ: ಸಚಿವ ಎಚ್ ಕೆ ಪಾಟೀಲ್

ಗದಗ ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 100 ಗ್ರಾಮಗಳನ್ನು ವ್ಯಾಜ್ಯ ಮುಕ್ತವಾಗಿಸಲು ಸಿದ್ಧತೆ...

ಚಿಕ್ಕಬಳ್ಳಾಪುರದಲ್ಲಿ ಡೆಂಘೀ ಜ್ವರಕ್ಕೆ ಮೊದಲ ಬಲಿ

ರಾಜ್ಯಾದ್ಯಂತ ಡೆಂಘೀ ಅಟ್ಟಹಾಸ ಮೆರೆಯುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು...