ಸ್ವಾತಂತ್ಯ್ರ ಸಮರದಲ್ಲಿ ಅಹಿಂಸಾತ್ಮಕ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಬರವಣಿಗೆ, ರಂಗಭೂಮಿ, ವಿಡಂಬನೆ ಮತ್ತು ಇತರೆ ಕಲೆಗಳು ಅನ್ಯಾಯವನ್ನು ಪ್ರಶ್ನಿಸುವ ಪ್ರಜಾಸತ್ತಾತ್ಮಕ ಜೀವನಾಡಿಯಾಗಿ ಬಳಕೆಯಾಗಿವೆ. ಈ ಮೌಲ್ಯವನ್ನು ಅಲ್ಲಗಳೆದು ಅಳಿಸಿಹಾಕುವ ಮೂಲಕ ಮತದಾರರ ಅಧಿಕಾರವನ್ನು ಶಾಶ್ವತವಾಗಿ ಕಿತ್ತುಕೊಳ್ಳುವುದು ಸರ್ವಾಧಿಕಾರಿ ಸರ್ಕಾರಗಳ ಪ್ರಮುಖ ಲಕ್ಷಣವಾಗಿದೆ.
ಪ್ರತಿಭಟನೆಗೆ ಅಹಿಂಸೆಯ ಮೌಲ್ಯವನ್ನು ತುಂಬಿ, ಸ್ವಾತಂತ್ಯ್ರ ಪಡೆದ ದೇಶ ಇದು. ಶಾಂತಿಯುತ ಪ್ರತಿಭಟನೆಯು ಪ್ರಜಾಪ್ರಭುತ್ವದ ಪ್ರಬಲ ಸಾಧನವಾಗಿದ್ದು, ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಾಪಾಡುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಅದನ್ನು ಅಳಿಸುವ ಪ್ರಯತ್ನಗಳನ್ನು ಎಲ್ಲಾ ಸರ್ಕಾರಗಳೂ ನಡೆಸಿವೆಯಾದರೂ, ಪ್ರಸ್ತುತದ ಕೇಂದ್ರ ಸರ್ಕಾರವು ಅದನ್ನು ಇಲ್ಲವಾಗಿಸಲು ಮಾಡುತ್ತಿರುವ ಪ್ರಯತ್ನಕ್ಕೆ ಎಣೆಯೇ ಇಲ್ಲದಾಗಿದೆ. ಹಿಂದಿನ ಆಡಳಿತದಲ್ಲಿ ಪ್ರಶ್ನಿಸುವವರಿಗೆ ದೇಶದ್ರೋಹಿಗಳು, ಆತಂಕವಾದಿಗಳು, ಪಾಕಿಸ್ತಾನಿ/ಚೀನಾ ಏಜೆಂಟರು, ಹವಾಲಾ ನಡೆಸುವವರು, ಎಂಬಿತ್ಯಾದಿ ಬಿರುದು ನೀಡುತ್ತಿರಲಿಲ್ಲ. ಸರ್ಕಾರವು ಅವರೊಂದಿಗೆ ಸಂವಾದ ನಡೆಸುವ ಕನಿಷ್ಠ ಗೌರವವನ್ನಾದರೂ ಕೊಡುತ್ತಿತ್ತು. ಮುಖ್ಯವಾಹಿನಿ ಮಾಧ್ಯಮಗಳು ಅವರ ಜೊತೆ ನಿಂತು ಸಮಾನವಾಗಿ ಸರ್ಕಾರವನ್ನು ಪ್ರಶ್ನಿಸುತ್ತಿದ್ದವು.
ಇಂದು, ಕೇಂದ್ರ ಸರ್ಕಾರ ಮತ್ತು ಮಾಧ್ಯಮಗಳು ಪ್ರಶ್ನಿಸುವ ಧ್ವನಿಗಳನ್ನು ಬಹು ಕ್ರೂರವಾಗಿ ಮೌನವಾಗಿಸುತ್ತಿದ್ದಾರೆ. ಇದು ಸಾಲದೆಂಬಂತೆ, ಸರ್ಕಾರದ ಕೈಗೊಂಬೆಯಾಗಿರುವ ಸಂವಿಧಾನಾತ್ಮಕ ಸ್ವತಂತ್ಯ್ರ ಸಂಸ್ಥೆಗಳು (ಇಡಿ, ಐಟಿ ಇತ್ಯಾದಿ) ಸರ್ಕಾರವನ್ನು ಪ್ರಶ್ನಿಸುವವರಿಗೆ ಕಿರುಕುಳ ಕೊಡುವುದು ಸಾಮಾನ್ಯವಾಗಿದೆ.
ಸ್ವಾತಂತ್ಯ್ರ ಸಮರದಲ್ಲಿ ಅಹಿಂಸಾತ್ಮಕ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಬರವಣಿಗೆ, ರಂಗಭೂಮಿ, ವಿಡಂಬನೆ ಮತ್ತು ಇತರೆ ಕಲೆಗಳು ಅನ್ಯಾಯವನ್ನು ಪ್ರಶ್ನಿಸುವ ಪ್ರಜಾಸತ್ತಾತ್ಮಕ ಜೀವನಾಡಿಯಾಗಿ ಬಳಕೆಯಾಗಿವೆ. ಈ ಮೌಲ್ಯವನ್ನು ಅಲ್ಲಗಳೆದು ಅಳಿಸಿಹಾಕುವ ಮೂಲಕ ಮತದಾರರ ಅಧಿಕಾರವನ್ನು ಶಾಶ್ವತವಾಗಿ ಕಿತ್ತುಕೊಳ್ಳುವುದು ಸರ್ವಾಧಿಕಾರಿ ಸರ್ಕಾರಗಳ ಪ್ರಮುಖ ಲಕ್ಷಣವಾಗಿದೆ. ಸರ್ವಾಧಿಕಾರದತ್ತ ತೀವ್ರವಾಗಿ ಹೆಜ್ಜೆಯಿಡುತ್ತಿರುವ ಪ್ರಸ್ತುತದ ಕೇಂದ್ರ ಸರ್ಕಾರವೂ ಅದೇ ಲಕ್ಷಣವನ್ನು ಹೊಂದಿದೆ ಎನ್ನಬಹುದು.

2019-20ರಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಗಳಲ್ಲಿ ಕೋಮು ದ್ವೇಷ ಹರಡುವ ಘೋಷಣೆ ಕೂಗಿ ಗುಂಡು ಹಾರಿಸಿದ ಆರೋಪದಲ್ಲಿ ಜೈಲಿಗೆ ಹೋದವರು ತಕ್ಷಣವೇ ಜಾಮೀನಿನಲ್ಲಿ ಹೊರಬಂದರು. ಆದರೆ, ಆ ಜಾಗದಲ್ಲಿರದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಇನ್ನೂ ಜಾಮೀನು ಸಿಗದೆ ಜೈಲಿನಲ್ಲಿದ್ದಾರೆ. ಈ ಬೆಳವಣಿಗೆಗಳು ಇನ್ನೆಂದೂ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಜನರಲ್ಲಿ ಅತೀವ ಭಯ ಹುಟ್ಟಿಸಿದೆ. ಕಳೆದ ಹನ್ನೆರಡು ವರ್ಷಗಳಲ್ಲಿ ನಡೆದ ಹಲವು ಪ್ರತಿಭಟನೆಗಳಲ್ಲಿ, ರೈತರ ಚಳವಳಿಯನ್ನು ಹೊರತುಪಡಿಸಿದರೆ, ಬಹುತೇಕ ಚಳವಳಿಗಳು ತಮ್ಮ ಪ್ರಮುಖ ಬೇಡಿಕೆಗಳನ್ನು ಸಾಧಿಸಲು ವಿಫಲವಾಗಿವೆ ಅಥವಾ ಸರ್ಕಾರದ ಕಠಿಣ ಪ್ರತಿಕ್ರಿಯೆಯನ್ನು ಎದುರಿಸಿವೆ.
ಅವ್ಯವಸ್ಥಿತ ಶಿಕ್ಷಣ ವ್ಯವಸ್ಥೆಯಿಂದ ಸೋತು ಆಕ್ರೋಶಗೊಂಡ ಯುವಜನತೆ ಸಾಮಾಜಿಕ ಜಾಲತಾಣದಲ್ಲಿ ವಿಡಂಬನೆಯಾಗಿ ‘ಜಿರಳೆ ಪಕ್ಷ’ (ಸಿಜೆಪಿ) ಎಂಬ ವೇದಿಕೆಯನ್ನು ಹುಟ್ಟುಹಾಕುತ್ತದೆ. ಪ್ರಶ್ನೆ ಪತ್ರಿಕೆ ಸೋರುವಿಕೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಈ ವೇದಿಕೆ ಬೀದಿಗಿಳಿದು ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇವರ ರಾಜೀನಾಮೆಗೆ ಒತ್ತಾಯಿಸಿ, ಒಂದು ತಿಂಗಳಿನಿಂದ ದೇಹಲಿಯ ಜಂತರ್-ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಅದರ ಬೆಂಬಲಿಗರಾಗಿ ಲಡಾಖ್ನ ಶಿಕ್ಷಣ ತಜ್ಞ, ಪರಿಸರ ಸಂರಕ್ಷಕ, ವಿಜ್ಞಾನಿ ಹಾಗೂ ಗಾಂಧಿವಾದಿ ಸೋನಮ್ ವಾಂಗ್ಚುಕ್ ಕಳೆದ 23 ದಿನಗಳಿಂದ ಅನಿರ್ದಿಷ್ಟ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು ಮತ್ತು ಕೆಲವು ವಿದ್ಯಾರ್ಥಿಗಳೂ ಸಹ ಇವರನ್ನು ಅನುಸರಿಸಿದ್ದರು. ಸೋನಮ್ ಅವರ ಆರೋಗ್ಯವು ಕುಸಿದಂತೆ ಸಾರ್ವಜನಿಕರಲ್ಲಿ ಕಳವಳ ಹೆಚ್ಚುತ್ತದೆ.
ಹಲವು ವಿರೋಧ ಪಕ್ಷಗಳ ನಾಯಕರು, ಕೆಲವು ಸಿನಿಮಾ ನಟನಟಿಯರು ಹಾಗೂ ಇತರ ಗಣ್ಯರು ಸೋನಮ್ ಅವರ ಆರೋಗ್ಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಲ್ಲದೆ, ಅನೇಕರು ಉಪವಾಸ ಕೈಬಿಡುವಂತೆ ವಿನಂತಿಸಿದರೆ, ಮತ್ತೆ ಕೆಲವರು ಅವರೊಂದಿಗೆ ಮಾತುಕತೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಾರೆ. ಆದರೆ, ಸರ್ಕಾರ ಇದಾವುದಕ್ಕೂ ಕಿಂಚಿತ್ತು ಗಮನ ನೀಡದೆ ತನ್ನ ಮೌನವನ್ನು ಮುಂದುವರೆಸುತ್ತದೆ. ಇಷ್ಟರಲ್ಲಾಗಲೇ ಜುಲೈ 20ರಂದು ‘ಸಂಸದ್ ಚಲೋ’ (ಸಂಸತ್ತಿನ ಕಡೆ ನಡೆ) ಚಳವಳಿಗೆ ಸಿಜೆಪಿ ಕರೆ ನೀಡಿರುತ್ತದೆ. ಈ ನಡುವೆ, ದೆಹಲಿಯ ಹೈಕೋರ್ಟ್ ಸೋನಮ್ ಅವರ ಆರೋಗ್ಯದ ಮೆಲೆ ನಿಗಾ ವಹಿಸಿ, ಅಗತ್ಯ ವೈದ್ಯಕೀಯ ನೆರವು ಒದಗಿಸಲು ದೆಹಲಿ ಸರ್ಕಾರಕ್ಕೆ ಆದೇಶ ನೀಡುತ್ತದೆ.

ಕಳೆದ ಒಂದು ತಿಂಗಳಿನಿಂದ ಈ ಪ್ರತಿಭಟನೆಯ ಸುತ್ತ ನಿರಂತರ ಚರ್ಚೆಗಳು ನಡೆದು, ಸಿಜೆಪಿ ಮುಖಂಡರು ಹಾಗೂ ಸೋನಮ್ರವರು ಅನೇಕ ನಿಂದನೆ ಮತ್ತು ವೈಯಕ್ತಿಕ ಆರೋಪಗಳಿಗೆ ಗುರಿಯಾಗುತ್ತಾರೆ. ಕೆಲವೇ ಕೆಲವು ಯೂಟ್ಯೂಬ್ ಚಾನೆಲ್ಗಳು ಹಾಗೂ ಮುಖ್ಯವಾಹಿನಿ ಪತ್ರಿಕೆಗಳು ಮಾತ್ರ ಈ ಪ್ರತಿಭಟನೆಯನ್ನು ಬೆಂಬಲಿಸಿದ್ದರೂ, ಹೆಚ್ಚಿನ ಮುಖ್ಯ ವಾಹಿನಿಗಳು ಮತ್ತು ಅನೇಕ ಯೂಟ್ಯೂಬ್ ಚಾನೆಲ್ಗಳು ನಡೆಸಿದ ಚರ್ಚೆಗಳು ಜನರ ಅಭಿಪ್ರಾಯಗಳನ್ನು ಸರ್ಕಾರದ ನಿಲುವಿನ ಪರವಾಗಿ ರೂಪಿಸಿದ್ದಲ್ಲದೆ, ಪ್ರತಿಭಟನೆಯ ಉದ್ದೇಶವನ್ನು ಸಂಶಯಿಸುವಂತೆ ಮಾಡಿದವು. ಬಹುಶಃ ಇದರಿಂದಾಗಿ, ಜುಲೈ 18ರ ತನಕವೂ ಪ್ರತಿಭಟನೆಯಲ್ಲಿ ಯುವಜನರ ಭಾಗವಹಿಸುವಿಕೆ ನಿರೀಕ್ಷಿಸಿದ ಮಟ್ಟಕ್ಕೆ ಏರಿರಲಿಲ್ಲ.
ಈ ಪ್ರತಿಭಟನೆಯನ್ನು ಹತ್ತಿಕ್ಕಲು ನಡೆಸಿದ ಆಕ್ರಮಣಗಳ ಪಟ್ಟಿ ಉದ್ದವಿದ್ದು, ಕೆಲವು ಸ್ಯಾಂಪಲ್ಗಳ ಅವಲೋಕನ ಇಲ್ಲಿದೆ – ಸಿಜೆಪಿಯ ಸ್ಥಾಪಕರಾದ ಅಭಿಜಿತ್ ದೀಪ್ಕೆ ಇವರು ಹಿಂದೊಮ್ಮೆ ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಕಾರಣ, ಸಿಜೆಪಿಯು ಆ ಪಕ್ಷದ ಮತ್ತೊಂದು ಮುಖವೆಂದು ಚಿತ್ರಿಸಲು ಪ್ರಯತ್ನಿಸಲಾಯಿತು. 2011ರ ಭ್ರಷ್ಟಾಚಾರದ ವಿರುದ್ಧದ ಆಂದೋಲನದ ಒಳಸಂಚಿನ ಸ್ವರೂಪವೇ ಇದಾಗಿದೆ ಎಂದು ಸಂಶಯಿಸಲಾಯಿತು. ದುರ್ದೈವವೆಂದರೆ, ವಸ್ತುನಿಷ್ಠವೆನಿಸಿಕೊಂಡ ಕೆಲವು ಯೂಟ್ಯೂಬ್, ಪಾಡ್ಕಾಸ್ಟ್ ಹಾಗೂ ವಿಶ್ಲೇಷಕರೂ ಸಹ ಇದೇ ರೀತಿ ಅನುಮಾನಿಸಿದ್ದು. ಡಿಜಿಟಲ್ ವಿಡಂಬನೆಯ ಪರಿಣಾಮವಾಗಿ ಉಗಮಿಸಿದ ಸಿಜೆಪಿಯು ಯುವಜನರ ತಮಾಷೆಯ ವೇದಿಕೆಯಷ್ಟೇ; ಇದು ಗಂಭೀರ ಜನಾಂದೋಲನ ಅಲ್ಲ ಎಂಬ ವಾದವೂ ಕೇಳಿಬಂತು. ಸಚಿವರ ರಾಜೀನಾಮೆಯಿಂದ ಮಾತ್ರವೇ ಸಮಸ್ಯೆಗಳು ಪರಿಹಾರವಾಗದ ಕಾರಣ, ಪ್ರತಿಭಟನೆಗೆ ಸ್ಪಷ್ಟವಾದ ದೀರ್ಘಕಾಲೀನ ಗುರಿ ಇಲ್ಲ ಎಂಬುದು ಮತ್ತೊಂದು ಅಭಿಪ್ರಾಯ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ನೇರವಾಗಿ ಹಾನಿಗೊಳಗಾದ ವಿದ್ಯಾರ್ಥಿಗಳು ಮತ್ತು ಪೋಷಕರ ಭಾಗವಹಿಸುವಿಕೆ ಹೆಚ್ಚಿಲ್ಲ, ಅನುಭವವಿಲ್ಲದವರು ಇದನ್ನು ಪ್ರಶ್ನಿಸುತ್ತಿದ್ದಾರೆ ಎಂಬುದು ಮತ್ತೊಂದು ಟೀಕೆ. ಡಿಜಿಟಲ್ ಗುಂಡಿಯೊತ್ತುವ ಅಥವಾ ಖಾಲಿ ಕರೆಗಳ ಮೂಲಕ ಕಣ್ಣಿಗೆ ಕಾಣದ ಭೂತಾಭಿಪ್ರಾಯಗಳು ಈ ಪ್ರತಿಭಟನೆಯ ಆಧಾರವಾಗಿದ್ದು, ಜನರ ನಿಜ ಭಾಗವಹಿಸುವಿಕೆ ಕಾಣುತ್ತಿಲ್ಲ. ಇವೆಲ್ಲವು ಪ್ರತಿಭಟನೆಯ ರೀತಿ, ನೀತಿ ಮತ್ತು ಉದ್ದೇಶವನ್ನು ಪ್ರಶ್ನಿಸುವುದಾಗಿದ್ದರೆ, ಇನ್ನುಳಿದವು ವ್ಯಕ್ತಿಗತ ಟೀಕೆಗಳಾಗಿತ್ತು; ಸಿಜೆಪಿಯ ನಾಯಕರು ಕುತಂತ್ರ ಹಾಗೂ ದುರುದ್ದೇಶಪೂರಿತ ಹಿನ್ನೆಲೆಯವರು, ಇವರ ಹಿಂದೆ ಹಣ ಮತ್ತು ಆಮಿಷಗಳ ದೊಡ್ಡ ಪ್ರಭಾವದ ಜಾಲವಿದೆ. ಇವರು ವಿದೇಶಿ ಏಜೆಂಟರು, ಇವರ ಡಿಜಿಟಲ್ ಸದಸ್ಯರೆಲ್ಲರೂ ಪಾಕಿಸ್ತಾನಿಗಳೇ ಇತ್ಯಾದಿ ಇತ್ಯಾದಿ, ಆಧಾರ ರಹಿತ ಆರೋಪಗಳಾಗಿದ್ದವು.
ರಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹಾಗೂ ದೇಶ-ವಿದೇಶಗಳಲ್ಲಿ ಗೌರವ ಪಡೆದಿರುವ ಸೋನಮ್ ವಾಂಗ್ಚುಕ್ ಅವರನ್ನು ಈ ಹಿಂದೆ ‘ಚೀನಾ ಏಜೆಂಟ್’ ಎಂದೆಲ್ಲಾ ಕರೆದು ರಾಷ್ಟ್ರೀಯ ಸುಭದ್ರತಾ ಕಾಯ್ದೆಯಡಿ ಜೈಲಿಗಟ್ಟಿದ್ದ ಸರ್ಕಾರವು ಪುರಾವೆಗಳಿಲ್ಲದ ಕಾರಣ ಅವರ ವಿರುದ್ಧದ ಪ್ರಕರಣವನ್ನು ಹಿಂಪಡೆದಿತ್ತು. ಹಾಗಾಗಿ ಅವರನ್ನು ಮತ್ತೆ ವಿದೇಶಿ ಏಜೆಂಟ್ ಎಂದೆಲ್ಲಾ ಕರೆಯಲು ಹೇಗೆ ಸಾಧ್ಯ? ಆದರೆ, ಬುದ್ಧಿವಂತಿಕೆಯಿಂದ ಹೆಣೆದ, ಹುರುಳಿಲ್ಲದ ವಿಶ್ಲೇಷಕರ ಚರ್ಚೆಗಳು ಇವರನ್ನು ಸಹ ಸುತ್ತಿಕೊಂಡವು. ಸರ್ಕಾರವು ಸೋನಮ್ ಅವರೊಂದಿಗೆ ಮಾತುಕತೆ ನಡೆಸಬೇಕಿತ್ತು ನಿಜ, ಆದರೆ ಸೋನಮ್ ಸಿಜೆಪಿಗೆ ಬೆಂಬಲಿಸಿ ಸರ್ಕಾರದೊಂದಿಗಿದ್ದ ತಮ್ಮ ನೈತಿಕ ಪ್ರಭಾವವನ್ನು ಕಳೆದುಕೊಂಡಿದ್ದಾರೆ! ಇವರ ಉಪವಾಸ ಸತ್ಯಾಗ್ರಹ ಸವಕಳಿಯಾದ ಬಿಲ್ಲೆ, ಇಂದಿನ ಪೀಳಿಗೆಗೆ ಅದು ಒಗ್ಗುವುದಿಲ್ಲ, ಇದು ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುವ ತಂತ್ರ!! ಈಗಿನ ಸರ್ಕಾರವು ಬಹುತೇಕ ಪ್ರತಿಭಟನೆಗಳಿಗೆ ಮಣಿದಿಲ್ಲ ಎಂಬುದನ್ನು ಹಿಂದಿನ ಅನುಭವದಿಂದ ಕಲಿಯದೆ, ಅಮರಣ ಉಪವಾಸದಂತಹ ಅಪಾಯಕಾರಿ ನಿರ್ಧಾರ ಮಾಡಬಾರದಿತ್ತು, ಒಳ್ಳೆಯ ಆರೋಗ್ಯದೊಂದಿಗೆ ಹೆಚ್ಚು ಬದುಕುಳಿದರೆ, ಮತ್ತಷ್ಟು ಒಳ್ಳೆಯದನ್ನು ಸಾಧಿಸಬಹುದು – ಹಾಗಾಗಿ ಇವರು ಉಪವಾಸ ನಿಲ್ಲಿಸುವುದು ಒಳಿತು.
ಇದರ ಮಧ್ಯೆ, ದೇಶ ವಿರೋಧಿ ಘೋಷಣೆಗಳನ್ನು ಕೂಗಲು ಅಥವಾ ಕೋಮು ದ್ವೇಷ ಹರಡಲು ಅಡ್ಡ ದಾರಿ ಹಿಡಿದಿದ್ದು, ದೀಪ್ಕೆಯ ಮುಖಕ್ಕೆ ಇಂಕು ಎರಚುವ ಮಹಿಳೆ ಶ್ರೀ ರಾಮನಿಗೆ ಅವಮಾನವಾಯಿತೆಂದು ಗೊಳೋ ಎಂದು ಅಳುವ ನಾಟಕದ ಜೊತೆಗೆ, ಮೇಲಿನ ಟೀಕೆ, ನಿಂದನೆ ಮತ್ತು ಪ್ರಚೋದನೆಗಳನ್ನು ಮೀರಿ ಈ ಶಾಂತಿಯುತ ಪ್ರತಿಭಟನೆ ಮುನ್ನಡೆಯಿತು. ಅದು ಅಹಿಂಸೆಯ ಮೌಲ್ಯವನ್ನು ಎತ್ತಿ ಹಿಡಿದಿದ್ದಷ್ಟೇ ಅಲ್ಲದೆ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಉಪವಾಸವನ್ನು ಹೆಚ್ಚು ಕಾಲದವರೆಗೆ ಗಂಭೀರವಾಗಿ ನಡೆಸುವ ಮೂಲಕ ಅದು ಪ್ರಜಾಪ್ರಭುತ್ವದ ಪ್ರಬಲ ಮಾರ್ಗ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದರು. ಉಪವಾಸ ಸತ್ಯಾಗ್ರಹ ಹಳತಾದ ಮಾರ್ಗವಾದರೆ, ಅದರ ಪರ್ಯಾಯವೇನು? ಗೋಡ್ಸೆ ಮಾರ್ಗವೇ? ಎಂದು ಮತ್ತೊಂದು ಚರ್ಚೆಯಲ್ಲಿ ಈ ಟೀಕೆಯನ್ನು ಪ್ರಶ್ನಿಸಲಾಗುತ್ತದೆ.
ಈ ಟೀಕೆಗಳು ಕಲಿಕೆ ಮತ್ತು ಬೆಳವಣಿಗೆಗೆ ಪೂರಕವಾಗಿರದೆ, ಹಿಂಸಾತ್ಮಕ ಪ್ರತಿಕ್ರಿಯೆಗೆ ಪ್ರಚೋದನೆ ನೀಡುತ್ತವಷ್ಟೇ. ಇವುಗಳನ್ನು ಕೇವಲ ಅಭಿಪ್ರಾಯ ಭಿನ್ನತೆಗಳೆಂದು ಪರಿಗಣಿಸಲಾಗದು. ಇದು ಪ್ರಜಾಪ್ರಭುತ್ವದ ಜೀವನಾಡಿಯಾದ ಅಹಿಂಸಾತ್ಮಕ ಪ್ರತಿಭಟನೆಯ ಪರಂಪರೆಯನ್ನು ಕೊನೆಗೊಳಿಸಲು ನಡೆಸಿದ ಪ್ರಯತ್ನವಾಗಿದ್ದು, ಇದೇ ಪ್ರವೃತ್ತಿಯನ್ನು ಈ ಹಿಂದೆಯೂ, ವಿಶೇಷವಾಗಿ ರೈತರ ಚಳವಳಿಯ ಸಂದರ್ಭದಲ್ಲಿ ನಾವು ಕಂಡಿದ್ದೇವೆ.
ಸೋನಮ್ ವಾಂಗ್ಚುಕ್ ಅವರ ಅಮರಣ ಉಪವಾಸಕ್ಕೆ ದಿನೇ ದಿನೇ ಹೆಚ್ಚುತ್ತಿದ್ದ ಬೆಂಬಲವು ಸರ್ಕಾರವನ್ನು ಕಂಗೆಡಿಸುತ್ತದೆ. ಜುಲೈ 20 ರ ‘ಸಂಸದ್ ಚಲೋ’ ಚಳವಳಿಯನ್ನು ತಡೆಯುವ ಭಾಗವಾಗಿ, ಜುಲೈ 18ರ ಮುಂಜಾನೆ ದೆಹಲಿ ಪೊಲೀಸರು ಸೋನಮ್ ಅವರನ್ನು ಬಿಳಿ ಹೊದಿಕೆಯ ಮುಸುಕಿನಡಿ ಬಲವಂತವಾಗಿ ಕರೆದೊಯ್ದು ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸುತ್ತಾರೆ. ಈ ಕ್ರಮವು ಪ್ರತಿಭಟನೆಗೆ ಹೊಸ ತಿರುವು ನೀಡಿದ್ದು, ಹೆಚ್ಚಿನ ಯುವಜನರು ಮತ್ತು ಸಾಮಾಜಿಕ ಕಾರ್ಯಕರ್ತರು ಜಂತರ್-ಮಂತರ್ಗೆ ಬರತೊಡಗುತ್ತಾರೆ. ಸೋನಮ್ ಆಸ್ಪತ್ರೆಯಲ್ಲಿಯೇ ಉಪವಾಸ ಮುಂದುವರೆಸಿದರೆ, ದೀಪ್ಕೆ ಅನಿರ್ಧಿಷ್ಟಿತ ಉಪವಾಸ ಪ್ರಾರಂಭಿಸುತ್ತಾರೆ ಮತ್ತು ಉಳಿದ ವಿದ್ಯಾರ್ಥಿಗಳು ಅವರೊಂದಿಗೆ ತಮ್ಮ ಉಪವಾಸ ಮುಂದುವರೆಸುತ್ತಾರೆ. ಜುಲೈ 19ರ ರಾತ್ರಿಯ ವೇಳೆಗೆ ಜಂತರ್-ಮಂತರ್ನಲ್ಲಿ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಕರ್ನಾಟಕದಿಂದ ನಟ ಪ್ರಕಾಶ್ ರಾಜ್ರವರು ಅಂದಿನ ರಾತ್ರಿಯಿಂದಲೇ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ. ಅಂದೇ, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿಜೆಪಿ ಮತ್ತು ಇತರೆ ಸಂಘಸಂಸ್ಥೆಗಳು ಸೋನಮ್ ವಾಂಗ್ಚುಕ್ ಅವರನ್ನು ಬೆಂಬಲಿಸಿ ಪ್ರತಿಭಟನೆ ಪ್ರಾರಂಭಿಸುತ್ತವೆ.

ಪ್ರತಿಭಟನೆ ತೀವ್ರವಾದಂತೆ, ಜಂತರ್-ಮಂತರ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಮತ್ತು ಡಿಟೆಕ್ಟಿಂಗ್ ಯಂತ್ರಗಳನ್ನು ತೆಗೆಯಲಾಗುತ್ತದೆ. ಜಾಮರ್ ಅಳವಡಿಸಿ ಇಂಟರ್ನೆಟ್ ಸಂಪರ್ಕಕ್ಕೂ ಅಡಚಣೆ ಮಾಡಲಾಗುತ್ತದೆ. ಚಳವಳಿಗೆ ದೇಹಲಿ ಪೊಲೀಸರು ಅನುಮತಿ ಕೊಡುವುದಿಲ್ಲ ಮತ್ತು ಬಿಎನ್ಎಸ್ 163 ಜಾರಿ ಮಾಡುತ್ತಾರೆ. ಬೆಳಗಾಗುತ್ತಲೇ ಜಂತರ್-ಮಂತರ್ ಕಡೆಗೆ ಜನಸ್ತೊಮ ಹರಿದು ಬರಲಾರಂಭಿಸುತ್ತದೆ. ಪೊಲೀಸರು ಹೊರಗೆ ರಸ್ತೆಯಲ್ಲಿ ಉಳಿದುಕೊಂಡವರನ್ನು ಬಲವಂತವಾಗಿ ಜಂತರ್ ಮಂತರ್ ಒಳಗೆ ಕಳುಹಿಸುತ್ತಾರೆ. ಒಳಗಿದ್ದವರು ಹೊರಬರದಂತೆ ತಡೆಯಲಾಗುತ್ತದೆ. ಪರಿಣಾಮವಾಗಿ, ಒಳಗಿದ್ದ ಸಾವಿರಾರು ಪ್ರತಿಭಟನಾಕಾರರು ಕೆಲವು ಗಂಟೆಗಳ ಕಾಲ ಅಲ್ಲಿಯೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಆದರೆ, ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಲೇ ಇರುತ್ತಾರೆ, ಸಂಸದ್ ಕಡೆಗೆ ಹೊರಟವರ ಮೇಲೆ ಲಾಠಿ ಚಾರ್ಚ್ ನಡೆಸುವುದಲ್ಲದೆ, ಅಶ್ರುವಾಯು ಪ್ರಯೋಗವೂ ನಡೆಯುತ್ತದೆ. ಅನೇಕರು ಗಾಯಗೊಂಡರೂ, ಯಾರೂ ಹಿಂಸೆಗೆ ಇಳಿಯುವುದಿಲ್ಲ, ಆದರೆ, ಮುಂದೆ ಸಾಗುವುದನ್ನು ನಿಲ್ಲಿಸುವುದಿಲ್ಲ. ಲಾಠಿ ಏಟು ಮುಂದುವರಿಯುತ್ತದೆ. ಹರಿದು ಬರುತ್ತಲೇ ಇದ್ದ ಯುವಕರನ್ನು ತಡೆಯಲು ಅನೇಕ ಮೆಟ್ರೋ ಗೇಟುಗಳನ್ನು ಮುಚ್ಚಿ ಅವರು ಹೊರಬರದಂತೆ ತಡೆಯಲಾಗುತ್ತದೆ. ದೇಶದ ಮೂಲೆ ಮೂಲೆಗಳಿಂದ ಬಂದ ಸಾವಿರಾರು ಯುವಜನರು ತಮ್ಮ ಸ್ವಂತ ಖರ್ಚಿನಲ್ಲಿ ಬಂದು, ಶಿಕ್ಷಣ ಮತ್ತು ನಿರುದ್ಯೋಗದ ಕುರಿತಾದ ತಮ್ಮ ಧ್ವನಿಯನ್ನು ಸಂಸತ್ತಿನೊಳಗಿನ ಕಿವಿಗಳಿಗೆ ಮುಟ್ಟಿಸುತ್ತಾರೆ. ಸಂಸತ್ತಿಗೆ ಸಾಗುವ ಎಲ್ಲಾ ದಾರಿಗಳೂ ಪ್ರತಿಭಟನಾಕಾರರಿಂದ ತುಂಬಿಹೋಗುತ್ತದೆ. ಇಲ್ಲಿಯ ತನಕ ಇವರನ್ನು ‘ಜಿರಳೆಗಳಂತೆ’ ಕಡೆಗಣಿಸಿದ್ದ ಸರ್ಕಾರ ಅವರೊಂದಿಗೆ ಮಾತನಾಡಲು ಕರೆ ನೀಡುತ್ತದೆ!
ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ಸಿಜೆಪಿ ನಾಯಕರು ಮೂರು ಬೇಡಿಕೆಗಳನ್ನು ಮುಂದಿಡುತ್ತಾರೆ. ಮೊದಲನೆಯದಾಗಿ ಸೊನಮ್ ವಾಂಗ್ಚುಕ್ ಅವರನ್ನು ತಕ್ಷಣ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಹಾಗೂ ಅವರು ಯುವಜನತೆಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ವಿಡಿಯೋ ಸಂದೇಶ ನೀಡಲು ಅವಕಾಶ ಕಲ್ಪಿಸಬೇಕು. ಎರಡನೆಯದಾಗಿ, ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಅಥವಾ ಅವರನ್ನು ಸಚಿವ ಸ್ಥಾನದಿಂದ ತೆರವುಗೊಳಿಸಬೇಕು. ಮೂರನೆಯದಾಗಿ, ನೀಟ್ ಪರೀಕ್ಷಾ ಅಕ್ರಮಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ಒಂದು ಕೋಟಿ ಹಣವನ್ನು ಪರಿಹಾರವಾಗಿ ನೀಡಬೇಕು. ಶಿಕ್ಷಣ ಸಚಿವವರು ತಮ್ಮ ಸ್ಥಾನದಿಂದ ತೆರವಾಗುವ ತನಕ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಟ್ವೀಟ್ ಮಾಡಿದ್ದಾರೆ. ನಡ್ಡಾರವರು ಪ್ರತಿಭಟನೆ ಮುಕ್ತಾಯಗೊಳಿಸುವಂತೆ ಕೋರಿ ಟ್ವೀಟ್ ಮಾಡುತ್ತಿದ್ದರೂ, ಸರ್ಕಾರದಿಂದ ಸಿಜೆಪಿ ಕೋರಿರುವ ಮೂರು ಬೇಡಿಕೆಗಳ ಬಗ್ಗೆ ಯಾವುದೇ ಉತ್ತರ ಇನ್ನೂ ಬಂದಿಲ್ಲವಾದ ಕಾರಣ, ಪ್ರತಿಭಟನೆ ಚಾಲ್ತಿಯಲ್ಲಿದೆ.
ಎಲ್ಲಾ ವರ್ಗದ, ಜಾತಿಯ ಹಾಗೂ ಧರ್ಮದ ಜನರೂ ಇದ್ದು, ಯಾವ ಬೇಧವೂ ಇಲ್ಲದೆ ಪರಸ್ಪರ ಸಹಕರಿಸುತ್ತಾ ಇದ್ದ ಪ್ರತಿಭಟನೆಯ ವಾತಾವರಣವು ನಿಜ ಭಾರತವನ್ನು ಪ್ರತಿನಿಧಿಸುತ್ತಿತ್ತೆಂದು ಅಲ್ಲಿ ಭಾಗವಹಿಸಿದ್ದವರ ಅನುಭವವಾಗಿದೆ. ಲಾಠಿ ಏಟು ತಿಂದು, ರಕ್ತ ಹರಿಸಿಕೊಂಡವರೂ ಸಹ ‘ದಿಲ್ಲಿ ಪೊಲೀಸ್ ಲವ್ ಯು’ ಎಂದು ಕೂಗುತ್ತಿದ್ದ ಪ್ರತಿಭಟನಾಕಾರರ ಧ್ವನಿಯನ್ನು ಬಹುಶಃ ಮನೆಗೆ ಹೋದ ನಂತರ ದಿಲ್ಲಿ ಪೊಲೀಸರು ನೆನಪಿಸಿಕೊಳ್ಳುತ್ತಿರಬೇಕು.
ಇದನ್ನೂ ಓದಿ ಮಂಗಳವಾರ ದೆಹಲಿಯಲ್ಲಿ ಏನಾಯಿತು? ವಿದ್ಯಾರ್ಥಿ ಹೋರಾಟದ 2ನೇ ದಿನದ ಸಂಪೂರ್ಣ ಚಿತ್ರಣ
ಇದು, ಪ್ರಾರಂಭವಷ್ಟೇ, ಕೊನೆಯಲ್ಲ. ತುಕ್ಕು ಹಿಡಿದ ಶಿಕ್ಷಣ ವ್ಯವಸ್ಥೆಯ ಸ್ಥಿತಿ ಪಾತಾಳಕ್ಕೆ ಕುಸಿದಿದ್ದು, ಲಕ್ಷಾಂತರ ಯುವಜನತೆ – ಅದರಲ್ಲೂ ಬಡ ವಿದ್ಯಾರ್ಥಿಗಳು ಅತಿ ಕ್ರೂರವಾಗಿ ಶೋಷಿತರಾಗುತ್ತಿದ್ದಾರೆ. ಈ ತುಕ್ಕು ಕೇವಲ ಕಳೆದ ಒಂದು ದಶಕದಲ್ಲಿ ಹಿಡಿದಿದ್ದಲ್ಲ; ಹಿಂದಿನ ಸರ್ಕಾರಗಳ ಕಾಲದಿಂದಲೇ ಅದು ಕ್ರಮೇಣ ಬೆಳೆದು, ಕಳೆದ ದಶಕದಲ್ಲಿ ಇನ್ನಷ್ಟು ಆಳವಾಗಿ ಬೇರು ಬಿಟ್ಟಿದೆ.
ಸಮಸ್ಯೆಗಳ ಸಾಗರದಲ್ಲಿ ಮುಳುಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ಒಂದು ಬಿಂದು ಮಾತ್ರ. ಅದರ ಮೂಲ ಬೇರುಗಳನ್ನು ಹುಡುಕಿ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ತರಬೇಕಾಗಿದೆ. ಇಂದಿನ ಕೃತಕ ಬುದ್ಧಿಮತ್ತೆ (AI) ಕಾಲದಲ್ಲಿ ಏನನ್ನು ಓದಬೇಕು, ಹೇಗೆ ಯೋಚಿಸಬೇಕು, ಹೇಗೆ ಕಲಿಯಬೇಕು ಮತ್ತು ಹೇಗೆ ಹೊಸದನ್ನು ಸೃಷ್ಟಿಸಬೇಕು ಎಂಬುದು ಶಿಕ್ಷಣದ ಕೇಂದ್ರ ಬಿಂದುವಾಗಬೇಕು. ಆದ್ದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಶೋಧನೆ, ಪರಿಶೀಲನೆ, ಮತ್ತು ಅವಿಷ್ಕಾರಗಳಿಗೆ ಒತ್ತು ನೀಡಬೇಕಾಗಿದೆ.

ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್ ಕಾಮ್'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.




