ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಕೂಡಲೇ ಅನುದಾನ ಬಿಡುಗಡೆಗೊಳಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಕೋಲಾರದ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಧರಣಿ ನಡೆಸಿದರು.
ಕೋಲಾರ ನಗರದ ತಹಶೀಲ್ದಾರ್ ಕಚೇರಿ ಎದುರು ಜಮಾವಣೆಗೊಂಡ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮಾತನಾಡಿ, “ಶತಮಾನಗಳಲ್ಲೆ ಎಂದೂ ಕಾಣದ ಬರಗಾಲಕ್ಕೆ ರಾಜ್ಯ ತತ್ತರಿಸಿದೆ. ಕೇಂದ್ರ ಸರ್ಕಾರ ಕೂಡಲೇ ಅನುದಾನ ಬಿಡುಗಡೆಗೊಳಿಸಬೇಕು” ಎಂದು ಒತ್ತಾಯಿಸಿದರು.
ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷ ಟಿ ಎಂ ವೆಂಕಟೇಶ್ ಮಾತನಾಡಿ, “ರಾಜ್ಯ ಸರ್ಕಾರವೇ 236 ತಾಲೂಕುಗಳ ಪೈಕಿ 223 ತಾಲೂಕುಗಳು ತೀವ್ರ ಬರಪೀಡಿತವೆಂದು ಘೋಷಿಸಿದೆ. ಕೃಷಿ ಇಲಾಖೆ ವರದಿ ಪ್ರಕಾರ ಸುಮಾರು ಐವತ್ತು ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಕಳೆದ ಜೂನ್ ಮಾಹೆಯ ಮುಂಗಾರು ವೈಫಲ್ಯದಿಂದ ಬರಗಾಲ ಆವರಿಸಿದೆ. ನಂತರ ಯಾವ ಮಳೆಯೂ ಬರದಿರುವುದು ರೈತಾಪಿ ಸಮುದಾಯದ ಸಂಕಟಕ್ಕೆ ಕಾರಣವಾಗಿದೆ” ಎಂದರು.
“ಬರಪೀಡಿತ ಜನರ ಅಗತ್ಯಗಳನ್ನು ಪೂರೈಸಬೇಕಾಗಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತೀವ ನಿರ್ಲಕ್ಷ್ಯ ವಹಿಸಿವೆ. ಬರಗಾಲದ ಪರಿಹಾರಕ್ಕಾಗಿ ಕೇಂದ್ರದಿಂದ ₹18,177 ಕೋಟಿಯನ್ನು ಒದಗಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿ ಹಲವಾರು ನಿಯೋಗಗಳ ಮೂಲಕ ಒತ್ತಾಯಿಸಿದ್ದರೂ ಒಂದು ನಯಾ ಪೈಸೆ ಕೊಟ್ಟಿಲ್ಲ. ಬೇಸಿಗೆಯಲ್ಲಿ ನೀರು, ಮೇವು, ಆಹಾರ, ಉದ್ಯೋಗಕ್ಕೆ ಹಾಹಾಕಾರ ಇರುವಾಗ, ಇಡೀ ವರ್ಷ ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲ ಉಂಟು ಮಾಡಬಹುದಾದ ಪರಿಣಾಮಗಳನ್ನು ಊಹಿಸಬಹುದಾಗಿದೆ” ಎಂದು ಕಳವಳಗೊಂಡರು.
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವಿ ನಾರಾಯಣರೆಡ್ಡಿ ಮಾತನಾಡಿ, “ಬರಗಾಲ ಇದ್ದರೂ ರಾಷ್ಟ್ರೀಕೃತ ಬ್ಯಾಂಕುಗಳು, ಸಾಲ ವಸೂಲಾತಿಗಾಗಿ ರೈತರಿಗೆ ನೋಟೀಸ್‌ಗಳನ್ನು ನೀಡುತ್ತಿರುವುದು ರಾಜ್ಯದ ಎಲ್ಲ ಕಡೆ ವರದಿಯಾಗುತ್ತಿವೆ. ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳು, ಮೈಕ್ರೋ ಫೈನಾನ್ಸ್ ಕಂಪನಿಗಳು, ಖಾಸಗಿ ಲೇವಾದೇವಿ ಸಾಲಗಳ ವಸೂಲಾತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ದುಬಾರಿ ಮೀಟರ್ ಬಡ್ಡಿ ಸಾಲದ ಜಾಲ ಬಹಳ ವ್ಯಾಪಕವಾಗಿ ಬೆಳೆಯುತ್ತಿದೆ. ಬರಗಾಲದಿಂದ ಉಂಟಾದ ಸಾಲದ ಬೇಡಿಕೆ, ಬಡ್ಡಿದರದ ಹೆಚ್ಚಳಕ್ಕೆ ಕಾರಣವಾಗಿದ್ದು ರೈತರ ಹಾಗೂ ಗ್ರಾಮೀಣ ಜನತೆಯ ಪರಿಸ್ಥಿತಿಯನ್ನು ಹದಗೆಡಿಸುತ್ತಿದೆ” ಎಂದು ಕಿಡಿಕಾರಿದರು.
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರವನ್ನು ಒದಗಿಸಬೇಕು. ಒಂದು ಎಕರೆಗೆ ಬೆಳೆನಷ್ಟ ಪರಿಹಾರವಾಗಿ ₹50,000 ನೀಡಬೇಕು. ಇಡೀ ರಾಜ್ಯವನ್ನು ಸಂಪೂರ್ಣ ಬರಗಾಲ ಪಿಡೀತ ಪ್ರದೇಶವೆಂದು ಘೋಷಿಸಬೇಕು. ಬರಗಾಲ ಘೋಷಣೆಗೆ ಸಂಬಂಧಿಸಿ, ಕೇಂದ್ರ ಸರ್ಕಾರವು ತನ್ನ ವಸಾಹತುಶಾಹಿ ಕಾಲಘಟ್ಟದ ಮಾನದಂಡಗಳಿಗೆ ಬದಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನದಂಡಗಳನ್ನು ರೂಪಿಸಬೇಕು. ರಾಜ್ಯದಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು. ಟ್ಯಾಂಕರ್ ನೀರಿನ ಮಾರಾಟದ ಮೇಲೆ ನಿಯಂತ್ರಣ ಸಾಧಿಸಬೇಕು” ಎಂದರು
“ಸರ್ಕಾರ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು. ಕೂಡಲೇ ಕೇಂದ್ರ ಸರ್ಕಾರವು, ಎಲ್ಲ ರೈತರ, ಕೃಷಿ ಕೂಲಿಕಾರರ, ಗ್ರಾಮೀಣ ಮಹಿಳೆಯರ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಮಾಡಬೇಕು. ಎಲ್ಲ ರೀತಿಯ ಸಾಲ ವಸೂಲಾತಿಯನ್ನು ನಿಷೇಧಿಸಿ ಆದೇಶ ಹೊರಡಿಸಬೇಕು. ರೈತರ ಕೃಷಿ ಕೂಲಿಕಾರರ, ಗೇಣಿ ರೈತರ ಆತ್ಮಹತ್ಯೆ ತಡೆಗಟ್ಟಲು ಕೂಡಲೇ ಕ್ರಮ ವಹಿಸಬೇಕು. ಗ್ರಾ.ಪಂ ಮಟ್ಟದಲ್ಲಿ ಬರಗಾಲ ಪರಿಹಾರ ಕ್ರಮಗಳನ್ನು ಯೋಜಿಸಲು ವಿಶೇಷ ಗ್ರಾಮಸಭೆ ನಡೆಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ರೆಡ್ಡಿ ಪ್ರಾಧಿಕಾರ ಸ್ಥಾಪನೆಗೆ ಸರ್ಕಾರದ ಹತ್ತಿರ ನಿಯೋಗ ತೆಗೆದುಕೊಂಡು ಹೋಗುವೆ: ಸಚಿವ ನಾಗೇಂದ್ರ
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಆಲಹಳ್ಳಿ ವೆಂಕಟೇಶ್, ಉಪಾಧ್ಯಕ್ಷ ಎನ್ ಎನ್ ಶ್ರೀರಾಮ್, ಗಂಗಮ್ಮ, ಅಪ್ಪಯ್ಯಣ್ಣ, ಮುಖಂಡರುಗಳಾದ ಯಲ್ಲಪ್ಪ, ಮುನಿರತ್ನಮ್ಮ, ಚಿನ್ನಮ್ಮ, ಶ್ರೀನಿವಾಸ್, ವೆಂಕಟರಾವ್, ರಾಜೇಂದ್ರ ಚಪ್ರಾಸ್, ನಾರಾಯಣಸ್ವಾಮಿ ಇದ್ದರು.