ಕೃಷಿರಂಗ | ಕೃಷಿ ಶಿಕ್ಷಣದಲ್ಲಿ ಸಾಂಸ್ಕೃತಿಕ ಕನ್ನಡದ ಬೋಧನೆ: ಮಣ್ಣಿನ ಮಕ್ಕಳೊಂದಿಗೆ ಪರಿಣಾಮಕಾರಿ ಸಂವಹನಕ್ಕೆ ಬುನಾದಿ

Date:

ವೃತ್ತಿ ಪರ ಕೋರ್ಸುಗಳಾದ ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು, ಕೃಷಿ ಮುಂತಾದ ವಿಷಯಗಳ ಪದವಿ ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ವಿಷಯವಾಗಿ ಪ್ರಥಮ ವರ್ಷದಲ್ಲಿ ಬೋಧಿಸಬೇಕೆಂದು 2002ರ ಸುಮಾರಿಗೆ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿತ್ತು. ಕನ್ನಡ ವಿಶ್ವವಿದ್ಯಾಲಯಕ್ಕೆ ಪಠ್ಯಕ್ರಮವನ್ನು ರಚಿಸಲು ಕೋರಲಾಯಿತು. ಕನ್ನಡದ ವಿದ್ಯಾರ್ಥಿಗಳಿಗಾಗಿ ‘ಕನ್ನಡ ಮನಸು’ ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗಾಗಿ ‘ಕನ್ನಡ ಕಲಿ’ ಎಂಬ ಪಠ್ಯಕ್ರಮ ಸಿದ್ದವಾಯಿತು. ಆದರೆ, ಕನ್ನಡ ಕಲಿಸುವಲ್ಲಿ ವಿಶ್ವವಿದ್ಯಾಲಯಗಳ ಅಸಡ್ಡೆ ಮುಂದುವರೆಯಿತು.

- Advertisement -

ಕೃಷಿ ವಿಜ್ಞಾನಗಳ ಶಿಕ್ಷಣದಲ್ಲಿ ಹಲವಾರು ಪದವಿ ಕಾರ್ಯಕ್ರಮಗಳಿವೆ. ಅವೆಂದರೆ ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ, ಹೈನುಗಾರಿಕೆ, ಮೀನುಗಾರಿಕೆ, ಕೃಷಿ ಅರಣ್ಯ, ರೇಷ್ಮೆ ಕೃಷಿ, ಕೃಷಿ ವ್ಯವಹಾರ ನಿರ್ವಹಣೆ, ಕೃಷಿ ಜೈವಿಕ ತಂತ್ರಜ್ಞಾನ, ಕೃಷಿ ಆಹಾರ ತಂತ್ರಜ್ಞಾನ, ಕೃಷಿ ಇಂಜಿನಿಯರಿಂಗ್ ಮತ್ತು ಸಮುದಾಯ ವಿಜ್ಞಾನ. ಈ ಎಲ್ಲಾ ಪದವಿ ಕಾರ್ಯಕ್ರಮಗಳಲ್ಲಿ ಸಾಂಸ್ಕøತಿಕ ಕನ್ನಡವನ್ನು ಒಂದು ವಿಷಯವಾಗಿ ಪ್ರಥಮ ವರ್ಷದಲ್ಲಿ ಬೋಧಿಸಲಾಗುತ್ತಿದೆ. ಅದರಿಂದ ಪದವೀಧರರು ಮುಂದೆ ಉದ್ಯೋಗಿಗಳಾದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಣ್ಣಿನ ಮಕ್ಕಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ಮಾಡಲು ಬುನಾದಿಯೊಂದನ್ನು ಹಾಕಿಕೊಟ್ಟಂತಾಗಿದೆ.

ವೃತ್ತಿ ಪರ ಕೋರ್ಸುಗಳಾದ ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು, ಕೃಷಿ ಮುಂತಾದ ವಿಷಯಗಳ ಪದವಿ ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ವಿಷಯವಾಗಿ ಪ್ರಥಮ ವರ್ಷದಲ್ಲಿ ಬೋಧಿಸಬೇಕೆಂದು 2002ರ ಸುಮಾರಿಗೆ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿತ್ತು. ಕನ್ನಡ ವಿಶ್ವವಿದ್ಯಾಲಯಕ್ಕೆ ಪಠ್ಯಕ್ರಮವನ್ನು ರಚಿಸಲು ಕೋರಲಾಯಿತು. ಕನ್ನಡದ ವಿದ್ಯಾರ್ಥಿಗಳಿಗಾಗಿ ‘ಕನ್ನಡ ಮನಸು’ ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗಾಗಿ ‘ಕನ್ನಡ ಕಲಿ’ ಎಂಬ ಪಠ್ಯಕ್ರಮ ಸಿದ್ದವಾಯಿತು. ಆದರೆ, ಕನ್ನಡ ಕಲಿಸುವಲ್ಲಿ ವಿಶ್ವವಿದ್ಯಾಲಯಗಳ ಅಸಡ್ಡೆ ಮುಂದುವರೆಯಿತು.

ಡಾ. ಹಿ. ಚಿ. ಬೋರಲಿಂಗಯ್ಯ ಸಮಿತಿ ವರದಿ

ಎಲ್ಲಾ ವೃತ್ತಿ ಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ವಿಷಯವಾಗಿ ಕಲಿಸುವ ಪ್ರಯತ್ನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಪ್ರೊ. ಬರಗೂರು ರಾಮಚಂದ್ರಪ್ಪ, ಡಾ. ಎಲ್. ಹನುಮಂತಯ್ಯ, ಪ್ರೊ. ಎಸ್. ಜಿ. ಸಿದ್ದರಾಮಯ್ಯನವರು ಕಾಲಕಾಲಕ್ಕೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದಾರೆ. ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ, 2015ರಲ್ಲಿ, ‘ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬೋಧಿಸುವ’ ವಿಷಯವನ್ನು ಚರ್ಚಿಸಿ ಸ್ಪಷ್ಟ್ಟ ತೀರ್ಮಾನಕ್ಕೆ ಬರಲಾಯಿತು. ಆಗಿನ ಉನ್ನತ ಶಿಕ್ಷಣ ಸಚಿವರಾದ ಆರ್. ವಿ. ದೇಶಪಾಂಡೆಯವರ ಮುತುವರ್ಜಿಯಿಂದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಹಿ. ಚಿ. ಬೋರಲಿಂಗಯ್ಯನವರ ಅಧ್ಯಕ್ಷತೆಯಲ್ಲಿ “ವೃತ್ತಿ ಶಿಕ್ಷಣದಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬೋಧಿಸುವ” ಕುರಿತು ಸಮಿತಿಯೊಂದನ್ನು 10.06.2015ರಲ್ಲಿ ರಚಿಸಲಾಯಿತು. ಅದೀಗ ‘ಡಾ. ಹಿ. ಚಿ. ಬೋರಲಿಂಗಯ್ಯ ಸಮಿತಿ ವರದಿ’ ಎಂಬ ಹೆಸರಿನಲ್ಲಿ ಎಲ್ಲರ ಗಮನ ಸೆಳೆದಿದೆ. ಸಮಿತಿಯು ವೃತ್ತಿಪರ ಪದವಿ ಕೋರ್ಸುಗಳ ಪ್ರಥಮ ವರ್ಷದ ಎರಡು ಸೆಮಿಸ್ಟರುಗಳಲ್ಲಿ ಕನ್ನಡವನ್ನು ಕಲಿಸಲು ಶಿಫಾರಸ್ಸು ಮಾಡಿತು.

ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ಬೋಧನೆ

ಆದರೂ, ಕೃಷಿ ವಿಜ್ಞಾನಗಳ ಶಿಕ್ಷಣದಲ್ಲಿ ಕನ್ನಡ ಬೋಧನೆ ಕುರಿತಂತೆ ಮತ್ತೆ ಅನಾದರ ಧೋರಣೆ ಮುಂದುವರೆಯಿತು. ವಿವಿಧ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಪಠ್ಯಕ್ರಮವಿರಲಿಲ್ಲ. ಕೆಲವು ಕಡೆ ಕನ್ನಡ ಅಧ್ಯಾಪಕರ ನೇಮಕವಾಗಲಿಲ್ಲ. ಪರಿಣಾಮಕಾರಿಯಾದ ಬೋಧನೆಯಿರಲಿಲ್ಲ. ಪಶು ವಿವಿಯಲ್ಲಿ ಕನ್ನಡದ ಬೋಧನೆ ಆರಂಭವಾಗಲಿಲ್ಲ. ಇಂತಹ ಕುಂದುಕೊರತೆಗಳನ್ನು ಡಾ. ಹಿ. ಚಿ. ಬೋರಲಿಂಗಯ್ಯನವರು 2020ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ತಂದರು. ಆಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಟಿ. ಎಸ್. ನಾಗಾಭರಣರವರು ಮತ್ತು ಕಾರ್ಯದರ್ಶಿಗಳಾದ ಡಾ. ಕೆ. ಮುರಳೀಧರರವರು ಆಸ್ಥೆ ವಹಿಸಿದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಪತಿಗಳಾದ ಪ್ರೊ. ಎಂ. ಬಿ. ಚೆಟ್ಟಿಯವರ ಅಧ್ಯಕ್ಷತೆಯಲ್ಲಿ ಪ್ರೊ. ಹಿ. ಚಿ. ಬೋರಲಿಂಗಯ್ಯ, ಪ್ರೊ. ಅಶೋಕಕುಮಾರ ರಂಜೇರೆ, ಪ್ರೊ. ಜೆ. ಬಾಲಕೃಷ್ಣ, ಪ್ರೊ. ಕೆ.ಸಿ. ಶಶಿಧರ ಕುಂಬಾರ, ಡಾ. ಪ್ರಮೋದ ಕಟ್ಟಿ, ಡಾ. ಸುರೇಖಾ ಸಂಕನಗೌಡರ, ಡಾ. ಉಮಾ ಅಕ್ಕಿ ಮತ್ತು ಪ್ರೊ. ಎಂ. ನಾರಾಯಣ ಸ್ವಾಮಿಯವರು ಸದಸ್ಯರಾಗಿರುವ ಪಠ್ಯ ರಚನಾ ಸಮಿತಿಯನ್ನು ರೂಪಿಸಲಾಯಿತು. ರಾಜ್ಯದ ಆರು ಕೃಷಿ ಹಾಗೂ ಕೃಷಿ ಸಂಬಂಧಿತ ವಿಜ್ಞಾನಗಳ ವಿಶ್ವವಿದ್ಯಾಲಯಗಳಿಗಾಗಿ (ಕೃಷಿ ವಿವಿ – ಬೆಂಗಳೂರು, ಕೃಷಿ ವಿವಿ – ಧಾರವಾಡ, ಪಶು ವಿವಿ – ಬೀದರ, ಕೃಷಿ ಮತ್ತು ತೋಟಗಾರಿಕೆ ವಿವಿ – ಶಿವಮೊಗ್ಗ, ಕೃಷಿ ವಿವಿ – ರಾಯಚೂರು ಹಾಗೂ ತೋಟಗಾರಿಕೆ ವಿವಿ – ಬಾಗಲಕೋಟೆ) ಏಕರೂಪದ ‘ಸಾಂಸ್ಕೃತಿಕ ಕನ್ನಡ’ ಪಠ್ಯಕ್ರಮವನ್ನು ರಚಿಸುವುದು ಸಮಿತಿಯ ಜವಾಬ್ದಾರಿಯಾಯಿತು. ಶೈಕ್ಷಣಿಕ ವರ್ಷ 2020-21ರಿಂದ ಕನ್ನಡದ ವಿದ್ಯಾರ್ಥಿಗಳಿಗಾಗಿ ‘ಸಾಂಸ್ಕತಿಕ ಕನ್ನಡ’ ಪಠ್ಯವನ್ನು ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗಾಗಿ ‘ಬಳಕೆ ಕನ್ನಡ’ ಎಂಬ ಪಠ್ಯವನ್ನು ಬೋಧಿಸಲಾಗುತ್ತಿದೆ. ಇಂತಹ ಕಲಿಕೆಯು ಕೃಷಿ ವಿಜ್ಞಾನಗಳ ಪದವೀಧರರು ಮುಂದೆ ಉದ್ಯೋಗಿಗಳಾದಾಗ ರೈತರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅನುಕೂಲವಾಗುತ್ತದೆ.

ಕನ್ನಡದ ಕಟ್ಟಾಳು ಪ್ರೊ. ಹಿ. ಚಿ. ಬೋರಲಿಂಗಯ್ಯನವರ ಉವಾಚ

ಕೃಷಿ ವಿಜ್ಞಾನಗಳ ಶಿಕ್ಷಣದಲ್ಲಿ ಕನ್ನಡ ಬೋಧನೆಗಾಗಿ ಅರ್ಥಪೂರ್ಣವಾದ ‘ಸಾಂಸ್ಕೃತಿಕ ಕನ್ನಡ’ ಪಠ್ಯವನ್ನು ರಚಿಸಲು ಶ್ರಮಿಸಿದ ಪ್ರೊ. ಹಿ. ಚಿ. ಬೋರಲಿಂಗಯ್ಯನವರು ಸಂಪಾದಕ ಮಂಡಳಿಯ ಪರವಾಗಿ ಹೀಗೆ ಬರೆದಿದ್ದಾರೆ. “‘ಸಾಂಸ್ಕøತಿಕ ಕನ್ನಡ’ ಎಂಬ ಶಿರ್ಷಿಕೆಯಡಿಯಲ್ಲಿ ಕರ್ನಾಟಕದ ಭಾಷೆ, ಸಂಸ್ಕøತಿ, ಕಾವ್ಯ, ಕಥೆ ಮುಂತಾದುವನ್ನು ಪದವಿ ಅವಧಿಯಲ್ಲಿ ಅಭ್ಯಸಿಸಿ ಪದವಿ ನಂತರದ ಜೀವನದಲ್ಲಿ ವಿದ್ಯಾರ್ಥಿಗಳು ನಿಖರವಾಗಿ ಮತ್ತು ಸಂಕ್ಷಿಪ್ತವಾಗಿ ಆಡಳಿತಾತ್ಮಕ ವ್ಯವಹಾರಗಳಲ್ಲಿ ಹಾಗೂ ರೈತರೊಂದಿಗೆ ತಪ್ಪಿಲ್ಲದೆ ಭಾಷಾ ಪ್ರಯೋಗವನ್ನು ಮಾಡುವಂತಿರಬೇಕು. ಇದಕ್ಕೆ ಪೂರಕವಾಗಿ ಪ್ರತಿನಿತ್ಯ ಎದುರಾಗುವ ಆಡಳಿತದಲ್ಲಿ ಮತ್ತು ಆಧುನಿಕ ತಂತ್ರಜ್ಞಾನದಲ್ಲಿ ಕನ್ನಡವನ್ನು ಬಳಸುವಾಗ ಕಂಡು ಬರುವ ಭಾಷಾ ದೋಷಗಳನ್ನು ನಿವಾರಿಸಲು ಪಠ್ಯ ಪುಸ್ತಕದಲ್ಲಿ ಆಧ್ಯತೆಯನ್ನು ನೀಡಲಾಗಿದೆ”.

ರೈತ ಪರ ಪಠ್ಯಗಳು : ಪ್ರಥಮ ಸೆಮಿಸ್ಟರ್

ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಪದವಿ ಕಾರ್ಯಕ್ರಮದ ಪ್ರಥಮ ವರ್ಷದ ಪ್ರಥಮ ಸೆಮಿಸ್ಟರ್‍ನಲ್ಲಿ ಬೋಧಿಸುತ್ತಿರುವ ಕರ್ನಾಟಕದ ಭಾಷೆ, ಸಂಸ್ಕೃತಿ, ಕಾವ್ಯ, ಮತ್ತು ಕಥೆಗಳಲ್ಲಿ ಕನ್ನಡತನದ ಜೊತೆಗೆ ಬೇಸಾಯದ ಒಳನೋಟಗಳಿವೆ. ಕನ್ನಡ ನಾಡು, ನುಡಿ, ಭಾಷೆಗೆ ಸಂಬಂಧಿಸಿದ ‘ಕರ್ನಾಟಕದ ಸಂಸ್ಕೃತಿ’ (ಹಂಪ ನಾಗರಾಜಯ್ಯ), ಕರ್ನಾಟಕದ ಏಕೀಕರಣ : ಒಂದು ಅಪೂರ್ವ ಚರಿತ್ರೆ (ಜಿ. ವೆಂಕಟಸುಬ್ಬಯ್ಯ), ಕನ್ನಡ ಭಾಷೆಯ ಸಂಕ್ಷಿಪ್ತ ಚರಿತ್ರೆ (ಅಶೋಕಕುಮಾರ ರಂಜೇರೆ) ಪಾಠಗಳು ಸೂಕ್ತ ಆಯ್ಕೆಗಳು. ಅವು ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನಕ್ಕೂ ಅಗತ್ಯವಾದವುಗಳು.

ಆಧುನಿಕ ಪೂರ್ವ ಕನ್ನಡ ಕಾವ್ಯಗಳಲ್ಲಿ ಕೃಷಿಕತನವು ಒಂದಿಲ್ಲೊಂದು ರೂಪದಲ್ಲಿ ಹಾಸುಹೊಕ್ಕಾಗಿದೆ. ಬಸವಣ್ಣನವರ ವಚನದಲ್ಲಿ ಬಡಪಶುವಿನ ವಿನಂತಿಯಿದೆ. ದೇಶಿಕೇಂದ್ರ ಸಂಗನಬಸವಯ್ಯನವರ ವಚನದಲ್ಲಿ ಹಲವು ಧಾನ್ಯಗಳನ್ನು ಬೆರೆಸಿ ಪಾಕವ ಮಾಡಿ ಪ್ರಸಾದ ತಯಾರಿಕೆಯ ವಿವರಣೆಯಿದೆ. ಒಕ್ಕಲಿಗ ಮುದ್ದಣ್ಣನವರ ವಚನದಲ್ಲಿ ಪೈರಿಗೆ ಬೇಕಿರುವಷ್ಟು ನೀರನ್ನು ಮಾತ್ರ ಹಾಯಿಸಬೇಕೆಂಬುದರ ಜೊತೆಗೆ ಜೀವನದ ಅರಿವು, ಆಧ್ಯಾತ್ಮದ ತತ್ವವಿದೆ. ಅಕ್ಕಮಹಾದೇವಿಯವರ ವಚನದಲ್ಲಿ ಕಿತ್ತಳೆ, ನಿಂಬೆ, ಮಾವು, ಕಬ್ಬು, ಬಾಳೆ, ಹಲಸು ಮುಂತಾದ ವಿವಿಧ ಬೆಳೆಗಳಲ್ಲಿ ಮೂಡಿಬರುವ ರುಚಿಗಳ ಪರಿಚಯವಿದೆ.

ಪುರಂದರದಾಸರು ಮತ್ತು ಕನಕದಾಸರ ಕೀರ್ತನೆಗಳಿವೆ. ಶಿಶುನಾಳ ಷರೀಫರ ‘ಸುಗ್ಗಿ ಮಾಡೋಣು ಬಾರವ್ವಾ’ ತತ್ವಪದದಲ್ಲಿ ಕೃಷಿ ಕೆಲಸಗಳ ಸಹಕಾರ ತತ್ವವಿದೆ. ಕೃಷಿ ಬದುಕನ್ನು ನಿರೂಪಿಸುವ ಜನಪದ ಗೀತೆಯ ಹತ್ತು ತ್ರಿಪದಿಗಳಿವೆ.

ಆಧುನಿಕ ಕಾವ್ಯ ಭಾಗದಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗವಿದೆ. ದ. ರಾ. ಬೇಂದ್ರೆಯವರ ‘ಪುಟ್ಟ ವಿಧವೆ’ ಕವಿತೆಯಿದೆ. ಕುವೆಂಪುರವರ ‘ರೈತನ ದೃಷ್ಟಿ’ ಕವನವಿದೆ. ಚನ್ನವೀರ ಕಣವಿಯವರ ‘ಅನ್ನದ ಋಣ’ ಕವಿತೆಯಲ್ಲಿ ಬೆಳೆ ಮತ್ತು ಧಾನ್ಯದ ಸ್ವಗತವಿದೆ. ಎಲ್ಲರ ಎದೆಯನ್ನು ತಟ್ಟಬಲ್ಲ ‘ನನ್ನ ಮುಚ್ಚಿಟ್ಟು ಮುಗ್ಗು ನಾರಿಸಬೇಡಿ, ದಯವಿಟ್ಟು ಎಲ್ಲರಿಗೂ ಹಂಚಿ, ಅಡ್ಡ ಬರಬೇಡಿ, ನಾನವರ ದೇವರ ಗುಡಿ’ ಎಂಬ ಸಾಲುಗಳಿವೆ. ಅವು ಅನ್ನಭಾಗ್ಯವನ್ನು ನೆನಪಿಸುತ್ತವೆ. ನಿಸಾರ್ ಅಹಮದ್‍ರವರ ‘ಕನ್ನಡವೆಂದರೆ ಬರಿ ನುಡಿಯಲ್ಲ’ ಮತ್ತು ಸಿದ್ದಲಿಂಗಯ್ಯನವರ ‘ನನ್ನ ಕವನ’ ಎಂಬ ಹಾಡುಗಳಿವೆ. ಚಂದ್ರಶೇಖರ ಕಂಬಾರರ ಜನಪದ ಪುರಾಣ ಆಧಾರದ ಪದ್ಯ ಗದ್ಯ ಮಿಶ್ರಣದ ‘ಬಿಸಿಲುಗುದುರೆಯನೇರಿ ಹೋದಾ’ದಲ್ಲಿ ಎಂತಹವರ ಕಲ್ಲೆದೆಯನ್ನೂ ಕರಗಿಸುವಂತಹ ಸಾಲುಗಳಿವೆ.

ಬಿ.ಟಿ. ಲಲಿತಾ ನಾಯಕ್‍ರವರ ‘ಹಬ್ಬ ಮತ್ತು ಬಲಿ’ ಕತೆಯಲ್ಲಿ ಕೃಷಿ ಕಾರ್ಮಿಕನೊಬ್ಬ ಜೀತದಾಳಾಗುವ ನೋವಿನ ಕತೆಯಿದೆ. ಹಿ. ಚಿ. ಬೋರಲಿಂಗಯ್ಯನವರ ‘ಚಿನ್ನ ಮತ್ತು ಮರ’ ಜನಪದ ಕತೆಯು ನಿಸರ್ಗವನ್ನು ರಕ್ಷಿಸಲು ಇರಬೇಕಾದ ಜವಾಬ್ದಾರಿಯನ್ನು ನಿರೂಪಿಸುತ್ತದೆ.

ರೈತ ಪರ ಪಠ್ಯಗಳು : ದ್ವಿತೀಯ ಸೆಮಿಸ್ಟರ್

ದ್ವಿತೀಯ ಸೆಮಿಸ್ಟರಿನ ಅಧ್ಯಾಯಗಳೂ ಕೂಡ ವಿದ್ಯಾರ್ಥಿಗಳ ಅರಿವನ್ನು ಹೆಚ್ಚಿಸುತ್ತವೆÉ. ಅಲ್ಲಿಯ ಪಾಠಗಳ ಹೆಸರೇ ಅವುಗಳ ಸೂಕ್ತತೆಯನ್ನು ಸೂಚಿಸುತ್ತವೆ. ಆಧುನಿಕ ಪೂರ್ವ ಕನ್ನಡ ಕೃಷಿ ವಿಜ್ಞಾನ ಸಾಹಿತ್ಯದ ಸ್ಥೂಲ ನೋಟ (ಜಿ. ವೀರಭದ್ರಗೌಡ), ಕನ್ನಡದಲ್ಲಿ ಕೃಷಿ ವಿಜ್ಞಾನ ಸಾಹಿತ್ಯ (ಜೆ. ಬಾಲಕೃಷ್ಣ), ಕೃಷಿಕಪರ ಕೃಷಿ ಪತ್ರಿಕೋದ್ಯಮ (ಶಿವರಾಂ ಪೈಲೂರು), ಕೃಷಿ ಮತ್ತು ಸಂವಹನ (ಕೆ. ಸಿ. ಶಶಿಧರ), ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ (ಬಿ. ಜಿ. ಎಲ್. ಸ್ವಾಮಿ), ಪರಿಸರ : ನಿರಂತರ ಹೊಂದಾಣಿಕೆಯೇ? (ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಪ್ರದೀಪ ಕೆಂಜಿಗೆ), ರಾಗಿ ಋಷಿಗೆ ಜನಮನ್ನಣೆ (ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ), ಹೈಬ್ರಿಡ್ ಹತ್ತಿಯ ಸಸ್ಯ ಬ್ರಹ್ಮ : ಡಾ. ಬಿ. ಎಚ್. ಕಾತರಕಿ (ಸುರೇಖಾ ಸಂಕನಗೌಡರ), ತೋಟಗಾರಿಕೆ ರತ್ನ : ಡಾ. ಎಂ. ಎಚ್. ಮರಿಗೌಡರು (ಉಮಾ ಅಕ್ಕಿ), ಡಾ. ಲೆಸ್ಲಿ ಕೋಲಮನ್ (ಪ್ರಮೋದ ಕಟ್ಟಿ), ಕನ್ನಡ ಭಾಷೆಯ ಪ್ರಭೇದಗಳು ಮತ್ತು ಅವುಗಳ ವೈಶಿಷ್ಟ್ಯ (ಅಶೋಕಕುಮಾರ ರಂಜೇರೆ), ಭಾಷಾಂತರ – ವಿಶಿಷ್ಟ ಸಮಸ್ಯೆಗಳು (ಜಿ. ಟಿ. ನಾರಾಯಣರಾವ್).

ಕನ್ನಡ ಬಾರದ ವಿದ್ಯಾರ್ಥಿಗಳಿಗೆ ‘ಬಳಕೆ ಕನ್ನಡ’

ನಮ್ಮ ರಾಜ್ಯದವರಾದರೂ ಕನ್ನಡ ಕಲಿಯದವರಿಗೆ ಹಾಗೂ ಹೊರರಾಜ್ಯದ ಮತ್ತು ವಿದೇಶದ ವಿದ್ಯಾರ್ಥಿಗಳಿಗೆ ‘ಬಳಕೆ ಕನ್ನಡ’ವನ್ನು ಕಲಿಸಲಾಗುತ್ತಿದೆ. ಕನ್ನಡದ ಅಕ್ಷರಮಾಲೆ ಮತ್ತು ಆಡು ಭಾಷೆಯ ಸರಳ ಮಾತುಗಳನ್ನು ಇಂಗ್ಲಿಷ್ ಭಾಷೆಯ ಮೂಲಕ ಕಲಿಸಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಇದನ್ನೂ ಓದಿ ಆಪ್ಟೋಜೆನೆಟಿಕ್ಸ್ ಸಂಶೋಧನೆಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ: ನರಕೋಶಗಳಿಗೆ ಸಂಜೀವಿನಿಯಾಗಲಿರುವ ಬೆಳಕು

ಕನ್ನಡ ಮಾಧ್ಯಮದಲ್ಲಿ ಕೃಷಿ ವಿಜ್ಞಾನ ಬೋಧನೆಯ ಇತಿಹಾಸ

ಇಚ್ಚೆಯುಳ್ಳ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಬಿಎಸ್ಸಿ (ಕೃಷಿ) ಪದವಿಗಾಗಿ ಎಲ್ಲಾ ವಿಷಯಗಳನ್ನು ಬೋಧಿಸಬೇಕೆಂಬ ಪ್ರಯತ್ನವು 1982ರಲ್ಲಿ ಆರಂಭವಾಯಿತು. ಅದು ಕೆಲಕಾಲ ನಡೆಯಿತು. ಆದರೆ, ಪ್ರತಿ ವಿಷಯಕ್ಕೆ ಸೂಕ್ತ ಅಧ್ಯಾಪಕರಿಲ್ಲದೆ ಅಥವಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ತೋರದಿದ್ದುದರಿಂದ ಕನ್ನಡ ಮಾಧ್ಯಮದ ಬೋಧನೆಗೆ ಹಿನ್ನಡೆಯಾಯಿತು. ಹೆಬ್ಬಾಳದಲ್ಲಿ 1913ರಲ್ಲಿ ಕೃಷಿ ಶಾಲೆ ಆರಂಭವಾಯಿತು. ಅಲ್ಲಿ ಆರಂಭದಲ್ಲಿ ‘ಲೈಸೆನ್ಷಿಯೇಟ್ ಇನ್ ಅಗ್ರಿಕಲ್ಚರ್ (ಎಲ್ ಎಜಿ)’ ಎಂಬ ಕೋರ್ಸು ಇತ್ತು. ಕ್ರಮೇಣ ಅದು ‘ಡಿಪ್ಲೊಮಾ ಇನ್ ಅಗ್ರಿಕಲ್ಚರ್’ ಆಗಿ ಬದಲಾಯಿತು. ಅಲ್ಲಿ 1920ರ ಸುಮಾರಿಗೆ ಕನ್ನಡ ಮಾಧ್ಯಮದ ಬೋಧನೆ ಶುರುವಾಯಿತು. ತುಮಕೂರಿನ ಶಿರಾ ಬಳಿಯ ಚಿಕ್ಕನಹಳ್ಳಿ, ಹಾಸನ ನಗರ, ಆನೇಕಲ್ ಬಳಿಯ ರಾಮಕೃಷ್ಣಾಪುರ ಮತ್ತು ಮಂಡ್ಯದ ಮದ್ದೂರಿನ ಬಳಿಯ ಸೋಮನಹಳ್ಳಿ, ಹೀಗೆ ನಾಲ್ಕು ಕಡೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಕೃಷಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಮಾತ್ರ ಕೃಷಿ ವಿಜ್ಞಾನವನ್ನು ಬೋಧಿಸಲಾಗುತ್ತಿತ್ತು. ಇದೀಗ, ಸರ್ಕಾರದ ಒತ್ತಾಸೆಯಂತೆ ಕೃಷಿ ವಿಶ್ವವಿದ್ಯಾಲಯಗಳು ಕನ್ನಡಕ್ಕಾಗಿ ಕೈ ಎತ್ತಿವೆ. ಆ ಕೈಗಳು ಕಲ್ಪವೃಕ್ಷವಾಗಲಿ. ಕನ್ನಡ ವಿಷಯ ಕಲಿಕೆಯು ಸರಳವಾಗಿ ಸಂತೋಷದಿಂದ ನಡೆಯಲಿ. ಕನ್ನಡ ಕಲಿಕೆಯಿಂದ ಮೌಲ್ಯಾಧಾರಿತ ಶಿಕ್ಷಣ ಸಿಕ್ಕು ಆರೋಗ್ಯಕರ ಪದವೀಧರರ ಉತ್ಪತ್ತಿಯಾಗಿ ಅವರಿಂದ ಸಮಾಜಕ್ಕೆ ಒಳಿತಾಗಲಿ ಎಂದು ಹರಸೋಣ.

ಕೊನೆಯ ಮಾತು

ಪ್ರಸಕ್ತ ಶೈಕ್ಷಣಿಕ ವರ್ಷದ (2026-27) ತರಗತಿಗಳು ಇದೇ ಅಕ್ಟೋಬರ್ 16, 2026ರಿಂದ ಆರಂಭವಾಗುತ್ತಿವೆ. ಸಾಂಸ್ಕೃತಿಕ ಕನ್ನಡದ ಮೊದಲ ತರಗತಿಯಲ್ಲಿ ಈ ಲೇಖನವನ್ನು ಓದಿಸಿ ತಿಳಿಹೇಳಿದರೆ ಕನ್ನಡ ಕಲಿಸುವ ಶ್ರಮ, ಉದ್ದೇಶ ಮತ್ತು ಮಹತ್ವ ವಿದ್ಯಾರ್ಥಿಗಳ ಮನಸ್ಸಿಗೆ ನಾಟುತ್ತದೆ.

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿಮಾತು | ಟ್ರೋಲ್ ಮಾಡುವುದರಿಂದ ವಾಸ್ತವ ಬದಲಾಗದು!

“ಅತ್ಯಾಚಾರಕ್ಕೊಳಗಾದ ಮಹಿಳೆ ಬದುಕಿ ಉಳಿದರೆ, ಅವಳ ಗೌರವ ಕಡಿಮೆ ಆಗುತ್ತದೆಯೇ ?...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅತಿನಿದ್ರಿಗಳು 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಲಾಪತಾ ಲೇಡೀಸ್: ಮನೆ ಒಳಗೂ ಹೊರಗೂ ಕಳೆದುಹೋಗುವ ಮಹಿಳೆಯರ ಹುಡುಕಾಟ

'ಲಾಪತಾ ಲೇಡೀಸ್' ಕೇವಲ ರೈಲಿನಲ್ಲಿ ಕಾಣೆಯಾದ ಇಬ್ಬರು ವಧುಗಳ ಕಥೆಯಲ್ಲ. ಮಹಿಳೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಕಂಗಳ ಕರುಳ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...