ದಿಲ್ಲಿ ಮಾತು | ಕಾಲಘಟ್ಟದ ದುರಂತ, ಸಮಾಜದ ನಿಶ್ಯಬ್ದ-ಆಜಂ ಖಾನ್

Date:

ಹನ್ನೊಂದು ತಿಂಗಳ ಜೈಲುವಾಸವನ್ನು ಮುಗಿಸಿ ಬಿಡುಗಡೆಗೊಂಡು ಮನೆಗೆ ತೆರಳುವ ದಿನ.  ಅದೆಷ್ಟು ನಿರೀಕ್ಷೆಗಳನ್ನು ಹೊತ್ತು ತಂದಿರಬೇಕು ಆ ದಿನದ ಬೆಳಗು. ಅದೆಷ್ಟು ಸಂತಸ ಮನಸ್ಸನ್ನು ತುಂಬಿರಬೇಕು! ಆದರೆ ಜೈಲಿನಿಂದ ಹೊರಬರುವ ಮುನ್ನವೇ ಅವರನ್ನು ಮತ್ತೆ ಬಂಧಿಸುವ ಸಕಲ ಸಿದ್ಧತೆಯೊಂದಿಗೆ (ED) ಈಡಿ ಕಾಯುತ್ತಿತ್ತು. ಆಜಂ ಖಾನ್ ಹೊರಬರುವುದೇ ತಡ ಪುನಃ ಬಂಧಿತರಾದರು. ಅನೇಕ ಮಾಧ್ಯಮಗಳ ಮೈಕುಗಳ ಮುಂದೆ ಅವರು ಅಂದಿದ್ದು ಒಂದೇ… “ಹೇಳಲಿಕ್ಕೆ ಉಳಿದಿದ್ದಾದರೂ ಏನು?  ನಾನು ಮುಸ್ಲಿಂ ಆಗಿರುವುದೇ ನನ್ನ ಅಪರಾಧವೇ ?”

- Advertisement -

ಕೆಲವೊಂದು ಸಲ ಸರಿ ತಪ್ಪುಗಳ ವಿವೇಚನೆಯನ್ನು ಮೀರಿ ಭಾವುಕರಾಗುತ್ತೇವೆ,  ಇನ್ನೊಬ್ಬರಿಗೆ ಒದಗಿದ ಪರಿಸ್ಥಿತಿ ನಮ್ಮೊಳಗನ್ನು  ತಟ್ಟುತ್ತದೆ ಹಾಗೂ  ಕೆಲಕಾಲ ಚಿಂತಿಸಲು ಪ್ರೇರೇಪಿಸುತ್ತದೆ. ಇತ್ತೀಚೆಗೆ ಉತ್ತರ ಪ್ರದೇಶದ ಹಿರಿಯ ರಾಜಕಾರಣಿ 78ರ ವಯಸ್ಸಿನ ಆಜಂ ಖಾನ್ ಅವರ ಮಾತುಗಳನ್ನು ಕೇಳಿದಾಗಿನಿಂದ ಮನಸ್ಸು ಅದನ್ನೇ ಯೋಚಿಸುತ್ತಿದೆ.    

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಳೇ ಮೈಸೂರು | ಕಲ್ಯಾಣದಿಂದ ಬೊಪ್ಪೇಗೌಡನಪುರದವರೆಗೆ: ಜನಪದ ಕಾವ್ಯದ...

ಒಂದು ಜನಪದ ಕಾವ್ಯ, ನೂರಾರು ವರ್ಷಗಳ ಮೌಖಿಕ ಪರಂಪರೆ, ತಲೆಮಾರುಗಳಿಂದ ತಂಬೂರಿಯ ನಾದದಲ್ಲಿ ಉಳಿದು ಬಂದ ತತ್ವ. ಜನಸಾಮಾನ್ಯರ ಬದುಕು, ಸಾಮಾಜಿಕ ಅಸಮಾನತೆ ಮತ್ತು ಮಾನವ ಘನತೆಯ ಪ್ರಶ್ನೆಗಳನ್ನು ಜನರ ಮುಂದಿಟ್ಟ ಪರಂಜ್ಯೋತಿ...

ಉತ್ತರ ಕನ್ನಡ | ಯುವನಿಧಿ ಫಲಾನುಭವಿಗಳ ಸಂಖ್ಯೆ ಹೆಚ್ಚಳ:...

ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಫಲಾನುಭವಿಗಳ ಸಂಖ್ಯೆ 10,280ಕ್ಕೆ ಏರಿಕೆಯಾಗಿರುವುದು ಕೇವಲ ಒಂದು ಸರ್ಕಾರಿ ಯೋಜನೆಯ ಫಲಾಫಲದ ಅಂಕಿ-ಅಂಶವಲ್ಲ. ಜಿಲ್ಲೆಯಲ್ಲಿನ ಉದ್ಯೋಗಾವಕಾಶಗಳು, ಯುವಜನರ ಸದೃಢ ಭವಿಷ್ಯ, ಸ್ಥಳೀಯ ಆರ್ಥಿಕ...

ಅಡ್ವಾಣಿ – ಅಧಿಕಾರದ ಆಟದಲ್ಲಿ ಸಿದ್ಧಾಂತವೂ ಒಂದು ಮೆಟ್ಟಿಲಷ್ಟೇ!

1984ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಎರಡು ಸ್ಥಾನಗಳು. ಅಲ್ಲಿಂದ ಪಕ್ಷವನ್ನು ರಾಷ್ಟ್ರೀಯ ಅಧಿಕಾರದ ಕೇಂದ್ರಕ್ಕೆ ತರುವಲ್ಲಿ ಅಡ್ವಾಣಿ ಅವರ ಪಾತ್ರ ದೊಡ್ಡದು. ರಥಯಾತ್ರೆ, ರಾಮಮಂದಿರ ಚಳವಳಿ ಮತ್ತು ಹಿಂದುತ್ವದ ರಾಜಕಾರಣದ...

ಹನ್ನೊಂದು ತಿಂಗಳ ಜೈಲುವಾಸವನ್ನು ಮುಗಿಸಿ ಬಿಡುಗಡೆಗೊಂಡು ಮನೆಗೆ ತೆರಳುವ ದಿನ.  ಅದೆಷ್ಟು ನಿರೀಕ್ಷೆಗಳನ್ನು ಹೊತ್ತು ತಂದಿರಬೇಕು ಆ ದಿನದ ಬೆಳಗು. ಅದೆಷ್ಟು ಸಂತಸ ಮನಸ್ಸನ್ನು ತುಂಬಿರಬೇಕು! ಆದರೆ ಜೈಲಿನಿಂದ ಹೊರಬರುವ ಮುನ್ನವೇ ಅವರನ್ನು ಮತ್ತೆ ಬಂಧಿಸುವ ಸಕಲ ಸಿದ್ಧತೆಯೊಂದಿಗೆ (ED) ಈಡಿ ಕಾಯುತ್ತಿತ್ತು. ಆಜಂ ಖಾನ್ ಹೊರಬರುವುದೇ ತಡ ಪುನಃ ಬಂಧಿತರಾದರು. ಅನೇಕ ಮಾಧ್ಯಮಗಳ ಮೈಕುಗಳ ಮುಂದೆ ಅವರು ಅಂದಿದ್ದು ಒಂದೇ….

“ಹೇಳಲಿಕ್ಕೆ ಉಳಿದಿದ್ದಾದರೂ ಏನು?  ನಾನು ಮುಸ್ಲಿಂ ಆಗಿರುವುದೇ ನನ್ನ ಅಪರಾಧವೇ ?”

ಆಜಂ ಖಾನ್ ಅವರ ನೋವಿನ ಮಾತಿನ ಹಿಂದೆ ಕೇಳಿಸದ ಮಾನವೀಯ ವೇದನೆಯಿತ್ತು. ಹೇಳಲಾಗದ ಹತಾಶೆ ಇತ್ತು. ಕೆಲವು ಮಾತುಗಳು ಕೇವಲ ಒಬ್ಬ ವ್ಯಕ್ತಿಯ ನೋವಿನ ಅಭಿವ್ಯಕ್ತಿಯಾಗಿರುವುದಿಲ್ಲ. ಅವು ಒಂದು ಕಾಲಘಟ್ಟದ ದುರಂತವನ್ನೂ, ಆತಂಕವನ್ನೂ, ಸಮಾಜದೊಳಗೆ ನಿಧಾನವಾಗಿ ಬೇರೂರಿರುವ ಅಸಹನೆಯನ್ನೂ, ನ್ಯಾಯದ ವ್ಯವಸ್ಥೆಯ ಬಗ್ಗೆ ಮೂಡುವ ಪ್ರಶ್ನೆಗಳನ್ನೂ ನಮ್ಮ ಮುಂದೆ ತೆರೆದಿಡುತ್ತವೆ.

 ಉತ್ತರ ಪ್ರದೇಶದ ಹಿರಿಯ ರಾಜಕಾರಣಿ ಆಜಂ ಖಾನ್ ಅವರ ಇತ್ತೀಚಿನ ಮಾತು ಅಂತಹದ್ದೇ ದುರಂತದ ಕಾಲಘಟ್ಟವೊಂದರ ಎಚ್ಚರದ ಕರೆಗಂಟೆಯಾಗಿದೆ.  ಫ್ಯಾಸಿಸ್ಟ ಶಕ್ತಿಗಳ ಉಚ್ಛ್ರಾಯಕಾಲವಿದು. ನಿಮಗೂ ನೆನಪಿರಬಹುದು, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಯುಎಪಿಎ (UAPA) ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ 84 ವರ್ಷದ ಸ್ಟ್ಯಾನ್ ಸ್ವಾಮಿ ಅವರು ತೀವ್ರ ಪಾರ್ಕಿನ್ಸನ್  ಕಾಯಿಲೆಯಿಂದ ಬಳಲುತ್ತಿದ್ದಾಗ ನೀರು ಕುಡಿಯಲು ಕೈ ನಡಗುತ್ತಿದ್ದುದರಿಂದ ಸಿಪ್ಪರ್ ಮತ್ತು ಸ್ಟ್ರಾ ಕೊಡುವಂತೆ ಕೋರ್ಟಿಗೆ ಅರ್ಜಿ ಸಲ್ಲಿಸಬೇಕಾಯ್ತು. ಕೇವಲ ನೀರು ಕುಡಿಯುವ ಒಂದು ಸಿಪ್ಪರ್‌ಗಾಗಿ 84 ವರ್ಷದ ವೃದ್ಧ ಮತ್ತು ತೀವ್ರ ಅಸ್ವಸ್ಥ ಹೋರಾಟಗಾರರೊಬ್ಬರು ಸರಿಸುಮಾರು 20 ದಿನಗಳ ಕಾಲ ಕೋರ್ಟ್ ಮೆಟ್ಟಿಲೇರಬೇಕಾಗಿ ಬಂದದ್ದು ನಮ್ಮ ವ್ಯವಸ್ಥೆಯ ಅಸಂವೇದನಾಶೀಲತೆಗೆ ಸಾಕ್ಷಿಯಾಗಿದೆ.

ಸುಮಾರು ಹನ್ನೊಂದು ತಿಂಗಳ ಜೈಲುವಾಸದ ನಂತರ ಹೊರಬಂದ ಆಜಂ ಖಾನ್ ಅವರಿಗೆ ಕುಟುಂಬದವರನ್ನು ನೋಡುವ, ತಮ್ಮವರೊಂದಿಗೆ ಮಾತನಾಡುವ, ಒಂದಿಷ್ಟು ನೆಮ್ಮದಿಯ ಉಸಿರು ತೆಗೆದುಕೊಳ್ಳುವ ಅವಕಾಶವೂ ಸಿಗಲಿಲ್ಲ. ಜೈಲಿನ ಬಾಗಿಲಿನಿಂದ ಹೊರಬರುತ್ತಿದ್ದಂತೆಯೇ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದರು. ಒಂದು ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ವ್ಯಕ್ತಿ, ಮತ್ತೊಂದು ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗುವ ಈ ಘಟನೆ ಸಹಜವಾಗಿಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಲಹಾಬಾದ್ ಹೈಕೋರ್ಟ್ ಅಕ್ಟೋಬರ್ 29ರಂದು ಆಜಂ ಖಾನ್ ಮತ್ತು ಅವರ ಪುತ್ರ ಅಬ್ದುಲ್ಲಾ ಆಜಂ ಖಾನ್ ಅವರಿಗೆ ಸಂಬಂಧಿಸಿದ ಎರಡು ಪ್ಯಾನ್ ಕಾರ್ಡ್ ಪ್ರಕರಣದಲ್ಲಿ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿತ್ತು. ಅದರಂತೆ ಅಕ್ಟೋಬರ್ 31ರಂದು ಅವರು ರಾಮಪುರ ಜೈಲಿನಿಂದ ಹೊರಬಂದರು. ಆದರೆ, ಜೌಹರ್ ವಿಶ್ವವಿದ್ಯಾಲಯ ಮತ್ತು ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅವರನ್ನು ತಕ್ಷಣವೇ ಬಂಧಿಸಿತು. ನವೆಂಬರ್ 1ರಂದು ಅವರನ್ನು ಘಾಜಿಯಾಬಾದ್‌ನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಪ್ರಕರಣದಲ್ಲಿ ಹಣಕಾಸಿನ ಅಕ್ರಮಗಳ ಕುರಿತು ತನಿಖೆ ನಡೆಯುತ್ತಿದೆ; ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಬೇಕಿವೆ.

ಆದರೆ, ಜೈಲಿನಿಂದ ಹೊರಬಂದ ಕ್ಷಣದಲ್ಲೇ ಮತ್ತೆ ಬಂಧನಕ್ಕೊಳಗಾದಾಗ ಆಜಂ ಖಾನ್ ಆಡಿದ ಮಾತುಗಳು ಈ ಇಡೀ ಘಟನೆಯ ಅತ್ಯಂತ ನೋವಿನ ಭಾಗವಾಗಿವೆ.

“ನಾನು ಮುಸ್ಲಿಂ ಆಗಿರುವುದೇ ನನ್ನ ಶಿಕ್ಷೆಗೆ ಕಾರಣವೇ ?  ಒಬ್ಬ ಮುಸ್ಲಿಂ ವಿಶ್ವವಿದ್ಯಾಲಯ ಕಟ್ಟಿಸಿದ್ದೇ ಅಪರಾಧವೇ ? ಮಕ್ಕಳಿಗಾಗಿ ಶಾಲೆಗಳನ್ನು ನಿರ್ಮಿಸಿದ್ದೇ ತಪ್ಪೇ?” ಎಂದು ಅವರು ಮಾಧ್ಯಮಗಳ ಮುಂದೆ ಪ್ರಶ್ನಿಸಿದ್ದಾರೆ. ಅವರ ಮಾತುಗಳಲ್ಲಿ ಆಕ್ರೋಶವಿತ್ತು; ಅದಕ್ಕಿಂತ ಹೆಚ್ಚಾಗಿ ಹತಾಶೆ ಮತ್ತು ನೋವಿತ್ತು.

ಆಜಂ ಖಾನ್ ಅವರು ಪ್ರತಿಷ್ಠಿತ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರು.  ಸ್ವತಃ ಆ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಕಾನೂನು ಪದವಿ ಪಡೆದಿದ್ದಷ್ಟೇ ಅಲ್ಲ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.  ವಿದ್ಯಾರ್ಥಿ ಬದುಕಿನಿಂದಲೇ ಸಾರ್ವಜನಿಕ ಭಾಷಣ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡ ಅವರು, ತಮ್ಮ ಪ್ರಖರ ಮಾತುಗಾರಿಕೆಯಿಂದ ಗಮನ ಸೆಳೆದವರು.  ಒಮ್ಮೆ ಇಂದಿರಾಗಾಂಧಿ ಅವರು ಅಲೀಗಡ್ ವಿಶ್ವವಿದ್ಯಾಲಯಕ್ಕೆ ಭೆಟ್ಟಿಕೊಟ್ಟಾಗ ಆಜಂ ಖಾನರ ಪ್ರಖರ ಭಾಷಣ ಕೇಳಿ ಪ್ರಭಾವಿತರಾಗಿ ಅವರನ್ನು ರಾಜಕೀಯಕ್ಕೆ ಎಳೆತರುತ್ತಾರೆ.  ಸಮಾಜವಾದಿ ಚಳವಳಿಯ ಮೂಲಕ ರಾಜಕೀಯ ಪ್ರವೇಶಿಸಿ, ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ದೀರ್ಘಕಾಲ ದುಡಿದವರು. ಉತ್ತರ ಪ್ರದೇಶದ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಮತ್ತು ಗುರುತನ್ನು ರೂಪಿಸಿಕೊಂಡವರು.

ಅಲಿಗಢದಲ್ಲಿ ಶಿಕ್ಷಣ ಪಡೆದ ಆಜಂ ಖಾನ್ ಮುಂದೆ ತಮ್ಮ ನೆಲವಾದ ರಾಮಪುರದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವ ಕನಸು ಕಂಡರು. ಆ ಕನಸಿನ ಫಲವೇ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯ.  ಮುಸ್ಲಿಮನೊಬ್ಬ ಈ ದೇಶದಲ್ಲಿ ಕನಸು ಕಾಣುವುದೂ ಅಪರಾಧವಾಗಿರುವ ದುರಂತದ ದಿನಗಳಿವು.  ಮುಸ್ಲಿಮನೊಬ್ಬ  ವಿಶ್ವವಿದ್ಯಾಲಯವನ್ನು ನಿರ್ಮಿಸಿದುದನ್ನು ಹೇಗೆ ಅರಗಿಸಿಕೊಂಡಾರು ಈ ಮತಾಂಧರು? ಅದೂ ಕೋಮುವಾದಿ ಯೋಗಿ ಆದಿತ್ಯನಾಥನಂತಹವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿರುವಾಗ !!  ಬುಲ್ಡೋಜರ್ ರಾಜಕಾರಣವೇ ಅವರ ಉಸಿರಾಗಿರುವಾಗ ಆಜಂ ಖಾನರು  ವಿದ್ಯಾದಾನಕ್ಕಾಗಿ ವಿಶ್ವವಿದ್ಯಾಲಯ ಸ್ಥಾಪಿಸಿದ ಮಹಾಪರಾಧಿಗಳು.     

ಉತ್ತರ ಪ್ರದೇಶ ಸರ್ಕಾರದ ‘ಇನ್ವೆಸ್ಟರ್ಸ್ ಶೃಂಗಸಭೆ’ಗಳ (UP Investors Summit) ಅಡಿಯಲ್ಲಿ ಸುಮಾರು ₹70,000 ಕೋಟಿಗೂ ಹೆಚ್ಚಿನ ಹೂಡಿಕೆಯ ಒಪ್ಪಂದಗಳನ್ನು  ಅದಾನಿ ಗ್ರೂಪ್ ಮಾಡಿಕೊಂಡಿದೆ. ಯೋಗಿ ಆದಿತ್ಯನಾಥರ ಆಡಳಿತಕ್ಕೆ ಎಲ್ಲ ತರಹದ ಅಕ್ರಮಗಳು, ಗೂಂಡಾಗಿರಿ- ಫೇಕ್ ಎನ್‌ಕೌಂಟರ್‌ಗಳೂ ಒಪ್ಪಿತ. ಅವರು ಹಿಂದೂಗಳಾಗಿರಬೇಕು ಅಷ್ಟೇ. ಇತ್ತೀಚೆಗೆ ಹೃಷಿಕೇಶದಿಂದ ಬರುವಾಗ ಶಾಮ್ಲಿ, ಮುಜಫ್ಫರ್ ನಗರಗಳನ್ನು ಹಾಯ್ದು ಬರುತ್ತಿದ್ದೆ. 2013ರಲ್ಲಿ ನಡೆದ ಭೀಕರ ಕೋಮುಗಲಭೆ, ಹಿಂಸಾಚಾರವನ್ನು ಮರೆಯಲುಂಟೆ? ಈಗ ಇವರು ಬೊಬ್ಬೆ ಹೊಡೆಯುತ್ತಿರುವ ವಿಶ್ವವಿದ್ಯಾಲಯದ ಆಡಳಿತ ಅಥವಾ ಹಣಕಾಸು ವ್ಯವಹಾರಗಳಲ್ಲಿ ಅಕ್ರಮಗಳಿವೆಯೇ ಎಂಬುದು ತನಿಖೆಗೆ ಒಳಪಡಬೇಕಾದ ಪ್ರತ್ಯೇಕ ವಿಚಾರ. ಆದರೆ ವಿಶ್ವವಿದ್ಯಾಲಯ ಸ್ಥಾಪನೆಯ ಆಶಯವನ್ನೇ ಅಪರಾಧದಂತೆ ನೋಡುವುದು ಸರಿಯೇ ಎಂಬ ಪ್ರಶ್ನೆಯನ್ನು ಈ ದೇಶದ  ಎಲ್ಲರೂ ಕೇಳಿಕೊಳ್ಳಬೇಕಾಗಿದೆ.

ಈ ಹೊತ್ತು ಸರ್ ಸೈಯದ್ ಅಹ್ಮದ್ ಖಾನ್ ಅವರ ನೆನಪೂ ಸಹಜವಾಗಿಯೇ ಬರುತ್ತದೆ. ಹತ್ತೊಂಬತ್ತನೇ ಶತಮಾನದಲ್ಲಿ ಮುಸ್ಲಿಂ ಸಮುದಾಯದಲ್ಲಿ ಆಧುನಿಕ ಶಿಕ್ಷಣದ ಅಗತ್ಯವನ್ನು ಮನಗಂಡ ಸರ್ ಸೈಯದ್, ಅಲಿಗಢದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಆರಂಭಿಸಿದರು. 1875ರಲ್ಲಿ ಆರಂಭವಾದ ಆ ಶಿಕ್ಷಣ ಸಂಸ್ಥೆ ಮೊಹಮ್ಮಡನ್ ಆಂಗ್ಲೋ-ಓರಿಯಂಟಲ್ ಕಾಲೇಜಾಗಿ ಬೆಳೆದು, 1920ರಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವಾಗಿ ರೂಪಾಂತರಗೊಂಡಿತು. ಶಿಕ್ಷಣದ ಮೂಲಕ ಸಮುದಾಯದ ಸಾಮಾಜಿಕ ಮತ್ತು ಬೌದ್ಧಿಕ ಪ್ರಗತಿಗೆ ದಾರಿ ಮಾಡಿಕೊಡಬೇಕೆಂಬುದು ಸರ್ ಸೈಯದ್ ಅವರ ಆಶಯವಾಗಿತ್ತು. ಅಂದು  ಸರ್ ಸೈಯದ್ ಅವರು ಅಲಿಗಢದಲ್ಲಿ ಶಿಕ್ಷಣದ ಬೀಜ ಬಿತ್ತಿದಾಗ ಅದನ್ನು ಸಮಾಜದ ಪ್ರಗತಿಯ ಪಥವೆಂದು ಎಲ್ಲ ಸಮುದಾಯದವರು, ಎಲ್ಲ ಜನನಾಯಕರು ಅವರ ಪ್ರಯತ್ನವನ್ನು ಗೌರವಿಸಿದ್ದರು.  ಆದರೆ ಇಂದು ಆಜಂ ಖಾನ್ ಅವರು ಜೌಹರ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿರುವುದನ್ನೇ  ಅನುಮಾನದ ದೃಷ್ಟಿಯಿಂದ ನೋಡಲಾಗುತ್ತಿದೆ.  ಹಾಗಾದರೆ ಇಂದು ಬದಲಾದದ್ದೇನು ? ಎಲ್ಲಾ ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠವೆಂದು ನಂಬುವ ನಮ್ಮ  ಪರಂಪರೆ ಇನ್ನೊಂದು ನಿರ್ಧಿಷ್ಟ ಧರ್ಮವನ್ನು ದ್ವೇಷದ, ಅನುಮಾನದ ದುರ್ಬೀನಿನಿಂದ ನೋಡುವುದೇಕೆ?  

ಮುಸ್ಲಿಂ ಸಮುದಾಯದ ಮಕ್ಕಳಿಗೂ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದಿಂದ ವಿಶ್ವವಿದ್ಯಾಲಯ ಸ್ಥಾಪಿಸುವುದರಲ್ಲಿ ಯಾವ ಅನ್ಯಾಯವಿದೆ ?  ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಅಪರಾಧವಲ್ಲ. ಅದರ ನಿರ್ಮಾಣಕ್ಕೆ ಬಳಸಿದ ಹಣ, ಭೂಮಿ ಅಥವಾ ಆಡಳಿತದಲ್ಲಿ ಅಕ್ರಮಗಳಿದ್ದರೆ ಅವುಗಳ ಬಗ್ಗೆ ತನಿಖೆ ನಡೆಯಲಿ. ತಪ್ಪು ಸಾಬೀತಾದರೆ ಕಾನೂನು ಕ್ರಮ ಜರುಗಲಿ. ಆದರೆ ವಿಶ್ವವಿದ್ಯಾಲಯ ಸ್ಥಾಪನೆಯ ಆಶಯವನ್ನೇ ಅಪರಾಧದಂತೆ ಬಿಂಬಿಸುವುದು, ಅದನ್ನು ಕೆಡವಿ ಉರುಳಿಸುವ ದುಷ್ಟಯೋಜನೆ ರೂಪಿಸುವುದು ಅಥವಾ ಅದರ ಸ್ಥಾಪಕನ ಧಾರ್ಮಿಕ ಗುರುತಿನೊಂದಿಗೆ ಅದನ್ನು ಸಮೀಕರಿಸುವುದು ನ್ಯಾಯಸಮ್ಮತವಲ್ಲ.

ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯ (AMU) ದೇಶದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಅಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಮುಖ ಹಿಂದೂ ಗಣ್ಯರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ,  ರಾಜಾ ಮಹೇಂದ್ರ ಪ್ರತಾಪ್ ಸಿಂಗ್, ಖುಶ್ವಂತ್ ಸಿಂಗ್, ಅನುಪಮ್ ಖೇರ್ ಹೀಗೆ ಅನೇಕರಿದ್ದಾರೆ. ಅಲ್ಲಿ ಶಿಕ್ಷಣ ಪಡೆಯಲು ಜನ ಹಾತೊರೆಯುತ್ತಿದ್ದರು. ಆಗಿನ ಜನನಾಯಕರು ಯಾರೂ ಅಲೀಗಡ್ ವಿಶ್ವವಿದ್ಯಾಲಯದ ವಿಷಯದಲ್ಲಿ ಮೂಗು ತೂರಿಸಲಿಲ್ಲ. “ ಸಾರೇ ಜಹಾಂ  ಸೇ ಅಚ್ಚಾ… ಹಿಂದುಸ್ತಾನ್ ಹಮಾರಾ ಬರೆದ ಅಲ್ಲಮಾ ಇಕ್ಬಾಲ್,   

“ಹೈ ರಾಮ್ ಕೇ ವಜೂದ್ ಪೇ ಹಿಂದೂಸ್ತಾನ್ ಕೋ ನಾಝ್,
ಅಹ್ಲ್-ಎ-ನಝರ್ ಸಮಝ್ತೇ ಹೈಂ ಉನ್ಕೋ ಇಮಾಮ್-ಎ-ಹಿಂದ್ 

( ಶ್ರೀರಾಮನ ಅಸ್ತಿತ್ವದ ಬಗ್ಗೆ ಇಡೀ ಭಾರತ ದೇಶಕ್ಕೇ ಅಪಾರ ಹೆಮ್ಮೆ ಇದೆ. ಜ್ಞಾನಿಗಳು ಮತ್ತು ದೂರದೃಷ್ಟಿಯುಳ್ಳವರು ಆತನನ್ನು ಭಾರತದ ಆಧ್ಯಾತ್ಮಿಕ ಮಾರ್ಗದರ್ಶಿ (ಮರ್ಯಾದಾ ಪುರುಷ) ಎಂದು ಪರಿಗಣಿಸುತ್ತಾರೆ.)”  ಎಂದೂ  ಶ್ರೀರಾಮನನ್ನು ಕೊಂಡಾಡಿದ್ದಾರೆ.  ಹೀಗೆ ನಮ್ಮ ರಾಮನನ್ನು ಕೊಂಡಾಡಿದ ಉರ್ದು ಕವಿಗಳು ಅನೇಕರು.  ಕೈಫಿ ಆಜ್ಮಿ,  ಸಾಗರ್ ನಿಜಾಮಿ,  ಜಫರ್ ಅಲಿ ಖಾನ್ ಹೀಗೆ ಅನೇಕರಿದ್ದಾರೆ.    ಮುನವ್ವರ್ ರಾಣಾ ಅಂತೂ, “ಹಮ್ ಅಯೋಧ್ಯಾ ಕೀ ಝಮೀಂ ಪರ್ ಭೀ ಅಝಾನ್ ದೇ ಸಕ್ತೇ ಹೈಂ, ರಾಮ್ ಕೋ ಅಪ್ನಾ ಇಮಾಮ್-ಎ-ಹಿಂದೂಸ್ತಾನ್ ಕಹ್ ಸಕ್ತೇ ಹೈಂ.” (ನಾವು ಅಯೋಧ್ಯೆಯ ಮಣ್ಣಿನಲ್ಲೂ ಪ್ರಾರ್ಥನೆ ಸಲ್ಲಿಸಬಲ್ಲೆವು ಮತ್ತು ಶ್ರೀರಾಮನನ್ನು ನಮ್ಮ ಭಾರತದ ಆಧ್ಯಾತ್ಮಿಕ ನಾಯಕ (ಇಮಾಮ್-ಎ-ಹಿಂದೂಸ್ತಾನ್) ಎಂದು ಹೆಮ್ಮೆಯಿಂದ ಕರೆಯಬಲ್ಲೆವು) ಎಂದಿದ್ದಾರೆ.

ಇದು ನಮ್ಮ ಗಂಗಾ ಜಮುನಿ ಪರಂಪರೆ. ಸೌಹಾರ್ದತೆಯ ಪರಂಪರೆ. ಅದನ್ನೀಗ ಹಿಂದೂ ರಾಷ್ಟ್ರವಾದದ ಹೆಸರಿನಲ್ಲಿ ಕಳಂಕಿತಗೊಳಿಸಲಾಗುತ್ತಿದೆ. ಸರ್ ಸೈಯದ್ ಅವರ ಅಲಿಗಢ ವಿಶ್ವವಿದ್ಯಾಲಯವಾಗಲಿ,  ಆಜಂ ಖಾನ್ ಅವರ ಜೌಹರ್ ವಿಶ್ವವಿದ್ಯಾಲಯದ ಪ್ರಯತ್ನವಾಗಲಿ, ಅವುಗಳ ಮೌಲ್ಯಮಾಪನವನ್ನು ಅವುಗಳ ಶೈಕ್ಷಣಿಕ ಕೊಡುಗೆಯ ಆಧಾರದ ಮೇಲೆ ಮಾಡಬೇಕೇ ಹೊರತು  ಧರ್ಮದ ಆಧಾರದ ಮೇಲೆ ಅಲ್ಲ. ಶಿಕ್ಷಣದ ಅವಕಾಶಗಳು ಯಾವುದೇ ಒಂದು ಸಮುದಾಯದ ಸ್ವತ್ತಲ್ಲ; ಅವು ಎಲ್ಲರಿಗೂ ತಲುಪಬೇಕಾದ ಸಾಮಾಜಿಕ ಸಂಪತ್ತು.

ಇಂದು ಆಜಂ ಖಾನ್ ಅವರ ಬಾಯಿಂದ ಹೊರಬಂದಿರುವ ಪ್ರಶ್ನೆಯನ್ನು ನಾಳೆ ದೇಶದ ಇನ್ನೊಬ್ಬ ನಾಗರಿಕ ಕೇಳುವ ಪರಿಸ್ಥಿತಿ ಬರಬಾರದು. ಧಾರ್ಮಿಕ ಗುರುತಿನ ಕಾರಣಕ್ಕೆ ಯಾರೂ ತಮ್ಮ ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಯಂತೆ ಬದುಕುವಂತಾಗಬಾರದು. ವಿಶ್ವವಿದ್ಯಾಲಯ ಕಟ್ಟುವುದು, ಶಾಲೆಗಳನ್ನು ಸ್ಥಾಪಿಸುವುದು, ಶಿಕ್ಷಣದ ಅವಕಾಶಗಳನ್ನು ಸೃಷ್ಟಿಸುವುದು ಅಪರಾಧವಲ್ಲ. ಅವುಗಳ ನಿರ್ಮಾಣದಲ್ಲಿ ಹಣಕಾಸಿನ ಅಕ್ರಮಗಳಿದ್ದರೆ ತನಿಖೆ ನಡೆಯಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ವ್ಯಕ್ತಿಯ ಧಾರ್ಮಿಕ ಗುರುತನ್ನೇ ಅನುಮಾನದ ಕಾರಣವನ್ನಾಗಿ ನೋಡುವ ವಾತಾವರಣ ನಿರ್ಮಾಣವಾಗಬಾರದು. ಒಬ್ಬ ವ್ಯಕ್ತಿಯ ಧರ್ಮ ಆತನ ಅಪರಾಧವಲ್ಲ. ಆತನ ವಿರುದ್ಧದ ಆರೋಪಗಳನ್ನು ಸಾಕ್ಷ್ಯಾಧಾರಗಳ ಮೂಲಕ ಸಾಬೀತುಪಡಿಸಬೇಕೇ ಹೊರತು, ಆತನ ಧಾರ್ಮಿಕ ಗುರುತಿನ ನೆರಳಿನಲ್ಲಿ ಅಪರಾಧವನ್ನು ನಿರ್ಧರಿಸಬಾರದು.

ಇದನ್ನೂ ಓದಿ ದಿಲ್ಲಿ ಮಾತು | ಕರವಾ ಚೌತ್‌: ಪಿತೃಸತ್ತೆ, ಸಂಪ್ರದಾಯದಾಚೆಗಿನ ಪ್ರಶ್ನೆಗಳು

ಆಜಂ ಖಾನ್ ಅವರ ರಾಜಕೀಯದೊಂದಿಗೆ ನಮಗೆ ಸಹಮತವಿರಬಹುದು, ಇಲ್ಲದಿರಬಹುದು. ಅವರ ವ್ಯಕ್ತಿತ್ವದ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಅವರ ಮಾತುಗಳು ಮತ್ತು ರಾಜಕೀಯ ನಿಲುವುಗಳನ್ನು ವಿಮರ್ಶಿಸುವ ಹಕ್ಕು ನಮಗಿದೆ.  ಆದರೆ ಅವರಿಗೂ ನ್ಯಾಯ ದೊರೆಯಬೇಕು ಎಂಬ ನಮ್ಮ ನಿಲುವು ಯಾವುದೇ ರಾಜಕೀಯ ಅಥವಾ ಧಾರ್ಮಿಕ ಒಲವಿನ ಫಲವಾಗಬಾರದು. ಅದು ನಮ್ಮ ಸಂವಿಧಾನಬದ್ಧ ನಿಲುವಾಗಿರಬೇಕು.

ಯಾಕೆಂದರೆ ನ್ಯಾಯವೆಂಬುದು ನಮ್ಮವರಿಗಾಗಿ ಮಾತ್ರ ಇರುವ ವ್ಯವಸ್ಥೆಯಲ್ಲ. ನಮಗೆ ಇಷ್ಟವಿಲ್ಲದ ವ್ಯಕ್ತಿಗೂ ನ್ಯಾಯ ದೊರೆಯಬೇಕು ಎಂದು ಬಯಸುವಾಗಲೇ ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅರ್ಥ ಬರುತ್ತದೆ.

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬದಲಾದ ರಾಹುಲ್ ಇಮೇಜ್; ಮೈದಾನದಲ್ಲೂ ಜನಸಾಗರ, ಡಿಜಿಟಲ್ ಲೋಕದಲ್ಲೂ ಅಬ್ಬರ!

ಭಾರತೀಯ ರಾಜಕಾರಣದಲ್ಲಿ ಸದ್ಯ ಹೊಸದೊಂದು ಸಂಚಲನ ಸೃಷ್ಟಿಯಾಗಿದೆ. "ಭಾರತದ ಇತಿಹಾಸದಲ್ಲೇ ಮೊದಲ...

ಸಿಯಾಂಗ್ ಯೋಜನೆ: ಜೈಲಿನಿಂದ ಹೊರಬರುತ್ತಿದ್ದಂತೆ ಹೋರಾಟದ ಕಿಚ್ಚು ಹೊತ್ತಿಸಿದ ಅಡುಮ್ ತಯೋಂಗ್! 

ಸಿಯಾಂಗ್ ಮೇಲ್ದಂಡೆ ವಿವಿಧೋದ್ದೇಶ ಯೋಜನೆಯ (SUMP) ವಿರುದ್ಧದ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು...

‘ಮೋದಿ ನನ್ನೊಂದಿಗೆ ಮುಖಾಮುಖಿ ಚರ್ಚಿಸಿದರೆ ಪ್ರಧಾನಿಯಾಗಿ ಉಳಿಯುವುದಿಲ್ಲ’: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಕ್ತ ಚರ್ಚೆಗೆ ಆಹ್ವಾನ ನೀಡುವುದನ್ನು ಲೋಕಸಭೆಯ...

ಬಾಗಲಕೋಟೆ | ಟನ್‌ ಕಬ್ಬಿಗೆ 3800 ರೂ. ಬೆಂಬಲ ಬೆಲೆ ಘೋಷಣೆ; ಸಂಘಟಿತ ಹೋರಾಟಕ್ಕೆ ಸಂದ ಜಯ

ಬಾಗಲಕೋಟೆ ಜಿಲ್ಲೆಯ ರನ್ನನ ನಾಡು ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ದಿ....