ಬೇಟಿ ಪಢಾವೋ, ಬೇಟಿ ಬಚಾವೋ’ ಕೇವಲ ಕಾಗದದ ಮೇಲಿನ ಘೋಷಣೆಯಾಗಿಯೇ ಉಳಿದಿರುವ ಹೊತ್ತಿನಲ್ಲಿ ದೈನಿಕ ಭಾಸ್ಕರ್ನಂತಹ ಮಾಧ್ಯಮಗಳ ತನಿಖಾ ವರದಿಗಳು ನಮ್ಮ ವ್ಯವಸ್ಥೆಯ ಕಣ್ಣು ತೆರೆಸಬೇಕಿದೆ. ಹಳ್ಳಿಗಾಡು, ಆದಿವಾಸಿ ಬುಡಕಟ್ಟು ಜನಾಂಗಗಳು ಮೌಢ್ಯದ ಕತ್ತಲಲ್ಲಿಯೇ ಮುಳುಗಿ ಕಡುಬಡತನದಲ್ಲಿ ಬದುಕುತ್ತಿವೆ. ಭಾರತದಲ್ಲಿ ‘ಅನೈತಿಕ ಸಾಗಾಣಿಕೆ ತಡೆ ಕಾಯ್ದೆ’ (ITPA) ಮತ್ತು ಪೋಕ್ಸೋ ಕಾಯ್ದೆಗಳು ಕೇವಲ ಪುಸ್ತಕದ ಹಾಳೆಗಳಲ್ಲಿ ಉಳಿಯದೆ, ಗಡಿ ದಾಟಿ ನಡೆಯುವ ಈ ಮಾನವ ಸಾಗಾಣಿಕೆ ಜಾಲದ ಮೂಲ ಬೇರುಗಳನ್ನು ಕತ್ತರಿಸಬೇಕಿದೆ.
ಈ ದೇಶದಲ್ಲಿ ಇಂದಿಗೂ ಕಡು ಬಡತನ, ಪರಂಪರೆ, ಗೊಡ್ಡು ರೀತಿ ರಿವಾಜುಗಳ ಭಾರದಲ್ಲಿ ಉಸಿರುಕಟ್ಟಿ ನರಳುತ್ತಿರುವ ಲೋಕವೊಂದಿದೆ. ಗಾಯಗೊಂಡ ಹೆಣ್ಣಿನ ಅಸ್ಮಿತೆ ರೆಕ್ಕೆ ಬೀಸಿ ಹಾರಲಾರದೇ ವಿಲಗುಡುತ್ತಿದೆ. ಸಮೃದ್ಧ ಕಲೆ, ಸಾಹಿತ್ಯ-ಸಂಸ್ಕೃತಿಯ ನೆಲೆವೀಡಾದ ಮಧ್ಯಪ್ರದೇಶದ ನೀಮುಚ್ ಮಂದಸೌರಿನ ಹೈವೇಯಲ್ಲಿ ಹಾದುಹೋದರೆ ಖುಲ್ಲಂಖುಲ್ಲಾ ದೇಹವ್ಯಾಪಾರದಲ್ಲಿ ನಿರತರಾಗಿರುವ ಯುವತಿಯರು, ಮದುವೆಯ ಹೆಸರಿನಲ್ಲಿ ಮಾರಲ್ಪಡುತ್ತಿರುವ ಹೆಣ್ಣುಮಕ್ಕಳ ಕಣ್ಣೀರ ಕತೆ ಸುಶಿಕ್ಷಿತ ಸಮಾಜದ ಎದೆ ನಡುಗಿಸಬಲ್ಲದು. ಮಾನವೀಯತೆಯೇ ತಲೆತಗ್ಗಿಸುವಂತೆ ವೇಶ್ಯಾವೃತ್ತಿಯನ್ನೆ ತುತ್ತಿನ ಚೀಲವಾಗಿಸಿಕೊಂಡಿರುವ ಬೇಡಿಯಾ ಮತ್ತು ಬಂಚಡಾ ಜನಾಂಗದ ಹೆಣ್ಣುಮಕ್ಕಳ ಕಣ್ಣಿರಿನ ಕಥೆ ಪಥರಿಯಾ, ರಾಜಗಢ, ಗುನಾ, ಸಾಗರ್, ಶಿವಪುರ ಮುರೈನಾ ಮತ್ತು ವಿದಿಶಾದ ಒಡಲಲ್ಲಿ ಹೂತುಹೋಗಿದೆ.
