ನೆನಪು | ಲೋಕದ ಡೊಂಕನು ಗೆರೆಗಳಿಂದ ತಿದ್ದಿದ ಕಾಮನ್ ಮ್ಯಾನ್- ಆರ್.ಕೆ ಲಕ್ಷ್ಮಣ್

Date:

Advertisements
ಸಾಮಾನ್ಯನ ಕಷ್ಟ-ಕಾರ್ಪಣ್ಯಗಳನ್ನು, ಆಸೆ-ನಿರೀಕ್ಷೆಗಳನ್ನು, ತುಡಿತ-ತಲ್ಲಣಗಳನ್ನು ಗೆರೆಗಳ ಮೂಲಕ ಅಭಿವ್ಯಕ್ತಿಸಿದವರು. ಆ ಮೂಲಕ ಆಳುವ ಪ್ರಭುತ್ವಕ್ಕೆ ಅಂಕುಶವಿಟ್ಟವರು. ಪುಟ್ಟ ಟಿಪ್ಪಣಿ ಮತ್ತು ವಿಡಂಬನಾತ್ಮಕ ಚಿತ್ರಗಳ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಹಂಚಿದವರು. ದೇಶ ಕಂಡ ಶ್ರೇಷ್ಠ, ಪ್ರತಿಭಾನ್ವಿತ ವ್ಯಂಗ್ಯಚಿತ್ರ ಕಲಾವಿದರಲ್ಲಿ ಒಬ್ಬರು- ಆರ್.ಕೆ ಲಕ್ಷ್ಮಣ್.

Ofcourse you weren’t spreading rumours- the charge is you were spreading facts (ಇಲ್ಲ… ಇಲ್ಲ… ನಿನ್ನ ಮೇಲಿನ ಆಪಾದನೆ ವದಂತಿ ಅಥವಾ ಸುಳ್ಳು ಸುದ್ದಿ ಹಬ್ಬಿಸ್ತಿದ್ದೆ ಅನ್ನೋದಲ್ಲ… ಬದಲಾಗಿ ನಿಜಾಂಶಗಳನ್ನು ಹರಡುತ್ತಿದ್ದೆ)

rk

ಇದು ಆರ್.ಕೆ ಲಕ್ಷ್ಮಣ್ ಅವರು 1962ರಲ್ಲಿ ರಚಿಸಿದ ಪಾಕೆಟ್ ಕಾರ್ಟೂನ್. ಈ ಚಿತ್ರ ರಚಿಸಿ ಇಂದಿಗೆ ಸರಿಸುಮಾರು 61 ವರ್ಷಗಳು ಉರುಳಿಹೋಗಿವೆ. ಆದರೆ ವಸ್ತು, ವಿಷಯ ಮತ್ತು ಪರಿಸ್ಥಿತಿ ಅಂದಿಗೂ-ಇಂದಿಗೂ ಪ್ರಸ್ತುತ. ಕಲಾವಿದನ ಕಣ್ಣೋಟ ಈ ಕಾಲಕ್ಕೂ ಜೀವಂತ. ಇದೊಂದೇ ಅಲ್ಲ, ಇಂತಹ ಸಾವಿರಾರು ವ್ಯಂಗ್ಯಚಿತ್ರಗಳ ಮೂಲಕ ಏಳು ದಶಕಗಳ ಕಾಲ ನಿರಂತರವಾಗಿ ಜಗತ್ತಿನ ಜನರನ್ನು ಜಾಗೃತಾವಸ್ಥೆಯಲ್ಲಿಟ್ಟ ಏಕೈಕ ಕಲಾವಿದ- ಆರ್.ಕೆ ಲಕ್ಷ್ಮಣ್.

ಕಾಮನ್ ಮ್ಯಾನ್- ಸಾಮಾನ್ಯ ವ್ಯಕ್ತಿಯನ್ನು ರಾಷ್ಟ್ರೀಯ ಮಟ್ಟದ ‘ದಿ ಟೈಮ್ಸ್ ಆಫ್ ಇಂಡಿಯಾ’ ಇಂಗ್ಲಿಷ್ ದಿನಪತ್ರಿಕೆಯ ‘You Said It’ ಎಂಬ ಪಾಕೆಟ್ ಕಾರ್ಟೂನ್ ಮೂಲಕ ಮುಖಪುಟಕ್ಕೆ ತಂದು ನಿಲ್ಲಿಸಿದ ಲಕ್ಷ್ಮಣ್, ಆತನ ದನಿಯಾದವರು. ಸಾಮಾನ್ಯನ ಕಷ್ಟ-ಕಾರ್ಪಣ್ಯಗಳನ್ನು, ಆಸೆ-ನಿರೀಕ್ಷೆಗಳನ್ನು, ತುಡಿತ-ತಲ್ಲಣಗಳನ್ನು ಗೆರೆಗಳ ಮೂಲಕ ಅಭಿವ್ಯಕ್ತಿಸಿದವರು. ಆ ಮೂಲಕ ಆಳುವ ಪ್ರಭುತ್ವಕ್ಕೆ ಅಂಕುಶವಿಟ್ಟವರು. ಪುಟ್ಟ ಟಿಪ್ಪಣಿ ಮತ್ತು ವಿಡಂಬನಾತ್ಮಕ ಚಿತ್ರಗಳ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಹಂಚಿದವರು. ದೇಶ ಕಂಡ ಶ್ರೇಷ್ಠ, ಪ್ರತಿಭಾನ್ವಿತ ವ್ಯಂಗ್ಯಚಿತ್ರ ಕಲಾವಿದರಲ್ಲಿ ಒಬ್ಬರು.

Advertisements

ಮೈಸೂರಿನ ಲಕ್ಷ್ಮೀಪುರಂನಲ್ಲಿ ಹುಟ್ಟಿ(ಅಕ್ಟೋಬರ್ 24, 1921) ಬೆಳೆದ ಆರ್.ಕೆ ಲಕ್ಷ್ಮಣ್(ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್), ಪ್ರಾಥಮಿಕ ಶಿಕ್ಷಣ ಪಡೆದದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ. ತಂದೆ ತಮಿಳುನಾಡಿನ ಸೇಲಂನವರು, ಮೈಸೂರಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ತಾಯಿ ಮೈಸೂರು ಮಹಾರಾಣಿಯರಿಗೆ ಆಪ್ತರಾಗಿದ್ದರು. ಬಾಲ್ಯದಲ್ಲಿಯೇ ಬಾಗಿಲು, ನೆಲ, ಗೋಡೆ ಮೇಲೆ ಚಿತ್ರ ಬಿಡಿಸುತ್ತಿದ್ದ ಲಕ್ಷ್ಮಣ್’ಗೆ ಪುಣ್ಯಕೋಟಿ ಕತೆ ಕರುಳಿಗಿಳಿದಿತ್ತು. ಚಿತ್ರ ಬಿಡಿಸಲು ಚಿತ್ತ ಕೆಡಿಸಿತ್ತು. ಶಿಕ್ಷಕರಿಂದ ಪ್ರಶಂಸೆಗೊಳಗಾಗಿತ್ತು. ಜೊತೆಗೆ ‘ಪಂಚ್’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಬ್ರಿಟನ್ನಿನ ಸರ್ ಡೇವಿಡ್ ಲೋ ಅವರ ವ್ಯಂಗ್ಯಚಿತ್ರಗಳು ಲಕ್ಷ್ಮಣ್’ಗೆ ಸ್ಪೂರ್ತಿಯಾಗಿತ್ತು. ಪುಣ್ಯಕೋಟಿ, ಶಿಕ್ಷಕರು ಮತ್ತು ಸರ್ ಡೇವಿಡ್’ರಿಂದ ಉತ್ತೇಜಿತರಾದ ಲಕ್ಷ್ಮಣ್, ತಾನೊಬ್ಬ ಹುಟ್ಟಾ ಕಲಾವಿದ ಎಂಬುದನ್ನು ತನಗೆ ತಾನೇ ನಿರ್ಧರಿಸಿಕೊಂಡಿದ್ದರು. ಅದೇ ಗುಂಗಿನಲ್ಲಿ ಹೈಸ್ಕೂಲ್ ನಂತರ ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ಸ್ ಸೇರಲು ಹೋಗಿ, ಸೀಟ್ ಸಿಗದೆ ನಿರಾಶೆಯಿಂದ ವಾಪಸ್ ಬಂದಿದ್ದರು. ಕೊನೆಗೆ ಮೈಸೂರಿನಲ್ಲಿಯೇ ಬಿಎ ಪದವಿ ಪಡೆದಿದ್ದರು.

ಇದನ್ನು ಓದಿದ್ದೀರಾ?: ಕಲಿಕೆ ಮೌಲ್ಯವನ್ನು ಕಳೆದುಕೊಂಡಾಗ ರಾಜ್ಯ ಶಿಕ್ಷಣ ಸಮಿತಿ ಏನನ್ನು ಮಾಡಬಹುದು?

ಮಹಾರಾಜ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ಕಾಲದಲ್ಲಿಯೇ ಅಣ್ಣ ಆರ್.ಕೆ ನಾರಾಯಣ್, ಇಂಗ್ಲಿಷ್ ಭಾಷೆಯಲ್ಲಿ ಕತೆಗಳನ್ನು ಬರೆದು, ಸಾಹಿತ್ಯಲೋಕದಲ್ಲಿ ಹೆಸರು ಗಳಿಸಿದ್ದರು. ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಪ್ರಕಟಿಸುತ್ತಿದ್ದ ಅಣ್ಣನ ಪುಸ್ತಕಗಳಿಗೆ ಲಕ್ಷ್ಮಣ್ ಚಿತ್ರ ಬಿಡಿಸುತ್ತಿದ್ದರು. ಅದಲ್ಲದೆ, ಸ್ಥಳೀಯ ಪತ್ರಿಕೆಗಳಿಗೆ ರಾಜಕೀಯ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದರು. ಈ ನಡುವೆ ಕುತೂಹಲಕರ ಘಟನೆಯೊಂದು ಘಟಿಸಿತು. ‘ಪಂಚ್’ ಪತ್ರಿಕೆಯ ಚಿತ್ರಗಳನ್ನು ನೋಡಿ ಲಕ್ಷ್ಮಣ್ ಪ್ರೇರೇಪಿತರಾದರೆ, ಆ ಪತ್ರಿಕೆಯ ವಿಡಂಬನಾತ್ಮಕ ವಸ್ತು-ವಿಷಯ, ಡಾ.ಎಂ ಶಿವರಾಂ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ಕೊರವಂಜಿ’ಗೆ ಸ್ಫೂರ್ತಿಯಾಗಿತ್ತು. ಅದೇ ‘ಕೊರವಂಜಿ’ ಪತ್ರಿಕೆಗೆ ಚಿತ್ರ ರಚಿಸಲು ಲಕ್ಷ್ಮಣ್’ರಿಗೆ ಅವಕಾಶ ಸಿಕ್ಕಿತ್ತು. ಆ ಚಿತ್ರಗಳು ಅವರಿಗೆ ಹೆಸರು ಮತ್ತು ಜನಪ್ರಿಯತೆಯನ್ನು ತಂದುಕೊಟ್ಟಿದ್ದವು.

RKL2

ಆ ಜನಪ್ರಿಯತೆಯ ಬಲದಿಂದ ದೆಹಲಿಗೆ ತೆರಳಿ, ‘ಹಿಂದೂಸ್ಥಾನ್ ಟೈಮ್ಸ್‘ ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಕೆಲಸಕ್ಕೆ ಸೇರಲು ಅರ್ಜಿ ಸಲ್ಲಿಸಿದ ಲಕ್ಷ್ಮಣ್’ಗೆ ಕೆಲಸ ಸಿಗಲಿಲ್ಲ. ಅಲ್ಲಿಂದ ಮುಂಬೈಗೆ ಬಂದ ಲಕ್ಷ್ಮಣ್, ‘ಫ್ರಿ ಪ್ರೆಸ್ ಜರ್ನಲ್’ನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಬಾಳ್ ಠಾಕ್ರೆ ಇವರ ಸಹೋದ್ಯೋಗಿಯಾದರು. ನಂತರ, 1951ರಲ್ಲಿ ‘ದ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಸೇರಿದ ಲಕ್ಷ್ಮಣ್, ಐವತ್ತು ವರ್ಷಗಳ ಕಾಲ ನಿರಂತರವಾಗಿ ಚಿತ್ರ ರಚಿಸಿದರು. ವ್ಯಂಗ್ಯಗೆರೆಗಳ ಮೂಲಕ ಕಾರ್ಟೂನ್ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದರು. ಶ್ರೀಸಾಮಾನ್ಯನನ್ನು ಸೃಷ್ಟಿಸಿ ಜಗತ್ತು ಅವನ ನೋವು-ಹಸಿವು-ಅವಮಾನದ ಬದುಕಿನತ್ತ ನೋಡುವಂತೆ ಮಾಡಿದರು. ಲಕ್ಷ್ಮಣ್’ರ ವ್ಯಂಗ್ಯನೋಟಕ್ಕೆ ಪ್ರಧಾನಿ ನೆಹರೂರಿಂದ ಹಿಡಿದು ಮನಮೋಹನ್ ಸಿಂಗ್ ವರೆಗಿನ ದೇಶ ಕಂಡ ಪ್ರಧಾನಿಗಳು, ಚಿತ್ರಜಗತ್ತಿನ ನಟ-ನಟಿಯರು, ಗಣ್ಯರು, ಕ್ರಿಕೆಟ್ ಆಟಗಾರರು, ಅಧಿಕಾರಿಗಳು ಸಿಕ್ಕಿದ್ದಾರೆ, ಸರಕಾಗಿದ್ದಾರೆ, ಗೇಲಿಗೊಳಗಾಗಿದ್ದಾರೆ. ಆದರೆ ಲಕ್ಷ್ಮಣ್ ಮೇಲೆ ಸಿಟ್ಟಾದವರಿಲ್ಲ. ಅದಕ್ಕೆ ಕಾರಣ, ‘ನನ್ನ ಸ್ಕೆಚ್ ಪೆನ್ ಕತ್ತಿಯಲ್ಲ, ನನ್ನ ಸ್ನೇಹಿತ’ ಎಂದಿದ್ದು, ಆ ಸ್ನೇಹಿತನಿಂದ ಸೃಷ್ಟಿಸಿದ ಚಿತ್ರಗಳು ಎಲ್ಲರ ಪ್ರೀತಿಗೂ ಪಾತ್ರವಾಗಿದ್ದು.

ಅಷ್ಟಕ್ಕೂ ಈ ಶ್ರೀಸಾಮಾನ್ಯ ಬೇರೆ ಯಾರೂ ಅಲ್ಲ, ಅಪ್ಪಟ ಕನ್ನಡಿಗ. ಮೈಸೂರಿನಲ್ಲಿ ಕಂಡ ಮುಖ. ಕಚ್ಚೆಪಂಚೆ, ಚೌಕಳಿ ಅಂಗಿ, ಪೊದೆ ಹುಬ್ಬು, ಚಪ್ಪಟೆ ಮೂಗು, ಪೊರಕೆ ಮೀಸೆ, ಹಳೆ ಕನ್ನಡಕ, ಚಪ್ಪಲಿ, ಆಗಾಗ ಕಾಲಮಾನಕ್ಕೆ ತಕ್ಕಂತೆ ಛತ್ರಿ- ಇದು ಶ್ರೀಸಾಮಾನ್ಯನ ಚಹರೆ. ಜೊತೆಗೆ ಕಣ್ಣುಗಳನ್ನು ಅರಳಿಸಿ, ಅಂದಿನ ವಿದ್ಯಮಾನಗಳನ್ನು ಬೆರಗಿನಿಂದ ದಿಟ್ಟಿಸಿ ನೋಡುವ ನೋಟ; ಎಲ್ಲ ಅರ್ಥವಾದರೂ ತುಟಿ ಬಿಚ್ಚದೆ, ಬೆಚ್ಚಿದ ಮುಖಭಾವದಿಂದಲೇ ಸಾವಿರಾರು ಸಾಲುಗಳನ್ನು ನೋಡುಗರ ಎದೆಗೆ ದಾಟಿಸುವ, ನಗಿಸುವ, ಅರ್ಥ ಮಾಡಿಸುವ ಸಾಮಾನ್ಯ ಭಾರತೀಯನ ಪಾತ್ರವೇ- ಆ ಕಾಮನ್ ಮ್ಯಾನ್. ‘ಈ ಕಾಮನ್ ಮ್ಯಾನ್ ಎಂಥೋನು ಅಂದ್ರೆ ಈತನಿಗೆ ಗಾಳಿ, ಬೆಳಕು, ನೀರು, ಊಟ, ಮನೆ ಇಲ್ಲದಿದ್ದರೂ ಬದುಕ್ತನೆ’ ಎಂದಿದ್ದ ಲಕ್ಷ್ಮಣ್, ಆ ಶ್ರೀಸಾಮಾನ್ಯನ ಮೂಲಕ ಭಾರತದ ರಾಜಕಾರಣವನ್ನು ನೋಡಿದ, ಇತರರೂ ಕಾದು ನೋಡುವಂತೆ ಮಾಡಿದ ಮಹಾನುಭಾವ.

