ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ನಿಷೇಧಿಸಿದೆ. ಹೀಗಾಗಿ ಪಿಒಪಿ ವಿಗ್ರಹಗಳ ವಿಸರ್ಜನೆಯಿಂದ ಜಲ ಮೂಲ ಮಲಿನ ಮಾಡಬೇಡಿ, ಭರದ ಛಾಯೆ ಇರುವ ಕಾರಣ ನೀರಿನ ಬಗ್ಗೆ ಎಚ್ಚರವಿರಲಿ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಸಾರ್ವಜನಿಕ ಗಣೇಶೋತ್ಸವದ ನಿಮಿತ್ಯ ಅವಳಿ ನಗರ ಹಾಗೂ ಜಿಲ್ಲೆಯಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸುವ ತಯಾರಕರ, ಮಾರಾಟಗಾರರ, ಪರಿಸರವಾದಿಗಳ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
“ಗಣೇಶ ಚತುರ್ಥಿಯಂದು ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಸ್ಥಾಪನೆಗೆ ಸರ್ಕಾರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಪಿಒಪಿ ಗಣಪತಿ ಮೂರ್ತಿಗಳ ಸ್ಥಾಪನೆಗೆ ಸರ್ಕಾರ 2016ರಲ್ಲಿ ನಿರ್ಬಂಧಿಸಿ ಆದೇಶಿಸಿದೆ. ಆದೇಶ ಉಲ್ಲಂಘಿಸಿ ಪಿಒಪಿ ಗಣಪತಿ ಸ್ಥಾಪಿಸಿದರೆ ಮತ್ತು ಜಲಮೂಲಗಳಲ್ಲಿ ವಿಸರ್ಜಿಸಿದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ₹10,000 ದಂಡ ಮತ್ತು ಜೈಲುವಾಸ ವಿಧಿಸಬಹುದಾಗಿದೆ” ಎಂದು ತಿಳಿಸಿದರು.
“ಅವಳಿ ನಗರ ಹಾಗೂ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಪಿಒಪಿ ಗಣೇಶ ವಿಗ್ರಹಗಳ ದಾಸ್ತಾನು, ಮಾರಾಟ ಕಂಡುಬಂದರೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಹಾಯವಾಣಿ ಹಾಗೂ ಮಹಾನಗರ ಪಾಲಿಕೆ ಸಹಾಯವಾಣಿಗೆ ಕರೆಮಾಡಿ ಮಾಹಿತಿ ನೀಡಬಹುದು. ಅಧಿಕಾರಿಗಳ ತಂಡ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತದೆ. ದಾಸ್ತಾನು ಹೊಂದಿರುವ ಪಿಒಪಿ ವಿಗ್ರಹಗಳನ್ನು ಜಪ್ತಿ ಮಾಡಿ, ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹಗಳನ್ನು ಸ್ಥಾಪಿಸಿ ಹಬ್ಬ ಆಚರಿಸಬೇಕು” ಎಂದು ಜಿಲ್ಲಾಧಿಕಾರಿ ಹೇಳಿದರು.
“ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಗಣೇಶ ವಿಗ್ರಹಗಳ ಸಾಗಾಟ ಹಾಗೂ ಮಾರಾಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಪಿಒಪಿ ಗಣೇಶ ವಿಗ್ರಹಗಳು ಜಿಲ್ಲೆಗೆ ಬರದಂತೆ ತಡೆಯಲು ಪೊಲೀಸ್ ಚೆಕ್ ಪೋಸ್ಟ್ಗಳಲ್ಲಿ ನಿರಂತರ ನಿಗಾವಹಿಸಬೇಕು” ಎಂದು ತಿಳಿಸಿದರು.
ಗಣೇಶ ವಿಗ್ರಹಗಳ ಸ್ಥಾಪನೆ ಮತ್ತು ವಿಸರ್ಜನೆ ಸಂದರ್ಭದಲ್ಲಿ ವಾಹನಗಳನ್ನು ಪರಿವರ್ತನೆ ಮಾಡದಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿಗಾವಹಿಸಬೇಕು. ಅನುಮತಿ ಇಲ್ಲದೆ ವಾಹನ ಪರಿವರ್ತನೆ ಮಾಡಿದರೆ ಕಾನೂನು ಕ್ರಮ ಕೈಗೊಂಡು ವಾಹನ ಜಪ್ತಿ ಮಾಡಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹ ಸ್ಥಾಪನೆಗೆ ಸಮಿತಿಯವರು ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಮತ್ತು ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಸಮಿತಿ ಮೇಲೆ ಇರುತ್ತದೆ. ರಾಸಾಯನಿಕ ಬಣ್ಣ ಬಳಕೆ ಮಾಡಿದ ವಿಗ್ರಹಗಳನ್ನು ಬಳಸಬಾರದು ಮತ್ತು ನಿಗದಿತ ಸ್ಥಳ ಹೊರತುಪಡಿಸಿ ಇತರ ಜಲಮೂಲಗಳಲ್ಲಿ ವಿಗ್ರಹಗಳನ್ನು ವಿಸರ್ಜಿಸಬಾರದು” ಎಂದು ಹೇಳಿದರು.
“ಜನ, ದನ, ಪ್ರಾಣಿ, ಪಕ್ಷಿಗಳು ಕುಡಿಯುವ ನೀರು ಮತ್ತು ನೀರಿನ ಮೂಲಗಳು ಮಲಿನವಾಗದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ನಾಡಿನಾದ್ಯಾಂತ ಬರದ ಛಾಯೆ ಕಾಣುತ್ತಿರುವದರಿಂದ ಮತ್ತು ನೀರು ಅತ್ಯಮೂಲ್ಯವಾಗಿರುವುದರಿಂದ ಪ್ರತಿಯೊಬ್ಬರೂ ಈ ಕುರಿತು ಕಾಳಜಿ ವಹಿಸುವುದು ಮುಖ್ಯವಾಗಿದೆ” ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಸ್ಥಾಪನೆಗೆ ಶೀಘ್ರವಾಗಿ ಅನುಮತಿ ಪಡೆಯಲು ಮಹಾನಗರ ಪಾಲಿಕೆ ಹಾಗೂ ನಗರ ಪ್ರದೇಶಗಳಲ್ಲಿ ಏಕಗವಾಕ್ಷಿ (ಸಿಂಗಲ್ ವಿಂಡೋ) ಮೂಲಕ ವ್ಯವಸ್ಥೆ ಕಲ್ಪಿಸಲಾಗುವುದು. ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಗಣೇಶ ವಿಸರ್ಜನೆಯ ಸ್ಥಳಗಳನ್ನು ಗುರುತಿಸಿ, ಮುಂಚಿತವಾಗಿಯೇ ನೊಟಿಪಿಕೇಶನ್ ಮಾಡಬೇಕು. ಗಣೇಶ ವಿಸರ್ಜನೆಯ ದಿನಗಳಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಹಾನಗರ ಪಾಲಿಕೆಯು ಸಾರ್ವಜನಿಕರಿಗೆ ಮೊಬೈಲ್ ಟ್ಯಾಂಕರ್ಗಳ ಸೌಲಭ್ಯ ಕಲ್ಪಿಸಬೇಕು. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ ಮೊಬೈಲ್ ಟ್ಯಾಂಕರ್ ಸಂಚರಿಸುವ ಮಾರ್ಗ, ಸ್ಥಳ ಮತ್ತು ಸಮಯವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಬೇಕು” ಎಂದು ಹೇಳಿದರು.
“ಗಣೇಶೋತ್ಸವದಲ್ಲಿ ಪ್ಲಾಸ್ಟಿಕ್ನಿಂದ ತಯಾರಿಸಿದ ಫ್ಲೆಕ್ಸ್ ಹಾಗೂ ಬ್ಯಾನರ್ಗಳ ಬಳಕೆ ನಿಷೇಧಿಸಲಾಗಿದೆ. ಬಟ್ಟೆ ಬ್ಯಾನರ್ಗಳನ್ನು ಮಾತ್ರ ಬಳಸಬೇಕು. ಸರ್ಕಾರವು ಜುಲೈ 1, 2022 ರಿಂದಲೇ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಿ ಆದೇಶಿಸಿದೆ. ಸಮಿತಿ ಹಾಗೂ ಸಾರ್ವಜನಿಕರು ಬಟ್ಟೆ ಬ್ಯಾನರ್ಗಳನ್ನು ಮಾತ್ರ ಬಳಸಬೇಕು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ತೊಗರಿ ಬೆಲೆ ಹೆಚ್ಚಾದರೆ ರೈತರಿಗೇನು ಲಾಭ?; ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಅಸಮಾಧಾನ
“ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಮಟ್ಟದಲ್ಲಿ ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿ ಆಗಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೊಂದಿಗೆ ಸಭೆ ಜರುಗಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಮನವರಿಕೆ ಮಾಡಿ, ಶಾಂತಿ ಸುವ್ಯವಸ್ಥೆಯಿಂದ ಗಣೇಶೋತ್ಸವ ಆಚರಿಸುವಂತೆ ಕ್ರಮ ಕೈಗೊಳ್ಳಬೇಕು” ಎಂದು ಸೂಚಿಸಿದರು.
ಪಿಒಪಿ ಗಣೇಶ ವಿಗ್ರಹಗಳ ಬಗ್ಗೆ ಮಾಹಿತಿ ನೀಡಲು ಸಹಾಯವಾಣಿ:
“ಜಿಲ್ಲೆಯ ಯಾವುದೇ ಸ್ಥಳಗಳಲ್ಲಿ ಪಿಒಪಿ ಗಣೇಶ ವಿಗ್ರಹಗಳ ಸಾಗಾಣಿಕೆ, ಸಂಗ್ರಹ, ದಾಸ್ತಾನು, ಮಾರಾಟ ಕಂಡುಬಂದರೆ ಸಾರ್ವಜನಿಕರು ಕರೆ ಮಾಡಿ, ಮಾಹಿತಿ ನೀಡಬಹುದು ಮತ್ತು ವಾಟ್ಸ್ಯಾಪ್ ಮೂಲಕ ಫೋಟೋ, ಲೊಕೇಶನ್, ಸ್ಥಳದ ವಿವಿರಗಳನ್ನು ಕಳುಹಿಸಬಹುದು. ಮಾಹಿತಿ ನೀಡುವವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು” ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಾರ್ವಜನಿಕರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹುಬ್ಬಳ್ಳಿ ಅಧಿಕಾರಿ ಸೋಮಶೇಖರಗೌಡ ಅವರ ಸಂಪರ್ಕಕ್ಕೆ ಮೊ.ಸಂ 9880627265, ಧಾರವಾಡದ ಅಧಿಕಾರಿ ದಿನೇಶ ನಾಯಕ ಅವರ ಸಂಪರ್ಕ ಸಂ. 8197601891ಗೆ ಕರೆ ಮಾಡಬಹುದು ಮತ್ತು ಪೊಲೀಸ್ ಕಂಟ್ರೋಲ್ ರೂಮ್ 0836-2233555 ಮಹಾನಗರ ಪಾಲಿಕೆಯ ಸಹಾಯವಾಣಿ 0836-2213898, 2213888 ಗೆ ಕರೆ ಮಾಡಿ, ಮಾಹಿತಿ ನೀಡಬಹುದೆಂದು ತಿಳಿಸಿದರು.