ಬೆಂಗಳೂರಿನಲ್ಲಿ ಎರಡು ವರ್ಷಗಳಿಂದ ವಾಸಿಸುತ್ತಿದ್ದ ಉದ್ಯಮಿ ದಂಪತಿಗಳ ಕುಟುಂಬವೊಂದು ನಗರವನ್ನು ತೊರೆದಿದೆ. ನಗರದ ಕ್ಷೀಣಿಸುತ್ತಿರುವ ವಾಯು ಗುಣಮಟ್ಟವು ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದಿರುವ ದಂಪತಿಗಳು ಬೆಂಗಳೂರನ್ನು ತೊರೆದಿದ್ದಾರೆ.
ಉದ್ಯಮಿ ಅಸ್ವಿನ್ ಮತ್ತು ಅಪರ್ಣ ದಂಪತಿಗಳು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ; “ಬೆಂಗಳುರಿನ ಕುರಿತು ಈ ರೀತಿ ಮಾತನಾಡುತ್ತಿರುವುದಕ್ಕೆ ನೀವು ನಮ್ಮನ್ನು ದ್ವೇಷಿಸಬಹುದು. ಆದರೆ, ಬೆಂಗಳೂರು ನಮ್ಮನ್ನು ನಿಧಾನವಾಗಿ ಕೊಲ್ಲುತ್ತಿದೆ. ಇದು ಯಾರಿಗೂ ಗೊತ್ತಾಗುತ್ತಿಲ್ಲ. ಬೆಂಗಳೂರಿನ ವಾಯು ಮಾಲಿನ್ಯವು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ” ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಪೋರೇಟ್ ವ್ಯವಹಾರ ನಡೆಸುತ್ತಿದ್ದ ದಂಪತಿಗಳು, “ಜನರು ಬೆಂಗಳೂರಿನಲ್ಲಿ ಶುದ್ಧ ವಾಯು ಮತ್ತು ಉತ್ತಮ ಹವಾಮಾನವಿದೆ ಎಂದು ಹೇಳುತ್ತಾರೆ. ಆದರೆ, ನಿಜವಾಗಿಯೂ ಇದೆಯೇ” ಎಂದು ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗೆ ಪೂರಕ ಎಂಬಂತೆ, ಇದೇ ವರ್ಷದ ಫ್ರಬವರಿಯಲ್ಲಿ ನಗರದ ವಾಯು ಗುಣಮಟ್ಟ ಸೂಚ್ಯಂಕವು (AQI) 297 ಆಗಿದೆ. ಇದು ತುಂಬಾ ತುಂಬಾ ಅನಾರೋಗ್ಯಕರ ಮತ್ತು ಅಪಾಯಕಾರಿ ವಲಯವಾಗುತ್ತದೆ ಎಂದು ಸೂಚ್ಯಂಕ ಹೇಳುತ್ತದೆ.
“ನಗರದ ವಾಯು ಮಾಲಿನ್ಯದ ಬಗ್ಗೆ ನಮಗೆ ಮೊದಲೇ ತಿಳಿದಿದ್ದರೆ, ಬೆಂಗಳೂರನ್ನು ಇನ್ನೂ ಬೇಗನೆ ತೊರೆಯುತ್ತಿದ್ದೆವು. ನಾವು ಈ ನಗರದ ವಾತಾವರಣ, ಜನರು, ಆಹಾರವನ್ನು ಪ್ರೀತಿಸುತ್ತೇವೆ. ಆದರೆ, ನಾವು ಪ್ರತಿದಿನ ಯಾವ ಗಾಳಿಯನ್ನು ಉಸಿರಾಡುತ್ತಿದ್ದೇವೆ ಎಂಬುದು ತಿಳಿದಿರಲಿಲ್ಲ” ಎಂದು ದಂಪತಿಗಳು ಹೇಳುತ್ತಾರೆ.
“ನಮ್ಮ ಬೆಂಗಳೂರು ಅದ್ಭುತವಾಗಿದೆ. ವ್ಯಾಪಾರಕ್ಕೂ ಉತ್ತಮ ಸ್ಥಳ. ಆದರೆ, ನಗರ ನಮ್ಮನ್ನು ಮುಳುಗಿಸುವ ಮೊದಲೇ ನಾವು ಈ ಆಯ್ಕೆಯನ್ನು ಮಾಡಬೇಕಾಯಿತು. ಆದ್ದರಿಂದ ನಾವು ಬೆಂಗಳೂರನ್ನು ತೊರೆಯುತ್ತಿದ್ದೇವೆ” ಎಂದು ಹೇಳಿಕೊಂಡಿದ್ದಾರೆ.
ಅವರ ವಿಡಿಯೋಗೆ ಸಕಾರಾತ್ಮಕ, ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ. “ಸತ್ಯವನ್ನು ಹೇಳಿದ್ದಕ್ಕೆ ಧನ್ಯವಾದಗಳು… ನಿಮ್ಮಂತೆಯೇ ನಾವೂ ತೀವ್ರ ತಲೆ ನೋವಿನ ಸಮಸ್ಯೆಗೆ ಒಳಗಾಗಿದ್ದೆವು. ಆ ಬಳಿಕ, ನಗರವನ್ನು ತೊರೆದೆವು. ಈಗ…ನಿಜಕ್ಕೂ ಖುಷಿಯಾಗಿ, ಆರೋಗ್ಯವಾಗಿದ್ದೇನೆ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಮತ್ತೊಬ್ಬರು ದಂಪತಿಗಳನ್ನು ದೂಷಿಸಿದ್ದಾರೆ, “ನಿಜವಾಗಿಯೂ ಬೆಂಗಳೂರಿನ ಜನರು ನಿಮ್ಮ ನಿರ್ಧಾರದಿಂದ ತುಂಬಾ ಖುಷಿಯಾಗಿದ್ದಾರೆ. ದಯವಿಟ್ಟು ಇನ್ನಷ್ಟು ಜನರನ್ನು ಕರೆದುಕೊಂಡು ಹೋಗಿ” ಎಂದಿದ್ದಾರೆ.
“ಜನರು ನಿಮ್ಮನ್ನು ದ್ವೇಷಿಸುತ್ತಿದ್ದಾರೆ. ಆದರೆ ನೀವು ಹೇಳುತ್ತಿರುವುದು 100% ಸರಿಯಾಗಿದೆ” ಎಂದು ಇನ್ನೊfಬರು ಹೇಳಿದ್ದಾರೆ.