ಚುನಾವಣೋತ್ತರ ಸಮೀಕ್ಷೆಗಳ ಕುರಿತು ಈದಿನ.ಕಾಮ್‌ ಏನು ಹೇಳುತ್ತದೆ?

Date:

Advertisements
ಭಿನ್ನವಾದ ಸಮೀಕ್ಷೆಗಳು ಬಂದಾಗ ಯಾವುದು ಸರಿ ಎಂದು ಅಂದಾಜು ಮಾಡುವುದು? ಗಮನಿಸಿ, ʼಸರಿ ಇರಬಹುದುʼ ಎಂಬ ʼಅಂದಾಜುʼ ಅಷ್ಟೇ ಸಾಧ್ಯ. ಏಕೆಂದರೆ ಇವು Exit Pollಗಳೇ ಹೊರತು Exact pollಗಳಲ್ಲ. ಆ ರೀತಿಯ ಚುನಾವಣೆ ನಡೆಸುವುದು ಚುನಾವಣಾ ಆಯೋಗ ಮಾತ್ರ!

ಮೇ 10ರಂದು ನಡೆದ ಕರ್ನಾಟಕ ವಿಧಾನಸಭೆಯ ಮತದಾನೋತ್ತರ ಅಥವಾ ಮತಗಟ್ಟೆ ಸಮೀಕ್ಷೆಗಳು ಈ ಸಾರಿ ಹಿಂದೆಂದೂ ಇಲ್ಲದಷ್ಟು ನಡೆದಿವೆ. ಒಟ್ಟು ಹತ್ತು ಅಂತಹ ಸಮೀಕ್ಷೆಗಳು ಬಿತ್ತರವಾದವು. ಅವುಗಳಲ್ಲಿ 8 ಸಮೀಕ್ಷೆಗಳು ಕಾಂಗ್ರೆಸ್ಸಿಗೆ ಮುನ್ನಡೆಯನ್ನೂ, 2 ಸಮೀಕ್ಷೆಗಳು ಬಿಜೆಪಿಗೆ ಮುನ್ನಡೆಯನ್ನೂ ಅಂದಾಜಿಸಿವೆ. ಕಾಂಗ್ರೆಸ್ಸಿಗೆ ಮುನ್ನಡೆ ಎಂದು ಹೇಳಿರುವ ಸಮೀಕ್ಷೆಗಳಲ್ಲೂ ಎರಡು ಮಾತ್ರ ಸ್ಪಷ್ಟವಾದ ಬಹುಮತ ಬರುತ್ತದೆ ಎಂದು ತಿಳಿಸಿವೆ. ಈ ರೀತಿ ಭಿನ್ನವಾದ ಸಮೀಕ್ಷೆಗಳು ಬಂದಾಗ ಯಾವುದು ಸರಿ ಎಂದು ಅಂದಾಜು ಮಾಡುವುದು? ಗಮನಿಸಿ, ʼಸರಿ ಇರಬಹುದುʼ ಎಂಬ ʼಅಂದಾಜುʼ ಅಷ್ಟೇ ಸಾಧ್ಯ. ಏಕೆಂದರೆ ಇವು Exit Pollಗಳೇ ಹೊರತು Exact pollಗಳಲ್ಲ. ಆ ರೀತಿಯ ಚುನಾವಣೆ ನಡೆಸುವುದು ಚುನಾವಣಾ ಆಯೋಗ ಮಾತ್ರ!

ಈ ರೀತಿಯ ಅಂದಾಜನ್ನು ಈದಿನ.ಕಾಮ್‌ ಮಾಡಿದೆ ಮತ್ತು ಬಹುತೇಕ ಈದಿನ.ಕಾಮ್‌ ನಡೆಸಿದ ಚುನಾವಣಾಪೂರ್ವ ಸಮೀಕ್ಷೆ ನಿಜವಾಗಲಿದೆ ಎಂದು ಹೇಳುತ್ತಿದ್ದೇವೆ. ಅದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ.
ಇದ್ದುದರಲ್ಲಿ ಯಾವುದು ಸರಿ ಇರಬಹುದು ಎಂದು ಅಂದಾಜು ಮಾಡಲಿಕ್ಕೆ ಸಾಧ್ಯ. ಅದಕ್ಕೆ ಎರಡು ಮಾನದಂಡಗಳು ಇರಲು ಸಾಧ್ಯ. ಒಂದು, ಇದುವರೆಗಿನ ಆಯಾ ಸಮೀಕ್ಷಾ ಸಂಸ್ಥೆ ಯಾವ ರೀತಿ, ಎಷ್ಟು ನಿಖರವಾಗಿ ಸಮೀಕ್ಷೆಯನ್ನು ನಡೆಸಿದೆ ಎಂಬುದು. ಎರಡು, ಅವರು `ಯಾವ ಪಕ್ಷಗಳು ಎಷ್ಟು ಸೀಟು ಪಡೆದುಕೊಳ್ಳುತ್ತವೆ, ಎಂದು ಹೇಳುವುದರ ಜೊತೆಗೆ ಮತ ಪ್ರಮಾಣವನ್ನೂ ಸೂಚಿಸುತ್ತಿವೆಯಾ ಮತ್ತು ಅದು ಸೀಟು ಅಂದಾಜಿನ ಪ್ರಮಾಣಕ್ಕೆ ಹೊಂದಿಕೊಳ್ಳುತ್ತದೆಯಾ?ʼ ಎಂಬುದನ್ನೂ ಪರಿಶೀಲಿಸುವುದು.

