ಕುಂಟ್ನಾಯಿಗೆ ಗತಿ ಕಾಣ್ಸಿದ ನನ್ಜ, ಕುಂಟುತ್ತಾ ನಾಟಿ ಔಸ್ದಿಗೆ ಗುಂಡಿನ್ನಾಗೇನಹಳ್ಳಿಗೋದ. "ಮೂರ್ನಾಲ್ಕು ದಿವ್ಸ ಇಲ್ಲೇ ಇದ್ದು ಔಸ್ದಿ ತಗೋ, ಎಲ್ಲಾ ಸರೋಗುತ್ತೇ," ಅಂತ ಪಂಡಿತರು ಹೇಳಿದ್ಕೆ, ಅವ್ನು ಅಲ್ಲೇ ಮೂರ್ಜಿನ ಉಳ್ಕಂಡ...
ಸಂಚಿಕೆ – ನಾಲ್ಕು
…ಒಂದೇ ಯೇಟಿಗೆ ಕುಂಟ್ನಾಯಿ ಕಮಕ್ಕಿಮಕ್ ಅನ್ದೆ ಅನ್ಗೇ ನೆಲ್ದಲ್ಲಿ ಮಲುಗ್ತು.
ಉಳ್ಕೆ ನಾಯ್ಗಳ್ಗೆ ಭಯ್ವಾಗಿ, ಜೀವುಳುದ್ರೆ ಸಾಕಂತ ಕಣ್ಣುಮಕ ಕಾಣಕಡಿಕೆ ಓಡುದ್ವು. ಕುಂಟ್ನಾಯಿಗೆ ಗತಿ ಕಾಣ್ಸಿದ ನನ್ಜ, ಕುಂಟುತ್ತಾ ನಾಟಿ ಔಸ್ದಿಗೆ ಗುಂಡಿನ್ನಾಗೇನಹಳ್ಳಿಗೋದ. “ಮೂರ್ನಾಲ್ಕು ದಿವ್ಸ ಇಲ್ಲೇ ಇದ್ದು ಔಸ್ದಿ ತಗೋ, ಎಲ್ಲಾ ಸರೋಗುತ್ತೇ,” ಅಂತ ಪಂಡಿತರು ಹೇಳಿದ್ಕೆ, ಅವ್ನು ಅಲ್ಲೇ ಮೂರ್ಜಿನ ಉಳ್ಕಂಡ.
ಕುಂಟ್ನಾಯಿ ಉಸ್ರಿಲ್ದೆ ನಾಲ್ಗೆ ಹೊರ್ಗೆಳ್ಕಂಡು ಬಿದ್ದಿತ್ತು. ಯಾವ ನಾಯ್ಗಳೂ ಆ ಕಡೆ ಸುಳಿಲೇ ಇಲ್ಲ. ಬೀದ್ಯಲ್ಲ ರೈತರಾಮಾಣ್ಯ. ಅದು ಕುಂಟುನಾಯ್ದೋ ಅತ್ವಾ ಕುಂಟಾಗಲಿರುವ ನನ್ಜನ್ದೋ… ಅಂತೂ ಆ ಕುಂಟ್ನಾಯಿ ಊರ್ನ ನೆಮ್ದಿ ಕೆಡುಸ್ತು. ಉಸ್ರು ಕಳ್ಕಂಡ ಕುಂಟ್ನಾಯಿಗೇನು ಗೊತ್ತು ಸತ್ಮೇಲೆ ಏನಾಗುತ್ತೆ ಅನ್ತ! ತಾನೇನೋ ಉಸ್ರಿಲ್ದೆ ಮಲ್ಗಿತ್ತು. ಊರು ಉಸ್ರಾಡ್ತ್ತಾ ರಾತ್ರಿ ನಿರಾಳ್ವಾಗಿತ್ತು. ಅಲ್ಲೊಂದು ಇಲ್ಲೊಂದು ನಾಯ್ಗಳ ಕೂಗು ಬಿಟ್ಟರೆ ಮತ್ತೇನೂ ಇರ್ಲಿಲ್ಲ.
ಬೆಳ್ಗೆ ಊರ್ಗೆ ಸೂರಪ್ಪ ಬರೋವಷ್ಟತ್ತಿಗೆ ಕುಂಟ್ನಾಯಿಯ ಸಾವ್ನ ಸಮಾಚಾರ್ನ ನೊಣ್ಗಳು ಊರ್ನ ಜನ್ರಿಗೆಲ್ಲ ಮುಟ್ಸಿದ್ವು. ಆದ್ರೂ ಎಲ್ಲ ಸಯ್ಸಕೊನ್ಡು ಜನ್ವೆಲ್ಲಾ ಅವ್ರವ್ರ ಬದ್ಕು ಮುಗ್ಸಿ ಊರ್ಮುಂದ್ಕೆ ಸೇರೋವಷ್ಟತ್ತರಲ್ಲಿ ಸನ್ಜಿಯೇ ಆಗ್ಬಿಟ್ಟಿತ್ತು. ಆಟೋತ್ತಿಗೆ ಕುಂಟ್ನಾಯಿ ಸರೀರನಾ ನಾಯ್ಗಳು ಎಳ್ದಾಡಿ, ಹಸ್ರು ನೊಣ್ಗಳು, ಕೆನ್ಜಗಗಳು ಒನ್ದರ್ಧ ತಿನ್ದು ಮುಗ್ಸಿದ್ವು. ಇರ್ವೆ, ಕಟ್ರೆ, ಸಾಲ್ಗಟ್ಟಿ ಕಚ್ಚಿ ಕಚ್ಚಿ ತಮ್ಮ ಗೂಡೊಳ್ಗೆ ಸೇರ್ಸಕಳ್ತಿದ್ವು. ನೊಣ್ಗಳನ್ತೂ ದೂರ್ದೂರಲ್ಲಿದ್ದ ತಮ್ಮ ಬನ್ಧು ಬಾಂಧವರ್ಗೆಲ್ಲ ವರ್ತಮಾನ್ವ ಮುಟ್ಸಿ ಕರೆ ತನ್ದಿದ್ವು. ಮಣ್ಮೇಲೆ ಬಿದ್ದಿದ್ದ ಆ ನಾಯ್ನ ಸುತ್ತ ಕೆಂಪಾನೇ ಕೆಂಪು ರೈತನ ಮೊದ್ಲು ನೋಡಿದ್ದ ಹುಂಜ, ಆಗ್ತಾನೇ ಮೊಟ್ಟೆಯಿನ್ದ ಮರಿಯಾಗಿ ಹೊರಬನ್ದಿದ್ದ ಪಿಳ್ಳೆಗಳ್ನ ಗುಮ್ಪು ಕಟ್ಟಿ ಮೇಯುಸ್ತಿದ್ದ ಯಾಟೆನಾ ಕೂಗಿ ಕರೆಯಿತು. ಯಾಟೆ ತನ್ನ ಸಮ್ಸಾರ ಸಮೇತವಾಗಿ ಹೋಗಿ, ರೈತನಾ ಕುಕ್ಕಿ-ಕುಕ್ಕಿ ಪಿಳ್ಳೆಗಳ ಮುಂದಿಡ್ತಿತ್ತು. ಆ ರೈತದ ನಡ್ವೆ-ನಡ್ವೆಯಿದ್ದ ಇರ್ವೆಗಳು ಪಿಳ್ಳೆಯ ಸರೀರಕ್ಕೆ ಸರಾಗವಾಗಿ ಹೋಗ್ತಿದ್ವು.
ಈ ಕನ್ನಡ ಕೇಳಿದ್ದೀರಾ?: ಗದಗ ಸೀಮೆಯ ಕನ್ನಡ | ‘ರೋಣಿ ಮಳಿ ಆದ್ರ ಓಣಿ ತುಂಬ ಕಾಳಂತ್, ಅದಕ ಬಿತ್ತು ಕೆಲಸ ನಡದಾವಾ’
ಯೀಂಗೆ ಸಾಗ್ತಿರಬೇಕಾದರ್ರೇ, ದೂರ್ದ ಹಜಾಮ್ರ ಕೇರಿಗೂ ಈ ಇಷ್ಯ ತಲ್ಪಿ, ಅಲ್ಲಿನ ಜೀವ್ಕುಲಗಳೆಲ್ಲ ದಡದಡನೇ ತಟಾಯ್ದು ಬಂದು ಅಲ್ಲಿ ಗುಮ್ಪಾಗಿ, ತಮ್ತಮ್ಮ ಪಾಲ್ನ ಕಿತ್ಕೊಳ್ಳಲು ಹಾತೊರಿತಿದ್ವು. ಹಜಾಮ್ರ ಕೇರಿನ್ದ ಕುಮ್ಬಾರ ಕೇರಿಗೂ ತಲ್ಪಿ, ಅಲ್ಲಿನ್ದ ಬ್ರಾಮ್ಬರ ಕೇರಿ ತಲ್ಪಿತು. ಊರಿನ ಎಲ್ಲ ಕೇರ್ಗಳ ಜೀವ್ಗಳು ಬನ್ದು ಕುಂಟ್ನಾಯ್ನ ಮೋಕ್ಷ ಸೇರ್ಸಲು ಪರಿಪಾಟ್ಲುಪಡ್ತಿದ್ವು. ಅವು ತಮ್ಪಾಡ್ಗೆ ತಾವು ಬೇಕಾದಷ್ಟು ತಿನ್ದಿದ್ರೇ ಏನೂ ಆಗ್ದೆ ಊರ್ಗೂ ಗೊತ್ತಾಗ್ದೆ ಎರಡ್ಮೂರು ಜಿನಕ್ಕೆ ಆ ಊರಲ್ಲಿ ಕುಂಟ್ನಾಯಿ ಎಂಬುದೇ ಇರ್ಲಿಲ್ಲ ಅನ್ನಂಗೆ ಮಾಡ್ತಿದ್ವು. ಆದ್ರೇ ಆದದ್ದೇ ಬೇರೆ.
ಆದದ್ದಿಷ್ಟೇ… ತಾಯ್ಗೊಳಿಯು ತಾನು ತಿನ್ದೆ ಪಿಳ್ಳೆಗಳ್ಗೆ ತಿನುಸ್ತಾ ಇದ್ದುದು ನಡೀತಾ ಇತ್ತು. ಅದ್ರ ಹುನ್ಜಗೆ ಯಾಕೋ ಸರಿ ಕಾಣ್ಲಿಲ್ಲ. ತಾನು ಒನ್ದೆಜ್ಜೆ ಮುನ್ದೆ ಹೋಗಿ ಕುಂಟ್ನಾಯಿ ಸರೀಳದ ಮೇಲೆ ಹತ್ತಿ ತನ್ನ ಚೂಪಾದ ಕೊಕ್ಕಿನ್ದ ಕುಕ್ಕಿ ಬಾಡನ್ನು ಕಿತ್ತು ತನ್ದು ಕೋಳಿಗೆ ಕೊಟ್ಟಿತು. ಅಲ್ಲಿಯೇ ಸೊರಗಿ ಮಲ್ಗಿದ್ದ ಸಣುಕ್ಲು ನಾಯ್ಮರಿಯೊಂದು ಅಲ್ಲಿನ ರೈತವನ್ನೇ ತನ್ನ ಉದ್ದ ನಾಲ್ಗೆಯಿನ್ದ ನೆಕ್ತಿತ್ತು. ಯಾವಾಗ ಹುನ್ಜ ಬಾಡಿನ ಚೂರನ್ನು ಅಲ್ಲಿ ಹಾಕ್ತೋ ಆ ಸಣುಕ್ಲು ನಾಯ್ಮರಿ ಗಬಕ್ಕನೇ ತನ್ನ ನಾಲ್ಗೆಯಿನ್ದ ನುನ್ಗಿಬಿಟ್ಟಿತು. ತನ್ನ ಸಮ್ಸಾರಕ್ಕಾಗಿ ಬಾಡಿನ ಬೆಟ್ಟವನ್ನತ್ತಿ ತನ್ದಿದ್ದನ್ನು ಯಾವ್ದೋ ಸಣುಕ್ಲುಮರಿ ತಿನ್ದದಕ್ಕೆ ಹುನ್ಜಕ್ಕೆ ಸಿಟ್ಟೇರಿ ಆ ಮರಿಯ ಕಣ್ಣನ್ನು ಹೋಗಿ ಕುಕ್ಕಿತು. ಸಣುಕ್ಲು ನಾಯ್ಮರಿ ಊರಾದೂರ್ಗೆ ಕೇಳ್ಸಂಗೆ ಜೋರಾಗಿ ಅರಚಿ ನರಳಿತು. ಅದ್ರ ನೋವ ತಡಿಲಾರ್ದೆ ಮೂಲೇಲಿ ಮಲ್ಗಿದ್ದ, ಬರೀ ಕರುಳಲ್ಲೇ ಜೀವ ಉಳ್ಸಕಂಡಿದ್ದ ತಾಯ್ನಾಯಿ ತನ್ನ ಕರುಳಕುಡಿಗೆ ಆದ ನೋವಿನಿಂದ, ನಡೆಯಲಾರದಂಗಿದ್ದರೂ ಮರಿಗಾಗಿ ಮೂರು ತಾವ ಬಿದ್ದು-ಬಿದ್ದು ಬಂದು, ಆ ಹುನ್ಜವನ್ನು ಏನೂ ಮಾಡಲಾಗದೆ ತಾಯ್ಗೋಳಿಗೂ ಏನೂ ಮಾಡಲಾಗದೆ ಪಿಳ್ಳೆಯೊಂದನ್ನು ಬಾಯಲ್ಲಿ ಕಚ್ಚಿ ಹಿಡಿತು. ತನ್ನ ಕುಡಿಯೊಂದು ತನ್ನೆದುರಿಗೆ ನಾಯ ಬಾಯಲ್ಲಿರುವುದನ್ನು ತಾಯ್ಗೋಳಿ ನೋಡಿ ವೀರಾವೇಶದಿಂದ ಹಾರಿ ತಾಯ್ನಾಯ ಕಣ್ಗೆ ಕುಕ್ಕಿತು. ಬಾಯ್ಲಿದ್ದ ಪಿಳ್ಳೆನಾ ಬಿಟ್ಟ ನಾಯಿ ಸುತ್ತ ಮುತ್ತ ಒದರಾಡಿತು. ಅದ್ರಿಂದ ಅಲ್ಲಿದ್ದ ಕೋಳಿ ಪಿಳ್ಳೆಗಳೆಲ್ಲ ಜೋರಾಗಿ ಕೂಗುತ್ತ ರಾಡಿ ಎಬ್ಬಿಸಿದವು. ಅಲ್ಲೊಂದು ರಣಾಂಗಣವೇ ನಿರ್ಮಾಣವಾಯಿತು. ಅಲ್ಲಿರುವವೆಲ್ಲ ಎಲ್ಡು ಕಡೆಗಳಾಗಿ ಎದ್ರಾದವು. ಬೇರ್ಬೇರೆ ಕೇರಿಯಿಂದ ಬಂದಿದ್ದವು ತಾವು ಎತ್ತ ಸೇರ್ಬೇಕು ಎಂಬುದು ಅರುವಾಗದೆ ಅರುಗಾಗಿ ನಿಂತ್ವು. ನಾಯ್ಗಳ ಬಾಯ್ಜಗಳ ಊರಿನ ಜನಗಳ ಕಿವಿಗೆ ತಲುಪಿ ಜನಗ್ಳ ನೆಮ್ದಿ ಕಳಿತು. ಹಿರೀಕರೆನಿಸಿದವರೆಲ್ಲ ಅಲ್ಗೆ ಬನ್ದು ಅದ್ನ ಪರಮ್ಬರಿಸಿ ತೀಮಾರ್ನಕ್ಕೆ ಬನ್ದರು.

ಹಿರೀಕರೆಲ್ಲ ಸೇರಿ ಆ ನಾಯಿ ಎಳ್ದು ಹಾಕ್ಲಿಕ್ಕೆ ಮಾದಿಗ್ರಿಗೆ ಹೇಳ್ಕಳಿಸಿದ್ರು ಊರಿನ ಹೀರೇರು. ಬೋಡಯ್ಯ ಹಣ್ಣು ಮುದುಕ. ಕಣ್ಣು ಬೇರೆ ಕಾಮ್ತಿರಲಿಲ್ಲ. ದೊಡ್ಹನ್ಮಂತ, ಚಿಕ್ಕೀರಮ್ಮ ಆಟ ಆಡಾಕೋ ಏನ್ಕೋ ಎಲ್ಲೋ ಹೋಗಿದ್ರು. ಚಿಕ್ಕಬೋಡಯ್ಯನಿಗೆ ತಿಂಗ್ಳಿಂದ ಯಾವ್ದೋ ಜಡ್ಡು ಬಂದು ಕಾಲು ಎತ್ತಿಡಕ್ಕೇ ಆಗ್ತಾ ಇರ್ಲಿಲ್ಲ. ದಿನಾ ಮಲ್ಗೋದು-ಎದ್ದೇಳಕ್ಕೂ ಯಾರಾದ್ರೂ ಬರ್ಬೇಕಿತ್ತು. ಇಂಗಿರ್ವಗಾ ಊರಿನ ಹೀರೇರು ಹೇಳಿಕಳುಸುದ್ರು. ಚಿಕ್ಕಬೋಡಯ್ಯ ಹೋಗಕ್ಕೆ ಆಗ್ಲೇ ಇಲ್ಲ. ಊರಿನ ಹೀರೇರಿಗೆಲ್ಲ ಸಿಟ್ಟು ಬಂದುಬುಡ್ತು. “ಎಲಾ ಮಾದ್ಗ… ಏನ್ ಕೊಬ್ಬು ಬಂದುಬುಡ್ತು…! ಅವ್ರನ್ನೆಲ್ಲ ಎಳ್ಕಂಡು ಬರ್ರಲ್ಲ…” ಅಂತ ನಾಲ್ಕಾರು ಜನ್ಗಳ್ಗೆ ಹೇಳುದ್ರು. ಒಂದಷ್ಟು ಜನ ಹೋದ್ರು. ಅಳ್ಳಿಮರ್ದಡಿ ನರಳುತ್ತ ಕೂತಿದ್ದ ಬೋಡಯ್ಯ ಮತ್ತು ಅವ್ನ ಮಗ ಚಿಕ್ಕಬೋಡಯ್ಯನ ಹಿಡ್ದು ಎಳ್ಕಂಡು ಬಂದ್ರು. ದಾರಿಯೆಲ್ಲ ರಾಮಾರಂಪ ಆಗ್ಬುಡ್ತು. ಇಬ್ರೂ ದಿಕ್ಕುದಿಕ್ಕಿಗೆಲ್ಲ ಕೈ ಮುಗಿದು ಕೇಳುದ್ರೂ ಯಾರೂ ಕರುಣೆ ತೋರ್ಲೇ ಇಲ್ಲ. ಅಲ್ಲೇ ಅಣಮಂತ ಗುಡಿ ಎದುರಿನ ಕಂಬಕ್ಕೆ ಇಬ್ರುನೂ ಕಟ್ಟಿ ಚೆನ್ನಾಗಿ ಹೊಡೆದೇ ಹೊಡೆದರು. ಹೊಡೆದವರು ಸುಸ್ತಾಗಿ ದಣಿದು ಕೂತ್ರು. ಇದೆಲ್ಲ ಮುಗಿವಷ್ಟೊತ್ತಿಗೆ ಸರೊತ್ತು ಆಗ್ಬಿಟ್ಟಿತ್ತು. ನ್ಯಾಯ ಮುಗ್ಸಿ, ನಾಳೆ ಮತ್ತೆ ಇಚಾರಣೆ ಮಾಡುವ ಅಂತ ಹಗ್ಗ ಬಿಚ್ಚಿ ಎಲ್ಲ ಅವ್ರರವ್ರ ಮನೆಗೆ ಹೋದ್ರು.
ಆಕಾಶದಲ್ಲಿ ಚುಕ್ಕಿಗಳು ಹೊರಗೆ ಇಣುಕಲು ಹೆದುರುತ್ತಿದ್ದವು. ಮೊದಲೇ ವಯಸಾಗಿದ್ದ ಬೋಡಯ್ಯನಿಗೂ ಮುದುಕ ಎಂಬುದನ್ನು ನೋಡದೇ ಜಾಡಿಸಿದ್ದರು. ಚಿಕ್ಕಬೋಡಯ್ಯಗಂತೂ ಹೆಚ್ಚಾಗಿಯೇ ಬಿದ್ದಿದ್ವು; ಗ್ಯಾನ ಕಳ್ಕಂಡು ಬಿದ್ದಿದ್ದ. ಎಷ್ಟೋ ವತ್ತಾದ್ಮೇಲೆ ಗ್ಯಾನ ಬಂದ ಚಿಕ್ಕಬೋಡಯ್ಯ, ಇವತ್ತಿನದು ಮತ್ತು ನಾಳಿನದೂ ನೆನೆದು ನಡುಗಿಹೋದ. ಅಪ್ಪನನ್ನು ನೋಡಿದ. ತಮ್ಗೆ ಬಂದ ಗತಿ ನೆನೆದು ಕಣ್ಣೀರಿಟ್ಟ. ಯಾವ ದೇವರೂ ಕೈ ಹಿಡಿಯದ ಸ್ಥಿತಿಯಿಂದ ನಲುಗಿಹೋದ. ಅಪ್ಪನಿಗೆ ಹೇಳಿದ, “ಅಪ್ಪ ನಾವು ಇಲ್ಲಿರೋದು ಬೇಡ. ಜಡ್ಡು ಜಾಪತ್ರೆ, ಮುದ್ಕ ಅನ್ನೋದು ನೋಡ್ದೆ ಇಂಗೇ ಹೊಡ್ದುಬಿಟ್ರಲ್ಲ… ಬೇರೆ ಎಲ್ಲಾದ್ರೂ ಹೋಗಾನ ನಡಿಯಪ್ಪ.” ಬೋಡಯ್ಯ, “ಬೇಡ ಮಗಾ… ಈ ಊರಾಗೆ ಬಂದು ತಳವೂರಿವಿ. ಏಟು ನೆಲ ಅಂತಾ ನಡೆಯೋದು? ಸಾಕಾಗಿ ಇಲ್ಲಿ ನಿಂತ್ವಿ. ನಮ್ಜೊತೆ ಬಂದೋರು ಎಲ್ಲೋದ್ರೋ, ಈ ಊರ್ಗೆ ಬಂದು ಎಷ್ಟು ವರ್ಸ ಆಯ್ತೋ… ಇನ್ನೇನೂ ನನ್ ಕಾಲನೂ ಮುಗಿತಾ ಬಂದೈತೆ. ಈಗ ಎಲ್ಲಂತ ಹೋಗೋದು? ಸಣ್ಮಕ್ಳು, ಈ ಮುದ್ಕ ಇವ್ರನ್ನೆಲ್ಲ ಎಳ್ಕೊಂಡು ಹೋಗೋದು ಕಷ್ಟ. ಇಲ್ಲೇ ಇರೋದು. ಇಲ್ಲೇ ಸಾಯೋದು…” ಅಂದ. ಅದ್ಕ ಚಿಕ್ಕಬೋಡಯ್ಯ, “ನೋಡು… ಇಂಗೇ ಮಕ-ಮೂತಿ ನೋಡ್ದೇ ಹೊಡ್ದುಬುಟ್ಟಾವ್ರೆ. ಇಲ್ಯಾಕೆ ಇರ್ಬೇಕು? ನಾನಂತೂ ಇರಲ್ಲ. ನೀನು ಬೇಕಾದ್ರೇ ಇರು,” ಅಂತ ನಿರ್ಧಾರ ಹೇಳಿ ನಿಧಾನಕ್ಕೆ ಎದ್ದ. ಅಕಡೆ ಈಕಡೆ ವಾಲಾಡುತ್ತ, ಕಾಲ್ನ ಎಲ್ಲಿಡೋದು ಅಂದ್ಕಂಡು ಹೆಜ್ಜೆಯಿಡ್ತಿದ್ದ. “ಏನೇ ಆಗ್ಲಿ ಈ ಊರಾಗೆ ಇರೋದು ಬೇಡ,” ಅಂತ ತಮ್ಮ-ತಂಗಿನೂ ಕರ್ಕಂಡು ಕತ್ತಲಲ್ಲಿ ಕರಗಿಹೋದ. ಇತ್ತ ಬೋಡಯ್ಯ, ಮಗ-ಮಕ್ಕಳು ಹ್ವಾದ ದಿಕ್ಕನ್ನೇ ನೋಡ್ತಾ, ಎದ್ದು ಹೋಗಲೂ ಆಗ್ದೆ ರಾತ್ರಿಯೆಲ್ಲ ಅಲ್ಲೇ ಕಳೆದ.
ಈ ಕನ್ನಡ ಕೇಳಿದ್ದೀರಾ?: ಕೆ ಆರ್ ಪೇಟೆ ಸೀಮೆಯ ಕನ್ನಡ | ಕೊನ್ಗೂ ಬುದ್ದಿ ಕಲ್ತು ನಾರಾಯಣ್ ಗೌಡುನ್ನ ಸೋಲ್ಸುದ್ರು ನಮ್ ಕ್ಯಾರ್ಪೇಟೆ ಜನ
ರಾತ್ರಿಯೆಲ್ಲ ಒದೆ ತಿಂದ ಬೋಡಯ್ಯ ಬದ್ಕಿದ್ದಾನೋ ಇಲ್ಲವೋ ಎಂದು ನಿಧಾನಕ್ಕೆ ಸೂರಪ್ಪ ಮರೆಯಿಂದ ಇಣುಕಿ ನೋಡಿದ. ಉಸ್ರಾಡ್ತಿದ್ದ ಬರೀ ಮೂಳೆಗಳ ಚಕ್ಕಳವಾಗಿದ್ದ ಬೋಡಯ್ಯನ ನೋಡಿ ಸೂರಪ್ಪ ಚಡಪಡಿಸುತ್ತ ಬೆಳಕ ಹರಿಸಿದ. ರಾತ್ರಿಯೆಲ್ಲ ನಡೆದುದನ್ನೆಲ್ಲಾ ಸೂರಪ್ಪ ಊಹಿಸಿಬಿಟ್ಟಿದ್ದ. ಅವನಿಗೂ ಅದೇನು ಹೊಸ್ದಾಗಿರ್ಲಿಲ್ಲ. ತಾನು ಹ್ವಾದ ಕಡೆಯೆಲ್ಲ ಇದೇ ರೀತಿ ನಡೆಯುತ್ತಿದ್ದುದು ಸರ್ವೇಸಾಮಾನ್ಯ. ದಣಿಗಳ ಒದೆಯಿಂದ ದಣಿದವರಿಗೆ ತನ್ನ ಕಿರಣಗಳಿಂದ ಶಕ್ತಿ ತುಂಬಲು ಹರಸಾಹಸಪಡುತ್ತಿದ್ದ. ಸೂರಪ್ಪ ಮೇಲಕ್ಕೆ ಬಂದಂತೆ, ಬೋಡಯ್ಯ ಸೊಲ್ಪಸೊಲ್ಪನೇ ಸುಧಾರಿಸಿಕೊಳ್ಳತೊಡಗಿದ. ಹಾಗೆ ಊರಿನ ಜನನೂ ಉಂಡು-ತಿಂದು ಅಣಮಂತ ದೇವಸ್ಥಾನದ ಕಡೆ ಸೇರತೊಡಗಿದರು. ಬೋಡಯ್ಯ ಒಬ್ಬನೇ ಇದ್ದುದನ್ನು ನೋಡಿ ಅವ್ರಿಗೆಲ್ಲ ಮತ್ತೇ ಸಿಟ್ಟು ಹಣೆಮೇಲೆ ಬಂದ ಸೂರಪ್ಪನಂಗಾಯ್ತು. ಮಗನನ್ನ ಇವ್ನೇ ಎಲ್ಲೋ ಕಳ್ಸವ್ನೇ ಅಂತ ಮತ್ತೂ ಜಾಡಿಸಿದರು. ಸೂರಪ್ಪನೇ ನೋಡಲಾರದೆ ಮೋಡದ ಮರೆಯೊಳಗೆ ಅಡಗಿ ಕೂತ. ದಣಿದು ಸುಸ್ತಾದ ಮೇಲೆ ಬೋಡಯ್ಯನನ್ನು ಎಳೆದೊಯ್ದು ಆ ಅಳ್ಳಿಮರದತ್ರ ಬಿಸಾಕಿದ್ರು. ಯಾರು ನೀರು ಕುಡಿಸಿದರೋ, ಯಾರು ನೋಡ್ಕನ್ಡ್ರೋ… ಒಂದಷ್ಟು ಕಾಲ ಊರಿಗೆ ಬೋಡಯ್ಯ ಅನ್ನುವವನಿದ್ದ ಎಂಬಂತೆ ಇದ್ದು ಸತ್ತ.
…ಮುಂದುವರಿಯುವುದು
‘ನೀಗೊನಿ’ಯ ಹಿಂದಿನ ಸಂಚಿಕೆಗಳು:
ಸಂಚಿಕೆ 1: ‘ನೀಗೊನಿ’ ಅನ್ತ ಯಾರಾದ್ರೂ ಊರಿಗೆ ಹೆಸ್ರು ಕಟ್ತಾರಾ?
ಸಂಚಿಕೆ 2: ಕೋಡಿಗೆ ನೆನ್ಪಾತು, ‘ಈ ದಿಕ್ಕಾಗೆ ಮನ್ಸುರನ್ನ ತಿನ್ನೋ ಜನ ಐತೆ…’
ಸಂಚಿಕೆ 3: ನೀಗೊನಿ | ಕುಂಟ್ನಾಯಿ ಕಚ್ಚಿದ್ದೇ ತಡ ನನ್ಜ ನಾಯ್ಗಳಿಗಿಂತಲೂ ಜೋರಾಗಿ ಅರಚಿದ!
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