ಕ್ರಿಕೆಟ್ ಎನ್ನುವ ಆಕಸ್ಮಿಕಗಳ ಆಟ, ನಿಜ. ಆದರೆ, ಮತ್ತೆ ಮತ್ತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಹೀಗಾಗುತ್ತಿರುವುದು ಯಾಕೆ ಮತ್ತು ಹಲವು ಶ್ರೇಷ್ಠ ಆಟಗಾರರಿದ್ದರೂ ದಕ್ಷಿಣ ಆಫ್ರಿಕಾ ಯಾಕೆ ಒಮ್ಮೆಯೂ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎನ್ನುವುದು ಕ್ರೀಡಾಭಿಮಾನಿಗಳ ಪ್ರಶ್ನೆ. ಮಹತ್ವದ ಪಂದ್ಯಗಳಲ್ಲಿ ಮಾನಸಿಕ ಒತ್ತಡ ನಿಭಾಯಿಸಲಾಗದೇ ಪಂದ್ಯ ಸೋಲುತ್ತಿದ್ದಾರೆಯೇ; ಇಲ್ಲವೇ ಅವೆಲ್ಲ ಆಕಸ್ಮಿಕಗಳೆ ಎನ್ನುವುದು ಒಂದು ದೊಡ್ಡ ಒಗಟಾಗಿದೆ.
ದಕ್ಷಿಣಾ ಆಫ್ರಿಕಾ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದಾಗಿತ್ತು. ಲೀಗ್ ಹಂತದಲ್ಲಿ 9 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಗೆದ್ದಿತ್ತು. ಬಲಿಷ್ಠ ಆಸ್ಟ್ರೇಲಿಯಾವನ್ನು ಕೂಡ ಸದೆಬಡಿದು, 134 ರನ್‌ಗಳ ಭಾರೀ ಅಂತರದಿಂದ ಗೆಲುವು ಸಾಧಿಸಿತ್ತು. ಫೇಸರ್ ಕ್ವಿಂಟನ್ ಡಿ ಕಾಕ್ ಅದ್ಭುತ ಫಾರ್ಮ್‌ನಲ್ಲಿದ್ದರು; ಪ್ರಸಕ್ತ ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ವ್ಯಾನ್ ಡರ್ ಡುಸೆನ್, ಮರ್ಕರಮ್ ಸೇರಿದಂತೆ ಹಲವು ಬ್ಯಾಟ್ಸ್‌ಮನ್‌ಗಳು ತಂಡ ಬೃಹತ್ ಮೊತ್ತ ಪೇರಿಸಲು ನೆರವಾಗುತ್ತಿದ್ದರು. ದಕ್ಷಿಣ ಆಫ್ರಿಕಾ ಶ್ರೀಲಂಕಾ ಮೇಲೆ 428 ರನ್ ಮತ್ತು ಇಂಗ್ಲೆಂಡ್ ವಿರುದ್ಧ 399 ರನ್ ಪೇರಿಸಿದ ಪರಿ ನೋಡಿದವರು ಈ ಬಾರಿ ಕಪ್ ಆಫ್ರಿಕಾ ತಂಡದ್ದೇ ಎಂದು ಭವಿಷ್ಯ ನುಡಿದಿದ್ದರು. ಆದರೆ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ಅವರ ವಿಶ್ವಕಪ್ ಕನಸು ಕಮರಿ ಹೋಯಿತು. ಕಪ್ ಗೆಲ್ಲುವ ನೆಚ್ಚಿನ ತಂಡ ಎನ್ನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ಆಟಗಾರರು ಹ್ಯಾಪು ಮೋರೆ ಹಾಕಿಕೊಂಡು ವಿಶ್ವಕಪ್‌ನಿಂದ ಹೊರನಡೆದರು.
ಲೀಗ್ ಹಂತದಲ್ಲಿ ಪ್ರಚಂಡವಾಗಿ ಆಡಿ, ಕಪ್ ಗೆಲ್ಲುವ ನೆಚ್ಚಿನ ತಂಡ ಎನ್ನುವ ಭಾವನೆ ಮೂಡಿಸಿ, ನಾಕೌಟ್ ಹಂತದಲ್ಲಿ ಹೀಗೆ ಸೋತು ನಿರ್ಗಮಿಸುವ ಪರಿಪಾಠ ದಕ್ಷಿಣ ಆಫ್ರಿಕಾಗೆ ಹೊಸದೇನಲ್ಲ. 24 ವರ್ಷಗಳ ಹಿಂದೆ, 1999ರ ವಿಶ್ವಕಪ್ ಸೆಮಿಫೈನಲ್ ಸೋಲಿನೊಂದಿಗೆ, ಶುರುವಾಗಿದ್ದು. ಆಗಲೂ ತಂಡವು ಲೀಗ್ ಹಂತದಲ್ಲಿ ಚೆನ್ನಾಗಿ ಆಡಿ ಸೆಮಿಫೈನಲ್ ಪ್ರವೇಶಿಸಿತ್ತು. ಪಂದ್ಯದಲ್ಲಿ ಚೇಸಿಂಗ್ ಮಾಡುತ್ತಿದ್ದ ದಕ್ಷಿಣ ಆಫ್ರಿಕಾಗೆ ಗೆಲ್ಲಲು 6 ಬಾಲ್‌ಗಳಲ್ಲಿ 9 ರನ್ ಬೇಕಿತ್ತು. ಲ್ಯಾನ್ಸ್ ಕ್ಲೂಸ್ನೆರ್ ಮತ್ತು ಅಲನ್ ಡೊನಾಲ್ಡ್ ಕ್ರೀಸಿನಲ್ಲಿದ್ದರು. ಒಂಬತ್ತು ವಿಕೆಟ್‌ಗಳು ಪತನವಾಗಿದ್ದವು. ಕೊನೆಯ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಕ್ಲೂಸ್ನೆರ್ ಎರಡು ಫೋರ್ ಬಾರಿಸಿದ್ದರು. ಅಲ್ಲಿಗೆ ಪಂದ್ಯ ಟೈ ಆಗಿತ್ತು. ಇನ್ನು ದಕ್ಷಿಣ ಆಫ್ರಿಕಾಗೆ ಗೆಲ್ಲಲು ಬೇಕಾಗಿದ್ದದ್ದು ನಾಲ್ಕು ಎಸೆತಗಳಿಂದ ಕೇವಲ ಒಂದೇ ಒಂದು ರನ್ ಅಷ್ಟೇ. ಸ್ಟ್ರೈಕ್‌ನಲ್ಲಿದ್ದ ಕ್ಲೂಸ್ನೆರ್ ಚೆಂಡನ್ನು ಹೊಡೆದು, ರನ್‌ಗಾಗಿ ಓಡಿಬಂದರು. ವಿಕೆಟ್‌ನ ಇನ್ನೊಂದು ಬದಿಯಿದ್ದ ಅಲನ್ ಡೊನಾಲ್ಡ್ ಕೊಂಚ ದೂರ ಓಡಿ ಗೊಂದಲಕ್ಕೊಳಗಾಗಿ ಮತ್ತೆ ವಾಪಸ್ ಬಂದು ಮತ್ತೆ ಓಡುವ ಹೊತ್ತಿಗೆ ರನ್ ಔಟ್ ಆಗಿದ್ದರು. ಲೀಗ್ ಹಂತದ ಗೆಲುವಿನ ಆಧಾರದ ಮೇಲೆ ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶ ಪಡೆದಿತ್ತು.
ಅತ್ಯಂತ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ದಕ್ಷಿಣ ಆಫ್ರಿಕಾ ಕೈಚೆಲ್ಲಿತ್ತು. ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ್ದ ಆಸ್ಟ್ರೇಲಿಯಾ ಎರಡನೇ ಬಾರಿಗೆ ವಿಶ್ವಕಪ್ ಗೆದ್ದಿತ್ತು. ತನ್ನಿಂದಾಗಿ ಹೀಗಾಯಿತಲ್ಲ ಎನ್ನುವ ಭಾವನೆ ದುಃಸ್ವಪ್ನದಂತೆ ಕಾಡಿ ಅಲನ್ ಡೊನಾಲ್ಡ್ ಖಿನ್ನತೆಗೆ ಒಳಗಾಗಿದ್ದರು. ಅದರಿಂದ ಹೊರಬರಲು ಅವರು ಮಾನಸಿಕ ತಜ್ಞರ ನೆರವು ಪಡೆಯಬೇಕಾಯಿತು.
2007ರಲ್ಲಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಮೊದಲ ಹತ್ತು ಓವರ್‌ಗಳಲ್ಲೇ ದಕ್ಷಿಣ ಆಫ್ರಿಕಾಗೆ ಆಘಾತ ನೀಡಿದ್ದರು. ಅದರ ಫಲವಾಗಿ ಕೇವಲ 149 ರನ್‌ಗಳಿಗೆ ಆಲೌಟ್ ಆಗಿದ್ದ ತಂಡ ಪಂದ್ಯ ಸೋತು ವಿಶ್ವಕಪ್‌ನಿಂದ ನಿರ್ಗಮಿಸಿತ್ತು. 2011ರಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು; 2015ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹಲವು ಕ್ಯಾಚ್‌ಗಳನ್ನು ಬಿಟ್ಟು ಮ್ಯಾಚ್ ಅನ್ನು ಕೈಚೆಲ್ಲಿದ್ದರು. ಇದು ಇವರ ಸೋಲಿನ ಚರಿತ್ರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೋಕದ ಅತ್ಯಂತ ಬಲಿಷ್ಠ ತಂಡಗಳ ಪೈಕಿ ಒಂದು; ಕ್ರಿಕೆಟ್‌ಗೆ ಹಲವು ಶ್ರೇಷ್ಠ ಆಟಗಾರರನ್ನು ನೀಡಿದ ತಂಡ. 467 ಪಂದ್ಯಗಳಲ್ಲಿ 998 ಬ್ಯಾಟ್ಸ್‌ಮನ್‌ಗಳನ್ನು ಡಿಸ್‌ಮಿಸ್ ಮಾಡಿದ ದಾಖಲೆಯ ಮೂಲಕ ನಂಬರ್ ಒನ್ ವಿಕೆಟ್ ಕೀಪರ್ ಎನ್ನಿಸಿಕೊಂಡಿರುವ ಮಾರ್ಕ್ ಬೌಚರ್, ಒಂದು ಎಕರೆ ಮೈದಾನವನ್ನು ಬೇಕಾದರೆ ಒಬ್ಬನೇ ಫೀಲ್ಡ್ ಮಾಡುತ್ತಾನೆ ಎಂದು ಕ್ರಿಕೆಟ್ ಪ್ರಿಯರು ತಮಾಷೆಯಾಗಿ ನೆನಪಿಸಿಕೊಳ್ಳುವ ಅದ್ಭುತ ಫೀಲ್ಡರ್ ಜಾಂಟಿ ರೋಡ್ಸ್, ಮಿಂಚಿನ ವೇಗದ ಬೌಲರ್ ಅಲನ್ ಡೊನಾಲ್ಡ್, ಕ್ರಿಕೆಟ್ ಚರಿತ್ರೆಯಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪೈಕಿ ಒಬ್ಬರೆನಿಸಿದ ಹಶೀಮ್ ಆಮ್ಲಾ, ಕೇವಲ 31 ಬಾಲ್‌ಗಳಲ್ಲಿ ಸೆಂಚುರಿ ಸಿಡಿಸಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆ ಹೊಂದಿರುವ ಸ್ಫೋಟಕ ಬ್ಯಾಟ್ಸ್‌ಮನ್ ಎ ಬಿ ಡಿವಿಲಿಯರ್ಸ್, ಅತ್ಯುನ್ನತ ಮಟ್ಟದ ಆಲ್‌ರೌಂಡರ್ ಜಾಕ್ ಕಾಲಿಸ್, ವೇಗದ ಬೌಲರ್ ಶಾನ್ ಪೊಲಾಕ್.. ಹೀಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೋಕ ಎಂದೆಂದೂ ಮರೆಯಲಾಗದ ಪ್ರತಿಭಾವಂತ ಆಟಗಾರರ ತವರು ನೆಲ. ಅನೇಕ ದಾಖಲೆಗಳು ಈ ಆಟಗಾರರ ಹೆಸರಿನಲ್ಲಿವೆ. ಆದರೆ, ವೈಯಕ್ತಿಕವಾದ ಇಂಥ ದಾಖಲೆಗಳು ದೊಡ್ಡ ಟೂರ್ನಮೆಂಟ್‌ಗಳನ್ನು ಜಯಿಸಲು ಅವರಿಗೆ ನೆರವಾಗುತ್ತಿಲ್ಲ. ಹೀಗಾಗಿಯೇ ಮಹತ್ವದ ಪಂದ್ಯಗಳನ್ನು ಸೋಲುವ ಮೂಲಕ ಚೋಕರ್ಸ್ ಎನ್ನುವ ಹಣೆಪಟ್ಟಿ ಹಚ್ಚಿಕೊಂಡಿದ್ದಾರೆ. ಅದರಿಂದ ಕಳಚಿಕೊಳ್ಳಲು ಅವರಿಗೆ ಸಾಧ್ಯವೇ ಆಗುತ್ತಿಲ್ಲ.
ಕ್ರಿಕೆಟ್ ಎನ್ನುವ ಆಕಸ್ಮಿಕಗಳ ಆಟ, ನಿಜ. ಆದರೆ, ಮತ್ತೆ ಮತ್ತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಹೀಗಾಗುತ್ತಿರುವುದು ಯಾಕೆ ಮತ್ತು ಹಲವು ಶ್ರೇಷ್ಠ ಆಟಗಾರರಿದ್ದರೂ ದಕ್ಷಿಣ ಆಫ್ರಿಕಾ ಯಾಕೆ ಒಮ್ಮೆಯೂ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎನ್ನುವುದು ಕ್ರೀಡಾಭಿಮಾನಿಗಳ ಪ್ರಶ್ನೆ. ಮಹತ್ವದ ಪಂದ್ಯಗಳಲ್ಲಿ ಮಾನಸಿಕ ಒತ್ತಡ ನಿಭಾಯಿಸಲಾಗದೇ ಪಂದ್ಯ ಸೋಲುತ್ತಿದ್ದಾರೆಯೇ, ಇಲ್ಲವೇ ಅವೆಲ್ಲ ಆಕಸ್ಮಿಕಗಳೇ ಎನ್ನುವುದು ಒಂದು ದೊಡ್ಡ ಒಗಟಾಗಿದೆ.
ದಕ್ಷಿಣ ಆಫ್ರಿಕಾದ ಕ್ರಿಕೆಟ್‌ಗಂಟಿದ ದೊಡ್ಡ ರೋಗವೊಂದಿದೆ; ಅದು ವರ್ಣಭೇದ. ಮೊದಲು ಈ ದೇಶದಲ್ಲಿ ಶ್ವೇತ ವರ್ಣೀಯರು ಮಾತ್ರವೇ ಕ್ರಿಕೆಟರ್‌ಗಳಾಗುವುದಕ್ಕೆ ಸಾಧ್ಯವಿತ್ತು. 1888ರಿಂದ 1994ರವರೆಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಕೇವಲ ಶ್ವೇತ ವರ್ಣೀಯರೇ ಇದ್ದರು. ವರ್ಣಭೇದ ನೀತಿ ಅನುಸರಿಸಿದ ಕಾರಣಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ 21 ವರ್ಷಗಳ ಕಾಲ ನಿಷೇಧಿಸಲಾಗಿತ್ತು. 1991ರಿಂದ, ದೇಶದಲ್ಲಿ ವರ್ಣಭೇದ ನೀತಿ ಕೊನೆಗೊಂಡ ನಂತರ, ತಂಡವು ಮತ್ತೆ ವಿಶ್ವ ಕ್ರಿಕೆಟ್‌ಗೆ ಹಿಂದಿರುಗಿತ್ತು. ಕರಿಯರನ್ನು ತಂಡದಿಂದ ಹೊರಗಿಡುವುದು ಅಷ್ಟೇ ಅಲ್ಲ, ಕರಿಯರ ವಿರುದ್ಧ ತಾವು ಪಂದ್ಯಗಳನ್ನು ಆಡುವುದಿಲ್ಲ ಎಂದು ಕೂಡ ನಿರ್ಣಯ ತೆಗೆದುಕೊಂಡಿದ್ದ ದೇಶ ಅದು.
ಈ ಸುದ್ದಿ ಓದಿದ್ದೀರಾ: ವಿಶ್ವಕಪ್: ಕ್ರಿಕೆಟ್ ಲೋಕದ ಕ್ರಿಸ್ತ; ಕಿರೀಟವಿಲ್ಲದ ದೊರೆ ಕೇನ್ ವಿಲಿಯಮ್ಸನ್
ದಕ್ಷಿಣ ಆಫ್ರಿಕಾದಲ್ಲಿ ಹಿಂದೆ ಫ್ರಾಂಕ್ ರೋರೋ ಎನ್ನುವ ಮಹಾ ಪ್ರತಿಭಾವಂತನಾದ ಕ್ರಿಕೆಟರ್ ಇದ್ದರು. 1934 ಮತ್ತು 1951ರ ನಡುವೆ ಅವರು ದೇಶೀಯ ಕ್ರಿಕೆಟ್‌ನಲ್ಲಿ 100 ರನ್‌ಗಳ ಸರಾಸರಿಯಲ್ಲಿ ಇಪ್ಪತ್ತು ಶತಕಗಳನ್ನು ದಾಖಲಿಸಿದ್ದರು. ಅವರು ನೂರು ಶತಕಗಳನ್ನು ಹೊಡೆದ ಮೊದಲ ದಕ್ಷಿಣ ಆಫ್ರಿಕಾ ಆಟಗಾರ. ಅವರನ್ನು ‘ಡಸ್ಟೀ ಬ್ರಾಡ್ಮನ್’ ಎಂದು ಕರೆಯಲಾಗುತ್ತಿತ್ತು. ಆದರೆ, ಕಪ್ಪು ವರ್ಣೀಯ ಎನ್ನುವ ಕಾರಣಕ್ಕೆ ಫ್ರಾಂಕ್ ರೋರೋ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶವನ್ನೇ ನೀಡಿರಲಿಲ್ಲ.
ಹೀಗಾಗಿ ಅವರು ಜೀವಮಾನದುದ್ದಕ್ಕೂ ದೇಶೀಯ ಕ್ರಿಕೆಟ್ ಆಟಗಾರರಾಗಿಯೇ ಉಳಿದಿದ್ದರು. ಈಗಲೂ ದಕ್ಷಿಣ ಆಫ್ರಿಕಾ ತಂಡದಲ್ಲಿ ಜನಾಂಗೀಯ ತಾರತಮ್ಯ ಇದೆ ಎನ್ನುವ ಆರೋಪಗಳಿವೆ. ಗ್ರೇಮ್ ಸ್ಮಿತ್, ಮಾರ್ಕ್ ಬೌಚರ್, ಕ್ವಿಂಟನ್ ಡಿ ಕಾಕ್‌ರಂಥ ಆಟಗಾರರ ವಿರುದ್ಧ ಜನಾಂಗೀಯ ತಾರತಮ್ಯದ ಆರೋಪಗಳು ಕೇಳಿಬಂದಿವೆ. ಇದೇ ಕಾರಣಕ್ಕೋ ಏನೋ, ಕರಿಯ ಆಟಗಾರ ತೆಂಬಾ ಬವುಮಾ ಅವರಿಗೆ ಈ ಬಾರಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ನೀಡಲಾಗಿತ್ತು. ಇದೀಗ ಸೆಮಿಫೈನಲ್‌ನಲ್ಲಿ ಸೋತಿರುವ ತಂಡವು 2023ರ ವಿಶ್ವಕಪ್‌ನಿಂದ ನಿರ್ಗಮಿಸಿದೆ. ಇದೆಲ್ಲದರ ನಡುವೆಯೂ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೇಷ್ಠ ತಂಡಗಳಲ್ಲೊಂದು ಎನ್ನುವುದನ್ನು ನಾವು ಮರೆಯಬಾರದು.