“ಫ್ಯಾಸಿಸಂನಲ್ಲಿ ಉಗ್ರ ರೂಪವೂ ಇದೆ, ಮಂದ ರೂಪವೂ ಇದೆ. ಉಗ್ರ ಫ್ಯಾಸಿಸಂ ಮತ್ತು ಮಂದ ಫ್ಯಾಸಿಸಂ—ಇವೆರಡೂ ನಮಗೆ ಆಯ್ಕೆಯಾಗಬಾರದು” ಎಂದು ಚಿಂತಕ ಶಿವಸುಂದರ್ ಹೇಳಿದರು.
ಯುವಜನ ರಾಜಕಾರಣ: ದಿಕ್ಕು- ಭವಿಷ್ಯ – ಸವಾಲು ಎಂಬ ಆಶಯದೊಂದಿಗೆ ಮಂಗಳೂರಿನ ಬಿಷಪ್ ಜತ್ತಣ್ಣ ಸಭಾಂಗಣದಲ್ಲಿ ಆರಂಭವಾದ ಜನನುಡಿ 2026 ಕಾರ್ಯಕ್ರಮದ ಮೊದಲ ಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಭವಿಷ್ಯದ ಭಾರತ : ಆರ್ಥಿಕತೆ ಮತ್ತು ಜೀವನೋಪಾಯ” ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ಅವರು, “ಪರ್ಯಾಯ ರಾಜಕಾರಣ ಎಂದರೆ ಇದೇ—ಜನರ ಬೀದಿ ಹೋರಾಟಗಳನ್ನು ಕಟ್ಟುವುದು. ಇದನ್ನು ಮಾಡಲು ಸಾಧ್ಯವಾದರೆ ಮಾತ್ರ ನಮ್ಮ ಸ್ವಾತಂತ್ರ್ಯ, ನಮ್ಮ ಸ್ವಾಭಿಮಾನ ಮತ್ತು ನಮ್ಮ ಸಾರ್ವಭೌಮತೆ ಎಲ್ಲವೂ ಮರಳಿ ಬರಲು ಸಾಧ್ಯ. ಇಲ್ಲದಿದ್ದರೆ, ಈಗಾಗಲೇ ಅದರ ಪರಿಣಾಮಗಳು ಕಾಣಿಸಿಕೊಳ್ಳುತ್ತಿವೆ” ಎಂದು ಅಭಿಪ್ರಾಯಪಟ್ಟರು.
“ನವ ಉದಾರವಾದದ ಸಾರಾಂಶದಲ್ಲಿ ಒಂದು ರೀತಿಯ ಸಾಮಾಜಿಕ ಡಾರ್ವಿನಿಸಂ ಇದೆ. ಇದು ನೈಸರ್ಗಿಕ ಆಯ್ಕೆಯ ತತ್ವ. ಪ್ರಕೃತಿ ಯಾರನ್ನು ಹೆಚ್ಚು ಸಮರ್ಥರೆಂದು ಆಯ್ಕೆ ಮಾಡುತ್ತದೆಯೋ ಅವರು ಉಳಿಯುತ್ತಾರೆ ಎಂಬುದು ಅದರ ಮೂಲಭಾವನೆ. ಬಲಶಾಲಿಗಳಲ್ಲದವರು ಕ್ರಮೇಣ ಅಳಿದುಹೋಗುತ್ತಾರೆ ಎಂಬ ದೃಷ್ಟಿಕೋನ ಇದರಲ್ಲಿ ಅಡಗಿದೆ ಎಂದ ಅವರು, ಮಾರುಕಟ್ಟೆಯ ಮೂಲಭೂತವಾದವೂ ಅದನ್ನೇ ಹೇಳುತ್ತದೆ. ಈ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬಲಶಾಲಿಗಳು, ಅರ್ಹತೆ ಇರುವವರು ಮಾತ್ರ ಬದುಕುತ್ತಾರೆ; ಉಳಿದವರು ನಾಶವಾಗುವುದು ಸಹಜ ಎಂದು ಅದು ಪ್ರತಿಪಾದಿಸುತ್ತದೆ. ಬ್ರಾಹ್ಮಣವಾದ, ಸಾಮಾಜಿಕ ಡಾರ್ವಿನಿಸಂ ಮತ್ತು ನವ ಉದಾರವಾದ—ಈ ಮೂರೂ ಸೇರಿ ಇಂದು ನಮ್ಮ ದೇಶದಲ್ಲಿ ಫ್ಯಾಸಿಸಂ ಅನ್ನು ಹುಟ್ಟಿಸಿವೆ” ಎಂದರು.
ಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ನಂದ ಕುಮಾರ್ ಕುಂಬ್ರಿಉಬ್ಬು, “ನಾವು ಈಗಿರುವ ಚೌಕಟ್ಟಿನೊಳಗೇ ಪರಿಹಾರ ಹುಡುಕುತ್ತಾ ಹೋದಾಗ, ಆ ಪರಿಹಾರದ ವ್ಯಾಪ್ತಿ ಮತ್ತು ನಮ್ಮ ಮುಂದಿರುವ ವ್ಯವಸ್ಥೆಯ ಮಿತಿಗಳ ನಡುವೆ ಬಹಳ ದೊಡ್ಡ ವ್ಯತ್ಯಾಸವಿರುತ್ತದೆ. ಆಗ ಹತಾಶೆ ಹುಟ್ಟುತ್ತದೆ. “ಇನ್ನೇನು ಮಾಡುವುದು? ನಮ್ಮಿಂದ ಇನ್ನೇನು ಸಾಧ್ಯ?” ಎಂಬ ಪ್ರಶ್ನೆ ಎದುರಾಗುತ್ತದೆ ಎಂದರು.
“ಪ್ರತಿಭಟಿಸುವುದು ನಮ್ಮ ಪ್ರಜಾತಾಂತ್ರಿಕ ಹಕ್ಕು. ಅಗತ್ಯವಿದ್ದಾಗ ನಾವು ಆ ಹಕ್ಕನ್ನು ಚಲಾಯಿಸುತ್ತೇವೆ. ಅದು ನಮ್ಮ ಹಕ್ಕು. ಅದನ್ನು ತಡೆಯುವ ಹಕ್ಕು ಅಥವಾ ಅಧಿಕಾರ ಯಾರಿಗೂ ಇಲ್ಲ ಎಂದ ಅವರು, ಈ ಮನೋಭಾವದಿಂದಲೇ ಜಂತರ್ ಮಂತರ್ ಹೋರಾಟ ರೂಪುಗೊಂಡಿತು. ಇದಕ್ಕೂ ಹಿಂದಿನ ಹೋರಾಟಗಳನ್ನು ನೋಡಿದರೂ ಇದೇ ರೀತಿಯ ಸಂಗತಿಗಳು ಕಾಣಿಸುತ್ತವೆ” ಎಂದರು.
ಪ್ರತಿಕ್ರಿಯಿಸಿದ ಅಶ್ಫಕ್ ಎಂ.ಜಿ. ಕೊಪ್ಪಳ ಅವರು ಮಾತನಾಡಿ, “ಯುವಕರ ಕಷ್ಟಗಳನ್ನು ಯುವಕರೇ ಅರ್ಥ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಆಶೋತ್ತರಗಳನ್ನು ಈಡೇರಿಸಿ ಅಂತ ಒತ್ತಾಯಿಸಲು ಬೀದಿಗಿಳಿಯಬೇಕಾಗಿದೆ” ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೇಖಕಿ ಡಾ. ಸಬಿತಾ ಬನ್ನಾಡಿ ಮಾತನಾಡಿ, “ಎಲ್ಲವನ್ನೂ ಸಹಜಗೊಳಿಸಲಾಗುತ್ತಿದೆ. ಸರ್ವಾಧಿಕಾರವನ್ನೂ ಸಹ ಸಹಜಗೊಳಿಸಲಾಗುತ್ತಿದೆ. ಯುವಜನತೆಗೆ ಆಯ್ಕೆಯನ್ನೂ ಕೊಡುತ್ತಿಲ್ಲ. ಬಂಡವಾಳ ತರುವ ಮಾತನ್ನೇ ಆಡುತ್ತಿದ್ದಾರೆ. ಬಂಡವಾಳ ಹುಟ್ಟಿಸುವ ಮಾತು ಆಡುತ್ತಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು. ರಿಝ್ವಾನ್ ಹರೇಕಳ ನಿರೂಪಿಸಿದರು.



