ಪ್ಯಾಲೆಸ್ತೀನ್ ವಿಚಾರ | ‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಇಲ್ಲ’ ಎಂದ ಸಿಎಂ: ‘ಪ್ರತಿಭಟನೆಗೆ ಇನ್ನೂ ಅನುಮತಿ ಸಿಕ್ಕಿಲ್ಲ’ ಎಂದ ಹೋರಾಟಗಾರರು!

0
255
ಸಿಎಂ ಸಿದ್ದರಾಮಯ್ಯ
  • ಪ್ಯಾಲೆಸ್ತೀನ್ ಪರ ಸಭೆಗಳಿಗೆ ತಡೆಯ ಬಗ್ಗೆ ಸಿಎಂಗೆ ಬಹಿರಂಗ ಪತ್ರ ಬರೆದಿದ್ದ ಸಾಹಿತಿಗಳು
  • ಡಿಸೆಂಬರ್ 2ರ ‘ಸದಾಗ್ರಹದ ಸಭೆ’ಗೆ ಇನ್ನೂ ಅನುಮತಿ ನೀಡದ ಬೆಂಗಳೂರು ಪೊಲೀಸರು!

ಇಸ್ರೇಲ್‌ ಸೇನೆಯು ಪ್ಯಾಲೆಸ್ತೀನ್‌ನಲ್ಲಿ ನಡೆಸುತ್ತಿರುವ ನರಮೇಧವನ್ನು ಖಂಡಿಸಿ ರಾಜ್ಯದಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆಗೆ ಪೊಲೀಸರು ತಡೆ ನೀಡುತ್ತಿರುವ ವಿಚಾರವಾಗಿ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ, ‘ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸಗಳ ಜೊತೆ ನಮ್ಮ ಸರ್ಕಾರ ನಿಲ್ಲಲಿದೆ. ಕೆಳಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕಾಗಿ ಅನಾವಶ್ಯಕ ಗೊಂದಲ ನಿರ್ಮಾಣವಾಗಿದೆ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಾಜ್ಯ ಸರ್ಕಾರವು ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸುವ ಅಥವಾ ತಡೆಯುವ ಯಾವುದೇ ಕೆಲಸ ಮಾಡುವುದಿಲ್ಲ. ಕಥೆ, ಕಾವ್ಯ, ನಾಟಕ, ಸಂಗೀತ ಮುಂತಾದ ಸೃಜನಶೀಲ ಅಭಿವ್ಯಕ್ತಿಗಳಿಗೆ ನಮ್ಮ ಬೆಂಬಲವಿರಲಿದೆ. ಕೆಳಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕಾಗಿ ಅನಾವಶ್ಯಕ ಗೊಂದಲ ನಿರ್ಮಾಣವಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಮುಂದೆ ಇಂತಹ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸಗಳ ಜೊತೆ ನಮ್ಮ ಸರ್ಕಾರ ನಿಲ್ಲಲಿದೆ” ಎಂದಿದ್ದಾರೆ.

ಬೆಂಗಳೂರಿನ ಎಂಜಿ ರೋಡ್‌ನಲ್ಲಿ ಆಯೋಜಿಸಿದ್ದ ಪ್ಯಾಲೆಸ್ತೀನ್ ಪರ ಪ್ರತಿಭಟನೆಯ ಸಂದರ್ಭ

‘ಪ್ರತಿಭಟನೆಗೆ ಇನ್ನೂ ಅನುಮತಿ ಸಿಕ್ಕಿಲ್ಲ’ ಎಂದ ಹೋರಾಟಗಾರರು!
ಡಿ.2ರಂದು(ನಾಳೆ) ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೆಲವು ಹೋರಾಟಗಾರರು, ‘ಪ್ಯಾಲೆಸ್ತೀನ್ ಜನರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಎಲ್ಲ ದೇಶಗಳ ನಾಗರಿಕರು ತಮ್ಮ ಸಹಾನುಭೂತಿ ಹಾಗೂ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿ ಮಕ್ಕಳು ಮತ್ತು ಮಹಿಳೆಯರನ್ನು ಭೀಕರವಾಗಿ ಹತ್ಯೆ ಮಾಡುತ್ತಿರುವ ಕೃತ್ಯ ಯಾರೂ ಒಪ್ಪಲು ಸಾಧ್ಯವಿಲ್ಲ. ಆಕ್ರಮಣ ನಿಲ್ಲಿಸಿ’ ಎಂದು ಆಗ್ರಹಿಸಿ ಸದಾಗ್ರಹದ ಸಭೆಯನ್ನು ಆಯೋಜಿಸಲಾಗಿದೆ. ಆದರೆ ಅದಕ್ಕೆ ಬೆಂಗಳೂರು ಪೊಲೀಸರು, ಇನ್ನೂ ಅನುಮತಿ ನೀಡಿಲ್ಲ ಎಂದು ಈ ದಿನ.ಕಾಮ್‌ಗೆ ಮಾಹಿತಿ ಸಿಕ್ಕಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ನಾಳೆ ಸದಾಗ್ರಹದ ಸಭೆಯ ಆಯೋಜಕರಲ್ಲೊಬ್ಬರಾದ ರಾಜಶೇಖರ ಅಕ್ಕಿ, ‘ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ಬೆಂಗಳೂರಿನ ಡಿಸಿಪಿಯವರಿಗೆ ತಿಳಿಸಿದ್ದೇವೆ. ಆದರೂ ಕೂಡ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನಮಗೆ ತಿಳಿಸಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿದೆ. ಆದರೆ, ಪ್ಯಾಲೆಸ್ತೀನ್ ನಾಗರಿಕರ ಪರ ಪ್ರತಿಭಟನೆ ನಡೆಸುತ್ತೇವೆ ಎಂದರೆ ಅಲ್ಲೂ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ. ನಾವು ಯಾವ ಸಮಾಜದಲ್ಲಿ ಇದ್ದೇವೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಅಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿದ್ದೀರಾ? ಕೇಂದ್ರ ಸರ್ಕಾರ, ಕಾಂಗ್ರೆಸ್ ಹೈಕಮಾಂಡ್ ಪ್ಯಾಲೆಸ್ತೀನ್ ಪರ: ರಾಜ್ಯ ಸರ್ಕಾರ ಯಾರ ಪರ? 

‘ಭಾರತವು ಯಾವಾಗಲೂ ಪ್ಯಾಲೆಸ್ತೀನ್ ಸಾರ್ವಭೌಮ, ಸ್ವತಂತ್ರ ರಾಷ್ಟ್ರವನ್ನು ಸ್ಥಾಪಿಸಲು ಮಾತುಕತೆಗಳ ಪುನರಾರಂಭವನ್ನು ಪ್ರತಿಪಾದಿಸಿದೆ. ಜೊತೆಗೆ ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಗಾಝಾದ ಸಂತ್ರಸ್ತರಿಗೆ ಅಗತ್ಯ ನೆರವನ್ನು ಕೂಡ ಕಳುಹಿಸಿಕೊಟ್ಟಿತ್ತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಇದೇ ವಿಚಾರವಾಗಿ ತನ್ನ ನಿಲುವನ್ನು ಪ್ರಕಟಿಸಿ, ಪ್ಯಾಲೆಸ್ತೀನ್ ಜನರ ಹಕ್ಕುಗಳ ಪರವಾಗಿ ಸುದೀರ್ಘ ಸಮಯದಿಂದ ನೀಡುತ್ತಾ ಬಂದಿರುವ ಬೆಂಬಲವನ್ನು ಪುನರುಚ್ಚರಿಸಿತ್ತು ಆದರೆ, ರಾಜ್ಯದಲ್ಲಿರುವ ಪೊಲೀಸ್ ಇಲಾಖೆ ಯಾರ ಪರ ಕೆಲಸ ಮಾಡುತ್ತಿದೆ? ಮನುಷ್ಯ ಪರ ಹೋರಾಟದಿಂದ ಪೊಲೀಸ್‌ ಇಲಾಖೆಗೆ ಭಯ ಏಕೆ?” ಎಂದು ಪ್ರಶ್ನಿಸಿದ್ದಾರೆ.

ಅಡ್ವೊಕೇಟ್ ವಿನಯ್ ಶ್ರೀನಿವಾಸ್

ಅಷ್ಟಕ್ಕೂ ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಯಾರ ಭಯ? ಅಡ್ವೊಕೇಟ್ ವಿನಯ್ ಶ್ರೀನಿವಾಸ್

‘ಸಿಎಂ ಅವರ ಪ್ರಕಟಣೆಯನ್ನು ಓದಿದೆ. ರಾಜ್ಯದಲ್ಲಿ ಪ್ಯಾಲೆಸ್ತೀನ್ ಪರ ನಡೆಸುವ ಪ್ರತಿಭಟನೆಗಳಿಗೆ ತಡೆಯಾಗುತ್ತಿರುವುದು ಸಿಎಂ ಗಮನಕ್ಕೆ ತಡವಾಗಿ ಬಂದಿದೆ ಎಂದರೆ ನಮಗೆ ನಂಬಲಿಕ್ಕೆ ಕಷ್ಟವಾಗುತ್ತಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಬಿಫ್ಟ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ, ಕೀಯನ್ನೇ ಪೊಲೀಸರು ತೆಗೆದುಕೊಂಡು ಹೋಗಿದ್ದರು. ಇದು ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಆದರೂ ಅದು ಸಿಎಂ ಅವರಿಗೆ ತಲುಪಿಲ್ಲ ಎಂದರೆ ನಂಬಲಿಕ್ಕೆ ಆಗುತ್ತಿಲ್ಲ. ಇದು ಕಾಂಗ್ರೆಸ್‌ನವರ ಹಿಪಾಕ್ರಸಿ ಅಂದರೆ ಅತಿಶಯೋಕ್ತಿ ಅನಿಸದು. ಪ್ಯಾಲೆಸ್ತೀನ್‌ನ ನೊಂದವರ ಪರ ಧ್ವನಿ ಎತ್ತಿದರೆ ಯಾರಿಗೆ ಸಹಿಲಾಗುತ್ತಿಲ್ಲ ಎಂಬುದನ್ನು ಸರ್ಕಾರ ಬಹಿರಂಗಪಡಿಸಲಿ. ಅಷ್ಟಕ್ಕೂ ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಯಾರ ಭಯ? ಒಂದು ವೇಳೆ ಬಲಪಂಥೀಯರಿಂದ ನಮಗೆ ಭಯವಿದೆ ಅಥವಾ ಅವರನ್ನು ನಿಯಂತ್ರಿಸಲು ನಮಗೆ ಆಗುತ್ತಿಲ್ಲ ಅಂತಾದರೆ ಅದನ್ನು ಕೂಡ ಬಹಿರಂಗವಾಗಿಯೇ ತಿಳಿಸಲಿ’ ಎಂದು ಈ ದಿನ.ಕಾಮ್ ಜೊತೆಗೆ ಮಾತನಾಡಿದ ಬಹುತ್ವ ಕರ್ನಾಟಕದ ಮುಖಂಡ, ಸಾಮಾಜಿಕ ಕಾರ್ಯಕರ್ತ ಅಡ್ವೊಕೇಟ್ ವಿನಯ್ ಶ್ರೀನಿವಾಸ್ ಹೇಳಿದರು.

ಬಹುತ್ವ ಕರ್ನಾಟಕ ಇತ್ತೀಚೆಗೆ ಬೆಂಗಳೂರಿನ ಎಂಜಿ ರೋಡ್‌ನಲ್ಲಿ ಆಯೋಜಿಸಿದ್ದ ಪ್ಯಾಲೆಸ್ತೀನ್ ಪರ ಪ್ರತಿಭಟನೆಯ ಮೇಲೆ ಎಫ್ಐಆರ್ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಲಬೀದ್ ಶಾಫಿ

ಕೆಳಹಂತದ ಅಧಿಕಾರಿಗಳ ತಪ್ಪು ತಿಳಿವಳಿಕೆ ಎಂದು ಹೇಳಿರುವುದು ಹಾಸ್ಯಾಸ್ಪದ: ಲಬೀದ್ ಶಾಫಿ

ಸಿಎಂ ಹೇಳಿಕೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸೋಲಿಡಾರಿಟಿ ಯೂತ್ ಮೂಮೆಂಟ್‌ ಕರ್ನಾಟಕ ರಾಜ್ಯಾಧ್ಯಕ್ಷ ಲಬೀದ್ ಶಾಫಿ, ಪ್ಯಾಲೆಸ್ತೀನಿನಲ್ಲಿ ನಡೆಯುತ್ತಿರುವ ನರಮೇಧವನ್ನು ಖಂಡಿಸಿ ನಡೆಸಲು ತೀರ್ಮಾನಿಸಿರುವ ಶಾಂತಿಯುತ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ಏಕೆ ಹತ್ತಿಕ್ಕಲು ಪ್ರಯತ್ನಿಸಿದೆ ಎಂಬುದು ಈಗ ಸ್ಪಷ್ಟವಾಯಿತು. ಪಂಚರಾಜ್ಯಗಳ ಚುನಾವಣೆಯ ನಂತರ ಮುಖ್ಯಮಂತ್ರಿಗಳಿಗೆ ಸಂವಿಧಾನದ ಮೂಲ ಆಶಯವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ನೆನಪಾಗಿದೆ. ಇದು ಕೆಳಹಂತದ ಪೊಲೀಸ್ ಅಧಿಕಾರಿಗಳಿಂದ ನಡೆದಿರುವ ತಪ್ಪು ತಿಳಿವಳಿಕೆ ಎಂದು ಹೇಳಿರುವುದು ಹಾಸ್ಯಾಸ್ಪದ. ಸುಮಾರು 30ಕ್ಕಿಂತ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿ, ಸಭಾಂಗಣ ಕಾರ್ಯಕ್ರಮ, ಚಿತ್ರ ಪ್ರದರ್ಶನ ಹಾಗೂ ಕಲಾ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ನಿಷೇಧಿಸಿರುವುದು ಕೆಳ ಹಂತದ ಪೊಲೀಸ್ ಅಧಿಕಾರಿಗಳಿಂದ ನಡೆದ ಸಣ್ಣ ಅಚಾತುರ್ಯವಾಗಿರಬಹುದೆಂದು ಒಪ್ಪಿಕೊಳ್ಳುವಷ್ಟು ದಡ್ಡರಲ್ಲ ಕನ್ನಡಿಗರು. ಇದು ರಾಜ್ಯ ಸರ್ಕಾರದ ವೈಚಾರಿಕ ಅಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ’ ಎಂದು ತಿಳಿಸಿದ್ದಾರೆ.

ಸಿಎಂಗೆ ಬಹಿರಂಗ ಪತ್ರ ಬರೆದಿದ್ದ ಸಾಹಿತಿಗಳು
ಗಾಯಕಿ ಎಂ.ಡಿ.ಪಲ್ಲವಿ ಸೇರಿದಂತೆ ಹಲವರ ನೇತೃತ್ವದಲ್ಲಿ ಬುಧವಾರ ರಂಗ- ಶಂಕರದಲ್ಲಿ ಆಯೋಜಿಸಿದ್ದ ಪ್ಯಾಲೆಸ್ಟೀನ್ ಪರ ಕವಿತೆ ವಾಚನ, ಕಿರುನಾಟಕ ಪ್ರದರ್ಶನಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು.

ಈ ಘಟನೆಯ ಬಳಿಕ ಸಿಎಂಗೆ ಬಹಿರಂಗ ಪತ್ರ ಬರೆದಿದ್ದ ಸಾಹಿತಿಗಳು, ‘ಪ್ಯಾಲೆಸ್ತೀನ್ ಜನರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಎಲ್ಲಾ ದೇಶಗಳ ನಾಗರಿಕರು ತಮ್ಮ ಸಹಾನುಭೂತಿ ಹಾಗೂ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಹಲವು ದೇಶಗಳಿಂದ ಒಕ್ಕೊರಲಿನ ಮನವಿ ಬರುತ್ತಿವೆ. ಕೇಂದ್ರ ಸರ್ಕಾರ ಸಹ ಪ್ಯಾಲೆಸ್ತೀನ್ ಜನರ ಪರವಾಗಿ ತನ್ನ ಬೆಂಬಲ ಪುನರುಚ್ಚರಿಸುತ್ತಿದೆ. ನಿಜ ಸ್ಥಿತಿ ಹೀಗಿರುವಾಗ ಕರ್ನಾಟಕದ ಪೋಲಿಸರ ವರ್ತನೆ ಮಾತ್ರ ದಿಗ್ಭ್ರಮೆ ಹುಟ್ಟಿಸುತ್ತಿದೆ’ ಎಂದು ಹೇಳಿದ್ದರು.

ಪ್ಯಾಲೆಸ್ತೀನ್‌ ಪರ ಪ್ರತಿಭಟನೆಗಳಿಗೆ ಪೊಲೀಸರಿಂದ ಅವಕಾಶ ನಿರಾಕರಣೆಯ ವಿಚಾರವಾಗಿ ಹಾಗೂ ಅದರ ಸುತ್ತಮುತ್ತಲಿನ ಎಲ್ಲ ಬೆಳವಣಿಗೆಗಳ ಬಗ್ಗೆ ಈ ದಿನ.ಕಾಮ್ ನಿರಂತರವಾಗಿ ವರದಿ ಪ್ರಕಟಿಸಿತ್ತು. ಅದರ ಲಿಂಕ್ ಇಲ್ಲಿದೆ.

ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ‘ಮಾನವ ಸರಪಳಿ’

ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸಿದವರ ಮೇಲೆ ಎಫ್‌ಐಆರ್

ಪ್ಯಾಲೆಸ್ತೀನ್‌ ಪರ ನಡೆಯಬೇಕಿದ್ದ ಕಾರ್ಯಕ್ರಮ ಸಭಾಂಗಣದ ‘ಕೀ’ಯನ್ನೇ ಹೊತ್ತೊಯ್ದ ಬೆಂಗಳೂರು ಪೊಲೀಸರು!

ಬೆಂಗಳೂರು | ‘ಕಲ್ಲಂಗಡಿ’ ಹಣ್ಣಿನ ರೂಪಕದೊಂದಿಗೆ ಪ್ಯಾಲೆಸ್ತೀನ್ ಪರ ಪ್ರತಿಭಟಿಸಿದವರ ಮೇಲೆ ಎಫ್‌ಐಆರ್

ಪ್ಯಾಲೆಸ್ತೀನ್‌ ಮತ್ತು ಇಸ್ರೇಲ್‌ ರಾಷ್ಟ್ರ ಪರಿಕಲ್ಪನೆ‌ಯ ಹಿನ್ನೆಲೆಗಳೇನು?

ಇಸ್ರೇಲ್ ನರಮೇಧವನ್ನು ಖಂಡಿಸುವ ಪ್ರತಿಭಟನೆಗೆ ಅನುಮತಿ ನಿರಾಕರಣೆಗೆ ಕಾರಣವೇನು?

23 ಲಕ್ಷ ಜನರನ್ನು ಕೊಲ್ಲಲು ಇಸ್ರೇಲ್ ಹೊರಟಿರುವಾಗ ’ಪ್ಯಾಲೆಸ್ತೀನ್‌’ ಪರ ಕನ್ನಡಿಗರು ನಿಂತರೆ ತಪ್ಪೇನು ಪೊಲೀಸರೇ?

ಹಮಾಸ್ ನೆಪ ಮಾತ್ರವಷ್ಟೇ, ಪ್ಯಾಲೆಸ್ತೀನ್‌ ಇಲ್ಲವಾಗಿಸುವುದು ಇಸ್ರೇಲ್ ಗುರಿ: ಚಿಂತಕ ಶಿವ ಸುಂದರ್

ರಾಜ್ಯದಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳ ಮೇಲೆ ಕ್ರಮ: ಸಾಂವಿಧಾನಿಕ ಮೌಲ್ಯ ಎತ್ತಿ ಹಿಡಿಯಲು ಸಿಎಂಗೆ ಸ್ವರಾಜ್ ಇಂಡಿಯಾ ಪತ್ರ

LEAVE A REPLY

Please enter your comment!
Please enter your name here