ಇದೀಗ ದ್ವಿತೀಯ ಪಿಯುಸಿಯ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ದಿಕ್ಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ವಿಜ್ಞಾನಗಳು, ಕಾನೂನು, ಕಲೆ, ವಾಣಿಜ್ಯ, ವಿಜ್ಞಾನದಲ್ಲಿ ಸ್ನಾತಕ ಪದವಿಯಂತಹ ಹತ್ತಾರು ದಾರಿಗಳ ಆಯ್ಕೆಗಳಿವೆ.
‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ ಎಂಬುದು ಗಾದೆ ಮಾತು. ಇದು ತನ್ನ ಮೂಲದಲ್ಲಿ ರೈತರಿಗೆ ಅನ್ವಯಿಸುವ ಮಾತಾದರೂ ಪಿಯುಸಿಯ ನಂತರ ಕೃಷಿ ವಿಜ್ಞಾನಗಳಲ್ಲಿ ಯಾವುದಾದರೂ ಒಂದು ಸ್ನಾತಕ ಪದವಿಯನ್ನು ಅಧ್ಯಯನ ಮಾಡಬೇಕು ಎಂಬ ತೀವ್ರತರದ ಆಸೆಯನ್ನು ಇಟ್ಟುಕೊಂಡಿರುವ ವಿದ್ಯಾರ್ಥಿಗಳಿಗೂ ಈ ಗಾದೆ ಅನ್ವಯಿಸುತ್ತದೆ. ಅವರ ಪೋಷಕರೂ ಅಂತಹ ಆಸೆಗೆ ಬೆಂಬಲವಾಗಿ ನಿಂತಿರುತ್ತಾರೆ. ಅಂತಹ ಕೃಷಿ ವಿಜ್ಞಾನಗಳಲ್ಲಿ 1. ಕೃಷಿ, 2. ತೋಟಗಾರಿಕೆ, 3. ಅರಣ್ಯ ಕೃಷಿ, 4. ಕೃಷಿ ವ್ಯವಹಾರ ನಿರ್ವಹಣೆ, 5. ಕೃಷಿ ಜೈವಿಕ ತಂತ್ರಜ್ಞಾನ, 6. ಕೃಷಿ ಆಹಾರ ತಂತ್ರಜ್ಞಾನ, 7. ರೇಷ್ಮೆ ಕೃಷಿ, 8. ಸಮುದಾಯ ವಿಜ್ಞಾನ, 9. ಕೃಷಿ ಇಂಜಿನಿಯರಿಂಗ್, 10. ಪಶುವೈದ್ಯಕೀಯ ವಿಜ್ಞಾನ, 11. ಹೈನುಗಾರಿಕೆ ತಂತ್ರಜ್ಞಾನ, 12. ಮೀನುಗಾರಿಕಾ ವಿಜ್ಞಾನ, (1. BSc Honours in Agriculture, 2. BSc Honours in Horticulture, 3. BSc Honours in Forestry, 4. BSc Honours Agri. Business Management, 5. B Tech in Biotechnology, 6. B Tech in Food Technology, 7. BSc Honours in Sericulture, 8. BSc Honours in Community Science, 9. B Tech in Agricultural Engineering, 10. Bachelor of Veterinary Science and Animal Husbandry, 11. B Tech in Dairy Technology, 12. Bachelor of Fisheries Science) ಎಂಬ ಪದವಿ ಕೋರ್ಸುಗಳಿವೆ.
ಸಾಮಾನ್ಯ ಪ್ರವೇಶ ಪರೀಕ್ಷೆ
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ತಯಾರಾದ ಶ್ರೇಣಿಯನ್ನು ಅವಲಂಬಿಸಿ ವಿವಿಧ ಕೋರ್ಸುಗಳಿಗೆ ಪ್ರವೇಶ ನೀಡಲಾಗುತ್ತದೆ. ಜೊತೆಗೆ, ಕೆಲವು ಸೀಟುಗಳಿಗೆ ಅನಿವಾಸಿ ಭಾರತೀಯ ಮತ್ತಿತರ ಕೋಟಾದಡಿಯಲ್ಲಿ ವಿವಿ ಮಟ್ಟದಲ್ಲಿ ಪ್ರವೇಶ ನೀಡಲಾಗುತ್ತದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಹಾಗೂ ಭಾರತೀಯ ಪಶುವೈದ್ಯಕೀಯ ಪರಿಷತ್ತು ಅವುಗಳ ನಿಗದಿಯಾದ ಕೋಟಾದಂತೆ ಸೀಟುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ.
ರೈತರ ಮಕ್ಕಳಿಗೆ ಶೇ. 50 ಮೀಸಲಾತಿ
ಕೃಷಿ ವಿಜ್ಞಾನಗಳ ವಿವಿಧ ಕೋರ್ಸುಗಳಲ್ಲಿ ರಾಜ್ಯ ಸರ್ಕಾರದ ತೀರ್ಮಾನದಂತೆ ರೈತರ ಮಕ್ಕಳಿಗೆ ಶೇ. 50ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಅಂತಹ ಮೀಸಲಾತಿಯನ್ನು ಬಯಸುವ ಅಭ್ಯರ್ಥಿಗಳು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಇದೇ ಏಪ್ರಿಲ್ 10, 2026ರಂದು ಹೊರಡಿಸಿರುವ ಪ್ರಕಟಣೆಯನ್ನು ಗಮನಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಕೃಷಿ ಮತ್ತಿತರ ಕೃಷಿ ಸಂಬಂಧಿತ ಉದ್ಯೋಗದಲ್ಲಿ ತೊಡಗಿಕೊಂಡಿರುವ ಪೋಷಕರ ಮಕ್ಕಳು ಅಗತ್ಯವಿರುವ ಎಲ್ಲಾ ಸರ್ಟಿಫಿಕೇಟುಗಳನ್ನು ಸಲ್ಲಿಸಬೇಕು. ಪೋಷಕರ ಪ್ರಮುಖ ಆದಾಯವು ಕೃಷಿ ಮತ್ತಿತರ ಕೃಷಿ ಸಂಬಂಧಿತ ಉದ್ಯೋಗಗಳಿಂದ ಗಳಿಸುತ್ತಿರಬೇಕು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳು
ಪಿಯುಸಿ ನಂತರದ ಶಿಕ್ಷಣದ ಆಯ್ಕೆಯನ್ನು ‘ಟರ್ನಿಂಗ್ ಪಾಯಿಂಟ್’ ಎಂದು ವ್ಯಾಖ್ಯಾನಿಸಲಾಗಿದೆ. ವಿದ್ಯಾರ್ಥಿಯ ಉನ್ನತ ಶಿಕ್ಷಣವನ್ನು ಮತ್ತು ಜೀವನವನ್ನು ರೂಪಿಸಿಕೊಳ್ಳುವ ಒಂದು ಪ್ರಮುಖ ಘಟ್ಟವದು. ಕೃಷಿ ವಿಜ್ಞಾನಗಳಲ್ಲಿ ಉನ್ನತ ಶಿಕ್ಷಣವನ್ನು ಆಧ್ಯಯನ ಮಾಡಲು ಕರ್ನಾಟಕ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳೆಂದರೆ, 1. ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, 2. ಕೃಷಿ ವಿಶ್ವವಿದ್ಯಾಲಯ, ಧಾರವಾಡ, 3. ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್, 4. ಕೃಷಿ ವಿಶ್ವವಿದ್ಯಾಲಯ, ರಾಯಚೂರು, 5. ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, 6. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಮತ್ತು 7. ಕೃಷಿ ವಿಶ್ವವಿದ್ಯಾಲಯ, ಮಂಡ್ಯ.

ಪ್ರವೇಶ ಬಯಸುವ ವಿದ್ಯಾರ್ಥಿಗಳ ಮಾಹಿತಿಗಾಗಿ ವಿವಿಧ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ವ್ಯಾಪ್ತಿ, ಕಾಲೇಜುಗಳು ಮತ್ತು ಕೋರ್ಸುಗಳ ವಿವರಗಳನ್ನು ಈ ಮುಂದಿನಂತೆ ನೀಡಲಾಗಿದೆ. ಓದುವ ಕ್ರಮ: ವಿವಿಧ ವಿಶ್ವವಿದ್ಯಾಲಯಗಳ ಅಡಿಯಲ್ಲಿರುವ ಕಾಲೇಜಿನ ಹೆಸರು, ಸ್ಥಳ ಮತ್ತು ಪದವಿ ಕಾರ್ಯಕ್ರಮ.
ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
ಕೃಷಿ ಕಾಲೇಜು, ಜಿಕೆವಿಕೆ, ಬೆಂಗಳೂರು, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಇಂಜಿನಿಯರಿಂಗ್ ಕಾಲೇಜು, ಜಿಕೆವಿಕೆ, ಬೆಂಗಳೂರು, ಬಿ ಟೆಕ್. ಕೃಷಿ ಇಂಜಿನಿಯರಿಂಗ್
ಕೃಷಿ ಕಾಲೇಜು, ಜಿಕೆವಿಕೆ, ಬೆಂಗಳೂರು, ಬಿಎಸ್ಸಿ (ಆನರ್ಸ್) ಕೃಷಿ ವ್ಯವಹಾರ ನಿರ್ವಹಣೆ
ಕೃಷಿ ಕಾಲೇಜು, ಜಿಕೆವಿಕೆ, ಬೆಂಗಳೂರು, ಬಿಎಸ್ಸಿ (ಆನರ್ಸ್) ಆಹಾರ, ಪೋಷಣೆ ಮತ್ತು ಪೌಷ್ಟಿಕಾಂಶ ವಿಜ್ಞಾನ
ಕೃಷಿ ಕಾಲೇಜು, ಚಿಂತಾಮಣಿ, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಕಾಲೇಜು, ಚಿಂತಾಮಣಿ, ಬಿಎಸ್ಸಿ (ಆನರ್ಸ್) ರೇಷ್ಮೆ ಕೃಷಿ
ಕೃಷಿ ವಿಶ್ವವಿದ್ಯಾಲಯ, ಧಾರವಾಡ
ಕೃಷಿ ಕಾಲೇಜು, ಧಾರವಾಡ, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಕಾಲೇಜು, ಧಾರವಾಡ, ಬಿಎಸ್ಸಿ (ಆನರ್ಸ್) ಕೃಷಿ ವ್ಯವಹಾರ ನಿರ್ವಹಣೆ
ಕೃಷಿ ಕಾಲೇಜು, ವಿಜಯಪುರ, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಕಾಲೇಜು, ಹನುಮನಮಟ್ಟಿ, ಬಿಎಸ್ಸಿ (ಆನರ್ಸ್) ಕೃಷಿ
ಅರಣ್ಯ ವಿಜ್ಞಾನ ಕಾಲೇಜು, ಶಿರಸಿ, ಬಿಎಸ್ಸಿ (ಆನರ್ಸ್) ಅರಣ್ಯ ವಿಜ್ಞಾನ
ಸಮುದಾಯ ವಿಜ್ಞಾನ ಕಾಲೇಜು, ಧಾರವಾಡ, ಬಿಎಸ್ಸಿ (ಆನರ್ಸ್) ಸಮುದಾಯ ವಿಜ್ಞಾನ
ಸಮುದಾಯ ವಿಜ್ಞಾನ ಕಾಲೇಜು, ಧಾರವಾಡ, ಬಿ. ಟೆಕ್. (ಆಹಾರ ತಂತ್ರಜ್ಞಾನ)
ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್
ಪಶುವೈದ್ಯಕೀಯ ಕಾಲೇಜು, ಹೆಬ್ಬಾಳ, ಬೆಂಗಳೂರು, ಬಿ.ವಿ.ಎಸ್ಸಿ. & ಎ.ಎಚ್.
ಪಶುವೈದ್ಯಕೀಯ ಕಾಲೇಜು, ಬೀದರ್, ಬಿ.ವಿ.ಎಸ್ಸಿ. & ಎ.ಎಚ್.
ಪಶುವೈದ್ಯಕೀಯ ಕಾಲೇಜು, ಶಿವಮೊಗ್ಗ, ಬಿ.ವಿ.ಎಸ್ಸಿ. & ಎ.ಎಚ್.
ಹಾಸನ ಪಶುವೈದ್ಯಕೀಯ ಕಾಲೇಜು, ಹಾಸನ, ಬಿ.ವಿ.ಎಸ್ಸಿ. & ಎ.ಎಚ್.
ಪಶುವೈದ್ಯಕೀಯ ಕಾಲೇಜು, ಗದಗ, ಬಿ.ವಿ.ಎಸ್ಸಿ. & ಎ.ಎಚ್.
ಪಶುವೈದ್ಯಕೀಯ ಕಾಲೇಜು, ಅಥಣಿ, ಬಿ.ವಿ.ಎಸ್ಸಿ. & ಎ.ಎಚ್.
ಮೀನುಗಾರಿಕಾ ಕಾಲೇಜು, ಮಂಗಳೂರು, ಬಿ. ಎಫ್. ಎಸ್ಸಿ.
ಹೈನುಗಾರಿಕಾ ಕಾಲೇಜು, ಹೆಬ್ಬಾಳ, ಬೆಂಗಳೂರು, ಬಿ. ಟೆಕ್ (ಡಿ. ಟೆಕ್.)
ಹೈನುಗಾರಿಕಾ ಕಾಲೇಜು, ಮಹಗಾವ ಕ್ರಾಸ್, ಕಲಬುರಗಿ, ಬಿ. ಟೆಕ್ (ಡಿ. ಟೆಕ್.)
ಕೃಷಿ ವಿಶ್ವವಿದ್ಯಾಲಯ, ರಾಯಚೂರು
ಕೃಷಿ ಕಾಲೇಜು, ರಾಯಚೂರು, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಇಂಜಿನಿಯರಿಂಗ್ ಕಾಲೇಜು, ರಾಯಚೂರು, ಬಿ. ಟೆಕ್ (ಕೃಷಿ ಇಂಜಿನಿಯರಿಂಗ್)
ಕೃಷಿ ಕಾಲೇಜು, ಭೀಮರಾಯನಗುಡಿ, ಯಾದಗಿರಿ ಜಿಲ್ಲೆ. ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಕಾಲೇಜು, ಕಲಬುರಗಿ, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಕಾಲೇಜು, ಗಂಗಾವತಿ, ಕೊಪ್ಪಳ ಜಿಲ್ಲೆ, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಕಾಲೇಜು, ಹಗರಿ, ಬಳ್ಳಾರಿ ಜಿಲ್ಲೆ, ಬಿಎಸ್ಸಿ (ಆನರ್ಸ್) ಕೃಷಿ
ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ
ತೋಟಗಾರಿಕಾ ಕಾಲೇಜು, ಉದ್ಯಾನಗಿರಿ, ನವನಗರ, ಬಾಗಲಕೋಟೆ ಜಿಲ್ಲೆ, ಬಿಎಸ್ಸಿ (ಆನರ್ಸ್) ತೋಟಗಾರಿಕೆ
ತೋಟಗಾರಿಕಾ ಕಾಲೇಜು, ಮುನಿರಾಬಾದ್, ಕೊಪ್ಪಳ ಜಿಲ್ಲೆ, ಬಿಎಸ್ಸಿ (ಆನರ್ಸ್) ತೋಟಗಾರಿಕೆ
ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕಾ ಕಾಲೇಜು, ಅರಬಾವಿ, ಬೆಳಗಾವಿ ಜಿಲ್ಲೆ, ಬಿಎಸ್ಸಿ (ಆನರ್ಸ್) ತೋಟಗಾರಿಕೆ
ತೋಟಗಾರಿಕಾ ಕಾಲೇಜು, ಬೀದರ್, ಬಿಎಸ್ಸಿ (ಆನರ್ಸ್) ತೋಟಗಾರಿಕೆ
ತೋಟಗಾರಿಕಾ ಕಾಲೇಜು, ಶಿರಸಿ, ಉತ್ತರ ಕನ್ನಡ, ಬಿಎಸ್ಸಿ (ಆನರ್ಸ್) ತೋಟಗಾರಿಕೆ
ತೋಟಗಾರಿಕಾ ಕಾಲೇಜು, ಜಿಕೆವಿಕೆ, ಬೆಂಗಳೂರು, ಬಿಎಸ್ಸಿ (ಆನರ್ಸ್) ತೋಟಗಾರಿಕೆ
ತೋಟಗಾರಿಕಾ ಕಾಲೇಜು, ತಮಕ, ಕೋಲಾರ ಜಿಲ್ಲೆ, ಬಿಎಸ್ಸಿ (ಆನರ್ಸ್) ತೋಟಗಾರಿಕೆ
ತೋಟಗಾರಿಕಾ ಕಾಲೇಜು, ಇಲವಾಲ, ಮೈಸೂರು, ಬಿಎಸ್ಸಿ (ಆನರ್ಸ್) ತೋಟಗಾರಿಕೆ
ಡಿಎಸ್ಎಲ್ಡಿ ತೋಟಗಾರಿಕಾ ಇಂಜಿನಿಯರಿಂಗ್ ಮತ್ತು ಆಹಾರ ತಂತ್ರಜ್ಞಾನ ಕಾಲೇಜು, ದೇವಿಹೊಸೂರು, ಹಾವೇರಿ ಜಿಲ್ಲೆ, ಬಿ. ಟೆಕ್ (ಆಹಾರ ತಂತ್ರಜ್ಞಾನ)
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ
ಕೃಷಿ ಕಾಲೇಜು, ನವಿಲೆ, ಶಿವಮೊಗ್ಗ, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಕಾಲೇಜು, ಇರುವಕ್ಕಿ, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಕಾಲೇಜು, ಇರುವಕ್ಕಿ, ಬಿಎಸ್ಸಿ (ಆನರ್ಸ್) ತೋಟಗಾರಿಕೆ
ಕೃಷಿ ಕಾಲೇಜು, ಇರುವಕ್ಕಿ, ಬಿಎಸ್ಸಿ (ಆನರ್ಸ್) ಅರಣ್ಯ ವಿಜ್ಞಾನ
ತೋಟಗಾರಿಕಾ ಕಾಲೇಜು, ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ, ಬಿಎಸ್ಸಿ (ಆನರ್ಸ್) ತೋಟಗಾರಿಕೆ
ತೋಟಗಾರಿಕಾ ಕಾಲೇಜು, ಹಿರಿಯೂರು, ಚಿತ್ರದುರ್ಗ ಜಿಲ್ಲೆ, ಬಿಎಸ್ಸಿ (ಆನರ್ಸ್) ತೋಟಗಾರಿಕೆ
ತೋಟಗಾರಿಕಾ ಕಾಲೇಜು, ಹಿರಿಯೂರು, ಚಿತ್ರದುರ್ಗ ಜಿಲ್ಲೆ, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ವಿಶ್ವವಿದ್ಯಾಲಯ, ಮಂಡ್ಯ
ಕೃಷಿ ಕಾಲೇಜು, ಮಂಡ್ಯ, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಕಾಲೇಜು, ಹಾಸನ, ಬಿಎಸ್ಸಿ (ಆನರ್ಸ್) ಕೃಷಿ
ಕೃಷಿ ಕಾಲೇಜು, ಹಾಸನ, ಬಿ. ಟೆಕ್. (ಜೈವಿಕ ತಂತ್ರಜ್ಞಾನ)
ಕೃಷಿ ಕಾಲೇಜು, ಹಾಸನ, ಬಿ. ಟೆಕ್. (ಆಹಾರ ತಂತ್ರಜ್ಞಾನ)
ಕೃಷಿ ಕಾಲೇಜು, ಚಾಮರಾಜನಗರ, ಬಿಎಸ್ಸಿ (ಆನರ್ಸ್) ಕೃಷಿ
ಅರಣ್ಯ ವಿಜ್ಞಾನ ಕಾಲೇಜು, ಪೊನ್ನಂಪೇಟೆ, ಕೊಡಗು ಜಿಲ್ಲೆ, ಬಿಎಸ್ಸಿ (ಆನರ್ಸ್) ಅರಣ್ಯ ವಿಜ್ಞಾನ
ಇವುಗಳ ಜೊತೆಗೆ ಖಾಸಗಿ ಕೃಷಿ ಕಾಲೇಜುಗಳು ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಆರಂಭವಾಗಿವೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ವಿಶ್ವವಿದ್ಯಾಲಯಗಳನ್ನು ಅಥವಾ ಕಾಲೇಜುಗಳನ್ನು ಸಂಪರ್ಕಿಸಬಹುದಾಗಿದೆ.
ಕೊನೆಯ ಮಾತು
ಹರಿದು ಹಂಚಿ ಹೋಗಿರುವ ಹಲವು ಕೃಷಿ ವಿಜ್ಞಾನಗಳ ಉನ್ನತ ಶಿಕ್ಷಣವನ್ನು ಒಂದೇ ಸೂರಿನಡಿ ತರಬೇಕಿದೆ. ಅದಕ್ಕಾಗಿ, ಅಧ್ಯಯನ ವರದಿಯನ್ನು ಸಲ್ಲಿಸಲು ಮಾಜಿ ಕುಲಪತಿಗಳಾದ ಡಾ. ಶೀಲವಂತ ಅವರ ಅಧ್ಯಕ್ಷತೆಯಲ್ಲಿ 2019ರಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಸಮಗ್ರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಅರ್ಥಾತ್ ಏಕೀಕರಣಗೊಂಡ ಬಹುಶಿಸ್ತೀಯ ಕೃಷಿ ವಿಶ್ವವಿದ್ಯಾಲಯಗಳ ರಚನೆಗೆ ಶಿಫಾರಸ್ಸು ಮಾಡಿತು. ತದನಂತರ, ಮಾರ್ಚ್ 2025ರಲ್ಲಿ ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಗಳಾದ ಟಿ. ಎಂ. ವಿಜಯಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಮತ್ತೊಂದು ತಜ್ಞರ ಸಮಿತಿಯು ಸಮಗ್ರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ರಚನೆಗೆ ಶಿಫಾರಸ್ಸು ಮಾಡಿದೆ. ಆದರೆ, ಕೃಷಿ ವಿಜ್ಞಾನಗಳ ಉನ್ನತ ಶಿಕ್ಷಣದಲ್ಲಿ ರಾಜಕೀಯದ ದುರ್ಗಂಧವು ನುಸುಳಿರುವುದರಿಂದ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ಎಂಬ ಕೃಷಿ ವಿಶ್ವವಿದ್ಯಾಲಯಗಳ ಉದ್ದೇಶಿತ ಧ್ಯೇಯಕ್ಕೆ ಹಿನ್ನಡೆಯಾಗಿದೆ. ಸಮಗ್ರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ರಚನೆಯು ಕನಸಾಗುವ ದಿನ ಎಂದು ಬರುವುದೋ ಎಂದು ಚಾತಕ ಪಕ್ಷಿಯಂತೆ ಕಾಯಬೇಕಿದೆ. ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳು ರಾಜ್ಯ ವ್ಯಾಪ್ತಿಯನ್ನು ಹೊಂದಿರುವುದು ಹಲವು ಕಾರಣಗಳಿಂದಾಗಿ ಅನಾನುಕೂಲಕರವಾಗಿದೆ.
ಭೌಗೋಳಿಕವಾಗಿ ಕಡಿಮೆ ವ್ಯಾಪ್ತಿಯ ಕೃಷಿ ವಿಶ್ವವಿದ್ಯಾಲಯಗಳ ರಚನೆಯಾಗಬೇಕು. ರೈತರು ಬಯಸುವ ಸಲಹೆ ಸಹಕಾರಗಳು ಒಂದೇ ಸೂರಿನಡಿ ಲಭ್ಯವಿರಬೇಕು. ಕೃಷಿ ವಿಜ್ಞಾನಗಳು ಒಂದಕ್ಕೊಂದು ಪೂರಕವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅಂತಹ ವಿಜ್ಞಾನಗಳ ಕಾಲೇಜುಗಳೊಂದಿಗೆ ನಿಕಟ ಒಡನಾಟವಿದ್ದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಾರ್ಜನೆಗೆ ಹೆಚ್ಚು ಅನುಕೂಲಕರ. ವಿವಿಧ ಶಿಸ್ತುಗಳ ಶಿಕ್ಷಕರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಉದಾಹರಣೆಗೆ: ತೋಟಗಾರಿಕಾ ವಿದ್ಯಾರ್ಥಿಗಳಿಗೆ ಕೃಷಿ ಕೀಟ ವಿಜ್ಞಾನ, ಶಿಲೀಂಧ್ರ ವಿಜ್ಞಾನ, ಮತ್ತಿತರ ವಿಷಯಗಳನ್ನು ಬೋಧಿಸಲು, ಸಂಶೋಧಿಸಲು, ವಿಸ್ತರಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕೃಷಿ ವಿಜ್ಞಾನಗಳ ಶಿಕ್ಷಕರು, ಕೃಷಿ ಪದವಿಯ ವಿದ್ಯಾರ್ಥಿಗಳಿಗೆ ಪಶು ವಿಜ್ಞಾನ ಬೋಧಿಸಲು ಪಶುವೈದ್ಯಕೀಯ ಶಿಕ್ಷಕರು ಮತ್ತು ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಮೇವು ಬೆಳೆಗಳ ವಿಜ್ಞಾನ ಬೋಧಿಸಲು ಕೃಷಿ ವಿಜ್ಞಾನಗಳ ಶಿಕ್ಷಕರು, ಹೀಗೆ ಶಿಕ್ಷಕರು ಪರಸ್ಪರ ಆಯಾಯ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳಲ್ಲಿಯೇ ಲಭ್ಯವಾಗುತ್ತಾರೆ. ಶಿಕ್ಷಕರು ಅಂತರಶಿಸ್ತೀಯ ಜ್ಞಾನವನ್ನು ವಿಚಾರಸಂಕಿರಣಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು. ದಿನನಿತ್ಯ ಶಿಕ್ಷಕರು ಜ್ಞಾನದ ಸಂಪರ್ಕ ಸೇತುವಾಗಬಹುದು.
ಜೊತೆಗೆ, ರೈತರಿಗೆ ಸಮರ್ಪಕವಾದ ಮಾಹಿತಿಯನ್ನು ಅಡೆತಡೆಗಳಿಲ್ಲದೆ ಒದಗಿಸಬಹುದು. ರೈತರು ವಿವಿಯಿಂದ ವಿವಿಗೆ ಮಾಹಿತಿಗಾಗಿ ಅಲೆಯುವುದನ್ನು ತಪ್ಪಿಸಬಹುದು. ಸ್ನಾತಕೋತ್ತರ ಮತ್ತು ಡಾಕ್ಟರಲ್ ಅಭ್ಯರ್ಥಿಗಳು ತಮ್ಮ ಸಂಶೋಧನೆಗೆ ಅಗತ್ಯವಾದ ಮೈನರ್ ಕೋರ್ಸುಗಳನ್ನು ಇತರೆ ಕಾಲೇಜುಗಳಲ್ಲಿ ಅಭ್ಯಸಿಸಬಹುದು. ಸಮಗ್ರ ಕೃಷಿ ವಿವಿಗಳಿಂದ ರಾಜ್ಯದ ಪ್ರಗತಿಗೆ ಅನುಕೂಲವಾಗುತ್ತದೆ. ಪ್ರತಿ ವರ್ಷ ನಡೆಯುವ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯಗಳ ಶ್ರೇಣೀಕರಣದಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಉತ್ತಮ ಶ್ರೇಣಿಯನ್ನು ಪಡೆಯಬಹುದು. ಕೃಷಿ ವಿಜ್ಞಾನದ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು.
ವಿಶೇಷ ಸೂಚನೆ: ವಿವಿಧ ಕೃಷಿ ವಿಜ್ಞಾನಗಳ ಪದವಿ ಕೋರ್ಸುಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಸೂಕ್ತ ಹಾಗೂ ಹೆಚ್ಚುವರಿ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ವಿವಿಧ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಪ್ರಕಟಣೆಗಳನ್ನು ಗಮನಿಸಲು ಕೋರಿದೆ.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ



