2020ರ ಐತಿಹಾಸಿಕ ರೈತ ಹೋರಾಟದ ವೇಳೆ ಮುರಿದುಬಿದ್ದಿದ್ದ ಶಿರೋಮಣಿ ಅಕಾಲಿ ದಳ (SAD) ಮತ್ತು ಬಿಜೆಪಿ ಮೈತ್ರಿ ಆರು ವರ್ಷಗಳ ಬಳಿಕ ಮತ್ತೆ ಜೀವ ಪಡೆದುಕೊಂಡಿದೆ. 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಈ ಎರಡೂ ಪಕ್ಷಗಳು ಮತ್ತೆ ಒಂದಾಗಿರುವುದು ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ನವೆಂಬರ್ 24ರಂದು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಮೈತ್ರಿಯ ಮರುಸ್ಥಾಪನೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಮೈತ್ರಿಯಲ್ಲಿ ಅಕಾಲಿ ದಳವೇ ‘ಹಿರಿಯ ಪಾಲುದಾರ’ ಪಕ್ಷವಾಗಿರಲಿದ್ದು, ಪಂಜಾಬ್ನಲ್ಲಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಅಕಾಲಿ ದಳಕ್ಕೇ ಸಿಗಲಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಆದರೆ, 117 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂಬ ಸೀಟು ಹಂಚಿಕೆಯ ಸೂತ್ರ ಇನ್ನೂ ಅಂತಿಮಗೊಂಡಿಲ್ಲ. ಅಕಾಲಿ ದಳದ ಕುಸಿಯುತ್ತಿರುವ ಜನಬೆಂಬಲ, ಬಿಜೆಪಿಯ ವಿಸ್ತರಣೆಯ ಮಹತ್ವಾಕಾಂಕ್ಷೆ, ಆಮ್ ಆದ್ಮಿ ಪಕ್ಷದ (AAP) ಆಡಳಿತ ವಿರೋಧಿಯ ಅಲೆಯ ಆತಂಕ, ಕಾಂಗ್ರೆಸ್ನ ರಾಜಕೀಯ ಲೆಕ್ಕಾಚಾರ ಹಾಗೂ ರೈತ ಸಮುದಾಯದ ಆತಂಕಗಳ ನಡುವೆ ಈ ಮರುಮೈತ್ರಿ ಪಂಜಾಬ್ನ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಪಂಜಾಬ್ ರಾಜಕಾರಣದಲ್ಲಿ ಅಕಾಲಿ ದಳ ಮತ್ತು ಜನಸಂಘ (ಬಿಜೆಪಿಯ ಮಾತೃಪಕ್ಷ) ನಡುವಿನ ರಾಜಕೀಯ ಹೊಂದಾಣಿಕೆಗೆ ದಶಕಗಳ ಇತಿಹಾಸವಿದೆ. 1967ರಿಂದ 1980ರ ನಡುವಿನ ಅವಧಿಯಲ್ಲಿ ಅಕಾಲಿ ದಳ ಮತ್ತು ಜನಸಂಘವು ಹಲವು ಬಾರಿ ಚುನಾವಣೋತ್ತರ ಸಮ್ಮಿಶ್ರ ಸರ್ಕಾರಗಳನ್ನು ರಚಿಸಿದ್ದವು. ಆದರೆ, 1980ರ ದಶಕದ ಹಿಂಸಾಚಾರ, ಖಾಲಿಸ್ತಾನ ಚಳವಳಿಯ ಕರಾಳ ದಿನಗಳು, ಆಪರೇಷನ್ ಬ್ಲೂಸ್ಟಾರ್ ಹಾಗೂ ಅದರ ನಂತರದ ರಾಜಕೀಯ ಸಂಘರ್ಷಗಳು ಪಂಜಾಬ್ನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದವು. ಈ ಸುದೀರ್ಘ ಬಿಕ್ಕಟ್ಟಿನ ನಂತರ ರಾಜ್ಯದಲ್ಲಿ ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ರಾಜಕೀಯ ಸಹಕಾರವನ್ನು ಪುನಃಸ್ಥಾಪಿಸುವ ತುರ್ತು ಅಗತ್ಯ ಎದುರಾಗಿತ್ತು.
ಇದೆಲ್ಲದರ ಹಿನ್ನೆಲೆಯಲ್ಲಿ, 1996ರಲ್ಲಿ ಶಿರೋಮಣಿ ಅಕಾಲಿ ದಳ ತನ್ನ ರಾಜಕೀಯ ನಿಲುವಿನಲ್ಲಿ ಐತಿಹಾಸಿಕ ಬದಲಾವಣೆಯನ್ನು ಘೋಷಿಸಿತು. ಪಕ್ಷವು ಕೇವಲ ಸಿಖ್ ಸಮುದಾಯದ ಹಿತಾಸಕ್ತಿಗಳಿಗೆ ಸೀಮಿತವಾಗದೆ, ‘ಮೊಗಾ ಘೋಷಣೆ’ಯೊಂದಿಗೆ ಪಂಜಾಬ್ನ ಎಲ್ಲ ಸಮುದಾಯಗಳ ಹಿತಾಸಕ್ತಿಯನ್ನು ಪ್ರತಿನಿಧಿಸುವ ವಿಶಾಲ ರಾಜಕೀಯ ವೇದಿಕೆಯಾಗಿ ಬೆಳೆಯುವುದಾಗಿ ಘೋಷಿಸಿತು. ಅದಕ್ಕಾಗಿ, ‘ಪಂಜಾಬ್, ಪಂಜಾಬಿ ಮತ್ತು ಪಂಜಾಬಿಯತ್’ ಎಂಬ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದಿದೆ.
ಇದೇ ಸಂದರ್ಭದಲ್ಲಿ, ಬಿಜೆಪಿ ಮತ್ತು ಅಕಾಲಿ ದಳದ ಚುನಾವಣಾಪೂರ್ವ ಮೈತ್ರಿ ರೂಪುಗೊಂಡಿತು. ಗ್ರಾಮೀಣ ಪ್ರದೇಶಗಳಲ್ಲಿ ಅಕಾಲಿ ದಳಕ್ಕಿದ್ದ ಪ್ರಭಾವ ಮತ್ತು ನಗರ ಪ್ರದೇಶಗಳಲ್ಲಿ ಬಿಜೆಪಿಗಿದ್ದ ಬೆಂಬಲವನ್ನು ಒಟ್ಟುಗೂಡಿಸುವುದು ಇದರ ಹಿಂದಿನ ರಾಜಕೀಯ ಲೆಕ್ಕಾಚಾರವಾಗಿತ್ತು. ಈ ಸೂತ್ರಕ್ಕೆ ಯಶಸ್ಸು ಕೂಡ ತೊರೆಯಿತು. 1997ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವು ಭರ್ಜರಿ ಜಯ ಸಾಧಿಸಿತು; ಬಳಿಕ 2007 ಮತ್ತು 2012ರಲ್ಲಿಯೂ ಸತತವಾಗಿ ಅಧಿಕಾರಕ್ಕೆ ಬಂದಿತು. ಪ್ರಕಾಶ್ ಸಿಂಗ್ ಬಾದಲ್ ಅವರು ಈ ಮೈತ್ರಿಯ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದರು. ಆ ಕಾಲದಲ್ಲಿ ಈ ಮೈತ್ರಿ ಕೇವಲ ಮತಗಳ ಒಕ್ಕೂಟವಾಗಿರದೆ, ಹಿಂದು-ಸಿಖ್ ಸಮುದಾಯಗಳನ್ನು ಒಂದೇ ಆಡಳಿತ ವ್ಯವಸ್ಥೆಯೊಳಗೆ ಬೆಸೆಯುವ ಸಾಮಾಜಿಕ ಸಾಮರಸ್ಯದ ಮಾದರಿಯಾಗಿಯೂ ಗುರುತಿಸಿಕೊಂಡಿತ್ತು.
ಆದಾಗ್ಯೂ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2020ರಲ್ಲಿ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳು ಪಂಜಾಬ್ನ ರಾಜಕೀಯ ದಿಕ್ಕನ್ನೇ ಬದಲಿಸಿದವು. ಆ ಕಾಯ್ದೆಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ರೈತರು ಹೋರಾಟಕ್ಕಿಳಿದರು. ಕೃಷಿ ಕಾಯ್ದೆಗಳ ರದ್ದತಿಗಾಗಿ ದೆಹಲಿಯ ಗಡಿಭಾಗಗಳಲ್ಲಿ ಸುಮಾರು ಒಂದು ವರ್ಷಗಳ ಕಾಲ ರೈತರು ಪಟ್ಟು ಹಿಡಿದು ಕುಳಿತರು. ಈ ಪ್ರತಿಭಟನೆಯಿಂದಾಗಿ, ಬಿಜೆಪಿ ಜೊತೆ ಮೈತ್ರಿಯಲ್ಲಿದ್ದ ಅಕಾಲಿ ದಳಕ್ಕೆ ಅಸ್ತಿತ್ವದ ಸಂಕಷ್ಟ ಎದುರಾಯಿತು. ತನ್ನ ಸಾಂಪ್ರದಾಯಿಕ ರೈತ ಮತಬ್ಯಾಂಕ್ ಉಳಿಸಿಕೊಳ್ಳುವುದು ಪಕ್ಷಕ್ಕೆ ಅನಿವಾರ್ಯವಾಗಿತ್ತು. ಆದ್ದರಿಂದ, ಅಕಾಲಿ ದಳದ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ 2020ರ ಸೆಪ್ಟೆಂಬರ್ನಲ್ಲಿ ರಾಜೀನಾಮೆ ನೀಡಿದರು. ಅಲ್ಲದೆ, ಬಿಜೆಪಿ ನೇತೃತ್ವದ ಎನ್ಡಿಎಯಿಂದ ಅಕಾಲಿ ದಳ ಹೊರನಡೆಯಿತು. 2021ರ ನವೆಂಬರ್ನಲ್ಲಿ ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆದರೂ, ಉಭಯ ಪಕ್ಷಗಳು ಮತ್ತೆ ಒಂದಾಗಲಿಲ್ಲ. ಅವುಗಳ ನಡುವಿನ ರಾಜಕೀಯ ಕಂದಕ ಹಾಗೆಯೇ ಮುಂದುವರಿದಿತ್ತು.
ಇದೆಲ್ಲದರ ನಡುವೆ, 2022ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಿತು. ಆ ಚುನಾವಣೆಗೂ ಮುನ್ನ, ಬಿಜೆಪಿಯ ಪ್ರಭಾವವು ಪಂಜಾಬ್ನ ನಗರ ಪ್ರದೇಶಗಳು, ವ್ಯಾಪಾರಿ ಸಮುದಾಯ ಹಾಗೂ ಹಿಂದು ಮತದಾರರ ನಡುವೆ ಮಾತ್ರ ಕೇಂದ್ರೀಕೃತವಾಗಿತ್ತು. ಆದರೆ, 2020ರ ರೈತ ಹೋರಾಟದಿಂದ ಆ ಭಾಗಗಳಲ್ಲಿಯೂ ಬಿಜೆಪಿ ನೆಲೆ ಕಳೆದುಕೊಂಡಿತು. ಆದರೂ, ಎಸ್ಎಡಿಯೊಂದಿಗೆ ಮೈತ್ರಿ ಕಳೆದುಕೊಂಡಿದ್ದ ಬಿಜೆಪಿ ಸ್ವತಂತ್ರವಾಗಿ ಬೆಳೆಯಲು ಪ್ರಯತ್ನಿಸಿ, ಕಾಂಗ್ರೆಸ್ನಿಂದ ಬಂದ ಹಲವು ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತು. ಜಾಟ್ ಸಿಖ್ ಮುಖಂಡರನ್ನು ಸೆಳೆಯಿತು. ಜೊತೆಗೆ, ಪಂಜಾಬ್ನಲ್ಲಿ 32%ಗಿಂತ ಹೆಚ್ಚಿರುವ ಪರಿಶಿಷ್ಟ ಜಾತಿ (ದಲಿತ) ಮತದಾರರತ್ತಲೂ ವಿಶೇಷ ಗಮನಹರಿಸಿತು. ಆದರೆ, ಈ ಎಲ್ಲ ಪ್ರಯತ್ನಗಳು ವಿಫಲವಾದವು.
2022ರ ಚುನಾವಣೆಯಲ್ಲಿ ದೀರ್ಘಕಾಲ ಅಧಿಕಾರ ನಡೆಸಿದ್ದ ಅಕಾಲಿ ದಳ ಮತ್ತು ಅಂದಿನ ಹಾಲಿ ಸರ್ಕಾರವಿದ್ದ ಕಾಂಗ್ರೆಸ್ ಪಕ್ಷಗಳನ್ನೇ ಧೂಳೀಪಟ ಮಾಡಿ ಎಎಪಿ ಅಧಿಕಾರದ ಗದ್ದುಗೆ ಏರಿತು. ಪಂಜಾಬ್ನ 117 ಸ್ಥಾನಗಳ ಪೈಕಿ, ಎಎಪಿ ಬರೋಬ್ಬರಿ 92 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಬಹುಮತ ಗಳಿಸಿದರೆ, ಕಾಂಗ್ರೆಸ್ ಕೇವಲ 18 ಸ್ಥಾನಗಳಿಗೆ ಕುಸಿಯಿತು. ಅಕಾಲಿ ದಳ ಕೇವಲ 3 ಸ್ಥಾನಗಳು ಮತ್ತು ಬಿಜೆಪಿ ಕೇವಲ 2 ಸ್ಥಾನಗಳಿಗೆ ಸೀಮಿತವಾದವು. ಅಕಾಲಿ ದಳದ ಮತಪ್ರಮಾಣವು 2017ರಲ್ಲಿದ್ದ 25.2%ನಿಂದ 2022ರಲ್ಲಿ 18.4%ಗೆ ಕುಸಿದದ್ದು ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್ ಕೂಡ ದೂರ ಉಳಿದಿದೆ ಎಂಬುದನ್ನು ಎತ್ತಿ ತೋರಿಸಿತು. ಮತ್ತೊಂದೆಡೆ ಬಿಜೆಪಿ ಕೂಡ ಏಕಾಂಗಿಯಾಗಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಲು ವಿಫಲವಾಯಿತು. ಅಂತೆಯೇ, 2024ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಎಸ್ಎಡಿ ಒಂದು ಸ್ಥಾನ ಗೆದ್ದರೆ, ಬಿಜೆಪಿ ಶೂನ್ಯಕ್ಕೆ ಶರಣಾಯಿತು.
ಹೀಗಾಗಿ, ಪ್ರತ್ಯೇಕವಾಗಿ ಸ್ಪರ್ಧಿಸಿ ಸೋಲುವುದಕ್ಕಿಂತ ಮೈತ್ರಿ ಮರುಸ್ಥಾಪನೆಯ ಮೂಲಕ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದು ಅನಿವಾರ್ಯ ಎಂಬ ವಾಸ್ತವ ಎಸ್ಎಡಿ ಮತ್ತು ಬಿಜೆಪಿಗೆ ಈಗ ಮನವರಿಕೆಯಾಗಿದೆ. ಮುಂದಿನ ರಾಜ್ಯ ಚುನಾವಣೆಗೂ ಮುನ್ನವೇ ಎರಡೂ ಪಕ್ಷಗಳು ಒಗ್ಗೂಡಿವೆ.
ಅಕಾಲಿ ದಳದೊಂದಿಗೆ ಬಿಜೆಪಿ ಮತ್ತೆ ಕೈಜೋಡಿಸಿರುವುದರ ಹಿಂದೆ ಕೇವಲ ಚುನಾವಣಾ ಗೆಲುವಿನ ಗುರಿಯಷ್ಟೇ ಅಲ್ಲದೆ, ರಾಜ್ಯದಲ್ಲಿ ತನ್ನ ಸಂಘಟನಾತ್ಮಕ ನೆಲೆಯನ್ನು ವಿಸ್ತರಿಸುವ ದೂರಗಾಮಿ ಉದ್ದೇಶವೂ ಇದೆ.
ಆದರೆ, ರೈತ ಚಳವಳಿಯ ಹಿನ್ನೆಲೆಯಲ್ಲಿ ಬಿಜೆಪಿಯನ್ನು ತೀವ್ರವಾಗಿ ವಿರೋಧಿಸಿದ್ದ ಅಕಾಲಿ ದಳದ ಗ್ರಾಮೀಣ ಬೆಂಬಲಿಗರು ಈ ಮರುಮೈತ್ರಿಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಗಮನಾರ್ಹ ಪ್ರಶ್ನೆಯಾಗಿದೆ. ಅಂತೆಯೇ, ಹಿಂದಿನ ಮೈತ್ರಿಗಳಲ್ಲಿ ಕೇವಲ 23 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದ ಬಿಜೆಪಿ, ಈಗ ತನ್ನ ಮಹತ್ವಾಕಾಂಕ್ಷೆ ಹೆಚ್ಚಾಗಿರುವುದರಿಂದ ಹೆಚ್ಚಿನ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಸದ್ಯದ ರಾಜಕೀಯ ವಲಯದ ಚರ್ಚೆಗಳ ಪ್ರಕಾರ ಅಕಾಲಿ ದಳ ಸುಮಾರು 70ಕ್ಕೂ ಹೆಚ್ಚು ಸ್ಥಾನಗಳು ಮತ್ತು ಬಿಜೆಪಿ ಸುಮಾರು 45 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಲೇಖನ ಓದಿದ್ದೀರಾ?: ಬಸವಣ್ಣನವರಿಂದ ಗಾಂಧಿಯವರೆಗೆ: ಆಯ್ದ ಕಥನಗಳ ಮೂಲಕ ಇತಿಹಾಸವನ್ನು ತಿರುಚುವ ಪ್ರಯತ್ನ!
ಬಿಜೆಪಿಯೊಂದಿಗಿನ ಮೈತ್ರಿಯು ಅಕಾಲಿ ದಳಕ್ಕೆ ಸಂಘಟನಾತ್ಮಕ ನೆರವು ನೀಡಬಹುದಾದರೂ, ಕಳೆದ ಒಂದು ದಶಕದಲ್ಲಿ ಪಕ್ಷ ಕಳೆದುಕೊಂಡಿರುವ ವಿಶ್ವಾಸಾರ್ಹತೆಯನ್ನು ಮರಳಿ ಗಳಿಸುವುದು ಅಷ್ಟು ಸುಲಭವಲ್ಲ. 2015ರ ಗುರುಗ್ರಂಥ ಸಾಹಿಬ್ ಅವಮಾನ ಪ್ರಕರಣಗಳು ಮತ್ತು ನಂತರ ನಡೆದ ಪೊಲೀಸ್ ಗುಂಡಿನ ದಾಳಿಗಳಿಂದಾಗಿ ಅಕಾಲಿ ದಳದ ವಿರುದ್ಧ ಭುಗಿಲೆದ್ದ ಆಕ್ರೋಶ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಿತ್ತು.
ಇದರ ನಡುವೆ ಸಿಖ್ ಸಮುದಾಯವನ್ನೇ ಕೇಂದ್ರೀಕರಿಸಿ ಹುಟ್ಟಿಕೊಂಡಿರುವ ಸಂಸದ ಅಮೃತ್ಪಾಲ್ ಸಿಂಗ್ ನೇತೃತ್ವದ ‘ಅಕಾಲಿ ದಳ (ವಾರಿಸ್ ಪಂಜಾಬ್ ದೇ)’ ಮತ್ತು ಗಿಯಾನಿ ಹರ್ಪ್ರೀತ್ ಸಿಂಗ್ ನೇತೃತ್ವದ ‘ಅಕಾಲಿ ದಳ (ಪುನರ್ ಸುರಜೀತ್)’ ಪಕ್ಷಗಳು ಅಕಾಲಿ ದಳಕ್ಕೆ ತಲೆನೋವಾಗಿವೆ. ಈ ಪಕ್ಷಗಳು ಅಕಾಲಿ ದಳದ ಸಾಂಪ್ರದಾಯಿಕ ಮತಗಳನ್ನು ಒಡೆಯುವ ಸಾಧ್ಯತೆ ಇದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿಯೊಂದಿಗೆ ಕೈಜೋಡಿಸಿರುವ ಅಕಾಲಿ ದಳ, ಪಂಜಾಬ್ನ ಕೃಷಿ, ಸಿಖ್ ಧಾರ್ಮಿಕ ಸಂಸ್ಥೆಗಳ ಸ್ವಾಯತ್ತತೆ ಹಾಗೂ ರಾಜ್ಯದ ಸಂಪನ್ಮೂಲ ಹಕ್ಕುಗಳ ವಿಷಯದಲ್ಲಿ ತನ್ನ ಸ್ವತಂತ್ರ ಪ್ರಾದೇಶಿಕ ಧ್ವನಿಯನ್ನು ಎಷ್ಟರಮಟ್ಟಿಗೆ ಕಾಯ್ದುಕೊಳ್ಳಲಿದೆ ಎಂಬುದು ನಿರ್ಣಾಯಕವಾಗಲಿದೆ. ಖ್ಯಾತ ರಾಜಕೀಯ ಚಿಂತಕ ಪ್ರಮೋದ್ ಕುಮಾರ್ ಅವರು ವಿಶ್ಲೇಷಿಸಿರುವಂತೆ, “ಕೇವಲ ಧಾರ್ಮಿಕ ಸಂಕೇತಗಳ ಮೇಲೆ ಗಮನಹರಿಸದೆ 1990ರ ದಶಕದಲ್ಲಿ ರೂಪುಗೊಂಡ ಸಮುದಾಯಗಳ ನಡುವಿನ ಸಹಕಾರ ಮತ್ತು ‘ಪಂಜಾಬಿಯತ್’ ಎಂಬ ಪ್ರಾದೇಶಿಕ ಗುರುತನ್ನು ಬಿಜೆಪಿ ಅರ್ಥಮಾಡಿಕೊಂಡು ಮುನ್ನಡೆದರೆ ಮಾತ್ರ ಈ ಮೈತ್ರಿ ಯಶಸ್ವಿಯಾಗಲು ಸಾಧ್ಯ.”
ಇದೆಲ್ಲದರ ನಡುವೆ, ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷವು ಉಚಿತ ವಿದ್ಯುತ್, ಸಾಮಾಜಿಕ ಕಲ್ಯಾಣ ಯೋಜನೆಗಳು ಹಾಗೂ ಸಾರ್ವಜನಿಕ ಸೇವೆಗಳ ಸುಧಾರಣೆಯನ್ನು ಮುಂದಿಟ್ಟುಕೊಂಡು 2027ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ಯತ್ನಿಸುತ್ತಿದೆ. ಆದರೆ, ಮಾದಕವಸ್ತು ನಿಯಂತ್ರಣ ವೈಫಲ್ಯ, ನಿರುದ್ಯೋಗ ಹಾಗೂ ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ಸರ್ಕಾರ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.
ಮತ್ತೊಂದೆಡೆ, 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 13 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಗೆದ್ದು ಸುಮಾರು 26%ರಷ್ಟು ಮತ ಪಡೆದಿದ್ದ ಕಾಂಗ್ರೆಸ್, 2027ರಲ್ಲಿ ಅಧಿಕಾರಕ್ಕೆ ಮರಳುವ ಉತ್ಸಾಹದಲ್ಲಿದೆ. ಅಕಾಲಿ ದಳ–ಬಿಜೆಪಿ ಮರುಮೈತ್ರಿಯಿಂದಾಗಿ ಎಎಪಿ ವಿರೋಧಿ ಮತಗಳು ವಿಭಜನೆಯಾಗಲಿವೆಯೇ ಅಥವಾ ಈ ಮೈತ್ರಿಕೂಟವೇ ಎಎಪಿಗೆ ನೇರ ಪೈಪೋಟಿ ನೀಡಲಿದೆಯೇ ಎಂಬುದು ಕುತೂಹಲಕಾರಿ.


