ಸರ್ಕಾರಗಳು, ರಾಜಕೀಯ ಪಕ್ಷಗಳು ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪೊಳ್ಳು ಭಾಷಣ ಮಾಡುತ್ತಲೇ ಬಂದಿವೆ. ಯಾವ ಸರ್ಕಾರವೂ ಮಹಿಳಾ ಸುರಕ್ಷತೆಯನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿಲ್ಲ. ದಶಕದ ಹಿಂದೆ ದೆಹಲಿಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶದಲ್ಲಿ ಪ್ರತಿಭಟನೆಗೆ ಕಾರಣವಾಗಿತ್ತು. ಆ ಕಾಮುಕರಿಗೆ ಗಲ್ಲು ಶಿಕ್ಷೆಯೂ ಆಯಿತು. ಆದರೆ, ಆನಂತರ ಅದಕ್ಕಿಂತ ಭೀಕರ ಕ್ರೌರ್ಯಗಳು ದೇಶದಲ್ಲಿ ವರದಿಯಾಗುತ್ತಲೇ ಇವೆ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಭಾರೀ ಉತ್ಸುಕವಾಗಿರುವ ಮೋದಿ ಸರ್ಕಾರ ಮೊದಲು ಹೆಣ್ಣುಮಕ್ಕಳಿಗೆ ಸುರಕ್ಷತೆಯ ಬದುಕು ನೀಡಬೇಕಿದೆ.
ರಾಜಸ್ಥಾನದಲ್ಲಿ ಹದಿಮೂರರ ಹರೆಯದ ಬಾಲಕಿಯನ್ನು ಅಪಹರಿಸಿ ಹೊಟೇಲಿನಲ್ಲಿ ಕೂಡಿ ಹಾಕಿ ಮುವ್ವತ್ತು ಮಂದಿ ರಾಕ್ಷಸರು ನಿರಂತರ ಅತ್ಯಾಚಾರವೆಸಗಿದ್ದಾರೆ. ಐದುದಿನಗಳ ಕಾಲ ಕಾಮುಕರ ಕ್ರೌರ್ಯಕ್ಕೆ ಜರ್ಝರಿತವಾಗಿದ್ದ ಬಾಲಕಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾಳೆ. ಈ ಎಳೆ ಬಾಲಕಿಯನ್ನು ಆಟೋ ಚಾಲಕನೊಬ್ಬ ಅಪಹರಿಸಿ ಹೊಟೇಲಿನ ಮಾಲೀಕನಿಗೆ ಮಾರಿದ್ದನಂತೆ! ಖರೀದಿ ಮಾಡಿದ ವ್ಯಕ್ತಿ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾನೆ. ಆಕೆ ಕಿರುಚಾಡಬಾರದು ಎಂದು ನಿರಂತರವಾಗಿ ಮದ್ಯ ಕುಡಿಸುತ್ತಿದ್ದರಂತೆ. ದೇಶದಲ್ಲಿ ವರದಿಯಾಗುವ ಒಂದೊಂದು ಅತ್ಯಾಚಾರ ಪ್ರಕರಣಗಳೂ ಒಂದಕ್ಕಿಂತ ಒಂದು ಹೆಚ್ಚು ಭೀಕರವಾಗಿರುತ್ತವೆ ಎಂಬುದು ವಾಸ್ತವ.
2023ರಲ್ಲಿ ರಾಜಸ್ಥಾನದಲ್ಲಿ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ “ಬಿಜೆಪಿಯ ಏಕೈಕ ಸಂಕಲ್ಪವೆಂದರೆ ರಾಜಸ್ಥಾನವನ್ನು ಅಪರಾಧ ಮುಕ್ತಗೊಳಿಸುವುದು ಮತ್ತು ಹೆಣ್ಣುಮಕ್ಕಳ ಘನತೆಯನ್ನು ಎತ್ತಿಹಿಡಿಯುವುದು. ನಮ್ಮ ಸರ್ಕಾರ ಬಂದರೆ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಣ್ಗಾವಲು ಮತ್ತು ಕಠಿಣ ಕಾನೂನು ಜಾರಿ ಮಾಡಲಾಗುತ್ತದೆ” ಎಂದು ಭರವಸೆ ನೀಡಿದ್ದರು. ಆದರೆ, ರಾಜಸ್ಥಾನ ಈಗಲೂ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಚುನಾವಣೆಯ ಸಮಯದಲ್ಲಿ ಏನೋ ಒಂದು ಬೊಗಳೆ ಬಿಡುವುದು ರಾಜಕೀಯ ಪಕ್ಷಗಳಿಗೆ, ನಾಯಕರಿಗೆ ರೂಢಿಯಾಗಿಬಿಟ್ಟಿದೆ. ಅದರಾಚೆಗೆ ಹೆಣ್ಣುಮಕ್ಕಳ ಸುಕ್ಷರತೆ, ಶಿಕ್ಷಣ, ಸಬಲೀಕರಣ ಸರ್ಕಾರಗಳ ಆದ್ಯತೆಯ ಪಟ್ಟಿಯಲ್ಲಿ ಇರುವುದೇ ಇಲ್ಲ.
ರಾಜಸ್ಥಾನದ ಚುನಾವಣೆಯ ಸಮಯದಲ್ಲಿ “ಗೆಹ್ಲೋಟ್ ಸರ್ಕಾರವು ರಾಜಸ್ಥಾನವನ್ನು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಇಂತಹ ನಾಚಿಕೆಗೇಡಿನ ವ್ಯವಸ್ಥೆಯನ್ನು ಕೊನೆಗಾಣಿಸಲು ಬಿಜೆಪಿ ಸಿದ್ಧವಾಗದೆ. ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ, ಪ್ರತಿ ಜಿಲ್ಲೆಯಲ್ಲೂ ಮಹಿಳಾ ಸುರಕ್ಷತಾ ಸೆಲ್ ಮತ್ತು ‘ಆ್ಯಂಟಿ ರೋಮಿಯೋ’ ಸ್ಕ್ವಾಡ್‌ಗಳನ್ನು ರಚಿಸಲಾಗುವುದು. ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡುವಂತೆ ಮಾಡುವುದು ನಮ್ಮ ಜವಾಬ್ದಾರಿ” ಎಂದು ಹೇಳಿದ್ದ ಅಮಿತ್ ಶಾ ಈಗ ಏನು ಹೇಳುತ್ತಾರೆ? ಮಹಿಳೆಯರ ಮೇಲಿನ ಅತ್ಯಾಚಾರದಲ್ಲಿ ರಾಜಸ್ಥಾನ ಈಗಲೂ ನಂಬರ್ ವನ್ ಸ್ಥಾನದಲ್ಲಿಯೇ ಇದೆ ಎಂದರೆ ಅದು ನಾಚಿಕೆಗೇಡಿನ ಸಂಗತಿ ಅಲ್ಲವೇ? ಶಾ ಭರವಸೆಗೆ ಬೆಲೆಯೆಲ್ಲಿ ಉಳಿದಿದೆ?
ವೇಶ್ಯಾವಾಟಿಕೆ ನಾಗರಿಕತೆ ಹುಟ್ಟಿದಾಗಿನಿಂದಲೂ ಇದೆ. ಬದುಕಿನ ಅನಿವಾರ್ಯತೆ, ಬಡತನ, ವಂಚನೆ, ಹೀಗೆ ನಾನಾ ಕಾರಣಗಳಿಂದ ವೇಶ್ಯಾವೃತ್ತಿಗೆ ಬರುವ ಹೆಣ್ಣುಮಕ್ಕಳು ಈ ವಿಷಮ ವ್ಯವಸ್ಥೆಯೇ ಹುಟ್ಟಿಸಿ ಆಹುತಿ ಪಡೆಯುವ ಬಲಿಪಶುಗಳು. ಆದರೆ, ಅಮಾನುಷ ಖೂಳರು ಪುಟ್ಟ ಪುಟ್ಟ ಮಕ್ಕಳನ್ನು ಅಪಹರಿಸಿ ಕಾಮುಕರ ಬಳಿಗೆ ಬಿಡುವ, ಕ್ರೂರವಾಗಿ ಹಿಂಸಿಸುವ ಹೇಯ ಘಟನೆಗಳು ಪದೇ ಪದೇ ನಡೆಯುತ್ತಿವೆ. ಗ್ರಾಮಗಳಲ್ಲಿ ಹೊಲಕ್ಕೆ ಹೋದ ಮಗಳು, ನೆರೆಮನೆಗೆ ಹೋದ ಪುಟ್ಟ ಬಾಲೆ, ಶಾಲೆಗೆ ಹೋದ ಕಂದಮ್ಮ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿ ಉಸಿರು ಚೆಲ್ಲುವ ಘಟನೆಗಳು ಸಾಮಾನ್ಯವೆಂಬಂತೆ ವರದಿಯಾಗುತ್ತಲೇ ಇದೆ. ಯಾವ ಕಾನೂನು ಕೂಡ ಹೆಣ್ಣುಮಕ್ಕಳನ್ನು ಬಚಾವ್ ಮಾಡುತ್ತಿಲ್ಲ ಎಂಬುದು ದುರಂತ.
ಇನ್ನು ಸರ್ಕಾರಗಳು, ರಾಜಕೀಯ ಪಕ್ಷಗಳು ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪೊಳ್ಳು ಭಾಷಣ ಮಾಡುತ್ತಲೇ ಬಂದಿವೆ. ಯಾವ ಸರ್ಕಾರವೂ ಮಹಿಳಾ ಸುರಕ್ಷತೆಯನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿಲ್ಲ. ದಶಕದ ಹಿಂದೆ ದೆಹಲಿಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶದಲ್ಲಿ ಪ್ರತಿಭಟನೆಗೆ ಕಾರಣವಾಗಿತ್ತು. ಆ ಕಾಮುಕರಿಗೆ ಗಲ್ಲು ಶಿಕ್ಷೆಯೂ ಆಯಿತು. ಆದರೆ, ಅಂತಹ ಪ್ರಕರಣಗಳು, ಅದಕ್ಕಿಂತ ಭೀಕರ ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಲೇ ಇದೆ. ನಿರ್ಭಯಾ ಪ್ರಕರಣದ ನಂತರ ಉತ್ತರಪ್ರದೇಶದ ಉನ್ನಾಂವ್ ಮತ್ತು ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ದೇಶದೆಲ್ಲೆಡೆ ಭಾರೀ ಆಕ್ರೋಶ ಉಂಟು ಮಾಡಿದ್ದವು. ರಾಜಕೀಯ ಮೇಲಾಟಕ್ಕೂ ಕಾರಣವಾಗಿತ್ತು. ಆದರೆ, ಉತ್ತರಪ್ರದೇಶದಲ್ಲಿ ಈಗಲೂ ಅತ್ಯಾಚಾರ ಪ್ರಕರಣಗಳು ತಗ್ಗಿಲ್ಲ.
ಹನ್ನೆರಡು ವರ್ಷಗಳ ಹಿಂದೆ ಯುಪಿಎ ಸರ್ಕಾರದ ವಿರುದ್ಧ ಅಬ್ಬರದ ಪ್ರತಿಭಟನೆ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ನರೇಂದ್ರ ಮೋದಿ ಅವರು ʼಬೇಟಿ ಬಚಾವೋ ಬೇಟಿ ಪಢಾವೋʼ ಎಂದು ಹೇಳಿದ್ದೇ ಬಂತು. ದೇಶದಲ್ಲಿ ಭೀಕರ ಅತ್ಯಾಚಾರ ಪ್ರಕರಣಗಳು ನಡೆದಾಗ ಅವರು ಕನಿಷ್ಠ ಬಾಯಿ ತೆರೆದು ಮಾತನಾಡಿದ್ದೇ ಇಲ್ಲ. ತಮ್ಮ ಡಬಲ್ ಎಂಜಿನ್ ಸರ್ಕಾರದ ಅಡಿಯಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ, ದೆಹಲಿಯಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಅತಿ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ದೇಶಕ್ಕೆ ಕಳಂಕ ತರುವ ಅಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಮೋದಿಯವರು ಒಂದು ಸಭೆ ನಡೆಸಿದ ಉದಾಹರಣೆ ಇಲ್ಲ. ಕಟ್ಟು ನಿಟ್ಟಿನ ಕಾನೂನು ಕ್ರಮ ಜರುಗಿಸುವ ಬಗ್ಗೆ ಅವರು ಎಂದೂ ರಾಜ್ಯಗಳ ಜೊತೆಗೆ ಚರ್ಚೆ ನಡೆಸಿಲ್ಲ. ತಮ್ಮ ತಿಂಗಳ ‘ಮನ್ ಕೀ ಬಾತ್’ನಲ್ಲಿ ಅಡುಗೆ ಎಣ್ಣೆ ಕಡಿಮೆ ಬಳಸಿ ಎಂಬ ಸಲಹೆ ನೀಡುವ ಮೋದಿಯವರು ಹೆಣ್ಣುಮಕ್ಕಳಿಗೆ ಘನತೆಯ ಬದುಕು ಕಲ್ಪಿಸುವುದು ಪ್ರತಿ ಪುರುಷನ ಜವಾಬ್ದಾರಿ ಎಂಬಂತಹ ಮಾತುಗಳನ್ನು ಆಡಿದ್ದೇ ಇಲ್ಲ. ಮೋದಿಯವರ ಮನ್ ಕೀ ಬಾತ್ ಭಾಷಣವನ್ನು ಬಿಜೆಪಿಯ ನಾಯಕರು ಪ್ರೊಮೋಟ್ ಮಾಡುತ್ತಾರೆ. ಬೂತ್ ಮಟ್ಟದಲ್ಲಿ ಸಾರ್ವಜನಿಕವಾಗಿ ಆಡಿಯೋ ಭಾಷಣ ಕೇಳುವ ವ್ಯವಸ್ಥೆ ಮಾಡಲಾಗುತ್ತದೆ. ಬಿಜೆಪಿಯ ಎಲ್ಲ ನಾಯಕರು, ಕಾರ್ಯಕರ್ತರು ಮನ್ ಕೀ ಬಾತ್ ಆಲಿಸಿದ ಬಗ್ಗೆ ಪೋಸ್ಟ್‌ಗಳನ್ನು ಹಾಕುತ್ತಾರೆ. ಇವೆಲ್ಲ ಪಕ್ಷದ ಕಡೆಯಿಂದ ಕೊಡುವ ಟಾಸ್ಕ್. ಹೀಗಿರುವಾಗ ಮನ್ ಕೀ ಬಾತ್‌ನಲ್ಲಿ ಯುವ ಜನತೆಗೆ ಉತ್ತಮ ಸಂದೇಶ ಕೊಡುವ ಕನಿಷ್ಠ ಕಾಳಜಿಯನ್ನೂ ಮೋದಿಯವರು ಯಾಕೆ ತೋರುತ್ತಿಲ್ಲ?
ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳ ಅತ್ಯಾಚಾರ ಪ್ರಕರಣಗಳ ಬಗ್ಗೆ ಭಾರೀ ಪ್ರತಿಭಟನೆ ದಾಖಲಿಸುವ ಬಿಜೆಪಿ ನಾಯಕರು ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡ ಉದಾಹರಣೆ ಸಾಕಷ್ಟಿವೆ. ಎರಡು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ- ಕೊಲೆ ಪ್ರಕರಣವನ್ನು ಬಿಜೆಪಿ ಒಂದು ತಿಂಗಳ ಕಾಲ ಪ್ರತಿಭಟನೆ ನಡೆಸಿ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುತ್ತೇವೆ ಎಂದು ಮೋದಿ, ಅಮಿತ್ ಶಾ ಚುನಾವಣಾ ಪ್ರಚಾರ ಸಭೆಗಳಲ್ಲಿ ಹೇಳಿದ್ದರು. ಅತ್ಯಾಚಾರ-ಹತ್ಯೆಗೆ ಈಡಾದ ವೈದ್ಯೆಯ ತಾಯಿಯನ್ನು ರಾಜಕೀಯಕ್ಕೆ ಎಳೆತಂದು ಟಿಕೆಟ್ ಕೊಟ್ಟು ಗೆಲ್ಲಿಸಿ, ರಾಜಕೀಯ ಲಾಭ ಗಳಿಸಿದರು. ಮೊನ್ನೆಯಷ್ಟೇ ಪಶ್ಚಿಮ ಬಂಗಾಳದಲ್ಲಿ ಬಾಲಕಿಯೊಬ್ಬಳ ಭೀಕರ ಅತ್ಯಾಚಾರ- ಕೊಲೆ ನಡೆದಿದೆ. ಆರೋಪಿಯನ್ನು ಎನ್‌ಕೌಂಟರ್ ಮಾಡಲಾಗಿದೆ. ಹೀಗೆ ಮಾಡಿ ಜನರ ಮನಸ್ಸಿನಲ್ಲಿ ತಾವು ಕಠಿಣ ಕ್ರಮ ಕೈಗೊಂಡಿದ್ದೇವೆ ಎಂಬ ಭ್ರಮೆ ಹುಟ್ಟಿಸುವುದು ಮತ್ತೊಂದು ಬಗೆಯ ರಾಜಕೀಯ ಹುನ್ನಾರ.
ದಶಕದಿಂದ ಅಧಿಕಾರ ನಡೆಸುತ್ತಿರುವ ಉತ್ತರ ಪ್ರದೇಶದಲ್ಲಿ ಅಷ್ಟೊಂದು ಅತ್ಯಾಚಾರಗಳು ನಡೆಯುತ್ತಿದೆ. ಅದ್ಯಾವ ಬಗೆಯ ಕಠಿಣ ಕಾನೂನು ತಂದಿದ್ದಾರೆ ಅಥವಾ ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ? ಎಷ್ಟು ಅಪರಾಧಿಗಳು ಕಂಬಿ ಎಣಿಸಿದ್ದಾರೆ? ಸ್ವತಃ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸೆಂಗರ್ ಸಾಮೂಹಿಕ ಅತ್ಯಾಚಾರದ ಅಪರಾಧಿಯಾಗಿದ್ದಾನೆ!
ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಯಾವ ಸರ್ಕಾರಗಳೂ ಘನತೆಯ ಬದುಕು ನೀಡುತ್ತಿಲ್ಲ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಭಾರೀ ಉತ್ಸುಕವಾಗಿರುವ ಮೋದಿ ಸರ್ಕಾರ ಮೊದಲು ಹೆಣ್ಣುಮಕ್ಕಳಿಗೆ ಸುರಕ್ಷತೆಯ ಬದುಕು ನೀಡಬೇಕಿದೆ. ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಪೋಕ್ಸೊ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಬೇಕು. ನಿಗದಿತ ಸಮಯದಲ್ಲಿ ಕಾನೂನು ಪ್ರಕ್ರಿಯೆ ಮುಗಿದು ಕಠಿಣ ಶಿಕ್ಷೆ ನೀಡುವುದನ್ನು ಖಾತ್ರಿಪಡಿಸಬೇಕಿದೆ. ಹೆಣ್ಣುಮಕ್ಕಳ ವಿಚಾರ ಕೇವಲ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡುವ ಹೇಯ ಕೃತ್ಯ ತಕ್ಷಣ ನಿಲ್ಲಬೇಕಿದೆ.




