ರಾಜ್ಯದ ಬರ ಪರಿಸ್ಥಿತಿಗೆ ಎಲ್‌ ನಿನೊ ಕಾರಣ? ಏನಿದು ‘ಎಲ್‌ ನಿನೊ’!

Date:

Advertisements

ರಾಜ್ಯದಲ್ಲಿ ಮೇ ಮತ್ತು ಜೂನ್‌ ತಿಂಗಳಿನಲ್ಲಿ ಸುರಿಯಬೇಕಿದ್ದ ನೈರುತ್ಯ ಮಾನ್ಸೂನ್ ಮಳೆಯೂ ದುರ್ಬಲಗೊಂಡಿದೆ. ಇದರಿಂದಾಗಿ ರಾಜ್ಯದ 216 ತಾಲೂಕುಗಳ ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲದೆ, ಅಕ್ಟೋಬರ್‌ ತಿಂಗಳಿನಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2-5 ಡಿಗ್ರಿಯಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿಯೂ ಬರದ ಛಾಯೆ ಮುಂದುವರೆಯುವ ಸಾಧ್ಯತೆಗಳಿವೆ. ಇದಕ್ಕೆ ಪ್ರಮುಖ ಕಾರಣ ‘ಎಲ್‌ ನಿನೊ’ (ಶಾಖದ ಹೆಚ್ಚಳ – ಸಮುದ್ರ ಪ್ರವಾಹ) ಎಂದು ಹೇಳಲಾಗಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಎಲ್‌ ನಿನೊ ಹೆಚ್ಚುತ್ತಿದೆ. ಪರಿಣಾಮವಾಗಿ ತಾಪಮಾನವೂ ಹೆಚ್ಚಾಗುತ್ತಿದೆ.

ನವೆಂಬರ್ ಚಳಿಗಾಲದ ತಿಂಗಳಾಗಿದ್ದರೂ, ಅಕ್ಟೋಬರ್ ಮಧ್ಯದಲ್ಲಿಯೇ ಚಳಿಯ ವಾತಾವರಣ ಆರಂಭವಾಗುತ್ತಿತ್ತು. ಆದರೆ, ಅಕ್ಟೋಬರ್‌ನಲ್ಲಿ ಬೇಸಿಗೆಯಂತಹ ದಗೆಯ ವಾತಾವರಣ ಕಾಡುತ್ತಿದೆ. ಎಲ್‌ ನಿನೊದಿಂದ ತಾಪಮಾನ ಹೆಚ್ಚುತ್ತಿದೆ. ಪ್ರತಿ ಒಂದು ಡಿಗ್ರಿ ತಾಪಮಾನ ಹೆಚ್ಚಳವಾದರೆ, 10%ರಷ್ಟು ಬೆಳೆ ನಷ್ಟವಾಗುತ್ತದೆ ಎಂದು ಕೃಷಿ ತಜ್ಞರು ಹೇಳುತ್ತಿದ್ದಾರೆ.

ಹವಾಮಾನ ಇಲಾಖೆಯ ಪ್ರಕಾರ ಮೈಸೂರು, ಮಂಗಳೂರು, ಬೀದರ್ ಮತ್ತು ಮಂಡ್ಯ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಉಳಿದೆಲ್ಲ ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವಿರುತ್ತಿದ್ದ ಬಾಗಲಕೋಟೆಯಲ್ಲಿ ಈ ಬಾರಿ, ಅಕ್ಟೋಬರ್ 11ರಂದು ಬರೋಬ್ಬರಿ 35 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಅದೇ ರೀತಿ, ಗದಗದಲ್ಲಿ 33.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಹೆಚ್ಚು (30 ಡಿಗ್ರಿ) ತಾಪಮಾನವನ್ನು ದಾಖಲಿಸಿದೆ. ಧಾರವಾಡ (33), ಚಿತ್ರದುರ್ಗ (32.7), ಹಾಸನ (32.2) ಮತ್ತು ಕಲಬುರಗಿ (34.7) ಜಿಲ್ಲೆಗಳಲ್ಲಿಯೂ ಹೆಚ್ಚು ತಾಪಮಾನ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ ಮೂರು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

Advertisements

ಹೆಚ್ಚುತ್ತಿರುವ ತಾಪಮಾನವು ತೇವಾಂಶವನ್ನು ಒಣಗಿಸುತ್ತಿದ್ದು, ಕೃಷಿಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ರೈತರು ನಷ್ಟ ಅನುಭವಿಸುವಂತೆ ಮಾಡಿದೆ. ಸಿರಿಧಾನ್ಯ ಮತ್ತು ಬೇಳೆಕಾಳು ಬೆಳೆಯುವ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗವು ಹೆಚ್ಚು ನಷ್ಟವನ್ನು ಅನುಭವಿಸಿದೆ.

ಕರಾವಳಿ ಕರ್ನಾಟಕದಲ್ಲಿ 2-3 ಡಿಗ್ರಿ ಹಾಗೂ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ 3-4 ಡಿಗ್ರಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗುವ ಸಾಧ್ಯತೆಗಳಿವೆ.

ಏನಿದು ಎಲ್‌ ನಿನೋ?

ಎಲ್ ನಿನೊ ಪೂರ್ವ ಪೆಸಿಫಿಕ್‌ ಮಹಾಸಾಗರದಲ್ಲಿ ಅಸಾಮಾನ್ಯವಾಗಿ ಬೆಚ್ಚಗಿನ ನೀರಿನಿಂದ ಹುಟ್ಟುವ ನೈಸರ್ಗಿಕ ಹವಾಮಾನ ಮಾದರಿಯಾಗಿದೆ. ಎಲ್‌ ನಿನೊದಿಂದಾಗಿ ಪೂರ್ವ ಪೆಸಿಫಿಕ್‌ ಮಹಾಸಾಗರದಲ್ಲಿ ನೀರು ಸಾಮಾನ್ಯಕ್ಕಿಂತ ಬೆಚ್ಚಗಾಗುತ್ತದೆ. ವಾತಾವರಣದಲ್ಲಿ ಶಾಖವನ್ನು ಹೆಚ್ಚಿಸುತ್ತದೆ. ಅಲ್ಲದೆ, ಕೆಲವೆಡೆ ಗುಡುಗು ಸಹಿತ ಮಳೆಯನ್ನು ಉಂಟುಮಾಡುತ್ತದೆ.

ಸಮಭಾಜಕ ಪೆಸಿಫಿಕ್‌ನ ಉದ್ದಕ್ಕೂ ಪೂರ್ವದಿಂದ ಪಶ್ಚಿಮಕ್ಕೆ ಬೀಸುವ ಮಾರುತಗಳು ನಿಧಾನವಾದಾಗ ಅಥವಾ ಗಾಳಿಯ ಒತ್ತಡ ಬದಲಾದಾಗ ಎಲ್‌ ನಿನೊ ರೂಪುಗೊಳ್ಳುತ್ತದೆ. ಇದು, ಮಳೆ ಮಾರುತಗಳು ಹಿಮ್ಮುಖವಾಗಿ ಚಲಿಸುವಂತೆ ಮಾಡುತ್ತದೆ. ಹೀಗೆ ಚಲಿಸುವ ಮಾರುತಗಳು ಸೂರ್ಯನಿಂದ ಬೆಚ್ಚಗಾಗುವ ಮೇಲ್ಮೈ ನೀರಿನ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಬೆಚ್ಚಗಿನ ನೀರು ತಂಪಾದ ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದ ಅಂಚಿನ ಪ್ರದೇಶಗಳತ್ತ ಚಲಿಸುತ್ತದೆ.

ಎಲ್‌ ನಿನೋದಿಂದ ಉಂಟಾಗುವ ಈ ಚಲನೆಯು ಸಮುದ್ರದಲ್ಲಿ ಪ್ರವಾಹ ಉಂಟುಮಾಡುತ್ತದೆ. ಇದರಿಂದಾಗಿ, ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಪೆಸಿಫಿಕ್‌ನಂತರ ಹಲವಾರು ಪ್ರದೇಶಗಳಲ್ಲಿ ಶಾಖವನ್ನು ಹೆಚ್ಚು ಮಾಡುತ್ತದೆ. ಈ ಪ್ರದೇಶಗಳಲ್ಲಿ ಬರದ ಪರಿಸ್ಥಿತಿ ಎದುರಾಗುತ್ತದೆ. ಆದರೆ, ಇದೇ ಸಂದರ್ಭದಲ್ಲಿ, ಅಮೆರಿಕ, ಬ್ರೆಜಿಲ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಪರಿಣಾಮ ಪ್ರವಾಹ ಉಂಟಾಗಿ ಅಪಾರ ಸಾವುಗಳೂ ಸಂಭವಿಸಬಹುದು ಎನ್ನುತ್ತಿದ್ದಾರೆ ಪರಿಸರ ತಜ್ಞರು.

El Nino 1

2015-16ರ ಅವಧಿಯಲ್ಲಿಯೂ ಎಲ್ ನಿನೊ ಕಾಣಿಸಿಕೊಂಡಿತ್ತು. ಅದರಿಂದ, ಪೆರುವಿನ ಕರಾವಳಿ ಭಾಗಕ್ಕೆ ಬೆಚ್ಚಗಿನ ನೀರು ಆಕ್ರಮಣಕಾರಿಯಾಗಿ ಅಪ್ಪಳಿಸಿತ್ತು.

ಆ ಎರಡು ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚು ಶಾಖದ ಪ್ರಮಾಣವಿತ್ತು. ಆಗ ಪ್ರತಿ ವರ್ಷ ಭಾರತದಲ್ಲಿ ಸುಮಾರು 2,500 ಜನರು ಶಾಖದ ಬೇಗೆಗೆ ಬಲಿಯಾಗಿದ್ದರು. ಪ್ರಪಂಚದಾದ್ಯಂತ ಉಷ್ಣತೆ ಹೆಚ್ಚಿದ್ದರಿಂದ ಸಮುದ್ರ ಮಟ್ಟವು 7 ಮಿಲಿಮೀಟರ್‌ಗಳಷ್ಟು ಏರಿಕೆಯಾಗಿತ್ತು.

ಹವಾಮಾನದ ಮೇಲೆ ಎಲ್ ನಿನೊ ಹೇಗೆ ಪರಿಣಾಮ ಬೀರುತ್ತದೆ?

ಎಲ್‌ ನಿನೊ ಸಮುದ್ರದಲ್ಲಿ ಚಂಡಮಾರುತವನ್ನು ಉಂಟು ಮಾಡುವುದರಿಂದ ಪ್ರಪಂಚದಾದ್ಯಂತ ಹವಾಮಾನವು ಬದಲಾಗುತ್ತದೆ. ಹಲವೆಡೆ ತಾಪಮಾನ ಹೆಚ್ಚಾದರೆ, ಕೆಲವೆಡೆ ತಂಪಾದ ವಾತಾವರಣ ನಿರ್ಮಾಣವಾಗುತ್ತದೆ. ಎಲ್ ನಿನೊ ಸಮಯದಲ್ಲಿ, ದಕ್ಷಿಣ ಅಮೆರಿಕಾ ತಂಪಾದ ಮತ್ತು ಆರ್ದ್ರ ವಾತಾವರಣವನ್ನು ಅನುಭವಿಸುತ್ತದೆ. ಆದರೆ, ಪಶ್ಚಿಮ ಅಮೆರಿಕಾ ಮತ್ತು ಕೆನಡಾದ ಭಾಗಗಳಲ್ಲಿ ತಾಪಮಾನವು ಹೆಚ್ಚುತ್ತದೆ. ಅಮೆಜಾನ್ ಮಳೆಕಾಡು ಕೂಡ ಬರದ ಪರಿಸ್ಥಿತಿಯನ್ನು ಎದುರಿಸುತ್ತದೆ.

ಆಸ್ಟ್ರೇಲಿಯಾವು ತೀವ್ರವಾದ ಶಾಖ, ಬರವನ್ನು ಎದುರಿಸುತ್ತದೆ. ಆಫ್ರಿಕಾ, ಭಾರತ, ಇಂಡೋನೇಷ್ಯಾದಲ್ಲಿಯೂ ಮಳೆಯನ್ನು ಕಡಿಮೆ ಮಾಡುತ್ತದೆ.

ಭಾರತದ ಹವಾಮಾನ ಇಲಾಖೆ (ಐಎಂಡಿ) ಸೇರಿದಂತೆ ಹಲವು ಹವಾಮಾನ ಸಂಸ್ಥೆಗಳು ‘ಎಲ್ ನಿನೊ’ದ ಬೆನ್ನು ಹತ್ತಿವೆ. ಹವಾಮಾನ ಮುನ್ಸೂಚನೆಗಳು ಮತ್ತು ಸಲಹೆಗಳನ್ನು ಒಗ್ಗೂಡಿಸುತ್ತಿವೆ.

ಈ ವರದಿ ಓದಿದ್ದೀರಾ?: ಮಂಡ್ಯ | ಕೋರಮಂಡಲ್‌ ಸಕ್ಕರೆ ಕಾರ್ಖಾನೆಗೆ ಬಲಿಯಾಗುತ್ತಿವೆ ಹಲವು ಗ್ರಾಮಗಳು

‘ಕಳೆದ ಮೂರು ವರ್ಷಗಳಲ್ಲಿ ಪೆಸಿಫಿಕ್‌ ಸಾಗರದಲ್ಲಿ ಮೇಲ್ಮೈ ನೀರು ಬೆಚ್ಚಗಾಗಿದೆ ಮತ್ತು ವಾತಾವರಣ ಶಾಖದಿಂದ ಕೂಡಿದೆ. ಈ ಬಾರಿ, ಇನ್ನೂ ಹೆಚ್ಚುತ್ತಿದ್ದು, ಎಲ್‌ ನಿನೋ ಸಂಭವಿಸುತ್ತದೆ’ ಎನ್ನುತ್ತಾರೆ ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹವಾಮಾನ ವಿಜ್ಞಾನಿ ರಘು ಮುರ್ತುಗುಡ್ಡೆ.

ಎಲ್‌ ನಿನೋ 2024ರಲ್ಲಿ ಮತ್ತಷ್ಟು ಬಾಧಿಸಲಿದೆ. ಆ  ವೇಳೆಗೆ ಜಾಗತಿಕ ಸರಾಸರಿ ತಾಪಮಾನವು ಸರಾಸರಿಗಿಂತ 1.5 ಡಿಗ್ರಿ ಸೆಲ್ಸಿಯಸ್ ಶಾಖವನ್ನು ಹೊಂದಿರುತ್ತದೆ. ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಪ್ರಕಾರ, ಸಮುದ್ರದ ಶಾಖದ ಪ್ರಮಾಣವು ಈಗಾಗಲೇ ದಾಖಲೆಯ ಪ್ರಮಾಣದಲ್ಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X