ಇತಿಹಾಸವನ್ನು ತಿರುಚಿ ಬರೆಯಲು ಹೊರಟವರು ದೇಶದ ಎತ್ತರದ ನಾಯಕರಲ್ಲೊಬ್ಬರಾದ ನೆಹರೂ ಹೆಸರಿಗೆ ಮಸಿ ಬಳಿಯುವ ದೀರ್ಘಾವಧಿ ಯೋಜನೆ ಹಾಕಿಕೊಂಡಿದ್ದಾರೆ. ನೆಹರೂ ಅವರನ್ನು ಚರಿತ್ರೆಯ ಪುಟಗಳಿಂದ ಸುಳ್ಳುಗಳ ಸುನಾಮಿಯಲ್ಲಿ ಅಳಿಸಿ ಹಾಕುವ ಕೃತ್ಯದಲ್ಲಿ ಹಗಲಿರುಳು ತೊಡಗಿದ್ದಾರೆ. ನೆಹರೂ ಅವರನ್ನು ಕುಬ್ಜರನ್ನಾಗಿ ತೋರಿದರೆ ತಾವು ಎತ್ತರದವರೆಂದು ಕಾಣಬಹುದು ಎಂಬ ಭ್ರಮೆ ಇದು.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ತೀರಿ ಆರು ದಶಕಗಳೇ ಸಂದಿವೆ. ಅವರ ಕುರಿತು ಸುಳ್ಳಿನ ಪ್ರಚಂಡ ಪ್ರಚಾರದ ದುರುಳ ಕಾರ್ಯವನ್ನು ಬಿಜೆಪಿ ಮತ್ತು ಆರೆಸ್ಸೆಸ್ ಇಂದಿಗೂ ಸಕ್ರಿಯವಾಗಿ ಜಾರಿಯಲ್ಲಿ ಇಟ್ಟಿದೆ. ಸುಳ್ಳನ್ನು ನೂರು ಸಲ ಹೇಳಿದರೆ ಸತ್ಯವಾಗಿಬಿಡುತ್ತದೆ ಎಂಬ ನಾಜಿ ಜರ್ಮನಿಯ ಗೆಬೆಲ್ಸ್ ದುಷ್ಟ ನಂಬಿಕೆಯಿದು. ನೆಹರೂ ಕುರಿತು ರಾಶಿ ರಾಶಿ ವಿಕೃತ ಸುಳ್ಳುಗಳನ್ನು ನೂರು ವರ್ಷ ಹೇಳಿದರೆ ಅವು ಸತ್ಯ ಆಗಿಬಿಡುತ್ತವೆ ಎಂದು ಪಕ್ಷ ಪರಿವಾರ ನಂಬಿದೆ. ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಬಿಡುವಿಲ್ಲದೆ ಕಾರ್ಯನಿರತ ಆಗಿದೆ.
ಸಾಮಾಜಿಕ ಅಂತರ್ಜಾಲತಾಣಗಳ ಆವರಣಗಳಲ್ಲಿ ನೆಹರೂ ಅವರನ್ನು ಖಳರನ್ನಾಗಿ ಚಿತ್ರಿಸುವ ಬೃಹತ್ ಉದ್ಯಮವೇ ತಲೆಯೆತ್ತಿದೆ.
ಬಿಜೆಪಿಯಲ್ಲಿನ ಆರೆಸ್ಸೆಸ್ ನಾಯಕ ಸಂತೋಷ್ ಅವರು ಹೇಳಿದ್ದ ಹಸಿ ಸುಳ್ಳೊಂದು ಮತ್ತೆ ಮೇಲೆ ತೇಲಿ ಭರಾಟೆಯಲ್ಲಿ ಸಂಚರಿಸಿದೆ.
ಆದೆಂದರೆ ಸಾವರ್ಕರ್ ಅವರ ನಿಧನಕ್ಕೆ ಸಂಸತ್ತಿನಲ್ಲಿ ಸಂತಾಪ ಸೂಚಿಸಲು ನೆಹರೂ ಒಪ್ಪಲಿಲ್ಲ ಎಂಬುದು. ವಾಸ್ತವ ಸಂಗತಿಯೆಂದರೆ ನೆಹರೂ ಅವರು ಸಾವರ್ಕರ್ ಗಿಂತ 20 ತಿಂಗಳು ಮೊದಲೇ ನಿಧನರಾಗಿದ್ದರು. ನೆಹರೂ ಕೊನೆಯುಸಿರೆಳೆದದ್ದು 1964ರ ಮೇ 27ರಂದು. ಸಾವರ್ಕರ್ ಇಹಲೋಕ ಯಾತ್ರೆ ಮುಗಿಸಿದ್ದು 1966ರ ಫೆಬ್ರವರಿ 26ರಂದು. 20 ತಿಂಗಳು ಮೊದಲೇ ಸತ್ತು ಹೋಗಿದ್ದ ನೆಹರು ಸಾವರ್ಕರ್ ನಿಧನದ ಸಂತಾಪಕ್ಕೆ ಅಡ್ಡಿ ಆಗುವುದಾದರೂ ಹೇಗೆ?
ನೆಹರೂ ಸಂತತಿಗೆ ಮೊಘಲ್ ಮುಸ್ಲಿಂ ಮೂಲವನ್ನು ಅಂಟಿಸಲಾಗಿದೆ. ಇವೇ ವಿಭಜಕ ಶಕ್ತಿಗಳು ನೆಹರು ಅವರನ್ನು ಹೆಣ್ಣುಬಾಕ ಚರಿತ್ರಹೀನ ಎಂದು ಅಂತರ್ಜಾಲದಲ್ಲಿ ಬಿಂಬಿಸುವ ಚಿತ್ರಗಳು- ಹಸಿ ಸುಳ್ಳುಗಳ ಖಜಾನೆಯನ್ನೇ ಸೃಷ್ಟಿಸಿದೆ. ಈ ಪೈಕಿ ಇತ್ತೀಚಿನ ಒಂದೆರಡು ಚಿತ್ರಗಳನ್ನು ನೋಡೋಣ. ಮೊದಲನೆಯ ಚಿತ್ರದಲ್ಲಿ ಯುವತಿಯೊಬ್ಬಳು ಹಿಂದಿನಿಂದ ನೆಹರೂ ಅವರ ಕೆನ್ನೆಗೆ ಮುತ್ತಿಡುತ್ತಿದ್ದಾಳೆ. ಎರಡನೆಯ ಚಿತ್ರದಲ್ಲಿ ವಯಸ್ಸಾದ ಮತ್ತೊಬ್ಬ ಹೆಣ್ಣುಮಗಳು ವಿಮಾನ ನಿಲ್ದಾಣದ ಹಿನ್ನೆಲೆಯಲ್ಲಿ ನೆಹರೂ ಗಲ್ಲಕ್ಕೆ ಮುತ್ತಿಡುತ್ತಿದ್ದಾರೆ. ಯುವತಿ ಈಗಲೂ ಬದುಕಿದ್ದಾರೆ. ಅವರ ಹೆಸರು ನಯನತಾರಾ ಸೆಹಗಲ್. ವಯಸ್ಸು 91 ವರ್ಷ. ದಿವಂಗತ ರಂಜೀತ್ ಸೀತಾರಾಂ ಪಂಡಿತ್ ಮತ್ತು ವಿಜಯಲಕ್ಷ್ಮೀ ಪಂಡಿತ್ ಅವರ ಮಗಳು. ಅಂದಹಾಗೆ ವಿಜಯಲಕ್ಷ್ಮೀ ಅವರು ಜವಾಹರಲಾಲ್ ನೆಹರೂ ಅವರ ತಂಗಿ. ಜವಾಹರ್ ಗಿಂತ ಹನ್ನೆರಡು ವರ್ಷ ಚಿಕ್ಕವರು. ಸ್ವಾತಂತ್ರ್ಯ ಬಂದ ನಂತರ 1955ರಲ್ಲಿ ಪ್ರಧಾನಿ ನೆಹರೂ ಬ್ರಿಟನ್ ಗೆ ಭೇಟಿ ನೀಡಿದಾಗ ಅಲ್ಲಿನ ಭಾರತೀಯ ಹೈಕಮಿಷನರ್ ವಿಜಯಲಕ್ಷ್ಮೀ ಪಂಡಿತ್ ಸೋದರನಿಗೆ ಮುತ್ತಿಟ್ಟು ಬರಮಾಡಿಕೊಳ್ಳುತ್ತಾರೆ. ಮಗಳು ನಯನತಾರಾ ಕೂಡ ಮಾಮನಿಗೆ ಮುತ್ತಿಡುತ್ತಾರೆ. ಸ್ವಾತಂತ್ರ್ಯಯೋಧ ತಂದೆ ರಂಜೀತ್ ಸೀತಾರಾಂ ಪಂಡಿತ್ ನಾಲ್ಕನೆಯ ಸಲ ಬ್ರಿಟಿಷರ ಸೆರೆವಾಸದಿಂದ ಹೊರಬಂದವರು ಬದುಕಿ ಉಳಿಯುವುದಿಲ್ಲ. ತಂದೆಯಿಲ್ಲದ ನಯನತಾರಾ ಮಾಮ ನೆಹರೂ ಮನೆಯಲ್ಲಿ ಇಂದಿರಾಗಾಂಧೀ ಜೊತೆಗೆ ಮತ್ತೊಬ್ಬ ಮಗಳಂತೆ ಬೆಳೆದವರು. ಎರಡನೆಯ ಫೋಟೋ ನೆಹರೂ ಅಮೆರಿಕಾಗೆ ಭೇಟಿ ನೀಡಿದಾಗಿನದು. ಆಗಲೂ ಅಲ್ಲಿನ ಭಾರತೀಯ ರಾಜದೂತರಾಗಿದ್ದ ವಿಜಯಲಕ್ಷ್ಮೀ ವಿಮಾನ ನಿಲ್ದಾಣದಲ್ಲಿ ಅಣ್ಣನೂ ಆದ ಪ್ರಧಾನಿಯನ್ನು ಅಪ್ಪಿ ಮುತ್ತಿಟ್ಟು ಸ್ವಾಗತಿಸುತ್ತಾರೆ. ಇಂತಹ ತಾಯಿ ಮಗಳನ್ನು ನೆಹರೂ ಅವರ ಪ್ರೇಮಿಗಳನ್ನಾಗಿ ವ್ಯಾಖ್ಯಾನ ಮಾಡಿ ವಾಟ್ಸ್ಯಾಪ್ ವಿಶ್ವವಿದ್ಯಾಲಯದ ಅಮಾಯಕರ ಮೆದುಳುಗಳಿಗೆ ಅಪ್ಪಟ ಸುಳ್ಳುಗಳ ವಿಷ ತುಂಬಲಾಗುತ್ತಿದೆ. ಅಂತರ್ಜಾಲದಲ್ಲಿ ಈ ಚಿತ್ರಗಳನ್ನು ಅಂಧಭಕ್ತರು ಹುಚ್ಚೆದ್ದು ಹಂಚಿಕೊಂಡಿದ್ದಾರೆ. ಸತ್ಯ ಗೊತ್ತಿದ್ದರೂ ಅಣ್ಣ ತಂಗಿಯನ್ನು ಪ್ರೇಮಿಗಳಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಇಂದಿಗೂ ವೈರಲ್ ಮಾಡುವುದು ಅತ್ಯಂತ ವಿಕೃತ ಮನಸ್ಥಿತಿ. ಸತ್ಯಕ್ಕೆ ಬಗೆಯುವ ಪರಮದ್ರೋಹ. ಜನಕೋಟಿಯನ್ನು ವಂಚಿಸಿ ಅವರ ಮಿದುಳು ತೊಳೆಯುವ ದುಷ್ಟ ಹಂಚಿಕೆ.
ನೆಹರೂ ಅವರನ್ನು ಅಣು ಅಣುವಾಗಿ ದ್ವೇಷಿಸಲು ಆರೆಸ್ಸೆಸ್ ಬಳಿ ಕಾರಣಗಳಿವೆ. ಈ ಸಂಘಟನೆಯ ಕೋಮುವಾದಿ ಸ್ವರೂಪವನ್ನು ಬಯಲಿಗೆಳೆಯಲು ನೆಹರೂ ಎಂದೂ ಹಿಂಜರಿದಿರಲಿಲ್ಲ.
ಗಾಂಧೀಜಿ ಹತ್ಯೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇಧ ಹೇರಿಕೆ, ಜಾತ್ಯತೀತತೆಯ ಪ್ರತಿಪಾದನೆ ಹಾಗೂ ಹಿಂದೂ ಸಂಹಿತೆಯ ವಿಧೇಯಕಗಳನ್ನು ಬೆಂಬಲಿಸಿ ಅವುಗಳನ್ನು ಜಾರಿ ಮಾಡಿದ ನೆಹರೂ ಅವರನ್ನು ಆರೆಸ್ಸೆಸ್ ಎಂದಿಗೂ ಕ್ಷಮಿಸದು. ಹಿಂದೂ ಸಂಹಿತೆಯ ಪ್ರಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರೇ. ಆದರೆ ಅದನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ದೊರಕಿಸುವಲ್ಲಿ ನೆಹರೂ ಪಾತ್ರ ನಿರ್ಣಾಯಕ. ಹಿಂದೂ ಸಮಾಜದ ಅತ್ಯಂತ ದಮನಕಾರಿ ಆಯಾಮಗಳನ್ನು ಕಿತ್ತು ಹಾಕುವ ಈ ವಿಧೇಯಕಗಳನ್ನು ಸಂಘ ಪರಿವಾರ ತೀವ್ರವಾಗಿ ವಿರೋಧಿಸಿತ್ತು. ಬಹುಪತ್ನಿತ್ವವನ್ನು ನಿಷೇಧಿಸುವ, ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸುವ, ವಿವಾಹ ವಿಚ್ಛೇದನದ ಪ್ರಕ್ರಿಯೆಯನ್ನು ಸರಳಗೊಳಿಸುವ, ಕುಟುಂಬದಲ್ಲಿ ಅನುವಂಶಿಕ ಆಸ್ತಿಯ ಹಂಚಿಕೆಯ ಹೊತ್ತಿನಲ್ಲಿ ಹೆಣ್ಣುಮಕ್ಕಳನ್ನು ಗಂಡುಮಕ್ಕಳಿಗೆ ಸರಿಸಮಾನವಾಗಿ ಪರಿಗಣಿಸುವ ಕ್ರಾಂತಿಕಾರಿ ಸುಧಾರಣೆಗಳಿಗೆ ಈ ವಿಧೇಯಕಗಳು ದಾರಿ ಮಾಡಿದ್ದವು.
ಕಟ್ಟರ್ ಮನುವಾದಿ- ಹಿಂದುತ್ವವಾದಿ ಆಗಿರುವ ಆರೆಸ್ಸೆಸ್ ಈ ಸುಧಾರಣೆಗಳನ್ನು ಎಂದಿಗೂ ಕ್ಷಮಿಸುವುದಿಲ್ಲ.
ನೆಹರೂ ಅವರ ಅಪಾರ ಕೊಡುಗೆಯನ್ನು ಅಳಿಸಿ ಹಾಕುವ ದುಷ್ಟ ಪ್ರಯತ್ನಗಳು ಫಲ ನೀಡುವುದಿಲ್ಲ. ಹಂಗಾಮಿ ಪ್ರಧಾನಿ ಮತ್ತು ಪೂರ್ಣಪ್ರಮಾಣದ ಪ್ರಧಾನಿಯಾಗಿ 18 ವರ್ಷಗಳ ಅವಧಿ ಭಾರತದ ಪ್ರಗತಿಯ ಪರ್ವ. ತಮ್ಮನ್ನು ದೇಶದ ಪ್ರಧಾನ ಸೇವಕ (Prime Servant of the Nation) ಎಂದು ಕರೆದುಕೊಂಡ ಮೊದಲ ಪ್ರಧಾನಿ ನೆಹರೂ.
ಅಂದು ನೆಹರೂ ಅವರನ್ನು ಟೀಕಿಸಿದವರ ಮೇಲೆ ದೇಶದ್ರೋಹದ ಎಫ್.ಐ.ಆರ್.ಗಳು ದಾಖಲಾಗುತ್ತಿರಲಿಲ್ಲ. ಸ್ವವಿಮರ್ಶೇ ಮತ್ತು ಟೀಕೆಯನ್ನು ಸ್ವಾಗತಿಸುತ್ತಿದ್ದ ಪ್ರಧಾನಿ ಅವರಾಗಿದ್ದರು.
ನೆಹರೂ ಅವರನ್ನು ಲೇವಡಿ ಮಾಡಿ ರೇಗಿಸುವಂತಹ ನಾಲ್ಕು ಸಾವಿರ ವ್ಯಂಗ್ಯಚಿತ್ರಗಳನ್ನು ಶಂಕರ ಪಿಳ್ಳೆ ತಮ್ಮ ಪ್ರಸಿದ್ಧ ನಿಯತಕಾಲಿಕ ಶಂಕರ್ಸ್ ವೀಕ್ಲಿಯಲ್ಲಿ ಪ್ರಕಟಿಸಿದ್ದರು. ವಿಡಂಬನೆ- ವಿನೋದ ತಮ್ಮನ್ನು ತಿವಿದರೂ ಸಹಿಸಿ ಸವಿದು ನಗುವ ಉದಾತ್ತ ಗುಣ ನೆಹರೂಗಿತ್ತು.
ತಮ್ಮನ್ನು ಪ್ರತಿನಿಧಿಸುವವರನ್ನು ಕುರಿತು ವ್ಯಂಗ್ಯವಾಡುವ ಅವಕಾಶಗಳನ್ನು ನಿರಾಕರಿಸುವುದು ಸವಾ೯ಧಿಕಾರೀ ಆಡಳಿತದ ಪ್ರಧಾನ ಲಕ್ಷಣಗಳಲ್ಲೊಂದು. ತನ್ನ ಕುರಿತೇ ನಕ್ಕುಬಿಟ್ಟರೆ ಎಂಬ ಅಳುಕು ಸವಾ೯ಧಿಕಾರಿಯನ್ನು ಸದಾ ಸವ೯ದಾ ಕಾಡುತ್ತಿರುತ್ತದೆ. ಹಿಟ್ಲರನ ಹಯಾಮಿನಲ್ಲಿ ಒಂದು ಒಳ್ಳೆಯ ಕಾಮಿಡಿ, ಒಂದು ಉತ್ತಮ ವ್ಯಂಗ್ಯಚಿತ್ರ, ಒಂದೇ ಒಂದು ವಿಡಂಬನೆ, ಅಣಕು ಕುಹಕದ ಪ್ರಸಂಗವನ್ನು ಜಮ೯ನರು ನೋಡಲಿಲ್ಲ ಎನ್ನುತ್ತಾರೆ ಶಂಕರಪಿಳ್ಳೆ.
ಭಾರತ ಉಸಿರಾಡಿರುವುದು ತನ್ನ ಹಳ್ಳಿಗಳಲ್ಲಿ ಎಂಬ ಗಾಂಧೀಜಿ ಮಾತನ್ನು ನೆಹರೂ ಗಂಭೀರವಾಗಿ ಪರಿಗಣಿಸಿದ್ದರು. ಭಾಕ್ರಾನಂಗಲ್, ಹಿರಾಕುಡ್, ನಾಗಾರ್ಜುನಸಾಗರದಂತಹ ಭಾರೀ ಜಲಾಶಯಗಳನ್ನು ನಿರ್ಮಿಸಿ ವ್ಯವಸಾಯಕ್ಕೆ ಉಸಿರು ತುಂಬಿದರು. ಭಾರೀ ಕೈಗಾರಿಕೆಗಳ ಸ್ಥಾಪಿಸಿದರು. ವಿಶ್ವವಿದ್ಯಾಲಯಗಳು, ಐಐಟಿ, ಐಐಎಂ ಗಳು ಮಾತ್ರವಲ್ಲದೆ ಶಾಲಾಶಿಕ್ಷಣದ ಗಟ್ಟಿ ತಳಪಾಯ ಹಾಕಿದರು. ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳು, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸ್ಥಾಪಿಸಿದರು. ಗಾಂಧೀಜಿಯ ಗ್ರಾಮಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪಂಚಾಯತಿರಾಜ್ಯ ಸಂಸ್ಥೆಗಳನ್ನು ನೆಟ್ಟರು. ದೇಶ ವಿಭಜನೆ, ಗಾಂಧೀ ಹತ್ಯೆಯ ತಳಮಳಗಳಲ್ಲಿ ತಮ್ಮ ಸಮರ್ಥ ಸಂಗಾತಿಗಳ ಸಹಕಾರದೊಂದಿಗೆ ದಿಕ್ಕು ತಪ್ಪದಂತೆ ದೇಶವನ್ನು ಮುನ್ನಡೆಸಿದರು. ಕೋಮುವಾದ ಮತ್ತು ಧಾರ್ಮಿಕ ಧ್ರುವೀಕರಣವನ್ನು ದೂರ ಇರಿಸಿ ಲೋಕಸಭಾ ಚುನಾವಣೆಗಳ ಜರುಗಿಸಿದರು. ಎಲ್ಲಿಯವರೆಗೆ ನಾನು ಪ್ರಧಾನಮಂತ್ರಿಯಾಗಿರುತ್ತೇನೋ, ಅಲ್ಲಿಯತನಕ ನಮ್ಮ ನೀತಿ ನಿರ್ಧಾರಗಳನ್ನು ಕೋಮುವಾದದ ಸೋಂಕಿನಿಂದ ಕಾಪಾಡುತ್ತೇನೆ. ಬರ್ಬರ ಮತ್ತು ಅನಾಗರಿಕ ನಡವಳಿಕೆಯನ್ನು ಸಹಿಸುವುದಿಲ್ಲ ಎಂದು ಸಾರಿದ್ದರು. ಪಾಕಿಸ್ತಾನವು ಮುಸ್ಲಿಮ್ ಪಾಕಿಸ್ತಾನ ಆದ ಮಾದರಿಯಲ್ಲೇ ಭಾರತ ಹಿಂದು ಪಾಕಿಸ್ತಾನ ಆಗುವ ಅಪಾಯವಿತ್ತು. ಇದೀಗ ಸನ್ನಿಹಿತವಾಗಿರುವ ಈ ಅನಾಹುತವನ್ನು ಅಂದು ಹತ್ತಿರ ಸುಳಿಯಲೂ ಬಿಡಲಿಲ್ಲ ನೆಹರೂ
ಜನತಂತ್ರವನ್ನು ಭದ್ರವಾಗಿ ತಳವೂರಿಸಿದರು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಕನಸು ಕಂಡ ಅವರು ಸಮಾಜಜವಾದಿ ಸಮಾಜ ನಿರ್ಮಿತಿಯ ದಾರಿಯಲ್ಲಿ ನಡೆದರು. ಏಕತೆ ಸಮಗ್ರತೆಯಲ್ಲಿ ದೇಶವನ್ನು ಗಟ್ಟಿಯಾಗಿ ಹಿಡಿದಿಡಲು ಜಾತ್ಯತೀತ ತತ್ವವನ್ನು ಅನುಸರಿಸಿದರು. ಜನಮಾನಸದಲ್ಲಿ ವೈಜ್ಞಾನಿಕ ಮನೋಭಾವ ರೂಢಿಸಲು ಶ್ರಮಿಸಿದರು. ವಿಜ್ಞಾನ-ತಂತ್ರಜ್ಞಾನದ ನೆರವಿನೊಂದಿಗೆ ಆಧುನಿಕ ದೇಶವೊಂದನ್ನು ಕಟ್ಟಲು ಮುಂದಾದರು. ಬಾಹ್ಯಾಕಾಶ ಸಂಶೋಧನೆ ಮತ್ತು ಪರಮಾಣು ಯೋಜನೆಗಳಿಗೆ ಓನಾಮ ಹಾಕಿದರು.
ನೆಹರೂ ಹಾಕಿದ ಈ ಆಡಿಪಾಯಗಳನ್ನು ಕದಲಿಸಿ ಕೆಡವುವ ಮನೆಹಾಳ ಕೃತ್ಯ ದೇಶದಲ್ಲಿ ಜರುಗಿದೆ.
ಒಂದು ದೇಶದ ಮಾನವಸಂಪನ್ಮೂಲವನ್ನು, ಅಲ್ಲಿನ ಅರಿವಿನ ಸಮಾಜವನ್ನು, ಸಮ ಸಮಾಜವನ್ನು ರೂಪಿಸಿ ಬೆಳೆಸುವ ಅಡಿಪಾಯ ಶಿಕ್ಷಣ. ಭಾರತದಲ್ಲಿ ಈ ಅಡಿಪಾಯಕ್ಕೇ ಗೆದ್ದಲು ಹಿಡಿದಿದೆ. ಮುಕ್ತಚಿಂತನೆ, ಸ್ವಾಯತ್ತತೆ, ಗುಣಮಟ್ಟವನ್ನು ರಾಜಕೀಯ ಹಸ್ತಕ್ಷೇಪ ಹಾಳುಗೆಡವಿದೆ. ಗೆದ್ದಲನ್ನು ಕೊಡವಿ ಕಟ್ಟುವ ಕೆಲಸ ನಡೆಯುತ್ತಿಲ್ಲ. ಬದಲಿಗೆ ಇನ್ನಷ್ಟು ಗೆದ್ದಲು ಹಿಡಿಸುವ ಕೆಲಸ ಬಿಡುವಿಲ್ಲದೆ ಸಾಗಿದೆ.
ಒಂದೆಡೆ ಉನ್ನತ ಶಿಕ್ಷಣ ವ್ಯವಸ್ಥೆಯ ಅಧೋಗತಿಯನ್ನು ನೋಡುತ್ತಿದ್ದೇವೆ. ಇನ್ನೊಂದೆಡೆ ಸಮಾಜದ ಅತ್ಯಂತ ಕೆಳವರ್ಗಗಳ ಜನರ ಜೇಬುಗಳಿಗೂ ಎಟುಕುವಂತೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಹೆಸರಾಂತ ಸರ್ಕಾರಿ ವಿಶ್ವವಿದ್ಯಾಲಯಗಳ ಹೆಸರಿಗೆ ಮಸಿ ಬಳಿದು ಅವುಗಳಿಗೆ ಬೀಗ ಜಡಿಯುವ ಹುನ್ನಾರ ನಡೆಯುತ್ತಿದೆ. ಮುಕ್ತ ಸಂವಾದಕ್ಕೆ ಮತ್ತು ಪ್ರಶ್ನಿಸುವುದಕ್ಕೆ ಅವಕಾಶವಿರುವ ಈ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಕೆಡವಲಾಗುತ್ತಿದೆ. ಫೇಕ್ ನ್ಯೂಸ್ ಹಬ್ಬಿಸುವ ‘ವಾಟ್ಸ್ಯಾಪ್ ಯೂನಿವರ್ಸಿಟಿ’ಗಳನ್ನು ದೇಶದ ಉದ್ದಗಲಕ್ಕೆ ವ್ಯವಸ್ಥಿತವಾಗಿ ನಾಯಿ ಕೊಡೆಗಳಂತೆ ಎಬ್ಬಿಸಲಾಗುತ್ತಿದೆ.
ವಿಭಜಕ ರಾಜಕೀಯ ಶಕ್ತಿಗಳು ನೆಹರೂ ಅವರನ್ನು ಸ್ವತಂತ್ರ ಭಾರತದ ಅತಿ ದೊಡ್ಡ ಖಳನಾಯಕ ಎಂದು ಬಿಂಬಿಸುತ್ತ ಬರುತ್ತಿವೆ. ಕಳೆದ ಹನ್ನೆರಡು ವರ್ಷಗಳಲ್ಲಿ ವಿಭಜಕ ಶಕ್ತಿಗಳಿಗೆ ಇನ್ನಷ್ಟು ಶಕ್ತಿ ಬಂದಿದೆ. ಅವುಗಳ ವಿಕೃತಿ ಎಲ್ಲ ಎಲ್ಲೆಗಳನ್ನೂ ಮೀರಿ ಹಬ್ಬಿದೆ. ಸತ್ಯಮೇವ ಜಯತೇ ಎಂಬ ಮಾತಿದೆ. ವಾಸ್ತವವನ್ನು ಅಲ್ಪಕಾಲಕ್ಕೆ ಹತ್ತಿಕ್ಕಬಹುದು. ಸದಾ ಕಾಲಕ್ಕೆ ತುಳಿಯುವುದು ಸಾಧ್ಯವಿಲ್ಲ. ತುಳಿದಷ್ಟೇ ವೇಗವಾಗಿ ಮೇಲಕ್ಕೆ ಪುಟ ನೆಗೆವುದು ನಿಶ್ಚಿತ.




