ಏನಿದು ‘ಒಂದು ರಾಷ್ಟ್ರ, ಒಂದು ಚುನಾವಣೆ?’ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾವೇನು?

Date:

ಇಂಡಿಯಾ ಒಕ್ಕೂಟದ ಮೂರನೇ ಸಭೆ ಮುಂಬೈನಲ್ಲಿ ನಡೆಯುತ್ತಿರುವುದರಿಂದ ಮೋದಿ ಸರ್ಕಾರವು ದೇಶದ ದಿಕ್ಕು ತಪ್ಪಿಸಲು ಈ ಕಲ್ಪನೆಯನ್ನು ಬಳಸುತ್ತಿದೆ ಎಂದು ವಿರೋಧ ಪಕ್ಷಗಳ ಒಕ್ಕೂಟದ ಇತರ ಸದಸ್ಯರೂ ಆರೋಪಿಸಿದ್ದಾರೆ. ಮತ್ತೊಂದೆಡೆ, “ಇದು ಸ್ವಾಗತಾರ್ಹ ಕ್ರಮ” ಎಂದು ಬಿಜೆಪಿ ಬಣ್ಣಿಸಿಕೊಂಡಿದೆ.

ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಗುರಿ ಹೊಂದಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ವ್ಯವಸ್ಥೆಯ ಸಾಧ್ಯತೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ಹೇಳಿದ್ದಾರೆ.

ಏಕಕಾಲದಲ್ಲಿ ರಾಜ್ಯ ಹಾಗೂ ಸಾರ್ವತ್ರಿಕ ಚುನಾವಣೆಯನ್ನು ನಡೆಸಬೇಕೆಂಬ ಕಲ್ಪನೆಯು ಹೊಸದೇನೂ ಅಲ್ಲ. ಈ ಹಿಂದೆಯೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಪ್ರಸ್ತಾಪಿಸಿದ್ದುಂಟು.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ರೂಪುಗೊಂಡಿರುವ ಪ್ರಸ್ತುತ ಸಮಿತಿಯು ಏಕಕಾಲದ ಚುನಾವಣಾ ವ್ಯವಸ್ಥೆಯ ಬಗ್ಗೆ ಪರಿಶೀಲಿಸುತ್ತಿರುವ ನಾಲ್ಕನೇ ಕಮಿಟಿಯಾಗಿದೆ.

ಇದಕ್ಕೂ ಮುನ್ನ ಕಾನೂನು ಆಯೋಗ, ನೀತಿ ಆಯೋಗ ಮತ್ತು ಸಂಸದೀಯ ಸ್ಥಾಯಿ ಸಮಿತಿಯು ಈ ಕುರಿತು ಚರ್ಚಿಸಿದ್ದವು.

“ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯದ ಬಗ್ಗೆ ಚರ್ಚಿಸಲು ಮಾತ್ರವೇ ಈ ಸಮಿತಿಯನ್ನು ರಚಿಸಲಾಗಿದೆ” ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.

“ಸಮಿತಿಯ ವರದಿ ಬಂದ ನಂತರ, ಅದನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಲಾಗುವುದು. ವರದಿ ಸಂಸತ್ತಿಗೆ ಬಂದರೆ ಸಂಸತ್ತಿನಲ್ಲೂ ಚರ್ಚೆಯಾಗಲಿದೆ. ಆತಂಕ ಪಡುವಂಥದ್ದೇನೂ ಇಲ್ಲ, ಚರ್ಚೆ ನಡೆಯಲಿದೆ. ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದ್ದೇವೆ. ನಮ್ಮನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಲಾಗುತ್ತದೆ…” ಎಂದಿದ್ದಾರೆ.

“ರಾಷ್ಟ್ರೀಯ ಹಿತಾಸಕ್ತಿಯಲ್ಲಿಯ ಹೊಸ ವಿಷಯಗಳನ್ನು ಪ್ರಜಾಪ್ರಭುತ್ವದಲ್ಲಿ ಚರ್ಚಿಸಬೇಕಾಗಿದೆ. ಇಂದಲ್ಲ ನಾಳೆ ಇಂತಹ ವ್ಯವಸ್ಥೆ ಜಾರಿಗೆ ತರುತ್ತಾರೆ ಎಂದಲ್ಲ, ನಾವು ಹಾಗೆ ಹೇಳಿಲ್ಲ” ಎಂದೂ ತಿಳಿಸಿದ್ದಾರೆ.

ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾಪ ಹೊಸದಲ್ಲ

ಲೋಕಸಭೆ ಸಚಿವಾಲಯದ ‘ಸಂಶೋಧನೆ ಮತ್ತು ಮಾಹಿತಿ ವಿಭಾಗ’ಕ್ಕೆ ಸೇರಿದ ಕಾನೂನು- ಸಾಂವಿಧಾನಿಕ ವ್ಯವಹಾರಗಳ ವಿಭಾಗವು ಪ್ರಕಟಿಸಿದ ಕಡತಗಳ ಪ್ರಕಾರ, ಸ್ವಾತಂತ್ರ್ಯ ನಂತರದ ಮೊದಲ ಕೆಲವು ಸಾರ್ವತ್ರಿಕ ಚುನಾವಣೆಗಳು ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆದಿವೆ.

ಈ ಪದ್ಧತಿ 1967ರವರೆಗೆ ಮುಂದುವರಿದಿತ್ತು. 1968 ಮತ್ತು 1969ರಲ್ಲಿ ಕೆಲವು ರಾಜ್ಯಗಳಲ್ಲಿ ವಿಧಾನಸಭೆಗಳು ಅಕಾಲಿಕವಾಗಿ ವಿಸರ್ಜನೆಗೊಂಡವು. ಹೀಗಾಗಿ ಏಕಕಾಲಿಕ ಚುನಾವಣೆ ವ್ಯವಸ್ಥೆಗೆ ತೊಡಕುಂಟಾಯಿತು.

ಏಕಕಾಲದಲ್ಲಿ ಚುನಾವಣೆ; ಮೋದಿ ಸರ್ಕಾರದ ಮೂರು ಸಮಿತಿಗಳು

2014ರಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ’ಏಕಕಾಲದಲ್ಲಿ ಚುನಾವಣೆ’ ಅಜೆಂಡಾ ಚರ್ಚೆಯಲ್ಲಿದೆ.

“ಒಂದು ರಾಷ್ಟ್ರ, ಒಂದು ಚುನಾವಣೆ” ವ್ಯವಸ್ಥೆಯ ಸಾಧ್ಯತೆಯನ್ನು ಪರಿಶೀಲಿಸಲು ಮೋದಿ ಸರ್ಕಾರವು ಈಗಾಗಲೇ ಮೂರು ಪ್ರತ್ಯೇಕ ಸಮಿತಿಗಳನ್ನು ರಚಿಸಿತ್ತು.

ಭಾರತದ ಕಾನೂನು ಆಯೋಗವು ಏಕಕಾಲಿಕ ಚುನಾವಣೆಗಳ ಕರಡು ವರದಿಯನ್ನು ಆಗಸ್ಟ್ 2018ರಲ್ಲಿ ಬಿಡುಗಡೆ ಮಾಡಿತ್ತು.

ಪಿಆರ್‌ಎಸ್‌ ಲೆಜಿಸ್ಲೇಟಿವ್ ರಿಸರ್ಚ್ ಈ ಕುರಿತು ವರದಿ ಪ್ರಕಟಿಸಿದ್ದು, “ಸಂವಿಧಾನದಲ್ಲಿ ಅಸ್ತಿತ್ವದಲ್ಲಿರುವ ಚೌಕಟ್ಟಿನೊಳಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ” ಎಂದು ಕಾನೂನು ಆಯೋಗದ ಕರಡು ವರದಿ ಹೇಳುತ್ತಿದೆ ಎಂಬುದು ಬಹಿರಂಗಗೊಂಡಿದೆ.

ಹೀಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕಾದರೆ, ಸಂವಿಧಾನ, ಪ್ರಜಾಪ್ರತಿನಿಧಿ ಕಾಯ್ದೆ 1951 ಮತ್ತು ಲೋಕಸಭೆ, ರಾಜ್ಯ ವಿಧಾನಸಭೆಗಳ ಕಾರ್ಯವಿಧಾನದ ನಿಯಮಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಕನಿಷ್ಠ ಅರ್ಧದಷ್ಟು ರಾಜ್ಯಗಳು ಸಾಂವಿಧಾನಿಕ ತಿದ್ದುಪಡಿಗಳನ್ನು ಅಂಗೀಕರಿಸಬೇಕು ಎಂದು (ಆಯೋಗದ) ವರದಿ ಉಲ್ಲೇಖಿಸಿದೆ. ಆದಾಗ್ಯೂ 1999ರಲ್ಲಿ ಕಾನೂನು ಆಯೋಗವು ಏಕಕಾಲದಲ್ಲಿ ಚುನಾವಣೆ ನಡೆಸುವಂತೆ ಸೂಚಿಸಿತ್ತು.

ಮಾಜಿ ನ್ಯಾಯಮೂರ್ತಿ ಬಿ.ಪಿ.ಜೀವನ್ ರೆಡ್ಡಿ ನೇತೃತ್ವದ ಆಯೋಗ ನೀಡಿದ ಚುನಾವಣಾ ಕಾನೂನುಗಳ ಸುಧಾರಣೆಯ 170 ನೇ ವರದಿಯಲ್ಲಿ (1999) ಈ ಕುರಿತು ಪ್ರಸ್ತಾಪವಿದೆ. ಚುನಾವಣೆಗಳನ್ನು ರಾತ್ರೋರಾತ್ರಿ ನಡೆಸಲಾಗುವುದಿಲ್ಲ ಎಂದೂ ಎಚ್ಚರಿಸಲಾಗಿತ್ತು.

ಕೆಲವು ರಾಜ್ಯಗಳ ಚುನಾವಣೆಗಳನ್ನು ಮುಂದುವರಿಸಲು, ಇತರ ರಾಜ್ಯಗಳ ವೇಳಾಪಟ್ಟಿಯಲ್ಲಿ ಹೊಂದಾಣಿಕೆಗಳನ್ನು ಮಾಡಲು, ಒಂದು ಅಥವಾ ಹೆಚ್ಚಿನ ಶಾಸಕಾಂಗ ಸಭೆಗಳ ಅವಧಿಯನ್ನು ವಿಸ್ತರಿಸಲು ಅಥವಾ ಮೊಟಕುಗೊಳಿಸಲು ಸಂಭವನೀಯ ಸಾಂವಿಧಾನಿಕ ತಿದ್ದುಪಡಿಯನ್ನು ಶಿಫಾರಸು ಮಾಡಲಾಗಿತ್ತು. ಅಧಿಕಾರದಲ್ಲಿರುವ ಸರ್ಕಾರಗಳಲ್ಲಿ ಏಕಕಾಲದ ಅವಿಶ್ವಾಸ ನಿರ್ಣಯ ಹಾಗೂ ಪರ್ಯಾಯ ಸರ್ಕಾರದಲ್ಲಿ ವಿಶ್ವಾಸ ಇತರರಲ್ಲಿಯೂ ಸಾಧ್ಯವಾಗಬೇಕಾಗುತ್ತದೆ ಎಂದಿತ್ತು.

ಸಂಸದೀಯ ಸ್ಥಾಯಿ ಸಮಿತಿ

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ, ರಾಜ್ಯಸಭೆ- ಇವುಗಳ ಸಂಸದೀಯ ಸ್ಥಾಯಿ ಸಮಿತಿಗೆ ಸಂಬಂಧಿಸಿದ ವಿಭಾಗವು 2015ರಲ್ಲಿ ತನ್ನ 79ನೇ ವರದಿ ನೀಡಿತ್ತು. ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಯನ್ನೂ ಅಧ್ಯಯನ ಮಾಡಿತ್ತು.

‘ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆ’ ಎಂಬ ಶೀರ್ಷಿಕೆಯ ವರದಿಯನ್ನು ಡಿಸೆಂಬರ್ 2015 ರಂದು ಸಂಸತ್ತಿನಲ್ಲಿ ಮಂಡಿಸಲಾಯಿತು.

ಈ ವರದಿಯು 1999ರ ಕಾನೂನು ಆಯೋಗದ ನೀಡಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡಿತು. “ಎರಡು ಹಂತದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವುದು; ಅಂದರೆ- ಲೋಕಸಭೆಯ ಮಧ್ಯಂತರದಲ್ಲಿ ಕೆಲವು ಅಸೆಂಬ್ಲಿಗಳ ಚುನಾವಣೆ; ಲೋಕಸಭೆಯ ಅಧಿಕಾರಾವಧಿಯ ಕೊನೆಯಲ್ಲಿ ಉಳಿದ ಚುನಾವಣೆಗಳನ್ನು ನಡೆಸುವುದು” ಎಂದು ಶಿಫಾರಸ್ಸು ಮಾಡಿತು.

ಎರಡು ಷರತ್ತುಗಳಲ್ಲಿ ಯಾವುದಾದರೂ ಒಂದನ್ನು ಪೂರೈಸಿದರೆ ಮಾತ್ರ ಲೋಕಸಭೆ ಅಥವಾ ರಾಜ್ಯ ಅಸೆಂಬ್ಲಿಗಳಿಗೆ ಮುಂಚಿತವಾಗಿಯೇ ಚುನಾವಣೆಗಳನ್ನು ನಡೆಸಬಹುದು ಎಂದು ಅದು ಶಿಫಾರಸು ಮಾಡಿದೆ: 1) ಮುಂಚಿತವಾಗಿಯೇ ಸಾರ್ವತ್ರಿಕ ಚುನಾವಣೆ ನಡೆಸುವ ಪ್ರಸ್ತಾಪವನ್ನು ಇಡೀ ಸದನದ ಕನಿಷ್ಠ ಮೂರನೇ ಎರಡರಷ್ಟು ಜನರು ಒಪ್ಪುವುದು (ಖಾಲಿ ಸೀಟ್‌ಗಳು ಸೇರಿದಂತೆ); ಅಥವಾ 2) ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದರೆ ಮತ್ತು ಹದಿನಾಲ್ಕು ದಿನಗಳಲ್ಲಿ ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳಿಂದ ಯಾವುದೇ ಪರ್ಯಾಯ ಸರ್ಕಾರ ದೃಢೀಕರಿಸದಿದ್ದರೆ.

ನೀತಿ ಆಯೋಗ

ಫೆಬ್ರವರಿ 2018 ರಲ್ಲಿ ರಾಜ್ಯ ಕಾನೂನು ಮತ್ತು ನ್ಯಾಯ ಸಚಿವ ಪಿ.ಪಿ. ಚೌಧರಿಯವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ “ಏಕಕಾಲಿಕ ಚುನಾವಣೆಗಳ ವಿಶ್ಲೇಷಣೆ’ ಎಂಬ ಶೀರ್ಷಿಕೆಯಲ್ಲಿ ನೀತಿ ಆಯೋಗ ನೀಡಿರುವ ಶಿಫಾರಸುಗಳನ್ನು ಸರ್ಕಾರ ಸ್ವೀಕರಿಸಿದೆ” ಎಂದು ವಿವರಿಸಿದ್ದರು.

ನೀತಿ ಆಯೋಗದ ವರದಿಯು ಸ್ಥಾಯಿ ಸಮಿತಿಯ ವರದಿಯನ್ನು ಗಣನೆಗೆ ತೆಗೆದುಕೊಂಡಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಎರಡು ಹಂತಗಳಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಸಂಭವನೀಯ ಚೌಕಟ್ಟನ್ನು ರೂಪಿಸಿದೆ ಎಂದು ಚೌಧರಿ ಸ್ಪಷ್ಟಪಡಿಸಿದ್ದರು.

“2019ರ ಏಪ್ರಿಲ್-ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಜೊತೆಗೆ ಸುಮಾರು ಅರ್ಧದಷ್ಟು ರಾಜ್ಯಗಳ ಅಸೆಂಬ್ಲಿಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ವರದಿ ಯೋಜಿಸಿದೆ. ಉಳಿದ ರಾಜ್ಯಗಳ ಚುನಾವಣೆಯನ್ನು ಮಧ್ಯಂತರದಲ್ಲಿ ಅಂದರೆ ಅಕ್ಟೋಬರ್-ನವೆಂಬರ್ 2021ರಲ್ಲಿ ನಡೆಸುವುದು ಅಥವಾ ಅಗತ್ಯವಿದ್ದಲ್ಲೆಲ್ಲಾ ಅಸೆಂಬ್ಲಿಗಳ ಅವಧಿಯನ್ನು ಮೊಟಕುಗೊಳಿಸುವುದು” ಎಂದಿದ್ದರು.

“ಆದಾಗ್ಯೂ, ಇದಕ್ಕೆ ಸಂವಿಧಾನದ ಸಂಬಂಧಿತ ನಿಬಂಧನೆಗಳಿಗೆ ತಿದ್ದುಪಡಿಗಳು ಬೇಕಾಗುತ್ತವೆ.”

ಈ ಯಾವುದೇ ಸಮಿತಿಯ ವರದಿಗಳ ಶಿಫಾರಸುಗಳ ಬಗ್ಗೆ ಸರ್ಕಾರವು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಬದಲಿಗೆ ಈಗ “ಒಂದು ರಾಷ್ಟ್ರ, ಒಂದು ಚುನಾವಣೆ” ಎಂಬ ವಿಷಯದ ಪರಿಶೀಲನೆಗೆ ನಾಲ್ಕನೇ ಸಮಿತಿಯೊಂದಿಗೆ ಬರಲಾಗಿದೆ.

‘ಒಂದು ರಾಷ್ಟ್ರ, ಒಂದು ಚುನಾವಣೆ’: ಮೋದಿ ಕನಸು

ಈ ವಿಷಯದ ಕುರಿತು ಅಧ್ಯಯನ ಮಾಡಿದ ಈ ಮೂರು ಸಮಿತಿಗಳ ಹೊರತಾಗಿ ಹೇಳುವುದಾದರೆ, ಹಲವು ವರ್ಷಗಳಿಂದ, ಮೋದಿಯವರೇ ’ಒನ್‌ ನೇಷನ್, ಒನ್ ಎಲೆಕ್ಷನ್‌’ ಕುರಿತು ಮತ್ತೆ ಮತ್ತೆ ಪ್ರಸ್ತಾಪಿಸಿದ್ದಾರೆ.

2019ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ, “ಜಿಎಸ್‌ಟಿ ಮೂಲಕ ಒಂದು ದೇಶ ಒಂದು ತೆರಿಗೆಯನ್ನು ಸಾಧಿಸಲಾಗಿದೆ. ಈಗ ಒಂದು ರಾಷ್ಟ್ರ ಒಂದು ಚುನಾವಣೆಯ ಬೇಡಿಕೆ ಇದೆ” ಎಂದಿದ್ದರು.

ಅದೇ ವರ್ಷದ ಜೂನ್‌ನಲ್ಲಿ, ಅಂದರೆ ಅಧಿಕಾರಕ್ಕೆ ಮರಳಿದ ಆರಂಭದಲ್ಲಿ, ಏಕಕಾಲದ ಚುನಾವಣೆಗಳ ಸಾಧ್ಯತೆಗಳನ್ನು ಚರ್ಚಿಸಲು ಪ್ರಧಾನಿ ಮೋದಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿಯಾಗಿದ್ದರು.

ನವೆಂಬರ್ 2020ರಲ್ಲಿ ’ಆಲ್‌ ಇಂಡಿಯಾ ಪ್ರೆಸಿಡಿಂಗ್‌ ಆಫೀಸರ್ಸ್’ ಉದ್ದೇಶಿಸಿ ಮಾತನಾಡಿದ ಮೋದಿಯವರು, “ಒಂದು ರಾಷ್ಟ್ರ, ಒಂದು ಚುನಾವಣೆ ಕೇವಲ ಚರ್ಚೆಯ ವಿಷಯವಲ್ಲ. ಆದರೆ ದೇಶದ ಅಗತ್ಯವೂ ಆಗಿದೆ” ಎಂದು ಹೇಳಿದ್ದರು.

2022ರ ಜನವರಿಯಲ್ಲಿ ಮೋದಿ ಅವರು ಏಕಕಾಲಿಕ ಚುನಾವಣೆಗಳ ಕುರಿತು ಪುನರುಚ್ಚರಿಸಿದರು. ನಿರಂತರವಾಗಿರುವ ಚುನಾವಣೆಗಳು ಅಭಿವೃದ್ಧಿಯನ್ನು ದುರ್ಬಲಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದರು.

ಏಕಕಾಲದ ಚುನಾವಣೆ ಸವಾಲು

ಈ ವರ್ಷದ ಮಾರ್ಚ್‌ನಲ್ಲಿ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದ ಅಂದಿನ ಕಾನೂನು ಸಚಿವ ಕಿರಣ್ ರಿಜಿಜು, “ಈ ವಿಷಯವನ್ನು ಸಂಸದೀಯ ಸ್ಥಾಯಿ ಸಮಿತಿಯು ಅಧ್ಯಯನ ಮಾಡಿದೆ. ಅಂತಹ ಚುನಾವಣೆಗಳು ಸಾರ್ವಜನಿಕ ಬೊಕ್ಕಸಕ್ಕೆ ಭಾರಿ ಉಳಿತಾಯ ತರುತ್ತವೆ. ಕೆಲವು ಸವಾಲುಗಳು ಉಳಿದಿವೆ” ಎಂದಿದ್ದರು.

ಇದರಲ್ಲಿ, “ಸಂವಿಧಾನದ ಐದು ವಿಧಿಗಳಿಗೆ ತಿದ್ದುಪಡಿಗಳನ್ನು ತರುವುದು ಸೇರಿದೆ. ಅವುಗಳೆಂದರೆ- ಸಂಸತ್ತಿನ ಸದನಗಳ ಅವಧಿಗೆ ಸಂಬಂಧಿಸಿದ 83ನೇ ವಿಧಿ, ರಾಷ್ಟ್ರಪತಿಗಳಿಂದ ಸದನದ ವಿಸರ್ಜನೆಗೆ ಸಂಬಂಧಿಸಿದ 85ನೇ ವಿಧಿ, ರಾಜ್ಯ ವಿಧಾನಸಭೆ ಅವಧಿಗೆ ಸಂಬಂಧಿಸಿದ 172ನೇ ವಿಧಿ, ರಾಜ್ಯ ಶಾಸಕಾಂಗಗಳ ವಿಸರ್ಜನೆಗೆ ಸಂಬಂಧಿಸಿದ 174ನೇ ವಿಧಿ ಮತ್ತು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದಕ್ಕೆ ಸಂಬಂಧಿಸಿದ 356ನೇ ವಿಧಿ” ಎಂದಿದ್ದರು.

ಭಾರತದ ಫೆಡರಲ್ ಸಿಸ್ಟಮ್‌ನ ಆಡಳಿತಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳ ಒಮ್ಮತವು ಅತ್ಯಗತ್ಯವಾಗಿರುತ್ತದೆ ಎಂದು ವಿವರಿಸಿದ್ದರು.

ಈ ಕಸರತ್ತಿಗೆ ಹೆಚ್ಚುವರಿ ಸಂಖ್ಯೆಯ ಇವಿಎಂಗಳು/ವಿವಿಪ್ಯಾಟ್‌ಗಳು ಬೇಕಾಗುತ್ತವೆ, ಹೆಚ್ಚುವರಿ ಮತಗಟ್ಟೆ ಸಿಬ್ಬಂದಿ ಮತ್ತು ಭದ್ರತಾ ಪಡೆ ಅಗತ್ಯವಿರುತ್ತದೆ, ಸಾವಿರಾರು ಕೋಟಿಗಳಷ್ಟು ದೊಡ್ಡ ಮೊತ್ತವನ್ನು ವೆಚ್ಚ ಮಾಡಬೇಕಾಗುತ್ತದೆ ಎಂದೂ ರಿಜಿಜು ಒಪ್ಪಿಕೊಂಡಿದ್ದರು.

’ದಿ ವೈರ್‌’ ಜಾಲತಾಣದ ಜೊತೆ ಮಾತನಾಡಿರುವ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್.ಕೃಷ್ಣಮೂರ್ತಿ, “ಏಕಕಾಲಿಕ ಚುನಾವಣೆಗಳು ಅನನುಕೂಲಗಳಿಗಿಂತ ಹೆಚ್ಚಿನ ಅನುಕೂಲಗಳನ್ನು ಒದಗಿಸಬಹುದಾದರೂ, ಅನುಷ್ಠಾನವು ಪ್ರಮುಖ ಪ್ರಶ್ನೆಯಾಗಿ ಉಳಿದಿದೆ” ಎಂದಿದ್ದಾರೆ.

“ಇದು ಕೆಲವು ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ. ಬಹುಶಃ ಅನುಕೂಲಗಳು ಹೆಚ್ಚು. ಆದರೆ ಅನುಷ್ಠಾನದ ಪ್ರಶ್ನೆ ಇದೆ. ಸಂವಿಧಾನದ ತಿದ್ದುಪಡಿ ಅತ್ಯಂತ ನಿರ್ಣಾಯಕವಾಗಿದೆ, ಅದು ಸಾಧ್ಯವಾಗದ ಹೊರತು ಇದು ಕಾಗದದ ಮೇಲಿನ ಚರ್ಚೆಯಾಗಿ ಉಳಿಯುತ್ತದೆ” ಎಂದು ವಿಶ್ಲೇಷಿಸಿದ್ದಾರೆ.

“ಅನುಕೂಲವೆಂದರೆ ನೀವು ಹಣವನ್ನು ಉಳಿಸುತ್ತೀರಿ. ಅನಾನುಕೂಲವೆಂದರೆ ರಾಜ್ಯ ಚುನಾವಣೆಗಳ ಮೇಲೆ (ಲೋಕಸಭಾ ಚುನಾವಣೆಯ ಮನಸ್ಥಿತಿ) ಪರಿಣಾಮ ಬೀರುತ್ತದೆ. ಸಾರ್ವತ್ರಿಕ ಚುನಾವಣೆಗಳಿಗೆ ಸಮಾನಾಂತರವಾಗಿ ರಾಜ್ಯ ಚುನಾವಣೆಗಳು ನಡೆಯುವುದನ್ನು ಒಪ್ಪುವುದಿಲ್ಲ. ಒಡಿಶಾ, ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳು ವಿವಿಧ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ವಿರೋಧ ಪಕ್ಷಗಳು ಎತ್ತುತ್ತಿರುವ ಪ್ರಶ್ನೆಗಳು ಇವು” ಎಂದು ಒಳನೋಟ ನೀಡಿದ್ದಾರೆ.

ಇದನ್ನು ಓದಿ ಎಡಿಟರ್ಸ್ ಗಿಲ್ಡ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ಹಿಂಪಡೆಯುವಂತೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಒತ್ತಾಯ

ಗಮನ ಬೇರೆಡೆ ಸೆಳೆಯುವ ಯುದ್ಧತಂತ್ರ

ಈ ನಡುವೆ ಏಕಕಾಲಕ್ಕೆ ಚುನಾವಣೆ ನಡೆಸುವ ಕ್ರಮಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಅಂಶುಲ್ ಅವಿಜಿತ್ ಅವರು ’ದಿ ವೈರ್‌’ಗೆ ಪ್ರತಿಕ್ರಿಯಿಸಿ, “ದಿಕ್ಕು ತಪ್ಪಿಸುವ ಮತ್ತು ಯುದ್ಧತಂತ್ರದ ಭಾಗವಾಗಿ ಮೋದಿ ಸರ್ಕಾರವು ಈ ಕಲ್ಪನೆಯನ್ನು ಬಳಸುತ್ತಿದೆ” ಎಂದು ಟೀಕಿಸಿದ್ದಾರೆ.

“ಎರಡು ಅಂಶಗಳಿವೆ. ರಾಷ್ಟ್ರೀಯತೆಯ ಹೆಸರಲ್ಲಿ ಸ್ಥಳೀಯ ಸಮಸ್ಯೆಗಳನ್ನು ಬದಿಗೆ ಸರಿಸುವುದು ಮತ್ತು ಮತದಾರರ ಮೇಲೆ ಪ್ರಭಾವ ಬೀರುವುದು- ಹೀಗೆ ಗಮನ ಬೇರೆಡೆಗೆ ಸೆಳೆಯುವ ಎರಡು ದೃಷ್ಟಿಕೋನಗಳಿವೆ” ಎಂದು ಎಚ್ಚರಿಸಿದ್ದಾರೆ.

“ಇದು ಚುನಾವಣಾ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶವನ್ನು ಹೊಂದಿಲ್ಲ. ರಾಜ್ಯಗಳ ಚುನಾವಣೆಗಳನ್ನು ಗೆಲ್ಲುವಲ್ಲಿ ಅವರು ವಿಫಲರಾಗಿದ್ದಾರೆ. ಅಧಿಕಾರ ಹಿಡಿಯುವುದೇ ಅವರ ಮೂಲಭೂತ ಉದ್ದೇಶವಾಗಿದೆ. ವಿವೇಚನಾರಹಿತ, ಶಕ್ತಿ ಮತ್ತು ಅಧಿಕಾರ ಬಲದ ಮೂಲಕ ಸಂವಿಧಾನವನ್ನು ತಿದ್ದುಪಡಿ ಮಾಡುವ ಮಾರ್ಗವನ್ನು ಆಲೋಚಿಸುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಅವಿಜಿತ್‌.

ಈ ಕಲ್ಪನೆಯು ಹೊಸದಲ್ಲವಾದರೂ, ಮೋದಿಯವರು ಈಗ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಕಾರಣ ಇದನ್ನು ಮುನ್ನಲೆಗೆ ತರುತ್ತಿದ್ದಾರೆ ಎಂದು ಗುಮಾನಿ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ ‘ಇಂಡಿಯಾ’ ಗೆಲ್ಲದಿದ್ದರೆ ಮಣಿಪುರ, ಹರಿಯಾಣದಂತೆ ದೇಶ ಬದಲು: ಎಂ ಕೆ ಸ್ಟಾಲಿನ್

“ಇಂಡಿಯಾ ಒಕ್ಕೂಟದ ಸಭೆ, ಅದಾನಿ ವಿರುದ್ಧದ ಆರೋಪಗಳು, ಚೀನಾ ದೇಶವು ಅರುಣಾಚಲ ಪ್ರದೇಶವನ್ನು ಒಳಗೊಂಡಿರುವ ನಕ್ಷೆಯನ್ನು ಬಿಡುಗಡೆ ಮಾಡುವುದು, ನಿರುದ್ಯೋಗ, ವ್ಯಾಪಕ ಬಡತನ ಅಥವಾ ಮಣಿಪುರವನ್ನು ನಿಯಂತ್ರಣಕ್ಕೆ ತರುವಂತಹ ಗಂಭೀರ ಸವಾಲು ಎದುರಾಗಿರುವುದರಿಂದ- ಪ್ರಧಾನಿ ಮೋದಿಯವರು ಈ ರೀತಿಯ ವಿಷಯಗಳೊಂದಿಗೆ ಪ್ರತ್ಯಕ್ಷರಾಗುತ್ತಾರೆ” ಎಂದು ಕುಟುಕಿದ್ದಾರೆ.

ಇಂಡಿಯಾ ಒಕ್ಕೂಟದ ಮೂರನೇ ಸಭೆ ಮುಂಬೈನಲ್ಲಿ ನಡೆಯುತ್ತಿರುವುದರಿಂದ ಮೋದಿ ಸರ್ಕಾರವು ದೇಶದ ದಿಕ್ಕು ತಪ್ಪಿಸಲು ಈ ಕಲ್ಪನೆಯನ್ನು ಬಳಸುತ್ತಿದೆ ಎಂದು ವಿರೋಧ ಪಕ್ಷಗಳ ಒಕ್ಕೂಟದ ಇತರ ಸದಸ್ಯರೂ ಆರೋಪಿಸಿದ್ದಾರೆ.

ಮತ್ತೊಂದೆಡೆ, “ಇದು ಸ್ವಾಗತಾರ್ಹ ಕ್ರಮ” ಎಂದು ಬಿಜೆಪಿ ಬಣ್ಣಿಸಿಕೊಂಡಿದೆ.

“ಇದು ಪಕ್ಷ ಮತ್ತು ಸರ್ಕಾರದಿಂದ ಪ್ರಾರಂಭವಾದ ಸಕಾರಾತ್ಮಕ ಬೆಳವಣಿಗೆಯಾಗಿದೆ. ಇದನ್ನು ಸ್ವಾಗತಿಸಬೇಕು” ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸೈಯದ್ ಜಾಫರ್ ಇಸ್ಲಾಂ ಅವರು ’ದಿ ವೈರ್‌’ ಜಾಲತಾಣಕ್ಕೆ ಪ್ರತಿಕ್ರಿಯಿಸಿದ್ದಾರೆ.

“ಏಕಕಾಲಿಕ ಮತದಾನದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಚರ್ಚಿಸಲು ಈ ಸಮಿತಿಗೆ ವಹಿಸಲಾಗಿದೆ. ಇದು ಪ್ರತಿಯೊಂದು ಸಾಧ್ಯತೆಯನ್ನು ಮೌಲ್ಯಮಾಪನ ಮಾಡುತ್ತದೆ. ಸಂಸತ್ತಿಗೆ ವರದಿಯನ್ನು ಸಲ್ಲಿಸುತ್ತದೆ” ಎಂದು ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 18ರಿಂದ 22ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಕುರಿತ ಊಹಾಪೋಹಾಗಳ ನಡುವೆ ಒನ್ ನೇಷನ್ ಒನ್ ಎಲೆಕ್ಷನ್‌ ಕುರಿತು ಸಮಿತಿ ರಚನೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

ಆದರೆ, ವಿಶೇಷ ಅಧಿವೇಶನದ ಅಜೆಂಡಾ ಬಗ್ಗೆ ಕೇಂದ್ರ ಸರ್ಕಾರ ಬಾಯಿ ಬಿಟ್ಟಿದೆ. “ರಾಷ್ಟ್ರದ ಪ್ರಗತಿಗೆ ಸಹಾಯ ಮಾಡುವ ವಿಷಯಗಳನ್ನು ಪರಿಗಣಿಸಲು ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲಾ ಪ್ರಮುಖ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸಲಾಗುವುದು” ಎಂದು ಸೈಯದ್ ಜಾಫರ್ ಇಸ್ಲಾಂ ತಿಳಿಸಿದ್ದಾರೆ.

ಮೂಲ: ದಿ ವೈರ್‌

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಂದಾಯ ಕರ್ಮಕಾಂಡ-1 | ರೈತರನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸುವ ಇಲಾಖೆ

ಕಂದಾಯ ಇಲಾಖೆ ಕೆಲಸ ಎಂದರೆ ರೈತರು ಬೆಚ್ಚಿಬೀಳುತ್ತಾರೆ. ಸಕಾಲದಡಿ ಇಂತಿಷ್ಟೇ ಅವಧಿಯಲ್ಲಿ...

ಮಹಿಳಾ ಮೀಸಲಾತಿ | 15 ವರ್ಷಗಳಿಂದ ಮಂಡನೆಯಾಗದ ಮಸೂದೆ; ವಿರೋಧಿಗಳು ಯಾರು?

ಮಹಿಳಾ ಮೀಸಲಾತಿಯ ಚರ್ಚೆ ಮತ್ತೆ ಮುನ್ನೆಲೆಯಲ್ಲಿದೆ. ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು...

ಕಲ್ಯಾಣ ಕರ್ನಾಟಕ | ಹೆಸರು ಬದಲಾದರೂ ಹಸನಾಗದ ಬದುಕು

ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಎರಡು ಸ್ವಾತಂತ್ರ್ಯ ಸಂಭ್ರಮದ ದಿನಗಳು, ಒಂದು...

ಚೈತ್ರಾ ಎಂಬ ಗಾಳವನ್ನು ಬಳಸಿ, ಗೋವಿಂದ ಎಂಬ ಮೀನನ್ನು‌ ಹಿಡಿದವರಾರು?

ಬಿಜೆಪಿ ಮುಖಂಡರೇ ಚೈತ್ರಾ ಹೇಳಿದ ದೊಡ್ಡವರು ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿ....