ಈ ದಿನ ಸಂಪಾದಕೀಯ | GDP ಶೇ.7.8; ಅಸಲಿ ಅಭಿವೃದ್ಧಿ ಯಾರ ಪಾಲಿಗೆ?

Date:

ಈ ದೇಶದ GDP ದರ ನಿರೀಕ್ಷೆಗೂ ಮೀರಿ ಶೇ.7.8ರಷ್ಟು ದಾಖಲಾಗಿದ್ದರೆ ಅದು ಖುಷಿಯ ವಿಚಾರ. ಆದರೆ ಈ ಅಭಿವೃದ್ಧಿಯ ಫಲಾನುಭವಿಗಳು ಯಾರು ಎಂಬುದು ಕೇಳಲೇಬೇಕಿರುವ ಸಮಯೋಚಿತ ಪ್ರಶ್ನೆ. ಸೇವಾ ವಲಯದ ವೇಗ, ಸರ್ಕಾರದ ವೆಚ್ಚ ಮತ್ತು ಜನರ ಖರೀದಿ ಸಾಮರ್ಥ್ಯದ ಅಂಕಿಗಳಾಚೆಗೆ ಸಾಮಾನ್ಯ ಜನರ ಆದಾಯ ಹೆಚ್ಚಿದೆಯೇ? ಉದ್ಯೋಗ ಸೃಷ್ಟಿಯಾಗಿದೆಯೇ? ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದ ಬದುಕು ಸುಧಾರಿಸಿದೆಯೇ? ಮೋದಿಯವರು ಎದೆಯುಬ್ಬಿಸಿ ಸಂಭ್ರಮಿಸುತ್ತಿರುವ ಈ GDP ಹೊಳಪಿನ ಹಿಂದೆ ಅಡಗಿರುವ ಅಸಮಾನತೆಯ ಕತ್ತಲೆಯನ್ನು ಕಣ್ಣು ಕಿಸಿದು ನೋಡಬೇಕಿರುವ ಸಮಯವಿದು.

- Advertisement -

ಜಿಡಿಪಿ ದರ ಎಲ್ಲ ಅಂದಾಜುಗಳನ್ನು ಮೀರಿ ಬೆಳೆದಿರುವುದಕ್ಕೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಜಿಡಿಪಿ ಎನ್ನುವುದು ದೇಶದಲ್ಲಿ ಒಂದು ಅವಧಿಯಲ್ಲಿ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ಅಳೆಯುವ ಮಾನದಂಡ. ಭಾರತದ ಬಗ್ಗೆ ಯಾವಾಗಲೂ ಕೆಟ್ಟದ್ದನ್ನು ನಿರೀಕ್ಷಿಸುವವರು ಮುಳುಗಿದ್ದಾರೆ, ಭಾರತ ಮತ್ತೊಮ್ಮೆ ಬೆಳಗಿದೆ. 7.8ರಷ್ಟು ಬೆಳವಣಿಗೆ ಹೊಂದಿರುವುದು ಭಗೀರಥ ಸಾಹಸ ಎಂದು ಬಣ್ಣಿಸಿದ್ದಾರೆ. ಜಿಡಿಪಿ ಬೆಳವಣಿಗೆ ಮೋದಿ ಸರ್ಕಾರದ ಸಾಧನೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮೆಚ್ಚಿಕೊಂಡಿದ್ದಾರೆ. ಬಿಜೆಪಿ ನಾಯಕರು, ಮೋದಿ ಭಕ್ತರು ಇನ್ನಿಲ್ಲದಂತೆ ಕೊಂಡಾಡುತ್ತಿದ್ದಾರೆ. ಆದರೆ ಕಟು ವಾಸ್ತವ ಬೇರೆಯೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಜಾಗತಿಕ ಅನಿಶ್ಚಿತತೆ, ಪಶ್ಚಿಮ ಏಷ್ಯಾ ಸಂಘರ್ಷ, ಮುಂಗಾರು ಕೊರತೆ, ಎಲ್‌ನಿನೋದಿಂದಾಗುತ್ತಿರುವ ಹವಾಮಾನ ವೈಪರೀತ್ಯ ಮತ್ತು ಅಮೆರಿಕದ ತೀವ್ರ ಸುಂಕ ಹೇರಿಕೆಯ ಒತ್ತಡದ ನಡುವೆಯೂ ಶೇ.7.8ರ ಬೆಳವಣಿಗೆ ದಾಖಲಾಗಿರುವುದು ಭಾರತದ ಆರ್ಥಿಕತೆಯ ಸ್ಥಿರತೆಯನ್ನು ತೋರಿಸುತ್ತದೆ. ಆದರೆ ಆರ್ಥಿಕತೆಯ ಗಾತ್ರ ಹೆಚ್ಚಾಗುತ್ತಿದೆ ಎಂಬುದನ್ನು, ಜನರ ಬದುಕು ಸುಧಾರಿಸುತ್ತಿದೆ ಎಂಬುದರ ಜೊತೆ ನೇರವಾಗಿ ಸಮೀಕರಿಸಲು ಸಾಧ್ಯವಿಲ್ಲ. ಭಾರತದ ಪರಿಸ್ಥಿತಿಯಲ್ಲಿ ಸದ್ಯ ಈ ಎರಡೂ ಅಂಶಗಳು ಬೇರೆ ಬೇರೆ.

ಏಕೆಂದರೆ ಜಿಡಿಪಿ ಎನ್ನುವುದು ದೇಶದಲ್ಲಿ ಒಂದು ಅವಧಿಯಲ್ಲಿ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ಅಳೆಯುವ ಮಾನದಂಡ. ಅಂದರೆ ದೇಶದಲ್ಲಿ ರೈತರು ಬೆಳೆದ ಬೆಳೆ, ಕಾರ್ಖಾನೆಗಳು ತಯಾರಿಸಿದ ಸರಕು ಸರಂಜಾಮುಗಳು, ಹೋಟೆಲ್‌, ಬ್ಯಾಂಕ್‌, ಐಟಿ ಮತ್ತಿತರೆ ನೂರಾರು ಸೇವಾ ವಲಯದ ಉದ್ಯಮಗಳು ನೀಡಿದ ಸೇವೆಯ ಒಟ್ಟಂದದ ಅಂತಿಮ ಮೌಲ್ಯವನ್ನು ಒಟ್ಟುಗೂಡಿಸಿದರೆ ಅದುವೇ ದೇಶದ ಜಿಡಿಪಿ. ಇದು ಆ ಉತ್ಪಾದನೆಯ ಫಲ ಯಾರ ಕೈಗೆ ಎಷ್ಟು ತಲುಪಿತು ಎಂಬುದನ್ನು ಹೇಳುವುದಿಲ್ಲ. ದೇಶದ ಆರ್ಥಿಕತೆ ಏರಿಕೆಯ ಸಮಯದಲ್ಲೇ ಒಂದು ಕುಟುಂಬದ ಆದಾಯ ಸ್ಥಗಿತವಾಗಿರಬಹುದು, ಯುವಕರಿಗೆ ಉದ್ಯೋಗ ಸಿಗದೇ ಇರಬಹುದು, ರೈತನ ಬೆಳೆ ಲಾಭ ಕೊಡದೇ ಇರಬಹುದು.

ಈ ವ್ಯತ್ಯಾಸವೇ ಭಾರತದ ಬೆಳವಣಿಗೆಯ ದೊಡ್ಡ ಸವಾಲು. ಭಾರತದ ಆರ್ಥಿಕತೆಯಲ್ಲಿ ಸೇವಾ ವಲಯದ ಪಾತ್ರ ಬಹಳ ದೊಡ್ಡದು. ಅಂಕಿಅಂಶಗಳ ಪ್ರಕಾರ, 2026-27ರ ಏಪ್ರಿಲ್‌-ಜೂನ್‌ ಮೊದಲ ತ್ರೈಮಾಸಿಕದಲ್ಲಿ ಸೇವಾ ವಲಯದ ನೈಜ ಬೆಳವಣಿಗೆ ಶೇ.10ರಷ್ಟಾಗಿದೆ. ಅಂದರೆ ದೇಶದ ಒಟ್ಟಾರೆ ಜಿಡಿಪಿಗಿಂತಲೂ ಹೆಚ್ಚು. ಇದರಲ್ಲಿ ಹಣಕಾಸು, ರಿಯಲ್‌ ಎಸ್ಟೇಟ್‌, ಐಟಿ ಮತ್ತು ವೃತ್ತಿಪರ ಸೇವೆಗಳು ಶೇ.12.1ರಷ್ಟು ಬೆಳವಣಿಗೆ ದಾಖಲಿಸಿವೆ. ಉತ್ಪಾದನಾ ವಲಯವೂ ಶೇ.9.2ರಷ್ಟು ಬೆಳವಣಿಗೆ ದಾಖಲಿಸಿರುವುದು ಆಶಾದಾಯಕ. ಆದರೆ ಈ ಬೆಳವಣಿಗೆ ದೊಡ್ಡ ಪ್ರಮಾಣದಲ್ಲಿ ಸ್ಥಿರ ಉದ್ಯೋಗಗಳನ್ನು ಸೃಷ್ಟಿಸುತ್ತಿದೆಯೇ ಎಂಬುದೇ ಪ್ರಶ್ನೆ. ಕೈಗಾರಿಕೆ ಬೆಳೆಯುವುದರ ಜತೆಗೆ ಉದ್ಯೋಗವೂ ಬೆಳೆಯಬೇಕಲ್ಲ!

ಕೃಷಿವಲಯ ಶೇ.3.6ರಷ್ಟು ಬೆಳೆಯುತ್ತಿದೆ ಎಂಬುದು ಕೇಳಲು ಸರಿಯಾಗಿಯೇ ಇದೆ ಎನಿಸುತ್ತದೆ. ಆದರೆ ರೈತನ ಆದಾಯ ಎಷ್ಟು ಹೆಚ್ಚಾಗಿದೆ? ಕೃಷಿ ವೆಚ್ಚ ಎಷ್ಟು ಏರಿದೆ? ಬೆಳೆ ಬೆಲೆ ರೈತನಿಗೆ ಲಾಭ ನೀಡುತ್ತಿದೆಯೇ? ಸಾಲದ ಹೊರೆ ಕಡಿಮೆಯಾಗಿದೆಯೇ? ಪರಿಹಾರ ಕ್ರಮಗಳು ರೈತರನ್ನ ತಲುಪುತ್ತಿವೆಯೇ? ಕನಿಷ್ಟ ನೆಮ್ಮದಿಯಾಗಿ ಊಟ ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದ ಹೊರತು ಗ್ರಾಮೀಣ ಭಾರತದ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಹೇಳಲಾಗದು.

ಅದೇ ರೀತಿ ಜನರ ಬಳಕೆಯ ಸಾಮರ್ಥ್ಯವನ್ನೂ ಗಮನಿಸಬೇಕು. ಆರ್ಥಿಕ ಚಟುವಟಿಕೆ ಹೆಚ್ಚುತ್ತಿರುವುದು ಜನರು ಹೆಚ್ಚು ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಆದರೆ ಆ ಖರ್ಚು ಆದಾಯ ಹೆಚ್ಚಾದ ಕಾರಣದಿಂದಾಗಿದೆಯೇ, ಅಥವಾ ಸಾಲ ಮತ್ತು ಉಳಿತಾಯದಿಂದಾಗಿದೆಯೇ ಎಂಬುದೂ ಮುಖ್ಯ. ಕುಟುಂಬಗಳ ಆರ್ಥಿಕ ಭದ್ರತೆ ದುರ್ಬಲವಾಗಿದ್ದರೆ, ಬಳಕೆಯ ಹೆಚ್ಚಳವನ್ನೇ ಸಮೃದ್ಧಿಯ ಸೂಚಕವೆಂದು ಪರಿಗಣಿಸುವುದು ತಪ್ಪಾಗುತ್ತದೆ.

ಜತೆಗೆ ಜಿಡಿಪಿ ಅಂಕಿಯನ್ನು ಅರ್ಥಮಾಡಿಕೊಳ್ಳುವಾಗ ಇನ್ನೊಂದು ಅಂಶವನ್ನೂ ಗಮನಿಸಬೇಕು.  ನಾಮಮಾತ್ರ (Nominal GDP) ಜಿಡಿಪಿ ಶೇ.10.3ರಷ್ಟು ಏರಿಕೆಯಾಗಿದೆ. ಆದರೆ ಸಾಮಾನ್ಯ ಜನರು ಅನುಭವಿಸಿದ ಬೆಲೆ ಏರಿಕೆ ಸರಾಸರಿ ಶೇ.3.9ರಷ್ಟಿದೆ. ಹೀಗಾಗಿ ಜಿಡಿಪಿ ಲೆಕ್ಕದಲ್ಲಿ ತೋರಿಸಿರುವ ಬೆಲೆ ಏರಿಕೆ ಮತ್ತು ಜನರ ದಿನನಿತ್ಯದ ಖರ್ಚಿನಲ್ಲಿ ಕಾಣಿಸುವ ಬೆಲೆ ಏರಿಕೆ ಒಂದೇ ಆಗಿಲ್ಲ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಬದಲಾದ ಗಾಳಿಯ ದಿಕ್ಕು ಕಂಡು ಕಂಗಾಲಾಗಿದ್ದಾರೆ ಪ್ರಧಾನಿ ಮೋದಿ

ಉದಾಹರಣೆಗೆ, ಒಂದು ದೇಶದಲ್ಲಿ ಕಳೆದ ವರ್ಷ 100 ವಸ್ತುಗಳನ್ನು ತಯಾರಿಸಲಾಗಿದೆ ಎಂದಾದರೆ, ಪ್ರತಿ ವಸ್ತುವಿನ ಬೆಲೆ ₹10 ಇದ್ದರೆ, ಒಟ್ಟು ಮೌಲ್ಯ ₹1,000. ಈ ವರ್ಷವೂ 100 ವಸ್ತುಗಳನ್ನೇ ತಯಾರಿಸಲಾಗಿದೆ. ಆದರೆ ಬೆಲೆ ₹11. ಆಗ ಒಟ್ಟು ಮೌಲ್ಯ ₹1,100. ಅಂದರೆ GDP 10% ಹೆಚ್ಚಾಗಿದೆ. ಆದರೆ ಇಲ್ಲಿ ಹೊಸ ಉತ್ಪಾದನೆ ಹೆಚ್ಚಾಗಿಲ್ಲ. ಕೇವಲ ಬೆಲೆ ಹೆಚ್ಚಾಗಿದೆ. ಹೀಗಾಗಿ ಬೆಲೆ ಏರಿಕೆಯ ಪರಿಣಾಮವನ್ನು ತೆಗೆದರೆ ನೈಜ ಬೆಳವಣಿಗೆ ಶೂನ್ಯ. ಇದೇ ಕಾರಣಕ್ಕೆ GDPಯಲ್ಲಿ ಬೆಲೆ ಏರಿಕೆಯಿಂದ ಬಂದ ಹೆಚ್ಚಳ ಮತ್ತು ನಿಜವಾಗಿಯೂ ಉತ್ಪಾದನೆ ಹೆಚ್ಚಾದುದರಿಂದ ಬಂದ ಬೆಳವಣಿಗೆ ಇವೆರಡನ್ನು ಬೇರ್ಪಡಿಸಬೇಕು.

ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ವೇಗ ಕಾಯ್ದುಕೊಂಡಿರುವುದು ಸಾಧನೆಯೇ. ಆದರೆ ಬೆಳವಣಿಗೆಯ ವೇಗ ಮತ್ತು ಬೆಳವಣಿಗೆಯ ಗುಣಮಟ್ಟ ಎರಡೂ ಒಂದೇ ಅಲ್ಲ. ದೇಶದ ಆರ್ಥಿಕತೆಯ ಪ್ರಯೋಜನ ಕೆಲವೇ ವಲಯಗಳು ಅಥವಾ ಆದಾಯದ ಮೇಲಿನ ವರ್ಗಗಳಿಗೆ ಸೀಮಿತವಾದರೆ, ಒಟ್ಟಾರೆ ಅಭಿವೃದ್ಧಿ ಎಂದು ಹೇಳಲು ಸಾಧ್ಯವಿಲ್ಲ.

ಇದೇ ಭಾರತದ ಮುಂದಿರುವ ‘K-ಆಕಾರದ’ ಬೆಳವಣಿಗೆಯ ಆತಂಕ. ಆರ್ಥಿಕತೆಯ ಒಂದು ಭಾಗ ವೇಗವಾಗಿ ಮೇಲಕ್ಕೆ ಸಾಗುತ್ತಿದ್ದರೆ, ಮತ್ತೊಂದು ಭಾಗ ಆದಾಯ, ಉದ್ಯೋಗ ಮತ್ತು ಖರೀದಿ ಸಾಮರ್ಥ್ಯದ ಒತ್ತಡದಲ್ಲಿ ಸಿಲುಕಿದೆ. ಒಂದು ಕಡೆ ಐಷಾರಾಮಿ ಕಾರುಗಳ ಮಾರಾಟ ಹೆಚ್ಚಾಗಬಹುದು, ಮತ್ತೊಂದು ಕಡೆ ಸಾಮಾನ್ಯ ಕುಟುಂಬ ದಿನನಿತ್ಯದ ಖರ್ಚು ಸರಿದೂಗಿಸಲು ಸಾಲದ ಮೊರೆ ಹೋಗಬಹುದು. ಒಂದು ಕಡೆ ಷೇರು ಮಾರುಕಟ್ಟೆ ದಾಖಲೆ ಬರೆಯಬಹುದು, ಮತ್ತೊಂದು ಕಡೆ ಸಣ್ಣ ವ್ಯಾಪಾರಿ ಗ್ರಾಹಕರ ಕೊರತೆಯಿಂದ ಅಂಗಡಿ ಮುಚ್ಚುವ ಸ್ಥಿತಿಗೆ ಬರಬಹುದು. ಈ ಎರಡೂ ಭಾರತಗಳ ನಡುವಿನ ಅಂತರವನ್ನು ಕೇವಲ ಜಿಡಿಪಿಯಿಂದ ಅಳೆಯಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಸೋನಿಯಾ ಆತ್ಮಕಥನ ಕುರಿತು ಮೋದಿಗೇಕೆ ಭಯ?

ಅಭಿವೃದ್ಧಿಯ ನಿಜವಾದ ಅರ್ಥ ಜನರ ಬದುಕಿನಲ್ಲಿ ಕಾಣಿಸಬೇಕು. ಯುವಕರಿಗೆ ಉದ್ಯೋಗ ಸಿಗಬೇಕು. ಉದ್ಯೋಗದಲ್ಲಿರುವವರಿಗೆ ವೇತನ ಹೆಚ್ಚಬೇಕು. ರೈತನಿಗೆ ಕೃಷಿ ವೆಚ್ಚಕ್ಕಿಂತ ಉತ್ತಮ ಆದಾಯ ಸಿಗಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬೆಳೆಯಬೇಕು. ಕುಟುಂಬಗಳ ಉಳಿತಾಯ ಹೆಚ್ಚಬೇಕು. ಆರೋಗ್ಯ, ಶಿಕ್ಷಣ ಮತ್ತು ಮನೆ ಖರ್ಚುಗಳು ಕುಟುಂಬದ ಆದಾಯವನ್ನು ನುಂಗುವಂತಿರಬಾರದು. ಆಗ ಮಾತ್ರ ಜಿಡಿಪಿ ಬೆಳವಣಿಗೆ ಜನರ ಬದುಕಿನ ಬೆಳವಣಿಗೆಯಾಗಿ ಪರಿವರ್ತನೆಯಾಗಿದೆ ಎಂದು ಹೇಳಬಹುದು.

ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರು ಶೇ.7.8ರ ಬೆಳವಣಿಗೆಯನ್ನೇ ಭಾರತದ ಆರ್ಥಿಕ ಶಕ್ತಿಯ ಸಂಕೇತವಾಗಿ ಬಿಂಬಿಸುತ್ತಿರುವುದು ಅತಿಶಯೋಕ್ತಿ ಮತ್ತು ಚಿತ್ತಭ್ರಮೆಯೇ ಸರಿ. ಯಾಕೆಂದರೆ ದೇಶದ ಆರ್ಥಿಕತೆ ಬೆಳೆಯುತ್ತಿದೆ ಎಂದು ಹೇಳಲು ಅಂಕಿ ಸಾಕು. ಆದರೆ ದೇಶದ ಜನರು ಅಭಿವೃದ್ಧಿಯಾಗುತ್ತಿದ್ದಾರೆ ಎಂದು ಹೇಳಲು ಹೆಚ್ಚಿನ ಸಾಕ್ಷ್ಯ ಬೇಕು. ಆರ್ಥಿಕ ಬೆಳವಣಿಗೆಯ ಅಂತಿಮ ಗುರಿ ದೊಡ್ಡ ಜಿಡಿಪಿ ನಿರ್ಮಿಸುವುದಲ್ಲ. ಅದರಲ್ಲಿ ಸಾಮಾನ್ಯ ನಾಗರಿಕನ ಪಾಲು ಹೆಚ್ಚಿಸುವುದು.

ಹೀಗಾಗಿ ಸದ್ಯದ ಪ್ರಶ್ನೆಗಳು ಎರಡು. ಒಂದು ‘ಭಾರತದ ಜಿಡಿಪಿ ಎಷ್ಟು ವೇಗವಾಗಿ ಬೆಳೆಯುತ್ತಿದೆ?’, ಇನ್ನೊಂದು ‘ಈ ಬೆಳವಣಿಗೆಯಲ್ಲಿ ಸಾಮಾನ್ಯ ಭಾರತೀಯನ ಬದುಕು ಎಷ್ಟು ಮುಂದೆ ಬಂದಿದೆ?’. ಮೊದಲ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಎರಡನೆಯ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಪುರಾವೆಗಳೊಂದಿಗೆ ಉತ್ತರ ಕೊಡಬೇಕು. ಬಳಿಕ ಸಂಭ್ರಮಿಸಿದರೆ ಅದಕ್ಕೊಂದು ʼಅರ್ಥʼವಿರುತ್ತದೆ, ʼತೂಕʼ ಬರುತ್ತದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತ & ಚೀನಾದ H-1B ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು; ಸಂಸದ ರಿಲೆ ಮೂರ್ ಆರೋಪ

ಅಮೆರಿಕದ ಕಂಪ್ಯೂಟರ್‌ ಸೈನ್ಸ್‌ ಪದವೀಧರರ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಚೀನಾದಿಂದ ಬರುವ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ...

ದೇಶ ತೊರೆಯುವಂತೆ ನೋಟಿಸ್‌; ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ...

ಅವಧಿ ಮೀರಿದ ಆಹಾರ ಮರುಮಾರಾಟ ಆರೋಪ: ರಿಲಯನ್ಸ್‌, ಬ್ಲಿಂಕಿಟ್‌ ಘಟಕಗಳ ವಿರುದ್ಧ ತನಿಖೆ

ಅವಧಿ ಮೀರಿದ, ಹಾಳಾದ ಹಾಗೂ ಗ್ರಾಹಕರು ತಿರಸ್ಕರಿಸಿದ ಆಹಾರ ಪದಾರ್ಥಗಳನ್ನು ನಾಶಪಡಿಸುವ...