ಡಿಜಿಟಲೀಕರಣಗೊಂಡ ಜಗತ್ತು, ವಿಶ್ವಗುರುವಾಗುತ್ತಿರುವ ಜಗತ್ತು ಪ್ರಗತಿಯತ್ತ ಧಾಪುಗಾಲು ಹಾಕಿ ಓಡುತ್ತಿರುವಾಗ ಈ ಬುಡಕಟ್ಟು ಜನಾಂಗದ ಸ್ತ್ರೀಯರು ಇನ್ನೂ ಕಗ್ಗತ್ತಲಲ್ಲಿಯೇ ಇದ್ದಾರೆ. ಕುಟುಂಬದ ಪಾಲನೆ ಪೋಷಣೆಗಾಗಿ ತಮ್ಮ ಘನತೆ ಗೌರವಗಳನ್ನು ಅಡವಿಟ್ಟು ದೇಹ ವ್ಯಾಪಾರದಲ್ಲಿ ತೊಡಗಿದ್ದಾರೆ. ಹೆದ್ದಾರಿಯ ಟ್ರಕ್ ಡ್ರೈವರುಗಳು, ದಾರಿಹೋಕರು, ಪಡ್ಡೆಗಳೇ ಈ ಬಡಪಾಯಿಗಳ ಗ್ರಾಹಕರು. ಗಿರಾಕಿ ಸಿಕ್ಕಾಗ ಹೊಟ್ಟೆತುಂಬ ಊಟ, ಇಲ್ಲದಿದ್ದಾಗ ಅರೆಹೊಟ್ಟೆ ಉಪವಾಸ. ಈ ಜನಾಂಗದ ಹೆಣ್ಣುಮಕ್ಕಳ ಪಾಡು.!
ಮಧ್ಯ ಭಾರತದ ಕತ್ತಲೆಯ ಅಡವಿಗಳಲ್ಲಿ ಮತ್ತು ನದಿ ದಂಡೆಯ ಅಂಚಿನ ಗ್ರಾಮಗಳಲ್ಲಿ ನಿಶ್ಯಬ್ದವಾಗಿ ಹರಿಯುತ್ತಿರುವ ಕಣ್ಣೀರಿಗೆ ಇನ್ನೂ ವಿಮೋಚನೆ ಸಿಕ್ಕಿಲ್ಲ. ‘ಮದುವೆ’ ಎಂಬ ಪವಿತ್ರ ಸಾಮಾಜಿಕ ಚೌಕಟ್ಟು, ‘ಸಂಪ್ರದಾಯ’ ಎಂಬ ಸಂಕೋಲೆ ಮತ್ತು ‘ಬಡತನ’ ಎಂಬ ನಿರಂತರ ಶಾಪ — ಈ ಮೂರರ ಸಂಗಮದಲ್ಲಿ ಸಾವಿರಾರು ಹೆಣ್ಣುಮಕ್ಕಳು ಆಧುನಿಕ ಜೀತದಾಳುಗಳಾಗಿ ಮಾರ್ಪಡುತ್ತಿದ್ದಾರೆ. ಛತ್ತೀಸ್ಗಢದ ಮಾಂಝಿ ಸಮುದಾಯದಿಂದ ಹಿಡಿದು ಮಧ್ಯಪ್ರದೇಶದ ಬಾಂಛಡಾ, ಬೇಡಿಯಾ ಹಾಗೂ ನಟ ಸಮುದಾಯಗಳವರೆಗೆ ಹೆಣ್ಣುಮಕ್ಕಳ ಅಸ್ತಿತ್ವವು ಸಾಂಸ್ಕೃತಿಕ ಹಾಗೂ ಆರ್ಥಿಕ ದಾಸ್ಯದ ಕಹಿಸತ್ಯವನ್ನು ತೆರೆದಿಡುತ್ತದೆ.

‘ದೈನಿಕ ಭಾಸ್ಕರ್’ ಮಾಧ್ಯಮ ಸಮೂಹವು ಇತ್ತೀಚೆಗೆ ನಡೆಸಿದ ಸುದೀರ್ಘ ತನಿಖಾ ಸರಣಿ ‘ಬಂಧುವಾ ಬೇಟಿಯಾ’ (Bandhua Betiyan –bonded labours) — ಅರ್ಥಾತ್ ಹೆಣ್ಣುಮಕ್ಕಳನ್ನು ಜೀತದಾಳಾಗಿಸುವ ಈ ಸುಡು ವಾಸ್ತವವನ್ನು ಜಗತ್ತಿನ ಕಣ್ಣೆದುರು ತಂದಿರಿಸಿದೆ. ಮದುವೆಯ ಹೆಸರಿನಲ್ಲಿ ನಡೆಯುವ “ವಧು ಖರೀದಿ” (Bride Buying) ಹಾಗೂ ಅಂಚಿನ ಸಮುದಾಯಗಳ ಹೆಣ್ಣುಮಕ್ಕಳನ್ನು ಜೀತದಾಳುಗಳನ್ನಾಗಿ ಮಾಡುವ ಕ್ರೂರ ಜಾಲವನ್ನು ಬಯಲಿಗೆಳೆದು ಗ್ರೌಂಡ್ ರಿಪೋರ್ಟಿಂಗ್ ಮಾಡಿದೆ.
ವರದಿಯ ಪ್ರಕಾರ, 12 ರಿಂದ 16 ವರ್ಷದ ಹೆಣ್ಣುಮಕ್ಕಳನ್ನು ₹20,000 ದಿಂದ ₹1ಲಕ್ಷದವರೆಗೆ ಬೆಲೆ ಕಟ್ಟಿ ಮಾರಲಾಗುತ್ತದೆ. ತಾಯ್ನಾಡಿನಿಂದ ಸಾವಿರಾರು ಕಿಲೋಮೀಟರ್ ದೂರದ ಹೊಸ ವಾತಾವರಣಕ್ಕೆ ತಲುಪುವ ಈ ಹೆಣ್ಣುಮಕ್ಕಳು ಅಲ್ಲಿ ಗೃಹಿಣಿಯರಾಗುವುದಿಲ್ಲ; ಬದಲಿಗೆ ಮನೆಕೆಲಸದ ಜೀತದಾಳುಗಳಾಗಿ, ಕೃಷಿ ಕಾರ್ಮಿಕರಾಗಿ ಹಾಗೂ ನಿರಂತರ ದೈಹಿಕ ಶೋಷಣೆಗೆ ಒಳಗಾಗುತ್ತಾರೆ. ಒಂದೇ ಕುಟುಂಬದ ಹಲವು ಪುರುಷರಿಗೆ ಲೈಂಗಿಕವಾಗಿ ಹಂಚಲ್ಪಡುವ ಭೀಕರ ಕ್ರೌರ್ಯವೂ ಮದುವೆಯೆಂಬ ಮುಖವಾಡದಡಿಯಲ್ಲಿ ನಡೆಯುತ್ತದೆ.
ಒಂದು ಕಡೆ ಹೆಣ್ಣು ಸಂತತಿಯನ್ನು ಭ್ರೂಣವಾಗಿದ್ದಾಗಲೇ ಅಳಿಸಿ ಹಾಕುವ ಪುರುಷಾಹಂಕಾರಿ ಖಾಪ್ ಪಂಚಾಯಿತಿಗಳು ಇದ್ದ ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಸುದೀರ್ಘ ಕಾಲದಿಂದ ನಡೆದ ಹೆಣ್ಣು ಭ್ರೂಣ ಹತ್ಯೆಯ ದುಷ್ಪರಿಣಾಮವಾಗಿ ಲಿಂಗಾನುಪಾತ ತೀವ್ರವಾಗಿ ಕುಸಿದಿದೆ. ಯುವಕರಿಗೆ ಮದುವೆಯಾಗಲು ಸ್ಥಳೀಯವಾಗಿ ಹೆಣ್ಣುಮಕ್ಕಳು ಸಿಗದಿದ್ದಾಗ ಹುಟ್ಟಿಕೊಂಡಿದ್ದೇ ಈ ‘ವಧು ಮಾರುಕಟ್ಟೆ’.ʼವಧೂ ಖರೀದಿʼ. ಲಾಭಕೋರ ದಲ್ಲಾಳಿಗಳು ಮಾಂಝಿ ಸಮುದಾಯದ ಬಡ ತಂದೆ-ತಾಯಂದಿರಿಗೆ ಕೆಲವೇ ಸಾವಿರ ರೂಪಾಯಿಗಳ ಆಮಿಷ ಒಡ್ಡಿ, “ಉತ್ತಮ ಶ್ರೀಮಂತ ಮನೆಗೆ ಮಗಳನ್ನು ಕೊಡುತ್ತೇವೆ” ಎಂದು ನಂಬಿಸಿ ಅಪ್ರಾಪ್ತ ಬಾಲಕಿಯರನ್ನು ‘ಖರೀದಿಸಿ’ ಕರೆದೊಯ್ಯುತ್ತಾರೆ. ತಂದೆ ತಾಯಿಯರಿಗೆ ಮುಂದೆ ತಮ್ಮ ಮಕ್ಕಳು ಏನಾಗುತ್ತಾರೆ, ಎಲ್ಲಿ ಹೋದರು? ಒಂದೂ ಗೊತ್ತಾಗುವುದಿಲ್ಲ.
ಬಾಂಛಡಾ, ಬೇಡಿಯಾ ಡಿನೊಟಿಫೈಡ್ ಆದಿವಾಸಿ ಜನಾಂಗದಲ್ಲಿ ಹೆಣ್ಣುಹುಟ್ಟಿದರೆ ಹಬ್ಬ ಅವರಿಗೆಲ್ಲ. ಅಪಾಪ್ತ ಬಾಲಕಿ 12 -14 ವಯಸ್ಸಿಗೆ ಕಾಲಿಡುತ್ತಲೇ ಅವಳ ಪೋಷಕರೇ ದೇಹವ್ಯಾಪಾರದ ದಂಧೆಗೆ ತಳ್ಳುತ್ತಾರೆ. ಮೊದಲ ಗ್ರಾಹಕ ಮೀಸಲು ಮುರಿದಾಗಲೂ ಅವರಿಗೆ ಹಬ್ಬವೇ. ಎಳೆಯ ಹೆಗಲಿಗೆ ದಂಧೆಯ ಶಿಲುಬೆಯನ್ನು ಹೊರಿಸುತ್ತಾರೆ. ಕುಟುಂಬವನ್ನು ಸಾಕುವ ಹೊಣೆ ಅವಳದೇ. ಮಂದಸೋರದಲ್ಲಿಯೇ ಸುಮಾರು 23000 ಜನವಸತಿಯಿರುವ ಅರವತ್ತೈದು ಹಳ್ಳಿಗಳಲ್ಲಿ ಈ ಅನಿಷ್ಟ ಪರಂಪರೆಯಿದೆ. ಮೌರ್ಯರು, ಮಾಳವರು, ಗುಪ್ತರು, ಮೊಗಲರಾಳಿದ ಈ ಸೆರಗು ಹೆಣ್ಣುಮಕ್ಕಳ ಘೋರ ದುರಂತದ ಕಥೆ ಹೇಳುತ್ತದೆ. ಸುಮಾರು ಐದುನೂರು ವರ್ಷಗಳ ಪುರಾತನ ಇತಿಹಾಸವಿರುವ ಈ ಜನಾಂಗದ ಹೊಟ್ಟೆಯೊಳಗೆ ಬೆಚ್ಚಿಬೀಳುವ ನೋವಿನ ಕಥೆಗಳಿವೆ.
ಪ್ರಚಲಿತ ಕತೆಯೊಂದರ ಪ್ರಕಾರ ಮೇವಾಡದ ರಾಜರುಗಳು ಮೊಗಲರಿಂದ ಸೋತು ತಮ್ಮ ರಾಜ್ಯವನ್ನು ಮರಳಿ ಪಡೆಯಲಾಗದೇ ಸೋತುಹೋದ ಸಿಪಾಹಿಗಳೆಲ್ಲ ನರಸಿಂಹಗಡದಲ್ಲಿ ಅವಿತುಕೊಂಡರಂತೆ. ಅಲ್ಲಿಂದ ತಲೆಮರೆಸಿಕೊಂಡು ಮೆಲ್ಲಗೆ ಮಧ್ಯಪ್ರದೇಶಕ್ಕೆ ವಲಸೆಹೋದರಂತೆ. ಉದ್ಯೋಗವಿರದೇ ಹೊಟ್ಟೆಗಿರದೇ ಅವರ ಹೆಂಗಸರು ದೇಹಮಾರಿಕೊಳ್ಳುವ ಸಂಕಟಕ್ಕೆ ಬಲಿಯಾಗಬೇಕಾಯ್ತು. ಇನ್ನೊಂದು ಕತೆ – ನೂರೈವತ್ತು ವರುಷಗಳ ಹಿಂದೆ ಬ್ರಿಟಿಷರು ನೀಮೂಚ್ನಲ್ಲಿ ತಂಗಿದ್ದ ತಮ್ಮ ಸಿಪಾಯಿಗಳ ಮನರಂಜನೆಗಾಗಿ ರಾಜಸ್ಥಾನದ ಅಲೆಮಾರಿ ಹೆಂಗಸರನ್ನು ಕರೆತರುತ್ತಿದ್ದರಂತೆ. ಹೀಗೆ ಬಂಛಡಾ ಮತ್ತು ಬೇಡಿಯಾ ಜನಾಂಗ ರತಲಾಮ್, ಮಂದಸೋರಿನವರೆಗೂ ಹಬ್ಬಿತಂತೆ.
ಮತ್ತೊಂದು ಕತೆ- 1631 ರಲ್ಲಿ ಮುಮ್ತಾಜ್ ಮಹಲಳ ಸಾವಿನ ಮರುವರ್ಷ ತಾಜಮಹಲ್ ನಿರ್ಮಾಣಕಾರ್ಯ ಆರಂಭವಾಯ್ತು. ಮುಖ್ಯ ಶಿಲ್ಪಿ ಉಸ್ತಾದ್ ಅಹಮದ್ ಲಾಹೋರಿ ಸಹಿತ ಸಾವಿರಾರು ಕುಶಲಕರ್ಮಿಗಳನ್ನು ದೂರದೂರದಿಂದ ಕರೆಸಲಾಯ್ತು. ಕೆಲಸಗಾರರ ಮನರಂಜನೆಗಾಗಿ ಬಾದಶಹಾ ಬೇಡಿಯಾ ಜಾತಿಯ ವೇಶ್ಯೆಯರನ್ನು ಆರು ಗ್ರಾಮಗಳಲ್ಲಿ ಇರಿಸಿದ್ದನಂತೆ. ತಾಜ್ಮಹಲ್ ನಿರ್ಮಾಣ ಕಾರ್ಯದ 21 ವರ್ಷಗಳಲ್ಲಿ ಬೇಡಿಯಾ ಜನಾಂಗದಲ್ಲಿ ವೇಶ್ಯಾವೃತ್ತಿಯೇ ಆಳವಾಗಿ ಬೇರುಬಿಟ್ಟಿತು.
ದೇವದಾಸಿ ಪದ್ಧತಿಯ ಮೌಢ್ಯಕ್ಕೆ ’ದೈವ’ ಶಾಪವಾದರೆ ಈ ಹೆಂಗಸರಿಗೆ ಹುಟ್ಟೇ ಶಾಪ. ಇವರ ಪರಂಪರೆಯೇ ಈ ಅಮಾಯಕರನ್ನು ದುರ್ಗತಿಗೆ ತಳ್ಳಿದೆ. ಹಾಡು, ಕುಣಿತ, ಮಾಟ ಮಂತ್ರಗಳ ಕೌಶಲ್ಯವಿರುವ ಬೇಡಿಯಾ ಜನರ ’ರಾಯಿ ಕುಣಿತ’ ಬುಂದೇಲಖಂಡದ ಪ್ರಸಿದ್ಧ ಜನಪದ ಕಲೆ. ವೇಗವಾಗಿ ತಿರುಗುತ್ತ ಕುಣಿಯುವ ಈ ಮೋಹಕ ನೃತ್ಯವನ್ನು (ದೀವಟಿಗೆ) ಮಶಾಲಿನ ಬೆಳಕಿನಲ್ಲಿ ಮಾಡುತ್ತಾರೆ. ಸಹನರ್ತಕ ಮಶಾಲು ಆರದಂತೆ (ರಾಯಿ)ಸಾಸಿವೆಯನ್ನು ಹಾಕುತ್ತಿರುತ್ತಾನೆ. ಹೀಗೆ ಇದು “ರಾಯಿ ನೃತ್ಯ”ವೆಂದು ಹೆಸರಾಯಿತು. ಒಂದು ಕಾಲಕ್ಕೆ ರಾಜರುಗಳು, ಠಾಕೂರರ ಮಂಗಳಕಾರ್ಯಗಳಿಗೆ ಬೇಡಿಯಾ ಬುಡಕಟ್ಟು ಹೆಣ್ಣುಮಕ್ಕಳು ಬಂದು ನೃತ್ಯಮಾಡಿ ಹರಸಿದರೆ ಒಳ್ಳೆದಾಗುವುದೆಂಬ ನಂಬಿಕೆಯಿತ್ತು. ಮದುವೆಯೇ ವರ್ಜ್ಯವಾಗಿರುವ ಈ ಜನಾಂಗದ ಹೆಣ್ಣುಮಕ್ಕಳು ’ರಾಯ್ ನೃತ್ಯದಲ್ಲಿ’ ಸಂಗಾತಿಯನ್ನು ಅರಸುತ್ತಾರೆ. ಆ ಊರಿನ ಠಾಕೂರ್ ಕುಣಿತದವರಲ್ಲಿ ಒಬ್ಬಳನ್ನು ಆರಿಸಿಕೊಳ್ಳುತ್ತಾನೆ. ಸಂಪ್ರದಾಯದ ಪ್ರಕಾರ ಆಕೆ ವಿವಾಹವಾಗುವಂತಿಲ್ಲ. ಆದರೆ ಅವನಿಂದ ಮಕ್ಕಳನ್ನು ಪಡೆಯಬಹುದು. ಬೇರಾವ ಆಯ್ಕೆ, ಹಕ್ಕು ಇಲ್ಲದ ಆಕೆ ಠಾಕೂರನ ಇಟ್ಟುಕೊಂಡವಳಾಗಿರುತ್ತಿದ್ದಳು. ತಳವರ್ಗದ ಮಹಿಳೆ ಮೇಲ್ವರ್ಗದವರ ಭೋಗದ ವಸ್ತು. ಪಿತೃಸತ್ತೆಯ ಸಾಮಾಜಿಕ ಮೇಲು ಕೀಳಿನ ಈ ಕ್ರೌರ್ಯಕ್ಕೆ ಎಲ್ಲೆಲ್ಲಿಯೂ ಹೆಣ್ಣೇ ಮೊದಲ ಬಲಿಪಶು !
“ಹನಿವ ಕಂಗಳ ನೋಟ ಮತ್ತೆಲ್ಲೂ ಸಿಗದು, ಈ ಹಳ್ಳಿಯಂಥ ಹಳ್ಳಿ ಬೇರೆಲ್ಲೂ ಸಿಗದು, ನಮ್ಮ ಕತೆಯನ್ನು ರಚಿಸಬೇಡಿರಿ ಎಲ್ಲೂ, ಶೋಷಣೆಯ ಹೊರತು ಬೇರಾವ ಕತೆಯೂ ಇಲ್ಲವಿಲ್ಲಿ !“ ಇಂದು ಮಧ್ಯಪ್ರದೇಶದ ಬುಂದೇಲಖಂಡದ ಮೋಹಕ ಜನಪದ ರಾಯಿ ನೃತ್ಯದ ಕೌಶಲ್ಯ ಹಿಂದೆ ಸರಿದು ಒಂದು ಹೊತ್ತಿನ ಕೂಳಿಗಾಗಿ ದೇಹವನ್ನೇ ಮಾರಿಕೊಳ್ಳುವ ಕ್ರೌರ್ಯ ಎದೆನಡುಗಿಸುತ್ತದೆ. ಸಹಸ್ರಮಾನಗಳಿಂದ ಅತ್ಯಂತ ಹೀನಾಯವಾಗಿ ಬದುಕುತ್ತಿರುವ ಈ ಜನಾಂಗಕ್ಕೆ ಸರಕಾರದ ಯಾವ ಯೋಜನೆಗಳೂ ತಲುಪಿಲ್ಲ. ವಿಕಾಸದ ಕೊನೆಯ ಮೆಟ್ಟಿಲ ಮೇಲಿನ ಧೂಳೂ ಈ ಪ್ರದೇಶಗಳನ್ನು ಸೋಕಿಲ್ಲ. ತಳವರ್ಗಗಳ ಉನ್ನತಿಯ ಮಾತುಗಳನ್ನಾಡುತ್ತೇವೆ, ಯಾವ ಉನ್ನತಿಯೂ ಇತ್ತ ನಡೆದುಬಂದಿಲ್ಲ. ಕರೆದು ಕೆಲಸ ಕೊಡುವವರಿಲ್ಲ. ಬ್ಯಾಂಕುಗಳಿವೆ ಸಾಲ ಕೊಡಲು ಆದರೆ ಸೌಲಭ್ಯಗಳ ಪ್ರಯೋಜನ ಪಡೆವ ದುಡಿಮೆಯ ಮಾರ್ಗಗಳಿಲ್ಲ, ತಮ್ಮದೆನ್ನುವ ತುಂಡು ಜಮೀನಿಲ್ಲ. ವಿದ್ಯುತ್ ಇಲ್ಲ, ಕುಡಿಯುವ ನೀರಿಲ್ಲ, ಶೌಚಾಲಯಗಳಿಲ್ಲ, ಆರೋಗ್ಯಕೇಂದ್ರಗಳಿಲ್ಲ, ಶಾಲೆಗಳಿಲ್ಲ. ಎಲ್ಲ ಉಳ್ಳವರೇ “ಬಿಪಿಎಲ್’ ಕಾರ್ಡ ಪಡೆದು ದಕ್ಕಬೇಕಾದವರ ಸೌಲಭ್ಯವನ್ನೂ ದಕ್ಕದಂತೆ ದೋಚುತ್ತಿದ್ದಾರೆ. ದೇಶದ ಕಾನೂನಾಂಗ, ಶಾಸಕಾಂಗಗಳೂ ನಿದ್ದೆಹೋಗಿವೆ. ಸಂವೇದನಶೀಲವಾಗಿ ಸ್ಪಂದಿಸಬೇಕಾಗಿದ್ದ ಸಮಾಜವೂ ಈ ಜನಾಂಗದವರನ್ನು ವಿಚಿತ್ರವಾಗಿ ನೋಡುತ್ತದೆ.
“ಹೆಣ್ಣಿನಾ ಬಾಳು ಸುಣ್ಣಾಗಿ ಕುದಿಯಾಲಿ, ಎಲೆ ಜೀವ” `ಹೆಣ್ಣೆಂಬ ಜನುಮ ಹೊರಬ್ಯಾಡ’ ಎಂದು ನಮ್ಮ ಜನಪದರು ಹೆಣ್ಣಿನ ಕಷ್ಟಗಳನ್ನು ಬಣ್ಣಿಸಿದ್ದಾರೆ. ಇಲ್ಲಿ ಈ ಹೆಣ್ಣುಮಕ್ಕಳು ವೇಶ್ಯಾವತ್ತಿಯ ಕತ್ತಲಕೂಪದಿಂದ ಹೊರಬರಲು ತಯಾರಿಲ್ಲ. ತಮ್ಮ ಅಸ್ಮಿತೆ, ತಮ್ಮ ಹಕ್ಕುಗಳ ಬಗ್ಗೆ ಅರಿವಿರದ ಜನರಲ್ಲಿ ಶಿಕ್ಷಣದ ದೀಪವಿನ್ನೂ ಬೆಳಗಿಲ್ಲ. ಕಟುವಾಸ್ತವವೆಂದರೆ ಕತ್ತಲಿನಿಂದ ಬೆಳಕಿನಡೆಗೆ ಬರಲು ಕೆಲವರಿಗೆ ಆತ್ಮಬಲವಿಲ್ಲ. ಸುರಕ್ಷಿತ ಬದುಕನ್ನು ಕೊಡಲಾರದ ತಮ್ಮ ಪುರುಷರ ಮೇಲೆ ಇವರಿಗೆ ನಂಬಿಕೆಯಿಲ್ಲ.
ಈ ಜನಾಂಗದ ಮೈಗಳ್ಳ ಪುರುಷರೇ ತಮ್ಮವೇ ಕರುಳಬಳ್ಳಿಗಳಿಗೆ, ಸಹಧರ್ಮಿಣಿಯರಿಗೆ, ವಿಟಪುರುಷರನ್ನು ಒದಗಿಸುವ ದಲ್ಲಾಳಿಗಳಾಗಿರುವುದು ಈ ಪಿತೃಪ್ರಭುತ್ವ ವ್ಯವಸ್ಥೆಯ ಕರಾಳರೂಪ. ಇನ್ನು ಕೆಲವು ಆದಿವಾಸಿ ಗಂಡಸರ ಕಸುಬು ಕಳ್ಳತನ. ಕ್ರಿಮಿಗಳಂತೆ ಬಾಳುತ್ತಿರುವ ’ವಿಮುಕ್ತ ಜಾತಿ’ – (ಡಿನೋಟಿಫೈಡ್ ಜನಾಂಗ) ಎಂದು ಹಣೆಪಟ್ಟಿ ಧರಿಸಿರುವ ಈ ವಂಚಿತ ಸಮುದಾಯಗಳನ್ನು ಇತರ ಹಿಂದುಳಿದ ವರ್ಗಕ್ಕೆ ಸೇರಿಸಲು ‘ಆದಿವಾಸಿಗಳ ಅಮ್ಮ’ ಮಹಾಶ್ವೇತಾ ದೇವಿ ಬಿಡುವಿಲ್ಲದೆ ದುಡಿದಿದ್ದರು.
ಬೇಡಿಯಾ ಬುಡಕಟ್ಟು ಜನಾಂಗ ಹೆಣ್ಣುಕೂಸುಗಳ, ಬಾಲೆಯರ ಅಕ್ರಮ ಸಾಗಾಣಿಕೆಯಲ್ಲಿ ಕುಖ್ಯಾತಿ ಪಡೆದಿದೆ. ಎಳೆಯ ಬಾಲೆಯರನ್ನು, ಹದಿಹರೆಯದ ಯುವತಿಯರನ್ನು ಅಪಹರಿಸಿ ಈ ದಂಧೆಯಲ್ಲಿ ನೂಕುವ ದೇಹವ್ಯಾಪಾರದ ಜಾಲ ಬೃಹತ್ತಾಗಿ ಬೆಳೆದಿದೆ. ಇಂದು ಕಾನೂನು, ಪೋಲಿಸ್, ಆರೋಗ್ಯ, ರಕ್ಷಣೆ ನೀಡಬೇಕಾದ, ಹೆಣ್ಣಿನ ಹಕ್ಕನ್ನು ಗೌರವಿಸಬೇಕಾದ ಎಲ್ಲ ವ್ಯವಸ್ಥೆಗಳೂ ಅವಳ ಉದ್ಧಾರಕ್ಕಾಗಿಯೇ ಶ್ರಮಿಸುತ್ತ, ನಾನಾ ಯೋಜನೆಗಳನ್ನು ರೂಪಿಸುತ್ತ, ಕೋಟಿಗಟ್ಟಲೇ ಹಣವನ್ನು ಬಜೆಟ್ಟಿನಲ್ಲಿ ಘೋಷಿಸುತ್ತ ಯಥಾಸ್ಥಿತಿಯಲ್ಲಿ ಯಾವ ವ್ಯತ್ಯಾಸವೂ ಆಗದಂತೆ ನಾಜೂಕಾಗಿ ದೌರ್ಜನ್ಯವನ್ನು ಪೋಷಿಸುತ್ತಲೇ ಇವೆ.
ಹಲವಾರು ಎನ್.ಜಿ.ಓಗಳು, ಮಧ್ಯಪ್ರದೇಶ ಸರಕಾರ ವೇಶ್ಯಾವೃತ್ತಿ ನಿರ್ಮೂಲನೆಗಾಗಿ ಶ್ರಮಿಸುತ್ತಿವೆ. ವೇಶ್ಯಾವೃತ್ತಿ ನಿರ್ಮೂಲನೆಗೆಂದೆ “ಜಾಬಾಲಿ ಯೋಜನೆ” ಜಾರಿಯಲ್ಲಿದೆ. ’ಸತ್ಯಕಾಮ ಜಾಬಾಲಿ ಋಶಿಯ ಕತೆ ನೆನಪಾಗುತ್ತದೆ. ತಂದೆ ಯಾರೆಂದು ಅರಿಯದ ಮಗು ತಾಯಿಯನ್ನೇ ಕೇಳುತ್ತಾನ. ಆಕೆ ಪ್ರಾಮಾಣಿಕವಾಗಿ ತಾರುಣ್ಯದಲ್ಲಿ ತನಗೆ ತುಂಬಾ ಜನರೊಂದಿಗೆ ಸಂಪರ್ಕವಿದ್ದು ` ನಿನ್ನ ತಂದೆ ಯಾರೆಂದು ನಾನರಿಯೆ. ನೀನು ಜಾಬಾಲಾಳ ಮಗ ಅಷ್ಟೆ’ ಎಂದಿರುತ್ತಾಳೆ. ಇಲ್ಲಿ ಈ ಜಾಬಾಲಿಯರಿಗಾಗಿ ಹೆಣ್ಣುಮಕ್ಕಳು ಅಕ್ಷರಸ್ಥರಾಗಲೆಂದು ಸರಕಾರಿ ದಾಖಲೆಯಲ್ಲಿ ’ಜಾಬಾಲಿ ಶಾಲೆಗಳೂ’ ಇವೆ. ಅವು ಬರೀ ಹೆಸರಿಗಷ್ಟೇ ! ಶಾಲೆಗಳ ಸುಳಿವು ಕೂಡ ಸಿಗದಂತೆ ಈಗವು ಸಮುದಾಯ ಕೇಂದ್ರಗಳಾಗಿ ಊರವರು ಕಲ್ಯಾಣಮಂಟಪಗಳನ್ನಾಗಿಸಿದ್ದಾರೆ. ಜಾಬಾಲಿ ಯೋಜನೆಯಡಿ ಪ್ರತಿ ಜಿಲ್ಲೆಗೂ ಹತ್ತು ಕೋಟಿ ರೂಪಾಯಿಗಳನ್ನು ಮೀಸಲಿಟ್ಟರೂ ಈ ಹೆಣ್ಣುಮಕ್ಕಳ ಬದುಕು ಯಾವ ಸುಧಾರಣೆಯನ್ನು ಕಂಡಿಲ್ಲ. ಈ ಅಮಾಯಕರು ಹಿಂದುಳಿದ ಮತ್ತು ಪರಿಶಿಷ್ಟ ಜಾತಿಯವರಿಗೆ ಸಿಗುವ ಮೂಲಭೂತ ಸೌಕರ್ಯಗಳಿಂದಲೂ ವಂಚಿತರು. ಸದಾ ಪೊಲೀಸರ ಕಾಟ, ಜೈಲಿನ ವಾಸ ಈ ಅಲೆಮಾರಿಗಳ ಬದುಕಿನ ಅವಿಭಾಜ್ಯ ಕರ್ಮ.

‘ಬೇಟಿ ಪಢಾವೋ, ಬೇಟಿ ಬಚಾವೋ’ ಕೇವಲ ಕಾಗದದ ಮೇಲಿನ ಘೋಷಣೆಯಾಗಿಯೇ ಉಳಿದಿರುವ ಹೊತ್ತಿನಲ್ಲಿ ದೈನಿಕ ಭಾಸ್ಕರ್ನಂತಹ ಮಾಧ್ಯಮಗಳ ತನಿಖಾ ವರದಿಗಳು ನಮ್ಮ ವ್ಯವಸ್ಥೆಯ ಕಣ್ಣು ತೆರೆಸಬೇಕಿದೆ. ಹಳ್ಳಿಗಾಡು, ಆದಿವಾಸಿ ಬುಡಕಟ್ಟು ಜನಾಂಗಗಳು ಮೌಡ್ಯದ ಕತ್ತಲಲ್ಲಿಯೇ ಮುಳುಗಿ ಕಡುಬಡತನದಲ್ಲಿ ಬದುಕುತ್ತಿವೆ. ಭಾರತದಲ್ಲಿ ‘ಅನೈತಿಕ ಸಾಗಾಣಿಕೆ ತಡೆ ಕಾಯ್ದೆ’ (ITPA) ಮತ್ತು ಪೋಕ್ಸೋ ಕಾಯ್ದೆಗಳು ಕೇವಲ ಪುಸ್ತಕದ ಹಾಳೆಗಳಲ್ಲಿ ಉಳಿಯದೆ, ಗಡಿ ದಾಟಿ ನಡೆಯುವ ಈ ಮಾನವ ಸಾಗಾಣಿಕೆ ಜಾಲದ ಮೂಲ ಬೇರುಗಳನ್ನು ಕತ್ತರಿಸಬೇಕಿದೆ. ಛತ್ತೀಸ್ಗಢ ಮತ್ತು ಮಧ್ಯಪ್ರದೇಶ ಸರ್ಕಾರಗಳು ಕೇವಲ ತಾತ್ಕಾಲಿಕ ಪುನರ್ವಸತಿ ಯೋಜನೆಗಳಿಗೆ ಸೀಮಿತವಾಗದೆ, ಅಂಚಿನ ಸಮುದಾಯಗಳಿಗೆ ಶೈಕ್ಷಣಿಕ ಮತ್ತು ಆರ್ಥಿಕ ಭದ್ರತೆ ಒದಗಿಸಬೇಕು. ರಾಜ್ಯಗಳ ಗಡಿಗಳನ್ನು ದಾಟಿ ನಡೆಯುತ್ತಿರುವ ಈ ಹೆಣ್ಣುಮಕ್ಕಳ ಮಾರಾಟ ತಡೆಯುವುದು ಕೇವಲ ಕಾನೂನು ಪಾಲನೆಯ ವಿಷಯವಲ್ಲ; ಅದು ಆಧುನಿಕ ಭಾರತ ತನ್ನ ಆತ್ಮಸಾಕ್ಷಿಯನ್ನು ಉಳಿಸಿಕೊಳ್ಳಲು ನಡೆಸಬೇಕಾದ ಹೋರಾಟ ನಿರಂತರವಾಗಿ ಸಾಗಬೇಕಾಗಿದೆ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ



