- ಬ್ರಾಹ್ಮಣರು ಯಾವುದೇ ಹೋರಾಟ ಮಾಡದೇ 10 % ಮೀಸಲಾತಿ ಪಡೆದಿದ್ದಾರೆ
- ಯಾವುದೇ ಅಡೆತಡೆಗಳು ಬಂದರೂ ಸಿದ್ದರಾಮಯ್ಯ ಅವರು ಕಾಂತರಾಜ ವರದಿ ಜಾರಿಗೆ ತರಲೇಬೇಕು
“2013ರಿಂದ 2018ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿ ಬಡವರ, ಶೋಷಿತರ ಪಾಲಿಗೆ ಸುವರ್ಣ ಯುಗ, ಆ ಯುಗ ಇನ್ನು ಬರಲಾರದು ಎಂದು ಅನ್ನಿಸುತ್ತಿದೆ. ಸಿದ್ದರಾಮಯ್ಯ ಅವರಿಗೆ ಆಗ ಇದ್ದ ಸ್ವಾತಂತ್ರ್ಯ ಈಗ ಇಲ್ಲ” ಎಂದು ಮಾಜಿ ಸಚಿವ ಎಚ್ ಆಂಜನೇಯ ಹೇಳಿದರು.
ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಹಾಗೂ ಐಎಚ್‌ಎಸ್ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿ ಪಿ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
“ಎಚ್.ಎಂ. ರೇವಣ್ಣ ಅಥವಾ ನಾನು ಇಂತಹವರನ್ನು ಅಧ್ಯಕ್ಷ ಮಾಡಿ ಎಂದು ಹೇಳಿದರೆ ಸಾಕು ಮರುದಿನ ಬೆಳಿಗ್ಗೆ ಆದೇಶ ಬರುತ್ತಿತ್ತು. ಬಹಳಷ್ಟು ಕ್ರಾಂತಿಕಾರಕ ಬದಲಾವಣೆಗಳು ಆಗ ಆಗಿತ್ತು. ಈಗ 136 ಶಾಸಕರು ಗೆದ್ದು ಬಂದಿದ್ದಾರೆ. ಬೇರೆ ಬೇರೆ ಒತ್ತಡಗಳಿವೆ. ಈಗ ನಾವು ಹೇಳಿದ ಕೆಲಸಗಳು ಆಗುವ ಬಗ್ಗೆ ಸಂಶಯವಿದೆ. ಸರ್ಕಾರ ಬಂದು ಆರು ತಿಂಗಳಾಯಿತು. ಚುನಾವಣೆಗೆ ಮೊದಲು ಕಾಂತರಾಜ ಆಯೋಗದ ವರದಿ ಪಡೆಯುವುದಾಗಿ ಹೇಳಿದ್ದರು. ಈಗ ಅದಕ್ಕೆ ಹಲವು ಅಡೆತಡೆಗಳು ಬಂದಿವೆ. ಆದರೂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಪರವೇ ಇದ್ದಾರೆ. ಅವರು ಬಡವರ ಶೋಷಿತರ ಕೈ ಹಿಡಿಯುತ್ತಾರೆ” ಎಂದರು.
“ಮೀಸಲಾತಿ ಪಡೆಯದ ಜಾತಿ ಯಾವುದಿದೆ? ಎಲ್ಲಾ ಜಾತಿಗಳಿಗೂ ಮೀಸಲಾತಿ ಇದೆ. ಬ್ರಾಹ್ಮಣರಿಗೂ ಮೀಸಲಾತಿ ಇದೆ. ಅವರು ಹೋರಾಟ ಮಾಡದೇ 10 % ಮೀಸಲಾತಿ ಪಡೆದಿದ್ದಾರೆ. 80ರ ದಶಕದಲ್ಲಿ ದೇವರಾಜ ಅರಸು ಅವಧಿಯಲ್ಲಿ ಹಾವನೂರು ಆಯೋಗದ ವರದಿಯನ್ನು ಜಾರಿ ಮಾಡಲೂ ಬಿಡಲಿಲ್ಲ. ಆದರೂ ಅವರು ವರದಿಯನ್ನು ಬಿಡುಗಡೆ ಮಾಡಿದರು.
ಈಗ ಕಾಂತರಾಜ ಸಮಿತಿ ವರದಿಯ ಬಗ್ಗೆಯೂ ಅಪಸ್ವರ ಎತ್ತುತ್ತಿದ್ದಾರೆ. ನಾನು ಮಾದಿಗ, ಕಾಂತರಾಜ ಅವರು ಕುರುಬ. ತಮ್ಮ ತಮ್ಮ ಜಾತಿಯ ಸಂಖ್ಯೆಯನ್ನು ಹೆಚ್ಚು ಬರೆದಿದ್ದಾರೆ ಎಂದು ಕೆಲವರು ಸುಳ್ಳು ಹಬ್ಬಿಸುತ್ತಿದ್ದಾರೆ. ಒಂದೂವರೆ ಲಕ್ಷ ಗಣತಿದಾರರು ಮಾಹಿತಿ ಸಂಗ್ರಹಿಸಿದ್ದಾರೆ. ಮನೆ ಮನೆಗೆ ಹೋಗಿ ವಾಸ್ತವಾಂಶ ಮಾಹಿತಿ ಪಡೆದಿದ್ದಾರೆ. ಎಲ್ಲ ಮಾಹಿತಿ ಕಂಪ್ಯೂಟರ್‌ನಲ್ಲಿ ಭದ್ರವಾಗಿದೆ. ಬಹಳ ವೈಜ್ಞಾನಿಕ ವರದಿ, ಪಾರದರ್ಶಕವಾಗಿದೆ. ಪ್ರೊಸೀಡಿಂಗ್ಸ್ ಆಗಿದೆ. ಜಾರಿ ಮಾಡಲು ಉಪಸಮಿತಿ ಮಾಡಿ ಅದರಲ್ಲಿ ಏನು ಕೊರತೆ ಇದೆ. ಯಾವುದು ಸೇರಬೇಕು ಎಂಬ ನಿರ್ಧಾರ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗೆ ಇದೆ. ಅಧಿವೇಶನದಲ್ಲಿ ಚರ್ಚೆಗೆ ಇಡಲಿ” ಎಂದು ಒತ್ತಾಯಿಸಿದರು.