ಲಕ್ಷ್ಮಣ್ ಅವರಿಗೆ ಗೆರೆಗಳೇ ಬದುಕಿನ ದಾರಿ ಮತ್ತು ಗುರಿ. ದಿನವಿಡೀ ಗೆರೆಗಳೊಂದಿಗೇ ಆಟವಾಡುತ್ತಿದ್ದ ಅವರು, ಅದನ್ನೇ ತಮ್ಮ ಮೂಲ ಅಭಿವ್ಯಕ್ತಿಯಂತೆ, ಅಸ್ತ್ರದಂತೆ, ಅಂಕುಶದಂತೆ ಬಳಸಿದರು. ಅವರು ರಚಿಸಿದ ಆ ಪಾಕೆಟ್ ಕಾರ್ಟೂನ್ ಗಳನ್ನು ‘ಟೈಮ್ಸ್’ ಪತ್ರಿಕೆ ಆದ್ಯತೆ ನೀಡಿ, ಮುಖಪುಟದಲ್ಲಿ ಪ್ರಕಟಿಸಿ ಗೌರವಿಸುತ್ತಿತ್ತು. ದೇಶ-ವಿದೇಶದ ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು. 2003ರಲ್ಲಿ ಅವರು ಪಾರ್ಶ್ವವಾಯುಗೆ ತುತ್ತಾಗಿ ಆರೋಗ್ಯ ಕೈಕೊಟ್ಟರೂ, ವಯಸ್ಸಾಗಿ ನಿವೃತ್ತರಾದರೂ ಟೈಮ್ಸ್ ಸಂಪಾದಕೀಯ ಮಂಡಳಿ ಅವರಿಂದ 2010ರವರೆಗೂ ಬರೆಸುತ್ತಲೇ ಇತ್ತು. ಅಷ್ಟೆ ಅಲ್ಲ, ಪತ್ರಿಕೆಗೆ 150 ವರ್ಷ ತುಂಬಿದಾಗ, ಲಕ್ಷ್ಮಣ್ ಅವರಿಗೆ ಅವರ ಪ್ರಿಯವಾದ ಕಾಮನ್ ಮ್ಯಾನ್ ನ 8 ಅಡಿಯ ಕಂಚಿನ ಪ್ರತಿಮೆಯನ್ನು ಕೊಡುಗೆಯಾಗಿ ನೀಡಿತ್ತು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೇವಲ ವ್ಯಂಗ್ಯಚಿತ್ರಗಳಷ್ಟನ್ನೇ ಬರೆಯುತ್ತಾ, ಇಷ್ಟು ದೀರ್ಘ ಕಾಲ ಅನಭಿಷಕ್ತ ದೊರೆಯಂತೆ ಮೆರೆದ ವ್ಯಕ್ತಿ ಮತ್ತೊಬ್ಬರಿಲ್ಲ. ಹಾಗೆಯೇ ಕಲಾವಿದರಾಗಿ, ಲೇಖಕರಾಗಿ, ಚಿಂತಕರಾಗಿ, ದಿಗ್ಗಜರ ಸಾಲಿಗೆ ಸೇರಿದ್ದು ಸಾಮಾನ್ಯ ಸಂಗತಿಯಲ್ಲ.

ಬಿಳಿ ಬಣ್ಣದ ಅರ್ಧ ತೋಳಿನ ಅಂಗಿ, ಕಪ್ಪು ಫ್ರೇಮಿನ ದೊಡ್ಡ ಕನ್ನಡಕದ ಲಕ್ಷ್ಮಣ್ ಅಭಿಮಾನಿಗಳ ಸಂಖ್ಯೆ ಅಸಂಖ್ಯ. ಅವರ ಮೊನಚು ಗೆರೆಗಳನ್ನು, ಆ ಗೆರೆಗಳಿಗೆ ಬಳಸುತ್ತಿದ್ದ ವ್ಯಂಗ್ಯಭರಿತ ಒಕ್ಕಣೆಗಳನ್ನು ಮೆಚ್ಚುತ್ತಿದ್ದವರು, ಅದರ ಕುರಿತು ಚರ್ಚಿಸುತ್ತಿದ್ದವರು, ಅವು ಉಂಟು ಮಾಡುವ ಪರಿಣಾಮವನ್ನು ಕಂಡವರು ಲಕ್ಷ್ಮಣ್ ಅಭಿಮಾನಿಗಳಾಗಿದ್ದರು. ವಿದ್ಯೆ, ಬುದ್ಧಿ, ವಿದ್ವತ್ತುಗಳಲ್ಲಷ್ಟೇ ಅಲ್ಲ, ಮೈಸೂರು ಐಯ್ಯರ್ ಕುಟುಂಬದ ಆರು ಮಕ್ಕಳಲ್ಲಿ, ಕೊನೆಯವರಾದ ಲಕ್ಷ್ಮಣ್, ನೋಡಲು ಕೂಡ ಲಕ್ಷಣವಾಗಿದ್ದರು. ಮನೆಯವರೆಲ್ಲರ ಅಚ್ಚುಮೆಚ್ಚಿನ ಹುಡುಗನಾಗಿದ್ದರು. ಕೆಲಸ ಸಿಕ್ಕಿ ಬದುಕು ಒಂದು ಹಂತಕ್ಕೆ ಬಂದು ನಿಂತಾಗ, ಭರತನಾಟ್ಯ ಕಲಾವಿದೆ, ಚಿತ್ರನಟಿ ಕುಮಾರಿ ಕಮಲರನ್ನು ಲಕ್ಷ್ಮಣ್ ವಿವಾಹವಾದರು. ಆ ಮದುವೆ ಮುರಿದುಬಿದ್ದು, ಮತ್ತೊಂದು ಮದುವೆಯಾದರು- ಎರಡನೇ ಹೆಂಡತಿ ಹೆಸರು ಕೂಡ ಕಮಲ. ಅವರು ಮಕ್ಕಳ ಪುಸ್ತಕ ಬರೆಯುವ ಲೇಖಕಿಯಾಗಿದ್ದರು. ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಕಮಲ ಮುಂಬೈನಲ್ಲಿ ವಾಸವಾಗಿದ್ದರೆ, ಲಕ್ಷ್ಮಣ್ ಪುಣೆಯಲ್ಲಿದ್ದರು. ಲಕ್ಮಣ್’ರ ಆತ್ಮೀಯರಾದ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಅವರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಳ್ಳುತ್ತಾ, ಕೈ ಗಡಿಯಾರ ಕಟ್ಟದ, ದಿನಚರಿ ಬರೆಯದ ಲಕ್ಷ್ಮಣ್, ಮೌನಕ್ಕೆ ಮಹತ್ವ ಕೊಡುತ್ತಿದ್ದರು. ಮೈಸೂರಿನ ಗೆಳೆಯರು ಸಿಕ್ಕಾಗ ಶಾಂಪೇನ್ ಗುಟಕರಿಸುತ್ತಿದ್ದರು ಎಂದು ಹಿಂದೊಮ್ಮೆ ಬರೆದದ್ದುಂಟು.

RKL3

ವಿಭಿನ್ನ ವ್ಯಕ್ತಿತ್ವದ ಲಕ್ಷ್ಮಣ್, ತಮ್ಮ ಚಿತ್ರಗಳಲ್ಲಿ ಕಾಗೆ ಮತ್ತು ವಿಮಾನವನ್ನು ಕಾಣಿಸುತ್ತಿದ್ದರು. ಅವುಗಳನ್ನು ಬಡವರು-ಶ್ರೀಮಂತರು, ದೇಸೀಯತೆ-ಆಧುನಿಕತೆ, ನೆಲ-ಮುಗಿಲುಗಳ ರೂಪಕದಂತೆ ಬಳಸುತ್ತಿದ್ದರು. ಎಲ್ಲರ ಅವಕೃಪೆಗೆ ಒಳಗಾಗಿದ್ದ ಕಾಗೆಯನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಮನುಷ್ಯರಿಗಿಂತಲೂ ಮಿಗಿಲಾದ ಬುದ್ಧಿಯುಳ್ಳ ಜಾಣ ಪಕ್ಷಿ ಎನ್ನುತ್ತಿದ್ದರು. ದೊಡ್ಡ ಸೈಜಿನ ಕ್ಯಾನ್ವಾಸ್ ನಲ್ಲಿ ಕಾಗೆಯ ಚಿತ್ರಗಳನ್ನು ರಚಿಸಿ, ಪ್ರತ್ಯೇಕ ಪ್ರದರ್ಶನ ಏರ್ಪಡಿಸಿದ್ದರು. ಲಕ್ಷ್ಮಣ್’ರ ಅಭಿಮಾನಿಗಳಲ್ಲಿ ಒಬ್ಬರಾದ ಶೋಭಾ ಡೇಯವರ ಮನೆಯ ಗೋಡೆಯಲ್ಲಿ ಕಾಗೆ ಕೃತಿ ಪ್ರಮುಖ ಸ್ಥಾನ ಪಡೆದಿತ್ತು. ಆಕೆ ಮನೆಯ ಕಾಕ್‌ಟೈಲ್ ಪಾರ್ಟಿಯೊಂದರಲ್ಲಿ, ಆಗಿನ ಹಿರಿಯ ಪೊಲೀಸ್ ಅಧಿಕಾರಿ ಜ್ಯುಲಿಯೊ ರೆಬೆರೋ ಮತ್ತು ಶೋಭಾ ಡೇಗೆ, ‘ಆ ಚಿತ್ರದಲ್ಲಿ ಎಷ್ಟು ಕಾಗೆಗಳಿವೆ, ಲೆಕ್ಕ ಹಾಕಿ’ ಎಂದು ಹೇಳಿ ಪಾರ್ಟಿಯ ಕೇಂದ್ರಬಿಂದುವಾಗಿದ್ದನ್ನು ಖುದ್ದು ಶೋಭಾ ಡೇ ದಾಖಲಿಸಿದ್ದುಂಟು. ಲಕ್ಷ್ಮಣ್’ರ ಕಾಗೆ ಪ್ರೀತಿಯನ್ನು ಕಂಡ ಅವರ ಅಭಿಮಾನಿ ರಾಜವರ್ಧನ್ ಪಾಟೀಲ್, ಅವರ ಒಟ್ಟು ವ್ಯಕ್ತಿತ್ವವನ್ನು ಕಟ್ಟಿಕೊಡುವ ‘ದಿ ಬ್ರೈನಿ ಕ್ರೌ’ ಎಂಬ ಸಾಕ್ಷಚಿತ್ರ ತಯಾರಿಸಿ, ಅವರಿಗೆ ಸಮರ್ಪಿಸಿದ್ದರು. ಇದೇ ರೀತಿ, ಜಾಗತಿಕ ಮಟ್ಟದಲ್ಲಿ, ಹಾಲಿವುಡ್ ಖ್ಯಾತ ನಿರ್ದೇಶಕ ಆಲ್‌ಫ್ರೆಡ್ ಹಿಚ್ಕಾಕ್ ಕೂಡ ಕಾಗೆ ಪ್ರಿಯನಾಗಿದ್ದ. ಅದರ ಮೇಲೆಯೇ ‘ದಿ ಬರ್ಡ್ಸ್’ ಎಂಬ ಚಿತ್ರ ಮಾಡಿ, ಆ ಕಾಲಕ್ಕೇ ಬೆರಗುಟ್ಟಿಸಿದ್ದ.

ಲಕ್ಷ್ಮಣರ ಬಗ್ಗೆ ಮಾತನಾಡುವಾಗ ‘ಮಾಲ್ಗುಡಿ ಡೇಸ್’ ಬಗ್ಗೆ ಹೇಳದೆ ಹೋದರೆ, ಅದು ಅಪೂರ್ಣವಾಗುತ್ತದೆ. ಅಣ್ಣ ಆರ್.ಕೆ ನಾರಾಯಣ್‌ರ ‘ಮಾಲ್ಗುಡಿ ಡೇಸ್’ ಪುಸ್ತಕದ ಕವರ್ ಪೇಜ್’ಗಾಗಿ ರಚಿಸಿದ ಚಿತ್ರಗಳು ಒಂದಕ್ಕಿಂತ ಒಂದು ಅದ್ಭುತ. ಅಷ್ಟೇ ಅಲ್ಲ, ಅದೇ ಕಥೆಯನ್ನು ಶಂಕರನಾಗ್ ಧಾರಾವಾಹಿ ಮಾಡುವಾಗ ಲಕ್ಷ್ಮಣ್ ಅವರ ರೇಖಾ ಚಿತ್ರಚಿತ್ರಗಳು ಟಿವಿ ಪರದೆ ಮೇಲೆ ಓಡುವುದು, ಅದಕ್ಕೆ ವೈದ್ಯನಾಥನ್‌ರ ಹಿನ್ನೆಲೆ ಸಂಗೀತ- ಮತ್ತೊಂದು ಬಗೆಯ ಪುಳಕವನ್ನುಂಟುಮಾಡುತ್ತಿದ್ದವು. ನೋಡುಗರನ್ನು ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದವು.

ಲಕ್ಷ್ಮಣರು ಚಿತ್ರಗಳ ಹೊರತಾಗಿ ಕಿರುಕತೆ, ಪ್ರಬಂಧ, ಪ್ರವಾಸ ಕಥನ, ಎರಡು ಕಾದಂಬರಿ ಸೇರಿದಂತೆ ಹತ್ತು ಕೃತಿಗಳನ್ನು ರಚಿಸಿದ್ದಾರೆ. ‘ದ ಟನಲ್ ಆಫ್ ಟೈಮ್’ ಎಂಬ ಆತ್ಮಕತೆಯನ್ನು ದಾಖಲಿಸಿದ್ದಾರೆ. ಲಕ್ಷ್ಮಣ್ ಮುಂಬೈನಲ್ಲಿ ಹೆಚ್ಚು ಕಾಲ ಕಳೆದ ಸಲುವಾಗಿ, ಅವರ ಆತ್ಮಕತೆ ಮರಾಠಿ ಭಾಷೆಯಲ್ಲಿ ‘ಲಕ್ಷ್ಮಣ ರೇಖಾ’ ಹೆಸರಿನಲ್ಲಿ ಪ್ರಕಟವಾಗಿದೆ. 1984ರಲ್ಲಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ, 2005ರಲ್ಲಿ ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ದೆಹಲಿ, ಮೈಸೂರು ಮತ್ತು ಮಹಾರಾಷ್ಟ್ರ ವಿವಿಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಅಂತಾರಾಷ್ಟ್ರೀಯ ಮಟ್ಟದ ‘ಟೈಮ್’ ಮ್ಯಾಗಜಿನ್ ಪ್ರತಿಭಾನ್ವಿತ ವ್ಯಂಗ್ಯಚಿತ್ರಕಾರ ಎಂದು ಗುರುತಿಸಿದೆ. ಸಿಎನ್‌ಬಿಸಿ ಟಿವಿ 18 ಜೀವಮಾನ ಸಾಧನೆಗಾಗಿ ಸತ್ಕರಿಸಿದೆ.

RKL1

ಮೈಸೂರಿನಲ್ಲಿ ಜನಿಸಿದ, ಬಾಲ್ಯ, ಯೌವನವನ್ನು ಕನ್ನಡನಾಡಿನಲ್ಲಿಯೇ ಕಳೆದ ಲಕ್ಷ್ಮಣ್, ಆ ನಂತರದ ಬದುಕಿಗಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಮುಂಬೈ ಮತ್ತು ಪುಣೆಯನ್ನು. ಜನವರಿ 26, 2015ರಲ್ಲಿ, 94ನೇ ವಯಸ್ಸಿನಲ್ಲಿ, ಪುಣೆಯಲ್ಲಿ ಕೊನೆಯುಸಿರೆಳೆದ ಲಕ್ಷ್ಮಣರ ಪಾರ್ಥಿವ ಶರೀರ ಅಂತ್ಯ ಸಂಸ್ಕಾರ ಕಂಡಿದ್ದು ಕೂಡ ಪುಣೆಯಲ್ಲಿಯೇ. ಅವರ ಪುಣೆ ಪ್ರೀತಿಯ ಕಾರಣಕ್ಕೆ, ಮಹಾರಾಷ್ಟ್ರ ಸರ್ಕಾರ ಮತ್ತು ಪುಣೆ ಮುನಿಸಿಪಾಲಿಟಿಯ ಸಹಯೋಗದಲ್ಲಿ ಬಾಲೆವಾಡಿಯಲ್ಲಿ ಆರ್.ಕೆ ಲಕ್ಷ್ಮಣ್’ಗಾಗಿಯೇ ಬೃಹತ್ ಮ್ಯೂಸಿಯಂ ನಿರ್ಮಿಸಲಾಗಿದೆ.

ಇದನ್ನು ಓದಿದ್ದೀರಾ?: ಕೆ ಸಿ ರಘು: ಮಾಸದ ನಗು, ಜ್ಞಾನದ ಬೆರಗು

ಲೋಕದ ಡೊಂಕನು ಗೆರೆಗಳ ಮೂಲಕ ತಿದ್ದಿದ, ತಿಳಿಹಾಸ್ಯದ ಮೂಲಕ ದೇಶದ ಜನರಿಗೆ ತಿಳಿವಳಿಕೆ ತುಂಬಿದ ಲಕ್ಷ್ಮಣ್’ರಲ್ಲಿ, ನಾನು ಎಂಬ ಅಹಂ ಇತ್ತು. ಅದಕ್ಕೆ ಶ್ರೇಷ್ಠತೆಯ ವ್ಯಸನ, ವ್ಯಂಗ್ಯ, ಉಡಾಫೆಯೂ ಜೊತೆಗೂಡಿತ್ತು. ಮನುಷ್ಯರೊಂದಿಗೆ ಬೆರೆಯದ ಗುಣದಿಂದಾಗಿ ಕೊನೆಯ ದಿನಗಳಲ್ಲಿ, ಅದರಲ್ಲೂ ಆರೋಗ್ಯ ಕೈ ಕೊಟ್ಟ ದಿನಗಳಲ್ಲಿ ನೋಡಿಕೊಳ್ಳುವವರಿಲ್ಲದೆ ಪರಿಸ್ಥಿತಿ ಕೆಟ್ಟದಾಗಿತ್ತು. ನಿಜಕ್ಕೂ ಆ ದಿನಗಳು ಲಕ್ಷ್ಮಣರ ಪಾಲಿಗೆ ದುಸ್ತರದ ದಿನಗಳಾಗಿದ್ದವು ಎಂದು ಹತ್ತಿರದಿಂದ ಬಲ್ಲ ಕರ್ನಾಟಕದ ಕಲಾವಿದರು ನೆನಪು ಮಾಡಿಕೊಳ್ಳುತ್ತಾರೆ. ಆದರೆ, ಅವರೊಬ್ಬ ಶ್ರೇಷ್ಠ ವ್ಯಂಗ್ಯಚಿತ್ರಕಾರ ಎನ್ನುವುದನ್ನು ಎರಡು ಮಾತಿಲ್ಲದೆ ಮೆಚ್ಚುತ್ತಾರೆ.

ದೇಶ ಕಂಡ ಅಪರೂಪದ ಅಸಲಿ ಕಲಾವಿದನಾದವನಿಗೆ ಇಷ್ಟೂ ಇರದಿದ್ದರೆ ಹೇಗೆ, ಅಲ್ಲವೇ?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗದಲ್ಲಿ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ: ಕುರಿಗಾಹಿಯಿಂದ ಧ್ವಜಾರೋಹಣ

ಇಡೀ ದೇಶಾದ್ಯಂತ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತದೆ. ಶಾಲೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ರಾಜಕೀಯ...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

Download Eedina App Android / iOS

X