ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆ 2026 | ಮಲಗಿದ ಗುಮ್ಮ ಮತ್ತೆ ಏಳಬಹುದೇ?

Date:

ಭಾರತದ ಸಾವಿರಾರು ಸ್ವಯಂಸೇವಾ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಪಡೆದು ಸಹಸ್ರಾರು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡುತ್ತಿವೆ. ಕೋಟ್ಯಂತರ ಕುಟುಂಬಗಳ ಜೀವನ ಮಟ್ಟ ಸುಧಾರಣೆ ಜೊತೆಗೆ, ಸಾರ್ವಜನಿಕ ಸೌಲಭ್ಯಗಳಾದ, ಆಸ್ಪತ್ರೆ, ಶಾಲೆ, ಅನಾಥಾಲಯಗಳು, ಕೃಷಿ ಅಭಿವೃದ್ಧಿ, ಜಲ ಸಂರಕ್ಷಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಳು, ಅರಣ್ಯ ರಕ್ಷಣೆ, ಸಾರಿಗೆ ಮತ್ತು ಸಾಮಾಜಿಕ ಕಲ್ಯಾಣ ಕೆಲಸಗಳಂತಹ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನಂಶ ದೇಣಿಗೆಯು ಬಳಕೆಯಾಗುತ್ತಿದೆ.

- Advertisement -

ಆಗಸ್ಟ್ 13ರಂದು ಮುಕ್ತಾಯಗೊಂಡ ಮಳೆಗಾಲದ ಅಧಿವೇಶನದಲ್ಲಿ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ – 2026ರನ್ನು (FCRA Bill – 2026) ಜಾರಿಗೊಳಿಸಲು ತಹತಹಿಸುತ್ತಿದ್ದ ಬಿಜೆಪಿ ಸರ್ಕಾರವು ಅದೇಕೊ ಹೆಚ್ಚಿನ ಹಟವಿಡಿಯದೆ, ಜಂಟಿ ಸಂಸತ್ ಸಮಿತಿಯ ಪರಿಶೀಲನೆಗೆ ಒಪ್ಪಿಸುತ್ತದೆ! ಇದಕ್ಕೆ ಅಮೆರಿಕದ ಒತ್ತಡವಿರಬಹುದೇ ಎಂಬುದು ಹಲವರ ಅನುಮಾನ. ಸದ್ಯಕ್ಕೆ ಸುಮ್ಮನಾದ ಕೇಂದ್ರ ಸರ್ಕಾರವು, ಈ ಕರಡು ಮಸೂದೆಯನ್ನು ಮತ್ತೆ ಬೆನ್ನಿಗೇರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಈ ಬಗ್ಗೆ ಗಂಭೀರ ಚರ್ಚೆಗಳು ಹೆಚ್ಚು ನಡೆಯಬೇಕಿದೆ.

FCRA ಕಾಯ್ದೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಹಾಗೂ ಅನುಮತಿಸಲಾದ ಉದ್ದೇಶಗಳಿಗೆ ಮಾತ್ರ ದೇಣಿಗೆಯು ಬಳಕೆಯಾಗುವಂತೆ ನಿಯಂತ್ರಿಸಲು ಈ ತಿದ್ದುಪಡಿ ಅಗತ್ಯವೆಂದು ಸರ್ಕಾರದ ವಾದ. ಆದರೆ, ಪ್ರಸ್ತುತದ ಕಾಯ್ದೆಯು ಯಾವುದೇ ದುರುಪಯೋಗಗಳನ್ನು ತಡೆಯುವಂತಹ ಕಠಿಣ ನಿಯಮಗಳನ್ನು ಹೊಂದಿರುವಾಗ ಈ ತಿದ್ದುಪಡಿಯ ಅವಶ್ಯಕತೆ ಇಲ್ಲವೆಂಬುದು ಸ್ವಯಂಸೇವಾ ಸಂಸ್ಥೆಗಳ ಅಭಿಪ್ರಾಯವಾದರೆ, ಕ್ರೈಸ್ತ ಸಂಸ್ಥೆಗಳ ಆತಂಕ ಬೇರೆಯದಾಗಿದೆ; ತಿದ್ದುಪಡಿಯ ಉದ್ದೇಶವು ವಿದೇಶಿ ಹಣವನ್ನು ನಿಯಂತ್ರಿಸುವುದಾಗಿಲ್ಲ, ಬದಲಿಗೆ ಕ್ರಿಶ್ಚಿಯನ್ ಸಂಸ್ಥೆಗಳ ಆಸ್ತಿ ಮತ್ತು ಚುಟುವಟಿಕೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಕ್ರೈಸ್ತ ಸಮುದಾಯವನ್ನು ಗುರಿಯನ್ನಾಗಿಸುವ ಪ್ರಯತ್ನ ಇದಾಗಿದೆ ಎಂಬ ಆರೋಪ ಅವರದು. ಗೃಹ ಸಚಿವ ಅಮಿತ್ ಶಾ ಅವರು ಈ ಆರೋಪವನ್ನು ಅಲ್ಲಗೆಳೆದು, ಅಂತಹ ಉದ್ದೇಶ ಇಲ್ಲವೆಂದು ಕ್ರಿಶ್ಚಿಯನ್ ಪ್ರತಿನಿಧಿ ಮಂಡಳಿಗೆ ಭರವಸೆ ನೀಡಿರುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...
Kiran Thapar

