ಇಡೀ ರಾಜ್ಯ ‘ಕರ್ನಾಟಕಕ್ಕೆ 50ರ ಸಂಭ್ರಮ’ವನ್ನು ಸಂಭ್ರಮಿಸುತ್ತಿದೆ. ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ನಡೆದಿದೆ. ಇದೇ ವೇಳೆ, ಪ್ರತ್ಯೇಕ ರಾಜ್ಯದ ಕೂಗು ಕೂಡ ಕೇಳಿಬಂದಿದ್ದು, ಪ್ರತ್ಯೇಕ ಬಾವುಟ ಹಾರಿಸಲು ಮುಂದಾದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿಯ ಸರ್ದಾರ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳಿ ಹಾಗೂ ಕಾರ್ಯಕರ್ತರು ಪ್ರತ್ಯೇಕ ರಾಜ್ಯದ ಬಾವುಟ ಹಾರಿಸಲು ಮುಂದಾಗಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಬೆಳಗ್ಗೆ ಕಲಬುರಗಿಯ ಕೋರ್ಟ್ ಸರ್ಕಲ್ ಬಳಿ ಜಮಾಯಿಸಿದ ಕಾರ್ಯಕರ್ತರು ಪ್ರತ್ಯೇಕ ರಾಜ್ಯದ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ್ದಾರೆ. ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಬಾವುಟ ಹಾರಿಸಲು ಮುಂದಾಗಿದ್ದಾರೆ. ಅವರನ್ನು ಪೊಲೀಸರು ಯುನೈಟೆಡ್ ಆಸ್ಪತ್ರೆಯ ಬಳಿ ತಡೆದಿದ್ದು, 20ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಸಿದ್ದಾರೆ.