ದಿಲ್ಲಿಮಾತು | ಟ್ರೋಲ್ ಮಾಡುವುದರಿಂದ ವಾಸ್ತವ ಬದಲಾಗದು!

Date:

“ಅತ್ಯಾಚಾರಕ್ಕೊಳಗಾದ ಮಹಿಳೆ ಬದುಕಿ ಉಳಿದರೆ, ಅವಳ ಗೌರವ ಕಡಿಮೆ ಆಗುತ್ತದೆಯೇ ? ಬದುಕುವುದಕ್ಕಿಂತ ಸಾಯುವ ನಿರ್ಧಾರವೇ  ಧೈರ್ಯವಂತಿಕೆಯದ್ದೇ ?” ಹೀಗೆ ಸ್ವರಾ ಭಾಸ್ಕರ ಎತ್ತಿದ ದೇಹ ರಾಜಕಾರಣದಂತಹ ಗಂಭೀರ ವಿಷಯವನ್ನು ಸರಿಯಾದ ರೀತಿಯಲ್ಲಿ ಗ್ರಹಿಸದೇ, ಚರ್ಚಿಸಲು ಹೋಗದೇ ಸಾಮಾಜಿಕ ಜಾಲತಾಣಗಳಲ್ಲಿ ವಿವಾದವನ್ನು ಟ್ರೋಲ್‌ಗಳ ಮೂಲಕ ತೀವ್ರಗೊಳಿಸಿದರು.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡ ಕಂಡವರ ಗೋಡೆಗಳಿಗೆ ಹೋಗಿ ತಮಗೆ ಹಿಡಿಸಿದ ವಿಚಾರಗಳಿಗೆ,  ತಮ್ಮ ನಂಬಿಕೆ ಸಿದ್ಧಾಂತಳಿಗೆ ವಿರುದ್ಧವಾದ ಭಿನ್ನ ದನಿಗಳನ್ನು ಸಹಿಸದ ಜನ ನಕಲಿ ಖಾತೆಗಳ ಮೂಲಕ ಬರೆದವರನ್ನು ಹಣಿಯುವ, ಅವಾಚ್ಯ ಶಬ್ದಗಳಿಂದ ಬೈಯ್ಯುವವರ ದೊಡ್ದ ದಂಡೇ ಸೃಷ್ಟಿಯಾಗಿದೆ.  ಇವರು ಯಾರ ಪರಿಚಿತರೂ ಅಲ್ಲ, ಬೇಕಾದವರೂ ಅಲ್ಲ, ಗೆಳೆಯರಂತೂ ಮೊದಲೇ ಅಲ್ಲ. ನಕಲಿ ಐಡಿಗಳನ್ನು ಸೃಷ್ಟಿಸಿಕೊಂಡು ಹೊಂಚುಹಾಕಿ ಕುಳಿತಿರುವ ಹೇಡಿಗಳು. ಹಾಗಾದರೆ ಇವರಿಗೆಲ್ಲ ಇಂತಹ  ಅಸಹನೆ, ತಾವೇ ಸರಿ ಎನ್ನುವ ಭ್ರಮೆ, ಯಾರನ್ನು ಬೇಕಾದರೂ ಬೈಯ್ಯಬಹುದು ಎನ್ನುವ ಕೆಟ್ಟ ಚಾಳಿ ಯಾಕೆ ? ಬೇರೆ ಕೆಲಸವಿಲ್ಲವೇ ಇವರಿಗೆ?

- Advertisement -

ಒಂದೆರಡು ದಿನಗಳ ಹಿಂದೆ ಬರಹಗಾರ, ರಂಗಕರ್ಮಿ, ಚಿಂತಕರಾದ ಯೋಗೇಶ್ ಮಾಸ್ಟರ್ ಅವರ ಎಳೆಂಟು ವರ್ಷಗಳ ಹಿಂದಿನ ಯಾವುದೋ ಕಾರ್ಯಕ್ರಮದಲ್ಲಿ ’ವೇಶ್ಯಾವಾಟಿಕೆ ಏಕೆ ಕಾನೂನು ಬದ್ಧವಾಗಬೇಕು’ ಎಂದು ಚರ್ಚಿಸಲಾಗಿದೆ ಎನ್ನುವ ಸಾಲುಗಳಲ್ಲಿ ತಮಗೆ ಬೇಕಾದ ಪ್ರಚೋದಕ ಸಾಲುಗಳನ್ನು ಎತ್ತಿಕೊಂಡು ಫೇಸಬುಕ್‍ಗೆ ಹಾಕಿ ಸಂಚಲವನ್ನುಂಟು ಮಾಡಿ  ಅವರ ಚಾರಿತ್ರ್ಯವಧೆಗೆ ಪ್ರಯತ್ನಿಸಿದ್ದನ್ನು ನಾವೆಲ್ಲ ನೋಡಿದೆವು. ಅವರನ್ನು ಬಲ್ಲವರೂ ಮುಗಿಬಿದ್ದರು. ನಾನು ಉಮರ್  ಖಾಲಿದ್ ಬಗ್ಗೆ ಬರೆದರೆ ನೂರಾರು ನಕಲಿ ಮುಖಗಳು ಬಂದು ಬರೆದವರನ್ನು ಹಿಗ್ಗಾಮುಗ್ಗಾ  ಹಳಿಯತೊಡಗುತ್ತಾರೆ. ಅಸಹ್ಯ  ಅಸಭ್ಯ ಭಾಷೆಗಳಿಂದ ಕಾಮೆಂಟ್ ಹಾಕುತ್ತಾರೆ. ಅವರು ಯಾರೂ ಪರಿಚಿತರಲ್ಲ. ಹೊಂಚುಹಾಕಿ ಕುಳಿತ ಮುಖೇಡಿಗಳು.      

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ...

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

ಇದೇ ರೀತಿ ಇದೀಗ ಖ್ಯಾತ ಲೇಖಕಿ ಸಾಮಾಜಿಕ ಹೋರಾಟಗಾರ್ತಿ ಅರುಂಧತಿ ರಾಯ್ ಅವರ ಹೊಸ ಪುಸ್ತಕ “ಮದರ್ ಮೇರಿ ಕಮ್ಸ್ ಟು ಮಿ” ಕನ್ನಡಕ್ಕೆ ಅನುವಾದಗೊಂಡಿರುವ ಸಂದರ್ಭದಲ್ಲಿ ಸಾಮಾಜಿಕ ತಾಣದಲ್ಲಿ ವಿರೋಧದ ಗಾಳಿ ತೀವ್ರಗೊಂಡಿದೆ. ಬಲಪಂಥೀಯ ಸಂಘಟನೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ‘ಟುಕಡೆ-ಟುಕಡೆ ಗ್ಯಾಂಗ್‌ನ ನಾಯಕಿ’, ‘ಭಾರತ ವಿರೋಧಿ’ ಮತ್ತು ‘ಅರ್ಬನ್ ನಕ್ಸಲ್’ ಎಂದು ಸತತವಾಗಿ ಬಿಂಬಿಸಲಾಯಿತು.  ದೇಶ ಮತ್ತು ವಿದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅವರ ಉಪನ್ಯಾಸಗಳು ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು. 

ಈಗ ಕರ್ನಾಟದಲ್ಲಿಯೂ ಇದೇ  ಬಲಪಂಥೀಯ ಆಲೋಚಕರು, ಮೋದಿ ಸರ್ಕಾರದ ಸಮರ್ಥಕ ಮಬ್ಬಕ್ತರು  ಬಾಯಿಗೆ ಬಂದಂತೆ ಪುಸ್ತಕವನ್ನು ವಿರೋಧಿಸುವುದಲ್ಲದೇ ಪ್ರಕಾಶಕರನ್ನೂ ಬಾಯಿಗೆ ಬಂದಂತೆ ಟೀಕಿಸುತ್ತಿದ್ದಾರೆ. ಕೆಲವರು ಪುಸ್ತಕಗಳನ್ನು ಸುಟ್ಟುಹಾಕುವ ಮಾತು ಹೇಳುತ್ತಿರುವುದನ್ನು ನೋಡಿದಾಗ  ಹಿಟ್ಲರನ ಕಾಲದಲ್ಲಿ ನಾಝಿಗಳು ಲಕ್ಷಾಂತರ ಪುಸ್ತಕಗಳನ್ನು ಸುಟ್ಟುಹಾಕಿದ ಘಟನೆ ನೆನಪಾಗುತ್ತದೆ.  ಪುಸ್ತಕಗಳನ್ನು ಸುಡುವುದಷ್ಟೇ ಅಲ್ಲ ಸಾಹಿತ್ಯಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದು ಪ್ರಾಣ ಬೆದರಿಕೆ ಒಡ್ಡಿದ್ದರಿಂದ ಜರ್ಮನಿಯ  ನೂರಾರು ಬರಹಗಾರರು  ಚಿಂತಕರು ದೇಶ ತೊರೆದು ಹೋಗಬೇಕಾಯಿತು. ಅವರಲ್ಲಿ ಅಲ್ಬರ್ಟ್ ಐನಸ್ಟೀನ್, ಬರ್ಟೋಲ್ಟ್ ಬ್ರೆಕ್ಟ್, ಎರಿಕ್ ಮಾರಿಯಾ ರಿಮಾರ್ಕ್ ಅಂತಹ ಲೇಖಕರಿದ್ದರು. 

ಇದೆಲ್ಲವನ್ನು ನೋಡಿಯೇ ೧೯ ನೇ ಶತಮಾನದ ಜರ್ಮನ್ ಕವಿ ಹೈನ್ರಿಚ್ ಹೈನ್ (Heinrich Heine)  1821 ರಲ್ಲೇ ಬರೆದಿದ್ದ ಸಾಲುಗಳು ಈ ಘಟನೆಯ ಮೂಲಕ ನಿಜವಾದವು:

“ಎಲ್ಲಿ ಪುಸ್ತಕಗಳನ್ನು ಸುಡುತ್ತಾರೋ, ಕಾಲಕ್ರಮೇಣ ಅಲ್ಲಿ ಮನುಷ್ಯರನ್ನೂ ಸುಡುತ್ತಾರೆ.” (Where they burn books, they will also, in the end, burn human beings.)

ಹೈನ್ ಹೇಳಿದಂತೆಯೇ, 1933ರಲ್ಲಿ ಪುಸ್ತಕಗಳನ್ನು ಸುಟ್ಟ ನಾಝಿ ಆಡಳಿತ, ಮುಂದೆ ‘ಹೋಲೋಕಾಸ್ಟ್’ (Holocaust) ಮೂಲಕ ಕೋಟ್ಯಂತರ ಯಹೂದಿಗಳನ್ನು ಮತ್ತು ವಿರೋಧಿಗಳನ್ನು ಗ್ಯಾಸ್ ಚೇಂಬರ್‌ಗಳಲ್ಲಿ ಹಾಕಿ ಕೊಂದಿತು.

ಇತ್ತೀಚೆಗೆ ಆಗಸ್ಟ್ 31ರಂದು ದೆಹಲಿಯ India International Centreನಲ್ಲಿ ನಡೆದ Woman, Life, Freedom ಕಾರ್ಯಕ್ರಮದಲ್ಲಿ ಸ್ವರಾ ಭಾಸ್ಕರ್, 2018ರ Padmaavat ಚಿತ್ರದ ಜೌಹರ್ ದೃಶ್ಯವನ್ನು ಪ್ರಸ್ತಾಪಿಸುತ್ತ ಚಿತ್ರದ ಅಂತ್ಯದಲ್ಲಿ ನೂರಾರು ಮಹಿಳೆಯರು ಜೌಹರ್ ಮಾಡುವುದನ್ನು ನೋಡಿದಾಗ ತಮಗೆ ಅನಿಸಿದ್ದನ್ನು ಹಂಚಿಕೊಂಡಿದ್ದರು. ಅತ್ಯಾಚಾರದಿಂದ ಬದುಕುಳಿದ ಮಹಿಳೆಗೆ ಆ ದೃಶ್ಯ ಯಾವ ಸಂದೇಶವನ್ನು ನೀಡಬಲ್ಲದು ಎಂಬುದೇ ಆಕೆಯ ಕಾಳಜಿಯಾಗಿತ್ತು.  ಆದರೆ ಆಗಿದ್ದೇ ಬೇರೆ. ಜನ ಅವಾಚ್ಯ ಶಬ್ದಗಳಿಂದ ಸ್ವರಾಳನ್ನು ಟ್ರೋಲ್ ಮಾಡಿದರು.    

ಆಕೆ ಎತ್ತಿದ ಪ್ರಶ್ನೆಯ ಮುಖ್ಯ ಉದ್ದೇಶ ಅತ್ಯಾಚಾರಕ್ಕೊಳಗಾದ ಮಹಿಳೆಯರ ಅಸ್ಮಿತೆ ಕುರಿತಾಗಿತ್ತು. “ಅತ್ಯಾಚಾರಕ್ಕೊಳಗಾದ ಮಹಿಳೆ ಬದುಕಿ ಉಳಿದರೆ, ಅವಳ ಗೌರವ ಕಡಿಮೆ ಆಗುತ್ತದೆಯೇ ? ಬದುಕುವುದಕ್ಕಿಂತ ಸಾಯುವ ನಿರ್ಧಾರವೇ  ಧೈರ್ಯವಂತಿಕೆಯದ್ದೇ ?” ಹೀಗೆ ಸ್ವರಾ ಭಾಸ್ಕರ ಎತ್ತಿದ ದೇಹ ರಾಜಕಾರಣದಂತಹ ಗಂಭೀರ ವಿಷಯವನ್ನು ಸರಿಯಾದ ರೀತಿಯಲ್ಲಿ ಗ್ರಹಿಸದೇ, ಚರ್ಚಿಸಲು ಹೋಗದೇ ಸಾಮಾಜಿಕ ಜಾಲತಾಣಗಳಲ್ಲಿ ವಿವಾದವನ್ನು ಟ್ರೋಲ್‌ಗಳ ಮೂಲಕ ತೀವ್ರಗೊಳಿಸಿದರು.

ಸ್ವರಾ ನಿಜವಾಗಿ ಏನು ಟೀಕಿಸುತ್ತಿದ್ದಾರೆ ? ಜನರೇಕೆ ಮುಗಿಬೀಳಬೇಕು ? ಅಷ್ಟಕ್ಕೂ “ಪದ್ಮಾವತ್” ಕಾವ್ಯರೂಪಕದ ಮಹಾಕಾವ್ಯವನ್ನು ಮಲಿಕ್ ಮೊಹಮ್ಮದ್ ಜಾಯಸಿ ಎಂಬ ಕವಿ ಕ್ರಿ.ಶ. 1540 ರಲ್ಲಿ (ಅವಧಿ ಭಾಷೆಯಲ್ಲಿ) ರಚಿಸಿದ್ದನು.  ಪದ್ಮಾವತಿ ನಿಜವಾಗಿ ಇದ್ದಳೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ  ಖಿಲ್ಜಿಯ ಕೈಗೆ ಸಿಗಬಾರದೆಂದು ರಾಜಪೂತ ಮಹಿಳೆಯರು ಬೆಂಕಿಗೆ ಜಿಗಿದು ಆತ್ಮಾಹುತಿ (ಜೌಹರ್ )  ಮಾಡಿಕೊಂಡಿದ್ದು ನಿಜ. ಅದನ್ನು ಒಂದು ಉದಾಹರಣೆಯಾಗಿ ಸ್ವರಾ ಬಳಸಿಕೊಂಡಿದ್ದರು.  

ಅವರ ಪ್ರಶ್ನೆಯ ಕೇಂದ್ರಬಿಂದು ಮಹಿಳೆಯ ‘ಗೌರವ’ವನ್ನು ಆಕೆಯ ದೇಹ ಮತ್ತು ಲೈಂಗಿಕತೆಯೊಂದಿಗೆ ಏಕೆ ಕಟ್ಟಿಹಾಕಬೇಕು ? ಎಂಬುದಾಗಿತ್ತು. ಅಂದರೆ, ಒಬ್ಬ ಮಹಿಳೆಯ ಮೇಲೆ ಲೈಂಗಿಕ ಹಿಂಸೆ ನಡೆದರೂ ಆಕೆಯ ಮಾನವೀಯತೆ, ಗೌರವ, ಬದುಕುವ ಹಕ್ಕು ಕೊನೆಗೊಳ್ಳುವುದಿಲ್ಲ ಎಂಬುದು ಅವರ ವಾದ.

ವಿರೋಧಿಸುವವರ ಪ್ರಮುಖ ವಾದವೆಂದರೆ ಜೌಹರ್ ಅನ್ನು ಇಂದಿನ ನೈತಿಕ ಮಾನದಂಡಗಳಿಂದ  ಮಾತ್ರ ಅಳೆಯಬಾರದು; ಅದನ್ನು ಅದರ ಐತಿಹಾಸಿಕ ಸಂದರ್ಭದಲ್ಲಿಯೇ ನೋಡಬೇಕು ಎಂಬುದು.  ಸರಿ ಹಾಗೆಯೇ ನೋಡೋಣ. ಕೆಲವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಜೌಹರ್ ಅನ್ನು ತ್ಯಾಗ, ಧೈರ್ಯ ಮತ್ತು ಭಕ್ತಿಯ ಸಂಕೇತವಾಗಿ ನೋಡಬೇಕು ಎಂದು ಪ್ರತಿಪಾದಿಸಿದ್ದಾರೆ. ಅಂದರೆ 1987 ರಲ್ಲಿ ರಾಜಸ್ಥಾನದ ರೂಪ್ ಕಂವರ್ ಎನ್ನುವ ಯುವತಿಯ ವೃದ್ಧ ಪತಿ ಸತ್ತಾಗ ಊರವರು ಆಕೆಯನ್ನು ಶವದೊಂದಿಗೆ ಸಹಗಮನ ಮಾಡಿಸಿ ಆಕೆಯನ್ನು ಜೀವಂತ ಸುಟ್ಟು “ಸತಿ”ದೇವಿಯಾಗಿಸಿದ ಕ್ರೂರ ಅಮಾನವೀಯ  ಘಟನೆಯನ್ನು ಇಂದು ಸಮರ್ಥಿಸಿಕೊಳ್ಳಬಹುದೇ ?     

ಮಹಿಳೆಯ ದೇಹ ರಾಜಕಾರಣ. ಜಗತ್ತಿನ ಎಲ್ಲ ಕಾಳಗ ಕದನ ದ್ವೇಷ ರಾಜಕಾರಣಗಳಿಗೆ ಮಹಿಳೆಯ ದೇಹವನ್ನೇ ಗುರಿಯಾಗಿಸಿದೆ ಈ  ಪುರುಷಪ್ರಧಾನ ವ್ಯವಸ್ಥೆ ! ಐತಿಹಾಸಿಕ ಜೌಹರ್ ಏಕೆ  ನಡೆಯಿತು, ರೂಪ ಕಂವರಳನ್ನು ಯಾಕೆ ಸತಿಯಾಗಿಸಿತು ಈ ಗಂಡಾಳಿಕೆಯ ಸಮಾಜ ಎಂಬುದು ಚರ್ಚೆಯ ವಿಷಯ.

ಅಂದರೆ, “ಆ ಕಾಲದಲ್ಲಿ ಮಹಿಳೆಯರಿಗೆ ಬೇರೆ ಆಯ್ಕೆಗಳಿದ್ದವೆಯೇ ?” ಎನ್ನುವುದಕ್ಕಿಂತ   “ಇಂದು ನಾವು ಆ ಸಾವನ್ನು ಮಹಿಳೆಯರ ಆದರ್ಶವೆಂದು ಬಿಂಬಿಸಬೇಕೇ?” ಎಂಬ ಪ್ರಶ್ನೆಯನ್ನು ಸ್ವರಾ ಮುಂದಿಟ್ಟಿದ್ದರು. ಅತ್ಯಾಚಾರ ಮತ್ತು ‘ಗೌರವ, ಇಜ್ಜತ್’ ನಡುವಿನ ಸಂಬಂಧವೇ ಚರ್ಚೆಯ ಕೇಂದ್ರಬಿಂದು. ಪಿತೃಪ್ರಭುತ್ವದ ಸಮಾಜದಲ್ಲಿ ಅತ್ಯಾಚಾರವನ್ನು ಕೇವಲ ಮಹಿಳೆಯ ಮೇಲಿನ ಹಿಂಸೆ ಎಂದು ನೋಡುವ ಬದಲು, ಅದನ್ನು ಕುಟುಂಬದ ‘ಗೌರವ’ಕ್ಕೆ ಸಂಬಂಧಿಸಲಾಗುತ್ತದೆ. ಪರಿಣಾಮವಾಗಿ, ಅಪರಾಧ ಮಾಡಿದವನಿಗಿಂತ ಹಿಂಸೆಗೆ ಒಳಗಾದ ಮಹಿಳೆಯ ಮೇಲೆಯೇ ಜಗತ್ತಿನ ಎಲ್ಲ ನಾಚಿಕೆ, ಅಪಮಾನ ಮತ್ತು ಪ್ರಶ್ನೆಗಳ ಭಾರ ಬೀಳುತ್ತದೆ. ಅತ್ಯಂತ ಘೋರ ಅತ್ಯಾಚಾರದ ಬಳಿಕವೂ ಬದುಕುಳಿದು ಸಾವಿನ ಭಯದಲ್ಲಿಯೇ ಬದುಕುತ್ತಿರುವ ಉನ್ನಾವಿನ ಮಗಳನ್ನು ನೆನಪಿಸಿಕೊಳ್ಳಿ.

ಸ್ವರಾ ಪ್ರಶ್ನಿಸುತ್ತಿರುವುದು ಇದೇ.

“ಅವಳ ಮೇಲೆ ಅಪರಾಧ ನಡೆದಿದೆ. ಹಾಗಿದ್ದರೆ ಅವಳೇ ಏಕೆ ತನ್ನ ಬದುಕಿನ ಹಕ್ಕನ್ನು ಕಳೆದುಕೊಳ್ಳಬೇಕು? ”

ಇತ್ತೀಚಿನ ಚರ್ಚೆಯಲ್ಲಿಯೂ ಇದೇ ಅಂಶವನ್ನು ಕೆಲವು ವಿಶ್ಲೇಷಕರು ಮುಂದಿಟ್ಟಿದ್ದಾರೆ—ಲೈಂಗಿಕ ಹಿಂಸೆಯ ನಂತರವೂ ಮಹಿಳೆಯ ಬದುಕು ಮುಗಿಯುವುದಿಲ್ಲ; ಆಕೆಯ ಗೌರವವನ್ನು ಆಕೆಯ ದೇಹದೊಂದಿಗೆ ಸಮೀಕರಿಸುವುದು ಸಮಸ್ಯೆಯ ಮೂಲ ಎಂದು ಹೇಳಿದ್ದಾರೆ.  ಆದರೆ ಅತ್ಯಾಚಾರಕ್ಕೊಳಗಾದ ಒಬ್ಬ ಮಹಿಳೆ ದೂರು ದಾಖಲಿಸಲು ಪೋಲಿಸ್ ಠಾಣೆಗೆ ಹೋದರೆ ರಕ್ಷಣೆ ನೀಡಬೇಕಾದವರೇ ಆಕೆಯನ್ನು “ಭೋಗದ ವಸ್ತು”ವೆಂಬಂತೆ ತಮ್ಮ ತೆವಲಿಗಾಗಿ ಸಂತ್ರಸ್ತೆಯನ್ನೇ ಬಳಸಿಕೊಳ್ಳುವ ಮಟ್ಟಕ್ಕೆ ಹೋಗುತ್ತಾರೆ. ಅಂತಹ ಉದಾಹರಣೆಗಳು ಸಾಕಷ್ಟಿವೆ.  

ಆದರೆ ಟ್ರೋಲಿಗರು ಮಾಡಿದ್ದೇನು?  ಆರೋಗ್ಯಕರ ಚರ್ಚೆಯನ್ನು ಮುಂದುವರಿಸುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ಅವರ ದೇಹ, ವೈಯಕ್ತಿಕ ಜೀವನ, ಸಂಗಾತಿಯ ಧರ್ಮ ಇತ್ಯಾದಿಗಳನ್ನೂ ಎಳೆದು ತಂದು ನಿಂದಿಸಿರುವ  ಘಟನೆಗಳ ವರದಿಗಳಿವೆ.

ಪದ್ಮಾವತ್ ಚಿತ್ರದಲ್ಲಿ ನಟಿಸಿದ್ದಕ್ಕೆ ಬಲಪಂಥೀಯ ಸಂಘಟನೆ ನಟಿ ದೀಪಿಕಾ ಪಡುಕೋಣಳಿಗೂ ಬೆದರಿಕೆ ಒಡ್ದಿದ್ದು ನೆನಪಿರಬಹುದು. ಬಲಪಂಥೀಯ ವಿಚಾರಗಳನ್ನು ನಿರಾಕರಿಸಿದ, ಕೋಮುವಾದ, ಹಿಂದುತ್ವ, ಜಾತಿಪದ್ಧತಿ ಮುಂತಾದ ಬಿಜೆಪಿ ಆಡಳಿತದ ಮೋದಿ ಸರಕಾರವನ್ನು ಪ್ರಶ್ನಿಸಿದ ತಪ್ಪಿಗೆ ಗೌರಿ ಲಂಕೇಶ್ ಹಾಗೂ ಕಲಬುರ್ಗಿ ಅವರನ್ನು ಬಲಿ ತೆಗೆದುಕೊಂಡರು. 

ಅರುಂಧತಿ ರಾಯ್ ಅವರ ಉದಾಹರಣೆಯು ಭಾರತದಲ್ಲಿ “ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದೇಶಪ್ರೇಮ” ಎಂಬ ವಿಷಯದ ಸುತ್ತ ನಡೆಯುತ್ತಿರುವ ಬಿಸಿಬಿಸಿ ಚರ್ಚೆಗೆ ಮುಖ್ಯ ಸಾಕ್ಷಿಯಾಗಿದೆ. ಒಂದು ಕಡೆ ಅವರನ್ನು ಮಾನವ ಹಕ್ಕುಗಳ ಬೆಂಬಲಿಗರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಿದರೆ, ಇನ್ನೊಂದೆಡೆ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ತೀವ್ರವಾಗಿ ನಿಂದಿಸಲಾಗುತ್ತದೆ.  ಭಾರತದಲ್ಲಿ ತಮ್ಮ ತೀಕ್ಷ್ಣ ಬರಹಗಳು, ಭಾಷಣಗಳು ಹಾಗೂ ರಾಜಕೀಯ ನಿಲುವುಗಳಿಂದಾಗಿ ಸತತವಾಗಿ ದೊಡ್ಡ ಮಟ್ಟದ ವಿವಾದ, ಟ್ರೋಲಿಂಗ್, ‘ದೇಶದ್ರೋಹಿ’ ಪಟ್ಟ ಮತ್ತು ಕಾನೂನಾತ್ಮಕ ಬೆದರಿಕೆಗಳನ್ನು ಎದುರಿಸಿದ ಪ್ರಮುಖ ವ್ಯಕ್ತಿಯಾಗಿದ್ದಾರೆ.

ಈ ಎಲ್ಲ ಘಟನೆಗಳು ಸಮಾಜದಲ್ಲಿ  ಕುರುಡು ಧಾರ್ಮಿಕ ಆಚರಣೆಗಳನ್ನು ಎತ್ತಿಹಿಡಿದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು  ಹೋದಾಗ ಪ್ರಜಾಪ್ರಭುತ್ವ ಮತ್ತು ಮಾನವೀಯತೆ ಹೇಗೆ ನಾಶವಾಗುತ್ತದೆ ಎಂಬುದಕ್ಕೆ ಇತಿಹಾಸ ನೀಡಿದ ದೊಡ್ಡ ಎಚ್ಚರಿಕೆಯಾಗಿದೆ.

ಸ್ವರಾ ಅವರ ಪ್ರಕರಣದಲ್ಲಿ ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಇಂದಿಗೂ ಸತೀತ್ವ ಅಥವಾ ಜೌಹರ್‌ನ ಪರವಾಗಿ ಮಾತನಾಡುವ ಪುರುಷರಷ್ಟೇ ಮಹಿಳೆಯರೂ ಸಹ ಇದ್ದಾರೆ. ಹೆಣ್ಣಿನ ದೇಹದೊಂದಿಗೆ ಪಿತೃಪ್ರಭುತ್ವವು ಅಸ್ಮಿತೆ, ಇಜ್ಜತ್, ಗೌರವ, ಮಾನ, ಸಂಸ್ಕಾರ, ಪ್ರತಿಷ್ಠೆ ಇತ್ಯಾದಿಗಳ ಕೀಳು ವ್ಯಾಖ್ಯಾನಗಳನ್ನು ತಳಕುಹಾಕಿಟ್ಟಿದೆ. ಹಳೆಯದಾದರೂ ಆಳವಾಗಿ ಬೇರೂರಿರುವ ಸ್ತ್ರೀದ್ವೇಷಿ, ಮನುಸ್ಮೃತಿ-ವಾದಿ, ಇಸ್ಲಾಮೋಫೋಬಿಕ್, ಪಿತೃಪ್ರಭುತ್ವದ ಮನಸ್ಥಿತಿಯ ಕುತರ್ಕಗಳು!

ಮೊದಲು ಸ್ವರಾರನ್ನು ಬಾಡಿಶೇಮಿಂಗ್ ಮಾಡಿ. ನಂತರ ಅವರ ಸಂಗಾತಿ ಮುಸ್ಲಿಂ ಕುಟುಂಬದಿಂದ ಬಂದವರು ಎಂಬ ಕಾರಣಕ್ಕೆ ತಮ್ಮ ಇಸ್ಲಾಮೋಫೋಬಿಕ್ ಮನಸ್ಥಿತಿಯ ಮೂರ್ಖತನವನ್ನು ಪ್ರದರ್ಶಿಸಿ. ಆಮೇಲೆ ಅಸಭ್ಯವಾದ, ಕೊಳಕು ನಿಂದನೆಗಳ ಮಹಾಪೂರವೇ ಹರಿಯುತ್ತದೆ. ಹೆಣ್ಣುಮಕ್ಕಳು ಅಂತಹ ಪದಗಳನ್ನು ಬಳಸಿದರೆ ದೇಶದ ಪ್ರಧಾನಿಯೇ ರೀಲ್‌ ಮಾಡಿ ಅವರನ್ನು ಟೀಕಿಸುತ್ತಾರೆ; ಅದೇ ನಿಂದನೆಗಳನ್ನು ಹುಡುಗರು, ಪುರುಷರು ಬಳಸಿದರೆ ಅವುಗಳನ್ನು ಸಹಜವೆಂಬಂತೆ ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಈ ಸಾಮಾನ್ಯೀಕರಣ ಈಗ ಜಾಗತಿಕ ಮಟ್ಟದಲ್ಲಿಯೇ ನಡೆದಿದೆ.

ಇದೇ ಸೆಪ್ಟೆಂಬರ್‌ನಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಅಪರಾಧಿಯ ಕ್ರೂರತೆಗೆ ನೀಡಬೇಕಿದ್ದ ಮರಣದಂಡನೆಯನ್ನು ಕಡಿತಗೊಳಿಸಿ ಜೀವಾವಧಿ ಶಿಕ್ಷೆ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಆದರೆ ಕಾನೂನುಬದ್ಧವಾಗಿ ಆತನಿಗೆ 25 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಮಗುವಿನ ಜೀವ ಮತ್ತು ಹಕ್ಕಿಗಿಂತ ಅಪರಾಧಿಯ ಹಕ್ಕು ದೊಡ್ಡದೇ ? ನ್ಯಾಯಾಂಗ ವ್ಯವಸ್ಥೆಯು ಅಪರಾಧಿಯ ವಯಸ್ಸು ಮತ್ತು ಹಿನ್ನೆಲೆಯನ್ನು ಪರಿಗಣಿಸುವಾಗ, ಆ ಸಣ್ಣ ಮಗು ಅನುಭವಿಸಿದ ನರಕಯಾತನೆಯನ್ನು ಏಕೆ ಅಷ್ಟೇ ಕಠಿಣವಾಗಿ ಪರಿಗಣಿಸುವುದಿಲ್ಲ ಎಂಬ ಬಲವಾದ ಪ್ರಶ್ನೆ ಏಳುತ್ತದೆ.  

ಹೀಗಿದ್ದರೂ ಜಗತ್ತಿನಲ್ಲಿ ಪ್ರತಿದಿನ ಮಹಿಳೆಯರು, ಮಕ್ಕಳು ಮತ್ತು ದುರ್ಬಲರು ಹಿಂಸೆಗೆ ಬಲಿಯಾಗುತ್ತಿದ್ದಾರೆ. ಈ ಕುರಿತು ಸಮಾಜ ಜಾಗೃತವಾಗಬೇಕು; ಸರ್ಕಾರಗಳು ಎಚ್ಚರಗೊಳ್ಳಬೇಕು.

ಇದರ ಮೇಲಾಗಿ ಸತೀತ್ವ, ಜೌಹರ್, ಮರ್ಯಾದೆ ಹತ್ಯೆ, ತಾಲಿಬಾನಿ ಫರ್ಮಾನುಗಳು, ಖಾಪ್ ಪಂಚಾಯಿತಿಗಳ ಕುತರ್ಕಗಳು ಇತ್ಯಾದಿಗಳ ಹೆಸರಿನಲ್ಲಿ ಮಹಿಳೆಯರು ಇನ್ನೆಷ್ಟು ಕಾಲ ಸಾಯುತ್ತಲೇ ಇರಬೇಕು ?

ಇದೇ ಮಾತು ಬದುಕಿನ ಬಗ್ಗೆ ತೀವ್ರ ಸಂಕಷ್ಟದಲ್ಲಿರುವ ಪುರುಷರಿಗೂ ಅನ್ವಯಿಸುತ್ತದೆ. ಯಾವುದೇ ಲಿಂಗದವರ ಮಾನಸಿಕ ಶೋಷಣೆಯ ಹಿಂದೆ ಕೆಲಸ ಮಾಡುವ ಪಿತೃಪ್ರಭುತ್ವದ ಮನಸ್ಥಿತಿಯೇ ನಮ್ಮ ಸಾಮಾನ್ಯ ಶತ್ರು. ಅತುಲ್ ಸುಭಾಷ್ ಎಂಬ ಸಾಫ್ಟವೇರ್ ಇಂಜಿನಿಯರ್ ತಮ್ಮ ಹೆಂಡತಿ ನಿಕಿತಾ ಸಿಂಘಾನಿಯಾ ಮತ್ತು ಆಕೆಯ ಕುಟುಂಬದವರು ನೀಡುತ್ತಿದ್ದ ಸತತ ಮಾನಸಿಕ ಕಿರುಕುಳ, ಸುಳ್ಳು ಕೇಸ್‌ಗಳು ಮತ್ತು ಬ್ಲಾಕ್‌ಮೇಲ್‌ನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ನೆನಪಿಸಿಕೊಳ್ಳಿ. 

‘ಗೌರವ’ದ ಹೆಸರಿನಲ್ಲಿ ಸಾಯುವ ಮತ್ತು ಕೊಲ್ಲುವ ಪುರುಷರ ಕಥೆಗಳನ್ನೂ ಗ್ಲೋರಿಫೈ ಮಾಡಬಾರದು. ಉಳಿಸಬೇಕಾಗಿರುವುದು ಮಾನವೀಯತೆಯನ್ನು ಎನ್ನುವುದಷ್ಟೇ ಮುಖ್ಯವಾಗಬೇಕು. ಯಾರೋ ಬಂದು ನಿಮ್ಮ ದೇಹವನ್ನು ಮುಟ್ಟಿದರೆ, ಅಥವಾ ನಿಮ್ಮ ಮೇಲೆ ಲೈಂಗಿಕ ಹಿಂಸೆ ನಡೆಸಿದರೆ, ನಿಮ್ಮ ಬದುಕು ಅಲ್ಲಿಗೇ ಮುಗಿದುಹೋಗುವುದಿಲ್ಲ. ಬದುಕುವ ಆಯ್ಕೆ ಕೂಡ ಘನತೆ. ಇನ್ನು ಕೊನೆಯದಾಗಿ ಹೇಳವುದೆಂದರೆ  ಯಾವುದೇ ವಿಷಯದ ಚರ್ಚೆಯನ್ನು ಟ್ರೋಲ್ ಮೂಲಕ ಕೊಂದು ವೈಯಕ್ತಿಕ ದಾಳಿಯಿಂದ ಯಾವ ಪ್ರಯೋಜನವೂ ಇಲ್ಲ.  ಟ್ರೋಲಿಗರಿಗೆ ಅರ್ಥವಾಗುವ ಕಾಲ  ಬರುವುದೇ ? .

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​’ಕಂದಾ, ನೀನು ನ್ಯಾಯಾಲಯ ಕಂಡ ಅತಿ ಧೈರ್ಯಶಾಲಿ ಬಾಲಕಿ’: ಪೋಕ್ಸೊ ಸಂತ್ರಸ್ತೆಗೆ ನ್ಯಾಯಾಧೀಶರ ಭಾವುಕ ಪತ್ರ

ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪುಗಳು ಕೇವಲ ಶಿಕ್ಷೆ ಮತ್ತು ದಂಡಕ್ಕೆ...

ಹವಾಮಾನ | ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಭಾರಿ ಮಳೆ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 30ರಿಂದ 40...

ಕೋಡಿಹಳ್ಳಿ ಚಂದ್ರಶೇಖರ್ ಬಂಧನ ಖಂಡಿಸಿ ಮುಧೋಳದಲ್ಲಿ ರೈತರ ಪ್ರತಿಭಟನೆ

ಕಳಸಾ–ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ರೈತಪರ ಹೋರಾಟ ನಡೆಸಿದ್ದ ರಾಜ್ಯ ರೈತ...

ತಾಳಿಕೋಟಿ | ₹2,500 ಬರ ಪರಿಹಾರಕ್ಕೆ ವಿರೋಧ: ಸರ್ಕಾರಕ್ಕೇ ದೇಣಿಗೆ ನೀಡಲು ರೈತ ಸಂಘ ಸಿದ್ಧತೆ

ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ರಾಜ್ಯ ಸರ್ಕಾರ ನೀಡಲು ಮುಂದಾಗಿರುವ ₹2,500 ಬರ...