ಹಾಗಾದರೆ, ಈ ಮಸೂದೆಯ ನಿಜ ಉದ್ದೇಶವೇನು? ಡಿಎಂಕೆ ರಾಜ್ಯಸಭಾ ಸದಸ್ಯ ಹಾಗೂ ಅಲ್ಪಸಂಖ್ಯಾತರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷರಾದ ಪಿ. ವಿಲ್ಸನ್ ಅವರು ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ, “ಈ ತಿದ್ದುಪಡಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದ್ದು, FCRA ಯ ಸ್ವರೂಪ ಮತ್ತು ಉದ್ದೇಶವನ್ನೇ ಬದಲಾಯಿಸುತ್ತದೆಂದು ಆರೋಪಿಸಿದ್ದಾರೆ. ವಿದೇಶಿ ದೇಣಿಗೆಯನ್ನು ನಿಯಂತ್ರಿಸುವ ಬದಲಿಗೆ ದೇಣಿಗೆಯಿಂದ ಸೃಷ್ಟಿಯಾದ ದತ್ತಿ ಸಂಸ್ಥೆಗಳ ಆಸ್ತಿಯನ್ನು ಸರ್ಕಾರವು ಸ್ವಾಧೀನಪಡಿಸಿಕೊಳ್ಳುವ ವ್ಯವಸ್ಥೆಯಾಗಿ ರೂಪುಗೊಳ್ಳುತ್ತಿದೆ. ನೋಂದಣಿ ರದ್ದಾದಾಗ ಅಥವಾ ನವೀಕರಣ ಆಗಿರದಿದ್ದರೆ, ವಿಚಾರಣೆಗಳಿಗೆ ಅವಕಾಶ ನೀಡದೆ, ಆ ಸಂಸ್ಥೆಗಳ ಆಸ್ತಿಗಳನ್ನು ಪುರ್ವಾನ್ವಿತವಾಗಿ ವಶಪಡಿಸಿಕೊಂಡು, ಅದನ್ನು ಮಾರಿ, ಬರುವ ಸಂಪತ್ತನ್ನು ಸರ್ಕಾರಿ ಬೊಕ್ಕಸಕ್ಕೆ ಪಡೆಯುವುದಾಗಿದೆ ಎಂಬುದು ಅವರ ಆಕ್ಷೇಪಣೆ.

ಅಂದರೆ, ವಿದೇಶಿ ದೇಣಿಗೆ ಪಡೆಯುತ್ತಿರುವ ಸಂಸ್ಥೆಗಳ ಲೈಸೆನ್ಸ್ ರದ್ದಾದಲ್ಲಿ, ಅಥವಾ ನವೀಕರಿಸದಿದ್ದಲ್ಲಿ, ಆ ಸಂಸ್ಥೆಯು ಈಗಾಗಲೇ ವಿದೇಶಿ ಹಣದಿಂದ ಸೃಷ್ಟಿಸಿರುವ ಹಿಂದಿನ ಆಸ್ತಿಗಳ ಸಮೇತ (ಸೆಕ್ಷನ್ 16 ಬಿ) ಅದರ ಚಟುವಟಿಕೆಗಳ ಮೇಲಿನ ನಿಯಂತ್ರಣವನ್ನು ಸರ್ಕಾರ ನೇಮಿಸುವ ಪ್ರಾಧಿಕಾರಕ್ಕೆ ನೀಡಲಾಗುತ್ತದೆ. ಪ್ರಾಧಿಕಾರವು ಈ ಆಸ್ತಿಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳುವ, ಮಾರುವ ಅಥವಾ ಇನ್ನಿತರ ಸಂಸ್ಥೆಗೆ ವರ್ಗಾಯಿಸುವ ವ್ಯಾಪಕ ವಿವೇಚನಾಧಿಕಾರವನ್ನು ಹೊಂದಿದೆ. ಈ ನಿರ್ಧಾರಗಳು ಪಕ್ಷಪಾತವಾಗಿದ್ದಲ್ಲಿ, ಅಂತಹ ಸಂಸ್ಥೆಗಳಿಗೆ ಸೂಕ್ತ ರಕ್ಷಣೆ ಇಲ್ಲವೆನ್ನುವುದು ವಿರೋಧದ ಮೂಲವಾಗಿದೆ.

