ನಮ್ ಜನ | ಕೋಲೆ ಬಸವನೊಂದಿಗೆ ಬೀದಿಯಲ್ಲಿ ಬದುಕುವ ನೆಲೆ ಇಲ್ಲದ ಅಲೆಮಾರಿಗಳು

Date:

Advertisements

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ಮಳೆ ಬಂದು ಗುಡಿಸಲಿನಲ್ಲಿನ ವಸ್ತುಗಳು ತೇಲಾಡುವಾಗ, ತೀರಾ ಅವಶ್ಯವಾದ ದಿನಸಿಯಂತಹ ಸಾಮಾನುಗಳನ್ನು ಮಾತ್ರ ಆ ಹಗ್ಗದ ಮಂಚದ ಮೇಲೆ ಇಟ್ಟು, ಇಡೀ ರಾತ್ರಿ ಕುಕ್ಕರಗಾಲಲ್ಲಿ ಕುಂತಿದ್ದು, ನೀರಿಳಿದ ಮೇಲೆ ಗುಡಿಸಿ ಸಾರಿಸಿ ಸರಿಮಾಡಿಕೊಳ್ಳುತ್ತಾರೆ...

ಸೂರ್ಯೋದಯದ ಸಮಯಕ್ಕೆ ಸರಿಯಾಗಿ ಹಕ್ಕಿಗಳ ಕಲರವದ ಜೊತೆಗೆ ಡೋಲು ಮತ್ತು ಗಂಟೆ ಸದ್ದು ಕೇಳಿಬಂತು. ಬೀದಿಯತ್ತ ಬಗ್ಗಿ ನೋಡಿದರೆ, ಕೋಲೆ ಬಸವ ರಾಜಗಾಂಭೀರ್ಯದಲ್ಲಿ ನಡೆದು ಬರುತ್ತಿತ್ತು. ಸಣ್ಣ ಕೊಂಬಿನ ದೊಡ್ಡ ದೇಹದ ಬಸವ, ಬೆರಗು ಹುಟ್ಟಿಸುವಂತೆ ಬೆಳೆದುನಿಂತಿದ್ದ. ಬಸವನ ಬೆನ್ನಿನ ಮೇಲೆ ಬಟ್ಟೆಗಳನ್ನು, ಸೀರೆಗಳನ್ನು, ಕೌದಿಗಳನ್ನು ಹೊದಿಸಲಾಗಿತ್ತು. ಎದ್ದುಕಾಣುವ ಬಸವನ ಭುಜಕ್ಕೆ ಕೆಂಪು ರೇಷ್ಮೆ ಸೀರೆಯನ್ನು ಸುತ್ತಲಾಗಿತ್ತು. ಅದು ಗುಡಿಯ ಗೋಪುರದಂತೆ ಗೋಚರಿಸುತ್ತಿತ್ತು. ಅದಕ್ಕೊಂದು ಕಾಸಿನ ಕೈಚೀಲ ತೂಗುಹಾಕಲಾಗಿತ್ತು. ಕೊರಳ ತುಂಬ ಗಂಟೆಗಳ ಸರ ಧರಿಸಿದ್ದ ಬಸವ ಹೆಜ್ಜೆ ಹಾಕಿದಂತೆಲ್ಲ, ಒಂದಕ್ಕೊಂದು ಗಂಟೆ ಬಡಿದು ಸದ್ದು ಮಾರ್ದನಿಸುತ್ತಿತ್ತು. ಆ ಸದ್ದೇ ಬಸವನ ಬರುವಿಕೆಯನ್ನು ಸಾರಿ ಹೇಳುತಿತ್ತು. ಮನೆಯೊಳಗಿದ್ದ ಮಕ್ಕಳಿಗೆ, ಹೆಂಗಸರಿಗೆ ಸಂದೇಶ ರವಾನಿಸುತ್ತಿತ್ತು. ಬಸವನನ್ನು ಹಿಡಿದಿದ್ದ, ಮಾಲೀಕ ಬಾಲಯ್ಯನ ಮುಖದಲ್ಲಿ ಮಂದಹಾಸವಿತ್ತು. ತಾನು ಸೊರಗಿದ್ದರೂ ತನ್ನ ಹೋರಿ ಬಸವ ಸಮೃದ್ಧವಾಗಿರುವುದರ ಬಗ್ಗೆ ಹೆಮ್ಮೆ ಇತ್ತು. ಅದನ್ನೇ ಬಂಡವಾಳವನ್ನಾಗಿ ಹೂಡಿ, ದಿನದ ಯಾಚಕ ವೃತ್ತಿ ಮಾಡಲು ಬೆನ್ನಿಗೆ ಡೋಲಿತ್ತು, ಬಗಲಲ್ಲಿ ಬ್ಯಾಗಿತ್ತು. ಅನುಭವ ಕಲಿಸಿದ ಮಾತಿತ್ತು.

ಸಾಧಾರಣ ಅಂಗಿ ಮತ್ತು ಲುಂಗಿ ಧರಿಸಿದ್ದ ಬಾಲಯ್ಯನ ಜೊತೆಗೆ ಬಾಲಯ್ಯನ ಪತ್ನಿ ಲಕ್ಷ್ಮಮ್ಮರಿದ್ದರು. ಆಕೆಯ ಕೈಯಲ್ಲೊಂದು ಸಣಕಲ ಹೆಣ್ಣು ಬಸವ, ದೊಡ್ಡ ಬಸವನ ಹಿಂದೆ ಬಾಲದಂತೆ ಹೋಗುತ್ತಿತ್ತು.

Advertisements

ಸಾಮಾನ್ಯವಾಗಿ ಶ್ರಾವಣ ಮಾಸ ಹತ್ತಿರವಾಗುತ್ತಿದ್ದಂತೆ ನಗರದ ಬೀದಿಗಳಲ್ಲಿ ಓಲಗ ಊದುತ್ತ, ಡೋಲು ಬಾರಿಸುತ್ತ ರಾಜಗಾಂಭೀರ್ಯದಲ್ಲಿ ನಡೆಯುವ ಶೃಂಗರಿಸಿದ ಬಸವ ಬರುವುದುಂಟು. ಬೀದಿಯಲ್ಲಿ ಬರುವ ಬಸವನನ್ನು ಕೋಲೆ ಬಸವ, ಭೈರವ, ಶಿವನ ವಾಹನ ನಂದಿ, ದೈವ ಸ್ವರೂಪ ಎಂದು ಭಾವಿಸುವ ಹಿರಿಯರು, ಮಹಿಳೆಯರು, ಬಸವನಿಗೆ ಅರಿಶಿನ-ಕುಂಕುಮ ಹಚ್ಚಿ, ಹೂ ಮುಡಿಸಿ, ಅಕ್ಕಿ, ಬೆಲ್ಲ, ಕಾಯಿ ಸಮರ್ಪಿಸುವುದು; ಸೀರೆ, ಬಟ್ಟೆಯನ್ನು ದಾನವಾಗಿ ನೀಡುವುದು; ಹಣ ಕೊಡುವುದು ಕಾಲದಿಂದ ಬಂದ ರೂಢಿ. ಹಾಗೆ ಕೊಡುವುದನ್ನು ಕೊಟ್ಟು, ತಮ್ಮ ಸಮಸ್ಯೆಯನ್ನು ಮನದಲ್ಲೇ ಮಥಿಸಿ ಬಸವನ ಮಾಲೀಕನ ಮೂಲಕ ಬಸವನಿಗೆ ನಿವೇದಿಸಿಕೊಳ್ಳುವುದು, ಅದಕ್ಕೆ ಬಸವ ತನ್ನ ತಲೆಯನ್ನು ಮೇಲೆ-ಕೆಳಗೆ ಅಲ್ಲಾಡಿಸಿ, ಅತ್ತ-ಇತ್ತ ತೂಗಿಸಿ ಪ್ರಶ್ನೆ ಕೇಳಿದವರಿಗೆ ಉತ್ತರಿಸುವುದು ಒಂದು ಸಂಪ್ರದಾಯ.

ಕೋಲೆ ಬಸವ

ಬಸವನಿಗೆ ಕೊಡುವುದನ್ನು ಕೊಟ್ಟು ತಮಗೆ ಬೇಕಾದ್ದನ್ನು ಪಡೆದುಕೊಳ್ಳುವ ಲೋಕದ ಲೆಕ್ಕಾಚಾರಕ್ಕೆ ಕೊನೆ ಮೊದಲಿಲ್ಲ. ಆದರೆ, ಬಸವನಿಂದಲೇ ಬದುಕು ಕಂಡುಕೊಂಡಿರುವ, ಬಸವನ ಬಂಧುಗಳೆಂದು ಹೇಳಿಕೊಳ್ಳುವವರ ಬದುಕು ಇವತ್ತಿಗೂ ಬೀದಿಯಲ್ಲಿಯೇ ಇದೆ.

ಬಸವನ ಮಾಲೀಕ ಬಾಲಯ್ಯನಿಗೆ, “ನಮಸ್ಕಾರ…” ಎಂದೆ. ಬೆಚ್ಚಿಬಿದ್ದವರಂತೆ, “ಅಯ್ಯೋ… ನಮಗ್ಯಾಕ್ ಸ್ವಾಮಿ ನಮಸ್ಕಾರ, ನಾವು ಬೇಡೋರು…” ಎಂದರು. ಅವರ ಕನ್ನಡ ಕೊಂಚ ತೆಲುಗುಮಿಶ್ರಿತವಾಗಿತ್ತು. ನಗುತ್ತಲೇ, “ನಮಸ್ಕಾರ ಮಾಡದಿದ್ರೆ ಬಸವಣ್ಣಂಗ್ ಮಾಡಿ…” ಎಂದರು. ಅವರ ಕಾಯಕಕ್ಕೆ ತೊಂದರೆ ಆಗಬಾರದೆಂದು, ಆ ಬಸವನೊಂದಿಗೆ ಈ ಬಸವ ಎಂಬಂತೆ ಹೆಜ್ಜೆ ಹಾಕುತ್ತ, ಮಾತನಾಡುತ್ತ ಹೋದೆ.

“ಬೆಳಗ್ಗೆ ಎದ್ದು ಮುಖ ತೊಳ್ಕಳದಷ್ಟೇ… ಬಸವಣ್ಣನ ಸಿಂಗಾರವೇ ನಮ್ ದೊಡ್ಡ ಕೆಲಸ. ಅವನ ಮೈ ಉಜ್ಜಿ ಒರೆಸಿ, ತಿಂಡಿ ತಿನ್ನಿಸಿ, ಸೀರೆ-ಕೌದಿಗಳನ್ನೆಲ್ಲ ತೊಡಿಸಿ, ಗೆಜ್ಜೆ ಕಟ್ಟಿ ಹಗ್ಗ ಹಿಡಿದು ಹೊಂಟರೆ… ಹಿಂಗೇ ಯಾವುದಾದರೂ ಏರಿಯಾ ಮೇಲೆ ಬತ್ತಿವಿ. ಕೆಲವರು ಮದುವೆ ಮಾಡಿಸುತ್ತಾರೆ, ಹೊಸ ವಸ್ತ್ರ ಕೊಟ್ಟು ನಮಸ್ಕರಿಸುತ್ತಾರೆ. ಹೊಸ ಮನೆಗಳ ಗೃಹಪ್ರವೇಶದವರು ಬಸವನನ್ನು ಮನೆದುಂಬಿಸಿಕೊಳ್ಳುತ್ತಾರೆ. ಬಸವನಿಗೂ ನನಗೂ ಹೊಸ ಬಟ್ಟೆ ಕೊಡುತ್ತಾರೆ, ದುಡ್ಡು ಕೊಡುತ್ತಾರೆ, ಹೊಟ್ಟೆ ತುಂಬಾ ಊಟ ಹಾಕುತ್ತಾರೆ. ಒಬ್ಬೊಬ್ಬರದು ಒಂದೊಂದು ರೀತಿ. ಉಣ್ಣಕ್ಕೆ-ತಿನ್ನಕ್ಕೆ ಏನೂ ತೊಂದರೆ ಇಲ್ಲ,” ಎನ್ನುವ 52 ವರ್ಷದ ಬಾಲಯ್ಯನಿಗೆ ಐದು ಜನ ಮಕ್ಕಳು. ಮೊದಲ ಮೂವರು ಇವರೊಂದಿಗೇ ಇದ್ದಾರೆ. ಕೊನೆಯ ಇಬ್ಬರು ಊರಿನಲ್ಲಿ- ಆಂಧ್ರಪ್ರದೇಶದ ಓಂಗೋಲ್ ಜಿಲ್ಲೆಯ ಕನಗಿರಿ ಎಂಬಲ್ಲಿ ಓದುತ್ತಿದ್ದಾರೆ.

ಕೋಲೆ ಬಸವ

ಚಿಕ್ಕ ಬಸವನ ಉಸ್ತುವಾರಿ ಹೊತ್ತಿದ್ದ ಮಡದಿ ಲಕ್ಷ್ಮಮ್ಮರನ್ನು ಮಾತನಾಡಿಸಿದರೆ, “ನಮಗೆ ಕೊಡೋರು ಹೆಂಗಸರೇ ಜಾಸ್ತಿ. ಸೀರೆ ಕೊಡ್ತರೆ, ಬಸವನಿಗೆ ಬೆಲ್ಲ-ಬಾಳೆಹಣ್ಣು ಕೊಡ್ತರೆ, ಎಲ್ಲೋ ಕೆಲವರು ಅಕ್ಕಿ ಕೊಡ್ತರೆ – ಊಟಕ್ಕಾಯ್ತದೆ. ಹೆಂಗೋ, ಬಸವನ ಮರೆಯಲ್ಲಿ ಬದುಕ್ತಿದೀವಿ,” ಎಂದರು.

“ಹೊತ್ತಿಗ್ಮುಂಚೆನೆ ಬರ್‍ತೀರಲ್ಲ, ಊಟ-ತಿಂಡಿ ಎಲ್ಲ ಎಲ್ಲಿ ಮಾಡ್ತೀರಿ?” ಎಂದೆ.

“ಬೆಳಗ್ಗೇನೆ ಬುಡ್ತಿವಿ… ಮಿಕ್ಕಿದ್-ಪಕ್ಕಿದ್ ಏನಾದ್ರು ಇರ್‍ತದೆ; ಯಾರಾದ್ರು ಕೊಡ್ತರೆ, ಇಲ್ಲಾಂದ್ರ ಹೋಟ್ಲು ಐತಲ್ಲ… ಹೆಂಗೋ ಆಯ್ತದೆ…”

“ಬೆಳಗ್ಗೆ ಬಂದೋರು ಮನೆ ಕಡೆ ಹೋಗುವುದೆಷ್ಟೊತ್ತಿಗೆ?” ಎಂದೆ.

“ಮಧ್ಯಾಹ್ನ ಎರಡೂವರೆ-ಮೂರಕ್ಕೆಲ್ಲ ಮನೆ ಕಡೆ ಹೋಗ್ತೀವಿ. ಹೊಸಕೆರೆಹಳ್ಳಿ ಕೆರೆ ಕೋಡಿ ಐತಲ್ಲ, ಅಲ್ಲಿ ಕೃಷ್ಣಪ್ಪ ಲೇಔಟಿನ ಜಮೀನ್ದಾರು ತೋಟ ಬುಟ್ಟಕೊಟ್ಟವ್ರೆ, ನಮ್ಮೋರೆಲ್ಲ ಅಲ್ಲಿ ಟೆಂಟ್ ಹಾಕ್ಕೊಂಡಿದೀವಿ. ಪಕ್ಕದಲ್ಲಿ ಗುಡ್ಡ ಐತೆ; ಅಲ್ಲಿಗೆ ನಮ್ಮೆಜಮಾನ್ರು ಹುಲ್ಲು ಕೊಯ್ಯಕ್ಕೆ ಹೋಯ್ತರೆ, ನಾನು ಪುಳ್ಳೆ ಆಯಕ್ಕೆ ಹೋಗ್ತಿನಿ. ಸಂಜಿಕ್ಕೆ ಬಂದು, ಪಾತ್ರೆ ಗೀತ್ರೆ ತೊಳ್ಕಂಡು ಅನ್ನಕ್ಕಿಟ್ಟರೆ ಏಳೆಂಟ್ ಗಂಟೆಗೆ ಉಂಡು ಮಕ್ಕತಿವಿ…”

ಒಂದು ಮಧ್ಯಾಹ್ನ ಅವರಿರುವ ಜಾಗ ಹುಡುಕಿಕೊಂಡೆ ಹೋದೆ. ಹೊಸಕೆರೆಹಳ್ಳಿಯ ಕೆರೆ ಕೋಡಿ ಪಕ್ಕದ, ನೈಸ್ ರೋಡಿನ ಮಗ್ಗುಲಿಗಿರುವ ಕೃಷ್ಣಪ್ಪ ಲೇಔಟ್‌ನಲ್ಲಿ ಸುಮಾರು 40 ಶೆಡ್‌ಗಳಿವೆ. 120 ಜನರಿದ್ದಾರೆ. ನೋಡಿದರೆ, ನಾಗರಿಕ ಸಮಾಜ ಬದುಕುವ ಯಾವ ಕುರುಹೂ ಅಲ್ಲಿರಲಿಲ್ಲ. ಅದು ಹೇಗೆ ಬದುಕುತ್ತಿದ್ದಾರೋ ಆ ದೇವರೇ ಬಲ್ಲ. ಮಳೆ ಬಂದರೆ, ಅವರ ಬದುಕೇ ತೇಲುತ್ತದೆ. ಜೋರು ಗಾಳಿ ಎದ್ದರೆ ಟೆಂಟುಗಳು ಗಾಳಿಪಟವಾಗುತ್ತವೆ. ಅಂತಹ ಸ್ಥಿತಿಯಲ್ಲಿಯೇ ಅವರು ಒಂದು ವರ್ಷದಿಂದ ಅಲ್ಲಿ ವಾಸಿಸುತ್ತಿದ್ದಾರೆ.

ಕೋಲೆ ಬಸವ

ಜೋಳದ ಹೊಲದ ಹಳ್ಳದ ಪ್ರದೇಶದಲ್ಲಿ ತಗಡು ಮತ್ತು ಪ್ಲಾಸ್ಟಿಕ್ ಶೀಟ್ ಬಳಸಿ ನಿರ್ಮಿಸಿದ ಮನೆಗಳಂತಹ ಗೂಡುಗಳು. ಅದರೊಳಗೆ ನೂರೆಂಟು ಸಾಮಾನುಗಳು. ಹರಕು-ಮುರುಕು ಚೇರುಗಳು. ಬಳಸಲು ಯೋಗ್ಯವಲ್ಲದ ಬಟ್ಟೆ, ಪಾತ್ರೆಗಳ ನಡುವೆ, ಹಗ್ಗದಿಂದ ಹೆಣೆದ ಒಂದು ಮಂಚವಿದೆ. ಅದೇ ಅವರ ಬಾಲ್ಕನಿ. ಮಳೆ ಬಂದು ಮನೆಯ ವಸ್ತುಗಳು ತೇಲಾಡುವಾಗ, ತೀರಾ ಅವಶ್ಯವಾದ ದಿನಸಿಯಂತಹ ಸಾಮಾನುಗಳನ್ನು ಆ ಹಗ್ಗದ ಮಂಚದ ಮೇಲೆ ಇಟ್ಟು ರಾತ್ರಿ ಎಲ್ಲ ಕುಕ್ಕರಗಾಲಲ್ಲಿ ಕುಂತಿದ್ದು, ನೀರಿಳಿದ ಮೇಲೆ ಗುಡಿಸಿ ಸಾರಿಸಿ ಸರಿಮಾಡಿಕೊಳ್ಳುತ್ತಾರೆ. ಕುಡಿಯಲು ನೀರಿಲ್ಲ, ಕರೆಂಟಿಲ್ಲ. ಆರೋಗ್ಯ-ಶಿಕ್ಷಣವೂ ಸಿಕ್ಕಿಲ್ಲ. ಪುಳ್ಳೆ-ಸೌದೆ ಒಲೆ, ಸಿಲ್ವರ್ ಪಾತ್ರೆಗಳು. ಆದರೆ ಕೆಲ ಗಂಡಸರು, ಹುಡುಗರ ಬಳಿ ಆಂಡ್ರಾಯ್ಡ್ ಫೋನ್ ಗಳಿವೆ. ಅವರು ಹೊಸ ಪ್ರಪಂಚದೊಂದಿಗೆ ಸಂಪರ್ಕದಲ್ಲಿದ್ದಾರೆ. ಅಷ್ಟೇ, ಅವರಿಗೂ ಈ ಪ್ರಪಂಚಕ್ಕೂ ಇರುವ ನಂಟು.

ಅವರ ಹಟ್ಟಿಗೆ ಕಾಲಿಡುತ್ತಿದ್ದಂತೆ ವಯಸ್ಸಾದ ಅಜ್ಜಿಯೊಬ್ಬರು ಎದುರಾದರು. ಎಪ್ಪತ್ತೆಂಬತ್ತು ವರ್ಷಗಳಾಗಿದೆ. ಮೂಳೆ ಚಕ್ಕಳದಂತಹ ದೇಹ. ಹೆಸರು ಲಕ್ಷ್ಮಮ್ಮ. ಮೂರು ಜನ ಮಕ್ಕಳು. ತುಂಬಾ ಚೆನ್ನಾಗಿ ಡೋಲು ಬಾರಿಸುತ್ತಿದ್ದ ಮಗ ಇತ್ತೀಚೆಗೆ ತಾನೆ ತೀರಿಕೊಂಡು, ಅದೇ ಕೊರಗಿನಲ್ಲಿದ್ದರು. ಅವರ ಕೈಗೆ ನೂರು ರೂಪಾಯಿ ಕೊಟ್ಟು, ಅವರೊಂದಿಗೆ ಕೂತು ಟೀ ಕುಡಿದು, ಅವರ ಕತೆ ಕೇಳಿದೆ.

ಲಕ್ಷ್ಮಮ್ಮನ ಅಳಿಯ ಬಾಲರಾಜ್ ಸಿಕ್ಕರು. ವಯಸ್ಸು 53. ನಾದಸ್ವರ ನುಡಿಸುವುದರಲ್ಲಿ ನಿಪುಣರು. ಇವರ ಕೈಯಲ್ಲೊಂದು ವಾಚಿತ್ತು, ಜೇಬಲ್ಲಿ ಮೊಬೈಲ್ ಫೋನಿತ್ತು. ಮಾಗಡಿ, ತುಮಕೂರು, ಕುಣಿಗಲ್ ಕಡೆಯ ಜನ ಇವರನ್ನು ಮದುವೆಯಲ್ಲಿ ನಾದಸ್ವರ, ಡೋಲು ನುಡಿಸಲು ಕರೆಯುತ್ತಾರಂತೆ. “ಎರಡು ದಿನದ ಕಾರ್ಯಕ್ರಮಕ್ಕೆ 10 ಸಾವಿರ ಸಿಗುತ್ತದೆ. ವರ್ಷದಲ್ಲಿ ಮೂರು ತಿಂಗಳು ಕೆಲಸವಿರುತ್ತದೆ, ಅದು ಬಿಟ್ಟರೆ ಸುಮ್ಮನೆ ಕೂರುವುದೇ ಕೆಲಸ,” ಎಂದರು.

ಕೋಲೆ ಬಸವ

ವಾಪಸ್ ಬರುತ್ತಿರುವಾಗ 20ರ ಹರೆಯದ ಒಬ್ಬ ಹುಡುಗ ಬೈಕ್‌ನಲ್ಲಿ ಬಂದ. ದವಡೆಯಲ್ಲಿ ಗುಟ್ಕಾ ಇತ್ತು. ಹೆಸರು ಬಾಬು. ಆತನ ಬೈಕ್‌ನ ಹಿಂದಕ್ಕೆ ಸಣ್ಣ ಯಂತ್ರವೊಂದನ್ನು ಬಿಗಿದು ಕಟ್ಟಲಾಗಿತ್ತು. ಅದು ಚಾಕು, ಕತ್ತಿ, ಕತ್ತರಿ, ಮಚ್ಚುಗಳನ್ನು ಸಾಣೆ ಹಿಡಿಯುವ ಸಣ್ಣ ಯಂತ್ರ. ಅದನ್ನು ಅವರೇ ತಯಾರಿಸಿದ್ದರು. ಅದಕ್ಕೊಂದು ದೊಡ್ಡ ಚೀಲವನ್ನು ನೇತುಹಾಕಿದ್ದರು. ಅದರಲ್ಲಿ ವಿವಿಧ ಗಾತ್ರದ ಸಾಣೆ ಕಲ್ಲುಗಳಿದ್ದವು. ತುಕ್ಕು ಹಿಡಿದ ಚಾಕು, ಕತ್ತಿ, ಕತ್ತರಿಗಳಿದ್ದವು.

“ಒಂದಿಪ್ಪತ್ತು ಹುಡುಗರಿದ್ದೀವಿ, ಹಿಂಗೇ ಬೈಕ್ ಹತ್ತುಕೊಂಡು ಹೊಂಟರೆ, ಇಡೀ ಬೆಂಗಳೂರನ್ನೇ ಸುತ್ತಾಡಕೊಂಡು ಸಂಜೀಕ್ ಬತ್ತಿವಿ. ಪೆಟ್ರೋಲು, ನಮ್ ಖರ್ಚು ಎಲ್ಲ ಕಳೆದು ದಿನ ಐನೂರು ಸಿಕ್ತದೆ, ಒಂದೊಂದು ದಿನ ಸಾವ್ರ ಆಯ್ತದೆ. ಸಾಣೆ ಹಿಡಿಯುವುದರ ಜೊತೆಗೆ ಲಗ್ಗೇಜ್, ವ್ಯಾನಿಟಿ ಬ್ಯಾಗ್, ಸೂಟ್ ಕೇಸ್‌ಗಳಿಗೆ ಜಿಪ್ ಹಾಕುವುದು, ಕುಕ್ಕರ್ ರಿಪೇರಿ ಮಾಡುವುದನ್ನೂ ಮಾಡುತ್ತೇವೆ…” ಎಂದ ಹುಡುಗ.

ಒಂದು ಜೋಪಡಿಯಲ್ಲಿ ಎಳೆಮಗುವಿನೊಂದಿಗೆ ಹಸಿ ಬಾಣಂತಿಯೂ ಇದ್ದರು. ಇನ್ನೊಂದರಲ್ಲಿ ಯಾರೋ ಕೆಮ್ಮುತ್ತಿದ್ದರು. ವಯಸ್ಸಾದವರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಗಟ್ಟಿಮುಟ್ಟಾಗಿದ್ದವರು ಬೆಳಗ್ಗೆ ಎದ್ದು ಕೋಲೆ ಬಸವನನ್ನು ಹಿಡಿದುಕೊಂಡು ಏರಿಯಾ ಮೇಲೆ ಹೊರಟರೆ, ಯುವಕರು ಬೈಕ್ ಹತ್ತಿ ಉಪಕಸುಬುಗಳಲ್ಲಿ ನಿರತರಾಗುತ್ತಾರೆ. ಎಲ್ಲರೂ ಸಂಜೆಯಷ್ಟೊತ್ತಿಗೆ ಬಂದು ಗೂಡು ಸೇರುತ್ತಾರೆ.

ಕೋಲೆ ಬಸವ

ತಲತಲಾಂತರದಿಂದ ಬಂದ ಕೋಲೆ ಬಸವನೇ ಅವರ ದೈವ, ಅದನ್ನು ಆಡಿಸುವುದು ಅವರ ಕಸುಬು. ಬಸವಗಳನ್ನು ಅವರು ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ, ಕಾಳಜಿಯಿಟ್ಟು ಕಾಪಾಡುತ್ತಾರೆ. ತಮಗಿಲ್ಲದಿದ್ದರೂ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆಂಧ್ರದ ಕಡಪಾ, ಪ್ರಕಾಶಂ, ಓಂಗೋಲ್ ಜಿಲ್ಲೆಗಳ ಕೆಲ ಹಳ್ಳಿಗಳಲ್ಲಿರುವ ಇವರನ್ನು ಅಲ್ಲಿ ‘ದಾಸರಿ’ ಎನ್ನುತ್ತಾರೆ. ಉತ್ತರ ಭಾರತದಲ್ಲಿ ‘ನಂದೀವಾಲಾ’ ಎಂದು ಕರೆಯುತ್ತಾರೆ.

ಆದರೆ ಇವರು ಕೋಲೆ ಬಸವನನ್ನು ಇಟ್ಟುಕೊಂಡು ಭಿಕ್ಷಾಟನೆ ಮಾಡುವವರಲ್ಲ. ನಾದಸ್ವರ-ಡೋಲು ಬಾರಿಸುವ ಇವರು, ತಮ್ಮದೂ ಒಂದು ಸಾಂಪ್ರದಾಯಿಕ ಕಸುಬು ಎಂದು ನಂಬಿದವರು. ಹೊಸಗಾಲಕ್ಕೆ ತಕ್ಕಂತೆ ಹುಡುಗರು ಸಾಣೆ ಹಿಡಿಯುವ, ಕುಕ್ಕರ್ ರಿಪೇರಿ ಮಾಡುವ, ಜಿಪ್ ಹಾಕುವ ಕೆಲಸಗಳ ಮೂಲಕ ಬದುಕುವ ದಾರಿ ಹುಡುಕಿಕೊಂಡಿದ್ದಾರೆ. ಆದರೆ, ಇವರು ಅಲೆಮಾರಿಗಳು. ನೆಲೆ ಇಲ್ಲದವರು. ಇವರು ಯಾವ ಜಾತಿ-ವರ್ಗಕ್ಕೂ ಸೇರದವರು. ಆಂಧ್ರದಲ್ಲಿ ದಾಸರಿ ಎಂದರೆ, ಕರ್ನಾಟಕದಲ್ಲಿ ದಾಸರು, ದೊಂಬಿದಾಸರು, ಚಿನ್ನದಾಸರು, ಚನ್ನದಾಸರು, ಗೊಲ್ಲರು, ಕಾಡುಗೊಲ್ಲರು ಎಂದೆಲ್ಲ ಕರೆದುಕೊಳ್ಳುತ್ತಾರೆ. ಬೆಂಗಳೂರಿನ ರಾಯಸಂದ್ರದಲ್ಲಿ ಸುಮಾರು ಎರಡು ಸಾವಿರ ಕುಟುಂಬಗಳಿವೆ. ಅಸಲಿಗೆ ತಾವು ಯಾವ ಜಾತಿಗೆ, ವರ್ಗಕ್ಕೆ ಸೇರುತ್ತೇವೆನ್ನುವುದೇ ಗೊತ್ತಿಲ್ಲದ ಅಮಾಯಕರು. ಸಂವಿಧಾನ ಕಲ್ಪಿಸುವ ಅವಕಾಶಗಳಿಂದ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾದ ಹತಭಾಗ್ಯರು.

ಮಕ್ಕಳ ಮನರಂಜನೆಗೆ, ಮಹಿಳೆಯರ ಪೂಜೆಗೆ, ಗೃಹಪ್ರವೇಶಕ್ಕೆ ಇವರ ಬಸವ ಬೇಕು; ಮದುವೆ ಕಾರ್ಯಗಳಿಗೆ ಇವರ ನಾದಸ್ವರ, ಡೋಲು ಬೇಕು. ಆದರೆ, ಇವರು ಊರ ಹೊರಗಿರಬೇಕು. ಅನ್ಯರಾಗಿ ಬದುಕಬೇಕು. ಇವರು ನಮ್ ಜನರಲ್ಲವೇ?

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

  1. This is srinivasulu kolebasava community rajya adhyaksh thank you sir thank you sir tamba tamba dhanyvad namma namma jivan shailiyanmanathamathalli Abdul vadi health dhanyvad gana mobile 8892964464

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X