ಹುಬ್ಬಳ್ಳಿಯ ಬೈರಿದೇವರಕೊಪ್ಪ ಹಾಗೂ ಸುತ್ತಮುತ್ತಲಿನ ನಿವಾಸಿಗಳು ತುಂಬಾ ದಿನಗಳಿಂದ ಸ್ಮಶಾನದ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿನ ವಾರ್ಡ್ ನಂಬರ್ 35ರ ನಿವಾಸಿಗಳು ಹಲವು ವರ್ಷಗಳಿಂದ ರೈತರೊಬ್ಬರ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಇಷ್ಟು ವರ್ಷಗಳಾದರೂ ಸ್ಮಶಾನ ಭೂಮಿ ನೀಡಲು ಸಾಧ್ಯವಾಗಿಲ್ಲ.
ಸ್ಮಶಾನವಿಲ್ಲದೆ ಇಲ್ಲಿನ ಜನರಿಗೆ ತುಂಬಾ ತೊಂದರೆಯಾಗಿದ್ದು, ಮಳೆಗಾಲದಲ್ಲಿ ಈ ಸಮಸ್ಯೆ ಇನ್ನು ಉಲ್ಬಣವಾಗುತ್ತಿದೆ. ಗ್ರಾಮದಲ್ಲಿ ಸ್ಮಶಾನ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಎಷೇ ಒತ್ತಾಯಿಸಿದರೂ ಈವರೆಗೂ ಅವರ ಬೇಡಿಕೆ ಇಡೇರಿಲ್ಲ.
ಬೈರಿದೇವರಕೊಪ್ಪ ಮುಖ್ಯನಗರದಿಂದ 10 ಕಿಮೀ ನಷ್ಟು ದೂರವಿದೆ. ಕಳೆದ 40 ವರ್ಷಗಳಿಂದ ಈ ಜನರು ಇಲ್ಲಿ ವಾಸಮಾಡುತ್ತಿದ್ದಾರೆ. ಸುಮಾರು 20 ಸಾವಿರ ಕುಟುಂಬಗಳು ಇಲ್ಲಿ ವಾಸವಾಗಿವೆ.
ಇಲ್ಲಿನ ನಿವಾಸಿಗಳು ತಮ್ಮ ಜಾತಿ ಮತ್ತು ಧರ್ಮದ ವಿಧಿವಿಧಾನದ ಪ್ರಕಾರ ಶವಗಳನ್ನು ಹೂಳಲು ಮತ್ತು ಸುಡಲು ಯಾವುದೇ ಸೂಕ್ತ ಸೌಕರ್ಯವಿಲ್ಲ. ಸ್ಥಳದಲ್ಲಿ ಜನರಿಗೆ ಯಾವುದೇ ಆಶ್ರಯ, ಕುಡಿಯುವ ನೀರು ಹಾಗೂ ಹೆಚ್ಚಿನ ಜನ ಸೇರಲು ಜಾಗವಿಲ್ಲದೆ ಖಾಸಗಿ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಸ್ಮಶಾನಕ್ಕಾಗಿ ಭೂಮಿ ಮಂಜೂರು ಮಾಡಿ ಎಂದು ಇಲ್ಲಿನ ನಿವಾಸಿಗಳು ಜಿಲ್ಲಾಡಳಿತ ಮತ್ತು ಎಚ್‌ಡಿಎಂಸಿ ಅಧಿಕಾರಿಗಳಿಗೆ ಕೆಳಿಕೊಂಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಯಾವೊಬ್ಬ ಅಧಿಕಾರಿಯೂ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಗ್ರಾಮ ಲೆಕ್ಕಿಗರೂ ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಮಶಾನವಾಗಿಸಲು ಗ್ರಾಮದಲ್ಲಿ ಯಾವುದೇ ಸರ್ಕಾರಿ ಭೂಮಿ ಇಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನಮ್ಮ ಗ್ರಾಮದ ರೈತರು ಎಪಿಎಂಸಿಗೆ ತಮ್ಮ ಜಮೀನು ನೀಡಿದ್ದಾರೆ. ಆದರೆ, ಸ್ಮಶಾನಕ್ಕೆ ಭೂಮಿ ಇಲ್ಲ. ಗ್ರಾಮದ ಹತ್ತಿರ ಒಂದು ಕೆರೆಯಿದೆ. ಆ ಕೆರೆಯ ಸ್ಥಿತಿ ತುಂಬಾ ಕೆಟ್ಟಿದ್ದು ಆ ಜಾಗವನ್ನು ಸ್ಮಶಾನವನ್ನಾಗಿ ಪರಿವರ್ತಿಸಬಹುದು ಎಂದು ಗ್ರಾಮಸ್ಥರು ಸಲಹೆ ನೀಡುತ್ತಾರೆ.
ಕಾರ್ಪೊರೇಟರ್ ಮಲ್ಲಿಕಾರ್ಜುನ ಗುಂಡೂರು ಪತ್ರಿಕೆಗಳಿಗೆ ಮಾತನಾಡಿ, “ಸ್ಮಶಾನಕ್ಕೆ ಭೂಮಿ ಮಂಜೂರು ಮಾಡುವಂತೆ ಹುಬ್ಬಳ್ಳಿ ತಹಶೀಲ್ದಾರ್‌ಗೆ ಪತ್ರ ಬರೆದಿದ್ದೇನೆ. ಈ ಬಗ್ಗೆ ಎಚ್‌ಡಿಎಂಸಿ ಆಯುಕ್ತರೊಂದಿಗೆ ಚರ್ಚಿಸುವೆ,” ಎಂದಿರುವ ಅವರು ಸರ್ಕಾರದ ಮೇಲೆ ಒತ್ತಡ ಹೇರುವ ಭರವಸೆ ನೀಡಿದ್ದಾರೆ.
ಅಧಿಕಾರಿಗಳ ಭರವಸೆಗಳ ಮೇಲೆ 40 ವರ್ಷಗಳನ್ನು ದೂಡಿರುವ ಈ ಗ್ರಾಮಸ್ಥರ ಸಮಸ್ಯೆ ಇನ್ನಾದರೂ ಬಗೆಹರಿಯಲಿದೆಯೇ ಕಾದುನೋಡಬೇಕು.