ಅನಧಿಕೃತ ಕಾನೂನು ಕಾವಲುಗಾರರು

Date:

ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅಧಿಕಾರ ಮತ್ತು ಪ್ರಭಾವವನ್ನು ಉಳಿಸಿಕೊಳ್ಳಲು ರಾಷ್ಟ್ರಭಕ್ತಿ, ಧರ್ಮ ರಕ್ಷಣೆಯಂತಹ ಕವಚಗಳ ಹಿಂದೆ ಕಾನೂನು ವ್ಯವಸ್ಥೆಯನ್ನು ತಮ್ಮ ಹೆಗಲಿಗೇರಿಸಿಕೊಳ್ಳುವ ಪೊಲೀಸ್‍ಗಿರಿ ಗುಂಪುಗಳ ಒಂದು ಸಮಾನಾಂತರ ವ್ಯವಸ್ಥೆಯನ್ನು ಪೋಷಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಜೀವಂತವಾಗಿಡುವ ನ್ಯಾಯಬದ್ಧ, ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಹಾಗೂ ಪ್ರಶ್ನಿಸುವ ಧ್ವನಿಗಳನ್ನು ಮೌನಗೊಳಿಸಲು ಇಂತಹ ಅನಧಿಕೃತ ಬಲವನ್ನು ಬಳಸಲಾಗುತ್ತಿದೆ. ಇದು ಕೇವಲ ಕಾನೂನು ಉಲ್ಲಂಘನೆಯಲ್ಲ, ಸಂವಿಧಾನಾತ್ಮಕ ಪ್ರಜಾಪ್ರಭುತ್ವಕ್ಕೆ ಅಪಾಯ ಹತ್ತಿರಗೊಳ್ಳುತ್ತಿರುವ ಸಂಕೇತವಾಗಿದೆ.

- Advertisement -


ಒಂದೇ ಸಮಯದಲ್ಲಿ ಜೈಲಿನ ಒಳಗೂ ಹೊರಗೂ ಇರುವ ಕೈದಿಗಳ ಕುರಿತ ವರದಿಗಳು, ಮತ್ತೊಂದೆಡೆ ತನ್ನ ಪೊಲೀಸ್ ಗಿರಿಯ ಘನ ಕೃತ್ಯವನ್ನು ಹೇಳಿಕೊಳ್ಳುತ್ತಿರುವ ಸ್ವತಂತ್ರ ಭಾರದ್ವಾಜ್‍ನ ವಿಡಿಯೋ – ಇದನ್ನು ನೀವು ಓದಿದ್ದರೆ ಅಥವಾ ನೋಡಿದ್ದರೆ, ಈ ದೇಶದಲ್ಲಿ ‘ಕಾನೂನಿನ ಕಾವಲುಗಾರರು ಯಾರು ಎಂಬ ಪ್ರಶ್ನೆ ನಿಮ್ಮನ್ನೂ ಕಾಡಿದ್ದಿರಬಹುದು. ಸಂವಿಧಾನಾತ್ಮಕ ವ್ಯವಸ್ಥೆಯೇ ಅಥವ ಅನಧಿಕೃತ ಪೊಲೀಸ್‍ಗಿರಿ ಬಲಗಳೇ? ಎಂಬ ಅನುಮಾನವೂ ಕಾಡುತ್ತಿರಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಕಳೆದ ಜುಲೈನಲ್ಲಿ ನಡೆದ ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಅವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಆದರೆ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಮತ್ತು ಈ ಹಿಂದೆ ಅಪರಾಧ ಪ್ರಕರಣ ಎದುರಿಸುತ್ತಿರುವ 2,873 ಜನರಿಗೆ ಈ ರದ್ದತಿ ಅನ್ವಯಿಸುವುದಿಲ್ಲ. ಜುಲೈ 20 ರಿಂದ 26 ರವರೆಗೆ ಪ್ರತಿಭಟನಾ ಸ್ಥಳದಲ್ಲಿದ್ದ 2,873 ಮಂದಿಯನ್ನು ಪೊಲೀಸರು ‘ಮುಖಚಹರೆ ಗುರುತಿಸುವಿಕೆ ತಂತ್ರಜ್ಞಾನ (FRS)ದ’ ಮೂಲಕ ಗುರುತಿಸಿದ್ದರು. ಅವರಲ್ಲಿ 205 ಜನರು ಕೊಲೆ, ಪೋಕ್ಸೋ, ಅತ್ಯಾಚಾರದಂತಹ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವವರು ಎನ್ನಲಾಗಿದೆ.

ಈ 205 ಮಂದಿಯ ಪೈಕಿ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ 25 ವ್ಯಕ್ತಿಗಳ ಹೆಸರನ್ನು ಆಯ್ಕೆ ಮಾಡಿಕೊಂಡು, ಜುಲೈ 20-26ರ ಅವಧಿಯಲ್ಲಿ ಅವರು ಎಲ್ಲಿದ್ದರು ಎಂಬುದನ್ನು ಪೊಲೀಸ್, ಜೈಲು ಮತ್ತು ನ್ಯಾಯಾಲಯದ ದಾಖಲೆಗಳ ಮೂಲಕ ಪರಿಶೀಲಿಸಿದೆ. ಸೋಜಿಗವೆಂದರೆ, ಈ 25 ವ್ಯಕ್ತಿಗಳೂ ದೇಹಲಿಯ ಮೂರು ಜೈಲಿನೊಳಗೆ ಇದ್ದರೆಂದು ತಿಳಿದು ಬರುತ್ತದೆ. (ಮಹೇಂದರ್‌ ಸಿಂಗ್ ಮನ್ರಾಲ್, ಸೆಪ್ಟೆಂಬರ್ 4, ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್)

ಈ ಕೈದಿಗಳು ಒಂದೇ ಸಮಯದಲ್ಲಿ ಜೈಲಿನ ಒಳಗೂ, ಹೊರಗೂ ಇದ್ದಿರಲು ಹೇಗೆ ಸಾಧ್ಯ!?
ಹೀಗೆಯೇ, ಇನ್ನೊಂದು ಚಕಿತಗೊಳಿಸುವ ಪ್ರಕರಣವು ಇದೇ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ “ನಿಶು” ಎಂಬ ದಲಿತ ಯುವತಿಯ ತಂದೆಯ ತಲೆಗೆ ಹೊಡೆದಿದ್ದೆನೆ ಎಂದು ಸ್ವತಃ ಹೇಳಿಕೊಳ್ಳುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಕೃತ್ಯವು ಕೊಲೆ ಯತ್ನಕ್ಕೆ ಸಮನಾಗಿದ್ದು, ಸೆಕ್ಷನ್ 307ರಡಿ ಪ್ರಕರಣ ದಾಖಲಾಗಿ, ತಾನೂ ಜೈಲಿನಲ್ಲಿರಬೇಕಿತ್ತು. ಆದರೆ, ನಾನು ರಾಜಾರೋಷವಾಗಿ ಹೊರಗೆ ತಿರುಗಾಡುತ್ತಿದ್ದೇನೆ ಎಂದು ಆತನೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ತಾನು ಜೈಲಿಗೆ ಹೋಗದಿರಲು ಹನುಮಂತನ ಕೃಪೆ ಮತ್ತು ನನ್ನ ದೊಡ್ಡ ಅಣ್ಣಂದಿರಂತಿರುವ ಕಪಿಲ್ ಮಿಶ್ರಾ ಹಾಗೂ ಚಿರಾಗ್ ಪಾಸ್ವಾನ್ (ಇಬ್ಬರೂ ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳು) ಅವರ ಬೆಂಬಲವೇ ಕಾರಣ ಎಂದಿದ್ದಾನೆ. ಮುಂದುವರಿದು ಪ್ರಧಾನಿ ಮೋದಿಯವರೂ ನನ್ನ ಅಣ್ಣನಂತೆ ಎಂದಿದ್ದಾನೆ.

ಅಚ್ಚರಿಯೆಂದರೆ, ಈ ಯುವಕನು ಭಯವಿಲ್ಲದೆ, ಬಹು ನಿರಾಳವಾಗಿ, ಅತಿ ವಿಶ್ವಾಸದಿಂದ ಒಲಂಪಿಕ್‍ನಲ್ಲಿ ಚಿನ್ನದ ಪದಕ ಗೆದ್ದಿರುವಂತೆ ಹೆಮ್ಮೆಯಿಂದ ತನ್ನ ಕೃತ್ಯವನ್ನು ವಿವರಿಸಿದ್ದಾನೆ!!

ಕಳೆದ ಜುಲೈ 6ರಂದು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಕಾಕ್ರೋಚ್ ಜನತಾ ಪಕ್ಷವು (CJP) ಪ್ರಾರಂಭಿಸಿದ್ದ ಪ್ರತಿಭಟನೆಯಲ್ಲಿ ಜುಲೈ 20ರಂದು “ಸಂಸತ್ ಚಲೋ”ಗೆ ಕರೆ ನೀಡಲಾಯಿತು. ಈ ಕರೆಯ ಹಿನ್ನೆಲೆಯಲ್ಲಿ ಜುಲೈ 20-26ರ ನಡುವೆ ಪ್ರತಿಭಟನೆ ತೀವ್ರಗೊಂಡು, ಬೇರೆ ರಾಜ್ಯಗಳಿಗೂ ವ್ಯಾಪಿಸಿತು. ನಿರೀಕ್ಷೆಗೂ ಮೀರಿ ಬಂದ ಯುವಜನರನ್ನು ನಿಯಂತ್ರಿಸಲು ದೆಹಲಿ ಪೊಲೀಸ್ ನಡೆಸುವ ಕ್ರಮಗಳು ಹಿಂಸಾತ್ಮಕ ಘಟನೆಗಳಿಗೆ ಕಾರಣವಾದವು. ದೆಹಲಿ ಮತ್ತು ಇತರೆಡೆ ಪ್ರತಿಭಟನಾಕಾರರ ವಿರುದ್ಧ ಎಫ್‍ಐಆರ್‌ಗಳು ದಾಖಲಾದವು. ಪೊಲೀಸರಲ್ಲದ ಕೆಲ ವ್ಯಕ್ತಿಗಳೂ ಸಹ ಲಾಠಿ ಹಿಡಿದು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ದೃಶ್ಯದ ವಿಡಿಯೋಗಳು ವೈರಲ್ ಆಗುತ್ತವೆ.

ಅಂತಿಮವಾಗಿ, ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳನ್ನು ಪರಿಗಣಿಸಿದ ಕೇಂದ್ರ ಸರ್ಕಾರ, ಈ ಚಳುವಳಿಯಲ್ಲಿ ಭಾಗವಹಿಸಿದ್ದವರ ವಿರದ್ಧ ದಾಖಲಿಸಿರುವ ಎಫ್.ಐ.ಆರ್.ಗಳನ್ನು ರದ್ದುಗೊಳಿಸುವುದಾಗಿ ಒಪ್ಪಿಕೊಳ್ಳುತ್ತದೆ. ಅದರಂತೆ, ಈ ಪ್ರತಿಭಟನಕಾರರ ವಿರುದ್ಧದ ಎಲ್ಲಾ ಎಫ್‍ಐಆರ್‌ಗಳ ರದ್ದತಿಗೆ ಸುಪ್ರೀಂ ಕೋರ್ಟ್ ಇದೇ ಸೆಪ್ಟೆಂಬರ್ 2ರಂದು ಆದೇಶ ನೀಡಿದ್ದು, ಅದು ಪೊಲೀಸರು ಗುರುತಿಸಿರುವ ಮತ್ತು ಈಗಾಗಲೇ ಅಪರಾಧದ ಪ್ರಕರಣ ಎದುರಿಸುತ್ತಿರುವ 2873 ಜನರಿಗೆ ಅನ್ವಯಿಸುವುದಿಲ್ಲ.

ಆದರೆ, ಜುಲೈ 20 ರಿಂದ 26ರ ನಡುವಿನ ಅವಧಿಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಇದ್ದರೆಂದು ಮುಖಚಹರೆ ಗುರುತಿಸುವಿಕೆ ವ್ಯವಸ್ಥೆ ಮೂಲಕ ಪತ್ತೆಯಾದ ಈ 2873 ಮಂದಿಯಲ್ಲಿ, ಗಂಭೀರ ಅಪರಾಧ ಎಸಗಿದರೆನ್ನಲಾದ 25 ವ್ಯಕ್ತಿಗಳು ಅದೇ ಸಮಯದಲ್ಲಿ ಜೈಲಿನೊಳಗೆಯೇ ಇದ್ದರೆಂದು ಇಂಡಿಯನ್ ಎಕ್ಸ್‌ಪ್ರೆಸ್‌ ಪ್ರಕಟಿಸಿರುವ ವರದಿಯು ಈ ದೇಶದ ಕಾನೂನು ವ್ಯವಸ್ಥೆಯ ಬಗ್ಗೆ ಅತಿ ಗಂಭೀರ ಪ್ರಶ್ನೆಗಳನ್ನು ತೆರೆದಿಡುತ್ತದೆ.

ಈ 25 ಕೈದಿಗಳು ಒಳಗಿದ್ದರೆಂದು ದಾಖಲೆಯಲ್ಲಿ ತೋರಿಸಿ, ಅವರನ್ನು ಪ್ರತಿಭಟನಾ ಸ್ಥಳಕ್ಕೆ ಉದ್ದೇಶಪೂರ್ವಕವಾಗಿ ಕಳುಹಿಸಲಾಯಿತೇ? ಅಥವಾ ಮುಖಚಹರೆ ಪತ್ತೆಯ ವ್ಯವಸ್ಥೆಯಲ್ಲಿ ದೋಷವಿದೆಯೇ? 25 ಕೈದಿಗಳು ಒಂದೇ ಸಮಯದಲ್ಲಿ ಎರಡೂ ಕಡೆ ಇರಲೂ ಹೇಗೆ ಸಾಧ್ಯವಾಯಿತು? ಮುಖಚಹರೆ ಪತ್ತೆಯಲ್ಲಿ ದೋಷವಿದ್ದರೆ, ಪೊಲೀಸರು ಹೇಳುತ್ತಿರುವ 2873 ಜನರಲ್ಲಿ, ನಿಜವಾಗಿಯೂ ಅಪರಾಧ ಎಸಗಿದವರು ಎಷ್ಟು ಮಂದಿ ಪ್ರತಿಭಟನಾ ಸ್ಥಳದಲ್ಲಿದ್ದರು? ಅಥವಾ, ಈ ಹಿಂದೆಯೇ ಅಪರಾಧ ಎಸಗಿದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂದು ಬಿಂಬಿಸುವ ಮೂಲಕ ಅವರ ವಿರುದ್ಧದ ಎಫ್‍ಐಆರ್‌ಗಳು ರದ್ದಾಗದಂತೆ ಮಾಡಿ, ಪ್ರಕರಣ ಮುಂದುವರಿಸಲು ಹೂಡಿದ ಯಾವುದಾದರು ವ್ಯವಸ್ಥಿತ ತಂತ್ರವಾಗಿತ್ತೇ ಅಥವಾ ಮುಖಚಹರೆ ಪತ್ತೆಯಲ್ಲಿನ ಮಾಹಿತಿ ಸರಿ ಇದೆ ಎಂದಾದರೆ, ಜೈಲೊಳಗಿನ ಕೈದಿಗಳನ್ನು ಅಕ್ರಮವಾಗಿ ಪ್ರತಿಭಟನಾ ಸ್ಥಳಕ್ಕೆ ಬಿಟ್ಟವರಾರು? ಯಾಕೆ ಬಿಡಲಾಯಿತು? ಪ್ರತಿಭಟನೆಯಲ್ಲಿ ಪೊಲೀಸ್‍ಗಿರಿ ನಡೆಸಲೆಂದೇ ಕೈದಿಗಳನ್ನು ಅಲ್ಲಿಗೆ ಕಳುಹಿಸಲಾಯಿತೇ? ಪ್ರತಿಭಟನೆಯಲ್ಲಿ ಪೊಲೀಸ್ ಸಮವಸ್ತ್ರತೊಡದೆ ಲಾಠಿ ಬೀಸುತ್ತಿದ್ದವರು ಇವರೇ ಆಗಿದ್ದರೇ? ಮತ್ತು, ಈ 25 ವ್ಯಕ್ತಿಗಳಲ್ಲದೆ, ಇನ್ನೆಷ್ಟು ಕೈದಿಗಳು ದಾಖಲೆಗಳಲ್ಲಿ ಒಳಗಿದ್ದುಕೊಂಡು, ಪ್ರತಿಭಟನೆಯಲ್ಲಿ ನುಸುಳಿದ್ದರು?

ಸ್ವತಂತ್ರ ಭಾರದ್ವಾಜ್ ಯುವಕನ ಘಟನೆಯು ಇಂತಹುದೇ ಹಲವು ಪ್ರಶ್ನೆಗಳನ್ನು ಮುಂದಿಡುತ್ತದೆ; ಜೂನ್ 23ರಂದೇ ನಿಶು ಅವರ ತಂದೆ ನೀಡಿದ್ದ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದಿರುವುದೇಕೆ? ಆರೋಪಿಯು ಬಂಧಿತನಾಗಿದ್ದರೂ, ಹೊರಗೆ ಹೇಗೆ ಬಂದ? ಸುಮಾರು 40 ದಿನಗಳಾದರೂ ಈ ಯುವಕನ ವಿರುದ್ಧ ಪೊಲೀಸ್ ಯಾವುದೇ ಕ್ರಮ ಕೈಗೊಳ್ಳಲಿಲ್ಲವೇಕೆ? ತಲೆಗೆ ಸಣ್ಣ ಪೆಟ್ಟಾಗಿದೆ ಎಂಬ ಕಾರಣಕ್ಕೆ, ಇದು ಗಂಭೀರ ಅಪರಾಧವಲ್ಲ ಎನ್ನುವ ಪೊಲೀಸರಿಗೆ ಆರೋಪಿಯ ಹಲ್ಲೆಯ ಹಿಂದಿನ ಉದ್ದೇಶ ಮತ್ತು ಆತನ ಅರಿವು 307ಕ್ಕೆ ಪುಷ್ಠಿ ನೀಡುತ್ತದೆ ಎಂಬುದು ಗೊತ್ತಿಲ್ಲವೇ? ಇಷ್ಟಕ್ಕೂ, ನಿಶು ತಂದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಂದರ್ಭದಲ್ಲಿ “ನನ್ನ ವಿರುದ್ಧ 307ರ ಪ್ರಕರಣ ದಾಖಲಿಸಿ ನನ್ನನ್ನು ಬಂಧಿಸಬೇಕಿತ್ತು” ಎಂದು ಆರೋಪಿಯೇ ಸ್ವತಃ ಡಂಗೂರ ಸಾರುತ್ತಿರುವಾಗಲೂ ಆತನನ್ನು ಬಂಧಿಸದಂತೆ ಪೊಲೀಸರ ಮೇಲೆ ಯಾವ ಒತ್ತಡವಿತ್ತು?

ಕೊನೆಗೂ, CJP ಮತ್ತು ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಪೊಲೀಸರು ಕಠಿಣವಾದ ಎಫ್‍ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆಂದು ವರದಿಯಾಗಿದೆ. ಅದರಂತೆ, ಇದೇ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ದಾಳಿಗೆ ತುತ್ತಾಗಿ ಕಣ್ಣು ಕಳೆದುಕೊಂಡ ವ್ಯಕ್ತಿಯ ದೂರು ಸ್ವಿಕಾರಿಸಿ ಎಫ್‍ಐಆರ್ ದಾಖಲಿಸಲು ವಿರೋಧ ಪಕ್ಷದ ನಾಯಕ ಧರಣಿ ನಡೆಸಬೇಕಾದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ ಧಾರ್ಮಿಕ ಗೌರವವನ್ನೂ ರಾಜಕೀಯ ಕನ್ನಡಕದಿಂದಲೇ ನೋಡಬೇಕೇ?

ಈ ಪ್ರಶ್ನೆಗಳನ್ನು ಮೀರಿ ನೋಡಿದಾಗ, ಪೊಲೀಸ್‌ ವ್ಯವಸ್ಥೆಯ ಆಚೆಗೆ ರೂಪುಗೊಂಡಿರುವ ಒಂದು ಅನಧಿಕೃತ ಬಲದ ವ್ಯವಸ್ಥೆಯನ್ನು ಈ ಪ್ರಕರಣಗಳು ಬಯಲು ಮಾಡುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅಧಿಕಾರ ಮತ್ತು ಪ್ರಭಾವವನ್ನು ಉಳಿಸಿಕೊಳ್ಳಲು ರಾಷ್ಟ್ರಭಕ್ತಿ, ಧರ್ಮ ರಕ್ಷಣೆಯಂತಹ ಕವಚಗಳ ಹಿಂದೆ ಕಾನೂನು ವ್ಯವಸ್ಥೆಯನ್ನು ತಮ್ಮ ಹೆಗಲಿಗೇರಿಸಿಕೊಳ್ಳುವ ಪೊಲೀಸ್‍ಗಿರಿ ಗುಂಪುಗಳ ಒಂದು ಸಮಾನಾಂತರ ವ್ಯವಸ್ಥೆಯನ್ನು ಪೋಷಿಸಲಾಗುತ್ತಿದೆ. ಪ್ರಜಾಭುತ್ವವನ್ನು ಜೀವಂತವಾಗಿಡುವ ನ್ಯಾಯಬದ್ಧ ಹಾಗು ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಹಾಗೂ ಪ್ರಶ್ನಿಸುವ ಧ್ವನಿಗಳನ್ನು ಮೌನಗೊಳಿಸಲು ಇಂತಹ ಅನಧಿಕೃತ ಬಲವನ್ನು ಬಳಸಲಾಗುತ್ತಿದೆ. ಇದು ಕೇವಲ ಕಾನೂನು ಉಲ್ಲಂಘನೆಯಲ್ಲ, ಸಂವಿಧಾನಾತ್ಮಕ ಪ್ರಜಾಪ್ರಭುತ್ವಕ್ಕೆ ಅಪಾಯ ಹತ್ತಿರಗೊಳ್ಳುತ್ತಿರುವ ಸಂಕೇತವಾಗಿದೆ.

ಒತ್ತಡಕ್ಕೆ ಮಣಿಯುವ ಪೊಲೀಸ್ ಅಥವಾ ಪೊಲೀಸ್‍ಗಿರಿ ನಡೆಸುವ ಸ್ವತಂತ್ರರೆಂಬ ಯುವಕರು ಹೊರನೋಟಕ್ಕೆ ತಪ್ಪಿತಸ್ಥರಂತೆ ಕಂಡರೂ, ಇವರುಗಳು ಕೇವಲ ಈ ಅನಧಿಕೃತ ವ್ಯವಸ್ಥೆಯ ದಾಳಗಳಷ್ಟೇ. ನ್ಯಾಯವನ್ನು ಈ ದೇಶದ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಡಿ ನಿರ್ಧರಿಸಬೇಕೇ? ಅಥವಾ ಈ ಅನಧಿಕೃತ ಪೊಲೀಸ್‌ಗಿರಿ ವ್ಯವಸ್ಥೆಯ ಜನಕರೇ? ನಾವು ನಿರ್ಧರಿಸಬೇಕಿದೆ.

WhatsApp Image 2025 11 17 at 5.18.52 PM
ಲತಾಮಾಲ
+ posts

ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...

ಬೀದರ್‌ | 125 ಎಕರೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ : ಸಚಿವ ಈಶ್ವರ ಖಂಡ್ರೆ

ಬೀದರ್ ನಗರದ ಸಮೀಪ 125 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ...