ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ರಾಜಕೀಯದಲ್ಲಿ 50 ವರ್ಷಗಳನ್ನು ಪೂರೈಸಿದ್ದು, ಅದರ ಗೌರವಾರ್ಥ ಕಾಂಗ್ರೆಸ್ ಪ್ರಕಟಿಸಿರುವ ‘MALLIKARJUN KHARGE: Political Engagement with Compassion, Justice and Inclusive Development’ಎಂಬ ವಿಶೇಷ ಅಭಿನಂದನಾ ಸಂಪುಟವನ್ನು ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ನವ ದೆಹಲಿಯ ಜವಾಹರ್ ಭವನದಲ್ಲಿ ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸೋನಿಯಾ ಗಾಂಧಿ, “ರಾಜಕೀಯದಲ್ಲಿ 50 ವರ್ಷಗಳು ಸುದೀರ್ಘ ಅವಧಿ. ಮಲ್ಲಿಕಾರ್ಜುನ ಖರ್ಗೆ ಅವರು ಅದರ ಅನಿರೀಕ್ಷಿತ ಹಾದಿಯಲ್ಲಿ ಸಾಗಿ ತಮ್ಮ ರಾಜಕೀಯ ವೃತ್ತಿಜೀವನದುದ್ದಕ್ಕೂ ಎತ್ತರಕ್ಕೆ ಏರುತ್ತಲೇ ಇದ್ದರು. ಒಮ್ಮೆಯೂ ಅವರು ತಮ್ಮ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ, ಬಡವರ ವಿಚಾರದಿಂದ ದೂರ ಸರಿಯಲಿಲ್ಲ. ರಾಜಕೀಯ ಯುದ್ಧದಲ್ಲಿ ಗೆಲ್ಲಲು ಅವರು ಒಮ್ಮೆಯೂ ಘನತೆ ಮತ್ತು ನಡವಳಿಕೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಅದಕ್ಕಾಗಿಯೇ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ” ಎಂದು ಹೇಳಿದರು.
“ಸಾಂವಿಧಾನಿಕ ಮತ್ತು ಸಾಂಸ್ಥಿಕ ಮೌಲ್ಯಗಳ ಹೊರತಾಗಿಯೂ ಸ್ವಾತಂತ್ರ್ಯದ ನಂತರ ಭಾರತ ಸಾಧಿಸಿದ್ದ ಎಲ್ಲ ಸಂಸ್ಥೆಗಳು, ವ್ಯವಸ್ಥೆಗಳು ಮತ್ತು ತತ್ವಗಳನ್ನು ಅಧಿಕಾರದಲ್ಲಿರುವವರು ಬುಡಮೇಲು ಮಾಡುತ್ತಿರುವ ನಿರ್ಣಾಯಕ ಘಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ” ಎಂದು ಸೋನಿಯಾ ಗಾಂಧಿ ತಿಳಿಸಿದರು.
ಅಭಿನಂದನಾ ಸಂಪುಟದ ಸಂಪಾದಕ ಸುಖದೇವ್ ಥೋರಟ್, “ಇದು ಖರ್ಗೆ ಎಂಬ ಒಬ್ಬ ವ್ಯಕ್ತಿಯ ಆಕರ್ಷಕ ಕಥೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಏರುವ ಮುನ್ನ ರಾಜಕೀಯ ನಾಯಕ, ಸಮಾಜ ಸುಧಾರಕ ಮತ್ತು ಶಿಕ್ಷಣ ತಜ್ಞರಾಗಿ ಛಾಪು ಮೂಡಿಸಿದವರ ಕತೆ” ಎಂದು ಹೇಳಿದರು.
ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯವರ ದೊಡ್ಡ ಗುಣವೆಂದರೆ ಅವರ ಜೀವನ ಮತ್ತು ಕೆಲಸದಲ್ಲಿ ದ್ವೇಷದ ಕುರುಹು ಇಲ್ಲ. ಇದು ಅವರ ಜೀವನದ ದೊಡ್ಡ ಪ್ರಾಯೋಗಿಕ ಸಾಧನೆಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಅವಶೇಷಗಳು ಸುರಂಗದೊಳಗೆ ಬಿದ್ದಾಗ ಏನಾಯಿತು?: ಘಟನೆ ಬಿಚ್ಚಿಟ್ಟ ಸಿಲುಕಿಕೊಂಡಿದ್ದ ಕಾರ್ಮಿಕ
ಆರ್ಜೆಡಿ ನಾಯಕ ಮನೋಜ್ ಝಾ ಮಾತನಾಡಿ, ಅನೇಕ ಜನರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ನಮ್ಮ ದೈನಂದಿನ ಜೀವನದಲ್ಲಿ ನಾವು ಅದನ್ನು ಅಭ್ಯಾಸ ಮಾಡುವುದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಎಲ್ಲರ ಮಾತು ಕೇಳುತ್ತಿದ್ದರು. ನಾನು ಅವರನ್ನು ಮೊದಲು ಭೇಟಿಯಾದಾಗ ಗಮನಿಸಿದ್ದು ಇದನ್ನೇ. ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯದ ಕಲ್ಪನೆಗೆ ಅವರ ಬದ್ಧತೆಯನ್ನು ಎಲ್ಲರು ಗುರುತಿಸಿದ್ದಾರೆ. ಇದು ಅವರ ಜೀವಂತ ವಾಸ್ತವ ಮತ್ತು ಕಳೆದ ಐದು ದಶಕಗಳ ರಾಜಕೀಯ ಅನುಭವದಿಂದ ಹೊರಹೊಮ್ಮುತ್ತದೆ” ಎಂದು ಹೇಳಿದ್ದಾರೆ.
ಡಿಎಂಕೆ ಸಂಸದ ಟಿ ಆರ್ ಬಾಲು ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು 50 ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್‌ಗೆ ಸೇವೆ ಸಲ್ಲಿಸಿದ್ದಾರೆ. ಒಂಬತ್ತು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಂಸದರಾಗಿ ದಾಖಲೆ ಬರೆದಿದ್ದಾರೆ. ಅಂತಹ ಎತ್ತರವನ್ನು ಸಾಧಿಸಿದ ಕಾಂಗ್ರೆಸ್‌ನ ಅಧ್ಯಕ್ಷರಾದ ಖರ್ಗೆ ಅವರನ್ನು ನಾನು ಅಭಿನಂದಿಸುತ್ತೇನೆ” ಎಂದಿದ್ದಾರೆ.
ಸಮಾರಂಭದ ಕೊನೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಒಬ್ಬ ಸಾಮಾನ್ಯ ಪಕ್ಷದ ಕಾರ್ಯಕರ್ತನಾಗಿ, ಭಾರತದ ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನದಿಂದಾಗಿ ನಾನು ಈ ಸ್ಥಾನವನ್ನು ತಲುಪಲು ಸಾಧ್ಯವಾಯಿತು. ಪ್ರಜಾಪ್ರಭುತ್ವ ಇಲ್ಲದಿದ್ದರೆ ದೇಶದಲ್ಲಿ ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳನ್ನು ಪಡೆಯಲು ಸಾಮಾನ್ಯ ಜನರಿಗೆ ಅವಕಾಶವಿರುವುದಿಲ್ಲ. ಇಂದು ಸಂವಿಧಾನ ಮತ್ತು ನಮ್ಮ ಸಂಸದೀಯ ಪ್ರಜಾಪ್ರಭುತ್ವ ಎರಡೂ ಅಪಾಯದಲ್ಲಿದೆ ಎಂಬ ಅಂಶವನ್ನು ನಾನು ನಿರ್ಲಕ್ಷಿಸಲಾರೆ. ಲೇಖಕರ ಪ್ರಯತ್ನಗಳು ಮತ್ತು ಈ ಪುಸ್ತಕದ ಮೂಲಕ ಅವರು ತೋರಿಸಿದ ಗೌರವ, ಪ್ರೀತಿಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಪುಸ್ತಕಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದರು.