ಗುಳೆ ಸಮಸ್ಯೆಯನ್ನು ಕೇವಲ ಕೃಷಿಕರ, ಬಡ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಎಂದು ನೋಡುವ ಮನೋಭಾವ ಬದಲಾಗಬೇಕಿದೆ. ಇದು ಗ್ರಾಮೀಣ ಅಭಿವೃದ್ಧಿ, ಉದ್ಯೋಗ, ನೀರು, ಕೃಷಿ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಸಮಗ್ರ ಪ್ರಶ್ನೆ ಎನ್ನುವುದನ್ನು ಸರ್ಕಾರ ಅರಿತು, ಪರ್ಯಾಯ ಮಾರ್ಗಗಳತ್ತ ಗಮನ ಹರಿಸಬೇಕಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಿಣ್ಯಂ ಗ್ರಾಮದ ಮಣಿಗರ್ ಪುಟ್ಟಪ್ಪ ಎಂಬ ದನಗಾಹಿ ತನ್ನ ಹತ್ತಾರು ದನ-ಕರುಗಳ ಮುಂದೆ ನಿಂತು, ‘ನನ್ ದನ್ಕರ ಮೇವಿಲ್ದೆ, ನೀರಿಲ್ದೆ ಸಾಯ್ತಾವೆ, ನೋಡಕ್ಕಾಯ್ತಿಲ್ಲ… ಅವುನ್ನೋಡಿ ನನ್ಗೂ ಸಾಯ್ಬೇಕನ್ನಿಸ್ತಾಯ್ತೆ… ಸರ್ಕಾರ್ದೋರು ಏನಾರ ಮಾಡಬೇಕು’ ಎಂದು ದೈನ್ಯದಿಂದ ಬೇಡಿಕೊಳ್ಳುತ್ತಿದ್ದಾರೆ. ಅದನ್ನು ಮತ್ತೊಬ್ಬರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅದು ವೈರಲ್ ಆಗಲಿ ಎಂದು ಮಾಡಿದ ವಿಡಿಯೋ ಅಲ್ಲ. ನಾಲ್ಕು ಜನ ನೋಡಿ ರೈತರ ದಾರುಣ ಸ್ಥಿತಿಗೆ ಕರಗಿ ಕನಿಕರಿಸಲಿ ಎಂದು ಮಾಡಿದ ವಿಡಿಯೋ. ಈ ಸಲದ ಮುಂಗಾರು ಕೈ ಕೊಟ್ಟಿದೆ. ಮಳೆ ಬರದೆ, ಬೆಳೆ ಆಗದೆ, ಬರಗಾಲ ಬಂದು ತಿನ್ನಲಿಕ್ಕೆ ಹಿಟ್ಟಿಲ್ಲದಂತಾಗಿದೆ. ಆದರೆ ಈ ಪುಟ್ಟಪ್ಪ ಬೇಡುತ್ತಿರುವುದು ತನಗಲ್ಲ, ತನ್ನ ದನಕರುಗಳಿಗೆ. ದನಕರುಗಳ ಮೈ ನೀವಿದವರಿಗೆ, ಹುಲ್ಲು ಹಾಕಿದವರಿಗೆ ಪುಟ್ಟಪ್ಪನ ಸಂಕಟ ಅರ್ಥವಾಗುತ್ತದೆ. ಅರ್ಥವಾಗದ ಅಧಿಕಾರಿಗಳು ಮತ್ತು ಅಧಿಕಾರಸ್ಥರು ಅಂಕಿ-ಸಂಖ್ಯೆಗಳ ಆಟವಾಡುತ್ತ, ಮಾತುಗಳಲ್ಲಿ ಮಹಲು ಕಟ್ಟುತ್ತ, ಹಳ್ಳಿಗರನ್ನು ದಿಕ್ಕೆಟ್ಟ ಸ್ಥಿತಿಗೆ ದೂಡುತ್ತಿದ್ದಾರೆ. ಗುಳೆ ಹೋಗುವುದನ್ನು ಅನಿವಾರ್ಯವಾಗಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಹಳ್ಳಿಯೆಂದರೆ ಕೃಷಿ, ನೀರು, ಬೆಳೆ, ಜಾನುವಾರುಗಳ ಸಮೃದ್ಧ ಬದುಕು. ಆದರೆ ಇಂದು ಇದೇ ಹಳ್ಳಿಗಳು ವೃದ್ಧರ ಬೀಡಾಗಿವೆ, ಬಿಕೋ ಎನ್ನುತ್ತಿವೆ. ಮಳೆ ಕೈಕೊಟ್ಟು ಹೊಲ ಒಣಗಿವೆ; ಬೆಳೆ ಕೈಕೊಟ್ಟು ರೈತನ ಆದಾಯ ಕುಸಿದಿದೆ; ಸ್ಥಳೀಯವಾಗಿ ಉದ್ಯೋಗ ಸಿಗದೆ ಕುಟುಂಬಗಳು ಬದುಕಿನ ಬಂಡಿ ಎಳೆಯಲು ಬೆಂಗಳೂರು, ಮಂಗಳೂರು, ಗೋವಾ, ಮುಂಬೈ ನಗರಗಳತ್ತ ಮುಖ ಮಾಡುತ್ತಿವೆ. ಇದು ಕೇವಲ ಗುಳೆಯಲ್ಲ; ಗ್ರಾಮೀಣ ಬದುಕಿನ ಅಸಹಾಯಕತೆಯ ಕನ್ನಡಿ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | GDP ಶೇ.7.8; ಅಸಲಿ ಅಭಿವೃದ್ಧಿ ಯಾರ ಪಾಲಿಗೆ?
ಕರ್ನಾಟಕದ ಬರಪೀಡಿತ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಗುಳೆ ಹೋಗುವುದು ಹೊಸದಲ್ಲ. ತಪ್ಪೇನಲ್ಲ. ಉತ್ತಮ ಬದುಕಿಗಾಗಿ ಸ್ಥಳಾಂತರವಾಗುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ ಬದುಕಲು ಬೇರೆ ದಾರಿ ಇಲ್ಲದೆ ಊರು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ಆತಂಕಕಾರಿ. ಅದರಲ್ಲೂ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ಇದು ಪ್ರತಿವರ್ಷದ ಪಡಿಪಾಟಲು. ಇಡೀ ಕುಟುಂಬವೇ ಗುಳೆ ಹೋದಾಗ ಮಕ್ಕಳ ಶಿಕ್ಷಣ, ಮಹಿಳೆಯರ ಸುರಕ್ಷತೆ, ಆರೋಗ್ಯ, ಆಹಾರ ಮತ್ತು ಸಾಮಾಜಿಕ ಭದ್ರತೆಯಂತಹ ಗಂಭೀರ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದು ಸಮಾಜ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ.
ಈ ಹಿನ್ನೆಲೆಯಲ್ಲಿ ಸರ್ಕಾರದ ಹೊಣೆಗಾರಿಕೆ ದೊಡ್ಡದು. ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿಯೇ ಕೆಲಸ ಒದಗಿಸುವುದು, ಕೆರೆ–ಕಟ್ಟೆ, ಚೆಕ್ಡ್ಯಾಂ, ಜಲ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳುವುದು ಯುದ್ಧೋಪಾದಿಯಲ್ಲಿ ನಡೆಯಬೇಕು. ಆದರೆ, ಕೇಂದ್ರದ ನರೇಂದ್ರ ಮೋದಿಯವರ ಎನ್ಡಿಎ ಸರ್ಕಾರ, ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರ ನೆರವಿಗಿದ್ದ, ಹಿಂದಿನ ಯುಪಿಎ ಸರ್ಕಾರದ ನರೇಗಾ ಯೋಜನೆಯನ್ನು ಬದಲಿಸಿ ಜುಲೈ 1ರಿಂದ ಜಿ ರಾಮ್ ಜಿ ಯೋಜನೆಯನ್ನು ಜಾರಿ ಮಾಡಿದ್ದರೂ, ಈವರೆಗೆ ಉದ್ಯೋಗ ಖಾತರಿಯ ಭರವಸೆ ದೊರಕಿಲ್ಲ. ಜೊತೆಗೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನರೇಗಾದ 746 ಕೋಟಿ ಬಾಕಿಯನ್ನೂ ಬಿಡುಗಡೆ ಮಾಡಿಲ್ಲ.
ತುರ್ತು ಕ್ರಮವಾಗಿ ಸರ್ಕಾರ ಕುಡಿಯುವ ನೀರು ಪೂರೈಸುವುದು, ಜಾನುವಾರುಗಳಿಗೆ ಮೇವು ಒದಗಿಸುವುದು, ಬರ ಪರಿಹಾರ ಮತ್ತು ಬೆಳೆ ವಿಮೆಯಂತಹ ನೆರವು ನೀಡುವುದು ಅಗತ್ಯ. ಇಂತಹ ಕ್ರಮಗಳು ತಕ್ಷಣದ ಸಂಕಷ್ಟವನ್ನು ತಗ್ಗಿಸಬಹುದು. ಇವುಗಳ ಜೊತೆಗೆ ಶಾಶ್ವತ ಪರಿಹಾರದತ್ತವೂ ಸರ್ಕಾರ ಗಮನಹರಿಸಬೇಕಿದೆ.
ಗುಳೆ ತಡೆಯಲು ಕೇವಲ ಉದ್ಯೋಗ ಖಾತ್ರಿ ಸಾಕಾಗುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ವರ್ಷಪೂರ್ತಿ ಆದಾಯ ಸಿಗುವಂತಹ ಪರ್ಯಾಯ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ಹೈನುಗಾರಿಕೆ, ಕುರಿ–ಮೇಕೆ ಸಾಕಣೆ, ಕೋಳಿ ಸಾಕಣೆ, ಆಹಾರ ಸಂಸ್ಕರಣೆ, ಸಣ್ಣ ಕೈಗಾರಿಕೆಗಳು, ಗ್ರಾಮೀಣ ಪ್ರವಾಸೋದ್ಯಮ ಮತ್ತು ಸ್ವಸಹಾಯ ಸಂಘಗಳ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕಿದೆ. ರೈತ ಉತ್ಪಾದಕರ ಸಂಘಗಳನ್ನು ಬಲಪಡಿಸಿ, ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಬೆಲೆ ಪಡೆಯುವ ವ್ಯವಸ್ಥೆಯನ್ನು ರೂಪಿಸಬೇಕಿದೆ.
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮತ್ತೊಂದು ಪ್ರಮುಖ ಹೆಜ್ಜೆ. ಮಳೆನೀರು ಸಂಗ್ರಹ, ಕೆರೆಗಳ ಪುನಶ್ಚೇತನ, ಜಲಾನಯನ ಅಭಿವೃದ್ಧಿ, ಅಂತರ್ಜಲ ಮರುಪೂರಣ ಮತ್ತು ಸೂಕ್ಷ್ಮ ನೀರಾವರಿ ವ್ಯವಸ್ಥೆಗಳನ್ನು ವಿಸ್ತರಿಸಬೇಕು. ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಬೇಕು. ಉತ್ತೇಜಿಸಬೇಕು. ನೀರು ಉಳಿದರೆ- ಕೃಷಿ ಉಳಿಯುತ್ತದೆ; ಕೃಷಿ ಉಳಿದರೆ- ಗ್ರಾಮೀಣ ಬದುಕೂ ಬಲಗೊಳ್ಳುತ್ತದೆ.
ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಜುಲೈ 1ರಿಂದ ಜಿ ರಾಮ್ ಜಿ ಯೋಜನೆ ಜಾರಿ ಮಾಡಿದೆ. ಆದರೆ ಅದು ಆರಂಭಿಕ ಹಂತ ಬಿಟ್ಟು ಮೇಲೆದ್ದಿಲ್ಲ. ಉದ್ಯೋಗ ಖಾತರಿ ಆಶಯ ಈಡೇರಿಲ್ಲ. ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ. ನೀರು ಮತ್ತು ಮೇವುಗಾಗಿಯೇ 306 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕೆಲವೆಡೆ ರಾಜಕಾರಣಿಗಳು ಕಾಳಜಿ ತೋರಿದರೆ, ಅಧಿಕಾರಿಗಳು ಸೋಮಾರಿಗಳಾಗುತ್ತಾರೆ; ಹಲವೆಡೆ ರಾಜಕಾರಣಿಗಳು ಸೋಮಾರಿಗಳಾದರೆ, ಅಧಿಕಾರಿಗಳು ಕಾಳಜಿ ತೋರುತ್ತಾರೆ. ಪರಿಣಾಮವಾಗಿ ಪರಿಹಾರ ಕಾರ್ಯಗಳು ಸಂತ್ರಸ್ತರ ಕೈಗೆ ತಲುಪುವಲ್ಲಿ ತಡವಾಗುತ್ತದೆ. ಎವರಿಬಡಿ ಲವ್ಸ್ ಗುಡ್ ಡ್ರಾಟ್ ಎನ್ನುವುದು ವರ್ಷದಿಂದ ವರ್ಷಕ್ಕೆ ಸಾಬೀತಾಗುತ್ತಲೇ ಇದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸರ್ಕಾರ ಸುರಂಗ ರಸ್ತೆಯತ್ತ; ನಾಗರಿಕರ ಚಿತ್ತ ಪರಿಸರ ಸಂರಕ್ಷಣೆಯತ್ತ
ಏತನ್ಮಧ್ಯೆ, ಮುಖ್ಯಮಂತ್ರಿಗಳು ಸೆ. 1ರಂದು ಬರಗಾಲ ಪರಿಸ್ಥಿತಿ ಪರಿಶೀಲಿಸಲು ಗದಗ ಜಿಲ್ಲೆಗೆ ಭೇಟಿ ನೀಡಿದ್ದರು. ರೈತರ ಜಮೀನುಗಳಿಗೆ ತೆರಳಿ ಬಿತ್ತನೆ, ಮಳೆ ಪ್ರಮಾಣ, ಬೆಳೆಗಳ ಬೆಳವಣಿಗೆ ಹಾಗೂ ನಷ್ಟದ ಕುರಿತು ಮಾಹಿತಿ ಪಡೆದರು. ಕದಾಂಪೂರ ಗ್ರಾಮದ ಹೊಲದಲ್ಲಿ ರೈತರ ನಡುವೆ ಕುಳಿತು ಬರ ಅಹವಾಲು ಆಲಿಸಿದರು. ಮಾಧ್ಯಮಗಳ ಮುಂದೆ ನಿಂತು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು. ಅದರ ಆಧಾರದ ಮೇಲೆ ಬರ ಘೋಷಿಸಲಾಗುವುದು ಎಂದರು.
ಇನ್ನು ಕಂದಾಯ ಸಚಿವರು ಸೆ. 2ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮತ್ತು ಹನೂರು ತಾಲೂಕುಗಳಿಗೆ ಬರ ಪರಿಸ್ಥಿತಿ ಅವಲೋಕಿಸಲು ತೆರಳಿದ್ದರು. ಯಥಾಪ್ರಕಾರ ಮಾಧ್ಯಮಗಳ ಮುಂದೆ ನಿಂತು, ಬರ ಪರಿಹಾರ ಕೊಡದ ಕೇಂದ್ರ ಸರ್ಕಾರವನ್ನು ದೂರಿದರು. ಜಿಲ್ಲೆಯಲ್ಲಿ 16 ವಾರಗಳಿಗೆ ಆಗುವಷ್ಟು ಮೇವಿನ ಸಂಗ್ರಹವಿದ್ದು, ಕೊರತೆಯಾಗದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಚಿವರ ಕೆಲಸ ಅಧಿಕಾರಿಗಳಿಗೆ ಸೂಚಿಸುವುದಷ್ಟೇ ಅಲ್ಲ, ಹನೂರು ತಾಲೂಕಿನ ಮಿಣ್ಯಂ ಗ್ರಾಮದ ಮಣಿಗರ್ ಪುಟ್ಟಪ್ಪನ ದನಕರುಗಳಿಗೆ ಅಧಿಕಾರಿಗಳು ನೀರು-ನಿಡಿ ವ್ಯವಸ್ಥೆ ಮಾಡಿದರೆ ಎಂಬುದನ್ನು ಪರಿಶೀಲಿಸುವ ಅಗತ್ಯವೂ ಇದೆ.
ಹಾಗೆಯೇ ಗುಳೆ ಸಮಸ್ಯೆಯನ್ನು ಕೇವಲ ಕೃಷಿಕರ, ಬಡ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಎಂದು ನೋಡುವ ಮನೋಭಾವ ಬದಲಾಗಬೇಕಿದೆ. ಇದು ಗ್ರಾಮೀಣ ಅಭಿವೃದ್ಧಿ, ಉದ್ಯೋಗ, ನೀರು, ಕೃಷಿ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಸಮಗ್ರ ಪ್ರಶ್ನೆ ಎನ್ನುವುದನ್ನು ಸರ್ಕಾರ ಅರಿತು, ಪರ್ಯಾಯ ಮಾರ್ಗಗಳತ್ತ ಗಮನ ಹರಿಸಬೇಕಿದೆ.





