ಮಂಗಳೂರಿನಲ್ಲಿ 1841ರಲ್ಲಿ ಮೊಟ್ಟಮೊದಲಿಗೆ ಆರಂಭವಾದ ಬಾಸೆಲ್ ಮಿಷನ್ ಮತ್ತು ಟ್ರಾಕ್ಟ್ ಡೆಪಾಸಿಟರಿ ಎಂಬ ಮುದ್ರಣಾಲಯವು ಕೃಷಿ ಪುಸ್ತಕಗಳ ಪ್ರಕಟಣೆಗೂ ಮುಂದಾಯಿತು. ಗಣಪಯ್ಯ ಚಂದಾವರ ಬರೆದ ‘ಗೋವೃಷಭಾದಿಗಳ ಸಂರಕ್ಷಣ ವೈದ್ಯಾದಿಗಳ ಕ್ರಮವು’ ಎಂಬ ಕೃತಿಯನ್ನು ಬಾಸೆಲ್ ಮಿಷನ್ 1877ರಲ್ಲಿ ಪ್ರಕಟಿಸಿತು. ಇದು ಕನ್ನಡದ ಮೊದಲ ಕೃಷಿ ಗ್ರಂಥ.
ಹತ್ತೊಂಬತ್ತನೆಯ ಶತಮಾನದ ಅಂತ್ಯಕ್ಕೆ ಹಾಗೂ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಸಾಕ್ಷರತೆಯ ಪ್ರಮಾಣ ಶೇ. 10ಕ್ಕಿಂತ ಕಡಿಮೆಯಿತ್ತು. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದಾಗ ಸಾಕ್ಷರತೆಯ ಪ್ರಮಾಣ ಸುಮಾರು ಶೇ. 12ರಷ್ಟು ಮಾತ್ರ. ಪ್ರಸ್ತುತ ನಮ್ಮ ರಾಜ್ಯದ ಸಾಕ್ಷರತೆಯ ಪ್ರಮಾಣ ಶೇ. 75.
ಅಂದಿನ ಕಾಲದಲ್ಲಿ, 1870ರ ದಶಕದಿಂದಿಡಿದು 1950ರ ದಶಕದವರೆಗೆ, ಕನ್ನಡ ಮಾತನಾಡುವ ಪ್ರದೇಶಗಳಾದ ಹಳೆ ಮೈಸೂರು ಭಾಗ, ಹೈದರಾಬಾದ್ ಪ್ರಾಂತ್ಯ ಮತ್ತು ಮುಂಬಯಿ ಪ್ರಾಂತ್ಯದಲ್ಲಿ ಕೃಷಿಕರಲ್ಲಿ ಸಾಕ್ಷರತೆಯ ಪ್ರಮಾಣ ಶೇ. 10ಕ್ಕಿಂತ ಕಡಿಮೆಯಿತ್ತು. ಅಷ್ಟಾದರೂ, ಕನ್ನಡದಲ್ಲಿ ಕೃಷಿ ಸಾಹಿತ್ಯ ರಚನೆಗೆ ಹಾಗೂ ಪುಸ್ತಕಗಳ ಪ್ರಕಟಣೆಗೆ ಕನ್ನಡಿಗರು ಮತ್ತು ಮದ್ರಾಸ್ ಪ್ರಾಂತ್ಯದಿಂದ ಕೃಷಿ ವಿಜ್ಞಾನಿಗಳಾಗಿ ಬಂದು ಕನ್ನಡ ಕಲಿತ ತಮಿಳು ಲೇಖಕರು ಹಾಗೂ ಮೈಸೂರು ಸಂಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬ್ರಿಟನ್ ಮತ್ತು ಕೆನಡಾ ದೇಶದ ವಿಜ್ಞಾನಿಗಳಾಗಿದ್ದ ವಿದೇಶಿ ಲೇಖಕರು ಕೈಹಾಕಿದರು. ನಿಧಾನ ಗತಿಯಲ್ಲಾದರೂ ಕೃಷಿಕರು ಸಾಕ್ಷರರಾಗುತ್ತಾರೆ, ಕೃಷಿ ಸಾಹಿತ್ಯವನ್ನು ಓದುತ್ತಾರೆ ಮತ್ತು ಆಧುನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಕೃಷಿಯ ಅಭಿವೃದ್ಧಿಗೆ ಮುಂದಾಗುತ್ತಾರೆ ಎಂಬ ಚಿಂತನೆಯಂತೂ ಇದ್ದೇ ಇತ್ತು.
ಕನ್ನಡದ ಮೊದಲ ಕೃಷಿ ಗ್ರಂಥ
ಯೂರೋಪಿನಲ್ಲಿ ಮುದ್ರಣ ತಂತ್ರಜ್ಞಾನವು ಹದಿನೈದನೇ ಶತಮಾನದಲ್ಲಿ ಆರಂಭವಾಯಿತು. ಆದರೆ, ಭಾರತಕ್ಕೆ ಮುದ್ರಣ ತಂತ್ರಜ್ಞಾನವು ತಡವಾಗಿ ಬಂದಿತು. ಮಂಗಳೂರಿನಲ್ಲಿ 1841ರಲ್ಲಿ ಮೊಟ್ಟಮೊದಲಿಗೆ ಆರಂಭವಾದ ಬಾಸೆಲ್ ಮಿಷನ್ ಮತ್ತು ಟ್ರಾಕ್ಟ್ ಡೆಪಾಸಿಟರಿ ಎಂಬ ಮುದ್ರಣಾಲಯವು ಕೃಷಿ ಪುಸ್ತಕಗಳ ಪ್ರಕಟಣೆಗೂ ಮುಂದಾಯಿತು. ಗಣಪಯ್ಯ ಚಂದಾವರ ಬರೆದ ‘ಗೋವೃಷಭಾದಿಗಳ ಸಂರಕ್ಷಣ ವೈದ್ಯಾದಿಗಳ ಕ್ರಮವು’ ಎಂಬ ಕೃತಿಯನ್ನು ಬಾಸೆಲ್ ಮಿಷನ್ 1877ರಲ್ಲಿ ಪ್ರಕಟಿಸಿತು. ಇದು ಕನ್ನಡದ ಮೊದಲ ಕೃಷಿ ಗ್ರಂಥ. ತದನಂತರ, ಶ್ರೀ ನಾಗಭೂಷಣ ಘನಮಠ ಶಿವಯೋಗಿಗಳು ರಚಿಸಿದ ‘ಕೃಷಿ ಜ್ಞಾನ ಪ್ರದೀಪಿಕೆ’ಯು 1879ರಲ್ಲಿ ಪ್ರಕಟವಾಯಿತು.
ಕೃಷಿ ಸಂಶೋಧನೆಯ ಮೊದಲ ಹೆಜ್ಜೆಯಾಗಿ ಬೆಂಗಳೂರಿನ ಲಾಲ್ಬಾಗಿನಲ್ಲಿ ಕೃಷಿ ಸಂಶೋಧನಾ ಪ್ರಯೋಗಾಲಯವನ್ನು 1873ರಲ್ಲಿ ತೆರೆದಾಗ ಇಂಗ್ಲೆಂಡಿನ ಹರ್ಮನ್ ಅವರು ಅದರ ಮುಖ್ಯಸ್ಥರಾದರು. ಅವರು ರಾಮಸ್ವಾಮಿ ಶಾಸ್ತ್ರಿಗಳೊಂದಿಗೆ ಸೇರಿ ರಚಿಸಿದ ‘ವ್ಯವಸಾಯ ಬೋಧಿನಿ’ ಎಂಬ ಕೃತಿಯು 1879ರಲ್ಲಿ ಮೈಸೂರು ಸರ್ಕಾರದ ಪ್ರೆಸ್ನಿಂದ ಪ್ರಕಟವಾಯಿತು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಕೃಷಿ ಪ್ರಯೋಗಾಲಯ ಆರಂಭವಾದಾಗ ಜರ್ಮನ್ ಸಂಜಾತ ಕೆನಡಾ ದೇಶದ ಡಾ. ಅಡಾಲ್ಫ್ ಲೆಹ್ಮನ್ರವರು ಕೃಷಿ ರಾಸಾಯನಿಕ ತಜ್ಞರಾಗಿ 1898ರಲ್ಲಿ ನೇಮಕಗೊಂಡರು. ಅವರು 1902ರಲ್ಲಿ ‘ಬೆಳೆಗಳನ್ನು ಹಾಳು ಮಾಡುವ ಹುಳುಗಳ ವಿಷಯ’ ಎಂಬ ಕಿರು ಪುಸ್ತಕ ರಚಿಸಿದರು.
ಮುದ್ರಣ ತಂತ್ರಜ್ಞಾನ ಬಂದ ಮೇಲೆ, ಮೈಸೂರು ಮಹಾರಾಜರ ಕಾಲದಲ್ಲಿ ಪ್ರಕಟವಾದ ಮೊದಲ ಕೃಷಿ ಕೃತಿಯಿಂದ ಹಿಡಿದು ಮಹಾರಾಜರ ಆಡಳಿತದ ಕೊನೆಯವರೆಗೆ ಪ್ರಕಟವಾದ ಕೃಷಿ ಪುಸ್ತಕಗಳ ಪರಿಚಯವು ಕನ್ನಡಿಗರಿಗಾಗಬೇಕಿದೆ. ಸಾಧ್ಯವಾದರೆ, ಲಭ್ಯವಿರುವ ಕೃತಿಗಳನ್ನು ಸರ್ಕಾರ ಅಥವಾ ವಿಶ್ವವಿದ್ಯಾಲಯಗಳು ಮರುಪ್ರಕಟಣೆ ಮಾಡಬೇಕಾಗಿದೆ. ಲಭ್ಯವಿರುವ ಹಸ್ತಪ್ರತಿಗಳು ಅಥವಾ ಮೊದಲಿಗೆ ಮುದ್ರಣವಾದ ಪ್ರತಿಗಳನ್ನು ಸಂರಕ್ಷಿಸಬೇಕಿದೆ.
ಮೈಸೂರು ವ್ಯವಸಾಯ ಶೋಧಕ ಸಂಘದ ಪತ್ರಿಕೆ
ಕೃಷಿ ಸಂಶೋಧನೆಯ ವಿವರಗಳನ್ನು ಕನ್ನಡದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಲು ‘ಮೈಸೂರು ವ್ಯವಸಾಯ ಶೋಧಕ ಸಂಘ’ವನ್ನು 1918ರಲ್ಲಿ ಸ್ಥಾಪಿಸಲಾಯಿತು. ಕೃಷಿ ಶಿಕ್ಷಣ, ತರಬೇತಿ ಹಾಗೂ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಿರುವ ಜ್ಞಾನವನ್ನು ಪಸರಿಸುವುದು ಸಂಘದ ಮುಖ್ಯ ಉದ್ದೇಶವಾಗಿತ್ತು. ಅದಕ್ಕಾಗಿ ಸಂಘದ ಮುಖವಾಣಿಯಾಗಿ ‘ಮೈಸೂರು ವ್ಯವಸಾಯ ಶೋಧಕ ಸಂಘದ ಪತ್ರಿಕೆ’ಯನ್ನು ಆರಂಭಿಸಲಾಯಿತು.
ಮೈಸೂರು ವ್ಯವಸಾಯ ಶೋಧಕ ಸಂಘದ ಪತ್ರಿಕೆಯಲ್ಲಿ ಪ್ರಕಟವಾದಂತೆ, “ಬೆಳೆಗಳು, ಕಾಲ್ನಡೆಗಳು, ಹಣ್ಣುಹಂಪಲುಗಳು ಎಲ್ಲವನ್ನೂ ಒಳಗೊಂಡ ವ್ಯವಸಾಯವನ್ನು ಉತ್ತಮಗೊಳಿಸಿ ತನ್ಮೂಲಕ ರೈತನ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದು. ಈ ಉದ್ದೇಶ ಸಾಧನೆಗಾಗಿ ಹಲವಾರು ಕಾರ್ಯಕ್ರಮಗಳ ಜೊತೆಗೆ ವ್ಯವಸಾಯವನ್ನು ಕುರಿತ ಲೇಖನಗಳುಳ್ಳ ಒಂದು ಕನ್ನಡ ಪತ್ರಿಕೆಯನ್ನೂ ಮತ್ತು ಒಂದು ಇಂಗ್ಲೀಷ್ ಪತ್ರಿಕೆಯನ್ನೂ ಪ್ರಕಟಿಸುವುದು. ಸಾಮಾನ್ಯ ಜನರಿಗೆ ಹಿಡಿಸುವ ಹಾಗೆ ಸಣ್ಣ ವಿಷಯ ಪತ್ರಿಕೆಗಳನ್ನು ಪ್ರಕಟಿಸುವುದು ಹಾಗೂ ವ್ಯವಸಾಯಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನೂ, ನಿಯತಕಾಲಿಕ ಪತ್ರಿಕೆಗಳನ್ನು ಸದಸ್ಯರು ಓದಿಕೊಳ್ಳಲು ಒದಗಿಸುವುದು.” ಎಂಬುದು ಸಂಘದ ಉದ್ದೇಶವಾಗಿತ್ತು. ಜೊತೆಗೆ, ಮೈಸೂರು ವ್ಯವಸಾಯ ಇಲಾಖೆಯು ರೈತರಿಗಾಗಿ ಕನ್ನಡದಲ್ಲಿ ‘ಕೃಷಿ ಕ್ಯಾಲೆಂಡರ್’ ಅನ್ನು 1915ರಿಂದಲೇ ಪ್ರಕಟಿಸುತ್ತಿತ್ತು.

ಕಾಲ್ನಡೆಗಳು ಎಂದರೆ ಜಾನುವಾರುಗಳು
ಕಾಲ್ನಡೆಗಳು ಎಂದರೆ ಜಾನುವಾರುಗಳು ಎಂದರ್ಥ. ಜಾನುವಾರುಗಳನ್ನೊಳಗೊಂಡ ವ್ಯವಸಾಯದ ಸಮಗ್ರ ಕಲ್ಪನೆ ಅಂದಿನ ಕಾಲದ್ದಾಗಿತ್ತು. ಅಂತಹ ಸಮಗ್ರ ಕಲ್ಪನೆ ಮಾತ್ರ ಎಲ್ಲಾ ಕಾಲಕ್ಕೂ ಸಲ್ಲುವಂತಹುದು. ಜಾನುವಾರುಗಳ ಸಾಕಣೆಯಿಂದ ಕೊಟ್ಟಿಗೆ ಗೊಬ್ಬರ ಸಿಗುತ್ತದೆ. ಕೊಟ್ಟಿಗೆ ಗೊಬ್ಬರ ಬಳಕೆಯಿಂದ ಕೃಷಿಗೆ ಹೂಡಬೇಕಾದ ಬಂಡವಾಳವನ್ನು ತಗ್ಗಿಸಬಹುದು. ಆರೋಗ್ಯಕರ ಆಹಾರದ ಉತ್ಪಾದನೆಯನ್ನೂ ಮಾಡಬಹುದು.
ಮಾಸ ಪತ್ರಿಕೆಯಾದ ತ್ರೈಮಾಸಿಕ ಪತ್ರಿಕೆ
ಮೊದಮೊದಲು ತ್ರೈಮಾಸಿಕವಾಗಿ ಪ್ರಕಟವಾಗುತ್ತಿದ್ದ ಮೈಸೂರು ವ್ಯವಸಾಯ ಶೋಧಕ ಸಂಘದ ಪತ್ರಿಕೆಯನ್ನು ಕೆಲಕಾಲದ ನಂತರ ಮಾಸಪತ್ರಿಕೆಯಾಗಿ ಪ್ರಕಟಿಸಲಾಯಿತು. ಕೃಷಿ ನಿರ್ದೇಶಕರು ಮತ್ತು ದಿವಾನರ ಮಧ್ಯೆ ಮಾಸಿಕ ಸಭೆಗಳು ನಡೆಯುತ್ತಿದ್ದವು. ಎಲ್ಲಾ ಶಾಲೆಗಳು ಮತ್ತು ಗ್ರಾಮ ಪಂಚಾಯಿತಿಗಳು ಕನ್ನಡದಲ್ಲಿ ಪ್ರಕಟಿಸಲಾಗುತ್ತಿರುವ ‘ಮೈಸೂರು ವ್ಯವಸಾಯ ಶೋಧಕ ಸಂಘದ ಪತ್ರಿಕೆ’ಯ ಚಂದಾದಾರರಾಗಲು ಜನವರಿ 1930ರಲ್ಲಿ ನಡೆದ ಸಭೆಯಲ್ಲಿ ತೀರ್ಮಾನವಾಯಿತು. ವಾರ್ಷಿಕ ಚಂದಾ ಮೂರು ರೂಪಾಯಿಗಳಾಗಿತ್ತು. ಪತ್ರಿಕೆಗೆ ಹೆಚ್ಚಿನ ಬೇಡಿಕೆಯಿತ್ತು.
ಕನ್ನಡದ ಪತ್ರಿಕೆಗೆ ದಿವಾನರಾದ ಮಿರ್ಜಾ ಇಸ್ಮಾಯಿಲ್ ರವರ ಬೆಂಬಲ
ಕೃಷಿ ಇಲಾಖೆಯ ನಿರ್ದೇಶಕರಾಗಿದ್ದ ಡಾ. ಲೆಸ್ಲಿ ಕೋಲ್ಮನ್ರವರು ಜನವರಿ 29, 1930ರಂದು ದಿವಾನರಾದ ಮಿರ್ಜಾ ಇಸ್ಮಾಯಿಲ್ರೊಂದಿಗೆ ನಡೆಸಿದ ಸಭೆಯಲ್ಲಿ ‘ಮೈಸೂರು ವ್ಯವಸಾಯ ಶೋಧಕ ಸಂಘದ ಪತ್ರಿಕೆ’ಯ ಪ್ರಚಾರವನ್ನು ಹೆಚ್ಚಿಸಲು ಶಾಲೆಗಳು ಮತ್ತು ಗ್ರಾಮ ಪಂಚಾಯತಿಗಳನ್ನು ಚಂದಾದಾರನ್ನಾಗಿಸುವ ಸಲಹೆಯನ್ನು ಮುಂದಿಟ್ಟು ಒಪ್ಪಿಗೆ ಪಡೆದರು.
ಮೈಸೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಹೆಚ್ಚು ಚಂದಾದಾರರಿದ್ದರು. ಪತ್ರಿಕೆಗೆ ಡಾ. ಲೆಸ್ಲಿ ಕೋಲ್ಮನ್, ಡಾ. ಎ. ಕೆ. ಯಜ್ಞನಾರಾಯಣ ಅಯ್ಯರ್, ಡಾ. ಕೆ. ಕುನ್ಹಿ ಕಣ್ಣನ್, ಮೇಜರ್ ಆರ್. ಡಬ್ಲ್ಯು. ಸಿಂಪ್ಸನ್, ಡಾ. ನರಸಿಂಹ ಅಯ್ಯಂಗಾರ್, ಕೆ. ಭೀಮರಾವ್, ವೆಂಕಟರಾಮನ್, ಮಂ. ಜ. ನರಸಿಂಹನ್, ಕೂರಪಾಡು ಗುಂಡಪ್ಪನವರು, ಎಂ. ಕೃಷ್ಣಶಾಸ್ತ್ರಿ, ಪಿ. ಯು. ನಾಯರ್, ಟಿ. ವಿ. ಸುಬ್ರಹ್ಮಣ್ಯ ಅಯ್ಯರ್, ಕೆ. ರಂಗನಾಥರಾವ್, ಬಿ. ಕೃಷ್ಣಮೂರ್ತಿ, ಎಸ್. ವಿ. ಶರ್ಮ, ಎನ್. ರಾಮಣ್ಣ, ಎಂ. ಎನ್. ಕೃಷ್ಣರಾವ್, ಡಿ. ಜಿ. ಗುಂಡೂರಾವ್, ಎನ್. ಎಸ್. ವೆಂಕಟಕೃಷ್ಣಯ್ಯ ಮುಂತಾದವರು ನಿಯಮಿತವಾಗಿ ಕೃಷಿ ಲೇಖನಗಳನ್ನು ಬರೆಯುತ್ತಿದ್ದರು. ಈ ಲೇಖಕರಲ್ಲಿ ಕನ್ನಡಿಗರು, ತಮಿಳು ಮಾತೃ ಭಾಷೆಯ ಕನ್ನಡಿಗರು, ಡಾ. ಕೋಲ್ಮನ್ ಹಾಗೂ ಮೇಜರ್ ಸಿಂಪ್ಸನ್ರಂತಹ ವಿದೇಶಿಯರೂ ಇದ್ದರು. ಕುವೆಂಪುರವರು ಬರೆದ ‘ರೈತ’ ತಲೆಬರಹದ ಕವನವು 1929ರ ಸಂಚಿಕೆಯಲ್ಲಿ ಪ್ರಕಟವಾಯಿತು.
ಕೃಷಿ ಸಾಹಿತ್ಯ ರಚನೆಯ ಪರಂಪರೆಯ ಪ್ರಮುಖ ಕೃತಿಗಳು
ಕೃಷಿ ಸಾಹಿತ್ಯ ರಚನೆಯ ಆರಂಭದ ಸುಮಾರು 80 ದಶಕಗಳ ಕಾಲದ ಅಥವಾ ಸ್ವಾತಂತ್ರ್ಯ ಸಂದರ್ಭದವರೆಗೆ ರಚನೆಯಾದ ಪ್ರಮುಖ ಕೃತಿಗಳ ಹೆಸರುಗಳನ್ನು ಹಾಗೂ ಆವರಣದಲ್ಲಿ ಲೇಖಕರ ಹೆಸರು ಮತ್ತು ಪ್ರಕಟಣೆಯ ವರ್ಷದೊಂದಿಗೆ ಇಲ್ಲಿ ಕೊಡಲಾಗಿದೆ.
ಗೋವೃಷಭಾದಿಗಳ ಸಂರಕ್ಷಣ ವೈದ್ಯಾದಿಗಳ ಕ್ರಮವು (ಗಣಪಯ್ಯ ಚಂದಾವರ, 1877), ಕೃಷಿ ಜ್ಞಾನ ಪ್ರದೀಪಿಕೆ (ಶ್ರೀ ನಾಗಭೂಷಣ ಘನಮಠ ಶಿವಯೋಗಿಗಳು, 1879), ವ್ಯವಸಾಯ ಬೋಧಿನಿ (ಹರ್ಮನ್, ಎಫ್. ಇ. ಮತ್ತು ರಾಮಸ್ವಾಮಿ ಶಾಸ್ತ್ರಿ, 1879), ದನಕರುಗಳ ಅಂಟುರೋಗ (ಅನಾಮಧೇಯ, 1880), ಪಶುವೈದ್ಯ (ನರಸಿಂಹ ಅಯ್ಯಂಗಾರ್, 1895), ಜಲರತ್ನಾಕರ (ಅಪ್ಪಯ್ಯ ಕೊರವಂಡ, 1898), ವ್ಯವಸಾಯ ಚಂದ್ರಿಕೆ (ರಾಮಸ್ವಾಮಿ ಅಯ್ಯಂಗಾರ್ ಕೆ. ಹೊನ್ನಾಳಿ, 1898), ವ್ಯವಸಾಯ ಬೋಧಿನಿ (ಶೇಷಾದ್ರಿ ಅಯ್ಯಂಗಾರ್, ಕೆ. 1900).
ಬೆಳೆಗಳನ್ನು ಹಾಳು ಮಾಡುವ ಹುಳುಗಳ ವಿಷಯ (ಡಾ. ಅಡಾಲ್ಫ್ ಲೆಹ್ಮನ್, 1902), ಕಾಫಿ ತೋಟದಲ್ಲಿ ತರಗು ಹೊದಿಕೆ ಹೊದಿಸುವುದನ್ನು ಕುರಿತು (ಅನಾಮಧೇಯ, 1902), ಇಂಡಿಯಾ ದೇಶದ ಅಪಾಯಕರವಾದ ಜಾನುವಾರು ರೋಗಗಳನ್ನು ಕುರಿತು ಸಂಕ್ಷಿಪ್ತ ಗ್ರಂಥವು (ವಾಕರ್ ಜಿ. ಕೆ., 1902), ಕೃಷಿ ಶಾಸ್ತ್ರದ ಮೊದಲ ಪುಸ್ತಕ (ಬೆನ್ಸನ್ ಸಿ., 1905), ಕೃಷಿ ಕರ್ಮ ಶಾಸ್ತ್ರವು (ರಾಮಚಂದ್ರ ಮಾಧ್ವ ಮಹಿಷಿ, 1906), ವ್ಯವಸಾಯ ಧರ್ಮ ಬೋಧಿನಿ (ಕೊರವಂಡ ಅಪ್ಪಯ್ಯ, 1908), ವ್ಯವಸಾಯ ಕ್ರಮ ಬೋಧಿನಿ (ಹನುಮಂತಯ್ಯ ಗೌಡ, ಬಿ., 1909), ಗೊಬ್ಬರವು (ಒಡೆಯರ್ ಎಸ್. ಕೆ., 1909), ಗೋಮಯ – ಅದರ ಗುಣದೋಷಗಳು (ಸಲ್ಪು ಸಿ., 1909), ಆಲೂಗಡ್ಡೆಯ ವ್ಯವಸಾಯ (ಸೋಮಾಚಾರ್ಯ, ಎಚ್. ಪಿ., 1910).
ದಕ್ಷಿಣ ಹಿಂದೂದೇಶದ ವ್ಯವಸಾಯ ಪದ್ದತಿ (ಹನುಮಂತಗೌಡ, ಸಿ. ವಿ., 1911), ಬೇಸಾಯದ ಪಾಠಗಳು (ನೈಟ್, ಜೆ. ಬಿ., 1912), ತೆಂಗಿನ ಫಸಲು (ವೆಂಕಟನರಸಿಂಹಯ್ಯ, ಎಸ್. ಕೆ., 1912), ಕೃಷಿ ಸಂಜೀವಿನಿ (ಶೆಟ್ಟಣ್ಣ, ಆರ್., 1916), ಗೋವೈದ್ಯ ಸಾರ ಸಂಗ್ರಹ (ನಂಜಪ್ಪ, ಬಿ. ಎನ್. ಮತ್ತು ವೆಂಕಟಾಚಲಂ ಸೆಟ್ಟಿ, ಎಂ. ಆರ್., 1917), ಪಶುವೈದ್ಯ (ನರಸಿಂಹ ಅಯ್ಯಂಗಾರ್, 1917), ವ್ಯವಸಾಯ ಶಾಸ್ತ್ರದ ಕೆಲವು ಮುಖ್ಯ ತತ್ವಗಳು (ಭೀಮರಾಯ, ಕೆ., 1919). ಗೋಮಾತೆ : ನನ್ನ ಮೂಗ ತಾಯಿ (ಖಾದ್ರಿ ಗುಂಡೂರಾವ್, 1925).
ಸರಳ ವ್ಯವಸಾಯ ಪಾಠ (ನರಸಿಂಹ ಅಯ್ಯಂಗಾರ್, ಕೆ. 1927), ಭೂಲೋಕದ ಕಾಮಧೇನು (ನೀಲಕಂಠ ಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, 1929), ಹಣ್ಣುಹಂಪಲುಗಳ ಬಾಗಾಯತು (ಹರಿ ಪುರುಷೋತ್ತಮ ಪರಾಂಜಪೆ, ಶಂಭು ಭಟ್ಟ ಮತ್ತು ಮಹದೇವ ವಾಮನ ಗೋಡಬೋಲೆ, 1930), ಹೊಲದಲ್ಲಿಯ ಒಡ್ಡು ಬಟ್ಟಲುಗಳು (ರಾಘವೇಂದ್ರ ಭೀಮರಾವ್ ಮತ್ತು ಮುತಾಲಿಕ ದೇಸಾಯಿ, 1932), ಕೃಷಿ ಜ್ಞಾನ ಪ್ರದೀಪಿಕೆ (ಹಳಕಟ್ಟಿ, ಎಫ್. ಈ., 1936), ಒಕ್ಕಲಿಗರ ಕೈಪಿಡಿ (ಹನುಮಪ್ಪ ರಾಮಪ್ಪ ಕಳವಾಡ, 1937), ಮಾದರಿಯ ತೋಟ ಅರ್ಥಾತ್ ಕಾಯಿಪಲ್ಲೆ ಸಾಗುವಳಿ (ಅಮರಗೋಳ ಮಠ ಮತ್ತು ಹಿರೇಮಠ, ಬಿ. ವಿ., 1938).
ಮಾನವ, ಆರೋಗ್ಯ, ಅಕ್ಕಿಯಲ್ಲಿನ ಜೀವಸತ್ವಗಳು (ಜೋಸೆಫ್ ಕಾರ್ನಿಲಿಯಾಸ್ ಮತ್ತು ಹರಿ ಅನಂತ ಪೈ, 1943), ಪಶುಪಾಲನೆ (ಕೃಷ್ಣಶಾಸ್ತ್ರಿ, ಎಂ., 1944), ಜೇನಿನ ವ್ಯವಸಾಯ (ಪೈಲೂರು ಲಕ್ಷ್ಮೀನಾರಾಯಣ ರಾವ್ ಮತ್ತು ಚೊಕ್ಕಾಡಿ, 1945), ದಕ್ಷಿಣ ಭಾರತದಲ್ಲಿ ಕಾಫಿ ಸಂಶೋಧನೆ ಒಂದು ಟಿಪ್ಪಣಿ (ವಿಲ್ಸನ್, ಡಬ್ಲ್ಯೂ. ಮತ್ತು ಸೀತಾರಾಮಯ್ಯ, ಎಂ., 1946), ನೂತನ ಲಘು ವಿಜ್ಞಾನ ಪಶುಸಂಗೋಪನಾ ಸಾಹಿತ್ಯ ಭಾಗ -1 (ದಾಮೋದರ ಬಾಳಿಗಾ, 1946), ನಮ್ಮ ವ್ಯವಸಾಯ (ಶಾಮರಾವ್, ಆರ್. ಜಿ. 1947), ತುಂಡು ಹೊಲಗಳ ಸಂಯೋಜನೆ (ಕೊಲ್ಲನ ಗೌಡ ಪಾಟೀಲ, 1947), ಗೊಬ್ಬರ (ಹಿತ್ತಲಮನಿ, ವೀ. ಚ., 1947). (ವಿ. ಸೂ.: ಪುಸ್ತಕಗಳ ಪಟ್ಟಿಯನ್ನು ಡಾ. ಜೆ. ಬಾಲಕೃಷ್ಣರವರು ಡಾಕ್ಟೊರಲ್ ಪದವಿಗಾಗಿ 2007ರಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧದಿಂದ ತೆಗೆದುಕೊಳ್ಳಲಾಗಿದೆ).
ಕೊನೆಯ ಮಾತು
ಇತ್ತೀಚೆಗೆ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೃಷಿ ವಿಜ್ಞಾನ ಸಾಹಿತ್ಯ ಕುರಿತು ಪ್ರತ್ಯೇಕ ಗೋಷ್ಟಿಗಳನ್ನೇರ್ಪಡಿಸುತ್ತಿರುವುದು ಸ್ವಾಗತಾರ್ಹ. ಕನ್ನಡದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಹಿತ್ಯವು ನಿರ್ಮಾಣವಾಗಬೇಕಿದೆ. ಕೃಷಿ ಜೈವಿಕ ತಂತ್ರಜ್ಞಾನ, ನ್ಯಾನೋ ಟೆಕ್ನಾಲಜಿಯ ಕೃಷಿ, ನಿಖರ ಕೃಷಿ, ಹವಾಮಾನ ವೈಪರೀತ್ಯಗಳ ಚೇತರಿಕೆಯ ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮುಂತಾದ ವಿಷಯಗಳ ಕುರಿತು ಹಲವು ತಜ್ಞ ಲೇಖಕರಿಂದ ಜನಪ್ರಿಯ ಕೃಷಿ ಸಾಹಿತ್ಯ ರಚನೆಯಾಗಬೇಕಿದೆ. ಕೃಷಿಕರ ಮನೆಯಲ್ಲಿ ಕೃಷಿ ಸಾಹಿತ್ಯದ ಪುಸ್ತಕಗಳಿರಬೇಕಿದೆ. ಕೃಷಿಕರು ಆಧುನಿಕ ಕೃಷಿಯನ್ನು ಅಳವಡಿಸಿಕೊಳ್ಳಲು ಓದುವ ಹವ್ಯಾಸವನ್ನು ಇನ್ನಷ್ಟು ರೂಢಿಸಿಕೊಳ್ಳಬೇಕಿದೆ. ಕೃಷಿ ಸಾಹಿತ್ಯದ ನಿರ್ಮಾಣಕ್ಕೆ ‘ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ’ ನಿಧಿಯೂ ಧಕ್ಕಿ, ಅತಿ ಕಡಿಮೆ ಬೆಲೆಗೆ ಕೃಷಿ ಪುಸ್ತಕಗಳು ರೈತರಿಗೆ ಎಟುಕುವಂತಿರಬೇಕು. ಕೃಷಿ ವಿಶ್ವವಿದ್ಯಾಲಯಗಳು, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೃಷಿ ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟಿಸಲಿ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕೃಷಿ ಸಾಹಿತ್ಯದ ಏಳಿಗೆಯತ್ತ ಗಮನ ಹರಿಸೋಣ.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ



