ರಾಜ್ಯದಲ್ಲಿ ಕೋಮು ದ್ವೇಷ ಭಾಷಣಗಳನ್ನು ಮಾಡಿರುವವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವ ಕಾಂಗ್ರೆಸ್ ಸರ್ಕಾರದ ನಡೆ ಅತ್ಯಂತ ಆತಂಕಕಾರಿ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ವಿರೋಧಿ” ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ನಗರದ ಆಕ್ತರ್ ರಜಾ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

“ಕೋಮು ದ್ವೇಷ ಭಾಷಣಕಾರರ ವಿರುದ್ಧದ ಪ್ರಕರಣಗಳನ್ನು ಸರ್ಕಾರ ಹಿಂಪಡೆಯುವುದನ್ನು ಹಾಗೂ ಗೋ ರಕ್ಷಣೆಯ ಹೆಸರಿನ ಪುಂಡಾಟವನ್ನು ಖಂಡಿಸಿ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ “ಕೋಮು ದ್ವೇಷ ಭಾಷಣಕಾರರ ವಿರುದ್ಧದ ಪ್ರಕರಣ ಹಿಂಪಡೆಯುವ ಸರ್ಕಾರದ ನಡೆ ಖಂಡನೀಯ. ಗೋ ರಕ್ಷಣೆ ಹೆಸರಿನ ಪುಂಡಾಟಕ್ಕೂ ಸರ್ಕಾರವೇ ಬೆಂಬಲ ನೀಡುವಂತಿದೆ” ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಖಂಡನೆ ವ್ಯಕ್ತಪಡಿಸಿದರು.
“ಒಂದು ಕಡೆ ಕೋಮು ದ್ವೇಷ ಹರಡುವ ಭಾಷಣಕಾರರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಸರ್ಕಾರವೇ ಹಿಂಪಡೆಯುತ್ತಿದೆ. ಮತ್ತೊಂದು ಕಡೆ ಗೋ ರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು ಮುಸ್ಲಿಮರು ಕಾನೂನುಬದ್ಧವಾಗಿ ಖರೀದಿ ಮಾಡಿದ ಗೋವುಗಳನ್ನು ತಡೆದು, ದೌರ್ಜನ್ಯ ಎಸಗುವ ಪುಂಡರಿಗೆ ಪರೋಕ್ಷ ಬೆಂಬಲ ದೊರೆಯುತ್ತಿರುವಂತೆ ಕಾಣುತ್ತಿದೆ. ಇದು ಸರ್ಕಾರದ ದ್ವಂದ್ವ ನಿಲುವನ್ನು ಬಯಲಿಗೆಳೆಯುತ್ತದೆ” ಎಂದು ಕಿಡಿಕಾರಿದರು.
“ರಾಜ್ಯದ ಪೊಲೀಸ್ ಮಹಾನಿರ್ದೇಶಕರೇ, ಕರ್ನಾಟಕದಲ್ಲಿ ಪುನೀತ್ ಕೆರೆಹಳ್ಳಿಯನ್ನು ಯಾವ ಸಂವಿಧಾನಾತ್ಮಕ ಹುದ್ದೆಗೆ ನೇಮಕ ಮಾಡಿದ್ದೀರಿ? ಅವರು ಪೊಲೀಸ್ ಅಧಿಕಾರಿಯೇ? ಗೃಹ ಇಲಾಖೆಯ ವಿಶೇಷ ಅಧಿಕಾರಿಯೇ? ಅಥವಾ ಬಿಜೆಪಿ–ಸಂಘ ಪರಿವಾರದ ಖಾಸಗಿ ಗೂಂಡಾ ಪಡೆ ರಾಜ್ಯದಲ್ಲಿ ಕಾನೂನಿಗಿಂತ ಮೇಲಾಗಿ ಕೆಲಸ ಮಾಡುತ್ತಿದೆಯೇ?” ಎಂದು ಪ್ರಶ್ನಿಸಿದ್ದಾರೆ.
“ಮುಸ್ಲಿಮರು ಕಾನೂನುಬದ್ಧವಾಗಿ ಬಲಿಕೊಡಲು ಹಣ ನೀಡಿ ಖರೀದಿ ಮಾಡಿದ ದನಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಈ ನೈತಿಕ ಪೊಲೀಸ್‌ಗಿರಿ ಕೇವಲ ಅಲ್ಪಸಂಖ್ಯಾತರ ಮೇಲಿನ ದ್ವೇಷ ರಾಜಕಾರಣವಲ್ಲ, ಇದು ರೈತ ಸಮುದಾಯದ ಬದುಕಿನ ಮೇಲಿನ ದಾಳಿ ಕೂಡ ಆಗಿದೆ” ಎಂದು ಅಭಿಪ್ರಾಯಪಟ್ಟರು.
“ಹಾಲು ಕೊಡದ, ಕೃಷಿಗೆ ಯೋಗ್ಯವಲ್ಲದ ದನಗಳನ್ನು ಸಾಕಲು ರೈತರು ದಿನಕ್ಕೆ ನೂರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ರೈತರು ಕಂಗೆಟ್ಟಿರುವಾಗ, ಇಂತಹ ದನಗಳನ್ನು ಮಾರಾಟ ಮಾಡದಿದ್ದರೆ ರೈತರು ಬದುಕುವುದು ಹೇಗೆ? ಗೋ ಪ್ರೇಮದ ನಾಟಕ ಮಾಡುವವರು ಮೊದಲು ರೈತರ ಸಂಕಷ್ಟಕ್ಕೆ ಉತ್ತರ ಕೊಡಲಿ. ಕೆಜಿ ಸಗಣಿಗೆ 5000 ಸಾವಿರ ರೂಪಾಯಿನಂತೆ ಕೇಂದ್ರ ಬಿಜೆಪಿ ಸರ್ಕಾರ ಸಹಾಯಧನ ನೀಡಲಿ, ರೈತರ ನಷ್ಟ ಭರಿಸುವ ಯೋಜನೆ ತರಲಿ. ಹಾಗೂ ಈ ವಿದೇಶಗಳಿಗೆ ರಫ್ತು ಆಗುವ ದಂದೆಯನ್ನು ತಡೆದು, ರೈತರಿಗೆ ನೆರವಾಗುವ ಯೋಜನೆ ಜಾರಿಗೆ ತರಲಿ, ಆಗ ರೈತರು ದನಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಬರೋದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

“ಕೋಮು ದ್ವೇಷ ಭಾಷಣಕಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಕಾನೂನು ಕೈಗೆತ್ತಿಕೊಳ್ಳುವ ಪುಂಡರನ್ನು ನಿಯಂತ್ರಿಸಲು ವಿಫಲವಾಗುವುದು ರಾಜ್ಯದಲ್ಲಿ ಅಪಾಯಕಾರಿ ಸಂದೇಶ ರವಾನಿಸುತ್ತಿದೆ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಸರ್ಕಾರವು ತಕ್ಷಣ ತನ್ನ ನಿಲುವು ಸ್ಪಷ್ಟಪಡಿಸಿ, ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ದಾವಣಗೆರೆ ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಝ್ ಅಹಮದ್ “2023 ರ ಚುನಾವಣೆಯಲ್ಲಿ ಹಲವಾರು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇವತ್ತು, ಯಾವುದೇ ಆಶ್ವಾಸನೆಗಳನ್ನು ಈಡೇರಿಸದೇ ಅಹಿಂದ ವರ್ಗಗಳಿಗೆ ದ್ರೋಹ ಬಗೆಗಿದೆ. ಅದೇ ರೀತಿ ದ್ವೇಷ ಭಾಷಣಕಾರರ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ರಾಜ್ಯದಲ್ಲಿ ಸಂಘರ್ಷ ವಾತಾವರಣ ಸೃಷ್ಟಿ ಮಾಡಿ ಅದರಿಂದ ರಾಜಕೀಯ ಲಾಭ ಪಡೆಯುವ ದೊಡ್ಡ ಹುನ್ನಾರ ಅಡಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಸ್ ಪೀರ್, ಜಿಲ್ಲಾಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಸಮಿತಿ ಸದಸ್ಯರಾದ ಇಸ್ಮಾಯಿಲ್ ಜಬಿವುಲ್ಲಾ, ಏಜಾಜ್ ಅಹಮದ್, ಹಾಗು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಆದಿಲ್ ಬೇಗ್ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.