ಇದರಲ್ಲಿ ಮೊದಲ ಮಾನದಂಡವನ್ನು ಪರಿಗಣಿಸಿದರೆ – ಇಂಡಿಯಾ ಟುಡೆ ಮೈ ಆಕ್ಸಿಸ್‌ ಸಮೀಕ್ಷೆಯ ಇದುವರೆಗಿನ ಮತದಾನೋತ್ತರ ಸಮೀಕ್ಷೆಗಳು ಬಹುತೇಕ ನಿಜವಾಗಿವೆ. ಇಡೀ ಲೋಕ ಬೇರೆ ರೀತಿ ಹೇಳಿದಾಗಲೂ, ಇವರ ಸಮೀಕ್ಷೆಗಳು ನಿಜವಾಗಿದ್ದನ್ನು ನಾವು ನೋಡಬಹುದು. ಆದರೆ ಇವರೂ ಸಹ ಈ ಹಿಂದಿನ ಕರ್ನಾಟಕದ ಚುನಾವಣೆ, ತಮಿಳುನಾಡು ಮತ್ತು ಬಿಹಾರದ ಚುನಾವಣಾ ಫಲಿತಾಂಶಗಳನ್ನು ತಪ್ಪಾಗಿ ಅಂದಾಜಿಸಿದ್ದವು. 2013ರಿಂದ 2019ರ ನಡುವೆ ಅವರು 36 ಅಂತಹ ಸಮೀಕ್ಷೆಗಳನ್ನು ನಡೆಸಿದ್ದರೆ, ಅದರಲ್ಲಿ 34 ಮತದಾನೋತ್ತರ ಸಮೀಕ್ಷೆಗಳು ಅವರು ಹೇಳಿದ ದಿಕ್ಕಿನಲ್ಲೇ ನಿಜವಾಗಿದ್ದವು. ಆ ನಂತರ ಬಿಹಾರದ ಚುನಾವಣೆಯ ವಿಷಯಕ್ಕೆ ಬಂದರೆ, ಆದ ತಪ್ಪಿನ ಕುರಿತಾಗಿ ಅವರು ಬಹಿರಂಗವಾಗಿಯೇ ಎಲ್ಲಿ ಎಡವಿದ್ದೆವೆಂಬುದನ್ನು ಜನರ ಮುಂದಿಟ್ಟಿದ್ದರು.

Advertisements

ಆದರೂ, ಈ ಸಂಸ್ಥೆಯ ಸಮೀಕ್ಷೆಯೇ ಇದುವರೆಗೆ ಇದ್ದುದರಲ್ಲಿ ಅತ್ಯಂತ ನಿಖರವಾಗಿರುವುದನ್ನು ನಾವು ನೋಡುತ್ತೇವೆ. ಉಳಿದವರದ್ದು ಅಷ್ಟು ನಿಖರವಾಗಿಲ್ಲ. ಏಕೆ ನಿಖರವಾಗಿರುವುದಿಲ್ಲ ಎಂಬುದನ್ನು ಕೊನೆಯಲ್ಲಿ ನೋಡೋಣ.
ಇನ್ನು ಎರಡನೆಯ ವಿಷಯ – ಅವರು ಯಾವ ರೀತಿ ಈ ಅಂದಾಜನ್ನು ಮುಂದಿಡುತ್ತಾರೆ? ಅದರಲ್ಲಿ ಮತಪ್ರಮಾಣ (Vote share) ಮುಂದಿಡುತ್ತಾರಾ ಇಲ್ಲವಾ ಎಂಬುದು. ಇದಕ್ಕೆ ಒಂದು ಉದಾಹರಣೆ ಕೊಡಬಹುದಾದರೆ, ಈ ಸಾರಿ ಒಂದು ಸಂಸ್ಥೆಯು ಬಿಜೆಪಿಗೆ 46% ಮತ ಬರುತ್ತದೆಂದೂ, ಕಾಂಗ್ರೆಸ್ಸಿಗೆ 31% ಮತಗಳು ಬರುತ್ತವೆಂದೂ ಹೇಳಿ, ಬಿಜೆಪಿಗೆ 114 ಸೀಟುಗಳು ಬರುತ್ತದೆಂದು ಹೇಳಿದೆ. ಇದನ್ನು ಕೇವಲ ತಪ್ಪು ಎಂದು ಹೇಳಲಾಗದು; ಮೂರ್ಖತನದ್ದು ಎನ್ನಬೇಕು. ಶೇ.15ರಷ್ಟು ಮತಗಳ ವ್ಯತ್ಯಾಸ ಇದ್ದರೆ, ಅಂತರ ಭಾರೀ ಇರುತ್ತದೆ.

ಅದನ್ನು ಹೊರತುಪಡಿಸಿದರೆ ಮತಪ್ರಮಾಣವನ್ನು ನೀಡಿರುವ ಇನ್ನೆರಡು ಸಮೀಕ್ಷೆಗಳೆಂದರೆ ಸಿ-ವೋಟರ್‌ ಮತ್ತು ಇಂಡಿಯಾ ಟುಡೇ ಮೈ ಆಕ್ಸಿಸ್‌ ಅವರು. ಅವರವರು ನೀಡಿರುವ ಮತಪ್ರಮಾಣ ಹಾಗೂ ಅವರು ಅಂದಾಜಿಸಿರುವ ಸೀಟುಗಳ ಸಂಖ್ಯೆ ಹೊಂದಿಕೊಳ್ಳುತ್ತದೆ. ಇದರಲ್ಲಿ ಸಿ-ವೋಟರ್‌ ಬಿಜೆಪಿ- ಕಾಂಗ್ರೆಸ್‌-ಜೆಡಿಎಸ್‌ ಗಳಿಗೆ ಕ್ರಮವಾಗಿ 83-95, 100-112 ಮತ್ತು 21-29 ಸೀಟುಗಳೆಂದು ಹೇಳಿದೆ; ಮೈ ಆಕ್ಸಿಸ್‌ ಇದೇ ಕ್ರಮದಲ್ಲಿ 62-80, 122-140 ಮತ್ತು 20-25 ಎಂದು ಹೇಳಿದೆ.

India Today

ಇದುವರೆಗಿನ track record ಮತ್ತು ಅವರ ಉಳಿದ ವಿವರಗಳ ಜೊತೆಗೆ ಲೆಕ್ಕಾಚಾರ ಸರಿಯಾಗಿ ಹೊಂದಿಕೊಳ್ಳುವುದರಿಂದ ಮಾತ್ರವಲ್ಲ, ಈದಿನ.ಕಾಮ್‌ ತಾನು ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯನ್ನೂ ತಾಳೆ ಮಾಡಿ ನೋಡಿದಾಗ, ಕಾಂಗ್ರೆಸ್‌ ಪಕ್ಷಕ್ಕೆ 130ರಿಂದ 140ರ ಹತ್ತಿರ ಸೀಟುಗಳು ಬರುತ್ತವೆಂದು ನಾವು ಭಾವಿಸುತ್ತೇವೆ. ಇದು ಹೆಚ್ಚಾಗಬಹುದೇ ಹೊರತು, ಕಡಿಮೆಯಾಗಲಾರದು ಎಂಬುದು ನಮ್ಮ ಅಂದಾಜಾಗಿದೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯಿದೆ. ಕಾಂಗ್ರೆಸ್‌ (43%) ಮತ್ತು ಬಿಜೆಪಿಗಳ (35%) ನಡುವೆ ಶೇ.8ರಷ್ಟು ಮತಪ್ರಮಾಣದ ಅಂತರ ಇದೆಯೆಂದು ಮೈ ಆಕ್ಸಿಸ್‌ ಹೇಳಿದೆ. ಇಷ್ಟು ವ್ಯತ್ಯಾಸಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿಗಳ ನಡುವೆ ಅಷ್ಟೊಂದು ಸೀಟುಗಳ ವ್ಯತ್ಯಾಸ ಹೇಗೆ ಆಗುತ್ತದೆ? ಏಕೆಂದರೆ ಕಳೆದ ಬಾರಿ ಕಾಂಗ್ರೆಸ್‌ (38%) ಮತ್ತು ಬಿಜೆಪಿಗಳಲ್ಲಿ (36%) ಕಾಂಗ್ರೆಸ್ಸಿಗೇ ಶೇ.2ರಷ್ಟು ಹೆಚ್ಚು ಮತಗಳು ಬಂದಿದ್ದಾಗ್ಯೂ, ಕಾಂಗ್ರೆಸ್‌ ಬಿಜೆಪಿಗಿಂತ 24 ಸೀಟುಗಳನ್ನು ಕಡಿಮೆ ತೆಗೆದುಕೊಂಡಿತ್ತು. ಏಕೆಂದರೆ, ಬಿಜೆಪಿಯು ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಹಾಗೂ ಮಲೆನಾಡುಗಳಲ್ಲಿ ಕೇಂದ್ರೀಕೃತವಾದ ಪಕ್ಷವಾಗಿದ್ದರೆ, ಕಾಂಗ್ರೆಸ್‌ ರಾಜ್ಯಾದ್ಯಂತ ಹರಡಿಕೊಂಡಿದ್ದ ಪಕ್ಷವಾಗಿದ್ದು ಎಲ್ಲೆಡೆ ಸೇರಿ ಹೆಚ್ಚು ಮತ ಪಡೆದುಕೊಂಡಿದ್ದರೂ, ದಕ್ಷಿಣದಲ್ಲಿ ಜೆಡಿಎಸ್‌ ಗೆ ಸೀಟುಗಳು ಹೆಚ್ಚು ಬಂದಿದ್ದವು.

ಆದರೆ, ಈ ಸಾರಿ ಬಿಜೆಪಿಗೆ ಅದರ ಹಿಂದಿನ ಮತಪ್ರಮಾಣಕ್ಕಿಂತ ಕೇವಲ ಶೇ.1ರಷ್ಟು ಕಡಿಮೆಯಾಗಲಿದೆ ಎಂದು ಈ ಮತದಾನೋತ್ತರ ಸಮೀಕ್ಷೆ ಹೇಳಿದರೂ, ದಕ್ಷಿಣ ಕರ್ನಾಟಕದಲ್ಲಿ ಅದರ ಮತಗಳಿಕೆ ಹೆಚ್ಚಾಗಿದೆ (ಅದು ಸೀಟುಗಳಾಗಿ ಪರಿವರ್ತನೆ ಹೊಂದುವಷ್ಟು ಹೆಚ್ಚಾಗಿಲ್ಲ). ಹೀಗಾಗಿ ಅದು ಗೆಲ್ಲಬಹುದಾದ ಪ್ರದೇಶದಲ್ಲಿ ಅಷ್ಟು ಮತಗಳನ್ನು ಪಡೆದುಕೊಂಡಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಬಿಜೆಪಿಯು ರಾಜ್ಯದೆಲ್ಲೆಡೆ ಪ್ರಭಾವ ಹೆಚ್ಚಿಸಿಕೊಂಡ ಪಕ್ಷವಾಗಿದ್ದರೂ, ಸೀಟು ಗಳಿಸಲು ಬೇಕಾದಷ್ಟು ಮತಗಳನ್ನು ಹೆಚ್ಚಿನ ಕಡೆ ಪಡೆಯದೇ ಇರುವುದರಿಂದ ಈ ಪ್ರಮಾಣದ ಕುಸಿತ ಕಾಣಲಿದೆ.

ಇದೇ ರೀತಿ ಮಹಿಳೆಯರ ಮತಪ್ರಮಾಣ ಯಾರಿಗೆ ಹೆಚ್ಚು, ಬಡವರು ಯಾರಿಗೆ ಹೆಚ್ಚು ಮತ ಹಾಕಿದ್ದಾರೆ ಇತ್ಯಾದಿಗಳನ್ನು ನೋಡಿದರೆ, ಈ ಸಾರಿಯ ಚುನಾವಣೆಯು ಬಡವರ ಸಿಟ್ಟು ವ್ಯಕ್ತವಾದ, ಬೆಲೆ ಏರಿಕೆಯ ವಿರುದ್ಧದ ಜನರ ಆಕ್ರೋಶ ವ್ಯಕ್ತವಾದ ಚುನಾವಣೆಯಾಗಿತ್ತು ಎಂಬುದನ್ನು ಸೂಚಿಸುವ ಅಂಶಗಳು ಈ ಸಮೀಕ್ಷೆಯಲ್ಲಿ ಗೊತ್ತಾಗುತ್ತದೆ. ಆದರೆ, ಅಂತಿಮ ವಿಶ್ಲೇಷಣೆ ಮಾಡಲು ಸಾಧ್ಯವಾಗುವುದು ಚುನಾವಣೆಯ ಅಸಲಿ ಫಲಿತಾಂಶ ಬಂದ ಮೇಲೆಯೇ.

ಇರಲಿ, ಈ ಸಮೀಕ್ಷೆಗಳನ್ನು ಒಂದು ವಿಜ್ಞಾನವಾಗಿ ಈದಿನ.ಕಾಮ್‌ ನೋಡುವುದರಿಂದ ಮತಗಟ್ಟೆ ಸಮೀಕ್ಷೆಗಳು ಹೇಗೆ ನಡೆಯುತ್ತವೆ ಮತ್ತು ಅದರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಫಲಿತಾಂಶ ಏಕೆ ಬರುತ್ತದೆ ಎಂಬುದನ್ನೂ ನೋಡೋಣ.
ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಕೆಲವರು ʼದುರುದ್ದೇಶಪೂರ್ವಕವಾಗಿʼ ತಿದ್ದುತ್ತಾರೆ ಎಂಬುದನ್ನು ನಂಬಲು ಕಾರಣಗಳಿರಬಹುದು. ಯಾವುದೋ ಒಂದು ಪಕ್ಷ ಮುಂದೆ ಇದೆ ಎಂದು ಹೇಳಿದಾಗ, ಅದರಿಂದ ಆ ಪಕ್ಷಕ್ಕೆ ಲಾಭವಾಗಬಹುದು ಎಂದಿಟ್ಟುಕೊಳ್ಳೋಣ. ಆದರೆ, ಚುನಾವಣೋತ್ತರ ಸಮೀಕ್ಷೆಗಳನ್ನು ತಿದ್ದುವುದರಿಂದ (ಬೆಟ್ಟಿಂಗ್‌ ಕಟ್ಟುವವರಿಗೆ ಬಿಟ್ಟು) ಯಾವುದೇ ಪಕ್ಷಕ್ಕೆ ಲಾಭವಾಗುವುದಿಲ್ಲ. ಹಾಗಾಗಿ ಯಾರೂ ತಿದ್ದುವುದಿಲ್ಲ ಎಂದು ಭಾವಿಸಿದರೂ, ಏಕೆ ಒಂದೊಂದು ಸಂಸ್ಥೆ ಒಂದೊಂದು ರೀತಿ ಅಂದಾಜನ್ನು ಮುಂದಿಡುತ್ತದೆ?

ಏಕೆಂದರೆ, ಸಮೀಕ್ಷೆ ಮಾಡುವ ವಿಧಾನವೇ ಎಡವಟ್ಟಿನದ್ದಾಗಿರಬಹುದು. ಮತಗಟ್ಟೆ ಸಮೀಕ್ಷೆ ಮಾಡುವಾಗ, ಮತಗಟ್ಟೆಯಿಂದ ಮತ ಚಲಾಯಿಸಿ ಹೊರಬರುವವರನ್ನು ಮಾತಾಡಿಸಬೇಕಾಗುತ್ತದೆ. ಆದರೆ, ಅಲ್ಲೆಲ್ಲಾ ಗುಂಪುಗೂಡಿಕೊಂಡು ಜನರಿರುವಾಗ ತಾವು ಯಾರಿಗೆ ಮತ ಚಲಾಯಿಸಿದೆವೆಂದು ಮುಕ್ತವಾಗಿ ಹೇಳುವುದು ಎಲ್ಲರಿಗೂ ಕಷ್ಟ. ಯಾರಿಗೆ ʼನಾನು ಇಂಥವರಿಗೇ ಮತ ಹಾಕಿದೆʼ ಎಂದು ಹೇಳುವ ಧೈರ್ಯ ಇರುತ್ತದೋ – ಅವರವರ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಾನಮಾನದ ಕಾರಣಕ್ಕೆ – ಅವರು ಗಟ್ಟಿಯಾಗಿ ಹೇಳುತ್ತಾರೆ. ಹೀಗಾಗಿ ಗಣತಿದಾರರು ಇದನ್ನು ಸೂಕ್ಷ್ಮವಾಗಿ ಗಮನಿಸಿ, ಎಲ್ಲರ ಮತಚಲಾವಣೆಯ ಒಲವು-ನಿಲುವುಗಳನ್ನು ಸರಿಯಾಗಿ ದಾಖಲಿಸುವುದು ಬಹಳ ಮುಖ್ಯ. ಜೊತೆಗೆ ಯಾವ ಕ್ಷೇತ್ರಗಳಲ್ಲಿ ಸಮೀಕ್ಷೆ (ಎಲ್ಲಾ ಕ್ಷೇತ್ರಗಳಲ್ಲೂ ಸಮೀಕ್ಷೆಯನ್ನು ಎಲ್ಲರೂ ಮಾಡುವುದಿಲ್ಲ) ಮಾಡಬೇಕೆಂದು ಆಯ್ದುಕೊಳ್ಳುವುದು, ಆ ಕ್ಷೇತ್ರದಲ್ಲಿ ಯಾವ್ಯಾವ ಮತಗಟ್ಟೆಗಳನ್ನು ಆಯ್ದುಕೊಳ್ಳಬೇಕೆಂದು ನಿರ್ಧರಿಸುವುದು – ಇದನ್ನು ಅತ್ಯಂತ ವೈಜ್ಞಾನಿಕವಾಗಿ ಮಾಡಬೇಕಾಗುತ್ತದೆ. ಹಾಗೆ ಮಾಡದೇ ಹೋದರೆ ಸರಿಯಾದ ಫಲಿತಾಂಶ ಬರುವುದಿಲ್ಲ.

ಈ ಹಿನ್ನೆಲೆಯಲ್ಲಿ ಇದುವರೆಗೆ ಯಾರು ಸಮೀಕ್ಷೆಯನ್ನು ಹೆಚ್ಚು ನಿಖರವಾಗಿ ಮಾಡಿದ್ದಾರೆ ಎಂಬುದೂ ಅವರವರು ಅಳವಡಿಸಿಕೊಳ್ಳುವ ವಿಧಾನದ ಕುರಿತೂ ನಮಗೊಂದು ಅಂದಾಜನ್ನು ನೀಡುತ್ತದೆ. ಈದಿನ.ಕಾಮ್‌ ತನ್ನ ಅನಿಸಿಕೆಯನ್ನು ಮುಂದಿಡಬೇಕಾದರೆ ಇವೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡಿದೆ.

ಇನ್ನೊಮ್ಮೆ ಹೇಳಲೇಬೇಕಾದ ಸಂಗತಿಯೆಂದರೆ ಸಮೀಕ್ಷೆಗಳೆಂಬುದು ಅಂದಾಜಷ್ಟೇ. ಮತದಾರರ ಅಂತಿಮ ತೀರ್ಮಾನವನ್ನು ಮೇ 13ರಂದು ನೋಡೋಣ.

Dr Vasu HV
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್‌ ಕೈ ಜಾರಿದ ರಾಜಸ್ಥಾನ- ವಾಡಿಕೆ ತಪ್ಪಿಸದೆ ಪಕ್ಷ ಬದಲಿಸಿದ ಮತದಾರರು

ರಾಜಸ್ಥಾನದಲ್ಲಿ ಪ್ರತಿ ಅವಧಿಗೂ ಸರ್ಕಾರ ಬದಲಾಯಿಸುವ ರೂಢಿಯಿದೆ ಹಾಲಿ ಚುನಾವಣೆಯಲ್ಲಿ...

ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಈ ಬಾರಿ ಕರ್ನಾಟಕದಲ್ಲಿ...

ರಾಜಸ್ಥಾನ | ಬಿಜೆಪಿ ವಿರುದ್ಧ ಬಂಡಾಯವೆದ್ದ 26 ವರ್ಷದ ಸ್ವತಂತ್ರ ಅಭ್ಯರ್ಥಿಗೆ ಭಾರಿ ಮುನ್ನಡೆ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಭಾರಿ...

ರಾಜಸ್ಥಾನ | ಬಿಜೆಪಿ ಮುನ್ನಡೆ ಕಾಯ್ದುಕೊಂಡಂತೆ ಸಿಎಂ ಸ್ಥಾನಕ್ಕೆ ಮೂವರ ಪೈಪೋಟಿ!

ರಾಜಸ್ಥಾನ ರಾಜ್ಯದ 199 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 12 ಗಂಟೆ...

Download Eedina App Android / iOS

X