ಪ್ರತಿ ಕಾರ್ತಿಕ ಮಾಸದ ಕೃಷ್ಣಪಕ್ಷದ ಚೌತಿಗೆ ತಪ್ಪದೆ ಬರುವ ’ಕರವಾ ಚೌತ್’ ಉತ್ತರಭಾರತದ ಬಹುದೊಡ್ಡ ಶೃಂಗಾರ ಹಾಗೂ ರಮ್ಯತೆಯ ಆಚರಣೆ. ಒಂದು ರೀತಿಯಲ್ಲಿ ರೊಮ್ಯಾಂಟಿಕ್ ಹಬ್ಬ. ವ್ಯಾಲೆಂಟೈನ್ ಆಚರಣೆಯಂತೆಯೇ ಶೋಕಿಯದ್ದು. ಕೆಲವರ ಬಾಯಲ್ಲಿ ರತಿ ಹಬ್ಬವೇ ಅನ್ನುವಷ್ಟು ಕೀಟಲೆ-ಪುಳಕ, ಲಜ್ಜೆ ಎಲ್ಲವೂ.
ಇಂದು ಇಲ್ಲಿ ಕರವಾ ಚೌತ್. ಸುಮಂಗಲಿಯರಿಗೆ, ಮದುವೆ ನಿಶ್ಚಯವಾದ ಯುವತಿಯರಿಗೆ ಸಂಭ್ರಮದ ಪರ್ವ. ಕರವಾ ಚೌತ್— ಉತ್ತರ ಭಾರತದ ಈ ಸಂಪ್ರದಾಯ ಇಂದು ದೃಶ್ಯ ಮಾಧ್ಯಮ ಹಾಗೂ ಬಾಲಿವುಡ್ ಸಿನಿಮಾ ಸಂಸ್ಕೃತಿಯ ಪ್ರಭಾವದಿಂದ ದೇಶಾದ್ಯಂತ ವ್ಯಾಪಿಸಿರುವ ಒಂದು ಪ್ರಮುಖ ಹಬ್ಬವಾಗಿದೆ. ಸೂರ್ಯೋದಯದಿಂದ ಚಂದ್ರೋದಯದವರೆಗೆ ನೀರನ್ನೂ ಕುಡಿಯದೆ ಪತಿಯ ದೀರ್ಘಾಯುಷ್ಯಕ್ಕಾಗಿ ಹೆಣ್ಣುಮಕ್ಕಳು ಆಚರಿಸುವ ಈ ವ್ರತವು, ಒಂದು ಕಡೆ ಗಂಡ-ಹೆಂಡತಿಯರ ನಡುವಿನ ಅನನ್ಯ ಪ್ರೀತಿ ಹಾಗೂ ಸಮರ್ಪಣಾ ಭಾವದ ಸಂಕೇತವಾಗಿ ಕಾಣಿಸಿದರೆ, ಇನ್ನೊಂದೆಡೆ ಪಿತೃಸತ್ತೆಯ ವಿಶ್ಲೇಷಣೆಗಳಲ್ಲಿ ತೀವ್ರ ಚರ್ಚೆ ಮತ್ತು ವಿಮರ್ಶೆಗೆ ಒಳಪಡುತ್ತದೆ.
ಅದೇನೇ ಇರಲಿ ಪ್ರತಿವರ್ಷವೂ ಈ ವೃತ ಬಂದಾಗೆಲ್ಲ ಸುನೀತಾ ನೆನಪಾಗುತ್ತಾಳೆ. ’ಕರವಾ ಚೌತ್ ’ ದಿನದಂದು ಉಪವಾಸವಿರುತ್ತದೆಂದು ರಜೆ ಪಡೆದ ನನ್ನ ಕೆಲಸದ ’ಮೇಡ್’ ಸುನೀತಾ… ಮರುದಿನ ಬೆಳಿಗ್ಗೆ ಬಂದಾಗ ಯಾಕೋ ಬಾಡಿದಂತಿದ್ದಳು. ನಾವಿಬ್ಬರೂ ಯಾವತ್ತೂ ಸುಮ್ಮನಿರುವುದೇ ಇಲ್ಲ. ಏನಾದರೂ ವಟವಟ ಹರಟೆ ಶುರುವಾಗೇ ಬಿಡತ್ತೆ ಅದೂ ಬೆಳ್ಳಂಬೆಳಗ್ಗೆನೇ! ಎರಡೂ ಕಾಲಿಗೆ – ಕೈಗೆ ಹಚ್ಚಿದ ಮೆಹಂದಿ ಕಡುಕೆಂಪು ಬಣ್ಣವೇರಿ ರಂಗಾಗಿತ್ತು. ಮೆಹಂದಿ ರಂಗೇರಿದಷ್ಟೂ ಗಂಡನ ಪ್ರೀತಿ ಜಾಸ್ತಿಯಂತೆ. ಕಾಲಿಗೆ ಚೈನು, ಕಾಲುಂಗುರ , ಕೈತುಂಬ ಕೆಂಪು ಬಳೆ. ನಿನ್ನೆ ಹೊಸಸೀರೆಯುಟ್ಟು ಸಂಭ್ರಮಿಸಿದ್ದ ಅವಳು ಬೆಳಗಿನ ಕೆಲಸಕ್ಕೆ ಹಳೇ ಬಟ್ಟೆಯಲ್ಲಿಯೇ ಬಂದಿದ್ದಳು.
ಏನು ನಿನ್ನೆ ರಾತ್ರಿ ನಿದ್ದೆ ಮಾಡಲಿಲ್ಲವಾ ? ಏನಾಯ್ತು? ಎಂದೆ. ಉತ್ತರಭಾರತದಲ್ಲಿ ಕರವಾ ಚೌತ್ ಮರುದಿನ ಇದೇ ಪ್ರಶ್ನೆಯನ್ನು ಪೋಲಿಯಾಗಿ ಕೇಳಿ ಚೇಷ್ಟೇ ಮಾಡಿಕೊಳ್ಳುತ್ತಾರೆ ಜನ. ಆ ರಾತ್ರಿ ದಂಪತಿಗಳಿಗೆ ಮೊದಲ ರಾತ್ರಿಯಷ್ಟೇ ವಿಶೇಷವಾದದ್ದು ಎನ್ನುವ ಭಾವ. ಸಂಗಾತಿಗಳ ಸಾಂಗತ್ಯ ಹೀಗೆ ನವನವೀನವಾಗಿರಲಿ ಎನ್ನುವ ಆಶಯವಿರಬೇಕು. ತಮ್ಮಿಬ್ಬರ ಪ್ರೇಮ ನಿತ್ಯಹೊಸದು ಅನ್ನುವ ಆಪೇಕ್ಷೆಯ ಭಾವ ಇರಬೇಕು. ನಾನು ಕೇಳಿದ್ದು ಅವಳ ಮೌನವನ್ನು ಮುರಿಯುವುದಕ್ಕಾಗಿ. ಅಷ್ಟಕ್ಕೆ ಸುನೀತಾಳ ದುಃಖದ ಕಟ್ಟೆಯೊಡೆದು ಗಂಗಾ ಜಮುನೆಯರು ಪ್ರತ್ಯಕ್ಷರಾದರು.

ಯಾವ ಪತಿಯ ಆಯುರಾರೋಗ್ಯಕ್ಕಾಗಿ ಆಕೆ ಇಡೀದಿನ ಉಪವಾಸವಿದ್ದು ವೃತವಿಟ್ಟಿದ್ದಳೋ ಅದೇ ಗಂಡನೆನ್ನುವ ಪ್ರಾಣಿ ಸಂಜೆ ಕುಡಿದುಬಂದು ಪಶುವಿನಂತೆ ಜಗಳ ಕಾಯ್ದು, ಸಿಟ್ಟಲ್ಲಿ ಇಟ್ಟಿಗೆ ತುಂಡನ್ನು ಬೀಸಿ ಒಗೆದಿದ್ದ. ಇಟ್ಟಿಗೆಯ ಏಟು ಬಲವಾಗಿ ಆಕೆಯ ಸೊಂಟಕ್ಕೆ ಬಿದ್ದು ಏಳಲು ಕೂಡಲು ಕೂಡ ಕಷ್ಟಪಡುತ್ತಿದ್ದಳು. “ಊದಿಕೊಂಡಿದೆಯಾ ನೋಡು ದೀದಿ” ಎಂದು ಸೀರೆ ಜರುಗಿಸಿ ತೋರಿಸಿದಳು. ನೋವಿಗೆ ಒಂದು ಬ್ರೂಫೇನ್ ಮಾತ್ರೆಕೊಟ್ಟು, ಊದಿದ ಭಾಗಕ್ಕೆ ’ಮೂವ್ ’ ಹಚ್ಚಿ, ಕುಡಿಯಲು ಟೀ ಕೊಟ್ಟೆ. ದಿನಾ ನನ್ನ ಬೆಳಗಿನ ಚಾಯ್ ಅವಳೊಂದಿಗೆನೇ. ಈ ಹೊಡೆತ, ಏಟು ಆಗಾಗ ಬೀಳುತ್ತಲೇ ಇರುತ್ತವೆ ಸುನೀತಾಗೆ. ಒಮ್ಮೆ ಕೈಪೂರಾ ತರಚಿಹೋಗಿತ್ತು. ಬಳೆಗಳೆಲ್ಲಾ ಚೂರುಚೂರು, ಬೋಳು ಕೈ. ಇಂಥ ಕಟುಕ ಗಂಡನಿಗೋಸ್ಕರ ವೃತವಿಡುವ ಅಗತ್ಯವಿದೆಯಾ ಸುನೀತಾ ಎನ್ನಬೇಕಾಗಿದ್ದ ಮಾತು ನನ್ನ ಬಾಯಿಂದ ಹೊರಬರಲಿಲ್ಲ. ಇವಳೇ ದುಡಿಯುತ್ತಾಳೆ, ಬಾಡಿಗೆ ಕಟ್ತುತ್ತಾಳೆ, ಮಕ್ಕಳನ್ನು ಸಾಕುತ್ತಾಳೆ. ಅವಳ ಗಂಡ ದುಡಿದದ್ದು ಕುಡಿಯಲೂ ಸಾಕಾಗದು. ಅವನು ದುಡಿಯುವುದು ತನಗಾಗಿ ಮಾತ್ರ…!
ಈ ಘಟನೆ ನಡೆದು ದಶಕದ ಮೇಲಾಗಿದೆ. ಆದರೆ ಇವತ್ತಿಗೂ ದೃಶ್ಯ ಬದಲಾಗಿಲ್ಲ. ಮತ್ತೆ ಮತ್ತೆ ಕೇಳಿಕೊಳ್ಳಬಹುದಾದ ಪ್ರಶ್ನೆಗಳು ಹಾಗೇ ಇವೆ.
ಪ್ರತಿ ಕಾರ್ತಿಕ ಮಾಸದ ಕೃಷ್ಣಪಕ್ಷದ ಚೌತಿಗೆ ತಪ್ಪದೆ ಬರುವ ’ಕರವಾ ಚೌತ್’ ಉತ್ತರಭಾರತದ ಬಹುದೊಡ್ಡ ಶೃಂಗಾರ ಹಾಗೂ ರಮ್ಯತೆಯ ಆಚರಣೆ. ಒಂದು ರೀತಿಯಲ್ಲಿ ರೊಮ್ಯಾಂಟಿಕ್ ಹಬ್ಬ. ವ್ಯಾಲೆಂಟೈನ್ ಆಚರಣೆಯಂತೆಯೇ ಶೋಕಿಯದ್ದು. ಕೆಲವರ ಬಾಯಲ್ಲಿ ರತಿ ಹಬ್ಬವೇ ಅನ್ನುವಷ್ಟು ಕೀಟಲೆ-ಪುಳಕ, ಲಜ್ಜೆ ಎಲ್ಲವೂ. “ಮುಗಿಲ ಮಾರಿಗೆ ರಾಗ ರತಿಯ ನಂಜ ಏರಿತ್ತ..”ಎನ್ನುವಂತೆ ಮೆಹಂದಿ ರಂಗೇರುವ ಸುಖಾನುಭವದ ರಮ್ಯತೆ ವರ್ಣಿಸುವುದೇನು? ಪತ್ನಿಯರು ತಮ್ಮ ತಮ್ಮ ಅನುರಾಗವನ್ನು ವೃತಾಚರಣೆ, ಉಪವಾಸ, ಚಂದ್ರನನ್ನು ಸಾರಣಿಯಲ್ಲಿ ನೋಡಿ ಹಾಗೇ ಪತಿಯ ಮುಖವನ್ನೂ ನೋಡಿ ಅವನ ಆಯುರಾರೋಗ್ಯ ಚಂದ್ರನ ಪ್ರಕಾಶದಂತೆ ಬೆಳಗುತ್ತಿರಲಿ ಎಂದು ಪ್ರಾರ್ಥಿಸಿದರೆ, ಗಂಡ ದಿನವಿಡೀ ಉಪವಾಸವಿರುವ ತನ್ನ ಸಂಗಾತಿಗೆ ನೀರು ಕುಡಿಸಿ, ಬಾಯಿಗೆ ಸಿಹಿ ತಿನಿಸುವ ಮೂಲಕ ಅವಳ ವೃತವನ್ನು ಮುರಿಯುತ್ತಾನೆ. ಇದನ್ನೆಲ್ಲ ನೋಡುವಾಗ ಕುವೆಂಪು ಗೀತೆ ಕಾಡುತ್ತದೆ –“ ತನುವು ನಿನ್ನದು, ಮನವು ನಿನ್ನದು, ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೇ ನನ್ನದು.” ಅಬ್ಬಾ…ಮೈ ಮನಸ್ಸು ರೋಮಾಂಚನಗೊಳ್ಳುವ ಸಾಲುಗಳು. ಬದುಕು ಹೀಗೇ ಇದ್ದರೆ ಎಂಥ ಚೆಂದವಿರುತ್ತಿತ್ತು!
ಪತಿಯ ಆಯುರಾರೋಗ್ಯದ ಸಂಕಲ್ಪದಿಂದ ಪ್ರತಿಯೊಬ್ಬ ಸುಮಂಗಲಿಯರು ಆಚರಿಸುವ ’ಕರವಾ ಚೌತ್’ ಆಚರಣೆಯನ್ನು ಬಾಲಿವುಡ್ ಇನ್ನಷ್ಟು ರೊಮ್ಯಾಂಟಿಕ್ ಬಣ್ಣ ಬಳಿದು ಕಚಗುಳಿ ನೀಡುವ ಹಬ್ಬವನ್ನಾಗಿಸಿದೆ. ಹೆಣ್ಣಿನ ಶೋಷಣೆಯನ್ನು “ಪ್ರೇಮದ ಪರಮಾವಧಿ” ಎಂಬಂತೆ ವೈಭವೀರಿಕರಿಸಿದೆ. ಅದೇ ರೀತಿ ಮೆಹಂದಿ, ಸಿಂಗಾರ, ದುಬಾರಿ ಸೀರೆಗಳು, ಆಭರಣಗಳು ಮತ್ತು ಬ್ಯೂಟಿ ಪಾರ್ಲರ್ಗಳ ಜಾಹೀರಾತುಗಳು ಹೆಣ್ಣನ್ನು “ಪತಿಯನ್ನು ಮೆಚ್ಚಿಸುವ ಸೌಂದರ್ಯದ ವಸ್ತುವನ್ನಾಗಿ” ಬಿಂಬಿಸುತ್ತವೆ. ಉತ್ತರಭಾರತದ ಗೆಳತಿಯರಿಗೆ ಒಂದು ದಶಕದ ಹಿಂದೆ ನಾನು ಈ ಮಾತು ಹೇಳಿದ್ದರೆ ನನ್ನನ್ನು ಬೈಯ್ಯುತ್ತಿದ್ದರೇನೋ ಈಗ ಕಾಲ ಬದಲಾಗುತ್ತಿದೆ.
ಹಿಂದಿನ ಕಾಲದಲ್ಲಿ ಶರತ್ಕಾಲದ ಆರಂಭದ ದಿನಗಳಲ್ಲಿ ರಾಜ ಮಹಾರಾಜರು ದಿಗ್ವಿಜಯಕ್ಕೆ ಹೊರಡುತ್ತಿದ್ದರಂತೆ. ಇನ್ನು ಬರುವುದು ಮೂರುತಿಂಗಳೋ – ಆರುತಿಂಗಳೋ. ಆಗ ಅವರ ರಾಣಿಯರು ಪತಿಯ ದೀರ್ಘಾಯುಷ್ಯ, ಆರೋಗ್ಯ-ಕೀರ್ತಿಗಾಗಿ ಉಪವಾಸವಿಟ್ಟು ಸಂಜೆ ಚಂದ್ರನನ್ನು ಪೂಜಿಸಿ ಅರ್ಘ್ಯನೀಡಿ ವೃತವನ್ನು ಪೂರ್ಣಗೊಳಿಸುತ್ತಿದ್ದರು. ಹೀಗೆ ಕರವಾ ಚೌತ್ ಆಚಾರಣೆ ಆರಂಭಿಸಿರಬಹುದು ಎನ್ನುತ್ತಾರೆ. ಪಂಜಾಬ- ಉತ್ತರಪ್ರದೇಶದಲ್ಲಿ ರಾಬಿ – ಖಾರೀಫ್ ಬೆಳೆ ಬರುವ ಸುಗ್ಗಿ ಕಾಲ. ದೊಡ್ಡ ದೊಡ್ದ ಮಣ್ಣಿನ ’ಕರವಾ’ (ಮಡಕೆ) ಗಳಲ್ಲಿ ಗೋಧಿಯನ್ನು ಶೇಖರಿಸಿಡುತ್ತಿದ್ದರು. ಸುಗ್ಗಿಯ ದ್ಯೋತಕವಾಗಿ ’ಕರವಾ ಚೌತ್’ ದಂದು ಮಣ್ಣಿನ ಮಡಿಕೆಯಲ್ಲಿ ಗೋಧಿಹಾಕಿ , ದುಡ್ಡು, ಸಿಹಿಯನ್ನು ಇಟ್ಟು ಬಾಗಿನ ಕೋಡುವ ಪದ್ಧತಿಯಿದೆ.
ನಮ್ಮಲ್ಲಿ ಗೌರಿಹಬ್ಬ ನಾಗರಪಂಚಮಿಯಂತೆ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳಿಗೆ ತವರಿನಿಂದ ಯಥೇಚ್ಚವಾಗಿ ಉಡುಗೊರೆ, ಮಿಠಾಯಿ, ಹಣ್ಣು ಹಂಪಲು , ಹೊಸ ಸೀರೆ, ಸೌಭಾಗ್ಯದ (ಶೃಂಗಾರ) ಸಾಮಗ್ರಿ ಎಲ್ಲ ಬರುತ್ತದೆ. ಸಕ್ಕರೆ ಅಚ್ಚಿನಿಂದ ತಯಾರಿಸಿದ ’ಕರವಾ’ ದಲ್ಲಿ ಸಕ್ಕರೆ, ಡ್ರೈಫ್ರೂಟ್ ರೂಪಾಯಿ ತುಂಬಿ ಉಡುಗೊರೆಯೊಂದಿಗೆ ನೀಡುತ್ತಾರೆ. ಅತ್ತೆ ಸೊಸೆಗೂ , ಸೊಸೆ ಅತ್ತೆಗೂ ಏನಾದರೂ ಉಡುಗೊರೆ ನೀಡಿ ಬಾಗಿನ ಕೊಡುತ್ತಾರೆ. ಅತ್ತೆ ಸೊಸೆಯರ ಬಾಂಧವ್ಯ ಮಧುರವಾಗಿರಲಿ ಎಂದು ಹುಟ್ಟಿಕೊಂಡಿರಬೇಕು ಈ ಪದ್ಧತಿ.
ಪಂಜಾಬಿಗಳು, ರಾಜಸ್ಥಾನಿಗಳು, ಉತ್ತರಪ್ರದೇಶದ ಲಕ್ನೋ, ಮೇರಠ ( ಮೀರತ್), ಮಧ್ಯಪ್ರದೇಶ ಮುಂತಾದೆಡೆಗಳ ಆಚರಣೆಗಳಲ್ಲಿ ಭಿನ್ನತೆಯಿದೆ. ಉದ್ದೇಶ ಒಂದೇ. ನಾ ಕಂಡ ಪಂಜಾಬಿಗಳು ಬೆಳಗಿನ ನಾಲ್ಕಕ್ಕೆ -ಸೂರ್ಯೋದಯಕ್ಕಿಂತ ಮುನ್ನ ಎದ್ದು, ಹಾಲಿನಲ್ಲಿ ಮಾಡಿದ ಶ್ಯಾವಿಗೆ , ಮೂಲಿ ಪರೋಟ ಇತ್ಯಾದಿಯನ್ನು ತಿನ್ನುತ್ತಾರೆ. ಇದನ್ನು ’ಸರಗಿ’ ಎನ್ನುತ್ತಾರೆ. ನವವಧುವಿನ ಮೊದಲ ಕರವಾ ಚೌತ್ ದಂದು ಆತ್ತೆಯೇ ಸರಗಿಯನ್ನು ತಯಾರಿಸುತ್ತಾಳೆ. ಬೆಳಗಿನ ಸರಗಿಯನ್ನು ಸೇವಿಸಿ ಇಡೀ ದಿನ ನೀರನ್ನೂ ಸೇವಿಸದೇ ಸಂಜೆ ಚಂದ್ರನನ್ನು ನೋಡಿ, ಅರ್ಗ್ಯ ಕೊಟ್ಟನಂತರ ಪತಿ ನೀರು ಕುಡಿಸಿ – ಸಿಹಿತಿನಿಸಿ ವೃತವನ್ನು ಬಿಡಿಸುತ್ತಾನೆ.
ರೋಜಾ ಮಾಡಿದಂತೆ ಬೆಳ್ಳಿಗ್ಗೆದ್ದು ಗಡದ್ದಾಗಿ ಸರಗಿ ತಿಂದು ಇಡೀ ದಿನ ಉಪವಾಸ ಎಂದರೇನು ಬಂತು ? ಎಂದು ಕೊಂಕುನುಡಿಯುವವರೂ ಇದ್ದಾರೆ. ನನಗೆ ಆತ್ಮೀಯರಾಗಿದ್ದ ಒಬ್ಬ ರಾಜಸ್ಥಾನಿ ಆಂಟಿ ನಮ್ಮ ಕಡೆ ನಾವು ಸಂಕಷ್ಟಿಗೆ ವೃತವಿಡುವ ಹಾಗೇಯೇ ಸ್ನಾನ ಪೂಜೆ ಮುಗಿಸಿ ಚಹ ಕುಡಿದು ಇಡಿ ದಿನ ಉಪವಾಸ ವಿಡುತ್ತಿದ್ದಳು. ಅವಳೊಂದಿಗೆ ನಾನೂ ಸಂಕಷ್ಟಿ ಉಪವಾಸ ಮಾಡುತ್ತಿದ್ದೆ. ಸಂಜೆ ಕಥೆ ಕೇಳಿ, ಚೌತ್ ಮಾತೆಗೆ ಪೂಜಿಸಿ, ಮತ್ತೆ ಗಣೇಶನನ್ನು ಪೂಜಿಸಿ ಚಂದ್ರನಿಗೆ ಅರ್ಘ್ಯಕೊಟ್ಟು ವೃತ ಮುಗಿಸುತ್ತಿದ್ದೆವು. ಜರಡಿ (ಸಾರಣಿ)ಯಲ್ಲಿ ಚಂದ್ರನನ್ನು ನೋಡುವುದು, ಆಮೇಲೆ ಗಂಡನನ್ನು ನೋಡುವುದು… ಇದೆಲ್ಲ ಪಂಜಾಬಿಗಳಲ್ಲಿದೆ. ಅವತ್ತು ಉದ್ದಿನ ಕಾಳಿನ ದಾಲ್ ಕಡ್ದಾಯವಾಗಿ ಮಾಡ್ತಾರೆ. ಸಿಖ್ಖರು ಕರವಾ ಚೌತ್, ಅಥವಾ ಇನ್ಯಾವುದೇ ಉಪವಾಸ, ಕಠಿಣ ಆಚರಣೆಗಳನ್ನು ನಂಬುವುದಿಲ್ಲ. ಗುರು ನಾನಕ್ ಉಪವಾಸಕ್ರಮವನ್ನು ದೇಹವನ್ನು ಹಿಂಸಿಸುವ ನಿಯಮವಷ್ಟೇ, ದೇವರನ್ನು ನೆನೆಯಲು, ಅವನ ಪ್ರೀತಿಗೆ ಪಾತ್ರರಾಗಲು ಇದೆಲ್ಲ ಬೇಕಿಲ್ಲ ಎನ್ನುತ್ತಾರೆ.
ಇವೆಲ್ಲ ಆಚರಣೆ ನಮ್ಮ ಪಿತೃಪ್ರಧಾನ ವ್ಯವಸ್ಥೆಯ ಹುನ್ನಾರಗಳಷ್ಟೇ..! ಯಾವ ಗಂಡಸಿಗೆ ಪತ್ನಿಗಾಗಿ ವೃತವಿಡುವ ಸಂಪ್ರದಾಯವನ್ನು ಮನುವಾದದಲ್ಲಿ ಹೇಳಿದೆ ಹೇಳಿ ? ಹೆಂಡತಿ ಉಪವಾಸದಲ್ಲಿ ಒಂದು ಗುಟುಕು ನೀರೂ ಕುಡಿದಿರದಿದ್ದರೂ ಗಂಡನಿಗಾಗಿ ಬೆಡ್ ಟೀ ಮಾಡಿ ಎಬ್ಬಿಸಬೇಕು, ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಕಳಿಸಬೇಕು, ತಿಂಡಿ ಮಾಡಬೇಕು, ಉಳಿದವರಿಗೆಲ್ಲ ಅಡುಗೆ ಮಾಡಿ ಬಡಿಸಿ ತಾನು ಮಾತ್ರ ತನ್ನ ದೀರ್ಘ ಮುತ್ತೈದೆತನದ ಹಂಬಲಕ್ಕಾಗಿ ಉಪವಾಸವಿಡಬೇಕು. ಸಂಜೆಗೆ ಪಕ್ವಾನ್ನಗಳನ್ನು ಮಾಡಿ ದೇವರ ಹೆಸರಿನಲ್ಲಿ ನೈವೇದ್ಯಮಾಡಿ ಮನೆಯ ಯಜಮಾನನಿಗೆ ಉಣಿಸಬೇಕು. ಮತ್ತೆ ಅವನ ಸಹಚರ್ಯ, ಸಾಂಗತ್ಯವೇ ತನ್ನ ಸ್ತ್ರೀ ಧರ್ಮವೆಂದು ಅನುಸರಿಸಬೇಕು. ಪತಿಗೇನಾದರೂ ಆದರೆ ಅದಕ್ಕೆ ಪತ್ನಿ ವೃತನೇಮಗಳನ್ನು ಮಾಡದೇ ಇದ್ದುದೇ ಕಾರಣ ಎಂದು ಶರಾ ಬರೆಯುವ ಕುರುಡು ನಂಬಿಕೆ. ಎಲ್ಲ ಪರಿಸ್ಥಿತಿಗಳಿಗೂ ಅವಳನ್ನೇ ಪರೀಕ್ಷೆಗೆ ಒಡ್ದಬೇಕು. ಹೆಣ್ಣಿಗೆಷ್ಟು ಸಂಯಮ, ತಾಳ್ಮೆ. ಮತ್ತದರಲಲ್ಲೇ ಧನ್ಯತೆಯ ಬದುಕು ಎಂದು ಚೌಕಟ್ಟು ಹಾಕಿ ಕೂರಿಸಿದವರು ಮನುವಾದಿಗಳು.
ಈ ನಂಬಿಕೆ ಸದ್ಗತಿಯ ಹಂಬಲವಿರದಿದ್ದರೆ ಸುನೀತಾ ಯಾಕೆ ಒದೆಸಿಕೊಳ್ಳುತ್ತಿದ್ದಳು. ಅವಳಿಗೆಷ್ಟೋ ಹೇಳಿದೆ ಪತಿಯನ್ನು ಬೆದರಿಸಲಿಕ್ಕಾದರೂ ದರೋಗಾನ ಹತ್ತಿರ ಒಂದು ಕಂಪ್ಲೇಟ್ ಕೊಡು ಅಂದರೂ ಆಕೆ ಕೊಡಲಾರದ ಸಹಧರ್ಮಿಣಿ. ಸಹಿಷ್ಣು. ತನಗೆ ಒದೆಬಿದ್ದಾಗೆಲ್ಲ ಅವನಿಗೆ ನಾಲ್ಕು ಒದೆ ಕೊಟ್ಟರೆ ಸರಿಯಾಗ್ತಾನೆ ಎಂದೂ ತಾನೆ ಸಮಾಧಾನಗೊಳ್ಳುವ ಸುನೀತಾ ಈವರೆಗೂ ಕೊತ್ವಾಲಿಗೆ ಹೋಗಿ ರಪಟ್ (ರಿಪೋರ್ಟ್) ಕೂಡ ಬರೆದಿಲ್ಲ.
“ ರಪಟ್ ಲಿಖ್ವಾವೂಂಗಿ…ಚಾರ್ ಲಾತೇಂ ಪಡೇಗಿ ತೋ ಪತಾ ಲಗೇಗಾ” ಎನ್ನುತ್ತಲೇ ದಿನದೂಡುತ್ತಾಳೆಯೇ ಹೊರತು ಮಾಡುವುದಿಲ್ಲ.
ಆಧುನಿಕ ಕಾಲದ ಇವತ್ತಿನ ಯುವವರ್ಗ ಸಮಾನತೆಯನ್ನು ನಂಬುತ್ತದೆ. ಯುವ ಹೆಂಡತಿಯೊಂದಿಗೆ ಯುವ ಗಂಡನೂ ಉಪವಾಸ ಇಡತೊಡಗಿದ್ದಾನೆ. ಅದೊಂದು ರೊಮ್ಯಾಂಟಿಕ್ ಪರ್ವ ಅವರಿಗೆ. ಹಳೆಯ ಕಾಲದವರಿಗೆ ಅದು ಬಿಡಲಾರದ ನೇಮ. ನಡುವಿನ ಇನ್ನೊಂದು ವರ್ಗದವರಿಗೆ ಆಚರಿಸಲೇಬೇಕಾಗಿರುವ ಒತ್ತಡವೂ ಇರುತ್ತದೆ. ಗಂಡನಿಗಾಗಿ ಉಪವಾಸ ಇಡದವಳನ್ನು ಜನ ಏನೆನ್ನಬಹುದು? ಲೋಗ್ ಕ್ಯಾ ಕಹೇಂಗೆ ? ಎನ್ನುವ ಒತ್ತಡ. ಅನಿವಾರ್ಯತೆ. ಇನ್ನು ಕೆಲ ವಿಚಾರವಂತ ಮಹಿಳೆಯರು ವೃತ ನೇಮಗಳೆಲ್ಲ ಮನಸ್ಸಿಗೆ ಸಂಬಂಧಿಸಿದ್ದು, ಖಾಸಗಿ ಆಯ್ಕೆ ಎಂದು ಕೈಬಿಟ್ಟಿದ್ದಾರೆ ಅಥವಾ ಕೈಬಿಡುತ್ತಿದ್ದಾರೆ.
ಸೊಸೆ ಹೇಳುತ್ತಿದ್ದಳು ಆಕೆಯ ಗೆಳೆತಿಯರು ಕರವಾ ಚೌತ್ ಮಾಡುತ್ತಿಲ್ಲವಂತೆ. ಕಾರಣ ಈಗ “ಸರಗಿ” ಕೊಡುವ ಕಾಳಜಿ ಮಾಡುವ ಅತ್ತೆಯರಿಲ್ಲ (ಅಂತಹ ಸೊಸೆಯರೂ ಇಲ್ಲ ಬಿಡಿ). ನ್ಯೂಕ್ಲಿಯರ್ ಕುಟುಂಬಗಳಲ್ಲಿ ಪದ್ಧತಿ ಸಂಪ್ರದಾಯಗಳು ಮುಖ್ಯವೆನಿಸುತ್ತಿಲ್ಲ. AI ಬಂದು ಕೆಲಸ ಕಳೆದುಕೊಳ್ಳುತ್ತಿರುವವರಿಗೆ ವೃತ ಮಾಡಿ ಏನು ಲಾಭ? ನೌಕರಿ ಉಳಿದರೆ ಎಲ್ಲ ಸಂಭ್ರಮ ತಾನೆ? ಎಲ್ಲಕ್ಕಿಂತ ಹೆಚ್ಚಾಗಿ ಟೈಮಿಲ್ಲ. ಅದೂ ನಿಜ ಎನಿಸಿತು.

ಹಾಗೆ ನೋಡಿದರೆ ’ಕರವಾ ಚೌತ್’ಗೆ ರೊಮ್ಯಾಂಟಿಕ್ ಆಯಾಮ ನೀಡಿದ್ದು ಈಗಿನ ಯುವಪೀಳಿಗೆ ಮತ್ತು ಬಾಲಿವುಡ್. ಪೇಟೆಯಲ್ಲಿ ಗೆಳೆಯ ಗೆಳತಿಯರದೇ ಒಂದು ಲೋಕಸೃಷ್ಟಿಯಾಗಿರುತ್ತದೆ. ಈ ಒಂದು ಸುಂದರ ಕ್ಷಣಕ್ಕಾಗಿ ವರುಷವೆಲ್ಲಾ ಕಾಯುತ್ತಾರೆ. ವಾರದಿಂದಲೇ ಪಾರ್ಲರಿನಲ್ಲಿ ರಶ್ ಶುರುವಾಗಿರುತ್ತದೆ. ಹೇರ್ ಕಟ್ಟು, ಫೇಶಿಯಲ್ ಅವನಿಗಾಗಿ ಎನೆಲ್ಲ ಸಿಂಗಾರಗೊಳ್ಳುವ ಸಂಭ್ರಮ ಅವಳದು! ಇನ್ನು ಮಾರ್ಕೆಟ್ಟಿನಲ್ಲಿ ಮೆಹಂದಿ ರಚಿಸುವವರ ಜಾತ್ರೆಯೇ ನೆರೆದಿರುತ್ತದೆ. ಒಂದೆಡೆ ಶರತ್ಕಾಲದ ಹಬ್ಬದ ಸೇಲ್. ಒಂದೊಂದು ಕೈಗೆ ಐನೂರು ರುಪಾಯಿಯಿಂದ ರೇಟ್ ಶುರುವಾಗುತ್ತದೆ. ಗೆಳೆಯ ಗೆಳತಿಯರ ಸಂಭ್ರಮ ನೋಡಬೇಕು. ಅವಳ ಜೊತೆ ತಾನೂ ಕ್ಯೂ ಕೂತು, ಅವಳ ಪರ್ಸು, ಮೊಬೈಲ್ ಸಾಮಾನು ತಾನು ನೊಡಿಕೊಳ್ಳುತ್ತ, ಆಕೆ ಎರಡೂಕೈಗೆ ಮೆಹಂದಿ ಹಚ್ಚಿಸಿಕೊಳ್ಳುವುದರಲ್ಲೆ ಪುಳಕಗೊಳ್ಳುವ ಇಬ್ಬರ ಮನಸ್ಸುಗಳಲ್ಲೂ ಮುಂದಿನ ಬದುಕಿನ ಸುಂದರ ಕನಸುಗಳ ಚಿತ್ತಾರವಿರುತ್ತದೆ. ಮೆಹಂದಿ ರಚಿಸಿದ ಕೈಯಲ್ಲಿ ತಿನ್ನಲಾಗದ ಅವಳಿಗೆ ಅವನು ಕೂತು ಭಟೂರಾ ತಿನ್ನುಸೋದು, ನೀರು ಕುಡಿಸೋದು, ಹಾರಾಡುವ ಕೂದಲನ್ನು ಹಿಡಿದು ಕ್ಲಿಪ್ ಹಾಕುವ ಕೆಲಸವೂ ಅವನದು….! ಚಾಟ್ ದೊನ್ನೆಯನ್ನು ಹಿಡಿದುಕೊಂಡೇ ಓಡಾಡುತ್ತ ತಾನೂ ತಿನ್ನುತ್ತ ಅವಳಿಗೂ ತಿನ್ನಿಸುವ ಪ್ರಣಯಿಗಳ ಸಾಮಿಪ್ಯ – ಸಲ್ಲಾಪದ ಸವಿಯನ್ನು ಈ ಕರವಾ ಚೌತ್ ತುಂಬಿಕೊಡುತ್ತದೆ. ಮೊದಲೆಲ್ಲ ಸಿಡಿಮಿಡಿಗೊಳ್ಳುವ ಅವಳು ಬಾಯಿಮುಚ್ಚಿಕೊಂಡು ಮುಸಿಮುಸಿ ನಗುವಿನಲ್ಲಿ ಅವನು ಮಾಡುವ ಎಲ್ಲ ಪುಟ್ಟ ಪುಟ್ಟ ಕಾಳಜಿಯನ್ನೂ ಮನಸಾರೆ ಸವಿಯುತ್ತಾಳೆ. ಅಪೂರ್ವವಾದ ಟುಗೆದರ್ನೆಸ್ಸ್ , ಯಾವಾಗಲೂ ಅವನು ತನ್ನೊಂದಿಗೇ ಹೀಗೆ ಇದ್ದುಬಿಡಲಿ “ಅಬ್ ತುಮ್ ಹೀ ಹೋ, ಮೇರೆ ತುಮ್ ಹೀ ಹೋ “ ಅನ್ನುವ ಅವಳು.“ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೆ ನನ್ನದು “ಎನ್ನುವ ಅವನು. ಇಂಥ ಹಿತವಾದ ರೋಮಾಂಟಿಕ್ ಅನುಭವ ನೀಡುವ ಈ ಹಬ್ಬ ಎಲ್ಲರಿಗೂ ಪ್ರಿಯವೇ.
ಸರೋಜಿನಿ ಮಾರ್ಕೆಟ್ಟಿನಲ್ಲಿ ವಿಂಡೋ ಶಾಪಿಂಗ್ ಮಾಡುತ್ತಾ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾ ಪುಳಕದಲ್ಲಿ ಕಳೆದುಹೋದೆ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ




