ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮುಖವಾಗಿ ಘೋಷಿಸಿದರೂ ಸಮಸ್ಯೆ, ಘೋಷಿಸದೇ ಇದ್ದರೂ ಸಮಸ್ಯೆ. ಇದರಲ್ಲಿ ಒಂದು ಗೊಂದಲ ಮುಂದುವರಿದೇ ಇದೆ. ತೀರಾ ಇತ್ತೀಚೆಗೆ ಪ್ರಲ್ಹಾದ್ ಜೋಷಿಯವರು ಸಿಎಂ ಇರೋದರಿಂದ ಇನ್ನೊಬ್ಬರ ಮುಖ ಪ್ರೊಜೆಕ್ಟ್ ಮಾಡೋಕೆ ಆಗಲ್ಲವಲ್ಲಾ ಎಂದು ಮೀಡಿಯಾದವರ ಜೊತೆ ಆನ್ ಕ್ಯಾಮೆರಾ ಹೇಳಿದರು.
ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು ಮುಂದಿನ ಇಪ್ಪತ್ತು ವರ್ಷಗಳ ಕಾಲ ರಾಜಕೀಯಾಸಕ್ತರಿಗೆ ಒಂದು ಅಧ್ಯಯನಯೋಗ್ಯ ಸಂಗತಿಯಾಗಿರುತ್ತದೆ. ಬಿಜೆಪಿಯು ಈ ಹಿಂದೆ ಇಂತಹ ವೈಫಲ್ಯವನ್ನು ಕಂಡಿದ್ದು ಪಶ್ಚಿಮ ಬಂಗಾಳದಲ್ಲಿ. ಆದರೆ, ಕರ್ನಾಟಕದಲ್ಲಿ ಅದು ಇನ್ನೂ ದೊಡ್ಡ ಘೋರ ವೈಫಲ್ಯವನ್ನು ಕಾಣುತ್ತಿದೆ. ಮೇಲೇರುತ್ತಿರುವ, ಅತಿ ಬಲಾಢ್ಯವಾದ ಪಕ್ಷವೊಂದು ಇಳಿಜಾರಿಗೆ ಸಿಕ್ಕಿಕೊಂಡರೆ ಹೇಗೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂಬುದನ್ನು ಈ ಬೆಳವಣಿಗೆ ತೋರಿಸುತ್ತದೆ.
ವಾಸ್ತವದಲ್ಲಿ ಈ ಇಳಿಜಾರು 2019ರ ಜುಲೈನಲ್ಲೇ ಶುರುವಾಯಿತಾದರೂ, ಅದು ವೇಗ ಪಡೆದುಕೊಂಡಿದ್ದು ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿದಾಗಿನಿಂದ. ಆದರೆ, ನಿಜಕ್ಕೂ ಒಂದು ರೀತಿಯಲ್ಲಿ ʼಕ್ಲೂಲೆಸ್ (ಏನು ಮಾಡಬೇಕೆಂದು ಗೊತ್ತಾಗದ ರೀತಿಯಲ್ಲಿ)ʼ ಆಗಿದ್ದು ಎಲೆಕ್ಷನ್ ಹತ್ತಿರ ಬಂದಾಗ. ಮುಖ್ಯವಾಗಿ ಐದು ಅಂಶಗಳಲ್ಲಿ ಅವರು ಎಡವಟ್ಟು ಮಾಡಿಕೊಂಡರು.
ಒಂದು: ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮುಖವಾಗಿ ಘೋಷಿಸಿದರೂ ಸಮಸ್ಯೆ, ಘೋಷಿಸದೇ ಇದ್ದರೂ ಸಮಸ್ಯೆ. ಇದರಲ್ಲಿ ಒಂದು ಗೊಂದಲ ಮುಂದುವರೆದೇ ಇದೆ. ತೀರಾ ಇತ್ತೀಚೆಗೆ ಪ್ರಲ್ಹಾದ್ ಜೋಷಿಯವರು ಸಿಎಂ ಇರೋದರಿಂದ ಇನ್ನೊಬ್ಬರ ಮುಖ ಪ್ರೊಜೆಕ್ಟ್ ಮಾಡೋಕೆ ಆಗಲ್ಲವಲ್ಲಾ ಎಂದು ಮೀಡಿಯಾದವರಿಗೆ ಆನ್ ಕ್ಯಾಮೆರಾ, ಹೇಳಿದರು.
ಎರಡು: ಹಳಬರಿಗೆ ಟಿಕೆಟ್ ಕೊಡಬಾರದು – ಆ ಮೂಲಕ ಆಡಳಿತ ವಿರೋಧಿ ಅಲೆ ಎದುರಿಸಬೇಕು ಎಂದು ಹೊರಟರು. ಆದರೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರುವುದು ರಾಜ್ಯ ಸರ್ಕಾರಕ್ಕೆ. ಶಾಸಕರಿಗೂ ಇದೆ, ಅದು ರಾಜ್ಯ ಸರ್ಕಾರಕ್ಕಿಂತ ಕಡಿಮೆ. ಹೀಗಾಗಿ ಹಳಬರಿಗೆ ಟಿಕೆಟ್ ಕೊಡದಿದ್ದರೆ ಎಡವಟ್ಟಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಲಿಲ್ಲ.
ಮೂರು: ಹಳಬರನ್ನು ತೆಗೆದಾಗ, ಯಾರಿಗೆ ಕೊಡಬೇಕೆಂಬ ಬಗ್ಗೆ ಗೊಂದಲ. ಏಕೆಂದರೆ ಹಳಬರನ್ನು ತೆಗೆಯುವಾಗ ತಮಗೆ ಯಾರಿಗೆ ಬೇಡವೋ ಅವರನ್ನು ತೆಗೆಯುವುದು ಎಂದು ಮಾಡಿದರೇ ಹೊರತು, ಯಾರಿಗೆ ಆಡಳಿತ ವಿರೋಧಿ ಅಲೆ ಇತ್ತೋ ಅವರನ್ನು ತೆಗೆಯಲಿಲ್ಲ. ಹೀಗಾಗಿ ಶೆಟ್ಟರ್ ಅಂಥವರನ್ನು ತೆಗೆದರು. ಇನ್ನೊಂದು ಕಡೆ ನಿಜವಾಗಲೂ ವಿಪರೀತ ವಿರೋಧ ಇದ್ದ ಲಿಂಬಾವಳಿ ಜಾಗದಲ್ಲಿ ಅವರ ಹೆಂಡತಿಗೆ ಕೊಟ್ಟರು. ಇಂತಹ ಎಡವಟ್ಟುಗಳಿಗೆ ಕೊನೆಯೇ ಇಲ್ಲ. ಮಣಿಕಂಠ ರಾಥೋಡ್ ಥರದವರಿಗೆ ಟಿಕೆಟ್ ಕೊಟ್ಟರು. ಅಂತಿಮವಾಗಿ ಇಡೀ ರಾಜ್ಯದಲ್ಲಿ ಫ್ಲಡ್ ಗೇಟ್ ತೆರೆದ ರೀತಿಯಲ್ಲಿ ನಾಯಕರು, ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.
ನಾಲ್ಕು: ಮಾದಿಗರು ಬಿಜೆಪಿಗೆಂದೂ ಪೂರ್ಣ ಓಟು ಹಾಕಲ್ಲ. ಸಣ್ಣ ಪ್ರಮಾಣದ (marginal benefit) ಅನುಕೂಲಕ್ಕಾಗಿ ಲಂಬಾಣಿಗಳ ಓಟು ಕಳೆದುಕೊಂಡರು.
ಐದು: ಎಲ್ಲಕ್ಕಿಂತ ಮುಖ್ಯವಾಗಿ ಮೋದಿ ಮೂಲಕ ಇದನ್ನು ಸರಿ ಮಾಡಿಕೊಳ್ಳಬಹುದು ಎಂದು ಅಂದುಕೊಂಡರು.
ವಾಸ್ತವದಲ್ಲಿ ಈ ಹೊತ್ತು ಜನರು ಅತ್ಯಂತ ಹೆಚ್ಚು ತಲೆ ಕೆಡಿಸಿಕೊಂಡಿರುವುದು ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ಕುರಿತು. ಬೆಲೆ ಏರಿಕೆ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಮತ್ತೆ ಮತ್ತೆ ಜನಕ್ಕೆ ಹೇಳಿದ್ದೇ ಮೋದಿ. ಅದರಲ್ಲೂ ಗ್ಯಾಸ್ ಬೆಲೆ ಹಾಗೂ ಜಿಎಸ್ಟಿಯನ್ನು ಜನರು ಮೋದಿಯ ಜೊತೆಗೇ ಲಿಂಕ್ ಮಾಡಿಕೊಳ್ಳುತ್ತಾರೆ. ಜೊತೆಗೆ ಇಲ್ಲಿಗೆ ಬಂದ ಮೋದಿ ಸಮರ್ಥನೆ ಮಾಡುತ್ತಿರುವುದು ಭ್ರಷ್ಟ ಸರ್ಕಾರವನ್ನು ಎಂಬುದು ಜನರ ಅರಿವಿಗೆ ಬಂದಂತೆಲ್ಲಾ ಮೋದಿ ಇಮೇಜ್ ಪೆಟ್ಟು ತಿನ್ನುತ್ತದೆ.
ದುರಂತವೆಂದರೆ, ಕರ್ನಾಟಕದ ಮೀಡಿಯಾಗಳು ಬಿಜೆಪಿಗೆ ವಿಪರೀತ ಡ್ಯಾಮೇಜ್ ಮಾಡುತ್ತಿವೆ. ಕರ್ನಾಟಕದಲ್ಲಿ ಬಿಜೆಪಿ ವಿರೋಧಿ ಅಲೆ ಇದ್ದರೂ, ಸಿಕ್ಕಾಪಟ್ಟೆ ಬಿಜೆಪಿ ಮತ್ತು ಮೋದಿಯನ್ನು ತೋರಿಸುವುದರ ಬದಲು ಕಾಂಗ್ರೆಸ್‌ನ ವೈಫಲ್ಯವನ್ನು ಅವರು ಹೆಚ್ಚು ಹೇಳಿದ್ದರೆ, ತಮ್ಮ ಮಾಲೀಕರಿಗೆ ನ್ಯಾಯ ಒದಗಿಸಿದಂತಾಗುತ್ತಿತ್ತು. ಕಾಂಗ್ರೆಸ್ ಒಳಗಿನ ಬಿರುಕು ಇತ್ಯಾದಿಗಳನ್ನು ಹೇಳಬೇಕಾಗಿತ್ತು. ಆದರೆ, ಅದರ ಬದಲಿಗೆ ಯಾರ ಬಗ್ಗೆ ಸಿಟ್ಟು ಹೆಚ್ಚಾಗುತ್ತಾ ಇದೆಯೋ ಅವರನ್ನೇ ಮತ್ತೆ ಮತ್ತೆ ತೋರಿಸಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಬಿಜೆಪಿಯ ಸಮರ್ಥಕರೂ ತೊಂದರೆ ಹೆಚ್ಚಾಗುವಂತೆ ಮಾಡುತ್ತಿದ್ದಾರೆ. ಸ್ವತಃ ಬಿಜೆಪಿಗೆ ಈ ಸಾರಿ ಬೆಲೆ ಏರಿಕೆ, ಬಡತನ ಸಮಸ್ಯೆ ಎಂಬುದು ಗೊತ್ತಾಗಿದೆ. ಹಾಗಾಗಿಯೇ ಅವರು ʼಬಿಟ್ಟಿಭಾಗ್ಯʼಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಭರಪೂರ ಘೋಷಿಸಿದ್ದಾರೆ. ಆದರೆ, ಬಿಜೆಪಿಯ ಸಮರ್ಥಕರಾದವರು ಬಿಟ್ಟಿ ಭಾಗ್ಯ ಎಂದು ಹೀಯಾಳಿಸುವುದನ್ನು ಮುಂದುವರೆಸಿದ್ದಾರೆ. ಅಂದರೆ ಜನರಿಗೆ ಸ್ಪಷ್ಟ ಸಂದೇಶ ಏನು ಎಂಬುದು ಅವರಿಗೇ ಗೊಂದಲಮಯವಾಗಿದೆ.
ಇದನ್ನು ಓದಿ ಮಾದಿಗರ ರಾಜಕೀಯವನ್ನು ಬಿಜೆಪಿಗೆ ಅನೈತಿಕವಾಗಿ ಅಡಮಾನ ಮಾಡಬೇಕೆ?: ಹನುಮೇಶ್ ಗುಂಡೂರು
ಅಂದರೆ, ಈಗಾಗಲೇ ಈದಿನ.ಕಾಮ್ ಸಮೀಕ್ಷೆಯಲ್ಲಿ ಬಂದಿರುವುದಕ್ಕಿಂತ ಹೆಚ್ಚು ಸೀಟುಗಳನ್ನು ಕಾಂಗ್ರೆಸ್ ಗೆ ತಂದುಕೊಡಲು ಬಿಜೆಪಿಯ ಪರವಾದ ಮಾಧ್ಯಮಗಳು ಹಾಗೂ ಸಮರ್ಥಕರು ಕೆಲಸ ಮಾಡುತ್ತಿದ್ದಾರೆ. ಯಾವುದೇ ಊರಿಗೆ ಹೋಗಿ ಮತದಾರರನ್ನು ಸುಮ್ಮನೇ ಮಾತಿಗೆಳೆದರೆ ಸಾಕು ಇದು ಅರ್ಥವಾಗುತ್ತದೆ. ಮೂರು ಜನ ರಾಜಕೀಯ ವಿಶ್ಲೇಷಕರು ಬೆಂಗಳೂರಿನಿಂದ ಹಾಸನದ ಮಾರ್ಗವಾಗಿ ಚಿಕ್ಕಮಗಳೂರಿಗೆ ಹೋದರು; ಅಲ್ಲಿಂದ ಕಾರ್ಕಳಕ್ಕೆ ಹೋಗಿ ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಬೆಂಗಳೂರಿಗೆ ಬಂದರು. ಅವರು ಹೇಳಿದ್ದು ಸ್ಪಷ್ಟವಾಗಿದೆ. ಮಾತಾಡಿಸಿದ ನೂರು ಜನರಲ್ಲಿ, ಹಿಂದೆ ಕಾಂಗ್ರೆಸ್ಸಿಗೆ ಓಟು ಹಾಕಿದ್ದೆ – ಈ ಸಾರಿ ಬಿಜೆಪಿಗೆ ಹಾಕುತ್ತೇನೆ ಎಂದು ಹೇಳಿದವರು ಒಬ್ಬರೂ ಇಲ್ಲ. ಕಳೆದ ಸಾರಿ ಜೆಡಿಎಸ್ ಗೆ ಹಾಕಿದ್ದೆ, ಈಗ ಬಿಜೆಪಿಗೆ ಹಾಕುತ್ತೇನೆ ಎಂದವರು ಒಬ್ಬರು. ಕಳೆದ ಸಾರಿ ಬಿಜೆಪಿಗೆ ಹಾಕಿದ್ದೆ, ಈಗ ಕಾಂಗ್ರೆಸ್ಸಿಗೆ ಹಾಕುತ್ತೇನೆ ಎಂದವರು 16 ಜನ.
ಅಲ್ಲಿಗೆ ಈ ಸಾರಿಯ ಚುನಾವಣಾ ಫಲಿತಾಂಶ ತೀರ್ಮಾನವಾಗಿದೆ. ಆದರೆ ಬಿಜೆಪಿ ತನ್ನ ಸ್ಟ್ರಾಟೆಜಿಯಲ್ಲಿ ಸೋಲುತ್ತಾ, ಸೋಲುತ್ತಾ ಇನ್ನೂ ಎಷ್ಟು ಇಳಿಯುತ್ತದೆ ಎಂಬುದನ್ನು ನೋಡಬೇಕಿದೆ.

ರಾಜಶೇಖರ್ ಅಕ್ಕಿ
ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.