ವಾರದ ಕವಿತೆ – ವಾಣಿ ಸತೀಶ್ | ಮೈ ನೆರೆದ ಆ ದಿನ

Date:

Advertisements

ಜಾವ ಐದರ ಗಳಿಗೆ ಸವಿಗನಸ ನಿದ್ದೆ
ಗೆಳತಿಯರ ಕೂಡಾಟ ನಿದ್ದೆಯಲೂ
ಕೇಕೆ ಕನವರಿಕೆ

ಇದ್ದಕ್ಕಿದ್ದಂತೆ ಸೊಂಟ ಹೊಟ್ಟೆಗಳಲ್ಲಿ
ಚುಳ್ಳನೇ ಚಳುಕೆದ್ದು
ನಿದ್ದೆಯಲೇ ನರಳಿದಳು
ಹದಿಮೂರರ ಪೋರಿ

ಅವ್ವನ ಎದೆ ಮೇಲೆ ಏರಿದ್ದ
ಕಾಲ ಸಂದುಗಳಿಂದ
ತಣ್ಣನೆಯ ಹರಿವು
ಬೆಚ್ಚಿ ಕಣ್ಣು ತೆರೆದಳು ಬಾಲೆ
ಒದ್ದೊದ್ದೆ ಉಡುಪು ಒಳಗೆಲ್ಲ

Advertisements

ಓಡಿದಳು ಬಚ್ಚಲಿಗೆ
ಒಳಗೆಲ್ಲ ಕೆಂಪಾಗಿ
ಕಸಿವಿಸಿಯ ಎದೆ ಹೊತ್ತು
ಬಂದು ನಿಂತಳು ಹೆತ್ತವ್ವನೆದುರು

ತನ್ನ ಒಂಟಿ ಬದುಕಿನ ಸುತ್ತ
ಹರಿದಾಡೊ ಕಾಮುಕ ಕಣ್ಣುಗಳ
ಮೆಟ್ಟಿ ನಿಲ್ಲುವುದರಲ್ಲೇ
ಹೈರಾಣವಾಗಿದ್ದ ಅವ್ವ
ನಿದ್ದೆ ಮೆತ್ತಿದ ಕಣ್ಣ ತೆರೆದು
ದಿಂಬಿಗೆ ಮೊಗ ಒತ್ತಿ ಬಿಕ್ಕಿದಳು

ಧರ್ಮಶಾಸ್ತ್ರಕ್ಕೆ ಕೊರಳೊಡ್ಡಿ
ಕಟ್ಟಿಕೊಂಡವನು
ತನ್ನ ಒಳ-ಹೊರಗುಗಳ
ಹಕ್ಕಿನಲೇ ದೋಚಿ
ಎದೆಗೂಡ ಕನಸಿಗೆ ಕೆಂಡದ ಮಳೆ
ಸುರಿದು ಮಕರಂದವರಸಿ
ಹಾರಿಹೋದುದ ನೆನೆದು ಬಿಕ್ಕಿದಳು

ಕೊಟ್ಟವಳು ಕುಲಕೊರಗು
ಎಂದು ಹೊರಗಿಟ್ಟ
ಮನೆ ತುಂಬಿ ತುಳುಕುವ
ಅಣ್ಣ ತಮ್ಮರ ನೆನೆದು
ಬಿಕ್ಕಿದಳು

ಆಳಿಗೊಂದು ಕಲ್ಲೆಸೆದು
ಮೋಜಾಟ ಆಡುವ
ಕಾರುಣ್ಯ ಸತ್ತ ಸಮುದಾಯ
ನೆನೆದು ಬಿಕ್ಕಿದಳು

ಬಿಕ್ಕಿದಳು ಬಿಕ್ಕಿಯೇ ಬಿಕ್ಕಿದಳು
ಘಳಿಗೆಗೊಂದೊಂದು ನಿಟ್ಟುಸಿರ ಬಿಟ್ಟು

ಎಷ್ಟೋ ಸಮಯದ ಬಳಿಕ
ಅವ್ವ ಮೇಲೆದ್ದಳು
ಯುದ್ದಕ್ಕೆ ಸಜ್ಜಾದ ಯೋಧಳಂತೆ

ಬಿಟ್ಟ ನಿಟ್ಟುಸಿರನ್ನೆಲ್ಲ
ನಗುವಾಗಿ ಅರಳಿಸಿ
ಮೈ ದಡವಿ ಹೇಳಿದಳು
‘ನೀನು ದೊಡ್ಡವಳಾದೆ…’
ಹಾಲನ್ನ ನೀಡಿ ಹೂ ಮುತ್ತನಿಟ್ಟಳು

ಮನೆಯ ತುಂಬಿತ್ತು
ಋತುಮತಿಯ ಆರೈಕೆ, ಸಂಭ್ರಮ
ಕಾಸಿಗೆ ಕಾಸು ಜೋಡಿಸಿ
ತುಪ್ಪ, ಕೊಬ್ಬರಿ, ಚಿಗಳಿ, ಬೆಲ್ಲವ ತಂದು
ಹಾಲ್ಗಡಲಲ್ಲಿ ಮುಳುಗಿಸಿ
ಮೇಲೆತ್ತಿದಳು

ಮೊಗ್ಗ ಹೂವಾಗಿಸಿ
ಕಾದೇ ಕಾದಳು ಅವ್ವ
ಹೂತಿಟ್ಟ ನಿಧಿಯ
ಸರ್ಪ ಕಾದಂತೆ…

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಸತೀಶ್
ವಾಣಿ ಸತೀಶ್
ತುಮಕೂರು ಜಿಲ್ಲೆಯ ತಿಪಟೂರಿನವರು. ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ನೀನಾಸಂನಿಂದ ರಂಗ ಶಿಕ್ಷಣ. ಸದ್ಯ ತಿಪಟೂರಿನ 'ಭೂಮಿ ಥಿಯೇಟರ್' ಮತ್ತು 'ಶ್ರೀ ನಟರಾಜ ನೃತ್ಯಶಾಲೆ'ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಟ್ರಾವೆಲ್ ಏಜೆಂಟ್‌ಗಳಿಗೆ ಟ್ರಂಪ್‌ ಸರ್ಕಾರದ ವಿಸಾ ನಿರ್ಬಂಧ; ಇನ್ನು ಮುಂದೆ ಅಮೆರಿಕ ಪ್ರವಾಸ ಕಷ್ಟವೆ?

ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್‌...

ವಿದೇಶಿ ಮಾಧ್ಯಮಗಳು ಕಂಡಂತೆ ಭಾರತ – ಪಾಕ್‌ ಸಂಘರ್ಷ

ಭಾರತ - ಪಾಕ್‌ ಸಂಘರ್ಷದ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಲವು ಮಾಧ್ಯಮಗಳು...

ನಾವು ಪಾಕಿಸ್ತಾನಿಯರಲ್ಲ ಎಂದ ಬಲೂಚಿಗಳು; ಏನಿದು ನೆರೆಯ ದೇಶದ ಬಲೂಚಿಸ್ತಾನ ಹೋರಾಟ?

ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶದ ಇತರ...

Download Eedina App Android / iOS

X