ತೆಲಂಗಾಣ ರಾಜ್ಯದ ಹಿಂದಿನ ಎರಡು ಚುನಾವಣೆಗಳಲ್ಲಿ ಕೆಸಿಆರ್ ಓಟಕ್ಕೆ ತಡೆಯೇ ಇಲ್ಲ ಎನ್ನುವಂತಿದ್ದ ಪರಿಸ್ಥಿತಿ ಈಗ ಬದಲಾಗಿದೆ. ಕಾಂಗ್ರೆಸ್ ಬಲ ಹೆಚ್ಚಿಸಿಕೊಂಡು ಗದ್ದುಗೆ ಏರಿಯೇ ಸಿದ್ಧ ಎಂದು ನುಗ್ಗುತ್ತಿದೆ. ಮೋದಿ ಪದೇ ಪದೆ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದು, ದಕ್ಷಿಣದ ಎರಡನೇ ರಾಜ್ಯದಲ್ಲಿ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಮೋದಿ ಎಷ್ಟು ಬಾರಿ ಪ್ರವಾಸ ಮಾಡಿದರೂ ತೆಲಂಗಾಣದಲ್ಲಿ ಈ ಬಾರಿಯೂ ಬಿಜೆಪಿ ಎರಡಂಕಿ ತಲುಪುವುದು ಕಷ್ಟ.
2009, ಡಿಸೆಂಬರ್ 10. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಉಪವಾಸ ಸತ್ಯಾಗ್ರಹ ಆರಂಭಿಸಿ ಹನ್ನೊಂದು ದಿನಗಳಾಗಿತ್ತು. ಅವರ ಆರೋಗ್ಯ ಸ್ಥಿತಿ ವಿಷಮವಾಗತೊಡಗಿತ್ತು. ಅವರ ಹೋರಾಟಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ, ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒಪ್ಪಿಕೊಂಡಿರುವುದಾಗಿ ಆಗಿನ ಗೃಹ ಸಚಿವರಾಗಿದ್ದ ಪಿ ಚಿದಂಬರಂ ಘೋಷಿಸಿದ್ದರು. ಕೆಸಿಆರ್ ಸಂಭ್ರಮದಿಂದ ತಮ್ಮ ಉಪವಾಸ ಅಂತ್ಯಗೊಳಿಸಿದ್ದರು. ಅಧಿಕೃತವಾಗಿ ಜೂನ್ 2, 2014ರಂದು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಹೊರಹೊಮ್ಮಿತು. ಅಂದಿನಿಂದಲೂ ತೆಲಂಗಾಣ ಪ್ರತ್ಯೇಕ ರಾಜ್ಯದ ಕ್ರೆಡಿಟ್ ಪಡೆಯಲು ಕೆಸಿಆರ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ತಮ್ಮ ದೇಸಿ ಮಾತು ಮತ್ತು ನಡೆಗಳಿಂದ ಕಾಂಗ್ರೆಸ್ ಅನ್ನು ನಿರಾಯಾಸವಾಗಿ ಬದಿಗೊತ್ತಿ, ಸತತ ಹತ್ತು ವರ್ಷಗಳಿಂದ ಗದ್ದುಗೆ ಹಿಡಿದಿರುವ ಕೆಸಿಆರ್‌ಗೆ ಈ ಬಾರಿಯ ಚುನಾವಣೆ ಅಗ್ನಿಪರೀಕ್ಷೆಯಾಗಲಿದೆ.
ಐದು ರಾಜ್ಯಗಳ ಚುನಾವಣೆ ಘೋಷಣೆಯಾಗಿದೆ. ಪಂಚರಾಜ್ಯಗಳ ಪೈಕಿ ದಕ್ಷಿಣದ ತೆಲಂಗಾಣದಲ್ಲೂ ಚುನಾವಣೆ ನಡೆಯಲಿದೆ. ತೆಲಂಗಾಣದ 119 ಸ್ಥಾನಗಳಿಗಾಗಿ ಒಂದೇ ಹಂತದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದ ರೂವಾರಿಯಾಗಿದ್ದ ಭಾರತ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಕೆಸಿಆರ್ ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ಬಾರಿಸಲು ಮುಂದಾಗಿದ್ದಾರೆ. ಅವರನ್ನು ಹೇಗಾದರೂ ತಡೆದು, ಅಧಿಕಾರ ಹಿಡಿಯಲೇಬೇಕೆಂದು ಕಾಂಗ್ರೆಸ್ ಸರ್ವಶಕ್ತಿಯನ್ನೂ ಒಂದುಗೂಡಿಸಿ ಹೋರಾಟಕ್ಕೆ ಅಣಿಯಾಗಿದೆ. ಅಧಿಕಾರದ ಆಟದಲ್ಲಿ ಏರುತ್ತಾ, ಇಳಿಯುತ್ತಾ ರಾಜ್ಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಬಿಜೆಪಿ ಇವರಿಬ್ಬರ ನಡುವೆ ನಿರ್ಣಾಯಕ ಸ್ಥಾನಕ್ಕಾಗಿ ಸೆಣಸಲು ಸಜ್ಜಾಗುತ್ತಿದೆ.
ತೆಲಂಗಾಣ ಪ್ರತ್ಯೇಕ ರಾಜ್ಯವಾದಾಗಿನಿಂದಲೂ ಕಾಂಗ್ರೆಸ್, ಅದರ ಗದ್ದುಗೆಯ ಮೇಲೆ ಕಣ್ಣು ನೆಟ್ಟಿದೆ. ಈ ಬಾರಿ ಕಾಂಗ್ರೆಸ್‌ಗೆ ಅಲ್ಲಿ ಅನುಕೂಲಕರ ವಾತಾವರಣವಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೇರಿದ ನಂತರ ಪಕ್ಷದ ಆತ್ಮವಿಶ್ವಾಸ ಹೆಚ್ಚಾಗಿದ್ದು, ಅದೇ ಫಲಿತಾಂಶವನ್ನು ತೆಲಂಗಾಣದಲ್ಲೂ ಪುನರಾವರ್ತಿಸಲು ಹೊರಟಿದೆ. ಕರ್ನಾಟಕದ ಗೆಲುವಿನಲ್ಲಿ ಗ್ಯಾರಂಟಿಗಳ ಘೋಷಣೆ ಮುಖ್ಯ ಪಾತ್ರ ವಹಿಸಿತ್ತು. ಅದೇ ರೀತಿ ಕಾಂಗ್ರೆಸ್ ತೆಲಂಗಾಣದಲ್ಲೂ ಈಗಾಗಲೇ ಆರು ಗ್ಯಾರಂಟಿಗಳನ್ನು ಘೋಷಿಸಿದೆ. ಬಿಜೆಪಿ ಮತ್ತು ಬಿಆರ್‌ಎಸ್‌ನಿಂದ ಅನೇಕ ಮುಖಂಡರು ಕಾಂಗ್ರೆಸ್‌ಗೆ ನೆಗೆಯುತ್ತಿರುವುದು ಚುನಾವಣೆಯಲ್ಲಿ ಪಕ್ಷಕ್ಕೆ ಸಹಾಯಕವಾಗುವ ಸಾಧ್ಯತೆಗಳಿವೆ. ವಲಸೆಯಿಂದ ಜಿಲ್ಲಾ ಮಟ್ಟದಲ್ಲಿ ಪಕ್ಷಕ್ಕೆ ಬಲ ಬಂದಿದೆ. ಚುನಾವಣಾ ತಂತ್ರಜ್ಞ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಗಮನಾರ್ಹ ಪಾತ್ರ ವಹಿಸಿದ್ದ ಸುನಿಲ್ ಕನಗೋಲು ಅಲ್ಲಿಯೂ ಪಕ್ಷದ ಪರ ಪ್ರಚಾರ ತಂತ್ರಗಳನ್ನು ರೂಪಿಸುತ್ತಿದ್ದಾರೆ. ತೆಲಂಗಾಣದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ್ ರೆಡ್ಡಿ ತೆಲಂಗಾಣವನ್ನು ಬಿಆರ್‌ಎಸ್ ದುರಾಡಳಿತದಿಂದ ಮುಕ್ತಿಗೊಳಿಸಿ ಎಂದು ಜನರ ಬಳಿಗೆ ತೆರಳುತ್ತಿದ್ದಾರೆ. ಕೆಲವು ಸಮೀಕ್ಷೆಗಳು ಕೂಡ ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆಯಿದೆ ಎಂದು ಫಲಿತಾಂಶ ಪ್ರಕಟಿಸಿವೆ. ಆದರೆ, ಕೆಸಿಆರ್ ಅವರನ್ನು ಮಣಿಸುವುದು ಅಷ್ಟು ಸುಲಭವೇನಲ್ಲ.
2014ರ ಚುನಾವಣೆಯಲ್ಲಿ 119 ವಿಧಾನಸಭಾ ಸ್ಥಾನಗಳ ಪೈಕಿ ಬಿಆರ್‌ಎಸ್ 63 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 21, ಟಿಡಿಪಿ 15, ಎಐಎಂಐಎಂ 7, ಬಿಜೆಪಿ 5 ಸ್ಥಾನಗಳನ್ನು ಗೆದ್ದಿದ್ದವು. ಕೆಸಿಆರ್ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಅವಧಿಯಲ್ಲಿ ರೈತು ಬಂಧು, ರೈತು ಬಿಮಾ, ಕಲ್ಯಾಣ ಲಕ್ಷ್ಮಿ, ಮಿಷನ್ ಕಾಕತೀಯ, ಮಿಷನ್ ಭಗೀರಥ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದರು.
2018ರಲ್ಲಿ ಒಂಬತ್ತು ತಿಂಗಳ ಮುಂಚೆಯೇ ವಿಧಾನಸಭೆ ವಿಸರ್ಜಿಸಿದ್ದ ಕೆಸಿಆರ್, ಆಗ 88 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮತ್ತೆ ಮುಖ್ಯಮಂತ್ರಿ ಕುರ್ಚಿ ಏರಿದ್ದರು. ಕಾಂಗ್ರೆಸ್ 19, ಎಐಎಂಐಎಂ 7, ಟಿಡಿಪಿ 2, ಬಿಜೆಪಿ 1 ಸ್ಥಾನ ಗಳಿಸಿದ್ದವು. ಹಲವು ಉಪಚುನಾವಣೆಗಳ ಗೆಲುವಿನ ನಂತರ ಬಿಆರ್‌ಎಸ್ ಸಾಮರ್ಥ್ಯ 104ಕ್ಕೆ ಏರಿತ್ತು.
ಬಿಆರ್‌ಎಸ್ ಪಾಲಿಗೆ ಕೆಸಿಆರ್ ಈಗಲೂ ಜನಾಕರ್ಷಣೆಯ ಕೇಂದ್ರವಾಗಿದ್ದಾರೆ. ಜೊತೆಗೆ ತೆಲಂಗಾಣದ ಅಸ್ಮಿತೆಯ ಪ್ರಶ್ನೆಯೆತ್ತಿ, ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರುವಿಡುವುದರಲ್ಲೇ ರಾಜ್ಯದ ಕ್ಷೇಮವಿದೆ ಎಂದು ಕೆಸಿಆರ್ ಪ್ರತಿಪಾದಿಸುತ್ತಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿಆರ್‌ಎಸ್ ಜೊತೆಗೆ ನಿಂತಿದ್ದು, ಕೆಸಿಆರ್ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದಾರೆ. ಎಐಎಂಐಎಂ ಹೈದರಾಬಾದ್‌ನಲ್ಲಿ ಪ್ರಬಲವಾಗಿದೆ. ಆದರೆ, ಎರಡು ಅವಧಿಯ ಆಡಳಿತ ವಿರೋಧಿ ಅಲೆ ಬಿಆರ್‌ಎಸ್‌ಗೆ ದೊಡ್ಡ ತೊಡಕಾಗಿದೆ. ಜೊತೆಗೆ ಬಿಆರ್‌ಎಸ್‌ನಿಂದ ಹಲವರು ಪಕ್ಷಾಂತರ ಮಾಡಿದ್ದು ಕೂಡ ಕಾಂಗ್ರೆಸ್‌ಗೆ ನೆರವಾಗಲಿದೆ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ: ವಿಧಾನಸಭಾ ಚುನಾವಣೆಗಳ ಜೊತೆ ಬಿಜೆಪಿ ವಿದಾಯವನ್ನು ಘೋಷಿಸಲಾಗಿದೆ: ಮಲ್ಲಿಕಾರ್ಜುನ ಖರ್ಗೆ
ದೇಶದಲ್ಲಿ ಅತಿ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ಪರಿಸ್ಥಿತಿ ತೆಲಂಗಾಣದಲ್ಲಿ ಅಷ್ಟೇನೂ ಆಶಾದಾಯಕವಾಗಿಲ್ಲ. ಇಲ್ಲಿನ ಬಿಜೆಪಿ ಪಾಲಿಗೆ ಬಿಜೆಪಿಯೇ ಶತ್ರುವಾಗಿದ್ದು, ಪಕ್ಷವು ಆಂತರಿಕ ಕಲಹಗಳಿಂದ ಬಸವಳಿದಿದೆ. ಬಿಜೆಪಿ 2020ರ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಚುನಾವಣೆಯಲ್ಲಿ 150ರ ಪೈಕಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿತ್ತು. ಅದೇ ರೀತಿ ದುಬ್ಬಾಕ ಮತ್ತು ಹುಜೂರಬಾದ್ ಉಪಚುನಾವಣೆಗಳನ್ನೂ ಗೆದ್ದಿತ್ತು. ಆದರೆ, ಒಳಜಗಳ, ಆಂತರಿಕ ಕಚ್ಚಾಟವೇ ಅದಕ್ಕೆ ಮುಳುವಾಗುವ ಲಕ್ಷಣಗಳಿವೆ. ಮೂರು ತಿಂಗಳ ಹಿಂದೆಯಷ್ಟೇ ಬಿಜೆಪಿ ಬಂಡಿ ಸಂಜಯ್ ಕುಮಾರ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಕೇಂದ್ರ ಮಂತ್ರಿ ಕಿಶನ್ ರೆಡ್ಡಿ ಅವರನ್ನು ಆ ಸ್ಥಾನದಲ್ಲಿ ಕೂರಿಸಿದೆ. ಬಿಜೆಪಿಗೆ ಸ್ಥಳೀಯ ಮಟ್ಟದಲ್ಲಿ ಪ್ರಬಲ ನಾಯಕರ ಕೊರತೆಯಿದ್ದು, ಆ ಕಾರಣಕ್ಕೆ ಮೋದಿ, ಅಮಿತ್ ಶಾ ಅವರ ಮೇಲೆ ರಾಜ್ಯ ಘಟಕವು ಹೆಚ್ಚಾಗಿ ಅವಲಂಬಿಸಿದೆ. ಮೋದಿ ಪದೇ ಪದೆ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದು, ದಕ್ಷಿಣದ ಎರಡನೇ ರಾಜ್ಯದಲ್ಲಿ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಮೋದಿ ಎಷ್ಟು ಬಾರಿ ಪ್ರವಾಸ ಮಾಡಿದರೂ ತೆಲಂಗಾಣದಲ್ಲಿ ಈ ಬಾರಿಯೂ ಬಿಜೆಪಿ ಎರಡಂಕಿ ತಲುಪುವುದು ಕಷ್ಟ ಎನ್ನಲಾಗುತ್ತಿದೆ.
ಹಿಂದಿನ ಎರಡು ಚುನಾವಣೆಗಳಲ್ಲಿ ಕೆಸಿಆರ್ ಓಟಕ್ಕೆ ತಡೆಯೇ ಇಲ್ಲ ಎನ್ನುವಂತಿದ್ದ ಪರಿಸ್ಥಿತಿ ಈಗ ಬದಲಾಗಿದೆ. ಕಾಂಗ್ರೆಸ್ ಬಲ ಹೆಚ್ಚಿಸಿಕೊಂಡು ಗದ್ದುಗೆ ಏರಿಯೇ ಸಿದ್ಧ ಎಂದು ನುಗ್ಗುತ್ತಿದೆ. ಇದು ತೆಲಂಗಾಣದ ಚುನಾವಣಾ ಕಣವನ್ನು ರಂಗೇರಿಸಿ, ಪಕ್ಷಗಳು ಜಿದ್ದಾಜಿದ್ದಿನಿಂದ ಹೋರಾಡುವಂತೆ ಮಾಡಿವೆ. ಡಿಸೆಂಬರ್ ಮೂರರಂದು ಫಲಿತಾಂಶ ಘೋಷಣೆಯಾಗಲಿದೆ.