- ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ವ್ಯಕ್ತಿಯಿಂದ ನಾಮಪತ್ರ
- ಮೂರು ಗಂಟೆ ತಡವಾಗಿ ನಾಮಪತ್ರ ಸಲ್ಲಿಸಿದ ಮತ್ತೋರ್ವ ಅಭ್ಯರ್ಥಿ
ಬೆಂಗಳೂರಿನ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವಾದ ಶಿವಾಜಿನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಅಬ್ದುಲ್ ಜಫರ್ ಅಲಿ ಮತ್ತು ಮಂಜುನಾತ್ ಅವರ ನಾಮಪತ್ರಗಳು ತಿರಸ್ಕೃತವಾಗಿವೆ.
ಕೆಲವು ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದ ಜಫರ್ ಅಲಿ, ಇತ್ತಿಚಿಗಷ್ಟೇ ಬೆಂಗಳೂರಿಗೆ ಹಿಂತಿರುಗಿದ್ದರು. ಇವರ ಹೆಸರು ಯಾವ ಕ್ಷೇತ್ರದ ಮತದಾರರ ಪಟ್ಟಿಯಲ್ಲೂ ಇಲ್ಲ. ಆದ್ದರಿಂದ ಚುನಾವಣಾ ಆಯೋಗವು ನಾಮಪತ್ರವನ್ನು ತಿರಸ್ಕರಿಸಿದೆ. ಈ ಬಗ್ಗೆ ಶಿವಾಜಿನಗರ ಆರ್ ಓ ಬಸವರಾಜ್ ಸೋಮಣ್ಣನವರ್ ದೃಢಪಡಿಸಿದ್ದಾರೆ.
ಜಫರ್ ಅಲಿ ಅವರು ಏ. 20 ರಂದು ಮತದಾರರ ಗುರುತಿನ ಚೀಟಿಗೆ ತಮ್ಮ ಹೆಸರನ್ನು ಸೇರಿಸಲು ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಸಲ್ಲಿಸಲು ವಿಳಂಬವಾಗಿದ್ದರಿಂದ ಜಫರ್ ಅಲಿ ಹೆಸರು ಸೇರ್ಪಡೆಗೊಂಡಿಲ್ಲ.
ಈ ಸುದ್ದಿ ಓದಿದ್ದೀರಾ? : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 25 ಸಾವಿರ ಪೌರ ಕಾರ್ಮಿಕರ ಕಾಯಂ; ಸುರ್ಜೇವಾಲ ಭರವಸೆ
ಇದರ ಬಗ್ಗೆ ಅರಿವು ಹೊಂದಿದ್ದ ಜೆಡಿಎಸ್ ಮುಂಜಾಗ್ರತ ಕ್ರಮವಾಗಿ ಆರ್ ಮಂಜುನಾಥ್ ಎಂಬವವರನ್ನು ಕೂಡ ಕಣಕ್ಕೆ ಇಳಿಸಿತ್ತು. ಆದರೆ, ಮಂಜುನಾಥ್ ಅವರು ನಾಮಪತ್ರವನ್ನು 3 ಗಂಟೆ ತಡವಾಗಿ ಸಲ್ಲಿಸಿಕೆ ಮಾಡಿದ್ದರಿಂದ ಮಂಜುನಾಥ್ ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ. ಹೀಗೆ ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗದ ಕಾರಣ ಜೆಡಿಎಸ್‌ಗೆ ಮುಖಭಂಗ ಉಂಟಾಗಿದೆ.
ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಹಾಲಿ ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿಯು ದಲಿತ ಅಭ್ಯರ್ಥಿ ಎನ್ ಚಂದ್ರ ಅವರನ್ನು ಕಣಕ್ಕಿಳಿಸಿದೆ.