- ಕೋಲಾರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು
- ರಾಜಕೀಯ ವಲಯಗಳಲ್ಲಿ ಅನೇಕ ಅನುಮಾನಗಳಿಗೆ ಎಡೆ
ವಿಧಾನ ಪರಿಷತ್ ಮಾಜಿ ಸಭಾಪತಿ ಮತ್ತು ಕಾಂಗ್ರೆಸ್ ಮುಖಂಡ ವಿ ಆರ್ ಸುದರ್ಶನ್ ಅವರು ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ.
ಕೋಲಾರ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡು ಈಗ ಕಾರಣಾಂತರಗಳಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಂಡಿರುವದಾಗಿ ತಿಳಿಸಿದರು.
ರಾಜಕೀಯ ನಿವೃತ್ತಿ ಕುರಿತು ಹೆಚ್ಚಿನ ವಿವರಗಳನ್ನು ಏಪ್ರಿಲ್ 25 ಅಥವಾ 26ರ ನಂತರ ಮಾತನಾಡುವುದಾಗಿ ಹೇಳಿದರು.
ರಾಜಕಾರಣದಿಂದ ದೂರ ಉಳಿದರೂ ಸಾಮಾಜಿಕ ಮತ್ತು ಅಭಿವೃದ್ಧಿಪರ ಸಂವಿಧಾನಬದ್ಧ ಕಾರ್ಯಕ್ರಮಗಳು ಮತ್ತು ಚಳವಳಿಗಳಲ್ಲಿ ಭಾಗವಹಿಸುವುದಾಗಿ ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ಜಗದೀಶ್ ಶೆಟ್ಟರ್‌ಗೆ ಟಿಕೆಟ್ ವಿಳಂಬ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 16 ಸದಸ್ಯರ ರಾಜೀನಾಮೆ
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸುದರ್ಶನ್ ಅವರು ಸಕ್ರಿಯ ರಾಜಕಾರಣಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿರುವುದು ರಾಜಕೀಯ ವಲಯಗಳಲ್ಲಿ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುತ್ತಾರೆ ಎಂದು ಅರಂಭದಿಂದ ಹೇಳಲಾಗುತ್ತಿತ್ತು. ಈ ಕಾರಣದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿ ಆರ್ ಸುದರ್ಶನ್ ಅವರು ಹಿಂದೆ ಸರಿದಿದ್ದರು. ಆದರೆ, ಈಗ ಕೊತ್ನೂರು ಮಂಜುನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆ ಇರುವ ಕಾರಣ ವಿ ಆರ್ ಸುದರ್ಶನ್ ಮನನೊಂದು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗಿದೆ.