ಇನ್ನು ಮುಂದೆ ವಿಶ್ವದ ಕ್ರೀಡಾ ಹಬ್ಬವಾದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಚಿನ್ನ ಗೆಲ್ಲಲು ಭಾರತಕ್ಕೆ ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆಯಿದೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್ ಆಟವನ್ನು ಸೇರ್ಪಡೆ ಮಾಡಬೇಕು ಎಂಬ ಸಲಹೆಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಸ್ವೀಕರಿಸಿದೆ. ಈ ಮೂಲಕ ಕ್ರಿಕೆಟ್ ಆಟವು ವಿಶ್ವದ ಅತಿದೊಡ್ಡ ಕ್ರೀಡಾಕೂಟದಲ್ಲಿ ಭಾಗಿಯಾಗಲು ವೇದಿಕೆ ಸಜ್ಜಾಗಿದೆ.
ಪುರುಷರ ಹಾಗೂ ಮಹಿಳೆಯರ ಟಿ20 ಕ್ರಿಕೆಟ್ ಸೇರ್ಪಡೆಗೊಳಿಸಲು ಅಕ್ಟೋಬರ್ 15 ರಂದು ನಿಗದಿಯಾಗಿರುವ ತನ್ನ ಅಧಿವೇಶನದಲ್ಲಿ ಐಒಸಿ ಕಾರ್ಯಕಾರಿ ಮಂಡಳಿಯು ತನ್ನ ಮತಗಳನ್ನು ಚಲಾಯಿಸಲಿದ್ದು, ಕ್ರಿಕೆಟ್ ಬಹುತೇಕ ಸೇರ್ಪಡೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಪಾಕ್ ಪಂದ್ಯದಲ್ಲಿ ಶುಭಮನ್ ಆಡುವ ಬಗ್ಗೆ ಲೇಟೆಸ್ಟ್ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
ಕ್ರಿಕೆಟ್ ಹೊರತಾಗಿ ಬೇಸ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್ ಕ್ರೀಡೆಗಳನ್ನು ಸೇರ್ಪಡೆಗೊಳಿಸಲು ಐಒಸಿ ಅನುಮತಿ ನೀಡಿದೆ. ಇವೆಲ್ಲ ಕ್ರೀಡೆಗಳ ಸೇರ್ಪಡೆಯ ತೀರ್ಮಾನ ಅಕ್ಟೋಬರ್ 16ರಂದು ಪ್ರಕಟಗೊಳ್ಳಲಿದೆ.
“ಕ್ರಿಕೆಟ್‌ನ ಜನಪ್ರಿಯತೆಯನ್ನು ನಾವು ನೋಡಿದ್ದೇವೆ. ಟಿ20 ಹಾಗೂ ಏಕದಿನ ವಿಶ್ವಕಪ್ ಈಗಾಗಲೇ ದೊಡ್ಡ ಯಶಸ್ಸನ್ನು ಹೊಂದಿದೆ. ಮೊದಲ ಐದು ಹೊಸ ಕ್ರೀಡೆಗಳನ್ನು ಪರಿಚಯಿಸಲು ಲಾಸ್ ಏಂಜಲೀಸ್ ಸಂಘಟನಾ ಸಮಿತಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ” ಎಂದು ಐಒಸಿಯ ಕ್ರೀಡಾ ನಿರ್ದೇಶಕ ಕಿಟ್ ಮೆಕ್‌ಕಾನ್ನೆಲ್ ಎರಡು ದಿನಗಳ ಕಾರ್ಯಕಾರಿ ಮಂಡಳಿಯ ಸಭೆಯ ಮುಕ್ತಾಯದ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.