ಈ ಸಾರಿಯ ಕೃಷಿ ಮೇಳದಲ್ಲಿ ಮೂರು ಹೊಸ ತಳಿಗಳು ಬಿಡುಗಡೆಯಾಗಲಿವೆ. ಆ ತಳಿಗಳೆಂದರೆ ರಾಗಿ ತಳಿಯಾದ ಜಿಪಿಯು 101, ಮುಸುಕಿನ ಜೋಳ ಎಂಎಎಚ್-20-45 ಮತ್ತು ಬೀಜದ ದಂಟು ಕೆಬಿಜಿಎ-18.
ಎಲ್ ನಿನೋ ಪರಿಣಾಮದಿಂದಾಗಿ ರಾಜ್ಯದಲ್ಲಿ ತೀವ್ರ ಬರಗಾಲವಿರುವುದರಿಂದ ಈ ಸಾರಿಯ ಕೃಷಿ ಮೇಳವನ್ನು ಒಂದು ದಿನಕ್ಕೆ ಸೀಮಿತಗೊಳಿಸಲು ಆಲೋಚಿಸಲಾಗಿತ್ತು. ಅದರಂತೆ, ನವೆಂಬರ್ 13ರ ದಿನಾಂಕವನ್ನು ಗೊತ್ತುಪಡಿಸಲಾಗಿತ್ತು. ಆದರೆ, ಕೃಷಿ ಸಚಿವರಾದ ಪಿ. ಎಂ. ನರೇಂದ್ರಸ್ವಾಮಿಯವರ ಸೂಚನೆಯಂತೆ ಇದೀಗ ಮೂರು ದಿನಗಳ ಕಾಲ ನವೆಂಬರ್ 16, 17, ಮತ್ತು 18ರಂದು ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯಲಿದೆ. ಅಲ್ಲಿ 100 ಪ್ರದರ್ಶನ ಮಳಿಗೆಗಳಿರಲಿವೆ. Exhibitions are the most economical aids to increased sales” ಎಂಬುದು ಅಕ್ಟೋಬರ್ 1929ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕೈಗಾರಿಕೆ ಮತ್ತು ಕೃಷಿ ವಸ್ತು ಪ್ರದರ್ಶನದ ಆಕರ್ಷಕ ಘೋಷವಾಕ್ಯವಾಗಿದ್ದಂತೆ ಈ ಸಾರಿಯ ಕೃಷಿ ಮೇಳವನ್ನು ಬರದ ಸಂದರ್ಭದಲ್ಲೂ ತಕ್ಕಮಟ್ಟಿಗೆ ಆಕರ್ಷಕವಾಗಿ ಮಾಡುವ ಪ್ರಯತ್ನಗಳು ನಡೆದಿವೆ.
ನವೆಂಬರ್ 16ರಂದು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ, ನವೆಂಬರ್ 17ರಂದು ತುಮಕೂರು ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ನವೆಂಬರ್ 18ರಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರು ಕೃಷಿ ಮೇಳಕ್ಕೆ ಆಗಮಿಸಲಿದ್ದಾರೆ.

ಮೂರು ಹೊಸ ತಳಿಗಳ ಬಿಡುಗಡೆ : ಈ ಸಾರಿಯ ಕೃಷಿ ಮೇಳದಲ್ಲಿ ಮೂರು ಹೊಸ ತಳಿಗಳು ಬಿಡುಗಡೆಯಾಗಲಿವೆ. ಆ ತಳಿಗಳೆಂದರೆ ರಾಗಿ ತಳಿಯಾದ ಜಿಪಿಯು 101, ಮುಸುಕಿನ ಜೋಳ ಎಂಎಎಚ್-20-45 ಮತ್ತು ಬೀಜದ ದಂಟು ಕೆಬಿಜಿಎ-18.
ರಾಗಿ ತಳಿ ಜಿಪಿಯು 101 ವಿಶೇಷತೆ– ಜಿಪಿಯು 101 ರಾಗಿ ತಳಿಯು 110 ರಿಂದ 115 ದಿನಗಳಲ್ಲಿ ಕೊಯ್ಲಿಗೆ ಬರಲಿದೆ. ಒಂದು ಹೆಕ್ಟೇರಿಗೆ 37 ರಿಂದ 40 ಕ್ವಿಂಟಾಲ್ ಇಳುವರಿ ಬರಲಿದೆ. ಹಾಗೆಯೇ, ಒಂದು ಹೆಕ್ಟೇರಿಗೆ 6.5 ಟನ್ ರಾಗಿ ಹುಲ್ಲು ಸಿಗಲಿದೆ. ಇಲುಕು ಮತ್ತು ಕುತ್ತಿಗೆ ಬೆಂಕಿ ರೋಗಕ್ಕೆ ನಿರೋಧಕತೆಯನ್ನು ಹೊಂದಿದೆ. ಅಷ್ಟಾಗಿ ಮಳೆ ಗಾಳಿಗೆ ಬಳಲಿ ಬೆಂಡಾಗಿ ಬಾಗುವುದಿಲ್ಲ. ತೆನೆಯಲ್ಲಿ ಇಲುಕುಗಳು ಒಳಗಡೆಗೆ ಬಾಗಿರುವುದರಿಂದ ಸುಡು ಬಿಸಿಲಿಗೆ ಮುರಿದು ಬೀಳುವುದಿಲ್ಲ.
ಮುಸುಕಿನ ಜೋಳ ಎಂಎಎಚ್-20-45 ವಿಶೇಷತೆ– ಬಿಡುಗಡೆಯಾಗುತ್ತಿರುವ ಮುಸುಕಿನ ಜೋಳದ ತಳಿಯ ವಿಶೇಷತೆಗಳೆಂದರೆ ಬೆಳೆ ಅವಧಿಯು 125 ರಿಂದ 130 ದಿನಗಳು. ಇಳುವರಿ ಒಂದು ಹೆಕ್ಟೇರಿಗೆ 110 ರಿಂದ 115 ಕ್ವಿಂಟಾಲ್. ಟರ್ಸಿಕಮ್ ಎಲೆ ಅಂಗ ಮಾರಿ ರೋಗಕ್ಕೆ ಮತ್ತು ಕೇದಿಗೆ ರೋಗಕ್ಕೆ ತಕ್ಕಮಟ್ಟಿಗೆ ಸಹಿಷ್ಣುತೆಯನ್ನು ಹೊಂದಿದೆ. ಇದು ದಷ್ಟಪುಷ್ಟವಾಗಿ ಬೆಳೆಯುವ ಮುಸುಕಿನ ಜೋಳದ ಬೆಳೆ. ಧಾನ್ಯ ಹಾಗೂ ಮೇವಿಗಾಗಿ ಸೂಕ್ತವಾಗಿದೆ. ಗಟ್ಟಿ ಹಾಗೂ ಬಲಿಷ್ಟವಾದ ಕಾಂಡ, ಅಗಲ ಮತ್ತು ಮಂದ ಎಲೆಗಳನ್ನು ಹೊಂದಿರುವುದರಿಂದ ಹೆಚ್ಚಿನ ದ್ರವ್ಯರಾಶಿಯ ಉತ್ಪಾದನೆಯಾಗುತ್ತದೆ.
ಬೀಜದ ದಂಟು ಕೆಬಿಜಿಎ-18 ವಿಶೇಷತೆ
ಕೆಬಿಜಿಎ-18 ಬೀಜದ ದಂಟನ್ನು ಬಿಡುಗಡೆ ಮಾಡಲಾಗುತ್ತಿದೆ. ಒಂದು ಹೆಕ್ಟರಿಗೆ 22 ರಿಂದ 24 ಕ್ವಿಂಟಾಲ್ ಇಳುವರಿ ಕೊಡಲಿದೆ. ಎಲೆ ತುಕ್ಕು ಮತ್ತು ಎಲೆ ಚುಕ್ಕೆ ರೋಗ ಹಾಗೂ ಪ್ರಮುಖ ಕೀಟಗಳಿಗೆ ನಿರೋಧಕ ಶಕ್ತಿ ಹೊಂದಿದೆ. ಕಾಂಡವು ಬಲಿಷ್ಠವಾಗಿದ್ದು ಭಾಗುವಿಕೆಗೆ ನಿರೋಧಕತೆಯನ್ನು ಹೊಂದಿದೆ.

ರೈತರ ವೀಕ್ಷಣೆಗಾಗಿ ಬೆಳೆ ತಾಕುಗಳು
ಕೃಷಿ ಮೇಳ ನಡೆಯುವ ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ತಾಕುಗಳನ್ನು ರೈತರು ವೀಕ್ಷಿಸಬಹುದಾಗಿದೆ. ಸುಮಾರು 10 ಎಕರೆಗಳ ಜಾಗದಲ್ಲಿ 75 ಬೆಳೆಗಳ ಪುಟ್ಟ ಪುಟ್ಟ ಪ್ರಾತ್ಯಕ್ಷಿಕೆ ತಾಕುಗಳನ್ನು ಕೃಷಿ ಮೇಳದ ಸಂದರ್ಭಕ್ಕೆ ಸರಿಯಾಗಿ ಬೆಳೆದು ನಿಲ್ಲುವಂತೆ ಮಾಡಲಾಗಿದೆ. ಅಲ್ಲಿ ಪಕ್ಕದಲ್ಲಿ ಜೇನು ಸಾಕಣೆಯ ಮಧುವನವಿದೆ. ಎರಹುಳು ಗೊಬ್ಬರ ಉತ್ಪಾದನೆಯ ಘಟಕಗಳಿವೆ. ಹಸಿರು ಮನೆಯಲ್ಲಿ ಬೆಳೆದ ಬೆಳೆಗಳಿವೆ. ಒಣ ಭೂಮಿ ಕೃಷಿ, ಸಮಗ್ರ ಕೃಷಿ ಪದ್ದತಿಯ ಪ್ರಾತ್ಯಕ್ಷಿಕೆಗಳಿವೆ. ಕೀಟ ವಿಸ್ಮಯ ಹಾಗೂ ಹಲವಾರು ವಸ್ತು ಪ್ರದರ್ಶನಗಳಿರುತ್ತವೆ.
ರಾಜ್ಯ ಮಟ್ಟದ ಪ್ರಗತಿ ಪರ ರೈತ ಪ್ರಶಸ್ತಿಗಳು
ಪ್ರಗತಿ ಪರ ರೈತರಿಗೆ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಲಾಳನಕೆರೆಯ ಶ್ರೀ ಪೂರ್ಣಚಂದ್ರ ಬಿನ್ ನಂಜೇಗೌಡ ಎಂ. ಮರಿಗೌಡರವÀರು ಮಾಜಿ ಪ್ರಧಾನ ಮಂತ್ರಿ ಶ್ರೀ ಎಚ್. ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿಯ ಶ್ರೀಕಾಂತ್, ಬಿ. ಬಿನ್ ಕೃಷ್ಣಯ್ಯನವರಿಗೆ ಡಾ. ಎಂ.ಎಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಸಂದಿದೆ. ಚಿಂತಾಮಣಿ ತಾಲ್ಲೂಕಿನ ಕುರಟಹಳ್ಳಿಯ ಸಿ. ಆರ್. ರಾಧಾಕೃಷ್ಣ ಬಿನ್ ರಾಮಪ್ಪನವರಿಗೆ ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಕೊಡಲಾಗುತ್ತಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿಯ ಶ್ರೀಮತಿ ರೂಪ ಎಚ್. ಪಿ. ಕೋಂ ರಾಘವೇಂದ್ರರವರಿಗೆ ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಯನ್ನು, ತಿಪಟೂರು ತಾಲ್ಲೂಕಿನ ತಡಸೂರು ಗ್ರಾಮದ ಯೋಗಾನಂದಮೂರ್ತಿ ಟಿ. ಎನ್. ಬಿನ್ ನಂಜಾಮರಿಯವರಿಗೆ ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ ಮತ್ತು ಮೈಸೂರು ತಾಲ್ಲೂಕಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕರಾದ ಡಾ. ಸಿ. ರಾಮಚಂದ್ರರವರಿಗೆ ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ರಾಜ್ಯ ಮಟ್ಟದ ಪ್ರಶಸ್ತಿಗಳ ಜೊತೆಗೆ ಸಾಧಕ ರೈತರಿಗೆ ಪ್ರತಿ ದಿನವೂ ಆಯಾಯ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.
ಕೃಷಿ ಮೇಳದ ಘೋಷವಾಕ್ಯ
ಕೃಷಿ ಮೇಳ -2026ರ ಘೋಷವಾಕ್ಯವು ‘ಬರ ನಿವಾರಣಾ ತಂತ್ರಜ್ಞಾನಗಳು ಹಾಗೂ ಕೃಷಿ ನಾವೀನ್ಯತೆಗಳ ಅನಾವರಣ’ ಎಂಬುದಾಗಿದೆ. ದಿನನಿತ್ಯ ವಿಚಾರ ಸಂಕಿರಣಗಳಿರುತ್ತವೆ. ಬರ ನಿವಾರಣಾ ತಂತ್ರಜ್ಞಾನಗಳು, ಸುಸ್ಥಿರ ಕೃಷಿ ಪದ್ದತಿಗಳು, ಬರ ಸನ್ನಿವೇಶದಲ್ಲಿ ಜಾನುವಾರಗಳ ನಿರ್ವಹಣೆ, ಮಳೆಯಾಶ್ರಿತ ತೋಟಗಾರಿಕೆ ಬೆಳೆಗಳ ನಿರ್ವಹಣೆ, ಬರ ಎದುರಿಸಲು ಭವಿಷ್ಯದ ಸಿದ್ದತೆಗಳು, ಹವಾಮಾನ ವೈಪರೀತ್ಯ ಮತ್ತು ಎಲ್ ನಿನೋ, ಜಲ ಮತ್ತು ಮಣ್ಣಿನ ಸಂರಕ್ಷಣೆ, ಬರ ಪರಿಸ್ಥಿತಿಗೆ ಪರ್ಯಾಯ ಬೆಳೆ, ತಳಿ ತಂತ್ರಜ್ಞಾನಗಳು, ಕೃಷಿ ತಂತ್ರಜ್ಞಾನ ಪ್ರದರ್ಶನ, ರೈತರಿಗೆ ಸಲಹಾ ಸೇವೆಗಳು ಕುರಿತಂತೆ ಅಗಾದ ಮಾಹಿತಿಯನ್ನು ರೈತ ಸಮುದಾಯದೊಡನೆ ಹಂಚಿಕೊಳ್ಳಲಾಗುತ್ತದೆ.
ಪ್ರಗತಿಪರ ಕೃಷಿಕರ ವಿಚಾರ ಮಂಡನೆ
ವಿಚಾರ ಸಂಕಿರಣದಲ್ಲಿ ನೆಲಮಂಗಲ ತಾಲ್ಲೂಕಿನ ಪ್ರಗತಿಪರ ಕೃಷಿಕರಾದ ಬಸವರಾಜುರವರು ನವೆಂಬರ್ 16ರಂದು ‘ಮಣ್ಣು ಮತ್ತು ನೀರು ಸಂರಕ್ಷಣೆ’ ಕುರಿತಂತೆ ಅನುಭವ ಕಥನವನ್ನು ಮಂಡಿಸಲಿದ್ದಾರೆ. ನವೆಂಬರ್ 17ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಗತಿಪರ ಕೃಷಿಕರಾದ ಎಂ. ಸಿ. ರಾಜಣ್ಣರವರು ‘ನೈಸರ್ಗಿಕ ಕೃಷಿ : ಪರಿಸರ ಸಮತೋಲನ’ ಎಂಬ ಯಶೋಗಾಥೆಯನ್ನು ವಿವರಿಸಲಿದ್ದಾರೆ. ನವೆಂಬರ್ 18ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಕೃಷಿಕರು ಹಾಗೂ ಪರಿಸರವಾದಿಗಳಾದ ಶ್ರೀವತ್ಸ ಗೋವಿಂದರಾಜುರವರು ‘ಮಣ್ಣು, ನೀರು ಮತ್ತು ಪರಿಸರ ಸಂರಕ್ಷಣೆ’ ಕುರಿತ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಕೃಷಿ ಮೇಳದ ಸಹಯೋಗ ಸಂಸ್ಥೆಗಳು
ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗಗಳು, ಕರ್ನಾಟಕ ಸರ್ಕಾರದ ಕೃಷಿ ಇಲಾಖೆ, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಇಲಾಖೆಗಳು ಕೃಷಿ ಮೇಳದಲ್ಲಿ ಭಾಗವಹಿಸುತ್ತಿವೆ. ಸುಮಾರು 100 ಮಳಿಗೆಗಳಲ್ಲಿ ರೈತರಿಗೆ ಉಪಯುಕ್ತವಾದ ಸಲಹೆ ಸಿಗುತ್ತದೆ. ಪರಿಕರಗಳ ಮಾರಾಟವಿರುತ್ತದೆ. ರೈತರಿಗೆ ಉತ್ಸಾಹವನ್ನು ತುಂಬಲಾಗುತ್ತದೆ.
ಕೊನೆಯ ಮಾತು…
ಕೃಷಿ ಮೇಳವೆಂದರೆ ಅದು ರೈತರ ವಾರ್ಷಿಕ ಹಬ್ಬ. ತಜ್ಞರು ಮತ್ತು ರೈತರ ನಡುವಿನ ವಿಚಾರ ವಿನಿಮಯ. ಸ್ಪೂರ್ತಿಯ ಸೇತುವೆ. ನನ್ನ ಸಂಶೋಧನಾ ಕೃತಿಯಾದ ‘ಮೈಸೂರಿನ ಕೃಷಿ ಇತಿಹಾಸ’ದಲ್ಲಿ ವಿವರಿಸಿರುವಂತೆ ಮೈಸೂರು ರಾಜ್ಯದಲ್ಲಿ 1870ರ ಸುಮಾರಿಗೆ ಕೃಷಿ ಸಂಶೋಧನಾ ಕ್ಷೇತ್ರಗಳನ್ನು ಬ್ರಿಟಿಷ್ ಅಧಿಕಾರಿಗಳು ಆರಂಭಿಸಿದಾಗ ಕೃಷಿ ಮೇಳಗಳಿಗೆ ಹೆಚ್ಚಿನ ಒತ್ತು ಕೊಟ್ಟರು. ಬ್ರಿಟಿಷ್ ಅಧಿಕಾರಿಗಳು ರೈತರ ಹೊಲ, ತೋಟ, ಗದ್ದೆಗಳಿಗೆ ಭೇಟಿಯಿತ್ತರು. ಸ್ಥಳೀಯ ಕೃಷಿ ಪದ್ದತಿಗಳ ಕುರಿತು ರೈತರಿಂದ ಮಾಹಿತಿ ಪಡೆದರು. ವಿದೇಶಿ ತಳಿಗಳನ್ನು ಆಮದು ಮಾಡಿಕೊಂಡರು. ಸ್ಥಳಿಯ ತಳಿಗಳ ಕುರಿತು ಕೃಷಿ ಸಂಶೋಧನಾ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ ಉತ್ತಮ ತಳಿಗಳನ್ನು ಆಯ್ಕೆ ವಿಧಾನದ ಮೂಲಕ ರೈತರಿಗೆ ಒದಗಿಸಿಕೊಟ್ಟರು. ಅದರಲ್ಲಿ ಲಾಲ್ ಬಾಗ್, ಹೆಬ್ಬಾಳ ಕೃಷಿ ಕ್ಷೇತ್ರ, ಮಂಡ್ಯದ ಇರ್ವಿನ್ ಕೆನಾಲ್ ಫಾರ್ಮ್, ಶಿವಮೊಗ್ಗ ಜಿಲ್ಲೆಯ ಮರ್ತೂರು ಫಾರ್ಮ್, ನಿಜಗೂರು ಫಾರ್ಮ್ ಮತ್ತು ಭದ್ರಾ ಕೃಷಿ ಕಾಲೋನಿ, ಚಿತ್ರದುರ್ಗ ಜಿಲ್ಲೆಯ ಬಬ್ಬೂರು ಫಾರ್ಮ್, ಮೈಸೂರು ಜಿಲ್ಲೆಯ ನಾಗೇನಹಳ್ಳಿ ಫಾರ್ಮ್ ಮತ್ತು ಹುಣಸೂರಿನ ಕರಿರಾಗಿ ಫಾರ್ಮ್, ಹಾಸನ ಜಿಲ್ಲೆಯ ಅರಕಲಗೂಡು ಫಾರ್ಮ್, ಮಂಡ್ಯ ಬಳಿಯ ಕೋಡಿಹಳ್ಳಿ, ಮಲ್ಲಿಗೆರೆ, ಸಾತನೂರು ಫಾರ್ಮ್‍ಗಳು, ಕೋಲಾರ ಜಿಲ್ಲೆಯ ಗರುಡಪಾಳ್ಯ ಫಾರ್ಮ್, ಅಂದಿನ ಕಡೂರು ಜಿಲ್ಲೆಯ ಬಾಳೇಹೊನ್ನೂರಿನ ಕಾಫಿ ಸಂಶೋಧನಾ ಸಂಸ್ಥೆ, ಅಮೃತ್ ಮಹಲ್ ಕಾವಲುಗಳು.. ಹೀಗೆ ಹಲವಾರು ಕೃಷಿ ಸಂಶೋಧನಾ ಸಂಸ್ಥೆಗಳು ನಾಡಿನ ರೈತರ ಒಳಿತಿಗಾಗಿ ಕಾರ್ಯ ನಿರ್ವಹಿಸಿದವು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಸ್ಥಾಪನೆಯಾದ 1965ರಿಂದ ಇಲ್ಲಿಯವರೆಗೆ ‘ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ’ ಎಂಬ ಧ್ಯೇಯೋದ್ದೇಶದೊಂದಿಗೆ ಪ್ರಗತಿಯ ಪಥದಲ್ಲಿ ಮುಂದುವರೆದಿದೆ. ಹಸಿರು ಕ್ರಾಂತಿಗೆ ಜೊತೆಯಾಗಿದೆ.
ಬರದ ಸಂದರ್ಭದಲ್ಲಿ ನಾಡಿನ ರೈತರ ಪರವಾಗಿ ವಿಶ್ವವಿದ್ಯಾಲಯಕ್ಕೆ ಶುಭವನ್ನು ಹರಸೋಣ. ಇನ್ನಷ್ಟು ಅಧಿಕ ಇಳುವರಿಯ ತಳಿಗಳನ್ನು ಕೊಡಲೆಂದು ಮತ್ತು ಸಮಗ್ರ ಕೃಷಿ ವಿಶ್ವವಿದ್ಯಾಲಯವಾಗಿ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲೆಂದು ಹಂಬಲಿಸೋಣ.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ


