ಸಂಸತ್ತು ಎಂದರೆ ಜನರ ಧ್ವನಿ ಪ್ರತಿಧ್ವನಿಸಬೇಕಾದ ಸ್ಥಳ. ಆದರೆ ಆ ಧ್ವನಿ ಸಂಸತ್ತಿನೊಳಗೆ ಕೇಳಿಸದಾಗ, ಅದು ಬೀದಿಗಿಳಿಯುತ್ತದೆ. ಇದೇ ಪ್ರಜಾಪ್ರಭುತ್ವದ ಸಹಜ ಸ್ವಭಾವ. “ಸಂಸದ್ ಚಲೋ” ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಯುವಕ-ಯುವತಿಯರು ಗಾಯಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು, ವಿಡಿಯೊಗಳು ಮತ್ತು ಸಾಕ್ಷ್ಯಗಳು ಈ ಪ್ರತಿಭಟನೆಯ ಕ್ರೂರ ಮುಖವನ್ನು ನಮ್ಮ ಮುಂದೆ ತೆರೆದಿಡುತ್ತಿವೆ.
ಜುಲೈ 20 ರಂದು ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ “ಸಂಸದ್ ಚಲೋ” ಪ್ರತಿಭಟನೆಯನ್ನು ಅಸಫಲಗೊಳಿಸಲು ಮೋಶಾ ಮಾಡಿದ ನೀಚ ಕೃತ್ಯದಿಂದ ನರೇಂದ್ರ ಮೋದಿ ಮತ್ತು ಬಿಜೆಪಿ ಏನು ಗಳಿಸಿತು? ಏನೂ ಇಲ್ಲ. ಇಡೀ ದೇಶ ಮತ್ತು ಇಡೀ ವಿಶ್ವವೇ ಕಂಡದ್ದು ಒಂದೇ, ಅದು ಪ್ರಧಾನಮಂತ್ರಿಯ ಅಹಂಕಾರ. “ತಾನು ಏನು ಮಾಡಿದರೂ ನಡೆಯುತ್ತೆ” ಎನ್ನುವ ಅಹಂಕಾರ ! ಸಂಸತ್ತಿನ ಹೊರಗಡೆ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದರು. ಒಳಗೆ ಸಂಸತ್ ಕಲಾಪ ನಡೆಯುತ್ತಿತ್ತು. ಸಚಿವರು, ಸಂಸದರು ಹಾಜರಿದ್ದರು. ಆದರೆ ಪ್ರಧಾನಮಂತ್ರಿ ಮಾತ್ರ ಹೊರಗಿನ ವಿದ್ಯಾರ್ಥಿಗಳನ್ನು ಮತ್ತು ಸಂಸತ್ತಿನ ಒಳಗಡೆಯ ಪ್ರಶ್ನೆಗಳನ್ನು ಎದುರಿಸುವ ಬದಲು ಯುದ್ಧವನ್ನು ಸೋತ ಒಬ್ಬ ಹೇಡಿಯಂತೆ ಹಿಂಬಾಗಿಲಿನಿಂದ ಹೊರಟುಹೋದದ್ದು. ಒಬ್ಬ ನಾಯಕ ತನ್ನ ದೇಶದ ಯುವಕರೊಂದಿಗೆ ನೇರ ಸಂವಾದ ನಡೆಸುವುದಕ್ಕೂ ಹಿಂಜರಿಯುತ್ತಿದ್ದರೆ, ಅದು ನಾಯಕತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ.
ಸಂಸತ್ತು ಎಂದರೆ ಜನರ ಧ್ವನಿ ಪ್ರತಿಧ್ವನಿಸಬೇಕಾದ ಸ್ಥಳ. ಆದರೆ ಆ ಧ್ವನಿ ಸಂಸತ್ತಿನೊಳಗೆ ಕೇಳಿಸದಾಗ, ಅದು ಬೀದಿಗಿಳಿಯುತ್ತದೆ. ಇದೇ ಪ್ರಜಾಪ್ರಭುತ್ವದ ಸಹಜ ಸ್ವಭಾವ. “ಸಂಸದ್ ಚಲೋ” ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಯುವಕ-ಯುವತಿಯರು ಗಾಯಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು, ವಿಡಿಯೊಗಳು ಮತ್ತು ಸಾಕ್ಷ್ಯಗಳು ಈ ಪ್ರತಿಭಟನೆಯ ಕ್ರೂರ ಮುಖವನ್ನು ನಮ್ಮ ಮುಂದೆ ತೆರೆದಿಡುತ್ತಿವೆ. ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ನಡೆದಿರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಯುವತಿಯರ ಬಟ್ಟೆಗಳನ್ನು ಹರಿದರು, ರಕ್ತಹರಿಯುವಂತೆ ತಲೆ ಒಡೆಯುವಂತೆ ಥಳಿಸಿದರು. ಒಂದೆಡೆ ಯುವಕನ ಕತ್ತು ಹಿಸುಕುತ್ತಿದ್ದ ದೃಶ್ಯ, ಪತ್ರಕರ್ತರನ್ನೂ ಬಿಡದೇ ಥಳಿಸಿದರು. ಸಂಸತ್ತಿನ ಎಲ್ಲ ದ್ವಾರಗಳನ್ನು ಮುಚ್ಚಲಾಯಿತು. ದಮನ ಮತ್ತು ದೌರ್ಜನ್ಯಗಳ ಸುದ್ದಿಗಳು ಹೊರಬರದಂತೆ ಇಂಟರ್ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ತನ್ನದೇ ದೇಶದ ಯುವಕರ ವಿರುದ್ಧವೇ ಸರ್ಕಾರ ಯುದ್ಧ ಘೋಷಿಸಿರುವಂತೆ ಕಾಣುತ್ತಿದೆ. ಇದು ಭೀತಿಗ್ರಸ್ತ ಅಧಿಕಾರದ ಕಾಯಕ.

ಇದರ ಜೊತೆಗೆ, ದಾಳಿ ನಡೆಸಿದವರಲ್ಲಿ ಪೊಲೀಸರು ಅಲ್ಲದವರೂ ಇದ್ದರೆಂಬ ಆರೋಪಗಳೂ ಕೇಳಿಬರುತ್ತಿವೆ. ಆ ಕುರಿತ ವಿಡಿಯೋ, ಫೋಟೊಗಳು ಸಾಕ್ಷಿನುಡಿಯುತ್ತಿವೆ. ಮೋಶಾ ದೆಹಲಿ ಪೊಲೀಸರನ್ನು ʼಗಲಭೆʼ ಪೊಲೀಸರನ್ನಾಗಿ ಪರಿವರ್ತಿಸಿದ್ದಾರೆ. ದೇಶದ ಯುವಕರು ಮತ್ತು ವಿದ್ಯಾರ್ಥಿಗಳ ರಕ್ತ ಹರಿಸಲು, ಅವರು ಪ್ರಶ್ನೆ ಕೇಳದಂತೆ ತಡೆಯಲು ಕಲ್ಲೆಸೆಯುವ ವಿಶೇಷ ತರಬೇತಿಯನ್ನು ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಆರೋಪಗಳು ನಿಜವೇ ಎಂಬುದನ್ನು ಸ್ವತಂತ್ರ ಹಾಗೂ ಪಾರದರ್ಶಕ ತನಿಖೆಯೇ ಸ್ಪಷ್ಟಪಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಸತ್ಯವು ಊಹೆಗಳಿಂದಲ್ಲ, ತನಿಖೆಯಿಂದ ಹೊರಬರಬೇಕು. ಈ ಹಿನ್ನೆಲೆಯಲ್ಲಿ ನೋಡಿದರೆ 2020ರ ದಿಲ್ಲಿ ದಂಗೆಯನ್ನು ಹುಟ್ಟುಹಾಕಿದ್ದು ಗೂಂಡಾಗಿರಿ ಮಾಡಿಸಿದ್ದು ಬಿಜೆಪಿಯೇ ಎಂದು ಸಾಬೀತಾಗುತ್ತದಲ್ಲವೇ? ಇದಕ್ಕಾಗಿ ತಮ್ಮದಲ್ಲದ ತಪ್ಪಿಗೆ ಉಮರ್ ಖಾಲಿದ್ ನಂತಹ ಮುಸ್ಲಿಮ್ ಹೋರಾಟಗಾರರು ಬೆಲೆತೆರಬೇಕಾಗಿದೆ. ಇದು ವಾಸ್ತವ!
ಪ್ರಶ್ನೆಪತ್ರಿಕೆ ಸೋರಿಕೆ ತಡೆಯಬೇಕು, ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಕೇಳಿದವರ ಮೇಲೆ ಲಾಠಿ ಬೀಸುವುದು, ಅವರನ್ನು ಬಂಧಿಸುವುದು ಪ್ರಜಾಪ್ರಭುತ್ವದ ಮೇಲಿನ ದಮನದ ಕ್ರೂರ ಮುಖವಾಗಿದೆ. ಪ್ರತಿಯೊಂದು ಲಾಠಿ, ಪ್ರತಿಯೊಂದು ಅಶ್ರುವಾಯು, ಪ್ರತಿಯೊಂದು ವೆಲ್ಡ್ ಮಾಡಿದ ಬ್ಯಾರಿಕೇಡ್, ಮುಚ್ಚಲ್ಪಟ್ಟ ಪ್ರತಿಯೊಂದು ಮೆಟ್ರೋ ನಿಲ್ದಾಣವೂ ಇವರ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ಸರ್ಕಾರ ತನ್ನದೇ ಯುವ ಪೀಳಿಗೆಯನ್ನು ಎದುರಿಸಲು ಹೆದರುತ್ತಿದೆ. ದೇಶದ ಪ್ರಶ್ನೆಗಳಿಗೆ ಉತ್ತರಗಳಿಲ್ಲದ ಅಧಿಕಾರ ಭಯದ ಹಿಂದೆ ಅಡಗಿಕೊಳ್ಳುತ್ತಿದೆ.
ನಿರೀಕ್ಷಿಸಿದಂತೆ ಸೋನಮ್ ವಾಂಗ್ಚುಕ್ ವಿದ್ಯಾರ್ಥಿಗಳನ್ನು ಬಿಟ್ಟು ಹಿಂದೆ ಸರಿದರು ಎನ್ನುವ ಟೀಕೆಗಳು ಕೇಳಿಬರುತ್ತಿವೆ. ಆದರೆ ವಿದ್ಯಾರ್ಥಿ-ಯುವಕರು ಇನ್ನೂ ಬೀದಿಗಳಲ್ಲೇ ಹೋರಾಟ ಮುಂದುವರಿಸಿದ್ದಾರೆ. ಈಗ ಈ ಆಂದೋಲನ ಸೋನಮ್ ವಾಂಗ್ಚುಕ್ ಮತ್ತು ಅಭಿಜಿತ್ ದೀಪ್ಕೆಯನ್ನು ದಾಟಿಹೋಗಿದೆ. ಇತಿಹಾಸವು ಒಪ್ಪಂದಗಳನ್ನು ಮಾಡಿಕೊಂಡವರನ್ನು ಅಲ್ಲ, ಲಾಠಿ ಹೊಡೆತಗಳನ್ನು ತಾಳಿದವರನ್ನೇ ನೆನಪಿಡುತ್ತದೆ. ಶಿಕ್ಷಣ ಸಚಿವರ ರಾಜೀನಾಮೆಯ ಬೇಡಿಕೆಯಿಂದ ಆರಂಭವಾದ ಈ ಹೋರಾಟ ಈಗ ಅದಕ್ಕಿಂತ ಬಹಳ ದೊಡ್ಡ ಪ್ರಶ್ನೆಗಳತ್ತ ಸಾಗುತ್ತಿದೆ. ದೇಶದ ಯುವಕರು ಇನ್ನು ಸುಳ್ಳು ಭರವಸೆಗಳ ಮೋಸಕ್ಕೆ ಒಳಗಾಗುವುದಿಲ್ಲ. ದೇಶದ ಗಾಳಿ ಬದಲಾಗುತ್ತಿರುವಂತೆ ಕಾಣುತ್ತಿದೆ; ಭಯ ಹುಟ್ಟಿಸುವವರನ್ನು ಭಯಪಡುವುದನ್ನು ಜನರು ನಿಧಾನವಾಗಿ ಬಿಟ್ಟುಬಿಡುತ್ತಿದ್ದಾರೆ.
ಇಂತಹ ಸಂಕಷ್ಟದ ಹೊತ್ತಿನಲ್ಲಿ ಪ್ರಧಾನಮಂತ್ರಿ ಮುಂಚೂಣಿಯಲ್ಲಿ ನಿಂತು ಮಾತುಕತೆ ನಡೆಸಬೇಕೆಂಬ ನಿರೀಕ್ಷೆ ಇರುತ್ತದೆ. ನ್ಯಾಯಯುತವಾಗಿ ಹಾಗೆ ಆಗಬೇಕು. ವಿದ್ಯಾರ್ಥಿ ಪ್ರತಿನಿಧಿಗಳನ್ನು ಕರೆದು ಅವರ ಅಹವಾಲುಗಳನ್ನು ಆಲಿಸಿ, ಅಗತ್ಯವೆಂದು ಕಂಡರೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರ ರಾಜೀನಾಮೆ ಪಡೆದು ಹೊಣೆಗಾರಿಕೆಯ ಸಂದೇಶ ನೀಡಬಹುದಿತ್ತು. ಆದರೆ ಅದರ ಬದಲು ಮೌನ ಮತ್ತು ಪೊಲೀಸ್ ಕ್ರಮಗಳೇ ಮುಂದುವರಿದರೆ ಅಸಮಾಧಾನ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಷ್ಟೇ ಅಲ್ಲ, ಕಾರ್ಮಿಕರು, ರೈತರು, ಸೇರಿದಂತೆ ವಿವಿಧ ಅಸಮಾಧಾನಿತ ವರ್ಗಗಳು ಒಂದೇ ವೇದಿಕೆಗೆ ಬರುವ ಸಾಧ್ಯತೆಯನ್ನೂ ಕೆಲವರು ಊಹಿಸುತ್ತಿದ್ದಾರೆ.
ಒಟ್ಟಾರೆ ಚಿತ್ರಣವನ್ನು ಗಮನಿಸಿದರೆ ವಿದ್ಯಾರ್ಥಿ ಚಳವಳಿಯೊಳಗೂ ಕೆಲವು ಸವಾಲುಗಳಿವೆ. ಇನ್ನೂ ಏಕೀಕೃತ ನಾಯಕತ್ವ ರೂಪುಗೊಂಡಿಲ್ಲ. ಸೋನಂ ವಾಂಗ್ಚುಕ್ ತಮ್ಮದೇ ಬೇಡಿಕೆಗಳನ್ನು ಮುಂದಿರಿಸುತ್ತಿದ್ದರೆ, ಸಿಜೆಪಿಯ ಪ್ರತಿನಿಧಿಗಳಾದ ಸೌರಭ್ ದಾಸ್ ಮತ್ತು ಆಶುತೋಷ್ ರಾಂಕಾ ಸಚಿವ ಜೆ.ಪಿ. ನಡ್ಡಾ ಅವರ ಮುಂದೆ ಬೇರೆ ಬೇಡಿಕೆಗಳನ್ನು ಮಂಡಿಸಿದ್ದಾರೆ. ಈ ಎರಡರ ನಡುವೆ ಸ್ಪಷ್ಟ ಹೊಂದಾಣಿಕೆ ಕಾಣುತ್ತಿಲ್ಲ. ನಿನ್ನೆಯ ಬೃಹತ್ ಪ್ರತಿಭಟನೆಯ ಪ್ರಮುಖ ಬೇಡಿಕೆಯಾದ ಧರ್ಮೇಂದ್ರ ಪ್ರಧಾನರ ರಾಜೀನಾಮೆಗೆ ಸೋನಂ ವಾಂಗ್ಚುಕ್ ಆದ್ಯತೆ ನೀಡದಿರುವುದೂ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ, ವಿದ್ಯಾರ್ಥಿಗಳ ಆಕ್ರೋಶ ಎಷ್ಟೇ ಪ್ರಬಲವಾಗಿದ್ದರೂ ಅದಕ್ಕೆ ಸ್ಪಷ್ಟ ದಿಕ್ಕು, ಸಮನ್ವಯಗೊಂಡ ನಾಯಕತ್ವ ಮತ್ತು ಏಕೀಕೃತ ಕಾರ್ಯತಂತ್ರದ ಅಗತ್ಯವಿದೆ. ಇಲ್ಲವಾದರೆ ಚಳವಳಿಯ ಶಕ್ತಿ ಚದುರಿಹೋಗುವ ಅಪಾಯವೂ ಇದೆ; ಭವಿಷ್ಯದ ದಿಕ್ಕು ಅನಿಶ್ಚಿತವಾಗುವ ಸಾಧ್ಯತೆಯೂ ಇದೆ.

ಪ್ರಭುತ್ವದ ನಡೆಯನ್ನು ನೋಡಿದರೆ ಈ ದೇಶದ ಜನತೆಯನ್ನು ಗುಲಾಮರು ಎಂದು ತಿಳಿದಂತಿದೆ. ನಾವು ಗುಲಾಮ ದೇಶದ ಪ್ರಜೆಗಳಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಪೂರ್ವಜರ ವಂಶಸ್ಥರು ನಾವು. ನಮ್ಮ ರಕ್ತನಾಳಗಳಲ್ಲಿ ಗಾಂಧಿಯ ಸತ್ಯಾಗ್ರಹವೂ ಹರಿಯುತ್ತದೆ, ಭಗತ್ ಸಿಂಗ್ ಅವರ ಧೈರ್ಯವೂ ಹರಿಯುತ್ತದೆ. ಭಾರತದ ಪ್ರಜಾಪ್ರಭುತ್ವವು ಪ್ರತಿಯೊಬ್ಬ ನಾಗರಿಕನಿಗೂ ತನ್ನ ಹಕ್ಕುಗಳಿಗಾಗಿ, ದೇಶದ ಹಿತಕ್ಕಾಗಿ ಸರ್ಕಾರವನ್ನು ಕಣ್ಣಲ್ಲಿ ಕಣ್ಣು ಹಾಕಿ ಪ್ರಶ್ನಿಸುವ ಹಕ್ಕನ್ನು ನೀಡಿದೆ. ಏಕೆಂದರೆ ದೇಶವೆಂದರೆ ಜನರು. ಯಾವುದೇ ಸಚಿವ, ಶಾಸಕ, ಸಂಸದ ಅಥವಾ ಪ್ರಧಾನಮಂತ್ರಿಯೂ ಜನರಿಗಿಂತ ಮೇಲಲ್ಲ. ಅವರು ಜನರ ಪ್ರತಿನಿಧಿಗಳು, ಜನಸೇವಕರು. ಅವರು ತಮ್ಮನ್ನು ಜನರ ಯಜಮಾನರೆಂದು ಭಾವಿಸಲು ಆರಂಭಿಸಿದರೆ, ಅವರಿಗೆ ಅವರ ನಿಜವಾದ ಸ್ಥಾನವನ್ನು ನೆನಪಿಸುವುದು ನಾಗರಿಕರ ಪ್ರಜಾಸತ್ತಾತ್ಮಕ ಕರ್ತವ್ಯ. ಇದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಇದೇ ಜನತೆ ಅತ್ಯಂತ ಪ್ರಬಲ ಸರ್ಕಾರಗಳನ್ನೂ ಅಧಿಕಾರದಿಂದ ಕೆಳಗಿಳಿಸಿದೆ. ದಶಕಗಳ ಕಾಲ ಆಡಳಿತ ನಡೆಸಿದ ಸರ್ಕಾರಗಳನ್ನು ಬದಲಿಸಿ, ಹೊಸ ಸರ್ಕಾರಗಳನ್ನು ಭಾರೀ ಬಹುಮತದಿಂದ ಅಧಿಕಾರಕ್ಕೆ ತಂದದ್ದೂ ಇದೇ ಜನತೆ. ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಇದೇ ಜನತೆ ಸರ್ಕಾರಗಳನ್ನು ಆರಿಸಬಲ್ಲದು, ಬದಲಾಯಿಸಲೂ ಬಲ್ಲದು.
ಯಾವುದೇ ಸರ್ಕಾರ ತಾನೇ ಶಾಶ್ವತ ಅಥವಾ ಜನರಿಗಿಂತ ಮೇಲೆ ಎಂದು ಭ್ರಮಿಸಿದರೆ, ಅದು ಇತಿಹಾಸದಿಂದ ಪಾಠ ಕಲಿಯಬೇಕು. ಸಮಾಜವನ್ನು ವಿಭಜಿಸುವುದು, ಸುಳ್ಳು ಪ್ರಚಾರ ಮತ್ತು ಗೊಂದಲ ಸೃಷ್ಟಿಸುವುದು ಶಾಶ್ವತವಾಗಿ ನಡೆಯುವುದಿಲ್ಲ. ಒಂದು ಹಂತದಲ್ಲಿ ಜನರ ತಾಳ್ಮೆ ಮುಗಿಯುತ್ತದೆ; ಅವರು ಉತ್ತರವನ್ನು ಕೇಳಲು ಆರಂಭಿಸುತ್ತಾರೆ.
ಪ್ರಜಾಪ್ರಭುತ್ವದಲ್ಲಿ ಕೇವಲ ಆಡಳಿತ ಪಕ್ಷವಷ್ಟೇ ಅಲ್ಲ, ಜವಾಬ್ದಾರಿಯುತ ಮತ್ತು ಪರಿಣಾಮಕಾರಿ ಪ್ರತಿಪಕ್ಷವೂ ಅತ್ಯಗತ್ಯ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಅಖಿಲೇಶ್ ಯಾದವ್ ಪ್ರಧಾನಿ ನಿವಾಸದ ಬಳಿ ಯುವಕರ ಮೇಲಿನ ಹಲ್ಲೆಯನ್ನು ವಿರೋಧಿಸಿ ಧರಣಿ ನಡೆಸಿದ್ದರು ( 21 ಜುಲೈ) ಅವರನ್ನೂ ಪೊಲೀಸರು ಬಲವಂತವಾಗಿ ವಶಪಡಿಸಿಕೊಂಡಿದ್ದರು. ಇದು ಗೂಂಡಾಗಿರಿಯಲ್ಲದೆ ಮತ್ತೇನು?
ಶಿಕ್ಷಣಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗಾಗಿ ಒತ್ತಾಯಿಸುತ್ತಿದ್ದರೂ ಲಜ್ಜೆಗೇಡಿ ಸರಕಾರ ಪ್ರಧಾನ್ ಅವರ ರಾಜಿನಾಮೆಯನ್ನು ಪಡೆದಿಲ್ಲ. ಪ್ರಧಾನಿಗಾಗಲಿ, ಗೃಹಮಂತ್ರಿಗಾಗಲಿ ಈ ಬಗ್ಗೆ ಯಾವ ನೈತಿಕ ಹೊಣೆಯೂ ಇಲ್ಲವೇ? ಇಡೀ ದೇಶದ ಜನತೆ ನ್ಯಾಯಕ್ಕಾಗಿ ಹೋರಾಡುತ್ತಿರುವಾಗ ಆಳುವವರಲ್ಲಿ ಸ್ವಲ್ಪವಾದರೂ ಮಣಿಯುವ ಗುಣವಿರಬೇಕಲ್ಲವೇ? ರೈತರನ್ನು ಗಡಿಯಾಚೆಗೆ ಹನ್ನೊಂದು ತಿಂಗಳು ನರಳುವಂತೆ ಮಾಡಿದ ದುಷ್ಟ ಜನರಿವರು. ಏಳುನೂರು ಜನ ರೈತರ ಆತ್ಮಹತ್ಯೆಗೂ ಕರಗದ ಪಾಷಾಣ ಹೃದಯದವರು ಈ ಯುವಕರ ಪ್ರತಿಭಟನೆಗೆ ಮಣಿಯುತ್ತಾರೆಯೇ?
ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಗಳಲ್ಲ. ಪ್ರಜಾಪ್ರಭುತ್ವ ಎಂದರೆ ಜನರ, ಜನರಿಂದ, ಜನರಿಗಾಗಿ ನಡೆಯುವ ಆಡಳಿತ. ಈ ಮೂಲಭೂತ ಮೌಲ್ಯವನ್ನು ಜೀವಂತವಾಗಿಡುವುದೇ ಭಾರತದ ನಿಜವಾದ ಶಕ್ತಿ.
ಒಂದು ರಾಷ್ಟ್ರದ ಭವಿಷ್ಯ ಅದರ ಯುವಜನತೆಯ ಕನಸುಗಳ ಮೇಲೆ ನಿಂತಿರುತ್ತದೆ. ಅದೇ ಯುವಜನತೆ ಉದ್ಯೋಗ, ಶಿಕ್ಷಣ, ಪರೀಕ್ಷೆಗಳ ಪಾರದರ್ಶಕತೆ ಮತ್ತು ತಮ್ಮ ಭವಿಷ್ಯದ ಬಗ್ಗೆ ಪ್ರಶ್ನೆ ಕೇಳಿದಾಗ, ಅವರ ಧ್ವನಿಯನ್ನು ಸಂವಾದದಿಂದಲ್ಲ, ಬಲಪ್ರಯೋಗದಿಂದ ಎದುರಿಸುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯ ಲಕ್ಷಣವಲ್ಲ. ಪ್ರತಿಭಟನೆ ಎಂದರೆ ದೇಶದ್ರೋಹವಲ್ಲ. ಶಾಂತಿಯುತ ಪ್ರತಿಭಟನೆ ಭಾರತದ ಸಂವಿಧಾನ ನಾಗರಿಕರಿಗೆ ನೀಡಿರುವ ಪ್ರಜಾಸತ್ತಾತ್ಮಕ ಹಕ್ಕು. ಸರ್ಕಾರಗಳು ಪ್ರತಿಭಟನೆಯನ್ನು ಒಪ್ಪದೇ ಇರಬಹುದು; ಆದರೆ ಪ್ರತಿಭಟಿಸುವ ಹಕ್ಕನ್ನು ಗೌರವಿಸಲೇಬೇಕು. ಏಕೆಂದರೆ ಇಂದು ಬೀದಿಯಲ್ಲಿ ಪ್ರಶ್ನಿಸುವವನು ನಾಳೆ ಮತಗಟ್ಟೆಯಲ್ಲಿ ತೀರ್ಪು ನೀಡುವ ನಾಗರಿಕ. ಈ ಯುವ ಆಕ್ರೋಶ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ.
ಸಂಸತ್ತಿನ ದಾರಿ ಜನರ ದಾರಿಯೇ. ಆ ದಾರಿಯಲ್ಲಿ ಯುವಕರ ರಕ್ತ ಸುರಿದರೆ, ಅದು ಕೇವಲ ಕೆಲವರ ಗಾಯವಲ್ಲ; ಪ್ರಜಾಪ್ರಭುತ್ವದ ಆತ್ಮಕ್ಕೆ ಬಿದ್ದ ಗಾಯ. ಆ ಗಾಯವನ್ನು ಗುಣಪಡಿಸುವುದು ಲಾಠಿಯಿಂದಲ್ಲ, ಸಂವಾದದಿಂದ; ದಮನದಿಂದಲ್ಲ, ಪ್ರಜಾಸತ್ತಾತ್ಮಕ ಉತ್ತರದಾಯಿತ್ವದಿಂದ.
ಕವಿ ಗೋರಖ್ ಪಾಂಡೆ ಬರೆಯುತ್ತಾರೆ-
ಅವರು ಹೆದರುತ್ತಾರೆ
ಯಾವುದಕ್ಕೆ ಹೆದರುತ್ತಾರೆ?
ಇಷ್ಟೆಲ್ಲಾ ಸಂಪತ್ತು
ಗುಂಡು-ಸಿಡಿಮದ್ದು
ಪೊಲೀಸ್ ಮತ್ತು ಸೇನೆ ಇದ್ದರೂ
ಅವರು ಹೆದರುತ್ತಾರೆ
ಏಕೆಂದರೆ
ಒಂದು ದಿನ ಬಡವರು ಮತ್ತು ನಿರಾಯುಧರು
ಅವರಿಗೆ ಹೆದರುವುದನ್ನು ನಿಲ್ಲಿಸಿಬಿಡುತ್ತಾರೆ ಎಂದು
ಅವರು ಹೆದರುತ್ತಾರೆ.
ಈ ಮಾತು ಅಕ್ಷರಶಃ ನಿಜವೆಂದು ಸಿದ್ಧಮಾಡಿ ತೋರಿಸಿದೆ ಪ್ರಭುತ್ವ.
ಇತಿಹಾಸವು ಕೆಲವೊಮ್ಮೆ ತಟಸ್ಥತೆಯನ್ನು ಒಪ್ಪುವುದಿಲ್ಲ. ಮಾನವೀಯ ಮೌಲ್ಯಗಳೇ ದಾಳಿಗೆ ಒಳಗಾಗಿರುವಾಗ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯವನ್ನು ಫ್ಯಾಸಿಸ್ಟ್ ಶಕ್ತಿಗಳು ತುಳಿಯುತ್ತಿರುವಾಗ, ಮೌನ ಅಥವಾ ಮಧ್ಯಮಾರ್ಗವು ಕೂಡ ಒಂದು ರಾಜಕೀಯ ಆಯ್ಕೆಯಾಗುತ್ತದೆ. ಇಂತಹ ನಿರ್ಣಾಯಕ ಕ್ಷಣಗಳಲ್ಲಿ ಕವಿ, ಲೇಖಕ, ಕಲಾವಿದ ಮತ್ತು ಬುದ್ಧಿಜೀವಿಗಳ ಹೊಣೆಗಾರಿಕೆ ಕೇವಲ ಸೌಂದರ್ಯದ ಹಾಡುಗಳನ್ನು ಹಾಡುವುದಲ್ಲ; ಸತ್ಯದ ಪರವಾಗಿ ನಿಲ್ಲುವುದಾಗಿದೆ.
ಇತಿಹಾಸವು ಮಾನವದ್ರೋಹಿ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಸ್ಪಷ್ಟ ಹೋರಾಟವನ್ನು ಬೇಡಿಕೊಳ್ಳುತ್ತಿರುವಾಗ, “ನಾನು ಯಾರ ಪರವೂ ಇಲ್ಲ”, “ಎರಡೂ ಕಡೆ ತಪ್ಪಿದೆ” ಅಥವಾ “ಮಧ್ಯದ ದಾರಿಯೇ ಉತ್ತಮ” ಎನ್ನುವ ನಿಲುವು ವಾಸ್ತವದಲ್ಲಿ ದಮನಕಾರಿ ಶಕ್ತಿಗಳಿಗೆ ಅನುಕೂಲ ಮಾಡಿಕೊಡುವ ಅಪಾಯವನ್ನು ಹೊಂದಿರುತ್ತದೆ. ಏಕೆಂದರೆ ದಮನ ಮತ್ತು ಪ್ರತಿರೋಧದ ನಡುವೆ ತಟಸ್ಥವಾಗಿ ನಿಲ್ಲುವುದು ಅನೇಕ ಬಾರಿ ದಮನದ ಪರವಾಗಿಯೇ ಕೆಲಸ ಮಾಡುತ್ತದೆ. ಕಾವ್ಯವು ಕೇವಲ ಭಾವನೆಗಳ ಅಭಿವ್ಯಕ್ತಿಯಲ್ಲ, ಅದು ತನ್ನ ಕಾಲದ ನೈತಿಕ ಸಾಕ್ಷಿಯೂ ಹೌದು. ಇತಿಹಾಸದ ನಿರ್ಣಾಯಕ ಘಟ್ಟಗಳಲ್ಲಿ ಜನರ ನೋವು, ಹಿಂಸೆ ಮತ್ತು ಅನ್ಯಾಯದ ಎದುರು ಕವಿಯ ಧ್ವನಿ ಸ್ಪಷ್ಟವಾಗಿರಬೇಕು. ಇಲ್ಲವಾದರೆ, ಭವಿಷ್ಯವು ಕವಿತೆಗಿಂತಲೂ ಕವಿಯ ಮೌನವನ್ನು ಹೆಚ್ಚು ಕಠಿಣವಾಗಿ ಪ್ರಶ್ನಿಸುತ್ತದೆ.
ಅದಕ್ಕೇ ಏನೋ ಪಾಶ್ ಕವಿ ಚುಚ್ಚಿ ಹೇಳುತ್ತಾನೆ..
ಅತಿ ಅಪಾಯಕಾರಿಯಾದುದೆಂದರೆ ಸತ್ತಂತಿರುವುದು,
ಯಾವ ತುಡಿತವಿಲ್ಲದೇ
ಎಲ್ಲವನ್ನೂ ಸಹಿಸಿಕೊಂಡಿರುವುದು,
ಮನೆಯಿಂದ ಕೆಲಸಕ್ಕೆ ಹೊರಡುವುದು
ಮತ್ತು ಕೆಲಸದಿಂದ ಮನೆಗೆ ಮರಳುವುದು.
ಅತಿ ಅಪಾಯಕಾರಿಯಾದುದೆಂದರೆ
ನಮ್ಮ ಕನಸುಗಳು ಸತ್ತುಹೋಗುವುದು.
ಅತಿ ಅಪಾಯಕಾರಿ ಆ ಗಡಿಯಾರ,
ನಿಮ್ಮ ಮಣಿಕಟ್ಟಿನಲ್ಲಿ ಚಲಿಸುತ್ತಿದ್ದರೂ
ನಿಮ್ಮ ಮಟ್ಟಿಗೆ ನಿಂತೇ ಬಿಟ್ಟಿರುವುದು.
ಎಷ್ಟು ಸತ್ಯವಾದ ಮಾತು ! ಸಮಾಜ ಮತ್ತು ರಾಜಕೀಯದ ನಡುವಿನ ಸಂಬಂಧವನ್ನು ಒತ್ತಿ ಹೇಳುತ್ತಾ, ಸಂಕಷ್ಟದ ಕಾಲದಲ್ಲಿ ಸೃಜನಶೀಲರ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತದೆ. .
ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಜನರ ಧ್ವನಿಗೆ ಕಿವಿಗೊಟ್ಟು, ಅಗತ್ಯವಿದ್ದಾಗ ತಲೆಬಾಗುವುದು ದೌರ್ಬಲ್ಯವಲ್ಲ; ಅದು ಹೊಣೆಗಾರಿಕೆಯ ಲಕ್ಷಣ. ವಿಶೇಷವಾಗಿ ಹೊಸ ತಲೆಮಾರಿನ ನ್ಯಾಯಯುತ ಪ್ರಶ್ನೆಗಳ ಎದುರು ಸಂವಾದದ ದಾರಿ ಹಿಡಿಯುವುದರಲ್ಲಿ ಅವಮಾನವೇನಿದೆ? ಹಠದಿಂದ ಕೊನೆಗೆ ಏನು ಸಾಧಿಸಲಾಗುತ್ತದೆ? ಆದರೆ ಮೋದಿ ತಮ್ಮ ಆಡಳಿತದ 12 ವರ್ಷಗಳಲ್ಲಿ ತಲೆಬಾಗುವ ವಿನಯವನ್ನು ಒಮ್ಮೆಯೂ ತೋರಿಸಿಲ್ಲ. ನೇರವಾಗಿ ಜನರೊಂದಿಗೆ ಸಂವಾದಿಸಿಲ್ಲ. ಪತ್ರಿಕಾಗೋಷ್ಠಿ ಬಿಡಿ, ಅವರು ತಮ್ಮ ಸುತ್ತಲೂ ಕೋಟೆ ಕಟ್ಟಿಕೊಂಡು “ಮನ್ ಕಿ ಬಾತ್” ಎಂಬ ಗಾಳಿಮಾತುಗಳನ್ನಾಡಬಲ್ಲರು, ಅಷ್ಟೇ ಅವರ ಶೌರ್ಯ.
ಇತಿಹಾಸವು ಅನೇಕ ಬಾರಿ ತೋರಿಸಿರುವ ಸತ್ಯ ಒಂದೇ, ಅಧಿಕಾರ ಎಷ್ಟೇ ಬಲಿಷ್ಠವಾಗಿದ್ದರೂ, ಅಂತಿಮವಾಗಿ ಜನತೆಯೇ ಅದರ ನಿಜವಾದ ನ್ಯಾಯಾಧೀಶರು. ಜನರ ಧ್ವನಿಯನ್ನು ನಿರಂತರವಾಗಿ ಕಡೆಗಣಿಸುವ ಯಾವುದೇ ವ್ಯವಸ್ಥೆ, ಒಂದು ದಿನ ಅದೇ ಜನರ ಮುಂದೆ ತಲೆಬಾಗಲೇಬೇಕಾಗುತ್ತದೆ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ




