ಮೈಕ್ರೋಸ್ಕೋಪು | ಪ್ರತಿದಿನ ಸಿಗುತ್ತಿರುವ 19,000 ಕೋಟಿ ಗಂಟೆ ಸಮಯವನ್ನು ನಾವು ಏನು ಮಾಡುತ್ತಿದ್ದೇವೆ?

Date:

Advertisements
ಇಂತಹ ಅಧ್ಯಯನಗಳನ್ನು ಮಾಡುವುದು ಹುಚ್ಚುತನ ಅಂತ ನಿಮಗನ್ನಿಸಬಹುದು. ಆದರೆ, ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಚೂರೇ ಚೂರು ಹೆಚ್ಚೂಕಡಿಮೆ ಆದರೂ ಪರಿಣಾಮ ಏನಾಗಬಹುದು ಎಂದು ಅಂದಾಜಿಸಲು ಇಂತಹ ಅಧ್ಯಯನಗಳು ಸಹಾಯ ಮಾಡುತ್ತವೆ

ನನ್ನೊಬ್ಬ ಬಾಸ್‌ ಇದ್ದರು. “ನಾನು ದಿನಕ್ಕೆ ಇಪ್ಪತ್ತಾರು ಗಂಟೆ ಕೆಲಸ ಮಾಡುತ್ತೇನೆ,” ಎಂದು ಹೆಮ್ಮೆ ಪಡುತ್ತಿದ್ದರು. ಬಹುಶಃ ಇಂತಹ ಬಾಸು ನಿಮಗೂ ಇದ್ದಿರಬಹುದು ಅಥವಾ ಹಾಗೆ ಹೇಳುವ ಬಾಸು ನೀವೇ ಆಗಿದ್ದರೂ ಇರಬಹುದು. ಒಟ್ಟಾರೆ ದಿನದಲ್ಲಿ ಇರುವ ಇಪ್ಪತ್ತನಾಲ್ಕು ಗಂಟೆಯೂ ಚಟುವಟಿಕೆಯಿಂದ ಇರುತ್ತೇವೆ ಎನ್ನುವುದಕ್ಕೆ ಹಾಗೆ ಹೇಳುತ್ತೇವಷ್ಟೆ. ಆದರೆ, ಯಾರೇ ಆಗಲಿ, ಇಪ್ಪತ್ತನಾಲ್ಕು ಗಂಟೆಯೂ ಸದಾಚಾರಿಗಳಾಗಿರುವುದಿಲ್ಲ. ಅರ್ಥಾತ್‌, ದಿನ ಪೂರ್ತಿ ಯಾರೂ ಉಪಯುಕ್ತ ಕೆಲಸಗಳಲ್ಲಿಯೇ ತೊಡಗಿರುವುದಿಲ್ಲ ಎನ್ನೋಣ. ಅದಕ್ಕೇ, ಮುತ್ತು ಜಾರಿದರೆ, ಸಮಯ ಕಳೆದುಹೋದರೆ ಮರಳಿ ಬಾರುವುದಿಲ್ಲ ಎನ್ನುವ ಗಾದೆಗಳು ಹುಟ್ಟಿಕೊಂಡಿವೆ. ಹೀಗೆ, ಸಮಯ ಎನ್ನುವುದು ಬಹಳ ಅಮೂಲ್ಯ ಎನ್ನುವುದು ಎಲ್ಲರಿಗೂ ತಿಳಿದಿದ್ದೇ. ನಾವೆಲ್ಲ ನಮ್ಮ ದಿನಚರಿಯಲ್ಲಿ ಎಷ್ಟು ಗಂಟೆಗಳನ್ನು ಯಾವ್ಯಾವುದಕ್ಕೆ ಬಳಸುತ್ತೇವೆ? ಇವು ನಮಗೆ ಅಂದರೆ ವೈಯಕ್ತಿಕವಾಗಿ ನನಗೆ, ನಿಮಗೆ ಅತ್ಯವಶ್ಯ ಚಟುವಟಿಕೆಗಳೋ ಅಥವಾ ಅವಶ್ಯಕವೆಂದಾಗಿಲ್ಲವಾದರೆ, ಎಷ್ಟು ಸಮಯವನ್ನು ನಾವು ವ್ಯರ್ಥ ಮಾಡುತ್ತಿದ್ದೇವೆ?

ಇವು ಬಹುಶಃ ಸಮಯದ ಬಗ್ಗೆ ಕಾಳಜಿ ಇರುವ ಯಾರೇ ಆದರೂ ಕೇಳುವಂತಹ ಪ್ರಶ್ನೆ. ಆದರೆ, ವಿಜ್ಞಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ಒಬ್ಬ ವ್ಯಕ್ತಿ ಏನು ಮಾಡುತ್ತಾನೆ ಎನ್ನುವ ಬದಲಿಗೆ, ಒಂದು ಸಮುದಾಯ ತನಗೆ ದೊರೆತಿರುವ ಅಮೂಲ್ಯ ಸಮಯವನ್ನು ಹೇಗೆ ಕಳೆಯುತ್ತದೆ ಎಂದು ಗಮನಿಸುತ್ತಾರೆ. ಜೀವಿವಿಜ್ಞಾನದಲ್ಲಿ ದೈನಂದಿನ ಚಟುವಟಿಕೆಗಳ ಲೆಕ್ಕಾಚಾರ ಆ ಜೀವಿಯ ಅಳಿವಿಗೆ, ಉಳಿವಿಗೆ ಸಂಬಂಧಿಸಿದ್ದು ಎನ್ನುವುದು ವಿಜ್ಞಾನಿಗಳ ತರ್ಕ. ಉದಾಹರಣೆಗೆ, ಬಹುತೇಕ ಜೀವಿಗಳು ತಾವು ಎಚ್ಚರವಾಗಿರುವಷ್ಟು ಹೊತ್ತಿನಲ್ಲಿ ಬಹಳಷ್ಟು ಸಮಯವನ್ನು ಆಹಾರವನ್ನು ಸಂಪಾದಿಸುವುದರಲ್ಲಿಯೇ ಕಳೆಯುತ್ತವೆಯಂತೆ. ಇನ್ನೊಂದಿಷ್ಟು ಹೊತ್ತು ಸಂಗಾತಿಯನ್ನು ಹುಡುಕಿ ಓಲೈಸುವುದಕ್ಕೆ. ಸ್ವಲ್ಪ ಹೊತ್ತು ವೈರಿಗಳಿಂದ ತಮ್ಮನ್ನು ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಮೀಸಲಾಗಿಟ್ಟಿರುತ್ತವೆಯಂತೆ. ಇವುಗಳಲ್ಲಿ ಯಾವುದೇ ಚಟುವಟಿಕೆಯಲ್ಲಿ ಹೆಚ್ಚು ಸಮಯ ಕಳೆದರೂ ಅಳಿವಿಗೆ ಹಾದಿಯಾಗಬಹುದು. ಉದಾಹರಣೆಗೆ, ಆಹಾರವೇ ಪ್ರಧಾನವಾಗಿಬಿಟ್ಟರೆ, ಸಂಗಾತಿಯ ಹುಡುಕಾಟ ನಿಂತು ವಂಶವೇ ಕೊನೆಯಾಗಿಬಿಡಬಹುದು. ಹಾಗೆಯೇ, ವೈರಿಗಳಿಂದ ರಕ್ಷಿಸಿಕೊಳ್ಳುವುದಕ್ಕೆ ಗೂಡನ್ನು ಕಟ್ಟುವುದೋ, ಸುರಕ್ಷಿತ ಸ್ಥಳವನ್ನು ಹುಡುಕುವುದೋ ಮೊದಲಾದ ಚಟುವಟಿಕೆಗಳಿಗೆ ವ್ಯಯಿಸುವ ಸಮಯ ಉಳಿವಿಗೆ ಹಾದಿಯಾಗುತ್ತದೆ. ಹೀಗೆ, ಈ ಎಲ್ಲ ಚಟುವಟಿಕೆಗಳ ನಡುವೆಯೂ ಒಂದು ಸಮತೋಲನವನ್ನು ಜೀವಿಗಳು ಸಾಧಿಸಬೇಕಾಗುತ್ತದೆ. ಜೀವಿಗಳು ಬದುಕುವ ಸಂದರ್ಭ, ಸುತ್ತಮುತ್ತಲಿನ ಪರಿಸರ, ಆಹಾರದ ಸಮೃದ್ಧಿ ಅಥವಾ ಕೊರತೆ ಮುಂತಾದುವು ಅವುಗಳ ದೈನಂದಿನ ಚಟುವಟಿಕೆಯನ್ನೂ ಬದಲಿಸಬಲ್ಲವು. ಚಿಂಪಾಂಜಿ ದಿನದಲ್ಲಿ ಮುಕ್ಕಾಲು ಭಾಗ ಹಣ್ಣು-ಹಂಪಲನ್ನು ಹುಡುಕುವುದರಲ್ಲಿಯೇ ವ್ಯಯಿಸುತ್ತದೆ. ಬೀದಿನಾಯಿಗಳನ್ನು ಗಮನಿಸಿ; ಅವು ಕೂಡ ಊರೆಲ್ಲ ಸುತ್ತಿ, ಎಲ್ಲಿಯಾದರೂ ಆಹಾರ ಸಿಗುತ್ತದೆಯೋ ಎಂದು ಅರಸುತ್ತಿರುತ್ತವೆ.

ಗಂಟೆ
ಸಾಂದರ್ಭಿಕ ಚಿತ್ರ | ಕೃಪೆ: ಓಚಪ್ಪನ್

ಹಾಗಿದ್ದರೆ ನಾವು – ಮನುಷ್ಯರೆಂಬ ಪ್ರಾಣಿಗಳು ಏನು ಮಾಡುತ್ತೇವೆ? ಒಟ್ಟು 800 ಕೋಟಿ ಜನರಿದ್ದೇವಲ್ಲ? ಒಂದು ದಿನದಲ್ಲಿ ಎಲ್ಲರಿಗೂ ದೊರೆಯುವ ಕಾಲಾವಕಾಶವನ್ನು ಲೆಕ್ಕ ಹಾಕಿದರೆ ಒಟ್ಟು 19,000 ಕೋಟಿ ಗಂಟೆಗಳಷ್ಟು ಸಮಯ ಒಟ್ಟಾರೆ ಮಾನವರಿಗೆ ಸಿಗುತ್ತದೆ. ಇದೊಂದು ಸಂಪನ್ಮೂಲ. ಇದನ್ನು ನಾವು ಹೇಗೆ ಬಳಸುತ್ತೇವೆ ಎನ್ನುವುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚೆಗೆ ಕೆನಡಾದ ಮ್ಯಾಕ್‌ ಗಿಲ್‌ ವಿಶ್ವವಿದ್ಯಾನಿಲಯದಲ್ಲಿ, ಭೂಮಿ ಮತ್ತು ಗ್ರಹ ವ್ಯವಸ್ಥೆಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಎರಿಕ್‌ ಗಾಲ್‌ ಬ್ರೈತ್‌ ಮತ್ತು ತಂಡದವರು ಹೀಗೊಂದು ಲೆಕ್ಕ ಹಾಕಿದ್ದಾರೆ. ಈ ಲೆಕ್ಕಾಚಾರಗಳ ಪ್ರಕಾರ, ಒಟ್ಟಾರೆ ಮನುಷ್ಯರು ನಿದ್ರೆ ಮಾಡುವುದೇ ಅತಿ ಹೆಚ್ಚು. ನಾವು ಈ ಹಿಂದೆ ತರ್ಕಿಸಿದ್ದಕ್ಕಿಂತಲೂ ಒಂದು ಗಂಟೆ ಹೆಚ್ಚೇ ಮನುಷ್ಯರು ನಿದ್ರೆ ಮಾಡುತ್ತಾರಂತೆ. ಈ ವರದಿಯನ್ನು ‘ಪ್ರೊಸೀಡಿಂಗ್ಸ್‌ ಆಫ್‌ ನ್ಯಾಶನಲ್‌ ಅಕಾಡೆಮಿ ಆಫ್‌ ಸೈನ್ಸಸ್‌’ ಪತ್ರಿಕೆ ವರದಿ ಮಾಡಿತ್ತು.

Advertisements

ಇದೇನಿದು ಉಪಯುಕ್ತ ಕಾಲಗಣನೆ ಎಂದಿರಾ? ಸಾಮಾನ್ಯವಾಗಿ ಕಚೇರಿಗಳಲ್ಲಿ ಈ ಮಾತು ಕೇಳಿರುತ್ತೀರಿ; “ನೂರು ಜನ ಸಿಬ್ಬಂದಿಯಲ್ಲಿ ಕೇವಲ ಇಪ್ಪತ್ತು ಮಂದಿ ಕೆಲಸ ಮಾಡುತ್ತಾರೆ, ಉಳಿದವರು ಸಮಯ ವ್ಯರ್ಥ ಮಾಡುತ್ತಾರೆ.” ಮನುಷ್ಯನ ಚಟುವಟಿಕೆಗಳು ಅವನ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರಬೇಕು, ಸಮಯ ವ್ಯರ್ಥ ಮಾಡುವುದು ಎಂದರೆ ಅದು ಉತ್ಪಾದನೆಗೆ ಅಥವಾ ಕಾರ್ಯಕ್ಷಮತೆಗೆ ಕುಂದು ತಂದಂತೆ ಎನ್ನುವುದು ಅರ್ಥಶಾಸ್ತ್ರಜ್ಞರ ಅಂಬೋಣ. ಅದಕ್ಕಾಗಿ ಅವರು ವಿವಿಧ ಉದ್ಯಮದಲ್ಲಿ ಇರುವ ಸಿಬ್ಬಂದಿ ದಿನದಲ್ಲಿ ಎಷ್ಟು ಕಾಲ ಕೆಲಸ ಮಾಡುತ್ತಾರೆ? ಎಷ್ಟು ಕಾಲ ಮಾಡಿದರೆ ಆಯಾಸವಾಗುತ್ತದೆ? ಉತ್ಪಾದಕತೆಗೆ ಕುಂದು ಬರುತ್ತದೆ? ಹಾಗೆ ಕುಂದು ಬಾರದಂತೆ ದಿನವೂ ಎಂಟು ಗಂಟೆ – ಕಾಸು ಕೊಡುವಷ್ಟು ಹೊತ್ತೂ – ಕೆಲಸ ಮಾಡಿಸುವುದು ಹೇಗೆ ಅಂತೆಲ್ಲ ಚಿಂತಿಸುತ್ತಾರಷ್ಟೆ.

ಗಾಲ್‌ ಬ್ರೈತ್‌ ಕಾಳಜಿ ಇದಲ್ಲ. ಒಟ್ಟಾರೆ ಮನುಷ್ಯರು ನಡೆಸುವ ಚಟುವಟಿಕೆಗಳಲ್ಲಿ ಈ ಭೂಮಿಯ ಒಳಿತಿಗಾಗಿ ಎಷ್ಟು ಸಮಯ ಕಳೆಯುತ್ತಾರೆ? ನಾಶ ಮಾಡುವ ಚಟುವಟಿಕೆಗಳಲ್ಲಿ ಎಷ್ಟು? ಇದನ್ನು ಅರ್ಥ ಮಾಡಿಕೊಂಡಲ್ಲಿ, ಮುಂದೆ ಈ ಚಟುವಟಿಕೆಗಳನ್ನು ಹೆಚ್ಚು ಅಥವಾ ಕಡಿಮೆ ಮಾಡಿ ಭೂಮಿಯ ಉಳಿವಿಗೆ ನೆರವಾಗುವಂತೆ ಮಾಡಬಹುದು ಎನ್ನುವುದು ಗಾಲ್‌ ಬ್ರೈತ್‌ ತಂಡದ ತರ್ಕ. ಈ ತರ್ಕದ ಬೆನ್ನು ಹತ್ತಿದ ತಂಡ, ದಿನವೊಂದರಲ್ಲಿ ಮನುಷ್ಯರು ಒಟ್ಟಾರೆ ಎಷ್ಟೆಷ್ಟು ಕಾಲ ಯಾವ-ಯಾವ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ ಎಂದು ಮಾಹಿತಿ ಕಲೆ ಹಾಕಿತು.

ಈ ಆಡಿಯೊ ಕೇಳಿದ್ದೀರಾ?: ಮಾತೇ ಕತೆ – ನಾಗೇಶ ಹೆಗಡೆ ಸಂದರ್ಶನ | ‘ದಿಲ್ಲಿಯ ಗರ್ಲ್‌ಫ್ರೆಂಡ್ ಕರ್ಕೊಂಡು ನಮ್ ಹಳ್ಳಿಗೆ ಹೋದಾಗ…’

“ಇದು ಹೇಗೆ ಸಾಧ್ಯ? ನಮ್ಮ ಚಟುವಟಿಕೆಗಳೂ, ಯುರೋಪಿನವರದ್ದೂ ಒಂದೇ ತೆರನಾಗಿಲ್ಲವಲ್ಲ? ಹಾಗಿದ್ದ ಮೇಲೆ ಹೇಗೆ ಲೆಕ್ಕ ಹಾಕುವುದು?” ಎಂದಿರಾ? ಇದಕ್ಕೆ ಇವರು, ಅರ್ಥಶಾಸ್ತ್ರಜ್ಞರು ‘ಮೂಗಲ್‌’ ಎಂದು ಸಂಕ್ಷಿಪ್ತವಾಗಿ ಹೇಳುವ ತಂತ್ರವನ್ನು ಬಳಸಿದ್ದಾರೆ. ಹಾಗೆಂದರೆ ಇನ್ನೇನಲ್ಲ… ಚಟುವಟಿಕೆಗಳನ್ನು ಅವುಗಳ ಒಟ್ಟಾರೆ ಫಲದ ಉದ್ದೇಶ ಏನು ಎಂಬುದರ ಆಧಾರದ ಮೇಲೆ ವಿಂಗಡಿಸುವುದು ಅಥವಾ ಮೋಟಿವೇಶನಲ್‌ ಔಟ್‌ಕಂ ಓರಿಯೆಂಟೆಡ್‌ ಜನರಲೈಸ್ಡ್‌ ಆಕ್ಟಿವಿಟಿ ಲೆಕ್ಸಿಕಾನ್‌. ಅಂದರೆ, ಮನುಷ್ಯರ ಸಾಮಾನ್ಯ ಚಟುವಟಿಕೆಗಳ ಒಟ್ಟಾರೆ ಫಲವೇನೆಂಬುದರ ಆಧಾರದ ಮೇಲೆ ಅದನ್ನು ವಿಂಗಡಿಸುವುದು ಎಂದರ್ಥ. ಮನುಷ್ಯರ ಎಲ್ಲ ಚಟುವಟಿಕೆಗಳನ್ನೂ ಹೀಗೆ ಎಂಟು ವರ್ಗಗಳನ್ನಾಗಿ ವಿಂಗಡಿಸಬಹುದಂತೆ. ನಂತರ ಪ್ರತಿಯೊಂದನ್ನೂ ಮೂರು-ಮೂರು ಉಪವರ್ಗಗಳನ್ನಾಗಿಯೂ ವಿಂಗಡಿಸಬಹುದು.

ಹೀಗೆ, ನಿರ್ದಿಷ್ಟ ಚಟುವಟಿಕೆಯನ್ನು ಮೂಗಲ್‌ ಸೂಚಿ ಬಳಸಿ 24 ಪಂಗಡಗಳಲ್ಲಿ ಯಾವುದೆಂದು ಗುರುತಿಸಿ, ಅಂತಹ ಚಟುವಟಿಕೆಯಲ್ಲಿ ಪ್ರಪಂಚದ ವಿವಿಧ ರಾಷ್ಟ್ರಗಳ ಜನತೆ ಎಷ್ಟು ಸಮಯ ತೊಡಗಿಸಿಕೊಂಡಿದ್ದಾರೆ ಎಂದು ಪಟ್ಟಿ ಮಾಡಿದ್ದಾರೆ. ಉದಾಹರಣೆಗೆ, ನಮ್ಮೂರಲ್ಲಿ ನೂರು ಜನ ದಿನಕ್ಕೆ ಎಂಟು ಗಂಟೆ ಕಾಲ ಇಟ್ಟಿಗೆ ತಯಾರಿಸುತ್ತಿದ್ದಾರೆ ಎಂದರೆ, ಅವರು ಈ ಕೆಲಸಕ್ಕಾಗಿ ವ್ಯಯಿಸಿದ ಎಂಟುನೂರು ಗಂಟೆಗಳ ಕಾಲವನ್ನು ಭೂ-ಜಲ ಪರಿವರ್ತನೆಯ ಚಟುವಟಿಕೆಗಳು ಎಂದು ವರ್ಗೀಕರಿಸುತ್ತಾರೆ. ಇದೇ ರೀತಿಯಲ್ಲಿಯೇ, ಇಟ್ಟಿಗೆ ಮಣ್ಣು ಗಣಿ ಮಾಡುವ ಕೆಲಸವೂ ಇದರಲ್ಲಿಯೇ ಸೇರುತ್ತದೆ. ಸಿಮೆಂಟು ತಯಾರಿಕೆಯ ಸಮಯವೂ ಇದಕ್ಕೇ ಕೂಡಿಕೊಳ್ಳುತ್ತದೆ. ಹೀಗೆಯೇ ಆಹಾರದ ಅವಶ್ಯಕತೆಗಳು ಎನ್ನುವ ವರ್ಗದಲ್ಲಿ ಕೃಷಿ, ಅಡುಗೆ, ಧಾನ್ಯ ಸಾಗಣೆ, ಧಾನ್ಯ ಸಂಗ್ರಹ, ಗಿರಣಿ ಮೊದಲಾದವು ಸೇರಿಕೊಳ್ಳುತ್ತವೆ. ಹೀಗೆ ಎಂಟು ಚಟುವಟಿಕೆಗಳ ವರ್ಗವನ್ನು ವಿಂಗಡಿಸಿ, ದಿನದಲ್ಲಿ ನಮಗೆ ದೊರೆಯುವ ಒಟ್ಟಾರೆ 19,000 ಕೋಟಿ ಗಂಟೆಗಳಲ್ಲಿ ಎಷ್ಟನ್ನು ನಿರ್ದಿಷ್ಟ ಉದ್ದೇಶದ ಚಟುವಟಿಕೆಗೆ ಬಳಸುತ್ತಿದ್ದೇವೆ ಎಂದು ಪಟ್ಟಿ ಮಾಡಿದ್ದಾರೆ.

ಈ ಎಲ್ಲ ಲೆಕ್ಕಾಚಾರದ ಪ್ರಕಾರ, ಪ್ರತಿದಿನವೂ ಮನುಷ್ಯರು ಸರಾಸರಿ ಅಥವಾ ತಲಾವಾರು ಒಂಬತ್ತು ಗಂಟೆಗಳಷ್ಟು ನಿದ್ರೆಯ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಹಾಗಂತ ನಿದ್ರೆ ಮಾಡೇ ಇರುತ್ತಾರೆ ಅಂತಲ್ಲ. ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದರೂ ಅದು ನಿದ್ರೆಯ ಲೆಕ್ಕವೇ ಅಂತೆ. ಮತ್ತೊಂದು ಒಂಬತ್ತು ಗಂಟೆ ಮಾನವರಿಗೆ ವೈಯಕ್ತಿಕವಾಗಿ ಅಗತ್ಯವಾದಂತಹ ಚಟುವಟಿಕೆಗಳಿಗೆ ಮೀಸಲು. ಇದರಲ್ಲಿ ಸ್ನಾನ, ಶೌಚಾದಿಗಳೇ ಅಲ್ಲದೆ, ಶಾಲೆ, ಓದು, ವ್ಯಾಯಾಮ, ಊಟ, ಆಟ, ವಿನೋದ, ಮನರಂಜನೆಗಳೆಲ್ಲವೂ ಸೇರಿವೆ. ಸಾಮಾಜಿಕ ಜವಾಬುದಾರಿಗಳಿಗಾಗಿ ಸುಮಾರು ಎರಡು ಗಂಟೆ ಖರ್ಚು ಮಾಡುತ್ತೇವೆ. ಈ ಚಟುವಟಿಕೆಗಳಲ್ಲಿ, ಇತರೆ ಸಮಾಜದ ಸದಸ್ಯರನ್ನು ತಲುಪಲು ಕೈಗೊಳ್ಳುವ ಪ್ರಯಾಣವೂ ಸೇರಿರುತ್ತದೆ. ಇನ್ನೊಂದು ವರ್ಗವೆಂದರೆ, ಉತ್ಪಾದಕತೆ. ಇದರಲ್ಲಿ ಮನೆ ನಿರ್ಮಾಣ, ಕೃಷಿ, ಅಡುಗೆ, ಕಲೆಗಾರಿಕೆ, ಇತ್ಯಾದಿ ಚಟುವಟಿಕೆಗಳು ಸೇರಿವೆ. ಇದಕ್ಕಾಗಿ ನಾವು ಕೇವಲ ಮೂರೂವರೆ ಗಂಟೆಗಳನ್ನಷ್ಟೆ ಖರ್ಚು ಮಾಡುತ್ತೇವಂತೆ.

ಗಂಟೆ
ಸಾಂದರ್ಭಿಕ ಚಿತ್ರ | ಕೃಪೆ: ನೊಮ್ಯಾಡಿಕ್ ಸ್ಯಾಮುಯಲ್

ಇನ್ನು, ಅರ್ಥಶಾಸ್ತ್ರಜ್ಞರಿಗೆ ಆಸಕ್ತಿ ತರುವ ಚಟುವಟಿಕೆಗಳಿಗಾಗಿ ನಾವು ಕೇವಲ ಎರಡೂವರೆ ಗಂಟೆ ಅಥವಾ ನೂರೈವತ್ತೆಂಟು ನಿಮಿಷಗಳನ್ನಷ್ಟೆ ವ್ಯಯಿಸುತ್ತಿದ್ದೇವೆ ಎನ್ನುತ್ತದೆ ಇವರ ಲೆಕ್ಕಾಚಾರ. ಇದರಲ್ಲಿಯೂ ಮೂರರಲ್ಲಿ ಒಂದು ಭಾಗ ಅಂದರೆ, ಸರಿಸುಮಾರು ಒಂದು ಗಂಟೆ ಆಹಾರ ಉತ್ಪಾದನೆ ಮತ್ತದರ ಸಂಸ್ಕರಣೆಗೆ ಬಳಕೆಯಾಗುತ್ತದೆ. ಈ ಚಟುವಟಿಕೆಗಳನ್ನು ಯಾರು, ಹೇಗೆ ಮಾಡಬೇಕು ಎನ್ನುವುದಕ್ಕೆ ಮುಕ್ಕಾಲು ಗಂಟೆ ಕಳೆಯುತ್ತೇವೆ. ಕಟ್ಟಡಗಳು, ರಸ್ತೆ, ಉಪಯೋಗಕ್ಕೆ ಬೇಕಾದ ಕಲಾವಸ್ತುಗಳ ತಯಾರಿಕೆ ಮೊದಲಾದವಕ್ಕೆ ಸುಮಾರು ಅರ್ಧ ಗಂಟೆಯ ಕಾಲ. ಶಾಲೆ-ಕಾಲೇಜುಗಳಿಗೆ ಬಹಳ ಸಮಯ ಬೇಕಲ್ಲ? ಅದೆಷ್ಟಿರಬಹುದು ಎಂಬ ಕುತೂಹಲವಾಯಿತೇ? ಶಾಲೆ-ಕಾಲೇಜುಗಳಿಗೆ ಕೇವಲ ಏಳು ನಿಮಿಷ. ಕುಶಲ ಕಲೆಗಳನ್ನು ಕಲಿಯಲು ಎರಡೇ ಎರಡು ನಿಮಿಷ ಮತ್ತು ಮನೆ, ಪರಿಸರದ ನಿರ್ವಹಣೆಗೆ ಇನ್ನೊಂದು ಐದು ನಿಮಿಷಗಳ ಕಾಲ ಹಾಗೂ ಆಹಾರವಲ್ಲದ ಸಂಪನ್ಮೂಲಗಳಾದ ಇಂಧನಕ್ಕಾಗಿಯೇ ಎರಡು ನಿಮಿಷ ನಾವು ವ್ಯಯಿಸುತ್ತೇವೆ. ಇದು ಒಂದು ದಿನದಲ್ಲಿ ಒಬ್ಬ ವ್ಯಕ್ತಿ ನಾನಾ ಚಟುವಟಿಕೆಗಳಿಗೆ ನೀಡುವ ಸಮಯ. ನೀವು ಕೆಲವಕ್ಕೆ ಸ್ವಲ್ಪ ಜಾಸ್ತಿ ಕೊಡಬಹುದು ಅಥವಾ ಕಡಿಮೆಯನ್ನೂ ಮಾಡಬಹುದು.

ಈ ಅಧ್ಯಯನದಲ್ಲಿ ತೋರಿದ ಕೌತುಕಮಯ ವಿಷಯ ಎಂದರೆ, ಈ ಭೂಮಿ ಸಂಪೂರ್ಣವಾಗಿ ಹಾಳಾಗಿದೆ ಎಂಬ ಕೂಗು ಎದ್ದಿರುವ ಸಮಯದಲ್ಲಿಯೂ, ಮನುಷ್ಯರ ಒಟ್ಟಾರೆ ಆಸಕ್ತಿ ಆಹಾರ ಹುಡುಕುವುದಕ್ಕೆ ಮತ್ತು ಸುಮ್ಮನೆ ಸಮಯ ಕಳೆಯುವುದಕ್ಕೆ ವ್ಯಯವಾಗುತ್ತಿದೆ. ನಮ್ಮ ಪರಿಸರದ ನಿರ್ವಹಣೆಗೆ ಬಹಳ ಕಡಿಮೆ ಎನ್ನುತ್ತದೆ ಅಧ್ಯಯನ. ಹಾಗಿದ್ದರೆ, ಮುಂದೆ ಈ ಅನವಶ್ಯ ಕಾಲಹರಣ ಕಡಿಮೆ ಮಾಡಿ, ಪರಿಸರ ಸಂರಕ್ಷಣೆಗೆ ಇನ್ನಷ್ಟು ಹೆಚ್ಚು ಸಮಯ ಕೊಡಬಹುದು. ಆಗ ಮುಂದೆ ನಮ್ಮ ಪರಿಸರ ಇನ್ನಷ್ಟು ಹಾಳಾಗದಂತೆ ಎಚ್ಚರಿಕೆಯಿಂದ ಕಾಯ್ದುಕೊಳ್ಳುವುದೂ ಸಾಧ್ಯವಾಗಬಹುದು ಎನ್ನುವುದು ಎರಿಕ್‌ ಗಾಲ್‌ ಬ್ರೈತ್‌ ತಂಡದ ಲೆಕ್ಕಾಚಾರ.

ಇಂತಹ ಅಧ್ಯಯನಗಳನ್ನು ಮಾಡುವುದು ಹುಚ್ಚು ಎಂದಿರಾ? ನಮಗೆ, ನಿಮಗೆ ಹಾಗನ್ನಿಸಬಹುದು. ಆದರೆ, ಮುಂದೆ ನಮ್ಮ ಈ ಚಟುವಟಿಕೆಗಳಲ್ಲಿ ಯಾವುದರಲ್ಲಿಯಾದರೂ ಹೆಚ್ಚೂಕಡಿಮೆ ಆದರೆ, ಅದರ ಪರಿಣಾಮ ಪರಿಸರದ ಮೇಲೆ ಆಗಬಹುದು. ಈಗ ಪರಿಸರವನ್ನು ಹಾಳುಗೆಡಹುವಂತಹ ಕೆಲಸಗಳಲ್ಲಿ ನಾವು ಒಟ್ಟಾರೆ ದಿನದ ಕೆಲವೇ ನಿಮಿಷಗಳನ್ನಷ್ಟೆ ಕಳೆಯುತ್ತಿದ್ದೇವೆ. ಒಂದು ವೇಳೆ ಅದು ಹೆಚ್ಚಾದರೆ ಏನಾಗಬಹುದು ಎಂದು ಅಂದಾಜಿಸಲು ಈ ಲೆಕ್ಕಾಚಾರ ನೆರವಾಗಬಹುದು ಅಥವಾ ಇಂತಹುದೇ ಲೆಕ್ಕಾಚಾರಗಳನ್ನು ದೇಶಗಳ ಮಟ್ಟದಲ್ಲಿ ಮಾಡಿದರೆ, ಆ ದೇಶದ ಅಭಿವೃದ್ಧಿಗೆ ಯಾವ ಚಟುವಟಿಕೆಯನ್ನು ಹೆಚ್ಚಿಸಬೇಕು ಎಂದು ತೀರ್ಮಾನಿಸಬಹುದು. ಈಗ ಹೇಳಿ… ನೀವು ಎಷ್ಟು ಸಮಯವನ್ನು ಪರಿಸರಕ್ಕಾಗಿ ಮೀಸಲಿಡಲು ಸಿದ್ಧ?

ಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕೊಳ್ಳೇಗಾಲ ಶರ್ಮ
ಕೊಳ್ಳೇಗಾಲ ಶರ್ಮ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ಸೈನ್ಸ್‌ ರಿಪೋರ್ಟರ್‌' ಪತ್ರಿಕೆಗೆ ವರದಿಗಾರರಾಗಿದ್ದರು. ಮೂರು ದಶಕಗಳಿಂದ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ಹುಡುಕುವ ಉತ್ಸಾಹಿ.

4 COMMENTS

    • ಪ್ರತಿಕ್ರಿಯೆಗಾಗಿ ಧನ್ಯವಾದ ಸರ್. ಈದಿನ.ಕಾಮ್‌ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ನನ್ನಿ. ನಿಮ್ಮಿಂದ ಇನ್ನಷ್ಟು ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.

  1. ಬಹಳ ಅದ್ಭುತವಾದ ಲೇಖನ .ಸಮಯದ ಮೌಲ್ಯ ತಿಳಿಸುವ ಜೊತೆಗೆ ಭೂಮಿಯ ಉಳಿವಿಗೆ ಹೆಚ್ಚು ಸಮಯನೀಡಬೇಕಾದ ಮಹತ್ವವನ್ನು ತಿಳಿಸುತ್ತದೆ . ಖುಷಿಯಾಯಿತು ಓದಿ

    • ಥ್ಯಾಂಕ್ಯೂ ಸರ್. ಈದಿನ.ಕಾಮ್‌ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ನನ್ನಿ. ನಿಮ್ಮಿಂದ ಇನ್ನಷ್ಟು ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X