ಭಾರತದ ಸಾವಿರಾರು ಸ್ವಯಂಸೇವಾ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಪಡೆದು ಸಹಸ್ರಾರು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡುತ್ತಿವೆ. ಕೊಟ್ಯಂತರ ಕುಟುಂಬಗಳ ಜೀವನ ಮಟ್ಟ ಸುಧಾರಣೆ ಜೊತೆಗೆ, ಸಾರ್ವಜನಿಕ ಸೌಲಭ್ಯಗಳಾದ, ಆಸ್ಪತ್ರೆ, ಶಾಲೆ, ಅನಾಥಾಲಯಗಳು, ಕೃಷಿ ಅಭಿವೃದ್ಧಿ, ಜಲ ಸಂರಕ್ಷಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಳು, ಅರಣ್ಯ ರಕ್ಷಣೆ, ಸಾರಿಗೆ ಮತ್ತು ಸಾಮಾಜಿಕ ಕಲ್ಯಾಣ ಕೆಲಸಗಳಂತಹ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನಂಶ ದೇಣಿಗೆಯು ಬಳಕೆಯಾಗುತ್ತಿದೆ. ಈ ಚುಟವಟಿಕೆಗಳು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ನಡೆಯುತ್ತಿದ್ದು, ಸರ್ಕಾರಗಳೂ ಸಹ ಸ್ವಯಂ ಸೇವಾ ಸಂಸ್ಥೆಗಳಿಗೆ ತಮ್ಮ ಅನುದಾನವನ್ನು ಜೋಡಿಸಿ ನೂರಾರು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುತ್ತಿವೆ. ಪ್ರಸ್ತಾಪಿತ ಮಸೂದೆ ಕಾಯ್ದೆಯಾಗಿ ಜಾರಿಯಾದಲ್ಲಿ, ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡು ಕೋಟ್ಯಂತರ ಕುಟುಂಬಗಳಿಗೆ ಅನ್ಯಾಯವಾಗಲಿದೆ.

ಮೊದಲಿಗೆ, 1976ರಲ್ಲಿ ಜಾರಿಯಾದ ಈ ಕಾಯ್ದೆ, 1984ರಲ್ಲಿ ವಿದೇಶಿ ಹಣ ಪಡೆಯುವ ಸಂಸ್ಥೆಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಯಿತು. ನಂತರ, ಇದು ರದ್ದಾಗಿ FCRA – 2010ರ ಕಾಯ್ದೆ ಜಾರಿಗೊಂಡು, ರಾಷ್ಟ್ರೀಯ ಭದ್ರತೆ, ದೇಶದ ಸಾರ್ವಭೌಮತೆಯ ರಕ್ಷಣೆಗಾಗಿ ಅವಶ್ಯಕ ನಿಯಮಗಳು ಆಗಲೇ ಸೇರ್ಪಡೆಗೊಳ್ಳುತ್ತವೆ. ವಿದೇಶಿ ದೇಣಿಗೆ ಪಡೆಯಲು ಗೃಹ ಇಲಾಖೆಯು ತನ್ನ ಬೇಹುಗಾರಿಕೆ ಹಾಗೂ ಪೊಲೀಸ್ ಇಲಾಖೆಗಳ ಮೂಲಕ ಅರ್ಜಿ ಸಲ್ಲಿಸಿದ ಸಂಸ್ಥೆಯನ್ನು ಬಹು ಆಳವಾಗಿ ಪರಿಶೀಲಿಸಿ ಲೈಸೆನ್ಸ್ ನೀಡುತ್ತದೆ. ಇದಲ್ಲದೆ, ನವೀಕರಣದ ಅವಧಿಯ ನಿಗದಿ, ದೇಣಿಗೆ ದುರುಪಯೋಗವಾದಲ್ಲಿ ಐದು ವರ್ಷ ಕಠಿಣ ಸಜೆ, ಇತರೆ ಸಂಸ್ಥೆಗಳಿಗೆ ದೇಣಿಗೆ ವರ್ಗಾವಣೆ ನಿಷೇಧ, ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ನಿರ್ವಹಣೆ, ಕಡ್ಡಾಯ ಲೆಕ್ಕಪತ್ರ ಪರಿಶೋಧನೆ, ರದ್ದು/ಸ್ಥಗಿತವಾದ ಸಂಸ್ಥೆಯ ದೇಣಿಗೆಯ ನಿರ್ವಹಣೆ ಇತ್ಯಾದಿ ನಿಯಮಗಳೊಂದಿಗೆ ಈ ಕಾಯ್ದೆಯು ಬಿಗಿಗೊಳ್ಳುತ್ತದೆ.

ನಂತರ, 2015ರಿಂದ 2019ರ ಅವಧಿಯಲ್ಲಿ ನಿಯಂತ್ರಣ ಮತ್ತು ಅನುಸರಣಾ ನಿಯಮಗಳು ಇನ್ನಷ್ಟು ಸೇರಿಕೊಳ್ಳುವುದಲ್ಲದೆ, ಕಾಯ್ದೆಯು 2020ರಲ್ಲಿ ಮತ್ತೆ ತಿದ್ದುಪಡಿಯಾಗುತ್ತದೆ. ವಾರ್ಷಿಕ ಲೆಕ್ಕಪತ್ರ ಹಾಗೂ ಆಡಿಟ್ ವರದಿ ಸಲ್ಲಿಕೆ, ತ್ರೈಮಾಸಿಕ ದೇಣಿಗೆ ವರದಿಯನ್ನು ವೆಬ್‍ಸೈಟ್/ಪೋರ್ಟಲ್‍ನಲ್ಲಿ ಕಾಣಿಸುವುದು, ದೇಣಿಗೆ ಉದ್ದೇಶವನ್ನು FCRA ನಲ್ಲಿ ಸಲ್ಲಿಸುವುದು, ಅನುಮತಿಸಿರುವ ಉದ್ದೇಶಗಳಿಗೆ ಮಾತ್ರ ಬಳಕೆ, ಎರಡು ವರ್ಷದಲ್ಲಿ ಕನಿಷ್ಠ ಹತ್ತು ಲಕ್ಷಗಳು ಖರ್ಚಾಗಿದ್ದರೆ ಮಾತ್ರ ನವೀಕರಣ, ದೇಣಿಗೆ ಸ್ವಿಕಾರಕ್ಕೆ ದೆಹಲಿಯ ಎಸ್.ಬಿ.ಐ. ಬ್ಯಾಂಕಿನಲ್ಲಿ ಖಾತೆ ತೆರೆಯುವುದು, ಚಟುವಟಿಕೆವಾರು ಹಣ ಬಳಕೆ ವರದಿ ಸಲ್ಲಿಕೆ ಸೇರಿದಂತೆ ಇನ್ನೂ ಅನೇಕ ನಿಯಮಗಳನ್ನು ಒಳಗೊಂಡಿದೆ.

ಈ ಕ್ರಮಗಳಿಂದಾಗಿ ವಿದೇಶಿ ದೇಣಿಗೆ ಪಡೆಯುವಾಗಿನ ನಿಯಮಗಳು ಅಗತ್ಯಕ್ಕಿಂತ ಹೆಚ್ಚು ಕಠಿಣಗೊಂಡು, ಯಾವುದೇ ರೀತಿಯ ದುರುಪಯೋಗದ ಜಾಡನ್ನು ಸರ್ಕಾರ ಸುಲಭವಾಗಿ ಗುರುತಿಸಬಹುದಾಗಿದೆ. ಆದರೆ, ಯಾವ ಮಾನದಂಡಗಳ ಆಧಾರದಲ್ಲಿ ಅಧಿಕಾರಿಗಳು ಅನುಮತಿಯನ್ನು ರದ್ದತಿಗೊಳಿಸಲು ಅಥವಾ ನವೀಕರಣ ಮಾಡದಿರುವ ನಿರ್ಧಾರ ಮಾಡುತ್ತಾರೆಂದು ಅರ್ಥಮಾಡಿಕೊಳ್ಳುವುದೇ ಕಷ್ಟವಾಗಿದೆ ಎನ್ನುತ್ತಾರೆ ಪಿ.ವಿಲ್ಸನ್.

ಒಟ್ಟು 52176 ಸಂಸ್ಥೆಗಳು FCRA ಹೊಂದಿದ್ದು, ಅವುಗಳಲ್ಲಿ ಕೇವಲ 27.7% (14451) ಮಾತ್ರ ಈಗ ಚಾಲ್ತಿಯಲ್ಲಿವೆ. ಉಳಿದ 22,493 ಸಂಸ್ಥೆಗಳನ್ನು ರದ್ದುಗೊಳಿಸಿರುವ ಹಾಗೂ 15232 ಸಂಸ್ಥೆಗಳನ್ನು ನಿಷ್ಕ್ರೀಯವೆಂದು ಪರಿಗಣಿಸಿರುವ ಮಾಹಿತಿಯನ್ನು ಗೃಹ ಸಚಿವಾಲಯದ FCRA ಆನ್‍ಲೈನ್ ಪುಟದಲ್ಲಿ ತಿಳಿಸಲಾಗಿದೆ. ಈ ಪ್ರಮಾಣದ ನೋಂದಣಿಗಳು ರದ್ದಾಗಲು ಕಾರಣಗಳೇನು ಎಂದು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ, ಉತ್ತರವಾಗಿ, ಹೆಚ್ಚಿನ ನೋಂದಣಿಗಳು ಕಾರ್ಯವಿಧಾನಾತ್ಮಕ ಲೋಪಗಳಿಂದ (ಪ್ರೊಸೀಜರಲ್ ಲ್ಯಾಪ್ಸ್) ರದ್ದಾಗಿವೆ ಎಂದು ಗೃಹ ಸಚಿವಾಲಯ ತಿಳಿಸಿತ್ತು. ಈ ರದ್ದತಿಗಳು 2017ರ ನಂತರದಿಂದ ಜರುಗಿದ್ದಾಗಿವೆ ಎಂಬುದು ಗಮನಾರ್ಹವಾಗಿದೆ.

ಇಷ್ಟೆಲ್ಲಾ ಬಿಗಿಗೊಳಿಸಿರುವ ಈ ಕಾಯ್ದೆಯನ್ನು ಮತ್ತೆಷ್ಟು ಬಿಗಿಗೊಳಿಸಬೇಕಿದೆ? ‘ವಿದೇಶಿ ಹಸ್ತ, ವಿದೇಶಿ ಪ್ರಭಾವ’ ಎನ್ನುವ ಹಳೆಯ ರಾಗವನ್ನೇ ಹಾಡುತ್ತಿದೆ ಈ ಸರ್ಕಾರ. ಹಿಂದಿನ ಸರ್ಕಾರಗಳೂ ಸಹ ಇಂತಹುದೇ ಆರೋಪಗಳನ್ನು ಮಾಡಿದ್ದರೂ, ಕಳೆದ ದಶಕದಿಂದ ಈ ಆರೋಪಗಳ ಸುರಿಮಳೆ ಎಗ್ಗಿಲ್ಲದೆ ನಡೆದಿದೆ; ಸರ್ಕಾರದ ನಿಲುವನ್ನು ಪ್ರಶ್ನಿಸಿದ ನಾಗರಿಕರು, ರೈತರು, ವಿದ್ಯಾರ್ಥಿಗಳು, ಪತ್ರಕರ್ತರು – ಹೀಗೆ ಎಲ್ಲರೂ ವಿದೇಶಿ ಹಣ ಮತ್ತು ಸಂಪರ್ಕ ಹೊಂದಿರುವ ತಾಲಿಬಾನಿಗಳು, ಖಲಿಸ್ತಾನಿಗಳು, ಮತ್ತು ನಗರ (ದಿಮಾಗಿ) ನಕ್ಸಲೀಯರೆಂಬ ಪುರಾವೆ ರಹಿತ ಆರೋಪಗಳು! ಈಗ, ಕ್ರೈಸ್ತ ಸಂಸ್ಥೆಗಳು FCRA ಹಣ ಬಳಸಿ ಮತಾಂತರ ಮಾಡುತ್ತಿವೆ ಎಂಬ ಮತ್ತೊಂದು ಆರೋಪ!!

ರದ್ದಾಗಿರುವ ಒಟ್ಟು ಸಂಸ್ಥೆಗಳಲ್ಲಿ, 90% ಕ್ರಿಶ್ಚಿಯನ್ ಸಂಸ್ಥೆಗಳಾಗಿದ್ದು, ಇದು ಮುಖ್ಯವಾಗಿ ಕ್ರೈಸ್ತ ಮಿಷನರಿಗಳಿಗೆ ಸೇರಿದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶವನ್ನು ಸೂಚಿಸುತ್ತದೆ ಎನ್ನುತ್ತಾರೆ ಪಿ.ವಿಲ್ಸನ್. ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ನಿತ್ಯಾನಂದ ರೈ ಅವರು ಲೋಕಸಭೆಯಲ್ಲಿ – ಈ ತಿದ್ದುಪಡಿ ಯಾವುದೇ ಸ್ವಯಂಸೇವಾ ಸಂಸ್ಥೆಗಳ ವಿರುದ್ಧವಾಗಿಲ್ಲ, ಬದಲಿಗೆ ವಿದೇಶಿ ದೇಣಿಗೆ ಬಳಕೆಯಲ್ಲಿ ಪಾರದರ್ಶಕತೆ ತಂದು, ಅದರ ದುರುಪಯೋಗ ತಡೆಯುವ ಉದ್ದೇಶ ಹೊಂದಿದೆ, ದೇಣಿಗೆಯನ್ನು ಬಳಸಿ ಬಲವಂತದ ಮತಾಂತರ ನಡೆಸುವವರ ವಿರುದ್ಧ ಈ ಕಾಯ್ದೆಯನ್ನು ಪ್ರಯೋಗಿಸಲಾಗುವುದು ಎಂದು ಹೇಳಿರುತ್ತಾರೆ. ಆದರೆ, ಇಂತಹ ಬಳಕೆಯನ್ನು ಕಾಯ್ದೆಯು ಈಗಾಗಲೇ ನಿಷೇಧಿಸಿರುವಾಗ, ಈ ಹೊಸ ತಿದ್ದುಪಡಿಯ ಅಗತ್ಯತೆ ಅರ್ಥವಾಗುತ್ತಿಲ್ಲ.

ವಿದೇಶಿ ಹಣವು ಬಲವಂತದ ಮತಾಂತರಕ್ಕೆ ಬಳಕೆಯಾಗುತ್ತಿದೆ ಎನ್ನುವುದಕ್ಕಿಂತ, ಕೆಲವು ಸಂಸ್ಥೆಗಳ ಪದಾಧಿಕಾರಿ ಹಾಗೂ ಸಿಬ್ಬಂದಿಯು ವಿದೇಶಿ ದೇಣಿಗೆಯನ್ನು ತಮ್ಮ ಸ್ವಂತ ಲಾಭಕ್ಕೆ ದುರುಪಯೋಗ ಮಾಡಿಕೊಳ್ಳುತ್ತಿರುವ ಸಾಧ್ಯತೆಗಳಿರಬಹುದು. ಆದರೆ, ಇದನ್ನು ಕೇವಲ ಕ್ರಿಶ್ಚಿಯನ್ ಸಂಸ್ಥೆಗಳಷ್ಟೇ ಮಾಡುತ್ತಿವೆ ಎನ್ನಲಾಗದು.

ಅಂತೆಯೇ, ದುರುಪಯೋಗ ಮಾಡುತ್ತಿರುವ ಎಲ್ಲರೂ ದೇಶದ್ರೋಹಿ ಚಟುವಟಿಕೆಗಳಿಗೆ – ಅಂದರೆ ಭಯೋತ್ಪಾದನೆ, ನಕ್ಸಲ್, ಮತೀಯ ದ್ವೇಷ, ಆಂತರಿಕ ಶಾಂತಿಗೆ ಧಕ್ಕೆ – ಇತ್ಯಾದಿಗಳಿಗೆ ವಿದೇಶಿ ದೇಣಿಗೆ ಬಳಕೆ ಮಾಡುತ್ತಾರೆ ಎನ್ನುವುದೂ ಸಹ ತಪ್ಪಾಗುತ್ತದೆ. ಈ ಗಂಭೀರ ಅಪರಾಧಗಳಲ್ಲಿ ಬೆರಳೆಣಿಕೆಯಷ್ಟು ಸಂಸ್ಥೆಗಳು ಮಾತ್ರ ತೊಡಗಿರಬಹುದು. ಇಸ್ಲಾಂ ಮತ್ತು ಹಿಂದುತ್ವ ಮತೀಯವಾದಿಗಳು ಅಥವಾ ಖಲಿಸ್ತಾನಿಗಳು ವಿದೇಶಿ ಸಹಾಯದಿಂದ ಆಂತರಿಕ ಸಮಸ್ಯೆ ಸೃಷ್ಷಿಸಿದ ಬಗ್ಗೆ ಆರೋಪಗಳು ಈ ಹಿಂದೆ ಕೇಳಿಬಂದಿದ್ದು, ಈಗಲೂ ಅದು ನಡೆಯುತ್ತಿರಬಹುದು. ಆದರೆ FRCAಯಡಿ ಪಡೆದ ದೇಣಿಗೆಯಿಂದಲೇ ಈ ದೇಶದ್ರೋಹಿ ಅಪರಾಧಗಳು ನಡೆದವು ಎನ್ನುವುದಕ್ಕೆ ಸಾಕ್ಷಿಗಳಿಲ್ಲ. ಇಂತಹ ದೇಶದ್ರೋಹಿ ಪ್ರಕರಣಗಳನ್ನು ಶೋಧಿಸಿ ಕಠಿಣ ದಂಡನೆಗೆ ಗುರಿಪಡಿಸುವ ಬದಲು, ಸಣ್ಣ ಪುಟ್ಟ ಕಾರ್ಯವಿಧಾನಾತ್ಮಕ ತಪ್ಪುಗಳಿಗೂ ಲೈಸೆನ್ಸ್ ರದ್ದುಗೊಳಿಸುವ ಅಥವಾ ನವೀಕರಿಸದ ಕ್ರಮದ ಬದಲು, ಸರಿಪಡಿಸಿಕೊಳ್ಳಲು ಅವಕಾಶ ನೀಡುವುದು ವಿವೇಚನೆಯ ನೀತಿಯಾಗಿದೆ. ಇಲ್ಲವಾದಲ್ಲಿ, ಬುಟ್ಟಿಯಲ್ಲಿನ ನೂರು ಹಣ್ಣುಗಳಲ್ಲಿ ಕೊಳೆತ ಹತ್ತನ್ನು ಹೆಕ್ಕಿ ಬಿಸಾಡುವ ಬದಲು ಎಲ್ಲವೂ ಕೊಳೆತಿವೆಯೆಂದು ಬಿಸಾಡಿದಂತಾಗುತ್ತದೆ.

ಕಾಲಕಾಲಕ್ಕೆ ಆಗುತ್ತಿರುವ ಈ ಕಾಯ್ದೆಯ ಬದಲಾವಣೆಗಳನ್ನು ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕಂತೆ ತಮ್ಮ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿಯೇ ಅನೇಕ ಸಂಸ್ಥೆಗಳು ಸಕಾಲದಲ್ಲಿ ವರದಿಗಳನ್ನು ಸಲ್ಲಿಸಲಾಗದೆ ತಮ್ಮ ಲೈಸೆನ್ಸ್‌ಗಳನ್ನು ಕಳೆದುಕೊಂಡಿದ್ದಾರೆ. ಎಲ್ಲಾ ಸಂಸ್ಥೆಗಳು ನಿರಂತರವಾಗಿ ದೇಣಿಗೆ ಪಡೆಯಲು ಸಾಧ್ಯವಿಲ್ಲ, ಕೆಲವೊಮ್ಮೆ ದೇಣಿಗೆ ಸಿಗುತ್ತದೆ, ಇಲ್ಲವಾದರೆ ಇಲ್ಲ. ಅಥವಾ, ಧೀರ್ಘ ಕಾಲದಿಂದ ನಿಂತಿರುವ ದೇಣಿಗೆ ಮತ್ತೆಂದಾದರೂ ಮುಂದುವರೆಯಬಹುದು. ಆದರೆ, ಎರಡು ವರ್ಷದಲ್ಲಿ ಕನಿಷ್ಠ 10 ಲಕ್ಷ ಹಣವನ್ನು ಖರ್ಚು ಮಾಡಲು ಸಾಧ್ಯವಾಗದ ಸಣ್ಣ ಸಂಸ್ಥೆಗಳ ಅನುಮತಿ ನವೀಕರಣಗೊಳ್ಳುವುದಿಲ್ಲ – ಇಂತಹ ವಾಸ್ತವತೆಗಳನ್ನು ಪುನರ್ ಪರಿಶೀಲಿಸಿ, ನಾಗರಿಕ ಸಂಸ್ಥೆಗಳು ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಪೂರಕ ನೀತಿಯನ್ನು ತರುವುದು ಮುಖ್ಯವಾಗಿದೆ.

ವಿದೇಶಿ ಹಣ ನಿಂತಿದ್ದರೂ, ಈ ಮೊದಲೇ ಕಟ್ಟಿರುವ ಶಾಲೆ, ಆಸ್ಪತ್ರೆ, ವಸತಿ ನಿಲಯ, ತರಬೇತಿ ಕೇಂದ್ರ ಇತ್ಯಾದಿಗಳು ಸ್ಥಳೀಯ ದೇಣಿಗೆ ಸಹಾಯದಿಂದ ಈಗಲೂ ನಡೆಯುತ್ತಿವೆ. ಹೆಚ್ಚಿನಂಶ, ಈ ಸೇವೆಗಳನ್ನು ಹಿಂದುಳಿದ /ಮೂಲೆಗುಂಪಾದ ಪ್ರದೇಶದ ಜನರು ಮತ್ತು ಹೆಚ್ಚಿನ ಬಹು-ಸಂಖ್ಯಾತರು ಪಡೆದುಕೊಳ್ಳುತ್ತಿದ್ದಾರೆ. ಮೂಲಭೂತ ಸೇವೆಗಳನ್ನೇ ಸರಿಯಾಗಿ ಒದಗಿಸಲಾಗದ ಈ ಸರ್ಕಾರವು, ಸ್ವಯಂಸೇವಾ ಸಂಸ್ಥೆಗಳು ನಡೆಸುವ ಶಾಲೆ, ಆಸ್ಪತ್ರೆ, ಅನಾಥಾಲಯಗಳನ್ನು ತನ್ನ ಸ್ವಾಧೀನಕ್ಕೆ ಪಡೆದು ಪರಿಣಾಮಕಾರಿಯಾಗಿ ನಡೆಸಲಿದೆಯೇ? ಈಗಾಗಲೇ ಸುಮಾರು 95,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಿರುವ ಸರ್ಕಾರವು, ತನ್ನ ಶಾಲೆ, ಆಸ್ಪತ್ರೆ, ವಸತಿ ನಿಲಯಗಳ ನಿರ್ವಹಣಾ ದುಃಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದಾಗಿದೆ.

ಕಬ್ಬಿಣದ ಕಡಲೆಯಾಗಿರುವ ಪ್ರಸ್ತುತದ ಕಾಯ್ದೆಯನ್ನು ಬಳಸಿ ದೇಶದ್ರೋಹಕ್ಕೆ ಅಥವಾ ಸ್ವಂತಕ್ಕೆ ದುರುಪಯೋಗವಾಗುವ ಪ್ರಕರಣಗಳನ್ನು ಪತ್ತೆ ಮಾಡಲು ಸರ್ಕಾರಕ್ಕೆ ಕಷ್ಟವೇನಿಲ್ಲ. ಆದರೆ, ಸಾಬೀತಾಗದ ಆರೋಪಗಳ ಆಧಾರದಲ್ಲಿ ಕಾನೂನು ಬದಲಾವಣೆ ಮಾಡುವುದು ಸಮಸ್ಯೆಗೆ ಪರಿಹಾರವಲ್ಲ, ಬದಲಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಕರಡು ಮಸೂದೆಯು ಜಾರಿಗೊಂಡರೆ, ಈಗಾಗಲೇ ಲೈಸೆನ್ಸ್ ರದ್ದಾಗಿರುವ ಅಥವಾ ನವೀಕರಣಗೊಳ್ಳದ ಸಂಸ್ಥೆಗಳ ಹಿಂದಿನ ಆಸ್ತಿಯನ್ನು ಸೇರಿಸಿ, ಅದರ ಚಟುವಟಿಕೆಗಳನ್ನು ಸರ್ಕಾರವು ಸ್ವಾಧೀನಪಡಿಸಿಕೊಂಡಲ್ಲಿ, ಆ ಸೇವೆಗಳನ್ನು ಅವಲಂಬಿಸಿರುವ ಬಡವರು ವಂಚಿತರಾಗುತ್ತಾರೆ. ಸರ್ಕಾರವು ಹೊಸ ಕಾಯ್ದೆಯನ್ನು ಹಿಂದಿನ ಆಸ್ತಿಗಳಿಗೆ ಅನ್ವಯಿಸುವುದಿಲ್ಲವೆಂದು ಮೌಖಿಕವಾಗಿ ಹೇಳಿದೆ ಸರಿ. ಕರಡು ಮಸೂದೆಯಲ್ಲಿ ಯಾವ ಸಮಯದಿಂದ ಈ ನಿಯಮ ಅನ್ವಯಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿಲ್ಲದ ಕಾರಣ ಅದು ವಿದೇಶಿ ಹಣ ಬಳಸಿ ಸೃಷ್ಟಿಸಿದ ಎಲ್ಲಾ ಆಸ್ತಿಗಳಿಗೂ ಪೂರ್ವಾನ್ವಿತವಾಗಿ ಅನ್ವಯಗೊಳ್ಳುವ ಆತಂಕವನ್ನು ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ ಜಗತ್ತಿನಲ್ಲಿರುವ ಕಪ್ಪು ಹಣದಿಂದ ವಿಶ್ವದ ಎಲ್ಲರಿಗೂ ಲ್ಯಾಪ್‌ಟಾಪ್ ಖರೀದಿಸಬಹುದು: ಸಿಜೆಐ ಸೂರ್ಯಕಾಂತ್

ಶೇ.70 ಕ್ಕೂ ಹೆಚ್ಚು ಅನುಮತಿಗಳು ರದ್ದು ಅಥವಾ ಸ್ಥಗಿತವಾಗಿರುವ ಸಂಸ್ಥೆಗಳ ಆಸ್ತಿಯನ್ನು ಮುಟುಗೋಲು ಹಾಕಿಕೊಂಡು, ಸರ್ಕಾರ ತನಗೆ ಬೇಕಾದವರಿಗೆ ಮಾರಲು ಈ ಮಸೂದೆಯ ಮಾರ್ಗ ಹಿಡಿಯಲಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಸಂದರ್ಭದಲ್ಲಿ ಅಮೆರಿಕದ ರಿಪಬ್ಲಿಕನ್ ಕಾಂಗ್ರೆಸ್ ಸದಸ್ಯ ರಿಲೇ ಮೂರ್ ಅವರು ‘ಈ ಮಸೂದೆಯು ಭಾರತದ ಕ್ರೈಸ್ತ ಸಮುದಾಯ ಮೇಲಿನ ಆಕ್ರಮಣ ಮಾತ್ರವಲ್ಲ: ಇದು ಎರಡೂ ದೇಶಗಳ ನಡುವಿನ ಸಂಬಂಧಗಳಲ್ಲಿ ಸಮಸ್ಯೆ ತರಬಹುದು” ಎಂದಿದ್ದಾರೆ. ಎಂದಿಗೂ ತನ್ನದೇ ಹಟವನ್ನು ಸಾಧಿಸುವ ಬಿಜೆಪಿ ಸರ್ಕಾರವು ಈ ಮಸೂದೆಯ ಜಾರಿಗೆ ಮೊಂಡು ಹಿಡಿಯದೆ, ಜಂಟಿ ಸಂಸದೀಯ ಸಮಿತಿ ಚರ್ಚೆಗೆ ನೀಡಿದ್ದು ಅಮೆರಿಕದ ಒತ್ತಡದಿಂದಲೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಏನೇ ಆದರೂ, ಸ್ವಯಂಸೇವಾ ಸಂಸ್ಥೆಗಳೂ ಸಹ ತಾವು ಪಡೆಯುವ ವಿದೇಶಿ ಹಣದ ನಿರ್ವಹಣೆಯನ್ನು ನಿಯಮಾನುಸಾರ ಹಾಗೂ ಸಂಪೂರ್ಣ ಪಾರದರ್ಶಕತೆಯಿಂದ ನಿರ್ವಹಿಸುವ ಜವಾಬ್ದಾರಿ ಹೊಂದಬೇಕಿದೆ.

ಸದ್ಯಕ್ಕೆ ಹಿನ್ನೆಲೆಗೆ ಸರಿದಿರುವ ಈ ಕರಡು ಮಸೂದೆಯು ಮತ್ತೆ ಜಾಗೃತಗೊಳ್ಳುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ. ವಿದೇಶಿ ಹಣದ ಮೇಲಿನ ನಿಯಂತ್ರಣ ಅಗತ್ಯವಿದೆಯೇ ಎಂಬುದು ದೇಶದ ಮುಂದಿರುವ ಪ್ರಶ್ನೆಯಲ್ಲ – ಅದು ಖಂಡಿತಾ ಅಗತ್ಯವಿದೆ. ಆದರೆ, ಈ ಕಾಯ್ದೆಯು ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳ ಆಸ್ತಿ ಮತ್ತು ಚಟುವಟಿಕೆಗಳನ್ನೂ ಸಹ ನಿಯಂತ್ರಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡಬೇಕೇ ಎಂಬುದೇ ಮುಖ್ಯ ಪ್ರಶ್ನೆಯಾಗಿದೆ.

WhatsApp Image 2025 11 17 at 5.18.52 PM
ಲತಾಮಾಲ
+ posts

ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಸಿಡಿಲು ಬಡಿದು ರೈತ ಸಾವು

ಹೊಲದಲ್ಲಿ ಕೃಷಿ ಕೆಲಸ ಮಾಡುವ ಸಮಯದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವ...

ಬೀದರ್‌ | ಶೋಷಿತರಿಗೆ ಶರಣರ ಮಾನವೀಯ ಮೌಲ್ಯ ತಲುಪಿಸುವ ಗುರಿ : ಪ್ರಭುದೇವ ಸ್ವಾಮೀಜಿ

ಬಸವಾದಿ ಶರಣರ ವಚನಗಳು ಎಲ್ಲರ ನಡೆ-ನುಡಿಗೆ ದರ್ಪಣವಾಗಬೇಕು ಎಂದು ಲಿಂಗಾಯತ ಮಹಾ...

‘ಮಕ್ಕಳಿಗೂ ಇಂಟರ್‌ನೆಟ್ ಬಳಕೆ ಮೂಲಭೂತ ಹಕ್ಕು; ಸಂಪೂರ್ಣ ನಿಷೇಧ ಪರಿಹಾರವಲ್ಲ’: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಯಸ್ಕರಂತೆ ಮಕ್ಕಳಿಗೂ ಇಂಟರ್‌ನೆಟ್ ಸಂಪರ್ಕ ಪಡೆಯುವ ಮತ್ತು ಅದನ್ನು ಬಳಸುವ ಮೂಲಭೂತ...

ತಿಹಾರ್ ಜೈಲಿನಲ್ಲಿ ಸಿಜೆಪಿ ನಾಯಕರಿಗೆ ಹೈ ಸೆಕ್ಯುರಿಟಿ; ಇತರ ಕೈದಿಗಳಿಂದ ಪ್ರತ್ಯೇಕ ವಾಸ

ಅನುಮತಿಯಿಲ್ಲದೆ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ...